ಕಗ್ಗ ( ಮುಕ್ತಕ-1 )

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ | ದೇವ ಸರ್ವೇಶ ಪರಬೊಮ್ಮನೆಂದು ಜನಂ || ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ | ಆ ವಿಚಿತ್ರಕೆ ನಮಿಸೊ-ಮಂಕುತಿಮ್ಮ ||

ಪದಗಳ ವಿಸ್ತರಣೆ

ವಿಶ್ವಾದಿಮೂಲ=ವಿಶ್ವ+ಆದಿಮೂಲ, ಕಾಣದೊಡಮಳ್ತಿಯಿಂ=ಕಾಣದೊಡಂ+ಅಳ್ತಿಯಿಂ.

ಪದಗಳ ತಾತ್ಪರ್ಯ

ಪರಬೊಮ್ಮ=ಪರಬ್ರಹ್ಮ, ಕಾಣದೊಡಂ=ಕಾಣದಿದ್ದರೂ, ಅಳ್ತಿಯಿಂ=ಪ್ರೀತಿಯಿಂದ.

ಪದ್ಯದ ಪೂರ್ತಿ ವಿವರಣೆ

ಶ್ರೀವಿಷ್ಣು, ವಿಶ್ವಕ್ಕೆ ಮೂಲ, ಮಾಯಾಲೋಲ, ದೇವ, ಸರ್ವಕ್ಕೂ ಒಡೆಯನಾದ ಪರಬ್ರಹ್ಮ ಎಂದು ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ ಪ್ರೀತಿ ಮತ್ತು ಭಕ್ತಿಯಿಂದ ನಂಬಿರುವರೋ ಆ ವಿಚಿತ್ರಕ್ಕೆ ನಮಿಸು ಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು. ನಾವೆಲ್ಲಾ ಆತ್ಮಗಳಾದರೆ ನಮ್ಮನ್ನು ಆಳುವವನು ಪರಮಾತ್ಮ. ಅದನ್ನು ನಿಯಾಮಕ, ನಿಯಂತ್ರಕ, ದೇವರು ಎಂದೆಲ್ಲ ಕರೆಯುತ್ತಾರೆ. ಯಾರು ಏನೇ ಹೆಸರಿಟ್ಟು ಕರೆದರೂ ಅದು ಪರಮ ಶಕ್ತಿ. ಇಡೀ ಜಗತ್ತನ್ನು ಸೃಷ್ಟಿಸಿ ನಿಯಂತ್ರಿಸುವ ಒಂದು ಪರಮ ಶಕ್ತಿ. ಇದನ್ನು ಹಲವಾರು ಸದ್ಭಕ್ತರು ತಮ್ಮ ತಮ್ಮದೇ ರೀತಿಯಲ್ಲಿ ತಮ್ಮ ಅಂತರಂಗದಲ್ಲಿ ಕಂಡುಕೊಂಡು ಅನುಭವಿಸಿದ್ದಾರೆ. ಯಾರು ಹೇಗೆ ಅನುಭವಿಸಿದರೋ ಅವರಿಗೆ ಹಾಗೆ ಕಂಡಿದೆ. ನಾವಿರುವ ಭೂಮಿಯಂತಹ 9.80 ಲಕ್ಷ ಭೂಮಿಗಳನ್ನು ನಮ್ಮ ಸೌರವ್ಯೂಹದ ಸೂರ್ಯನೊಳಕ್ಕೆ ಹಾಕಿಬಿಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ಸೌರಮಂಡಲವೂ ಸೇರಿದಂತೆ ಲಕ್ಷಾಂತರ ಸೌರಮಂಡಲಗಳಿರುವ ನಮ್ಮ ಕ್ಷೀರಪಥ. ನಮ್ಮ ಕ್ಷೀರಪಥವೂ ಸೇರಿದಂತೆ ಲಕ್ಷಾಂತರ ಕ್ಷೀರಪಥಗಳಿರುವ ಆಕಾಶಗಂಗೆ, ನಮ್ಮ ಆಕಾಶಗಂಗೆಯೂ ಸೇರಿದಂತೆ ಲಕ್ಷಾಂತರ ಆಕಾಶಗಂಗೆಗಳಿರುವ ಈ ವಿಶ್ವ. ಇಡೀ ವಿಶ್ವವನ್ನು ಒಂದು ಸೂತ್ರದಲ್ಲಿ ನಡೆಸುತ್ತಿರುವ ಒಂದು ಶಕ್ತಿ. ಅದನ್ನೇ ಬೇರೆ ಬೇರೆಯವರು ಬೇರೆ ಹೆಸರುಗಳಿಂದ ಕರೆಯುತ್ತಾರೆಂದು ಈ ಮುಕ್ತಕದ ಆಂತರ್ಯ. ವಿಶ್ವದ ಒಂದು ಅಣುವಷ್ಟೂ ಅಲ್ಲದ ನಾವು, ಕಾಣದಿದ್ದರೂ ಆ ಶಕ್ತಿಯ ಅಧೀನದಲ್ಲಿರುವುದರಿಂದ, ಅದಕ್ಕೆ ಭಕ್ತಿಯಿಂದ, ಪ್ರೀತಿಯಿಂದ ನಮಿಸಬೇಕು ಎಂದು ಒಂದು ಆದೇಶ. ಅದನ್ನು ಕಂಡವರಿಲ್ಲ. ಅದರ ಲೀಲೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲೂ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಅವರವರದೇ ರೀತಿಯಲ್ಲಿ ವ್ಯಾಖ್ಯಾನ ಮಾಡಬಹುದಾದಂತಹ ಒಂದು ಪರಮ ವಸ್ತು. ಮಾನ್ಯ ಗುಂಡಪ್ಪನವರು ಅದನ್ನು "ವಿಚಿತ್ರ" ಎಂದು ಕರೆದು ಅದಕ್ಕೆ ನಮಿಸು ಎಂದು ಒಂದು ಆದೇಶವನ್ನು ಕೊಟ್ಟಿದ್ದಾರೆ. ನಾವೂ ಸಹ ನಮ್ಮ ನಮ್ಮ ಮನಸ್ಸುಗಳಲ್ಲಿ ನಮ್ಮದೇ ರೀತಿಯಲ್ಲಿ ಆ ಪರಮಾತ್ಮನೆಂಬ ವಸ್ತುವನ್ನು ಭಾವಿಸಿ ಅನುಭವಿಸಬೇಕು. ಹೃದಯದಲ್ಲಿ ತುಂಬಿಕೊಳ್ಳಬೇಕು.

ಕಗ್ಗ ( ಮುಕ್ತಕ-2 )

ಜೀವ ಜಡರೂಪ ಪ್ರಪಂಚವನದಾವುದೋ| ಆವರಿಸಿಕೊಂಡುಮೊಳನೆರೆದುಮಿಹುದಂತೆ|| ಭಾವಕೊಳಪಡದಂತೆ ಅಳತೆಗಳವಡದಂತೆ| ಆ ವಿಶೇಷಕೆ ಮಣಿಯೋ-ಮಂಕುತಿಮ್ಮ||

ಪದಗಳ ವಿಸ್ತರಣೆ

ಪ್ರಪಂಚವನದಾವುದೋ=ಪ್ರಪಂಚವನ್+ಅದು+ಆವುದೋ, ಆವರಿಸಿಕೊಂಡುಮೊಳನೆರೆದುಮಿಹುದಂತೆ=ಆವರಿಸಿಕೊಡುಂ+ಒಳನೆರದುಂ+ಇಹುದಂತೆ, ಭಾವಕೊಳಪಡದಂತೆ=ಭಾವಕೆ+ಒಳಪಡದಂತೆ, ಅಳತೆಗಳವಡದಂತೆ=ಅಳತೆಗೆ+ಅಳವಡದಂತೆ.

ಪದಗಳ ತಾತ್ಪರ್ಯ

ಜೀವ=ಚೇತನ, ಜಡ=ಸ್ಥಾವರ ಅಥವಾ ಚಲನೆಯಿಲ್ಲದ್ದು, ಒಳನೆರದು=ಒಳಗೆಲ್ಲಾ ಆವರಿಸಿಕೊಂಡು, ಅಳವಡದಂತೆ=ಅಳತೆಗೆ ಸಿಗದಂತೆ.

ಪದ್ಯದ ಪೂರ್ತಿ ವಿವರಣೆ

ಈ ಪ್ರಪಂಚದಲ್ಲಿ ಇರುವುದು ಎರಡೇ. ಒಂದು ಜಡ ಮತ್ತು ಮತ್ತೊಂದು ಜೀವ. ಜಡವೆಂದರೆ ಚೇತನವಿಲ್ಲದ್ದು. ಜೀವವೆಂದರೆ ಚೇತನ, ಇವೆರಡರ ಸಮ್ಮಿಲನವೇ ಜಗದ್ವ್ಯಾಪಾರ, ಇವೆರಡರಲ್ಲೂ ಆವರಿಸಿಕೊಂಡಿರುವ, ಭಾವದಿಂದ ಊಹಿಸಲಸಾಧ್ಯವಾದ, ಅಳತೆಗೆ ಸಿಗದ ವ್ಯಾಪಕತ್ವವು ಹೊಂದಿರುವ ಆ ವಿಶೇಷಕೆ, ಪರಮಾತ್ಮನಿಗೆ ನಮಿಸೋ, ಮಣಿಯೋ, ನಮಸ್ಕರಿಸೋ ಮಂಕುತಿಮ್ಮ ಎಂದು ಹೇಳುತ್ತಾರೆ ಡಿ.ವಿ.ಜಿ. ಈ ಪರಮಾತ್ಮ-ಜಡ-ಜೀವ ಪರಸ್ಪರ ಸಂಬಂಧವನ್ನು ಕುರಿತು ಹೇರಳವಾದ ವ್ಯಾಖ್ಯಾನಗಳಿದ್ದರೂ “ಇದೇ-ಇದು” ಎಂದು ಹೇಳುವುದು ಅಸಾಧ್ಯ. ಅದು ಅನುಭವ ವೇದ್ಯ. ತೆಲುಗಿನ ಭಕ್ತಿಮಾರ್ಗದ ಮಹಾನ್ ಕವಿ ಅನ್ನಮಾಚಾರ್ಯರು-“ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಆಟು ತಾನೈ”ಎಂದು ಹೇಳುತ್ತಾರೆ. ಅಂದರೆ “ಎಲ್ಲರಲ್ಲೂ ಹುಟ್ಟಿ ಎಲ್ಲರಲ್ಲೂ ಸೇರಿ ಎಲ್ಲರ ರೂಪವು ತಾನೇ ಆಗಿ” ಎಂದು ಆ ಪರಮಾತ್ಮನನ್ನು ವರ್ಣಿಸುತ್ತಾರೆ. ಇಲ್ಲಿ ನಮಗೆ ಆ ಪರಮ ಪುರುಷನು ಇಡೀ ಜಗತ್ತು ಮತ್ತು ಅದರಲ್ಲಿರುವ ಸಕಲವೂ ಆಗಿ ತಾನೇ ಪ್ರಕಟಗೊಂಡಿದ್ದಾನೆ ಎಂದು ಅರ್ಥ ಬರುತ್ತದೆ. ಇರಲಿ ನಾವೂ ಸಹ ಇದನ್ನು ನಮ್ಮನಮ್ಮ ಮತಿಯ ಮಿತಿಯಲ್ಲಿ ವಿಚಾರದ ಓರಗೆ ಹಚ್ಚಿ ನಮ್ಮ ನಮ್ಮ ವಿಚಾರದ ಪರಿಧಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಪಡಬೇಕು. ಮಹಾಭಾರತ ಯುದ್ಧದ ಸಮಯದಲ್ಲಿ, ಭೀಷ್ಮ ಪಿತಾಮಹರು ಶರ ಶಯ್ಯೆಯ ಮೇಲೆ ಮಲಗಿರುವಾಗ, ಒಂದು ದಿನ ಸತ್ಸಂಗದಲ್ಲಿ ಯುಧಿಷ್ಠಿರನು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ, “ಯತಃ ಸರ್ವಾಣಿ ಭೂತಾನಿ ಭವಂತ್ಯಾದಿ ಯುಗಾಗಮೆ | ಯಸ್ಮಿಂಶ್ಚ ಪ್ರಳಯಂ ಯಾಂತಿ ಪುನರೇವ ಯುಗಕ್ಷಯೇ.” ಎಂದು ಪರಮಾತ್ಮ ಸ್ವರೂಪವನ್ನು ವಿವರಿಸುತ್ತಾ “ಯುಗದ ಆದಿಯಲ್ಲಿ ಯಾರಿಂದ ಎಲ್ಲವೂ ಪ್ರಕಟಗೊಳ್ಳುತ್ತದೋ ಮತ್ತು ಯುಗದ ಅಂತ್ಯದಲ್ಲಿ ಯಾರಲ್ಲಿ ಎಲ್ಲವೂ ವಿಲೀನವಾಗುತ್ತದೋ, ಅದೇ ಪರಮಾತ್ಮ” ಎನ್ನುತ್ತಾರೆ. ಆದರೆ ಎಂತೆಂತಹ ಮಹಾಮಹಿಮಾನ್ವಿತರಿಗೂ ಊಹಿಸಲು, ಅಳೆಯಲು ಮತ್ತು ತಿಳಿಯಲು ಕಷ್ಟಸಾಧ್ಯವಾದ ಆ ಪರಮಾತ್ಮನನ್ನು, “ವಿಚಿತ್ರ” “ವಿಶೇಷ”ಎಂದು ಕರೆದು, ಅದಕ್ಕೆ ನಮಿಸು, ಮಣಿ ಎಂದು ಆದೇಶಿಸುತ್ತಾರೆ ಮಾನ್ಯ ಡಿ.ವಿ.ಗುಂಡಪ್ಪನವರು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-3 )

ಇಹುದೋ ಇಲ್ಲವೋ ತಿಳಿಯಗೊಡದೊಂದು ವಸ್ತು ನಿಜ | ಮಹಿಮೆಯಿಂ ಜಗವಾಗಿ ಜೀವವೇಷದಲಿ || ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ | ಗಹನ ತತ್ತ್ವಕೆ ಶರಣೋ-ಮಂಕುತಿಮ್ಮ ||

ಪದಗಳ ವಿಸ್ತರಣೆ

ವಿಹರಿಪುದದೊಳ್ಳಿತೆಂಬುದು=ವಿಹರಿಪುದು (ವಿಹಾರಮಾಡುವುದು)+ಅದು+ಒಳ್ಳಿತು=ಒಳ್ಳೆಯದು+ಎಂಬುದು, ನಿಸದವಾದೊಡಾ=ನಿಸದವಾದೊಡೆ+ಆ, ಒಳ್ಳಿತೆಂಬುದು=ಒಳ್ಳೆಯದು+ಎಂಬುದು,

ಪದಗಳ ತಾತ್ಪರ್ಯ

ವಿಹರಿಪುದು=ವಿಹರಿಸುತ್ತದೆ, ತಿಳಿಯಗೊಡದೊಂದು=ತಿಳಿಯಗೊಡದ ಒಂದು, ನಿಸದವಾದೊಡೆ=ನಿಜವಾದರೆ, ಗಹನ ತತ್ತ್ವಕೆ=ಗುಹ್ಯವಾದ, ಮಹತ್ತರವಾದ ತತ್ತ್ವಕೆ, ಶರಣೋ=ನಮಸ್ಕಾರ.

ಪದ್ಯದ ಪೂರ್ತಿ ವಿವರಣೆ

ವಿಹಾರಮಾಡುವುದು ಎಂದರೆ, ಎಲ್ಲದರಲ್ಲೂ ವ್ಯಾಪಕವಾಗಿ ಚೈತನ್ಯ ರೂಪದಲ್ಲಿರುವುದು ಎಂದೂ ಅರ್ಥೈಸಬಹುದು. ನಿಸದವಾದೊಡೆ ಎಂದರೆ ನಿಜವಾದರೆ ಎಂದೇ ಅರ್ಥೈಸಬೇಕು.. ಮಾನವರಲ್ಲಿ ಇದು ಒಂದು ನಿರಂತರ ಪ್ರಶ್ನೆ. ಆ ದೇವರೆಂಬ ವಸ್ತು “ಇದೆಯೋ-ಇಲ್ಲವೋ” ಎಂದು. ಇದೆ ಎಂದರೆ, ಅದಕ್ಕೆ ನಾನಾ ಹೆಸರುಗಳು, ರೂಪಗಳು, ಪೂಜೆಗಳು, ಹಲವು ಪೂಜಾ ವಿಧಾನಗಳು, ಆಚಾರಗಳು, ಸಂಪ್ರದಾಯಗಳು, ಆ ದೇವರ ರೂಪ ಮತ್ತು ಕಾರ್ಯವೈಖರಿಗೆ ನಾನಾ ಭಾಷ್ಯಗಳು. ಅನಾದಿ ಕಾಲದಲ್ಲೂ ಆ ದೇವರ ಅಸ್ತಿತ್ವವನ್ನು ಪ್ರಶ್ನಿಸುವ “ಚಾರ್ವಾಕ”ರೆಂಬುವರೂ ಇದ್ದರು. ಇಂದಿಗೂ ಆ ದೇವರೆಂಬ ವಸ್ತುವನ್ನು ನಂಬದಿರುವವರೂ ಇದ್ದಾರೆ. ಕೆಲವರಿಗೆ ದೃಢವಾದ ನಂಬಿಕೆ. ಇನ್ನೂ ಕೆಲವರಿಗೆ ಅನುಮಾನ. ಮತ್ತೆ ಕೆಲವರಿಗೆ ಅದು ಆಗಾಗ ಬಂದು ಹೋಗುವ ವಿಚಾರ. ಕೆಲವರಿಗೆ ಸಂಕಟ ಬಂದಾಗ ಮಾತ್ರ ದೇವರ ನೆನಪು, ಕೆಲವರಿಗೆ ಬರೀ ತೋರಿಕೆಗೆ ಭಕ್ತಿ ಮತ್ತು ಕೆಲವರಿಗೆ ಹೊರಗೆ ತೋರದಿದ್ದರೂ ಆಂತರ್ಯದಲ್ಲಿ ಶುದ್ಧಭಕ್ತಿ. ಇಲ್ಲಿ ಡಿ.ವಿ.ಜಿ.ಯವರೂ ಸಹ “ನಿಸದವಾದೊಡೆ” ಎಂದಿದ್ದಾರೆ. “ಜಗವ ಸೃಜಿಸಿ, ಗತಿ ಸೂತ್ರವನಾಡಿಸಿ” ಎಂದಿದ್ದಾರೆ ದಾಸರು. ಅಂದರೆ ಜಗತ್ತನ್ನು ಸೃಷ್ಟಿಸಿ, ಜಗತ್ತಿನ ಎಲ್ಲ ಜೀವರಾಶಿಗಳನ್ನೂ, ಪರಮಾತ್ಮ ತನ್ನ ಇಷ್ಟದಂತೆ ಆಡಿಸುವನೆಂಬ ಅರ್ಥದಲ್ಲಿದೆ ದಾಸರ ಉಕ್ತಿ. ಹಾಗೆ ಇಡೀ ವಿಶ್ವವನ್ನು ಸೃಷ್ಟಿಮಾಡಿ, ಎಲ್ಲ ಜಡ ಮತ್ತು ಜೀವಿಗಳಲ್ಲೂ ತಾನೇ ತಾನಾಗಿ ವ್ಯಾಪಿಸಿರುವ ಆ ಪರಮಾತ್ಮನೆಂಬುವುದು ಒಳ್ಳೆಯದು ಮತ್ತು ಇರುವುದು ಸತ್ಯವಾದರೆ, ಆ ‘ಗಹನ'ಕ್ಕೆ ಅಂದರೆ ಗೂಢವಾದ, ಊಹೆ, ಅರಿವು ಮತ್ತು ತರ್ಕಕ್ಕೆ ನಿಲುಕದ, ಆ ಗುಹ್ಯವಾದ ವಸ್ತುವಿಗೆ ಶರಣಾಗು ಎನ್ನುತ್ತಾರೆ ಡಿ.ವಿ.ಜಿ. ಇಲ್ಲಿ ‘ನಿಸದವಾದೊಡೆ' ಎಂದು ಸತ್ಯವಾದರೆ ಎಂದಿದ್ದಾರೆ. ಅಂದರೆ ಅದು ಅಸತ್ಯವೂ ಆಗಿರಬಹುದೇ? ಎಂದರೆ, ಅದು ಹಾಗಲ್ಲ. ನಂಬುವವನ ಮನಸ್ಸಿಗೆ, ಭಾವಕ್ಕೆ ಅದು ಸತ್ಯ ಎಂದು ಗೋಚರಿಸಿದರೆ, ಅದನ್ನು ನಂಬು ಮತ್ತು ಶರಣಾಗು ಎಂದು ಹೇಳಿದ್ದಾರೆ. ಪರಮಾತ್ಮ ನಾನು ನಂಬಲ್ಲ ಎಂಬುವವನೂ ಸಹ “ನಾನು ದೇವರನ್ನು ನಂಬುವುದಿಲ್ಲ” ಎನ್ನುತ್ತಾನೆ. ಅಂದರೆ ಅವನು “ದೇವರು” ಎನ್ನುವ ವಸ್ತುವೊಂದಿದೆ, ನಾನು ಅದನ್ನು ನಂಬುವುದಿಲ್ಲ ಎಂದು ಅರ್ಥವಲ್ಲವೇ? ಹಾಗಾಗಿ ವಾಚಕರೆ ನಿಮಗೆ ಆ ಪರಮಾತ್ಮ ವಸ್ತುವಿನಲ್ಲಿ ನಂಬಿಕೆ ಇದ್ದರೆ, ಶುದ್ಧವಾಗಿ ನಂಬಿ, ಶರಣಾಗಿ ಎನ್ನುತ್ತಾರೆ ಡಿ.ವಿ.ಜಿ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-4 )

ಏನು ಜೀವನದರ್ಥ? ಏನು ಪ್ರಪಂಚಾರ್ಥ? | ಏನು ಜೀವಪ್ರಪಂಚಗಳ ಸಂಬಂಧ? || ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು? | ಜ್ಞಾನಪ್ರಮಾಣವೇಂ?-ಮಂಕುತಿಮ್ಮ||

ಪದಗಳ ವಿಸ್ತರಣೆ

ಕಾಣದಿಲ್ಲಿರ್ಪುದೇನಾನುಮುಂಟೆ=ಕಾಣದೆ+ಇಲ್ಲಿ+ಇರ್ಪುದು+ಏನಾನುಂ(ಏನಾದರೂ)+ಉಂಟೆ.

ಪದಗಳ ತಾತ್ಪರ್ಯ

ಇರ್ಪುದು=ಇರುವುದು, ಏನಾನುಂ=ಏನಾದರೂ.

ಪದ್ಯದ ಪೂರ್ತಿ ವಿವರಣೆ

“ಈ ನಮ್ಮ ಜೀವನಕ್ಕೆ ಏನಾದರೂ ಅರ್ಥ ಇದೆಯೇ? ನಾವಿರುವ ಈ ಪ್ರಪಂಚದ ಅರ್ಥವೇನು? ನಮ್ಮ ಮತ್ತು ನಾವು ಇರುವ ಈ ಪ್ರಪಂಚದ ಪರಸ್ಪರ ಸಂಬಂಧವೇನು? ಇವೆರಡನ್ನೂ ಬೆಸೆದಿರುವ, ನಮ್ಮ ಕಣ್ಣಿಗೆ ಕಾಣದ ಒಂದು ಶಕ್ತಿ ಏನಾದರೂ ಇದೆಯೇ? ಹಾಗಿದ್ದರೆ ಅದೇನು? ಅದು ನಮ್ಮ ವಿಚಾರ ಮತ್ತು ಜ್ಞಾನದಪರಿಧಿಯಿಂದ ಮೀರಿದೆಯೇ? ಹಾಗಾದರೆ ಅದು ಏನು?” ಎಂಬ ಭಾವಗಳನ್ನು ವ್ಯಕ್ತಪಡಿಸುತ್ತಾರೆ ಈ ಮುಕ್ತಕದಲ್ಲಿ ಮಾನ್ಯ ಶ್ರೀ ಡಿ.ವಿ.ಜಿ.ಯವರು. ವಾಚಕರೇ, ಅಲ್ಪ ಸ್ವಲ್ಪ ವಿಚಾರಮಾಡುವ ಶಕ್ತಿ ಇರುವವರೂ ಸಹ ಈ ರೀತಿಯ ಪ್ರಶ್ನೆಗಳನ್ನು ತಮಲ್ಲೇ ತಾವು ಅನೇಕ ಬಾರಿ ಕೇಳಿಕೊಳ್ಳುತ್ತಾರೆ. ಅಲ್ಲವೇ? ನಾವು ಹುಟ್ಟುತ್ತೇವೆ, ಬೆಳೆಯುತ್ತೇವೆ, ಬದುಕುತ್ತೇವೆ ಮತ್ತು ಒಂದು ದಿನ ಸಾವಿನ ತೆಕ್ಕೆಗೆ ಬೀಳುತ್ತೇವೆ. ಈ ಎಲ್ಲಕ್ಕೂ ಏನಾದರೂ ಅರ್ಥವಿದೆಯೇ? ನಾವು ಇಲ್ಲಿರುವಾಗ ನಮ್ಮ ಜೀವನದಲ್ಲಿ ಜ್ಞಾನದ ಜೊತೆಯಲ್ಲಿ ಪ್ರೀತಿ, ಪ್ರೇಮ, ಕೋಪ, ದ್ವೇಷ, ಅಸೂಯೆ, ಅನುರಾಗ ಮುಂತಾದ ಹಲವಾರು ಭಾವನೆಗಳನ್ನು ಬೆಳೆಸಿಕೊಳ್ಳುತ್ತೇವೆ. ಆ ಭಾವನೆಗಳ ಜೊತೆಗೆ ಜೀವಿಸುತ್ತೇವೆ. ಈ ರೀತಿಯ ಜೀವನಕ್ಕೇನಾದರೂ ಅರ್ಥವಿದೆಯೇ? ವಾಸ್ತವ ಬದುಕಿಗೆ ಮಾತ್ರ ವಾಸ್ತವವೇ ಕಾರಣವೋ ಅಥವಾ ನಮ್ಮ ಕಣ್ಣಿಗೆ ಕಾಣದ ಆದರೂ ಈ ಎಲ್ಲವನ್ನೂ ನಿಯಂತ್ರಿಸುವ ಬೇರೆ ಯಾವುದಾದರೂ ಶಕ್ತಿ ಇದೆಯೇ? ಇದ್ದರೆ ಅದರ ಸ್ವರೂಪವೇನು ಮತ್ತು ಅದರ ಕಾರ್ಯ ವೈಖರಿಯೇನು? ಎನ್ನುವುದು ಎಲ್ಲ ವಿಚಾರವಂತರಿಗೂ ಬರುವ ಸಂದೇಹಗಳು. ಪ್ರತಿ ಜೀವಿಯ ಹುಟ್ಟು ಏಕಾಗುತ್ತದೆ? ಭೌತಿಕ ಕಾರಣವು ಎಲ್ಲರಿಗೂ ಗೊತ್ತು. ಆದರೆ ಈ ಭೌತಿಕ ಕಾರಣವಲ್ಲದೆ ಬೇರೆ ಏನಾದರೂ ಕಾರಣವಿದೆಯೇ? ಆ ಕಾರಣವೇ ನಮ್ಮ ಪ್ರತಿ ನಿಮಿಷದ ಕಾರ್ಯಗಳನ್ನೂ ನಿಯಂತ್ರಿಸುತ್ತದೆಯೇ? ನಮ್ಮ ಭಾರತೀಯ ಸಿದ್ಧಾಂತದ ಪ್ರಕಾರ ಪ್ರತಿ ಜೀವಿಯೂ ಒಂದು ಪೂರ್ವನಿಯೋಜಿತ ಕಾರಣಕ್ಕಾಗಿ ಜನಿಸಿ ಮತ್ತು ಆ ಪೂರ್ವ ನಿಯೋಜಿತ ಕ್ರಮದಲ್ಲಿಯೇ ತನ್ನ ಜೀವನವನ್ನು ನಡೆಸುತ್ತದೆ ಎಂದು ಹೇಳಲ್ಪಟ್ಟಿದೆ. ಹಾಗಿದ್ದರೆ ಆ ಕಾರಣದ ಮೂಲವೇನು? ಆ ಕಾರಣಕ್ಕೆ ಕಾರಕರಾರು? ಬಹಳ ಕ್ಲಿಷ್ಟವಾದ ಪ್ರಶ್ನೆ. ನಮ್ಮ ಋಷಿ ಮುನಿಗಳೂ ಸಹ ಈ ರೀತಿಯ ಪ್ರಶ್ನೆಗಳಿಗೆ ಉತ್ತರವನ್ನು ಕಾಣಲು ಮಾಡಿದ ಪ್ರಯತ್ನದ ಫಲವೇ ಭಾರತೀಯ ವೇದಶಾಸ್ತ್ರಗಳು, ಉಪನಿಷತ್ತುಗಳು. ಹೀಗೆ ಎಲ್ಲರಲ್ಲೂ ಸಾಮಾನ್ಯವಾಗಿ ಉದ್ಭವವಾಗುವ ಮತ್ತು ಎಲ್ಲರೂ ವಿಚಾರ ಮಾಡಬಹುದಾದ ಅಥವಾ ಮಾಡಲೇಬೇಕಾದ ಪ್ರಶ್ನೆಗಳ ಸ್ವರೂಪವೇ ಈ ಮುಕ್ತಕ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-5 )

ದೇವರೆಂಬುದದೇನು ಕಗ್ಗತ್ತಲ ಗವಿಯೆ? | ನಾವರಿಯಲಾರದೆಲ್ಲದರೊಟ್ಟು ಹೆಸರೇ? || ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು? | ಸಾವು ಹುಟ್ಟುಗಳೇನು?-ಮಂಕುತಿಮ್ಮ ||

ಪದಗಳ ವಿಸ್ತರಣೆ

ದೇವರೆಂಬುದದೇನು=ದೇವರು+ಎಂಬುದದೇನು, ನಾವರಿಯಲಾರದೆಲ್ಲದರೊಟ್ಟು=ನಾವು+ಅರಿಯಲಾರದ+ಎಲ್ಲದರ+ಒಟ್ಟು, ಕಾವನೊರ್ವನಿರಲ್ಕೆ=ಕಾವನು+ಓರ್ವನು+ಇರಲ್ಕೆ, ಕಥೆಯೇಕಿಂತು=ಕಥೆಯು+ಏಕೆ+ಇಂತು

ಪದಗಳ ತಾತ್ಪರ್ಯ

ಕಾವನು=ಕಾಯುವವನು, ಓರ್ವನು=ಒಬ್ಬನು, ಇರಲ್ಕೆ=ಇರಲು, ಏಕಿಂತು=ಏಕೆ ಹೀಗೆ.

ಪದ್ಯದ ಪೂರ್ತಿ ವಿವರಣೆ

ದೇವರು ಎನ್ನುವುದು ಏನು? ಅದೇನು ಕತ್ತಲು ಕವಿದ ಗವಿಯೆ? ನಾವು ಅರಿಯಲಾಗದ ಎಲ್ಲದರ ಒಟ್ಟು ಹೆಸರೇ? ಕಾಯುವವನು ಒಬ್ಬ ಇರಲು, ಈ ಜಗದ ಕಥೆಯು ಏಕೆ ಇನಿತು? ಹುಟ್ಟು ಸಾವುಗಳರ್ಥವೇನು? ಎನ್ನುತ್ತಾರೆ ಮಾನನೀಯ ಗುಂಡಪ್ಪನವರು. ದೇವರೇನು ಅಷ್ಟೊಂದು ಗಹನನೆ? ಗುಹ್ಯನೆ? ಅರ್ಥವಾಗದವನೇ? ದೇವರು ಗಹನನೋ ಅಲ್ಲವೋ ಗೊತ್ತಿಲ್ಲ. ಆದರೆ ಇಂದಿಗೂ “ಅದು, ಇದೇ” ಎಂದು ಹೇಳುವ ಒಂದು ಪ್ರಮಾಣ ಸಿಕ್ಕಿಲ್ಲ ಅಲ್ಲವೆ? ಸಿಕ್ಕಿದ್ದಿದ್ದರೆ ಆ ದೇವರ ರೂಪ ಮತ್ತು ಸ್ವರೂಪಗಳ ಬಗ್ಗೆ ಇಷ್ಟೊಂದು ಭಿನ್ನ ಭಿನ್ನ ಅಭಿಪ್ರಾಯಗಳು ಇರುತ್ತಿರಲಿಲ್ಲ ಅಲ್ಲವೆ? ದೇವರನ್ನು ಪರಿಭಾಷಿಸಿದವರೆಲ್ಲ ತಮ್ಮ ತಮ್ಮ ಅನುಭವದ ವೃತ್ತದಲ್ಲೇ ಆ ದೇವರನ್ನು ವಿವರಿಸಿದ್ದಾರೆ. ಅಂದರೆ ಆ ದೇವರು ಎನ್ನುವ ವಸ್ತು ಅನುಭವ ವೇದ್ಯ ಮಾತ್ರ. ಈ ದೇವರು ಎಂಬುದು ಏನು? ಮಾನವನಿಗೆ ಯೋಚಿಸುವ ಶಕ್ತಿ ಬಂದಾಗಿನಿಂದ ಇದೊಂದು ಕಾಡುವಪ್ರಶ್ನೆ. ಅಂದು ಮನುಷ್ಯ ಕಾಡಿನಲ್ಲಿ ಅಲೆಮಾರಿಯಾಗಿದ್ದ. ಕೈಗೆ ಸಿಕ್ಕಿದ್ದನ್ನು ತಿಂದು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋರಾಡುತ್ತಿದ್ದ. ಆಗ ಅವನಿಗೆ ಬಂದ ಯೋಚನೆ ಹೀಗಿದ್ದಿರಬಹುದು. ದಿನದ ಯಾವುದೋ ಸಮಯದಲ್ಲಿ ಒಂದು ವಸ್ತು ಗಗನದಲ್ಲಿ ಬರುತ್ತದೆ. ಆಗ ಎಲ್ಲವೂ ನಿಚ್ಚಳವಾಗಿ ಕಾಣುತ್ತದೆ. ಕಾಡು ಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ. ಆಹಾರವನ್ನು ಹುಡುಕಲು ಆಡುವ ಬೇಟೆಯೂ ಯಶಸ್ವಿಯಾಗುತ್ತದೆ. ಆದರೆ ದಿನದ ಯಾವುದೋ ಸಮಯದಲ್ಲಿ ಗಗನದಲ್ಲಿ ಆ ವಸ್ತು ಕಾಣೆಯಾಗುತ್ತದೆ. ಆಗ ಎಲ್ಲವೂ ಕತ್ತಲೆ. ಕಾಡು ಪ್ರಾಣಿಗಳಿಂದ ತನ್ನ ರಕ್ಷಣೆ ಕಷ್ಟ ಅಥವಾ ಅಸಾಧ್ಯ. ಹಾಗಾಗಿ ಗಗನದಲ್ಲಿ ಬರುವ ವಸ್ತು ತನಗೆ ಸಹಾಯ ಮಾಡುತ್ತದೆ. ಆಕಾಶದಿಂದ ನೀರು ಬೀಳುತ್ತದೆ. ಗಿಡಮರಗಳು ಚಿಗುರಿ ಗೆಡ್ಡೆ ಗೆಣಸುಗಳು, ಹಣ್ಣುಹಂಪಲುಗಳು ಯಥೇಚ್ಚವಾಗಿ ಆಹಾರ ರೂಪದಲ್ಲಿ ಸಿಗುತ್ತದೆ. ಹಾಗೆ ಗಗನದಿಂದ ಬಂದ ಮಳೆ ತನಗೆಸಹಾಯಮಾಡುತ್ತದೆ. ಎಲ್ಲವೂ ಮೇಲಿಂದ ಬರುವುದರಿಂದ, ಇದನ್ನೆಲ್ಲಾ ಕೊಡುವ ಅಥವಾ ಕಳುಹಿಸುವ ಯಾರೋ ಮೇಲಿರಬೇಕು. ಅದನ್ನೇ ಅಂದು ಅವನು “ದೇವರು” ಎಂದ. ಮುಂದೆ ತನಗೆ ಉಪಯೋಗಕ್ಕೆ ಬರುವ ಎಲ್ಲಕ್ಕೂ ಆ ದೈವತ್ವವನ್ನು ಆರೋಪಿಸುತ್ತಾ ಹೋದ. ವಿಡಂಬನೆಯೇನೆಂದರೆ ಇಂದಿಗೂ ಮಾನವನಸ್ಥಿತಿ ಹಾಗೇ ಇದೆ. ತನಗೆ ಉಪಯೋಗಕ್ಕೆ ಬರುವುದೆಲ್ಲಾ, ಅಂದರೆ ಭೂಮಿ, ಮನುಷ್ಯ, ಪ್ರಾಣಿ, ಪಕ್ಷಿ, ಗಿಡ,ಮರ, ನದಿ, ಸಮುದ್ರ, ಮಳೆ, ಬಿಸಿಲು, ಬೆಳಕು, ಹೂವು, ಹಣ್ಣು ಹೀಗೆ ಎಲ್ಲವೂ ಅವನಿಗೆ ದೈವ ಸಮಾನ. ಆದರೂ ಇಂದಿಗೂ ಮಾನವನಿಗೆ ಆ ‘ದೇವರ' ಖಚಿತ ಸ್ವರೂಪ ಅರ್ಥವಾಗಿಯೇ ಇಲ್ಲ. ಈ ಜಗತ್ತಿನ ಅಥವಾ ಸೃಷ್ಟಿಯಲ್ಲಿ ನಡೆಯುವ ವಿದ್ಯಮಾನಗಳನ್ನೆಲ್ಲ ನಡೆಸುವವನು ದೇವರೆಂದು ನಾವು ಹೇಳುತ್ತೇವೆ. ಆದರೆ, ಅದರ ನಿಜ ಸ್ವರೂಪ ಏನು ಎಂದು ಇಂದಿಗೂ ಮಾನವ ಅಥೈಸಲಾಗಿಲ್ಲ. ವಿಜ್ಞಾನದ ಮೂಲಕ ಅವನು ಕಂಡು ಹಿಡಿದುಕೊಂಡಿರುವುದು, ಕೋಟಿಯಲ್ಲಿ ಒಂದು ಪಾಲೂ ಇಲ್ಲ. ಅಷ್ಟೇ ಅಲ್ಲ ನಿರಂತರ ಬದಲಾಗುತ್ತ ಹೊಸ ಹೊಸ ಆಯಾಮವನ್ನು ತಳೆಯುವ ಈ ದೇವರನ್ನು ವಿಜ್ಞಾನದ ಪ್ರಯೋಗಗಳಿಂದ ಅರಿಯಲು ಸಾಧ್ಯವೇ? ಹಾಗಾಗಿ ಅವನು "ಗುಹ್ಯ"ನು ಎನ್ನುವ ಅರ್ಥದಲ್ಲಿ ಮಾನ್ಯ ಗುಂಡಪ್ಪನವರು ಹೇಳುತ್ತಾರೆ. ಹಾಗೆ ಆ ದೇವರು ಈ ಪ್ರಪಂಚವನ್ನು ಮತ್ತು ಇಲ್ಲಿರುವ ಎಲ್ಲವನ್ನೂ ಸೃಷ್ಟಿಸಿ ಎಲ್ಲರನ್ನೂ ಕಾಪಾಡುವವನಾಗಿದ್ದರೆ, ಎಲ್ಲರೂ ಸಮಾನವಾಗಿ ಸುಖವಾಗಿರಬೇಕಲ್ಲವೆ? ಈ ಹುಟ್ಟು ಸಾವುಗಳೇಕೆ? ನೋವು-ದುಃಖಗಳೇಕೆ? ಮನುಷ್ಯ ಮನುಷ್ಯರಲ್ಲಿ ಇಷ್ಟೊಂದು ಬೇಧವೇಕೆ? ಆ ದೇವರು ಎಲ್ಲರನ್ನೂ ಕಾಯುವವನಾದರೆ ಎಲ್ಲರನ್ನೂ ಸಮಾನವಾಗಿ ಕಾಯಬೇಕಲ್ಲವೇ? ಈ ಸಾವು ನೋವುಗಳಿಗೇನು ಅರ್ಥ? ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ಈ ಮುಕ್ತಕದ ಮೂಲಕ ಮಾನನೀಯ ಗುಂಡಪ್ಪನವರು ಎತ್ತಿದ್ದಾರೆ. ಇಂತಹ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರಲ್ಲೂ ಅವರವರ ಜೀವನದ ಯಾವುದಾದರೂ ಘಳಿಗೆಯಲ್ಲಿ ಉದ್ಭವಿಸಿರಬಹುದು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-6 )

ಒಗಟೆಯೇನೀಸೃಷ್ಟಿ? ಬಾಳಿನರ್ಥವೇನು ? | ಬಗೆದು ಬಿಡಿಸುವರಾರು ಸೋಜಿಗವನಿದನು ? || ಜಗವ ನಿರಮಿಸಿದ ಕೈಯೊಂದಾದೊಡೇಕಿಂತು || ಬಗೆಬಗೆಯ ಜೀವಗತಿ?-ಮಂಕುತಿಮ್ಮ ||

ಪದಗಳ ವಿಸ್ತರಣೆ

ಒಗಟೆಯೇನೀಸೃಷ್ಟಿ=ಒಗಟೇ+ಏನು+ಈ+ಸೃಷ್ಟಿ?, ಬಾಳಿನರ್ಥವೇನು=ಬಾಳಿನ+ಅರ್ಥವೇನು, ಬಗೆದು ಬಿಡಿಸುವರಾರು=ಬಗೆದು ಬಿಡಿಸುವವರು+ಯಾರು,ಸೋಜಿಗವನಿದನು=ಸೋಜಿಗವನು+ಇದನು. ಕೈಯೊಂದಾದೊಡೇಕಿಂತು=ಕೈ+ಒಂದು+ಆದೊಡೆ+ಏಕೆ+ಇಂತು.

ಪದಗಳ ತಾತ್ಪರ್ಯ

ಪದ್ಯದ ಪೂರ್ತಿ ವಿವರಣೆ

ಈ ಸೃಷ್ಟಿಯು ಒಗಟೇ? ಈ ಬಾಳಿಗೆ ಅರ್ಥವೇನು? ಆದರೆ ಈ ಒಗಟನ್ನು ಬಿಡಿಸುವವರು ಯಾರು? ಈ ಜಗತ್ತನ್ನು ಸೃಷ್ಟಿಮಾಡಿದ ಕೈ ಒಂದೇ ಆದರೆ, ಸೃಷ್ಟಿಯಲ್ಲಿ ಸಮಾನತೆಯೇಕಿಲ್ಲ? ಬೇರೆ ಬೇರೆಯಾದ ಜೀವನಗತಿ ಏಕೆ? ಎನ್ನುವ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳುವ ರೀತಿಯಲ್ಲಿ ಶ್ರೀ ಗುಂಡಪ್ಪನವರು, ನಮ್ಮೆಲ್ಲರ ಮುಂದೆ ಈ ಮುಕ್ತಕದ ರೂಪದಲ್ಲಿ ಇಟ್ಟಿದ್ದಾರೆ. ಎಲ್ಲ ಜೀವಿಗಳಲ್ಲೂ ಇರುವ ಆ ಚೇತನವು ಜ್ಞಾನ ಸ್ವರೂಪ. ಆದರೆ ಕೆಲವರು ಜ್ಞಾನಿಗಳು ಮತ್ತೆ ಕೆಲವರು ಏಕಿಲ್ಲ? ಎಂದರೆ, ಕೆಲವರ ಕನ್ನಡಿ ಒರೆಸಿ ಶುದ್ಧವಾಗಿದೆ, ಕೆಲವರ ಕನ್ನಡಿಯ ಮೇಲೆ ಧೂಳು ಕೂತಿದೆ. ಧೂಳನ್ನು ಒರೆಸಿದರೆ ಅದೂ ಸಹ ಪ್ರಕಾಶಿಸುತ್ತಾ, ಶುದ್ಧ ಬಿಂಬವನ್ನು ಪ್ರತಿಫಲಿಸುತ್ತದೆ. ಆದರೂ ಏನಿದು ಪ್ರಪಂಚ ಎಂಬ ಪ್ರಶ್ನೆ ಮತ್ತು ಅರ್ಥವೇ ಆಗುವುದಿಲ್ಲವಲ್ಲ ಅಥವಾ ನಮಗೆ ಅರ್ಥವಾಗಿರುವುದು ಪೂರ್ಣವಲ್ಲ ಎಂಬ ಭಾವ ಎಲ್ಲರಿಗೂ ಬರುತ್ತದೆ. ಇದು ಅರ್ಥವಾಗದ ಕಗ್ಗಂಟಾದರೆ ಯಾರಾದರೂ ಬಿಡಿಸಬಹುದಲ್ಲ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ. ಈ ಜಗತ್ತನ್ನು ನಿರ್ಮಿಸಿದ ಅಥವಾ ಸೃಷ್ಟಿಸಿದ “ಕೈ” ಒಂದೇ ಎಂದಾದರೆ, ವಿಧವಿಧವಾದ ಅಸಮತೆಯಿಂದ ಏಕೆ ಕೂಡಿದೆ, ಎನ್ನುವ ಸಂದೇಹ, ಪ್ರಶ್ನೆ ವಿಚಾರವಂತರಾದ ಎಲ್ಲರ ಮನಸ್ಸಲ್ಲೂ ಉದ್ಭವವಾಗುತ್ತದೆ, ಅಲ್ಲವೇ!! ಹಾಗೆಯೇ ಇದೆ, ಈ ಮುಕ್ತಕದ ಭಾವ. ಈ ಹಿಂದೆಯೇ ಹೇಳಿದಂತೆ, ಈ ಜಗತ್ತಿನ ಗುಟ್ಟನ್ನು ಛೇಧಿಸಲು ಈವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ. ಪ್ರಯತ್ನಪಟ್ಟವರಿಗೆಲ್ಲ ಒಂದೊಂದು ರೂಪದಲ್ಲಿ ಕಾಣುವ ಈ ಜಗತ್ತಿನ ನಿಜರೂಪ ಕಂಡುಕೊಳ್ಳುವಲ್ಲಿ ಯಾರೂ ಪೂರ್ಣ ಸಫಲರಲ್ಲ. ಹಾಗೆಯೇ ಈ ಜಗತ್ತಿನ ಎಲ್ಲ ಜೀವರಾಶಿಗಳಲ್ಲೂ ಹೇರಳವಾದ ವೈವಿಧ್ಯತೆ ಇದೆ. ಒಬ್ಬ ಮನುಷ್ಯನಿದ್ದಂತೆ ಇನ್ನೊಬ್ಬನಿಲ್ಲ. ಒಬ್ಬನ ಮನಸ್ಸು ಬುದ್ಧಿಗಳಿದ್ದಂತೆ ಮತ್ತೊಬ್ಬರದ್ದಿಲ್ಲ. ಅವರವರ ಜೀವನ ಅವರವರದ್ದು. ಅವರವರ ಭಾಗ್ಯ ಅವರವರದ್ದು. ಒಬ್ಬರ ನೋವು ಮತ್ತು ಆ ನೋವಿಗೆ ಕಾರಣ ಮತ್ತೊಬ್ಬರ ನೋವು ಮತ್ತು ಅದರ ಕಾರಣದಂತಿಲ್ಲ. ಒಬ್ಬರ ಸುಖ ಮತ್ತದರ ಕಾರಣ ಇನ್ನೊಬ್ಬರಿಗಿಲ್ಲ. ಒಬ್ಬರ ಸುಖದ ಕಾರಣವು ಮತ್ತೊಬ್ಬರ ದುಃಖಕ್ಕೆ ಕಾರಣವಾಗಬಹುದು. ಇದರ ಗುಟ್ಟನ್ನು ಬಿಡಿಸುವವರಾರು? ಈ ಎಲ್ಲವೂ ಮಾನವನಿಗಷ್ಟೇ ಅಲ್ಲ. ಸಕಲಪ್ರಾಣಿಗಳಿಗೂ ಅನ್ವಯಿಸುತ್ತದೆ. ನಮ್ಮ ಮನೆಯ ಬೀದಿಯಲ್ಲಿ ಒಂದು ಮುದಿ ನಾಯಿ, ಹೊತ್ತು ಹೊತ್ತಿನ ಊಟಕ್ಕೆ ಹೋರಾಡುವಾಗ, ಹಾಕಿದ್ದ ಯಾವುದನ್ನೂ ತಿನ್ನಲಾಗದೆ ಮುದಿತನ, ಸಾವು-ಬದುಕುಗಳ ಮಧ್ಯದಲ್ಲಿ ನರಳುವಾಗ ಅಥವಾ ಬಹಳ ದಿನಗಳಿಂದ ಬೆಳೆದು ಹೆಮ್ಮರವಾಗಿ ಎಲ್ಲರಿಗೂ ನೆರಳನ್ನೂ, ಪ್ರಾಣಿ-ಪಕ್ಷಿಗಳಿಗೆ ಆಹಾರವನ್ನೂ, ಆಶ್ರಯವನ್ನೂ ನೀಡಿದ ಒಂದು ಮರವನ್ನು ಯಾವುದೋ ಕಾರಣಕ್ಕೆ ಕಡಿದಾಗಲೂ, ಹೇ! ಪರಮಾತ್ಮ ಏನಿದು ಈ ಜೀವಿಯ ಅವಸ್ಥೆ ಎಂದು ನನ್ನ ಮನಸ್ಸು ಕರಗುತ್ತದೆ. ಆದರೆ ಅದರ ಅವಸ್ಥೆಗೆ ಉತ್ತರ ಖಂಡಿತ ನನಗೆ ಸಿಗುವುದಿಲ್ಲ. ಇದು ಎಲ್ಲ ಪ್ರಾಣಿಗಳ ಪರಿಸ್ಥಿತಿ. ಅಷ್ಟೇ ಅಲ್ಲ ಇಂದು ಸುಖ, ನಾಳೆ ದುಃಖ, ಇಂದು ಆರೋಗ್ಯ, ನಾಳೆ ಅನಾರೋಗ್ಯ, ಇಂದು ಮಿತ್ರ, ನಾಳೆ ಶತ್ರು, ಇಂದು ಸಂತೋಷ, ನಾಳೆ ಬೇಸರ ಹೀಗೆ ಇಂದು ನಾಳೆಗಳಲ್ಲಿ ಮತ್ತು ದಿನದಿನಕ್ಕೆ ಬೇರೆಬೇರೆಯೇ ಭಾವಗಳು, ಈ ರೀತಿಯ ವೈವಿಧ್ಯಕ್ಕೆ ಕಾರಣರಾರು ಅಥವಾ ಕಾರಣವೇನು? ನಾವೆಷ್ಟು ಕಾರಣ? ಪರರೆಷ್ಟು ಕಾರಣ? ವಿಧಿಯೆಷ್ಟು ಕಾರಣ? ವಿಧಾತನೆಷ್ಟು ಕಾರಣ? ಹೀಗೆ ಹತ್ತು ಹಲವಾರು ಪ್ರಶ್ನೆಗಳ ಭಾವವೇ ಈಮುಕ್ತಕ. ಈ ಮುಕ್ತಕ ದಲ್ಲಿ ಬರುವ ಸೂಕ್ತ ಪ್ರಶ್ನೆಗಳು ನಮ್ಮ ನಿಮ್ಮಲ್ಲಿಯೂ ಸಹ ಎಂದಾದರೂ ಉದ್ಭವಿಸಿರಬಹುದು ಉತ್ತರ ಸಿಕ್ಕಿಲ್ಲದಿರಬಹುದು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-7 )

ಬದುಕಿಗಾರ್ ನಾಯಕರು, ಏಕನೋ ಅನೇಕರೋ? | ವಿಧಿಯೋ ಪೌರುಷವೋ ಧರುಮವೋ ಅಂಧಬಲವೋ? || ಕುದುರುವುದೆಂತು ಈಯವ್ಯವಸ್ಥೆಯ ಪಾಡು? | ಅದಿಗುದಿಯೆ ಗತಿಯೇನೋ?-ಮಂಕುತಿಮ್ಮ ||

ಪದಗಳ ವಿಸ್ತರಣೆ

ಬದುಕಿಗಾರ್=ಬದುಕಿಗೆ+ಆರ್, ಈಯವ್ಯವಸ್ಥೆಯ=ಈ+ಅವ್ಯವಸ್ಥೆಯ.

ಪದಗಳ ತಾತ್ಪರ್ಯ

ಅದಿಗುದಿ=ಸಂದೇಹ ಅಥವಾ ತಳಮಳ. ಧರುಮವೋ=ಧರ್ಮವೋ, ಅಂಧಬಲವೋ=ಅಂಧ ಶ್ರದ್ಧೆಯೋ,

ಪದ್ಯದ ಪೂರ್ತಿ ವಿವರಣೆ

ಈ ಬದುಕಿಗೆ ಯಾರು ನಾಯಕರು? ಒಬ್ಬನೋ ಅಥವಾ ಅನೇಕರಿದ್ದಾರೆಯೋ? ಅಥವಾ ಈ ಬದುಕಿಗೆ ನಾಯಕ ವಿಧಿಯೋ, ಧರ್ಮವೋ, ಅಥವಾ ಅಂಧಶ್ರದ್ಧೆಯೋ? ಅವ್ಯವಸ್ಥೆ ಸರಿಯಾಗುವುದೋ ಇಲ್ಲವೋ? ಅಥವಾ ಇವೆಲ್ಲರದರ ವಿಚಾರದ ತಳಮಳದಲ್ಲಿಯೇ ನಾವು ಯಾವಾಗಲೂ ಇರಬೇಕೆ? ಈ ರೀತಿಯ ಪ್ರಶ್ನೆಗಳನ್ನು ಸನ್ಮಾನ್ಯ ಡಿ.ವಿ. ಗುಂಡಪ್ಪನವರು ತಮ್ಮನ್ನೇ ತಾವು ಕೇಳಿಕೊಳ್ಳುತ್ತಾ, ಓದುಗರ ಮುಂದೆ ಪ್ರಸ್ತಾಪಿಸುತ್ತಾರೆ. ಈ ರೀತಿಯ ಸಂದೇಹಗಳು ಎಲ್ಲ ಕಾಲಕ್ಕೂ ಎಲ್ಲ ವಿಚಾರವಂತರಿಗೂ ಮನದಲ್ಲಿ ಉದ್ಭವವಾಗುತ್ತದೆ. “ಕಿಮೇಕಂ ದೈವತಂ ಲೋಕೆ? ಕಿಂ ವಾಪ್ಯೇಕಂ ಪರಾಯಣಂ? ಸ್ತುವನ್ತಃ ಕಂಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಂ? ಕೋ ಧರ್ಮಃ ಸರ್ವ ಧರ್ಮಾಣಾಂ ಭವತಃ ಪರಮೌ ಮತಃ? ಕಿಂಜಪನ್ಮುಚ್ಯತೇರ್ಜಂತುರ್ ಜನ್ಮ ಸಂಸಾರ ಬಂಧನಾತ್” ಇವು ಮಹಾಭಾರತದಲ್ಲಿ ಧರ್ಮರಾಯನು ಭೀಷ್ಮರು ಶರ ಶಯ್ಯೆಯಲ್ಲಿರುವಾಗ, ಸಂಜೆ ನಡೆಯುವ ಸತ್ಸಂಗದಲ್ಲಿ ಕೇಳುವ ಪ್ರಶ್ನೆ. ಒಬ್ಬನೇ ದೇವನಾರು? ಎಲ್ಲಕ್ಕಿಂತ ಮಿಗಿಲಾದ ಧರ್ಮವಾವುದು? ಎಂಬ ಸಂದೇಹಗಳು ಧರ್ಮರಾಯನಿಗೇ ಬರುವುದಾದರೆ, ಇನ್ನು ನಮಗೆ ಎಂತಹ ಸಂದೇಹಗಳು ಬರಬೇಕು ಹೇಳಿ? ಇದು ಸಹಜ. ಈ ಸೃಷ್ಟಿಯ ರಹಸ್ಯವನ್ನು ಛೇಧಿಸಲು ಅಷ್ಟು ಸುಲಭವೇ? ದೇವನೊಬ್ಬ ನಾಮ ಹಲವು ಎಂಬ ಮಾತು ಎಲ್ಲರಿಗೂ ಗೊತ್ತಿರುವುದೇ. ಆದರೆ ಆ ದೇವನಾರು? ಮೂರ್ತರೂಪದಲ್ಲಿಹನೆ? ಅಥವಾ ಅಮೂರ್ತನೆ? ಅಂದರೆ ಆಕಾರ ಉಂಟೆ, ಇಲ್ಲವೇ? ಆ ಜಗತ್ತಿಗೆ ಮತ್ತು ಜಗತ್ತಿನ ಜೀವಿಗಳಿಗೆ ಅವನು ನಾಯಕನೇ? ಧರ್ಮಕ್ಕೆ ನಮ್ಮಲ್ಲಿ ಬಹಳ ಪ್ರಾಧಾನ್ಯವಿದೆ. ಧರ್ಮವೆಂದರೆ, ಒಂದು ವಸ್ತುವಿನ ಸ್ವಭಾವ ಎನ್ನುವ ಅರ್ಥವೂ ಇದೆ. ಹಾಗೆಯೇ, ಧರ್ಮಕ್ಕೆ ಬೇರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಹಾಗಾಗಿ ಜಗತ್ತಿನಲ್ಲಿ ಇಷ್ಟೊಂದು ಭಿನ್ನ-ಭಿನ್ನ ಮತಗಳು. ಅಂತಹ ಧರ್ಮವೇ ಈ ಜಗತ್ತಿನ ನಾಯಕನೇ? ಎನ್ನುವ ಪ್ರಶ್ನೆಯೂ ಸಹ ಬರುತ್ತದೆ. ವಿಧಿ ಎಂದರೆ ಪೂರ್ವ ನಿಯಮಿತ ಅಥವಾ ನಿರ್ಧಾರಿತ ಕ್ರಮ ಎಂದು ಅರ್ಥ. ಮೊದಲೇ ವಿಧಿಸಿದ ರೀತಿ, ಹಣೆಯಬರಹವೆಂದೂ ಅನ್ನುತ್ತಾರೆ. ನಮ್ಮ ಬದುಕನ್ನು ನಡೆಸುವುದು ಈ ಹಣೆಯ ಬರಹವೇ? ಯಾವುದಾದರೂ ಆಗಲಿ ಅಥವಾ ಇರಲಿ, ಈ ಜಗತ್ತಿನ ಅಸಮತೆ, ಅಸಮಾನತೆ, ವೈಚಿತ್ರ್ಯ, ಅಥವಾ ಅವ್ಯವಸ್ಥೆಯು ಸರಿಯಾಗುವ ಬಗೆ ಇದೆಯೋ ಇಲ್ಲವೋ? ಅಥವಾ ಇದನ್ನು ಅರಿಯುವ ಮತ್ತು ನಿರ್ಧರಿಸುವ ತಳಮಳದಲ್ಲಿಯೇ ನಾವು ಎಂದಿಗೂ ಇರಬೇಕೆ? ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ದೇವರನ್ನೇ ನಂಬುವ, ದೇವರನ್ನು ಮತ್ತು ಧರ್ಮವನ್ನು ನಂಬುವ (ಇಲ್ಲಿ ಧರ್ಮ ಬೇರೆಯಲ್ಲ ದೇವರು ಬೇರೆಯಲ್ಲ ಎಂಬ ವಾದ ಮಾಡುವವರೂ ಉಂಟು) ದೇವರನ್ನು ಮತ್ತು ವಿಧಿಯನ್ನು ಎಂದರೆ ಹಣೆಬರಹವನ್ನೇ ನಂಬುವ ಮತ್ತು ಸ್ವಶಕ್ತಿಯನ್ನೇ ನಂಬುವ, ಎಲ್ಲ ರೀತಿಯ ಜನರು ಜಗತ್ತಿನ ಎಲ್ಲೆಡೆಯಲ್ಲೂ, ಎಲ್ಲ ಮತಗಳಲ್ಲೂ ಇದ್ದಾರೆ. ಕಾರಣವೇ ತಿಳಿಯದ, ಈ ಜಗತ್ತಿನ ಅಸಮಾನತೆ, ಜಗತ್ತಿನಲ್ಲಿ ಎಲ್ಲೆಲ್ಲೂ ಇದೆ ಅಲ್ಲವೆ? ಇದು ಏಕೆ ಹೀಗೆ? ಇದು ಸರಿಯಾಗುವುದೋ ಇಲ್ಲವೋ? ಎನ್ನುವ ನೆನೆಗುದಿಯಲ್ಲೇ ಮಾನವರು ಬದುಕು ದೂಡುತ್ತಿದ್ದಾರೆ. ಇಂತಹ ಭಾವಗಳನ್ನೇ ವ್ಯಕ್ತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ. ಇಂತಹ ಸಂದೇಹಗಳು ನಮ್ಮ-ನಿಮ್ಮ ಮತ್ತು ಸಕಲರಲ್ಲೂ ಉಂಟಾಗುತ್ತದಲ್ಲವೇ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-8 )

ಕ್ರಮವೋಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? ಭ್ರಮಿಪುದೇನಾಗಾಗ ಕರ್ತೃವಿನ ಮನಸು? ಮಮತೆಯುಳ್ಳವನಾತನಾದೊಡೀ ಜೀವಗಳು ಶ್ರಮಪಡುವುದೇಕಿಂತು ?-ಮಂಕುತಿಮ್ಮ

ಪದಗಳ ವಿಸ್ತರಣೆ

ಮಮತೆಯುಳ್ಳವನಾತನಾದೊಡೀ=ಮಮತೆ+ಉಳ್ಳವನ್+ಆತನ+ಆಡೋದೇ+ಈ

ಪದಗಳ ತಾತ್ಪರ್ಯ

ಕರ್ತೃ=ಜಗತ್ತನ್ನು ಸೃಷ್ಟಿದವ , ಆದೊಡೆ=ಆದರೆ, ಶ್ರಮ=ಕಷ್ಟ, ಕ್ರಮವು=ರೀತಿ, ಲಕ್ಷ್ಯವು=ಗುರಿ (purpose), ಭ್ರಮಿಪುದು=ವಿಕಾರಗೊಳ್ಳುವುದು ಅಥವಾ ವಿಚಲಿತವಾಗುವುದು,

ಪದ್ಯದ ಪೂರ್ತಿ ವಿವರಣೆ

ಇಲ್ಲಿ ಗುಂಡಪ್ಪನವರು ಕೇಳುವ ಪ್ರಶ್ನೆ ಹೀಗಿದೆ “ಈ ಭಗವಂತನ ಸೃಷ್ಟಿಯಲ್ಲಿ ಒಂದು ಕ್ರಮ ಅಥವಾ ಗುರಿ ಏನಾದರೂ ಇದೆಯೇ? ಈ ಸೃಷ್ಟಿಕರ್ತನ ಮನಸ್ಸು ಏಕೆ ಆಗಾಗ ವಿಚಲಿತವಾಗಿ ಎಲ್ಲೆಲ್ಲೋ ಹರಿದಾಡುತ್ತದೆ. ತಾನು ಸೃಷ್ಟಿಸಿದ ಜೀವಿಗಳ ಮೇಲೆ ಅವನಿಗೆ ಪ್ರೀತಿ ವಾತ್ಸಲ್ಯಗಳು ಇರುವುದಾದರೆ ಈ ಜೀವಿಗಳು ಏತಕ್ಕಾಗಿ ಈ ರೀತಿಯ ಕಷ್ಟಗಳನ್ನು ಅನುಭವಿಸುತ್ತವೆ? ಗುಂಡಪ್ಪನವರ ಮನಕರಗಿ ಇಂತಹ ಪ್ರಶ್ನೆಗಳನ್ನು ತಮ್ಮನ್ನು ತಾವೇ ಕೇಳಿಕೊಳ್ಳುತ್ತಾ, ಓದುಗರ ಮುಂದಿಡುತ್ತಾರೆ. ಇಡೀ ಜಗತ್ತಿನ ಆಗು ಹೋಗುಗಳಿಗೆ ಏನಾದರೂ ಒಂದು ಕ್ರಮವಿದೆಯೇ ಎಂದು ಅವರ ಪ್ರಶ್ನೆ. ಇದೆ ಎಂದು ಹೇಳಬಹುದು. ಹಗಲು ರಾತ್ರಿಗಳು ಭೂಮಿಯ ಸುತ್ತುವಿಕೆಯಿಂದ ಆಗುತ್ತದೆ. ಭೂಮಿಯೂ ಒಂದು ಲೆಕ್ಕಾಚಾರದಲ್ಲೇ ಸುತ್ತುತ್ತದೆ. ಹಾಗೆ ಸುತ್ತುವುದರಿಂದ ಋತುಮಾನಗಳು. ಬಿಸಿಲು, ಮಳೆ, ಚಳಿ ಮತ್ತು ಗಾಳಿಕಾಲಗಳು. ಬೆಳೆಗಳು, ಹೂ, ಹಣ್ಣುಗಳಿಗೂ ಒಂದೊಂದು ಕಾಲ. ಆದರೂ ಆಗಾಗ ನಮಗರಿಯದಂತ ವ್ಯತ್ಯಾಸಗಳು ಆಗುತ್ತವೆ. ಅತೀವೃಷ್ಟಿ-ಅನಾವೃಷ್ಟಿಗಳು, ಜ್ವಾಲಾಮುಖಿಗಳು, ಭೂಕಂಪಗಳು, ಯುದ್ಧಗಳು, ಹೀಗೆ ಮಾನವನಿಗೆ ಮತ್ತು ಜೀವಿಗಳಿಗೆ ಮಾರಕವಾದ ನೈಸರ್ಗಿಕ ವಿದ್ಯಮಾನಗಳು ನಡೆಯುವಾಗ, ಏಕೆ ಈ ಭಗವಂತನ ಸೃಷ್ಟಿಯಲಿ ಒಂದು ಕ್ರಮವೇ ಇಲ್ಲವೇ ಮತ್ತು ಇದನ್ನೆಲ್ಲಾ ಆಗಗೊಡುವ ಆ ಪರಮಾತ್ಮನ ಮನಸ್ಸು ಏಕೆ ವಿಚಲಿತಗೊಳ್ಳುತ್ತದೆ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅಂತಹ ಪ್ರಶ್ನೆಯನ್ನೇ ಡಿ.ವಿ.ಜಿ.ಯವರು ಕೇಳುತ್ತಾರೆ. ಈ ಜಗತ್ತಿನಲ್ಲಿ ನಡೆಯುವ ಜೀವನದ ನಾಟಕದಲ್ಲಿ ಒಬ್ಬೊಬ್ಬರು ಒಂದು ರೀತಿ. ಒಬ್ಬರಂತೆ ಒಬ್ಬರಿಲ್ಲ, ಒಬ್ಬರ ಯೋಚನೆಯಂತೆ ಮತ್ತೊಬ್ಬರದಿಲ್ಲ, ಪ್ರತಿಯೊಬ್ಬರ ಆಸೆ ಆಕಾಂಕ್ಷೆಗಳೂ ಭಿನ್ನ ಭಿನ್ನ ಅಲ್ಲವೇ? ಅವನ ಬುದ್ಧಿ ಏಕೆ ಹಾಗೆ ಭಿನ್ನ ಭಿನ್ನ ಎನ್ನುವುದಕ್ಕೆ ವಿಜ್ಞಾನಿಗಳು, ಶಾಸ್ತ್ರಜ್ಞರೂ, ತತ್ವವೇತ್ತರೂ ಸಹ ಭಿನ್ನ ಭಿನ್ನವಾದ ವ್ಯಾಖ್ಯಾನ ಮಾಡುತ್ತಾರೆ. ಹಾಗಾಗಿ ಭಿನ್ನತೆಯೇ ಜೀವನದ ಲಕ್ಷಣ ಅಥವಾ ಗುಣ. ಈ ಭಿನ್ನತೆಗೂ ಆ ಪರಮಾತ್ಮನೇ ಕಾರಣನೋ? ಎಂದರೆ. ಅಹುದು ಮತ್ತು ಅಲ್ಲ. ಇಲ್ಲಿ ಎರಡು ವಿಚಾರಗಳಿವೆ. ಒಂದು “ಎಲ್ಲವೂ ಪರಮಾತ್ಮನ ಇಚ್ಚೆಯಂತೆ ನಡೆಯುತ್ತದೆ” ಎಂದರೆ ಈ ಭಿನ್ನತೆಯೂ ಅವನ ಇಚ್ಚೆಯಂತೆಯೆ ಎಂದು ಆಯಿತು. “ಪ್ರತಿ ಜೀವಿಯೂ ಅವನವನ ಕರ್ಮಕ್ಕನುಗುಣವಾಗಿ ಫಲಾಫಲಗಳನ್ನು ಪಡೆದು ಜೀವಿಸುತ್ತಾನೆ” ಎಂದಾದರೆ ಇಲ್ಲಿ, ಪರಮಾತ್ಮನ ಪ್ರಮೇಯ ಕಡಿಮೆ. ಆದರೆ “ಇದೋ” ಅಥವಾ “ಅದೋ” ಎನ್ನುವ ದ್ವಂದ್ವ ಸಹ ಸದಾ ಮಹಾ ಮಹಾ ಪಂಡಿತರನ್ನೇ ಕಾಡಿದೆ ಮತ್ತು ಇಂದಿಗೂ ಇತ್ಯರ್ಥವಾಗದೆ ಉಳಿದಿದೆ. ಈ ಮುಕ್ತಕಕ್ಕೆ ಮತ್ತು ಈ ಮುಕ್ತಕದ ಹಿಂದಿನ ನಾಲ್ಕು ಮುಕ್ತಕಗಳಿಗೂ ಮತ್ತು ಮುಂದೆ ಬರುವ ಮುಕ್ತಕಗಳಿಗೂ ಒಂದು ಹಿನ್ನೆಲೆಯುಂಟು. ಗುಂಡಪ್ಪನವರು ಈ ಕಗ್ಗವನ್ನು ಮೊದಲು ಪ್ರಕಟಿಸಿದ್ದು 1943ರಲ್ಲಿ. ಆಗ ಜಗತ್ತಿನೆಲ್ಲೆಲ್ಲೂ ಬರ, ಅನಾವೃಷ್ಟಿ. 2ನೇ ವಿಶ್ವ ಯುದ್ಧದ ಕಾಲ. ಎಲ್ಲೆಲ್ಲೂ ಹಾಹಾಕಾರ, ಆಕ್ರಂದನ, ಬಡತನ, ಆಹಾರದ ಕೊರತೆ, ರೋಗ-ರುಜಿನಗಳ ಮಹಾಪುರ, ಹೀಗೆ ಹತ್ತು ಹಲವಾರು ಪ್ರಕೋಪಗಳಿಗೆ ಬಲಿಯಾಗಿ ಜನರು ತೊಳಲಾಡುತ್ತಿದ್ದರು. ಹಾಗಾಗಿ ಡಿ.ವಿ.ಜಿ.ಯವರು ಅಂದಿನ ಪರಿಸ್ಥಿತಿಗೆ ಪ್ರತಿಕ್ರಿಯೆಯ ರೂಪದಲ್ಲಿ, "ಆ ಪರಮಾತ್ಮನು ಎಲ್ಲರನ್ನೂ ಸೃಷ್ಟಿಸಿ, ಎಲ್ಲರಲ್ಲೂ ಸಮಾನವಾದ ಪ್ರೀತಿ ಇದ್ದರೆ ಈ ರೀತಿಯ ಸಂಕಷ್ಟಗಳು ಜನರಿಗೆ ಏಕೆ?" ಎಂಬಂತಹ ಕರುಣಾ ಪೂರಿತವಾದ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳುತ್ತಾರೆ. ಆದರೆ ವಾಚಕರೇ, ಅಂದಿನ ಸ್ಥಿತಿಗೂ ಇಂದಿನ ಸ್ಥಿತಿಗೂ ಏನೂ ವ್ಯತ್ಯಾಸವಿಲ್ಲ. ಪ್ರಪಂಚದಲ್ಲಿ ಮಾನವನ ಜೀವನ ಇನ್ನಷ್ಟು ಕ್ಲಿಷ್ಟವಾಗಿದೆ, ಇನ್ನಷ್ಟು ಹದಗೆಟ್ಟಿದೆ, ಸ್ವಾರ್ಥದ ಬುದ್ಧಿ ಇನ್ನಷ್ಟು ಬಲವಾಗಿದೆ, ದೇಶ-ದೇಶಗಳ ನಡುವೆ ದ್ವೇಷದ ಭಾವ ಇನ್ನೂ ಹಾಗೆ ಇದೆ. ಹಳೆಯದನ್ನು ಮರೆತು, ಪ್ರೀತಿ ವಿಶ್ವಾಸದಲಿ, ತೃಪ್ತಿಸಂತೋಷದಲಿ, ಬದುಕಿ ಪ್ರಗತಿಯತ್ತ ಹೋಗಲು ಯಾರಿಗೂ ಇಷ್ಟವಿಲ್ಲ. ಹಾಗಾಗಿ ಮಾನ್ಯ ಗುಂಡಪ್ಪನವರು ಅಂದು ಕೇಳಿದ ಪ್ರಶ್ನೆಗಳು ಇಂದಿಗೂ ಪ್ರಸ್ತುತ. ಅವರ ವಿಚಾರಗಳನ್ನು ನಮ್ಮ ಮನಸ್ಸುಗಳಲ್ಲೂ ವಿಚಾರದ ಒರೆಗೆ ಹಚ್ಚಿ ನೋಡೋಣ ಬನ್ನಿ ಮಿತ್ರರೇ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-9 )

ಏನು ಭೈರವಲೀಲೆಯೀ ವಿಶ್ವಭ್ರಮಣೆ | ಏನು ಭೂತಗ್ರಾಮನರ್ತನೋನ್ಮಾದ || ಏನಗ್ನಿ ಗೋಳಗಳು ! ಏನಂತರಾಳಗಳು | ಏನು ವಿಸ್ಮಯ ಸೃಷ್ಟಿ!-ಮಂಕುತಿಮ್ಮ ||

ಪದಗಳ ವಿಸ್ತರಣೆ

ಭೈರವಲೀಲೆಯೀ=ಭೈರವ+ಲೀಲೆಯು+ಈ, ಭೂತಗ್ರಾಮನರ್ತನೋನ್ಮಾದ=ಭೂತ+ಗ್ರಾಮ+ನರ್ತನ+ಉನ್ಮಾದ, ಏನಗ್ನಿ=ಏನು+ಅಗ್ನಿ.

ಪದಗಳ ತಾತ್ಪರ್ಯ

ಭೈರವ=ಪರಮ ಶಿವ, ರುದ್ರ, ಉನ್ಮಾದ=ಉದ್ವೇಗ, ಗೋಳ=ಉಂಡೆ, ವಿಸ್ಮಯ=ಆಶ್ಚರ್ಯ.

ಪದ್ಯದ ಪೂರ್ತಿ ವಿವರಣೆ

ಏನಿದು ಭೈರವ ಲೀಲೆ? ಏನಿದು ಇಡೀ ವಿಶ್ವದ ಸುತ್ತಾಟ? ಏನಿದು ಪಂಚ ಮಹಾಭೂತಗಳ ಮತ್ತು ಆ ಭೂತಗಳ ವಾಸಸ್ಥಳವಾದ ಆ ಮಹಾ ಚೈತನ್ಯ ಮತ್ತು ಆ ಚೈತನ್ಯದ ಉನ್ಮಾದಭರಿತ ನರ್ತನ? ಏನಿದು ಅಗ್ನಿಗೋಳಗಳು, ಈ ಸೃಷ್ಟಿಯ ಅಂತರಾಳ? ಆಹಾ ಎಂತಹ ಈ ವಿಸ್ಮಯ ಈ ಸೃಷ್ಟಿ! ಇದು ಈ ಮುಕ್ತಕದ ಆಂತರ್ಯದ ಭಾವ. ರುದ್ರ ತಾಂಡವ ಎನ್ನುವ ಅರ್ಥದಲ್ಲಿ ಈ ವಿಶ್ವದ ಸೃಷ್ಟಿಯನ್ನು ವಿಸ್ಮಯವೆಂದು ಕರೆಯುತ್ತಾರೆ ಶ್ರೀ ಗುಂಡಪ್ಪನವರು. ಹËದು ಇದು ವಿಸ್ಮಯವೇ ಸರಿ. ಆ ಹಿಂದೆಯೇ ವಿವರಿಸಿದಂತೆ ಸೌರವ್ಯೂಹಗಳು, ಕ್ಷೀರಪಥಗಳು, ಆಕಾಶಗಂಗೆಗಳು ಮತ್ತು ಇಡೀ ವಿಶ್ವ. ಈ ವಿಶ್ವದ ಆಂತರ್ಯದಲ್ಲಿ ನಡೆಯುವ ಅಗ್ನಿಸ್ಪೋಟಗಳು, ಹೊಸ ಹೊಸ ನಕ್ಷತ್ರಗಳ, ಗ್ರಹಗಳ ಹುಟ್ಟು, ಸಿಡಿತ, ಒಂದರೊಳಗೆ ಒಂದು ವಿಲೀನವಾಗುವ ಪ್ರಕ್ರಿಯೆ, ಇವೆಲ್ಲವನ್ನೂ ನಾವು ಕಾಣುವುದಿರಲಿ, ಊಹಿಸಲೂ ಅಸಾಧ್ಯವಾದ ರೂಪ. ಅದನ್ನು ಪರಶಿವನ ಅಥವಾ ನಟರಾಜನ ರುದ್ರ ತಾಂಡವಕ್ಕೆ ಹೋಲಿಸುತ್ತಾರೆ. ಈ ಸೃಷ್ಟಿ, ಸೃಷ್ಟಿಯಲ್ಲಿನ ಪಂಚ ಮಹಾಭೂತಗಳು ಮತ್ತು ಅವುಗಳ ಕಾರ್ಯ ವೈಖರಿಯೂ ಸಹ, ಊಹಾತೀತ. ಇದೊಂದು ಯಾರಿಗೂ ಅರ್ಥವಾಗದ ವಿಸ್ಮಯವೆನ್ನುತ್ತಾರೆ ಮಾನ್ಯ ಗುಂಡಪ್ಪನವರು. 152 ದಶಲಕ್ಷ ಕಿಲೋಮೀಟರ್ ದೂರದಲ್ಲಿರುವ ನಮ್ಮ ಸೌರಮಂಡಲದ ಸೂರ್ಯನಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಬೇಕಾಗುವ ಸಮಯ 8.28 ನಿಮಿಷಗಳು. ಸೂರ್ಯ ಒಂದು ನಕ್ಷತ್ರ. ನಮಗೆ ಆಕಾಶದಲ್ಲಿ ಕಾಣುವ ಅನ್ಯ ಅನೇಕ ನಕ್ಷತ್ರಗಳಂತೆ. 152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿದ್ದರೂ ಇಷ್ಟು ಹತ್ತಿರದಲ್ಲಿ ಕಂಡಂತೆ ಕಂಡು ಇಷ್ಟು ಬೆಳಕನ್ನು ಮತ್ತು ಶಾಖವನ್ನು ನೀಡುತ್ತಾನೆ. ಬೇಸಿಗೆ ಕಾಲದಲ್ಲಿ ಅವನ ಶಾಖವನ್ನು ತಡೆಯಲಾರದೆ ಸಾವನ್ನಪ್ಪುವ ಜನರೆಷ್ಟೋ! ಇದನ್ನೇ ಅಗ್ನಿ ಗೋಳವೆಂದರು ಶ್ರೀ ಗುಂಡಪ್ಪನವರು. ವಾಚಕರೆ ಯೋಚಿಸಿ, ಇಷ್ಟು ಹತ್ತಿರ ಕಾಣುವ ನಮ್ಮ ಸೂರ್ಯನೇ 152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿದ್ದಾನೆಂದರೆ, ಇನ್ನು ನಮ್ಮ ಕಣ್ಣಿಗೆ ಬೆಳ್ಳಿ ಚುಕ್ಕಿಯಂತೆ ಕಾಣುವ ಎಷ್ಟೋನಕ್ಷತ್ರಗಳು ಎಷ್ಟುದೂರದಲ್ಲಿರಬೇಕು? ನಮ್ಮ ಸೌರಮಂಡಲದ ಸೂರ್ಯನ ನಂತರ ನಮಗೆ ಹತ್ತಿರದಲ್ಲಿರುವ ನಕ್ಷತ್ರವೆಂದರೆ "ಆಲ್ಫಾ ಸೆಂಚ್ಯುರಿ" ಅಥವಾ "ಮ್ಯಾಗ್ಜಿಮಾ ಸೆಂಚ್ಯುರಿ". ಇದು ನಮಗೆ ಎಷ್ಟು ದೂರದಲ್ಲಿದೆಯೆಂದರೆ, ಅಲ್ಲಿಂದ ಹೊರಟ ಬೆಳಕು ನಮ್ಮ ಭೂಮಿಯನ್ನು ತಲುಪಬೇಕಾದರೆ 4.7 ವರ್ಷಗಳು ಬೇಕಾಗುತ್ತದೆ. ಇನ್ನೂ ದೂರದಲ್ಲಿರುವ ನಕ್ಷತ್ರಗಳ ದೂರವೆಷ್ಟೋ, ನಮಗೆ ಕಾಣದಿರುವ ನಕ್ಷತ್ರಪುಂಜಗಳೆಷ್ಟೋ!! ಅಂದರೆ ಈಗ ನಾವು ಒಂದು ನಕ್ಷತ್ರವನ್ನು ನೋಡುತ್ತಿದ್ದೇವೆ ಎಂದರೆ ಅಲ್ಲಿಂದ ಎಂದೋ ಹೊರಟ ಬೆಳಕನ್ನು ನಾವು ಇಂದು ನೋಡುತ್ತಿದ್ದೇವೆ ಎಂದು ಅರ್ಥ. ಹಾಗೆ ನಮಗೆ ಕಾಣುವ ಅತೀ ದೂರದ ನಕ್ಷತ್ರ ನಮಗಿಂತ ಎಷ್ಟು ದೂರದಲ್ಲಿರಬಹುದು. ಕಾಣುವುದೇ ಎಷ್ಟೋ ದೂರದಲ್ಲಿದ್ದರೆ ಕಾಣದ್ದೆಷ್ಟೋ ಯಾರಿಗೆ ಗೊತ್ತು. ಇಂತಹ ವಿಶ್ವ, ನಮ್ಮ ಯೋಚನೆಗೂ ನಿಲುಕದ ಅದ್ಭುತ ಸೃಷ್ಟಿ. ಇದನ್ನೇ ಮಾನ್ಯ ಗುಂಡಪ್ಪನವರು "ಏನಂತರಾಳಗಳು ಏನು ವಿಸ್ಮಯ ಸೃಷ್ಟಿ!!!!!" ಎಂದರು. ಈ ಸೃಷ್ಟಿಯ ಗೂಢ ನಿಗೂಢ ವಿಸ್ಮಯಗಳು. ಅಬ್ಬ! ಎಂತಹ ವಿಚಿತ್ರ. ಇದನ್ನೇ ಗುಂಡಪ್ಪನವರು ವಿಸ್ಮಯ ಅಥವಾ ವಿಚಿತ್ರವೆನ್ನುತ್ತಾರೆ. ಈ ಸೃಷ್ಟಿಯನ್ನು ಒಂದು ಸೂತ್ರದಲ್ಲಿ ಹಿಡಿದಿಟ್ಟಿರುವ ಆ ಪರಮ ಶಕ್ತಿ. ಇವುಗಳ ಮುಂದೆ ನಾವೆಷ್ಟರವರು? ನಮ್ಮ ಸಾಮರ್ಥ್ಯದ ಮಿತಿ ಏನು? ನಾವು ಅಹಂಕಾರಪಡಲು ಏನಾದರೂ ಕಾರಣವಿದೆಯೇ? ಯೋಚಿಸಿ ವಾಚಕರೆ. ಈ ವಿಸ್ಮಯಭರಿತ ಮತ್ತು ವಿಚಿತ್ರವಾದ ವಿಶ್ವ, ಅದರ ನಿಗೂಢತೆ ಮತ್ತು ಇದರ ಸೃಷ್ಟಿಕರ್ತನ ಸಾಮರ್ಥ್ಯಗಳ ಅವಲೋಕಿಸೋಣವೇ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-10 )

ಏನು ಪ್ರಪಂಚವಿದು! ಏನು ಧಾಳಾಧಾಳಿ | ಏನದ್ಭುತಾಪಾರಶಕ್ತಿನಿರ್ಘಾತ!|| ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? | ಏನರ್ಥವಿದಕೆಲ್ಲ? ಮಂಕುತಿಮ್ಮ |

ಪದಗಳ ವಿಸ್ತರಣೆ

ಏನದ್ಭುತಾಪಾರಶಕ್ತಿ ನಿರ್ಘಾತ=ಏನು ಅದ್ಭುತ+ಅಪಾರ+ಶಕ್ತಿ,

ಪದಗಳ ತಾತ್ಪರ್ಯ

ನಿರ್ಘಾತ=ಹೊಡೆತ.

ಪದ್ಯದ ಪೂರ್ತಿ ವಿವರಣೆ

ಇಲ್ಲಿಯವರೆಗೆ ಬಂದ 9 ಮುಕ್ತಕಗಳಲ್ಲಿ, ಮೊದಲ ಮೂರು ಮುಕ್ತಕಗಳಲ್ಲಿ, ಶ್ರೀ ಗುಂಡಪ್ಪನವರು, ಆ ಪರಮಾತ್ಮನೆಂದೆನಿಸಿಕೊಂಡ, ಪರಮಶಕ್ತಿಗೆ ನಮಿಸುತ್ತಾ, ಮುಂದಿನ ಮುಕ್ತಕಗಳಲ್ಲಿ ಮನುಷ್ಯನ ಜೀವನದ ಮತ್ತು ಸೃಷ್ಟಿಯ ವಿಚಿತ್ರಗಳನ್ನು ಬರೆದಿದ್ದಾರೆ. ಈ ಸಮಯಕ್ಕೆ ನಾ ಹಿಂದೆ ಹೇಳಿದಂತೆ ಎರಡನೇ ಮಹಾಯುದ್ಧ ಆರಂಭವಾಗಿ ಎಲ್ಲೆಲ್ಲೂ ಹಾಹಾಕಾರ ಧಾಳಿಗಳು. ಇವುಗಳನ್ನು ಕಂಡು ಅಂದಿನ ಸಮಯಕ್ಕೆ ಅವರ ಅನುಭೂತಿ ಏನಿತ್ತು ಎಂಬುದು ಮುಂದಿನ ಕೆಲವು ಮುಕ್ತಕಗಳಲ್ಲಿ ಕಾಣಬಹುದು. ಈ ಪ್ರಪಂಚಕ್ಕೆ ಏನಾಗಿದೆ? ಏಕೆ ಈ ಮುತ್ತಿಗೆಗಳು? ಏನು ಈ ಹೊಡೆತಗಳು ಮತ್ತು ಆ ಹೊಡೆತಗಳ ಹಿಂದಿನ ಅಪಾರ ಶಕ್ತಿ ಏನು? ಮಾನವನ ಗುರಿಯೇನು? ಇದಕ್ಕೆಲ್ಲ ಬೆಲೆಯೇನು? ಇದಕ್ಕೆಲ್ಲ ಅಂತ್ಯವೇನು? ಮತ್ತು ಇದಕ್ಕೆಲ್ಲ ಏನು ಅರ್ಥ ಎಂಬ ಭಾವಗಳನ್ನು ವ್ಯಕ್ತಪಡಿಸುತ್ತಾ ಅಂದು ನಡೆಯುತ್ತಿದ್ದ ಪ್ರಾಪಂಚಿಕ ವಿದ್ಯಮಾನಗಳನೆಲ್ಲ ಒಟ್ಟುಗೂಡಿಸಿ ಹಲವು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಾರೆ. ಯಾರೋ ಒಬ್ಬ ಸರ್ವಾಧಿಕಾರಿಯ ಅಧಿಕಾರ ದಾಹ, ಅಧಿಕಾರವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆ ಮತ್ತು ಅಹಂಕಾರವನ್ನು ತಣಿಸುವ ಅತೀ ಆಸೆಗೆ ಬಲಿಯಾದದ್ದು ಇಡೀ ವಿಶ್ವ. ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಮೇಲೆ ದಾಳಿ. ಆ ರಾಷ್ಟ್ರಕ್ಕೆ ಕೆಲವು ಮತ್ತು ಈ ರಾಷ್ಟ್ರಕ್ಕೆ ಕೆಲವು ರಾಷ್ಟ್ರಗಳು ಸಹಾಯಕ್ಕೆ ನಿಲ್ಲುತ್ತವೆ. ಆಗ ಈ ಎರಡೂ ರಾಷ್ಟ್ರಗಳು ಮತ್ತು ಆ ರಾಷ್ಟ್ರಗಳ ಸಹಾಯಕ್ಕೆ ನಿಂತ ಬೇರೆ ರಾಷ್ಟ್ರಗಳ ಎಲ್ಲ ಸೈನಿಕರೂ ಹೊಡೆದಾಡುತ್ತಾರೆ. ಯಾರು, ಯಾರ ಮೇಲೋ ದಾಳಿ. ದಾಳಿಗೊಳಗಾದ ರಾಷ್ಟ್ರಕ್ಕಾಗಲೀ ದಾಳಿಮಾಡಿದ ರಾಷ್ಟ್ರಕ್ಕಾಗಲೀ ದಾಳಿಯ ಕಾರಣವೇ ತಿಳಿದಿರುವುದಿಲ್ಲ. ಆದರೆ ಹೊಡೆದಾಡುವುದು, ಪಾಪ ಮುಗ್ಧ ಸೈನಿಕರು. ಕೇವಲ ಜೀವಿಕೆಗಾಗಿ. ಇದು ಮಾನವನ ಜೀವನದ ಇತಿಹಾಸದಲ್ಲಿ ನಿರಂತರವಾಗಿ ನಡೆದಿದೆ. ಕ್ರಿಸ್ತ ಪೂರ್ವ ಸುಮಾರು 325 ವರ್ಷದಲ್ಲಿ ಅಲೆಕ್ಸಾಂಡರನ ವಿಶ್ವ ವಿಜಯ ಯಾತ್ರೆಯಿಂದ ಹಿಡಿದು, ಇಂದಿನವರೆಗೆ ನಡೆದ ಯುದ್ಧಗಳು ಆಯಾ ರಾಷ್ಟ್ರಗಳ ನಾಯಕರ ಬೌದ್ಧಿಕ ಮತ್ತು ನೈತಿಕ ದಿವಾಳಿತನದಿಂದಲೇ ನಡೆದಿದೆ ಅಲ್ಲವೆ? ಅಂತಹ ಒಂದು ಸ್ಥಿತಿಯೇ 2ನೇ ಮಹಾಯುದ್ಧದ ಕಾಲದಲ್ಲಿ ಹಿಟ್ಲರನ ತಿಳಿಗೇಡಿತನದಿಂದಾಗಿ ಆರಂಭವಾಗಿ ವಿಶ್ವವೆಲ್ಲ ಹರಡಿ ಹಲಕೆಲವರು ಕೆಲಕೆಲವರ ಪಕ್ಷ ಹಿಡಿದು ಹೋರಾಡಿ, ಇಡೀ ಪ್ರಪಂಚವನ್ನು ವಿನಾಶದಂಚಿಗೆ ತಳ್ಳಿದರು. ಘನಘೋರ ಯುದ್ಧ, ಅಪಾರ ಶಕ್ತಿಯ ವ್ಯಯ, ಸಾವು ನೋವು. ಪ್ರತಿ ದೇಶಕ್ಕೂ ಯುದ್ಧಕ್ಕಾಗಿ ಅಪಾರ ವೆಚ್ಚ. ಆ ವೆಚ್ಚವನ್ನು ಭರಿಸಲಿಕ್ಕಾಗಿ ಅಧಿಕ ಕರಗಳು ಮತ್ತು ಕರಭಾರದಿಂದ ತತ್ತರಿಸಿದ ಪ್ರಜೆಗಳು. ಯುದ್ಧದಲ್ಲಿ ಸಾವು ನೋವುಗಳು. ಇದೂ ಸಾಲದೆಂಬಂತೆ ಅಂದು ಇಡೀ ಪ್ರಪಂಚದಲ್ಲೇ ‘ಬರ’ದ ಕರಾಳ ನೃತ್ಯ. ಎಲ್ಲದಕ್ಕೂ ಕೊರತೆ, ಕಾಲರಾ, ಪ್ಲೇಗ್ನಂತಹ ಸೋಂಕು ರೋಗಗಳ ರುದ್ರ ನರ್ತನ. ನೋವು ಮಾತ್ರ ಅಧಿಕ. ಇದನ್ನು ಕಂಡೇ ಗುಂಡಪ್ಪನವರು, “ಮಾನವನ ಗುರಿಯೇನು”? ಎಂದು ಪ್ರಶ್ನಿಸುತ್ತಾರೆ. ಇದಕ್ಕೆಲ್ಲ ಏನು ಅರ್ಥ? ಎಂದು ಕೇಳುತ್ತಾರೆ. ವಾಚಕರೆ, ನಿಮ್ಮಲ್ಲಿ ಬಹಳಷ್ಟು ಜನಗಳಿಗೆ ಗೊತ್ತೋ ಇಲ್ಲವೋ ನನಗೆ ಗೊತ್ತಿಲ್ಲ, ಅಂದು ಅನ್ನಕ್ಕೆ ಬರ. ಬಟ್ಟೆಗೆಬರ. ಹಾಲು ನೀರಿಗೂ ಬರ. ಪ್ರತಿ ಊರಿನಲ್ಲೂ ಗಂಜಿ ಕೇಂದ್ರಗಳು. ಪ್ರತಿಯೊಬ್ಬರಿಗೂ ಬೆಳಗ್ಗೆ ಎರಡು ಸೌಟು ಮತ್ತು ಸಂಜೆ ಎರಡು ಸೌಟು ಗಂಜಿ. ಬಟ್ಟೆ ಬೇಕಾದರೆ, ಸರ್ಕಾರದಿಂದ ಪರವಾನಗಿ (permit) ತೆಗೆದುಕೊಂಡು ಗುಟ್ಟಲ್ಲಿ ಖರೀದಿ ಮಾಡಬೇಕಾದ ಪರಿಸ್ಥಿತಿ. ಅಂತಹ ಪರಿಸ್ಥಿತಿಗೆ ಅರ್ಥವೇನು? ಎಂದು, ಅದು ಕೇವಲ ಅಂದರೆ ಅರ್ಥಹೀನ ಎಂಬ ರೀತಿ ಗುಂಡಪ್ಪನವರು ಪ್ರಶ್ನಿಸುತ್ತಾರೆ. ಇಂದು ಕೂಡ ಈ ಪರಸ್ಥಿತಿ ಬದಲಾಗಿಲ್ಲ. ಅಂದು ಕೊರತೆಯಿಂದ ಇಂದು ಆಧಿಕ್ಯದಿಂದ ಮಾನವನಿಗೆ ತೊಂದರೆ. ಅಹಂಕಾರದ, ದ್ವೇಷದ, ಯುದ್ಧಗಳ, ನೋವಿನ, ಕೊರತೆಗಳ ರೂಪ ಬೇರೆ ಅಷ್ಟೇ! ಇಂದು ಕೂಡ ನಾವು ಅಂದು ಅವರು ಕೇಳಿದ ಪ್ರಶ್ನೆಗಳನ್ನೇ ಕೇಳುವ ಸ್ಥಿತಿ ಇದೆ ಅಲ್ಲವೇ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-11 )

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ | ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ || ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ | ಎತ್ತಲಿದಕೆಲ್ಲ ಕಡೆ ಮಂಕುತಿಮ್ಮ ||

ಪದಗಳ ವಿಸ್ತರಣೆ

ಮುತ್ತಿರುವುದಿಂದು=ಮುತ್ತಿರುವುದು+ಇಂದು,ಭೂಮಿಯನೊಂದು=ಭೂಮಿಯನು+ಒಂದು, ಮೃತ್ಯುಕುಣಿಯುತಲಿಹನು=ಮೃತ್ಯು+ಕುಣಿಯುತಲಿ+ಇಹನು,ತಲೆಯನನುದಿನದ=ತಲೆಯನು+ಅನುದಿನದ, ಎತ್ತಲಿದಕೆಲ್ಲ=ಎತ್ತಲು+ಇದಕೆಲ್ಲ.

ಪದಗಳ ತಾತ್ಪರ್ಯ

ಸುತ್ತಿಪುದು=ಸುತ್ತಿಸುತ್ತದೆ, ಅನುದಿನವು=ಪ್ರತಿನಿತ್ಯವು, ಎತ್ತಲಿದಕೆಲ್ಲ=ಇದಕ್ಕೆಲ್ಲ ಎಲ್ಲಿ.

ಪದ್ಯದ ಪೂರ್ತಿ ವಿವರಣೆ

ಭೂಮಿಕೆ ಅದೇ. ಯುದ್ಧ. ಘೋರ ವಿಶ್ವ ಮಹಾಯುದ್ಧ. ಇಡೀ ವಿಶ್ವವೇ ಅಲುಗಾಡುವಂಥ ಯುದ್ಧ. ಎಲ್ಲೆಲ್ಲೂ ರಕ್ತಪಾತ. ಎಲ್ಲೆಲ್ಲೂ ಯುದ್ಧದ ಕೂಗು. ಅದು ಈ ಭೂಮಿಗೆ ಆವರಿಸಿಕೊಂಡ ದುರ್ದೈವವೆಂದು ವ್ಯಾಖ್ಯಾನಿಸುತ್ತಾರೆ ಮಾನ್ಯ ಗುಂಡಪ್ಪನವರು. ಎಲ್ಲೆಲ್ಲೂ ಮೃತ್ಯುವಿನ ತಾಂಡವ. ಯುದ್ಧದಲ್ಲಿ, ತಂದೆಯನ್ನೋ ಅಣ್ಣನನ್ನೋ, ಮಗನನ್ನೋ, ಮಿತ್ರನನ್ನೋ, ತಮ್ಮನನ್ನೋ, ಭೂಮಿಯನ್ನೋ, ಹುಟ್ಟಿ ದೂರಲ್ಲಿ ಬಿಟ್ಟ ಬೇರನ್ನೋ, ಆ ಊರಿನ ಮಣ್ಣಿನ ಋಣವನ್ನೋ, ಕಳೆದುಕೊಂಡವರೆ ಬಹಳ ಜನ. ಕಳೆದುಕೊಂಡವರೆಲ್ಲರಿಗೂ ನೋವು. ಕಳೆದುಕೊಳ್ಳದವರಿಗೂ ಕಳೆದುಕೊಂಡವರ ನೋವಿಗಾಗಿ ಸಂತಾಪ. ಒಟ್ಟಾರೆ ಇಡೀ ಭೂಮಿಗೆ ಸೂತಕದ ಭಾವ. ಎಲ್ಲ ಕಡೆಯಿಂದಲೂ ಸಾವಿನ ನಷ್ಟದ ಸಮಾಚಾರ. ಪ್ರತಿನಿತ್ಯ ಈ ಸಮಾಚಾರಗಳನೆಲ್ಲ ಕೇಳಿಕೇಳಿ, ಪತ್ರಿಕೆಗಳಲ್ಲಿ ಓದಿ ಓದಿ ತಲೆ ಸುತ್ತುವಂತಾಗುತ್ತದೆ. ಇದಕ್ಕೆಲ್ಲ ಎಂದಿಗಾದರೂ ಕೊನೆಯುಂಟೆ ಎಂದು ಲೋಕ ಶಾಂತಿಗಾಗಿ ಮರುಗುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ಆ ಯುದ್ಧದಲ್ಲಿ ಗೆಲುವು ಯಾರದಾಯಿತು ಎಂದು ಯೋಚಿಸಿದರೆ, ಗೆದ್ದದ್ದು ‘’ಮೃತ್ಯು” ಮತ್ತೆಲ್ಲರೂ ಸೋತವರೇ!! ಆ ಯುದ್ಧದಲ್ಲೇ ಅಲ್ಲ ಯಾವುದೇ ಯುದ್ಧವನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದರೆ, ಗೆಲ್ಲುವುದು “ಮೃತ್ಯು” ಮಾತ್ರ. ಮಿಕ್ಕೆಲ್ಲರೂ, ಎಲ್ಲ ದೇಶಗಳೂ ಸೋಲುತ್ತವೆ. ಕೇವಲ ಮೃತ್ಯು ಗೆಲ್ಲುತ್ತದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಕ್ರೂರತ್ವಕ್ಕೆ ಒಂದು ಅಂತ್ಯವೇ ಇರಲಿಲ್ಲ. ಹಿಟ್ಲರನ ರಕ್ತದಾಹಕ್ಕೆ ಕೊನೆಯೇ ಇರಲಿಲ್ಲ. ಅದಕ್ಕೊಂದು ನಿದರ್ಶನವೆಂದರೆ “ಸಾಬಿಬಾರ್” ಎಂಬಲ್ಲಿ ವಿಷಾನಿಲ ಘಟಕಗಳನ್ನು ನಿರ್ಮಿಸಿ, ಶತ್ರುದೇಶದ ಸೈನಿಕರಷ್ಟೇ ಅಲ್ಲ ಸೆರೆಸಿಕ್ಕ ಸಾಮಾನ್ಯ ಪ್ರಜೆಗಳನ್ನೂ ಅಲ್ಲಿಗೆ ತಂದು, ಶಕ್ತಿ ಇರುವವರನ್ನು ಹಲವಾರು ಕೆಲಸಗಳಿಗೆ ಕೆಲಸ ಮಾಡಲು ಹಚ್ಚಿ, ಕೆಲಸ ಮಾಡಲಾಗದ ಸ್ತ್ರೀಯರು, ವೃದ್ಧರು, ಮಕ್ಕಳು ಹೀಗೆ ಎಲ್ಲರನ್ನೂ ಅಮಾನವೀಯ ಕ್ರೌರ್ಯದಿಂದ ಆ ವಿಷಾನಿಲ ಘಟಕದೊಳಕ್ಕೆ ತಳ್ಳಿ ಕೊಂದುಬಿಡುವ ನೀಚತನವನ್ನು ಹಿಟ್ಲರ್ ತೋರಿಸಿದ್ದ. ಅದು ಕ್ರೌರ್ಯದ ಹಲವಾರು ಮಾರ್ಗಗಳಲ್ಲಿ ಒಂದಾಗಿತ್ತು. ಎಲ್ಲ ದೇಶಗಳೂ ಒಂದಲ್ಲ ಒಂದು ದೇಶದ ಪಕ್ಷವನ್ನು ತೆಗೆದುಕೊಂಡು ಇಡೀ ವಿಶ್ವವನ್ನೇ ವಿನಾಶದ ಅಂಚಿಗೆ ತಳ್ಳುವಂಥಾ ಯುದ್ಧವನ್ನು ನಡೆಸಿದರು. ಜಪಾನಿನ ಮೇಲೆ ಬಿದ್ದ ಎರಡು ಅಣುಬಾಂಬುಗಳು, ಈ ಯುದ್ಧವನ್ನು ಒಂದು ಕೊನೆಮುಟ್ಟಿಸಿತು. ಇದು ಚರಿತ್ರೆ. ಆದರೆ ವರ್ತಮಾನವೇನೂ ಭಿನ್ನವಾಗಿಲ್ಲ. ಇನ್ನೂ ಭೀಕರವಾಗುತ್ತಿದೆ. ಆಗ ಒಂದು ಯುದ್ಧ ನಡೆದರೆ, ಈಗ ಹಲವಾರು ಯುದ್ಧಗಳು. ವೈಜ್ಞಾನಿಕವಾಗಿ, ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳು ಹಿಂದಿರುವ ರಾಷ್ಟ್ರಗಳ ಮೇಲೆ ಆಧಿಪತ್ಯ, ದಬ್ಬಾಳಿಕೆ. ಷಡ್ಯಂತ್ರ, ಒತ್ತಡ, ಅನವಶ್ಯಕ ಹಸ್ತಕ್ಷೇಪದಿಂದ ಇಂದಿಗೂ ದೇಶದೇಶಗಳ ಮಧ್ಯೆದ್ವೇಷದ ಭಾವ ಒಂದಿಷ್ಟೂ ಕಡಿವೆÄಯಾಗಿಲ್ಲ. ಜಾತಿ, ಮತ, ಭಾಷೆ, ಎಲ್ಲೆ, ಗಡಿ, ಹೀಗೆ ಹೊಡೆದಾಟಕ್ಕೆ ಹಲವಾರು ಕಾರಣಗಳು. ತನ್ನ ಬಲದ ಕಾರಣ ಪರದೇಶಗಳಿಗೆ ಕುಂಟು ನೆಪ ಒಡ್ಡಿ ನುಗ್ಗಿ ಮಾರಣಹೋಮ ನಡೆಸಿ ಅಲ್ಲಿರುವ ಸಂಪತ್ತನ್ನು ಲೂಟಿಮಾಡುವ ಪ್ರವೃತ್ತಿ ಸರಿಸುಮಾರು ಮೂರು ಸಾವಿರ ವರ್ಷಗಳ ಹಿಂದೆಯೂ ಇತ್ತು. ಇಂದೂ ಇದೆ. ಜನಾಂಗಗಳನ್ನು ಒಂದುಗೂಡಿಸುವುದಕ್ಕೆ ಪೂರಕವಾದ ಜಾತಿ, ಮತ, ಭಾಷೆಗಳೇ ಜನರ ಮಧ್ಯೆ, ದೇಶ-ದೇಶಗಳ ಮಧ್ಯೆ ವೈರಕ್ಕೆ ಕಾರಣವಾಗಿರುವುದು ಒಂದು ವಿಪರ್ಯಾಸ. ಅಷ್ಟೇ ಅಲ್ಲ, ಅಂದು ಇದ್ದ ಅಸ್ತ್ರ-ಶಸ್ರಾಸ್ತ್ರಗಳಿಗೆ ಹೋಲಿಸಿದರೆ ಇಂದು ಪ್ರಪಂಚದಲ್ಲಿ, ಇಂತಹ "ಹತ್ತು ಪ್ರಪಂಚ"ಗಳನ್ನು ನಿಮಿಷದಲ್ಲಿ ಧ್ವಂಸ ಮಾಡಬಲ್ಲ ಮಾರಕಾಸ್ತ್ರಗಳನ್ನು ಹೊಂದಿರುವ ಹಲವಾರು ದೇಶಗಳುಂಟು. ನಮ್ಮಲ್ಲಿ ಬತ್ತಿಯನ್ನು ಕಿತ್ತು ಸಿದ್ಧವಾಗಿರುವ ಅಸ್ತ್ರಗಳುಂಟು. ಬೆಂಕಿಕಡ್ಡಿ ಗೀರಬೇಕಷ್ಟೇ. ಸಮಗ್ರವಾಗಿ ಇದನ್ನೆಲ್ಲಾ ಸೇರಿಸಿ ದುರ್ದೈವ ಎಂದರು ಮಾನ್ಯ ಗುಂಡಪ್ಪನವರು. ಅಂದು ಗುಂಡಪ್ಪನವರು ಖೇದ ವ್ಯಕ್ತಪಡಿಸಿದ ಕಾರಣಗಳು ಇಂದಿಗೂ ಇವೆ. ಅಷ್ಟೇ ಅಲ್ಲ, ಇನ್ನೂ ವಿಕೃತ ರೂಪ ಪಡೆದುಕೊಂಡು ಇಡೀ ಪ್ರಪಂಚವನ್ನೇ ಎತ್ತ ಕೊಂಡುಹೋಗುತ್ತಿದೆಯೋ ಯಾರು ಬಲ್ಲರು. ಅಂದು ಅಷ್ಟಕ್ಕೇ ಮರುಗಿದ ಗುಂಡಪ್ಪನವರು ಇಂದು ಈ ಸ್ಥಿತಿಯನ್ನು ನೋಡಿದರೆ ಏನು ಹೇಳಬಹುದೆಂದು ಊಹಿಸಲೂ ಕಷ್ಟ. ಇಂತಹ ವಿಚಾರಗಳನ್ನು ಮಂಥನ ಮಾಡುತ್ತ, ಒಂದು ಶಾಂತ ಪ್ರಪಂಚವನ್ನು ನಿರ್ಮಿಸುವ ಪ್ರಯತ್ನವನ್ನು ಮಾಡೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-12 )

ಮಾನವರೋ ದಾನವರೋ ಭೂಮಾತೆಯನು ತಣಿಸೆ | ಶೋಣಿತವನೆರೆಯುವರು ಬಾಷ್ಪಸಲುವುದಿರೆ? || ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ | ಸೌನಿಕನ ಕಟ್ಟೆಯೇಂ? ಮಂಕುತಿಮ್ಮ ||

ಪದಗಳ ವಿಸ್ತರಣೆ

ಶೋಣಿತವನೆರೆಯುವರು=ಶೋಣಿತವನು+ಎರೆಯುವರು, ಭಾಷ್ಪಸಲುವುದಿರೆ=ಭಾಷ್ಪ+ಸಲುವುದು+ಇರೆ,

ಪದಗಳ ತಾತ್ಪರ್ಯ

ಶೋಣಿತ=ರಕ್ತ, ಭಾಷ್ಪ=ಕಣ್ಣೀರು, ಎರೆಯುವುದು=ಸುರಿಸುವುದು, ಸಲುವುದಿರೆ=ಸುರಿಸಬೇಕಾದರೆ. ಸೌನಿಕ=ಕಟುಕ, ಕಟ್ಟೆ=ಜಗುಲಿ.

ಪದ್ಯದ ಪೂರ್ತಿ ವಿವರಣೆ

ಇವರೇನು ಮನುಷ್ಯರೋ ಅಥವಾ ರಾಕ್ಷಸರೋ? ಈ ಭೂಮಾತೆಯನು ತಣಿಸಲು ಅಂದರೆ ದಾಹವಿಂಗಿಸಲು ಕಣ್ಣೀರು ಸುರಿಸುವ ಬದಲು ರಕ್ತವನ್ನು ಸುರಿಸಿಹರಲ್ಲ!! ಈ ಪ್ರಪಂಚದಲ್ಲಿನ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇಡೀ ಪ್ರಪಂಚವೇ ಕಟುಕನ ಜಗುಲಿಯಂತಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಮತ್ತದೇ ಯುದ್ಧದ ಸನ್ನಿವೇಶವನ್ನು ಈ ಮುಕ್ತಕದಲ್ಲೂ ಉಲ್ಲೇಖಿಸುತ್ತಾರೆ, ಶ್ರೀ ಗುಂಡಪ್ಪನವರು. ಪಾಪ ಅವರ ಮನ ಎಷ್ಟು ನೋಂದಿತ್ತೋ ಏನೋ ಇಲ್ಲದಿದ್ದರೆ ಅಂದಿನ ವರ್ತಮಾನ ಸ್ಥಿತಿಗೆ ಇಷ್ಟೊಂದು ಪ್ರತಿಕ್ರಿಯೆ ಬರುತ್ತಿತ್ತೆ? ಇರಲಿ. ಮಾನವರಾದ ನಾವು ಮಾನವರಂತೆ ಇರದೇ ದಾನವರಂತೆ ಏಕೆ ಒಬ್ಬರಿಗೆ ಮತ್ತೊಬ್ಬರ ರಕ್ತದಾಹ. ಬಾಳುವವನು, ‘ಮಾನವ’ ಎನ್ನುತ್ತದೆ ಪರಿಭಾಷೆ. ಬಾಳದೆ ಯುದ್ಧಮಾಡಿ ನಾಶಕ್ಕೆ ಕಾರಣರಾದವರನ್ನು ಮಾನ್ಯ ಗುಂಡಪ್ಪನವರು ದಾನವರೆಂದು ಸೂಕ್ತವಾಗಿಯೇ ಹೇಳಿದ್ದಾರೆ. ಅಹಂಕಾರದಿಂದ, ಆಸೆಯಿಂದ, ಮದ, ಮತ್ಸರಗಳ ಕಾರಣಗಳಿಂದ ಎಲ್ಲ ಯುದ್ಧಗಳೂ ನಡೆಯುತ್ತವೆ. ನಮ್ಮ ಪುರಾಣಗಳಲ್ಲೂ ಇಂತಹ ಯುದ್ಧಗಳನ್ನು ನೋಡಬಹುದು. ದಾನವರಾಗಿ ಹುಟ್ಟಿದ ಹಿರಣ್ಯಾಕ್ಷ-ಹಿರಣ್ಯಕಶಿಪುಗಳೂ ಸಹ ತಮಗೆ ಸಿಕ್ಕ ವರಗಳ ಬಲದಿಂದ, ಮದೋನ್ಮತ್ತರಾಗಿ ಭೂಲೋಕವೇನು ದೇವಲೋಕಕ್ಕೂ ಲಗ್ಗೆ ಇಟ್ಟ ಉಲ್ಲೇಖವುಂಟು. ಮಹಾಭಾರತದ ಯುದ್ಧದಲ್ಲೂ ಇಡೀ ಆರ್ಯಾವರ್ತವೇ ಇಬ್ಭಾಗವಾಗಿ ಕೆಲವರು ಕËರವರ ಮತ್ತೆ ಕೆಲವರು ಪಾಂಡವರ ಪಕ್ಷ ವಹಿಸಿ ಯುದ್ಧಮಾಡಿ 18 ಅಕ್ಷೋಹಿಣಿ ಜನರನ್ನು ಬಲಿ ತೆಗೆದುಕೊಂಡಿತಂತೆ. ಅದು ಪುರಾಣ. ಗ್ರೀಕ್ ಪುರಾಣದಲ್ಲಿ ಬರುವ ಟ್ರೋಜನ್ ಯುದ್ಧವು ಸಹ ಒಂದು “ಹೆಲನ್” ಎನ್ನುವ ಹೆಣ್ಣಿಗಾಗಿ ಸುಮಾರು ವರ್ಷಗಳ ಕಾಲ ನಡೆದು ಅಪಾರ ಸಾವು ನೋವುಗಳಿಗೆ ಕಾರಣವಾಯಿತಂತೆ. ಇನ್ನು ನಮ್ಮ ದೇಶದಲ್ಲಿ ಕ್ರಿಸ್ತ ಪೂರ್ವ 323ರ ಸುಮಾರಿಗೆ, ಚಾಣಕ್ಯ ಬರುವವರೆಗೆ, ಸಣ್ಣ ಸಣ್ಣ ರಾಜರು ಮತ್ತು ಕೆಲವು ದೊಡ್ಡ ರಾಜರುಗಳು ಸದಾ ಯುದ್ಧ ನಿರತರು. ಕೇವಲ ಅವರ ದಾನವೀ ಅಹಂಕಾರವನ್ನು ತಣಿಸಲಿಕ್ಕಾಗಿಯೇ ನಡೆದ ಯುದ್ಧಗಳು. ಕ್ಷುಲ್ಲಕ ಕಾರಣಕ್ಕಾಗಿಯೇ ನಡೆವ ಯುದ್ಧಗಳಲ್ಲೆಲ್ಲ ನಡೆಯುವುದು ಸಾಮಾನ್ಯರ ಮಾರಣ ಹೋಮ. ಅದು ದಾನವೀ ಪ್ರವೃತ್ತಿ. ನಮ್ಮ ದೇಶವನ್ನೇ ತೆಗೆದುಕೊಂಡರೆ, ಮೊದಲು ಯವನರು, ನಂತರ ಮೊಘಲರು, ನಂತರ ಬ್ರಿಟಿಷರು. ಹೀಗೆ ಆಕ್ರಮಣಕಾರರ ದಂಡೇ ನಮ್ಮ ದೇಶವನ್ನು ಲೂಟಿಮಾಡಲು ಹಿಂಡು ಹಿಂಡಾಗಿ ಬಂದವರೇ ಹೆಚ್ಚು. ಇವರು ಸಾಲದೆಂಬಂತೆ, ಬಂದವರು ಡಚ್ಚರು, ಪೋರ್ಚುಗೀಸರು ಎಲ್ಲರೂ ನಮ್ಮ ನಾಡಿನ ಮೇಲೆ ದಾಳಿಮಾಡಿದರು. ವಾಚಕರೆ ನೋಡಿ ಭಾರತವು ಯಾವುದೇ ಅನ್ಯ ದೇಶದ ಮೇಲೆ ದಾಳಿ ಮಾಡಿದ್ದನ್ನು ಯಾವುದಾದರೂ ಪುಸ್ತಕದಲ್ಲಿ ಕಂಡಿದ್ದೀರಾ? ಅಖಂಡವಾಗಿದ್ದ ಭಾರತ 200 ವರ್ಷಗಳಲ್ಲಿ ತುಂಡುತುಂಡಾಗಿ ಹರಿದು ಹಂಚಿಹೋಗಿದೆ. ಹಾಗಾಗಿ ವಾಚಕರೆ, ಅಹಂಕಾರ ದುರಾಸೆ ಈ ಎಲ್ಲ ಯುದ್ಧಗಳಿಗೂ ಕಾರಣವಾಗಿತ್ತು. ಈ ಜಗತ್ತಿನಲ್ಲಿ ಮಾನವರು ಸುಸಂಸ್ಕೃತ ಪ್ರಾಣಿಗಳು. ಅನ್ಯ ಪ್ರಾಣಿಗಳಿಗಿಂತ ಭಿನ್ನ. ಮಾನವತೆಯಿಂದ ತನ್ನ ಜೀವನವನ್ನು ಮತ್ತು ಅನ್ಯರ ಜೀವನವನ್ನೂ ಸಹ ಸುಂದರವಾಗಿ ರೂಪಿಸಿಕೊಳ್ಳಬಲ್ಲ ಶಕ್ತಿ ಅವನಿಗೆ ಇದೆ. ಆದರೆ ಕೇವಲ ಅಹಂಕಾರದಿಂದ ತನ್ನ ಬುಡಕ್ಕೆ ತಾನೇ ಕೊಳ್ಳಿ ಇಟ್ಟುಕೊಂಡು ಅನ್ಯರನ್ನೂ ಸುಡುವ ಈ ದಾನವೀ ಅಥವಾ ಪೈಶಾಚಿಕ ಪ್ರವೃತ್ತಿ ಏಕೆ? ಧರಣಿ ಸಸ್ಯಶ್ಯಾಮಲವಾಗಿರಬೇಕಾದರೆ, ನೀರು ಮತ್ತು ಶ್ರಮದ ಅವಶ್ಯಕತೆ ಉಂಟು. ಅದನ್ನು ಬಿಟ್ಟು ದ್ವೇಷದ ಬೀಜ ಮತ್ತು ರಕ್ತದ ಸಿಂಚನವಾದರೆ, ಬೆಳೆ ಬೆಳೆದೀತೆ? ಹೊಟ್ಟೆ ತುಂಬೀತೆ? ಹಗೆಯ ಹೊಗೆಯಿಂದ ಉಸಿರು ಕಟ್ಟುತ್ತದೆಯೇ ಹೊರತು ಜೀವ ಪೋಷಣೆಯಾಗದು. ಜೀವನ ನಡೆಯದು. ಈ ಪ್ರಪಂಚದ ಗತಿಯೇನು? ಅದು ಹಾಗಾದರೆ ಇಡೀ ಪ್ರಪಂಚವವೇ ಕಟುಕನ ಜಗಲಿಯಂತಾಗುತ್ತದೆ ಅಲ್ಲವೆ? ಅಂಥಹ ಭಾವಗಳನ್ನೇ ಮಾನ್ಯಶ್ರೀ ಗುಂಡಪ್ಪನವರು ವ್ಯಕ್ತಪಡಿಸುತ್ತಾರೆ ಈ ಮುಕ್ತಕದಲ್ಲಿ. ಸಹೃದಯರೇ, ಒಂದು ಸಣ್ಣ ಬೀದಿ ಜಗಳದಿಂದ ಹಿಡಿದು ಒಂದು ಮಹಾ ಪ್ರಪಂಚ ಯುದ್ಧಕ್ಕೂ ಮಾನವತೆಯ ಕೊರತೆ ಮತ್ತು ಅಹಂಕಾರಭರಿತ ದಾನವತೆಯೇ ಕಾರಣ, ದ್ವೇಷವೇ ಕಾರಣ. ಇದರಿಂದ ನಾಶವೇ ಹೊರತು ಬಾಳು ಇಲ್ಲ ಎಂದು ನಾವು ಸಹ ಅರಿತು ನಮ್ಮ ನಮ್ಮಲ್ಲಿ ಇರುವ ಅಂತಹ ವಿನಾಶಕಾರಿ ಭಾವಗಳನ್ನು ತೊರೆದು, ಈ ಇಡೀ ಜಗತ್ತನ್ನು ಸುಂದರ ತಾಣವನ್ನಾಗಿ ಪರಿವರ್ತಿಸಲು ಪ್ರಯತ್ನಿಸೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-13 )

ಪುರುಷಸ್ವತಂತ್ರತೆಯ ಪರಮಸಿದ್ಧಿಯದೇನು? | ಧರಣಿಗನುದಿನದ ರಕ್ತಾಭಿಷೇಚನೆಯೇ? || ಕರವಾಲವನು ಪುಷ್ಪಸರವೆಂದು ಸೆಳೆದಾಡೆ | ಪರಿಮಳವ ಸೂಸುವುದೆ? ಮಂಕುತಿಮ್ಮ ||

ಪದಗಳ ವಿಸ್ತರಣೆ

ಪುರುಷಸ್ವತಂತ್ರತೆಯ=ಪುರುಷ+ಸ್ವತಂತ್ರತೆಯು, ಪರಮಸಿದ್ಧಿಯದೇನು=ಪರಮಸಿದ್ಧಿಯು+ಅದೇನು, ಧರಣಿಗನುದಿನದ=ಧರಣಿಗೆ+ಅನುದಿನದ, ರಕ್ತಾಭಿಷೇಚನೆಯೇ?=ರಕ್ತ+ಅಭಿಷೇಚನೆಯೇ

ಪದಗಳ ತಾತ್ಪರ್ಯ

ಸಿದ್ಧಿ=ಪ್ರಯೋಜನ, ಧರಣಿ=ಭೂಮಿ, ಅನುದಿನ=ಪ್ರತಿನಿತ್ಯ, ಪುರುಷ=ಶಕ್ತಿ, ಪರಮ=ಸಮೋಚ್ಚ, ಅಭಿಷೇಚನೆ=ಅಭಿಷೇಕ, ಕರವಾಲ=ಕತ್ತಿ, ಸೆಳೆದಾಡೆ=ಎಳೆದಾಡಿದರೆ, ಪರಿಮಳ=ಸುಗಂಧ.

ಪದ್ಯದ ಪೂರ್ತಿ ವಿವರಣೆ

ಆಗ ನಡೆಯುತ್ತಿದ್ದ ಯುದ್ಧ, ಯುದ್ಧದಿಂದ ಆಗುತ್ತಿದ್ದ ದುಷ್ಪರಿಣಾಮಗಳು, ಇವುಗಳ ಬಗ್ಗೆ ಮನಕರಗಿ ಭಾವುಕರಾದ ಮಾನ್ಯ ಗುಂಡಪ್ಪನವರು ಶಕ್ತಿಯ ಸ್ವಾತಂತ್ರದ ಸರ್ವೋಚ್ಚ ಗುರಿ ಏನು ಈ ಭೂಮಿಗೆ ಪ್ರತಿದಿನವು ರಕ್ತದ ಅಭಿಷೇಕವೇ? ಒರೆಯಿಂದ ಕತ್ತಿಯನ್ನು ಹೂವಿನ ಮಾಲೆ ಎಂದು ಎಳೆದರೆ ಅದರಿಂದ ಸುಗಂಧ ಬರಬಹುದೇ ಎನ್ನುತ್ತಾರೆ. ಪುರುಷ ಎಂದರೆ ಗಂಡಸು ಎನ್ನುವ ಅರ್ಥದಲ್ಲಿ ಸಾಮಾನ್ಯ ಬಳಕೆ. ಆದರೆ ವಾಸ್ತವದಲ್ಲಿ ಪುರುಷ ಎಂದರೆ ಶಕ್ತಿ ಎಂದು ಅರ್ಥ “ಪುರೇ ಶೇತಿ ಇತಿ ಪುರುಷಃ” "ಚೇತನ" ಎಂದು ಅಸ್ತಿತ್ವವನ್ನು ಸೂಚಿಸುವಾಗ, ಕ್ರಿಯಾಶೀಲತೆಯನ್ನು ಸೂಚಿಸುವಾಗ, ಚೈತನ್ಯ ಎಂದೂ ಕರೆಯಲಾಗುತ್ತದೆ. ಆದ್ದರಿಂದಲೇ ದೇವರನ್ನು ಸೂಚಿಸುವಾಗ "ಪರಮ" ಅಂದರೆ ಸರ್ವೋಚ್ಚ, ಪುರುಷ ಅಂದರೆ ಶಕ್ತಿ ಎಂಬ ಅರ್ಥದಲ್ಲಿ ಪುರುಷ” ಅಥವಾ “ಪರಮಾತ್ಮ” ಎಂದು ಕರೆಯುತ್ತಾರೆ. ಒಟ್ಟಾರೆ, ಪುರುಷವೆಂದರೆ ಶಕ್ತಿ. ಈ ಶಕ್ತಿಯ ಉಪಯೋಗ ರಕ್ಷಣೆಗೆ ಮಾತ್ರ. ಹೇಗೆ ಪರಮಪುರುಷನು ತನ್ನ ಸರ್ವೋಚ್ಚ ಶಕ್ತಿಯನ್ನು ಜಗದ್ರಕ್ಷಣೆಗೆ ವಿನಿಯೋಗಿಸುತ್ತಾನೋ ಹಾಗೆಯೇ, ಈ ಜಗತ್ತಿನಲ್ಲಿ ಹೆಚ್ಚು ಶಕ್ತಿ ಇರುವವರು ತಮಗಿಂತ ಕಡಿಮೆ ಶಕ್ತಿ ಇರುವವರನ್ನು ರಕ್ಷಿಸಬೇಕು ಮತ್ತು ಆ ಶಕ್ತಿಯನ್ನು ಕೇವಲ ಆತ್ಮ ರಕ್ಷಣೆ ಮತ್ತು ಇತರರನ್ನು ರಕ್ಷಿಸುವುದಕ್ಕಾಗಿಯೇ ಉಪಯೋಗಿಸಬೇಕು. ಇದು ಧರ್ಮ. ಇಲ್ಲಿ ಶಕ್ತಿಯೆಂದರೆ ಕೇವಲ, ದೈಹಿಕ ಶಕ್ತಿಯಷ್ಟೇ ಅಲ್ಲ. ಎಲ್ಲ ರೀತಿಯ ಶಕ್ತಿಯೂ ಇದರ ಪರಿಧಿಯೊಳಕ್ಕೆ ಬರುತ್ತದೆ. ದೇಹಬಲ, ಧನಬಲ, ಜನಬಲ, ಅಧಿಕಾರ ಬಲ, ಬುದ್ಧಿ ಬಲ, ಇತ್ಯಾದಿ ಇತ್ಯಾದಿ. ಹೀಗೆ ಯಾವುದೇ ರೀತಿಯ ಶಕ್ತಿಯ ಆಧಿಕ್ಯವಿದ್ದರೂ ಅದನ್ನು ಪರರ ರಕ್ಷಣೆಗೆ ಮಾತ್ರ ಉಪಯೋಗಿಸುವುದು ಧರ್ಮ. ಆದರೆ ಅಂದಿನ ಮತ್ತು ಇಂದಿನ ವಾಸ್ತವತೆಯೇ ಬೇರೆ. ಹಿಂದಿಯಲ್ಲಿ “ಜಿಸ್ಕಿ ಲಾಠಿ ಉಸ್ಕಿ ಭೈಂಸ್” ಎನ್ನುತ್ತಾರೆ. ಅಂದರೆ “ಯಾರ ಕೈಯಲ್ಲಿ ಕೋಲುಂಟೋ ಅವನದೇ ಎಮ್ಮೆ” ಎಂದು. ಯಾರಿಗೆ ಅಧಿಕ ಶಕ್ತಿ ಇದೆಯೋ ಅವನೇ ರಾಜ. ತನಗೆ ಶಕ್ತಿ ಇದೆ. “ನಾನು ಏನನ್ನಾದರೂ ಮಾಡಬಹುದು, ನನ್ನನ್ನು ಕೇಳುವವರಾರು, ಕೇಳಿದವರನ್ನು ಸದೆಬಡಿದುಬಿಡುತ್ತೇನೆ” ಎನ್ನುವ ದುರಾಚಾರದ ಜನರೇ ಅಧಿಕವಾಗಿದ್ದಾರೆ. ಇದು ಅಹಂಕಾರದ ಪರಮಾವಧಿ. ಎಲ್ಲ ಸಂಘರ್ಷಗಳೂ ಈ ಅಹಂಕಾರ ಜನಿತವಾದ ದಬ್ಬಾಳಿಕೆಯಿಂದಲೇ ನಡೆಯುತ್ತವೆ. ಇದು ತಪ್ಪು. ಇದರಿಂದ ಪ್ರತಿನಿತ್ಯದ ರಕ್ತಪಾತ ಸಾವು ನೋವು ಮಾತ್ರ ಎನ್ನುತ್ತಾರೆ ಶ್ರೀ ಗುಂಡಪ್ಪನವರು. ಅದಕ್ಕೊಂದು ಉಪವೆÄಯನ್ನು ಕೊಡುತ್ತಾರೆ. ಹೂವಿನಮಾಲೆ ಎಂದು ಒರೆಯಿಂದ ಕತ್ತಿಯನ್ನು ಎಳೆದರೆ, ಅದು ಸುಗಂಧವನ್ನು ಬೀರುತ್ತದೆಯೇ! ವಾಚಕರೆ, ನಮ್ಮಲ್ಲಿ ಶಕ್ತಿ ಇದ್ದರೆ ಮತ್ತು ಅದು ನಮ್ಮ ಅವಶ್ಯಕತೆಗೆ ಮೀರಿ ಇದ್ದರೆ, ಅದನ್ನು ಪರಹಿತಕ್ಕಾಗಿ ಉಪಯೋಗಿಸಬೇಕು. ಆ ಪರಮಾತ್ಮನ ಕೃಪೆಯಿಂದ ನಮಗೆ ಸಿಕ್ಕ ಅಧಿಕ ಶಕ್ತಿಯನ್ನು ನಮಗಿಂತ ಕಡಿವೆÄ ಶಕ್ತಿ ಇರುವವರ ಒಳಿತಿಗಾಗಿ ಉಪಯೋಗಿಸಬೇಕು. ಹಾಗಾದಾಗ ಪರಸ್ಪರ ಪ್ರೀತಿ ವಿಶ್ವಾಸಗಳು ಬೆಳೆದು ಇಡೀ ಸಮಾಜವೇ ವಾಸಿಸಲು ಒಂದು ಸುಂದರ ತಾಣವಾಗುತ್ತದೆ. ಇಂದಿನ ಸ್ವಾರ್ಥಭರಿತ ಸಮಾಜದಲ್ಲಿ ಎಂತೆಂತಹ ವಿದ್ಯಮಾನಗಳು ನಡೆಯುತ್ತಿವೆ ಎಂದು ವಿಷದಪಡಿಸುವ ಅವಶ್ಯಕತೆಯೇ ಇಲ್ಲ. ಅದು ಸರ್ವಗೂ ಗೊತ್ತಿರುವ ವಿಷಯವೇ ಅದು ತಪ್ಪು. ಅದು ಸರಿಯಿಲ್ಲ ಎಂಬ ಅರಿವು ಎಲ್ಲರಿಗೂ ಇದೆ. ವಾಚಕರೆ, ನಾವು ಆ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ನಮ್ಮ ಶಕ್ತಿಯನ್ನು, ಸ್ವರಕ್ಷಣೆಗೆ ಉಪಯೋಗಿಸುವ, ಪರರ ರಕ್ಷಣೆಗೆ ಉಪಯೋಗಿಸುವ. ಆದರೆ ದುರಾಸೆಗೆ, ಸ್ವಾರ್ಥಕ್ಕೆ, ಪರರ ಭಕ್ಷಣೆಗೆ ಉಪಯೋಗಿಸುವ ಬುದ್ಧಿ ನಮಗೆ ಎಂದೂ ಬರದಿರಲಿ ಎಂದು ಪ್ರಾರ್ಥಿಸುತ್ತ, ನಮ್ಮಲ್ಲಿ ಇರಬಹುದಾದ ಕೊರತೆಗಳನ್ನು ನೀಗಿಸಿಕೊಳ್ಳುವ ಪ್ರಯತ್ನವನ್ನು ಮಾಡೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-14 )

ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು | ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು || ಒಂದೇ ಗಾಳಿಯನುಸಿರ್ವ ನರಜಾತಿಯೊಳಗೆಂತು | ಬಂದುದೀ ವೈಷಮ್ಯ? ಮಂಕುತಿಮ್ಮ||

ಪದಗಳ ವಿಸ್ತರಣೆ

ಕಾಣುತೊಂದೆ=ಕಾಣುತ+ಒಂದೆ, ತುಳಿಯುತೊಂದೆ=ತುಳಿಯುತ+ಒಂದೆ, ನೀರ್ಗುಡಿದು=ನೀರು+ಕುಡಿದು, ಗಾಳಿಯನುಸಿರ್ವ=ಗಾಳಿಯನು+ಉಸಿವರ್, ನರಜಾತಿಯೊಳಗೆಂತು=ನರ+ಜಾತಿಯ+ಒಳಗೆ+ಎಂತು,

ಪದಗಳ ತಾತ್ಪರ್ಯ

ಉಣ್ಣು=ತಿನ್ನು, ಉಸಿರ್ವ=ಉಸಿರಾಡುವ, ನರಜಾತಿ=ಮಾನವ ಜನಾಂಗ, ವೈಷಮ್ಯ =ದ್ವೇಷ, ಎಂತು-ಹೇಗೆ.

ಪದ್ಯದ ಪೂರ್ತಿ ವಿವರಣೆ

ಒಂದೇ ಆಕಾಶವ ಕಾಣುತ, ಒಂದೇ ನೆಲವನ್ನು ತುಳಿಯುತ ಒಂದೇ ಧಾನ್ಯವನ್ನು ಉಣ್ಣುತ ಒಂದೇ ಗಾಳಿಯನು ಉಸಿರಾಡುವ ಮಾನವ ಜಾತಿಯ ಒಳಗೆ ಈ ದ್ವೇಷ ಹೇಗೆ ಬಂತು ಎಂದು ತಮಗೆ ತಾವೇ ಪ್ರಶ್ನಿಸುತ್ತ ಈ ವಿಚಾರವನ್ನು ಓದುಗರ ಮುಂದಿಟ್ಟಿದ್ದಾರೆ, ಶ್ರೀ ಗುಂಡಪ್ಪನವರು. ಈ ಜಗತ್ತಿನಲ್ಲಿರುವ ಮಾನವರಿಗಷ್ಟೇ ಏನು, ಸಕಲ ಜೀವಿ ಸಂಕುಲಕ್ಕೂ ತಲೆಯ ಮೇಲಿನ ಆಕಾಶ ಒಂದೇ. ಇರುವ ಭೂಮಿಯೂ ಒಂದೇ. ಎಲ್ಲರೂ ತಿನ್ನುವುದು ಈ ಭೂಮಿಯ ಮೇಲೆ ದೊರೆಯುವ ಆಹಾರವನ್ನೇ, ಕುಡಿಯುವ ನೀರಿಗೂ ಒಂದೇ ಮೂಲ, ಹಾಗಿದ್ದರೂ ಏಕೆ ಈ ವೈಷಮ್ಯ, ಈ ದ್ವೇಷ ಎಂಬ ಪ್ರಶ್ನೆ ಕಾಲಾನುಕಾಲಕ್ಕೆ ಎಲ್ಲ ಚಿಂತಕರ ಮನಗಳಲ್ಲೂ ಸುಳಿದು, ಉತ್ತರ ಕಂಡುಕೊಳ್ಳಲು ಪ್ರಯತ್ನ ನಡೆದಿದೆ. ಆದರೆ ವಿಚಿತ್ರವೇನೆಂದರೆ, ಅನಾದಿ ಕಾಲದಿಂದಲೂ ಮನುಷ್ಯರ ಗುಂಪುಗಳ ನಡುವೆ, ಒಂದು ದೇಶ ಮತ್ತು ಮತ್ತೊಂದು ದೇಶದ ನಡುವೆ, ಅಣ್ಣ- ತಮ್ಮಂದಿರ ನಡುವೆ, ಎರಡು ಊರಿನ ನಡುವೆ, ಹೀಗೆ ಎರಡು ಗುಂಪುಗಳ ನಡುವೆ ಉದ್ಭವವಾಗುವ ದ್ವೇಷ, ದ್ವೇಷದಿಂದ ಆವೇಶ, ಇವೆರಡರ ಫಲವಾಗಿ ಜಗಳ, ಹೊಡೆದಾಟಕ್ಕೆ ಕಾರಣವಾಗುತ್ತದೆ. ಶ್ರೀ ಗುಂಡಪ್ಪನವರು ಉಲ್ಲೇಖಿಸಿರುವಂತೆ ಇವುಗಳ ಮೂಲ, ನೀರು ನೆಲಗಳೇ ಅಲ್ಲವೇ ? ಇವುಗಳಿಗಾಗಿಯೇ ಜಗತ್ತಿನ ಎಲ್ಲ ಹೋರಾಟಗಳೂ ನಡೆದಿವೆ. ಇಂದು ನಮ್ಮ ದೇಶದ ನ್ಯಾಯಾಲಯಗಳಲ್ಲಿ ಹೂಡಲ್ಪಡುವ ಕಟ್ಟಳೆಗಳಲ್ಲಿ 90 ಪ್ರತಿಶತ ಭೂಮಿಗೆ ಸಂಬಂಧಿಸಿದುವೆ ಆಗಿರುತ್ತದೆ. “ಇಷ್ಟಿದ್ದರೆ ಮತ್ತಷ್ಟರಾಸೆ” ನಮ್ಮ ಜೀವಿಕೆಗೆ ಎಷ್ಟು ಬೇಕೋ ಅಷ್ಟನ್ನು ಪಡೆದು ಕಾಯ ಕರ್ಮ ಮಾಡಿ ಜೀವಿಸುವುದು ಸರಿಯಾದ ಕ್ರಮ. ಆದರೆ ಮಾನವನ ಆಸೆಗೆ ಗಗನವೇ ಮಿತಿ. ಹಿಂದೆ ನಾ ಕೇಳಿದ ಕಥೆಯನ್ನು ಮತ್ತೊಮ್ಮೆ ಹೇಳಬೇಕು. ಒಬ್ಬನಿಗೆ ಬಹಳ ಬಹಳ ಭೂಮಿ ಬೇಕೆನ್ನಿಸಿತಂತೆ. ಅವನ ತಪಸ್ಸಿಗೆ ಮೆಚ್ಚಿ ದೇವರು ಏನು ವರಬೇಕೆಂದಾಗ, “ನನಗೆ ಹೆಚ್ಚು ಭೂಮಿ ಬೇಕು” ಎಂದನಂತೆ. “ನೋಡು ನೀ ನಿಂತಿರುವ ಜಾಗದಿಂದ ಇಂದು ಸಂಜೆಯವರೆಗೆ ಎಷ್ಟು ದೂರ ಓಡಿ, ಎಷ್ಟು ಭೂಮಿಯನ್ನು ಕ್ರಮಿಸಿ ಮತ್ತೆ ಸೂರ್ಯಾಸ್ತಮಾನದ ಲೋಕಜೀವನ ಮಥನದ ವೇಳೆಗೆ ನೀ ಈಗ ನಿಂತಿರುವ ಜಾಗಕ್ಕೆ ಬಂದು ಸೇರಿದರೆ, ನೀ ಎಷ್ಟು ಭೂಮಿಯನ್ನು ಉಪಕ್ರಮಿಸಿರುತ್ತೀಯೋ ಅದನ್ನೆಲ್ಲ ನಿನಗೆ ಕೊಡುತ್ತೇನೆ” ಎಂದನಂತೆ ಆ ದೇವರು. ಮಾನವರ ಬಲಹೀನತೆ ಆ ದೇವರಿಗೇ ಗೊತ್ತಿಲ್ಲವೇ. ಅದನ್ನು ಕೊಟ್ಟದ್ದೂ ಅವನೇ ತಾನೇ? ಸರಿ ಇವ ಓಡಿದ, ಓಡಿದ. ಓಡಿ ಓಡಿ ಇನ್ನೂ ಸ್ವಲ್ಪ ಮುಂದೆ ಹೋಗುವ, ಇನ್ನೂ ಸ್ವಲ್ಪ ಮುಂದೆ ಹೋಗುವ, ಎಂದು ಓಡಿ ಓಡಿ ಮಧ್ಯಾಹ್ನದ ತನಕ ಓಡಿದ. “ಅಯ್ಯೋ ಹಿಂತಿರುಗಬೇಕಲ್ಲ ಎಂದು ಯೋಚನೆ ಮಾಡಿ ಮತ್ತೆ ಸ್ವಸ್ಥಾನ ಸೇರಲು ಮೊದಲಿಟ್ಟ. ಆರಂಭದ ಹುಮ್ಮಸ್ಸು ಮತ್ತು ಶಕ್ತಿ ಕುಂದಿತ್ತು. ಬರುತ್ತಾ ಬರುತ್ತಾ ಬಹಳ ಸುಸ್ತಾಗಿ ಕುಸಿದ. ಇನ್ನೇನು ತಾ ಶುರುಮಾಡಿದ ಸ್ಥಳ “ಅಗೋ, ಅಲ್ಲಿ ಕಾಣುತ್ತಿದೆ” ಎನ್ನುವಾಗ ಆ ಸೂರ್ಯ ಮುಳುಗಿಯೇ ಬಿಟ್ಟ. ಆ ದೇವರೂ ಮಾಯವಾಗಿಬಿಟ್ಟ. ಇವನಿಗೆ ಉಳಿದಿದ್ದು ಏನು ಬರೀ ಶ್ರಮ. ಪಶ್ಚಾತ್ತಾಪ. ಹೀಗೆ ನಾವು ಮಾಡುವ ಕೆಲಸ, ವಸ್ತು, ವ್ಯಕ್ತಿ, ವಿಷಯಗಳನ್ನು ಬಯಸುವಾಗ, ನಮ್ಮ ಮಿತಿಗಳನ್ನು ಅರಿತುಕೊಂಡರೆ ಸುಖ ಇಲ್ಲದಿದ್ದರೆ? ಇಲ್ಲದಿದ್ದರೆ, ನಮಗೆ ಸಿಗಲಿಲ್ಲವೆಂದು ಕೋಪ, ನಮಗಿಂತ ಪರರಿಗೆ ಅಧಿಕವಾಗಿ ಸಿಕ್ಕಿದೆ ಎಂದು ಅಸೂಯೆ, ಸಿಕ್ಕರೆ ಮತ್ತಷ್ಟರ ಲೋಭ, ಅಧಿಕವಾಗಿ ಸಿಕ್ಕರೆ ಮದ, ಸಿಕ್ಕದ್ದು ನನ್ನಲ್ಲೇ ಇರಬೇಕೆನ್ನುವ ಮೋಹ, ಹೀಗೆ ಎಲ್ಲವು ಅಂಟಿಕೊಳ್ಳುತ್ತದೆ. ಜೀವನವೇ ನರಕವಾಗುತ್ತದೆ. ಒಂದೇ ಭೂಮಿ ಒಂದೇ ಆಕಾಶ. ಈ ಭೂಮ್ಯಾಕಾಶಗಳ ಸಂಬಂಧವನ್ನು ಎಲ್ಲರೂ ಒಂದೇ ರೀತಿಯಲ್ಲಿ ಹೊಂದಿರುವಾಗ ಏಕೆ ಈ ವೈಷಮ್ಯವೆಂದರೆ, ಜಾತಿ, ಮತ, ಭಾಷೆ, ಪ್ರಾಂತ, ದೇಶಗಳ ಎಲ್ಲೆಗಳನ್ನು ಹಾಕಿಕೊಂಡು ಮಾನವರು ಅದನ್ನು ದಕ್ಕಿಸಿಕೊಳ್ಳಲು, ಕಾಪಾಡಲು ಮತ್ತು ತಮ್ಮ ಆಧಿಕ್ಯವನ್ನು ಸಾರಲು, ಸ್ಥಿರಪಡಿಸಲು ಮಾಡುವ ನಿರಂತರ ಹೋರಾಟದ ಫಲವೇ ಈ ದ್ವೇಷಾಸೂಯೆಗಳ ವಿಷ ವೃತ್ತ. ತೃಪ್ತಿಗೆ ಒಂದು ಎಲ್ಲೆ ಅಥವಾ ಮಿತಿ ಹಾಕಿಕೊಂಡರೆ ಎಲ್ಲರಿಗೂ ಸುಖ, ಇಲ್ಲದಿದ್ದರೆ ಎಲ್ಲರಿಗೂ ಹಿಂಸೆ ಮತ್ತು ಈ ಬಾಳೇ ನರಕಸದೃಶ. ಈ ಜಗತ್ತಿನ ಮಾನವರೆಲ್ಲ ಒಂದೇ. ಈ ಭೂಮಿ, ಆಕಾಶ, ನೀರು ಎಲ್ಲವನ್ನೂ ಪರಮಾತ್ಮ ಎಲ್ಲರ ಉಪಯೋಗಕ್ಕಾಗಿ ನಿರ್ಮಿಸಿದ್ದಾನೆ. ಇದು ಯಾವುದೂ ಶಾಶ್ವತವಾಗಿ ನಮ್ಮ ಸ್ವಂತವಾಗಲು ಸಾಧ್ಯವೇ ಇಲ್ಲ. ಏಕೆಂದರೆ ಈ ಭೂಮಿಯೇ ನಮಗೆ ಸ್ವಂತ, ನಿರಂತರ ಮತ್ತು ಶಾಶ್ವತವಲ್ಲದಿದ್ದ ಮೇಲೆ, ಈ ಭೂಮಿಯ ಮೇಲಿನ ವಸ್ತುಗಳು ಹೇಗೆ ಸ್ವಂತವಾಗಲು ಸಾಧ್ಯ. ಅಂತಕನೊಬ್ಬ ಬಾಳಿನಂಚಲ್ಲಿ ಕಾದಿಲ್ಲವೇ, ಇದಕ್ಕೆಲ್ಲ ಒಂದು ಅಂತ್ಯ ಹಾಡಲು. ಇಂತಹ ಪ್ರವೃತ್ತಿಯಿಂದ, ನಿರಂತರ ದ್ವೇಷಾಸೂಯೆಗಳ ವಿಷ ವೃತ್ತದಲ್ಲಿ ನಾವು ಬೀಳುವುದು ಬೇಡ. ಹಾಗೆಬಿದ್ದವರನ್ನು ಬಿಡಿಸುವ ಪ್ರಯತ್ನ ಮಾಡುವ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-15 )

ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿದೆ ಮಾಸಿ | ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ || ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ | ತಳಮಳಿಸುತಿದೆ ಲೋಕ ಮಂಕುತಿಮ್ಮ ||

ಪದಗಳ ವಿಸ್ತರಣೆ

ಭಕ್ತಿಶ್ರದ್ಧೆಯಳಿಸಿಹೋಗಿದೆ=ಭಕ್ತಿ+ಶ್ರದ್ಧೆಯು+ಅಳಿಸಿಹೋಗಿದೆ, ಸುಳಿದಿಲ್ಲವಾವ=ಸುಳಿದಿಲ್ಲವು+ಆವ,

ಪದಗಳ ತಾತ್ಪರ್ಯ

ಸುಳಿದಿಲ್ಲವಾವ=ಸುಳಿದಿಲ್ಲವು+ಆವ,

ಪದ್ಯದ ಪೂರ್ತಿ ವಿವರಣೆ

ಈಗ್ಗೆ ಎಪ್ಪತ್ತು ವರ್ಷಗಳ ಕೆಳಗೇ ಗುಂಡಪ್ಪನವರಿಗೆ ಹೀಗೆ ಅನ್ನಿಸಿದ್ದರೆ, ಇಂದು ಅವರು ಏನನ್ನುತ್ತಿದ್ದರೋ ಏನೋ! ಪುರಾತನ ಕಾಲದಿಂದಲೂ ಅನೂಚಾನವಾಗಿ ಜನಗಳಲ್ಲಿ ದೇವರಲ್ಲಿ ಇದ್ದ ಭಕ್ತಿ ಮತ್ತು ಸಂಪ್ರದಾಯಗಳಲ್ಲಿ ಇದ್ದ ಶ್ರದ್ಧೆ ಈಗ ಅಳಿಸಿ ಹೋಗಿದೆ. ಇಲ್ಲಿ ಸಂಪ್ರದಾಯ ಎಂದರೆ ಹಿಂದಿನಿಂದ ಬಂದಿರುವ ನಡವಳಿಕೆ ಎಂದಷ್ಟೆ ಅರ್ಥ. ಜನರಲ್ಲಿ ಮತ್ತೆ ಈ ಭಕ್ತಿ ಮತ್ತು ಶ್ರದ್ಧೆಗಳನ್ನು ತರಲು ಯಾವ ಹೊಸ ಸಿದ್ಧಾಂತಗಳೂ ಪ್ರತಿಪಾದಿಸಲ್ಪಟ್ಟು ಪ್ರಚಾರಕ್ಕೆ ಬಂದಿಲ್ಲ. ಹಾಗಾಗಿ ಜನರೆಲ್ಲರೂ ಮೊದಲಿನಿಂದ ಬಂದದನ್ನು ಕಳೆದುಕೊಂಡು ಹೊಸದಿಲ್ಲದೆ ಒಂದು ಅತಂತ್ರ ಸ್ಥಿತಿಯಲ್ಲಿದ್ದಾರೆ. ಯಾರ ಸಹಾಯವು ಇಲ್ಲದೆ ಸುಲಭವಾಗಿ ಮತ್ತು ಚೆನ್ನಾಗಿ ಓಡಾಡಲು ಅಭ್ಯಾಸವಾಗಿರುವ ಮನೆ ಕುಸಿದು ಹೋದರೆ, ಆ ಮನೆಯಲ್ಲಿ ವಾಸಿಸುತ್ತಿರುವ ಕುಂಟನಿಗೋ ಕುರುಡನಿಗೋ, ಪಾಪ ತಳಮಳಿಸುವ ಮತ್ತು ಪರದಾಡುವಂತೆ ಆಗುತ್ತದಲ್ಲವೇ? ಹಾಗೆ ಆಗಿದೆ ಇಂದಿನ ಲೋಕದ ಪರಿಸ್ಥಿತಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ಇಲ್ಲಿ ಭಕ್ತಿ ಎಂದರೆ ಪರಮಾತ್ಮನ ಮೇಲಿರುವ ಭಕ್ತಿ ಎಂದೇ ತಿಳಿಯಬೇಕಿಲ್ಲ. ಆದರೆ ನಾವು ಮಾಡುವ ಎಲ್ಲ ಕೆಲಸಗಳೂ ನಮ್ಮೊಳಗಿರುವ ಪರಮಾತ್ಮ ಸ್ವರೂಪೀ ಜೀವಾತ್ಮನು ತೃಪ್ತನಾಗುವುದಕ್ಕೆ ಅಂದರೆ ಆತ್ಮ ತೃಪ್ತಿಗೆ, ಎಂದುಕೊಂಡಾಗ, ಆ ಕೆಲಸದಲ್ಲಿ ಭಕ್ತಿ. ಆ ಭಕ್ತಿ ಇದ್ದಾಗ, ಮಾಡುವ ಕೆಲಸದಲ್ಲಿ ಶ್ರದ್ಧೆ ಬರುತ್ತದೆ. ಹಾಗೆ ಭಕ್ತಿ ಮತ್ತು ಶ್ರದ್ಧೆ ಎರಡೂ ಇದ್ದಾಗ, ಮಾಡುವ ಕೆಲಸ ಸಮರ್ಪಕವಾಗಿದ್ದು ಅದರ ಫಲವು ಒಳ್ಳೆಯದಾಗಿರುತ್ತದೆ. “ಹೇಗೆ ಮನವೋ ಹಾಗೆ ಭಾವ. ಹೇಗೆ ಭಾವವೋ ಹಾಗೆ ಕಾರ್ಯ. ಹೇಗೆ ಕಾರ್ಯವೋ ಹಾಗೆ ಫಲ”. ಹಾಗಾಗಿ ಮನಸ್ಸಿನಲ್ಲಿ ಭಕ್ತಿ ಮತ್ತು ಶ್ರದ್ಧೆಗಳು ಬಹಳ ಮುಖ್ಯ. ಆದರೆ ಅದು ಈಗ ಮಾಸಿ ಹೋಗಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಹೇಗೆ ಮಾಸಿ ಹೋಯಿತು? ಹಲವಾರು ಕಾರಣಗಳು. ಕಾಲ ಬದಲಾದಂತೆ ಎಲ್ಲವು ಬದಲಾಗುತ್ತದೆ. ಆದರೆ ನಕಾರಾತ್ಮಕ ಬದಲಾವಣೆಯಾದರೆ ಅದು ಸರಿಯಲ್ಲ. ಆದ್ದರಿಂದಲೇ ಮಾಸಿ ಹೋದದ್ದು. ಹಿರಿಯರು ಮನೆಗಳಲ್ಲಿ ಕಿರಿಯರಿಗೆ ಮಾರ್ಗ ದರ್ಶನ ಮಾಡಬೇಕು. ಅವರ ಅನುಭವ ಮತ್ತು ಜ್ಞಾನದ ಮೂಸೆಯಿಂದ ಕಿರಿಯರಿಗೆ ಜ್ಞಾನವನ್ನು ಎರಕ ಹೊಯ್ದಂಗೆ ಎರೆಯಬೇಕು. ಆದರೆ ನಮ್ಮಲ್ಲಿ ಕಾಲಕ್ರಮೇಣ ‘ಏನು' ಮಾಡಬೇಕು ಎನ್ನುವುದನ್ನು ಮಾತ್ರ ಹೇಳುತ್ತಿದ್ದರು. ‘ಹೇಗೆ' ಮಾಡಬೇಕು ಎನ್ನುವುದನ್ನೂ ಹೇಳುತ್ತಿದ್ದರು, ಆದರೆ ‘ಏಕೆ' ಮಾಡಬೇಕು ಎಂದು ಕೇಳಿದರೆ ಅದಕ್ಕೆ “ಬಂಡಾಯ”ವೆನ್ನುತ್ತಿದ್ದರು. “ಹೇಳಿದಷ್ಟು ಮಾಡೋ ತಲೆಹರಟೆ” ಎನ್ನುತ್ತಿದ್ದರು. ಒಂದು ಅವರಿಗೆ ಹೇಳಲು ಗೊತ್ತಿರಲಿಲ್ಲ ಅಥವಾ ಹೇಳಬೇಕಾದ ವಿಷಯವೇ ಗೊತ್ತಿರಲಿಲ್ಲ ಅಥವಾ ಅವರಿಗೆ ಗೊತ್ತಿದ್ದ ವಿಷಯದ ಸಂಪೂರ್ಣ ಜ್ಞಾನವಿರಲಿಲ್ಲ. ಒಂದು ಕೆಲಸ, ಆ ಕೆಲಸ ಮಾಡುವ ರೀತಿ ಮತ್ತು ಅದರ ಅಂತರ್ಯದ ಉದ್ದೇಶ ಇವುಗಳನ್ನು ಅರಿಯುವುದು ಬಹಳ ಮುಖ್ಯ. ಇದು ಎಲ್ಲ ರೀತಿಯ ಕೆಲಸಗಳಿಗೂ ಅನ್ವಯವಾಗುತ್ತದೆ. ಅದನ್ನು ವಿವರಿಸದೆ ಕೆಲಸವನ್ನಷ್ಟೇ ಮಾತ್ರ ವಿವರಿಸಿ ಮಾಡಲು ಬಿಟ್ಟಾಗ, ಆ ಕೆಲಸದಲ್ಲಿ ಅವರಿಗೆ ತಿರಸ್ಕಾರ ಹುಟ್ಟಿ ಮಾಡುವ ಕೆಲಸದಲ್ಲಿ ಶ್ರದ್ಧೆ ಇರುವುದಿಲ್ಲ. ಶ್ರದ್ಧೆ ಇಲ್ಲದಿದ್ದರೆ ಭಕ್ತಿಯೂ ಹುಟ್ಟುವುದಿಲ್ಲ. ಹಿಂದಿನವರು ಮಾಡಿದ ತಪ್ಪು ಅದೇ. ಅಂತರ್ಯದ ಭಾವ ಹೇಳಿಕೊಡುವುದು ಅಷ್ಟು ಸುಲಭವಲ್ಲ. ಮೊದಲು ಹೇಳಿಕೊಡುವವನಿಗೆ, ಆ ಭಾವಸಿದ್ಧಿಯಾಗಿರಬೇಕು. ಹೇಳಿಕೊಡುವ ಮತ್ತು ಎರಕ ಹೊಯ್ಯುವ ಕಲೆ ಸಿದ್ಧಿಯಾಗಿರಬೇಕು ಮತ್ತು ಹೊಯ್ಯಬೇಕಾದ ಪಾತ್ರದ “ಪಾತ್ರತೆಯ” ಮತ್ತು “ಯೋಗ್ಯತೆಯ” ಅರಿವು ಅವನಿಗೆ ಇರಬೇಕು. (transmitter ಮತ್ತು receiver ಎರಡೂ ಸರಿ ಇರಬೇಕು) ಇಬ್ಬರೂ ಒಬ್ಬರಿಗೊಬ್ಬರು ಸರಿ ಹೋದರೆ ಆಗ ಶುದ್ಧ ಸತ್ವಮನದೊಳಕ್ಕೆ ಇಳಿದು, ಭಕ್ತಿ ಬರುತ್ತದೆ ಮತ್ತು ಶ್ರದ್ಧೆ ಬೆಳೆಯುತ್ತದೆ. ಅದು ನಮ್ಮ ಹಳೆಯ ಗುರುಕುಲ ಪದ್ಧತಿಯಲ್ಲಿ ಕಾಣಸಿಗುತ್ತಿತ್ತು. ಒಟ್ಟಾರೆ ಹೇಳಬೇಕೆಂದರೆ ಇಂದು ಹಾಗೆ ಹೇಳಿಕೊಡುವವರಾಗಲೀ, ಕಲಿಯುವವರಾಗಲೀ ಇಲ್ಲ. ಇದನ್ನೇ ಗುಂಡಪ್ಪನವರು “ಮಾಸಿ ಹೋಗಿದೆ” ಎನ್ನುತ್ತಾರೆ. ಇದಕ್ಕೆ ಪರಿಹಾರೆವೇನೆಂದು ಎಲ್ಲರೂ ಯೋಚಿಸಬೇಕು. ಹಾಗೆ ಮಾಸಿಹೋದದ್ದರಿಂದ ಏನಾಗಿದೆ ಎಂದರೆ, ಮೊದಲೇ ನಾವು ಬಲಹೀನರು. ತತ್ವದ ಬಲವಿಲ್ಲದೆ ಸತ್ವಹೀನರು. ಸತ್ಯದ ಬಲವಿಲ್ಲದೆ ಸತ್ವಹೀನರು. ಯಾವುದೋ ಒಂದನ್ನು ಹಿಡಿದುಕೊಂಡು ಹೇಗೋ ಬದುಕುತ್ತಿದ್ದೆವು. ಈಗ ನಾವು ಹಿಡಿದಂತಾ ವಸ್ತುವೇ ಬಲಹೀನವಾಗಿ ನಮ್ಮ ಅಸ್ತಿತ್ವವೇ ಅಲುಗಾಡುತ್ತಿದೆ. ಹಿಡಿದ ಕೊಂಬೆಮುರಿದರೆ, ಹಿಡಿಯಲು ಮತ್ತೊಂದು ಕೊಂಬೆ ಇದ್ದರೆ ಹಿಡಿದು ತೂಗಾಡಬಹುದು. ಇಲ್ಲದಿದ್ದರೆ ಬೀಳುವುದೇ ದಾರಿ. ಚೆನ್ನಾಗಿ ಓಡಾಡಲು ಅಭ್ಯಾಸವಾಗಿರುವ ಮನೆ ಕುಸಿದು ಹೋದರೆ, ಆ ಮನೆಯಲ್ಲಿ ವಾಸಿಸುವ ಕುಂಟನಿಗೋ ಕುರುಡನಿಗೋ, ತೊಂದರೆಯಾಗಿ ಅವನು ತಡಬಡಾಯಿಸುವಂತೆ ನಾವು ಸಹ ನಮ್ಮ ಭಕ್ತಿಶ್ರದ್ಧೆಗಳನ್ನು ಕಳೆದು ಕೊಂಡು ಅತಂತ್ರದ ಸ್ಥಿತಿಯಲ್ಲಿದ್ದೇವೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು. ಹೋಗಲಿ ಹಳೆಯದನ್ನೇನೋ ಕಳೆದುಕೊಂಡಿದ್ದೇವೆ, ಹೊಸದೇನಾದರೂ ಇದೆಯೋ, ಅದನ್ನು ಹಿಡಿದುಕೊಳ್ಳೋಣವೆಂದರೆ ಅದೂ ಇಲ್ಲ. ನಮ್ಮ ದೇಶದಲ್ಲೇ ಅಲ್ಲ ಇಡೀ ಜಗತ್ತಿನ ಪರಿಸ್ಥಿತಿಯೇ ಹೀಗಿದೆ. ನಮ್ಮ ಭಾರತೀಯ ಸಮಾಜದಲ್ಲಿ ಬೇರೆ ಯಾವ ದೇಶದಲ್ಲೂ ಸಿಗದಂತ ಅತ್ಯಮೂಲ್ಯವಾದ ಸಂಸ್ಕೃತಿ,ಪರಂಪರೆ, ಧರ್ಮಬೋಧನೆ, ಎಲ್ಲವು ಇದೆ. ಅದನ್ನು ಪುನರುಜ್ಜೀವನಗೊಳಿಸಿ ಮುಂದಿನ ಪೀಳಿಗೆಗೆ ಎರಕಹೊಯ್ಯಬೇಕಾದ ಉತ್ತರದಾಯತ್ವ ನಮ್ಮೆರ ಮೇಲಿದೆ. ಕನ್ನಡಿಯ ಮೇಲಿನ ಧೂಳನ್ನು ಒರೆಸಿ, ಶುದ್ಧಿಗೊಳಿಸಿ ಪ್ರತಿಬಿಂಬ ನಿಚ್ಚಳವಾಗಿ ಕಾಣುವಂತೆ ಮಾಡಬೇಕಾಗಿದೆ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-16 )

ಇಳೆಯ ಬಿಟ್ಟಿನ್ನುಮೆತ್ತಲುಮೈದದ ಪ್ರೇತ | ವಲೆವಂತೆ ಲೋಕ ತಲ್ಲಣಿಸಿಹುದಿಂದು || ಹಳೆಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ | ತಳಮಳಕೆ ಕಡೆಯೆಂದೋ? -ಮಂಕು ತಿಮ್ಮ ||

ಪದಗಳ ವಿಸ್ತರಣೆ

ಇಳೆಯ ಬಿಟ್ಟಿನ್ನುಮೆತ್ತಲುಮೈದದ=ಇಳೆಯ+ಬಿಟ್ಟು+ಇನ್ನು+ಎತ್ತಲುಂ+ಐದದ, ಪ್ರೇತವಲೆವಂತೆ=ಪ್ರೇತವು+ಅಲೆವಂತೆ, ಕಡೆಯಂದು=ಕಡೆ+ಎಂದು, ಇಳೆ=ಭೂಮಿ,

ಪದಗಳ ತಾತ್ಪರ್ಯ

ಎತ್ತಲುಂ=ಯಾವಕಡೆಗೂ, ಐದದ=ಸೇರದ, ಪ್ರೇತ=ಮರಣಾನಂತರದ ಪ್ರಯಾಣದಲ್ಲಿ ಇರುವ ಆತ್ಮದ ಸ್ಥಿತಿ. ತಲ್ಲಣಿಸಿಹುದು=ಒದ್ದಾಡುತ್ತಿದೆ.

ಪದ್ಯದ ಪೂರ್ತಿ ವಿವರಣೆ

ಈ ಭೂಮಿಯನ್ನು ಬಿಟ್ಟು ಎತ್ತಲೂ ಸೇರದ ಪ್ರೇತದಂತೆ ಲೋಕ ತಲ್ಲಣಿಸುತ್ತಿದೆ. ಹಳೆ ಧರ್ಮ ಸತ್ತಿದೆ. ಹೊಸಧರ್ಮ ಹುಟ್ಟಿಲ್ಲ ತಳಮಳಕೆ ‘ಕಡೆ’ ಎಂದು? ಎಂದು ತಮ್ಮನ್ನು ತಾವೇ ಪ್ರಶ್ನಿಸುತ್ತಾ ಅದೇ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ. ಭಾರತ ದೇಶವು ಅನ್ಯ ದೇಶದವರ ಆಕ್ರಮಣಕ್ಕೆ ಬಲಿಯಾಗಿ, ಹಾಗೆ ಬಂದ ಆಕ್ರಮಣಕಾರರು ಈ ದೇಶದಲ್ಲೇ ನೆಲೆಯೂರಿ ನಿಂತಾಗ, ಅವರ ನಂಬಿಕೆಗಳು, ವಿಶ್ವಾಸಗಳು, ಆಚಾರ-ವಿಚಾರಗಳು, ಉಡುಗೆ-ತೊಡಿಗೆಗಳಶೈಲಿ ಹೀಗೆ ಎಲ್ಲವು ನಮ್ಮ ದೇಶದ ಸಂಸ್ಕೃತಿಯ ಮೇಲೆ ತನ್ನ ಪರಿಣಾಮವನ್ನು ಬೀರುತ್ತ, ಕಾಲಕ್ರಮದಲ್ಲಿ ಇಲ್ಲಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ನೆಲೆ ನಿಂತಿತು. ಆಗ ಅದರದು ಬೇರೆಯೇ ರೂಪ. ಆ ರೂಪ ಹಳೆಯದನ್ನು ಬಿಡಲಾಗದೆ, ಹೊಸದನ್ನು ಸಂಪೂರ್ಣ ಅಳವಡಿಸಿಕೊಳ್ಳಲಾಗದೆ ಒಂದು ಹೊಸರೂಪವನ್ನೇ ತಾಳಿತು. ಆದರೆ ಆ ಹೊಸರೂಪದಲ್ಲೂ ಒಂದು ತಳಮಳ, ಒಂದು ಚಡಪಡಿಕೆ ಇದೆ. ಅತ್ತ ಹಳೆಯದನ್ನು ಬಿಟ್ಟರೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭಯ, ಇತ್ತ ಹೊಸದರ ಹೊಸತನದ ಮೋಜು. ಇವೆರಡರ ರೂಪವೇ ಒಂದು ಎಡಬಿಡಂಗಿ ಸ್ವರೂಪ. ಇಂದು ನಾವು ಇರುವುದೇ ಅಂತಹ ಸ್ಥಿತಿಯಲ್ಲಿ. ಇದನ್ನು ಶ್ರೀಗುಂಡಪ್ಪನವರು “ಈ ಭೂಮಿಯನ್ನು ಬಿಟ್ಟು ಎತ್ತಲೂ ಸೇರದ ಪ್ರೇತದಂತೆ” ಎಂದು ಹೇಳುತ್ತಾರೆ. ಇದು ಒಂದು ಉಪಮೆ ಅಷ್ಟೇ. ಸನಾತನದಲ್ಲಿ ಆತ್ಮಗಳ ಬಗ್ಗೆ ಅಂತಹ ನಂಬಿಕೆ ಉಂಟು. ಅನ್ಯಧರ್ಮೀಯರಲ್ಲೂ ಬೇರೆ ಬೇರೆ ರೂಪದಲ್ಲಿ ಆ ನಂಬಿಕೆ ಉಂಟು. ಆದರೆ ತಮ್ಮನ್ನು ತಾವು ಪ್ರಗತಿಪರರು ಅಥವಾ ಬುದ್ಧಿಜೀವಿಗಳು ಎಂದು ಅಂದುಕೊಂಡಿರುವ ಕೆಲವರು, ಇದರ ಸೂಕ್ತತೆಯನ್ನು ಮತ್ತು ಪ್ರಸ್ತುತತೆಯನ್ನು ಪ್ರಶ್ನಿಸುತ್ತಾರೆ. ಹಾಗೆಪ್ರಶ್ನೆ ಮಾಡುವ, ಅಲ್ಲಗಳೆಯುವ ಮತ್ತು ಟೀಕಿಸುವ ಹಕ್ಕೂ ಅವರಿಗೆ ಉಂಟು. ಹಾಗೆ ಹಳೆಯದನ್ನು ಬಿಟ್ಟೂ ಬಿಡದ ಹಾಗೆ, ಹೊಸದನ್ನು ಹಿಡಿದೂ ಹಿಡಿಯದ ಹಾಗೆ ಇಂದಿನ ಸಮಾಜದಲ್ಲಿ ಎಲ್ಲರೂ ಇದ್ದಾರೆ. ಅದಕ್ಕೆ ಹಲವಾರು ಕಾರಣಗಳು. ವಿದ್ಯಾಭ್ಯಾಸದ ಕ್ರಮ ಬದಲಾವಣೆ, ಹೊಸ ಹೊಸ ಸಾಧನಗಳು ಮತ್ತು ಮಾಹಿತಿ ತಂತ್ರಜ್ಞಾನದ ಸ್ಫೋಟ, ಜಾಗತೀಕರಣ ಹೀಗೆ ಹತ್ತು ಹಲವಾರು ಕಾರಣಗಳು. ಹಿಂದೆ ಇದ್ದದ್ದು ಇಂದು ಇಲ್ಲ. ಇಂದು ಇರುವುದು ಮುಂದಿರುವುದಿಲ್ಲ. ಅಂತಹ ಸ್ಥಿತಿಯಲ್ಲಿ ಜನರು ಯಾವುದೇ ಒಂದು ನಿರ್ಧಿಷ್ಟತೆಯಲ್ಲಿ ಇರದೇ ಒಂದು ಅತಂತ್ರದ ಸ್ಥಿತಿಯಲ್ಲಿದ್ದಾರೆ ಎಂದು ಮಾನ್ಯ ಗುಂಡಪ್ಪನವರು ಹೇಳುತ್ತಾರೆ. ಭಾಷೆ, ಜೀವನದ ಶೈಲಿ, ಉದ್ಯೋಗ, ಸಂಪಾದನೆ ಎಲ್ಲವು ಇಂದಿನ ಜನಾಂಗದ ಮೇಲೆ ಪರಿಣಾಮ ಬೀರಿದೆ. ಇಂದು ನಾವು ಹೊಸದಾಗಿ ಕಾಣುತ್ತಿರುವುದು ಹೊಸ ವಿದ್ಯಮಾನವೇನಲ್ಲ. ನಮ್ಮ ಭಾರತೀಯ ಇತಿಹಾಸದಲ್ಲೇ ಬೇರೆ ಬೇರೆ ಸಮಯಗಳಲ್ಲಿ ಇಂತಹ ಅತಂತ್ರ ಸ್ಥಿತಿಗಳನ್ನು ನೋಡಬಹುದು. ಅಂದಿನ ಭೌಗೋಳಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಸ್ಥಿತಿಗಳು ಅಂದಿಗೆ, ಇಂದಿನ ಭೌಗೋಳಿಕ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಸ್ಥಿತಿಗಳು ಇಂದಿನ ಸ್ಥಿತಿಗೆ ಕಾರಣವಾಗುತ್ತದೆ. ಚಾಣಕ್ಯನಂತಹ ಮುತ್ಸದ್ದಿಗಳು ಬಂದಾಗ ಏನೋ ಒಂದು ರೀತಿಯ ಕಲರವ ಉಂಟಾಗಿ ಸ್ವಲ್ಪ ಬದಲಾವಣೆಗಳನ್ನು ಕಾಣಬಹುದು. ಆದರೆ ಸ್ವಾಭಾವಿಕವಾಗಿ ಮಾನ್ಯ ಡಿ.ವಿ.ಜಿ.ಯವರು ಹೇಳಿದಂತೆ ಮತ್ತೆ ಅದೇ ಅತಂತ್ರ ಸ್ಥಿತಿಗೆ ಒಗ್ಗಿ ಹೋಗುತ್ತದೆ ಇಡೀ ಸಮಾಜ. ಆದರೆ ಇಂತಹ ಪ್ರತಿಪಾದನೆಗಳಿಗೆ, ಕೆಲವು ವ್ಯಕ್ತಿಗಳು ಭಿನ್ನವಾಗಿರಬಹುದು. ಶುದ್ಧ ಸತ್ವದಲ್ಲಿ ಯಾವುದು ಪುರಾತನವೋ ಯಾವುದು ಸನಾತನವೋ ಅದನ್ನು ಪಾಲಿಸುತ್ತಿರಬಹುದು. ಆದರೆ ಒಟ್ಟಾರೆ ಸಮಾಜವನ್ನು ನೋಡಿದಾಗ ಎಲ್ಲೋ ಏನೋ ಸರಿಯಿಲ್ಲ ಎನ್ನುವ ಭಾವನೆ ಬರುತ್ತದೆ. ಅದನ್ನೇ ಡಿ.ವಿ.ಜಿ.ಯವರು “ಲೋಕ ತಲ್ಲಣಿಸಿಹುದಿಂದು” ಎಂದರು. ಆದರೆ ನಾವು ನೋಡಬೇಕಾದದ್ದು ಏನೆಂದರೆ, ಇದು ಸರಿಯೇ ಎಂದು. ಬದಲಾವಣೆಯೇ ಪ್ರಪಂಚದಮೂಲ ಗುಣವಾದ್ದರಿಂದ ಇದು ಸರಿ. ಅಸ್ತಿತ್ವವನ್ನು ಕಳೆದುಕೊಳ್ಳುವುದರಿಂದ ಇದು ಸರಿಯಿಲ್ಲ. ಹಾಗಾಗಿ ಏನು ಮಾಡಬೇಕು. ಡಿ.ವಿ.ಜಿ.ಯವರೆ ಮುಂದಿನ ಒಂದು ಮುಕ್ತಕದಲ್ಲಿ ಹೇಳುತ್ತಾರೆ “ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು ಹೊಸ ಯುಕ್ತಿ ಹಳೆ ತತ್ವ…...” ಎಂದು, ಅಂದರೆ ನೈಸರ್ಗಿಕವಾದ ಮತ್ತು ಸ್ವಾಭಾವಿಕವಾದ ಬದಲಾವಣೆ ಬೇಕು ಮತ್ತು ಆಗಬೇಕು. ಹಳೆಯ ಮತ್ತು ಕಾಲದಲ್ಲಿ ಪರಿಕಿಸಿ ನಿರೂಪಿಸಲ್ಪಟ್ಟು ಸರ್ವಕಾಲಕ್ಕೂ ಅನ್ವಯವಾಗುವಂತಾ ಸಿದ್ಧಾಂತಗಳ ಆಧಾರದ ಮೇಲೆ ಹೊಸತು ಪಲ್ಲವಿಸ ಬೇಕು. ಆಗ ಹಳತು ಆಂತರ್ಯದಲ್ಲಿ ಉಳಿದು ಹೊಸತು ಪಲ್ಲವಿಸಿ ಬೆಳೆದು ಹಳೆಯದಕ್ಕೆ ಹೊಳಪಿತ್ತಂತೆ ಆಗುತ್ತದೆ. ಹೊಸತು, ಆ ಹೊಳಪಿನ ಬೆಳಕಲ್ಲಿ ಸುಂದರವಾಗಿ ಕಾಣುತ್ತದೆ. ಆಗ ಎರಡೂ ಸಮನ್ವಯಗೊಂಡು ಒಂದು ಹೊಸ ನೆಲೆ ಸಿಕ್ಕಂತಾಗುತ್ತದೆ. ಆದರೆ ವಿಷಾದವೇನೆಂದರೆ ಇಂದು ಯಾರಿಗೂ ಹಳೆಯದು ಬೇಡ. ಅದರ ಅರ್ಥ ಬೇಡ. ಅದರ ಸತ್ವ ಬೇಡ. ಅದನ್ನು ಗೊಡ್ಡು ಸಂಪ್ರದಾಯ ಎಂದು ಮೂದಲಿಸುವ, ಜರಿಯುವ, ನೇಪಥ್ಯಕ್ಕೆ ಸರಿಸುವ ಇಂದಿನ ಜನಾಂಗವು ಸತ್ಯವಾಗಲೂ ಗುಂಡಪ್ಪನವರು “ಎತ್ತಲೂ ಸೇರದ ಪ್ರೇತದಂತೆ ಲೋಕ ತಲ್ಲಣಿಸುತ್ತಿದೆ” ಎಂದು ಹೇಳಿದಂತೆ ಇದೆ. ಇಂದಿನ ಜನಾಂಗವೆಲ್ಲ ಅಂತರ್ಪಿಶಾಚಿಗಳ ತರಹವೇ ಇದ್ದಾರೆ. ಹಾಗಾಗಿ ಎಲ್ಲರಲ್ಲೂ ಹಳೆಯ ಸತ್ವಯುತವಾದ ಸಿದ್ಧಾಂತಗಳ, ಸಂಸ್ಕೃತಿಯ, ಸಂಸ್ಕೃತಿಯನ್ನು ಒಳಗೊಂಡ ಭಾಷೆ, ಸಾಹಿತ್ಯ, ಕಲೆ ಮುಂತಾದವುಗಳನ್ನು ಪುನರುಜ್ಜೀವನ ಮಾಡಲು ಒಂದು ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಅಂತಹ ಪ್ರಯತ್ನ ಎಲ್ಲ ಆಯಾಮಗಳಿಂದಲೂ ಒಂದೇ ಸಲಕ್ಕೆ ಒಂದು ಸ್ಫೋಟದಂತೆ ಆದಾಗ ಮಾತ್ರ ಒಂದು ಸಕಾರಾತ್ಮಕವಾದ ಬದಲಾವಣೆಯನ್ನು ನಾವು ನೋಡಬಹುದು. ನಮ್ಮ ಭಾರತೀಯತೆಯನ್ನು, ಸಂಸ್ಕೃತಿಯನ್ನು ಉಳಿಸಬೇಕಾದರೆ ಅಂತಹ ಪ್ರಯತ್ನ ಅಗತ್ಯ. ಬನ್ನಿ ಮಿತ್ರರೇ, ನಾವು ಅಂತಹ ಪ್ರಯತ್ನದಲ್ಲಿ ನಮ್ಮನ್ನು ತೊಡಗಿಸಿ ಕೊಳ್ಳೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-17 )

ತಳಮಳವಿದೇನಿಳೆಗೆ? ದೇವದನುಜರ್ ಮಥಿಸೆ | ಜಳಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ? || ಹಾಲಾಹಲವ ಕುಡಿವ ಗಿರೀಶನಿರ್ದೊಡೀ | ಕಳವಳವದೇತಕೆಲೋ?-ಮಂಕುತಿಮ್ಮ ||

ಪದಗಳ ವಿಸ್ತರಣೆ

ತಳಮಳವಿದೇನಿಳೆಗೆ=ತಳಮಳವಿದು+ಏನು+ಇಳೆಗೆ, ದೇವದನುಜರ್=ದೇವದ+ಅನುಜರ್, ಜಳಧಿಯೊಳಾದಂತೆ=ಜಲಧಿಯೊಳು+ಆದಂತೆ, ಗಿರೀಶನಿರ್ದೊಡೀ=ಗಿರೀಶನು+ಇರ್ದೊಡೆ, ಕಳವಳವದೇತಕೆಲೋ=ಕಳವಳವು+ಅದು+ಏತಕೆ+ಎಲೋ,

ಪದಗಳ ತಾತ್ಪರ್ಯ

ದೇವದನುಜರ್=ದೇವಲೋಕದ ಅಣ್ಣ ತಮ್ಮಂದಿರು, ಮಥಿಸೆ=ಕಡೆಯೆ, ಜಲಿಧಿ=ಸಮುದ್ರ, ಸುಧೆ=ಅಮೃತ, ಪೀಠಿಕೆ=ಭೂಮಿಕೆ, ಪ್ರಸ್ತಾವನೆ, ಹಾಲಾಹಲ=ವಿಷ, ಗಿರೀಶ=ಶಿವ

ಪದ್ಯದ ಪೂರ್ತಿ ವಿವರಣೆ

ಇಲ್ಲಿ ಒಂದು ಆಶಾಭಾವನೆಯನ್ನು ವ್ಯಕ್ತಪಡಿಸುತ್ತಾರೆ, ಶ್ರೀ ಗುಂಡಪ್ಪನವರು. ಆಗ ಎಲ್ಲೆಲ್ಲೂ ಅತಂತ್ರದ ಸ್ಥಿತಿ. ಹಳೆಯ ಭಕ್ತಿ ಶ್ರದ್ಧೆಗಳು ನಶಿಸಿ ಹೊಸದು ಯಾವುದೂ ಇಲ್ಲದೆ, ಒಂದು ಅತಂತ್ರದ ಸ್ಥಿತಿ ಇದೆ. ಜನರೆಲ್ಲಾ ಕಳವಳಗೊಂಡು ತಳಮಳಿಸುತ್ತಿದ್ದಾರೆ. ಅಂತಹ ಸ್ಥಿತಿಯಲ್ಲಿ ಇವರಿಗೊಂದು ಆಶಾಭಾವನೆ. ಅದನ್ನು ಅವರು ಈ ಮುಕ್ತಕದಲ್ಲಿ ಸೂಚಿಸುತ್ತಾರೆ. ಹಿಂದೆ, ದೇವಲೋಕದಲ್ಲಿ ಅಮೃತವನ್ನು ಪಡೆಯಲು ಸಮುದ್ರ ಮಂಥನ ನಡೆಯಿತು. ಅದನ್ನು ನಡೆಸಿದವರು ದೇವತೆಗಳು ಮತ್ತು ದಾನವರು. ಇವರನ್ನು ಗುಂಡಪ್ಪನವರು ಸೂಕ್ತವಾಗಿ “ದೇವಲೋಕದ ಅನುಜರ್”ಎಂದು ಸಂಬೋಧಿಸುತ್ತಾರೆ. ಏಕೆಂದರೆ ಪುರಾಣದ ಪ್ರಕಾರ ಈ ದೇವತೆಗಳು ಮತ್ತು ದಾನವರು ಇಬ್ಬರೂ ಕಶ್ಯಪ ಬ್ರಹ್ಮನ ಮಕ್ಕಳು. ಹಾಗಾಗಿ ಅವರನ್ನು ಅಣ್ಣ ತಮ್ಮಂದಿರು ಎಂದಿದ್ದಾರೆ. ವಾಚಕರು ಈ ದೇವದಾನವರು ನಡೆಸಿದ ಅಮೃತ ಮಂಥನದ ಕಥೆಯನ್ನು ಬೇರೆಯಾಗಿ ಓದಬೇಕಾಗಿ ವಿನಂತಿ. ಆದರೆ ಆ ಮಂಥನದಲ್ಲಿ ಮೊದಲು ಹಾಲಾಹಲ ಅಂದರೆ ವಿಷದ ಉದ್ಭವವಾಯಿತಂತೆ. ಘನ ಘೋರ ವಿಷವನ್ನು ಲೋಕ ಕಲ್ಯಾಣಕ್ಕಾಗಿ ಗಿರಿಜಾಪತಿ ಪರಮಶಿವನು ಕುಡಿದುಬಿಟ್ಟನಂತೆ. ಅದನ್ನು ಪಾರ್ವತಿ ಕಂಠದಲ್ಲೇ ತಡೆದದ್ದರಿಂದ ಅದು ಅಲ್ಲೇನಿಂತು, ಶಿವನು, "ನೀಲಕಂಠ ಮತ್ತು ವಿಷಕಂಠ" ನಾದನಂತೆ. ಹಿಂದಿನ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು"ಹಳೆ ಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ-ತಳಮಳಕೆ ಕಡೆಯೆಂದು" ಎಂದು ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಾರೆ. ಆ ಕಳವಳಕ್ಕೆ ಉತ್ತರವೆಂಬಂತೆ ಈ ಮುಕ್ತಕದಲ್ಲಿ ಈ ರೀತಿಯ ಕಳವಳ, ತಳಮಳಗಳು ಸಹಜ. ಒಂದು ಉತ್ತಮವಾದ ವಸ್ತು ಈ ಪ್ರಪಂಚಕ್ಕೆ ಸಿಗಬೇಕಾದರೆ ಈ ರೀತಿಯ ಮಂಥನವಾಗಬೇಕು. ಇಲ್ಲಿ ದೇವದಾನವರ ಉಲ್ಲೇಖ ಮಾಡಿ ಮನುಷ್ಯನ ಅಂತರ್ಯದಲ್ಲಿರುವ “ಒಳ್ಳೆಯ ಮತ್ತು ಕೆಟ್ಟ” ಗುಣಗಳನ್ನು ಸೂಚ್ಯವಾಗಿ ಹೇಳುತ್ತಾರೆ. ಮನುಷ್ಯನ ಮನಸ್ಸಿನಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಪ್ರಮಾಣ ಮತ್ತು ಪರಿಮಾಣಗಳ ವ್ಯತ್ಯಾಸ ಅಷ್ಟೇ. ಯಾವುದು ಅಧಿಕವಾಗಿದ್ದರೆ ಅದರ ಪ್ರಾಬಲ್ಯ. ಆದರೆ ಒಂದು ವ್ಯಕ್ತಿಯಿಂದ ಮಹತ್ತರ ಕಾರ್ಯವಾಗಬೇಕಾದರೆ ಆಂತರ್ಯದಲ್ಲೂ ತಿಕ್ಕಾಟಗಳು ತುಮುಲಗಳು ನಿರಂತರ ನಡೆಯಬೇಕು ಸಮುದ್ರ ಮಂಥನದ ರೀತಿ. ನಮ್ಮ ಲೋಕದ ಮಹಾ ಮಹಿಮರೆಲ್ಲರಿಗೂ ಇಂಥಹ ಅನುಭವವಾಗಿದೆ. ಅವರ ಪ್ರಯತ್ನದಲ್ಲಿ ಅವರಿಗೆ “ವಿಷ” ರೂಪದಲ್ಲಿ ಬೇಕಾದಷ್ಟು ಕಷ್ಟಗಳು ಬಂದಿವೆ. ಆ ಮಹಾಮಹಿಮರೆಲ್ಲ ಅಂತಹ ಕಷ್ಟಗಳನ್ನೆಲ್ಲ “ಪರಶಿವನು ಹಾಲಾಹಲವನ್ನು ಕುಡಿದಂತೆ” ನುಂಗಿ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ತ್ಯಾಗಮಾಡಿದ್ದಾರೆ. ಉದಾಹರಣೆಗೆ, ನಮ್ಮ ದೇಶಕ್ಕೆ ಚಾಣಕ್ಯ (ವಿಷ್ಣುಶರ್ಮ)ನ ಕೊಡುಗೆ ಅಪಾರ. ಅಷ್ಟೇ ಕಷ್ಟ ನಿಷ್ಠೂರಗಳನ್ನು ಅನುಭವಿಸಿದ ಅವನು. ಹೀಗೆ, ಶಂಕರರು, ರಾಮಾನುಜರು, ಬಸವಣ್ಣನವರು, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ಸಿಂಗ್ï, ಚಂದ್ರಶೇಖರ್ ಅಜಾದ್, ರಾಜಗುರು, ಬೋಸ್ ಮುಂತಾದ ಅನೇಕ ವೀರರು ಸ್ವಾರ್ಥ ತೊರೆದು ಲೋಕ ಕಲ್ಯಾಣಕ್ಕಾಗಿ ಕಷ್ಟಗಳೆಂಬ ವಿಷವನ್ನು, ಪರಶಿವನಂತೆ ಕುಡಿದ ದೃಷ್ಟಾಂತಗಳು ನಮಗೆ ಹೇರಳವಾಗಿ ಸಿಗುತ್ತದೆ. ಅದೇ ರೀತಿ ಇಂದು ಇರುವ ಪರಿಸ್ಥಿತಿಯೂ ಬದಲಾಗಿ ಇಂದಿರುವ ವಿಷ ಮತ್ತು ವಿಷಮ ಪರಿಸ್ಥಿತಿ ಕರಗಿ ಅಮೃತ ಹುಟ್ಟುವುದಕ್ಕೆ ಈ ರೀತಿಯ ತಿಕ್ಕಾಟವೇ, ತುಮುಲಗಳೇ, ತಳಮಳವೇ, ಪೀಠಿಕೆಯೋ ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು. ಅಂದು ಪರಶಿವನು “ವಿಷ”ವನ್ನು ಕುಡಿದು ಲೋಕ ಕಲ್ಯಾಣವನ್ನು ಮಾಡಿದ ಹಾಗೆ ಇಂದೂ ಯಾರಾದರೂ ಬರಬಹುದೆಂದು ಅವರ ಆಸೆ. ಅವರ ಆಶಾಭಾವಕ್ಕೆ ಒಂದು ನಮಸ್ಕಾರ. ಆದರೆ ವಾಚಕರೆ, ವಿಚಾರ ಮಾಡಿ ನೋಡಿ. ಇಂದಿನ ಮಥನದಿಂದ ಅಂದರೆ ಲೋಕದ ದ್ವಂದ್ವಗಳಿಂದ ಮತ್ತು ಆ ದ್ವಂದ್ವಗಳ ತಿಕ್ಕಾಟದಿಂದ, ತೊಳಲಾಟದಿಂದ ಇನ್ನೂ ಅಮೃತ ಬಂದೇ ಇಲ್ಲ. ಎಲ್ಲೆಲ್ಲೂ ವಿಷಮ ಸ್ಥಿತಿಯ ವಿಷದ ಧಾರೆ ಹರಿಯುತ್ತಿದೆ. ದ್ವೇಷಾಸೂಯೆಗಳ, ಭಾಷಾಸೂಯೆಗಳ, ಅಹಂಕಾರದ, ಜನಬಲದ ಮದ, ಧನಬಲದ ಮದ, ಅಧಿಕಾರ ಮದದ ವಿಷದ ಗಾಳಿ ಎಲ್ಲೆಲ್ಲೂ ಹರಡಿದೆ. ಸಮಾಜ ಪ್ರೀತಿ ಕರುಣೆ ವಾತ್ಸಲ್ಯಗಳ ಕೊರತೆಯಿಂದ ಸೊರಗಿದೆ. ಹಳೆಯ ಶ್ರದ್ಧೆ-ಭಕ್ತಿಗಳ ಮತ್ತು ಆಧುನಿಕತೆಯ, ಡಂಬ ತೋರಿಕೆಯ ಜೀವನದ ನಡುವೆಯ ಅಂತರ ಅಗಾಧವಾಗುತ್ತಿದೆ. ಅಂದು ಈಗ್ಗೆ ಎಂಬತ್ತು ವರ್ಷಗಳ ಹಿಂದೆ ಡಿ.ವಿ.ಜಿ.ಯವರು ಕಂಡ ಅಮೃತದ ಕನಸು ನನಸಾಗುವ ಕಾಲ ಬಂದೀತೆ ಎಂದರೆ, ನಾವು ಆಶಾಭಾವನೆಯನ್ನು ಎಂದಿಗೂ ಬಿಡಬಾರದು, ಇಂದಿನ ಯುವ ಪೀಳಿಗೆಗೆ ಮತ್ತು ಮುಂದಿನ ಪೀಳಿಗೆಗೆ, ಹಿಂದಿನ ತತ್ವಗಳ ಸತ್ವವನ್ನು ತಿಳಿಸಿಕೊಡಬೇಕು. ಅವುಗಳ ಅರಿವು ಮೂಡಿಸಬೇಕು. ಬಹಳಷ್ಟು ಜನ ಆ ಪ್ರಯತ್ನದಲ್ಲಿ ಇದ್ದರೂ ಇಷ್ಟು ವಿಶಾಲವಾದ ದೇಶದಲ್ಲಿ ಆಧುನಿಕತೆಯ ಪೊಳ್ಳು ಸಂಸ್ಕೃತಿಯ ವ್ಯಾಪ್ತಿಯನ್ನು ಮಟ್ಟಹಾಕಲು ಇನ್ನೂ ಸಾಧ್ಯವಾಗಿಲ್ಲ. ಶೀಘ್ರವೇ ಫಲ ಬೇಕಾದಲ್ಲಿ, ಸಮರೋಪಾದಿ ಕಾರ್ಯಗಳು ನಡೆದು ನಮ್ಮ ಭಾರತೀಯತೆಯನ್ನು ಅರಿತುಕೊಳ್ಳಲು ಮತ್ತು ಕಾಪಾಡಲು ಎಲ್ಲರೂ ಪ್ರವೃತ್ತರಾಗಬೇಕು. ಅದಕ್ಕೆ ನಾವು ನೀವು ಎಲ್ಲರೂ ಪ್ರಯತ್ನಪಟ್ಟು ನಮ್ಮ ಸುತ್ತು ಮುತ್ತಲಿನವರನ್ನೂ ಅದಕ್ಕೆ ಪ್ರೇರೇಪಿಸಿದರೆ ಅದು ಸಾಧ್ಯ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-18 )

ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ | ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ || ಬದುಕೇನು ಸಾವೇನು ಸೊದೆಯೇನು ವಿಷವೇನು? | ಉದಕಬುದ್ಬುದವೆಲ್ಲ!-ಮಂಕುತಿಮ್ಮ ||

ಪದಗಳ ವಿಸ್ತರಣೆ

ತೆರೆಯವೊಲುರುಳಿ=ತೆರೆಯವೊಲು+ಉರುಳಿ, ಉದಕಬುದ್ಬುದವೆಲ್ಲ=ಉದಕ+ಬುದ್ಬುದವು+ಎಲ್ಲ,

ಪದಗಳ ತಾತ್ಪರ್ಯ

ತೆರೆಯವೊಲು=ನದಿಯ ಅಲೆಯಂತೆ, ಮುಗಿವಿಲ್ಲ=ಕೊನೆಯಿಲ್ಲ, ನಿಲುವಿಲ್ಲ=ನಿಲುವು ಅಂದರೆ ಸ್ಥಿರತೆ,. ಸೊದೆಯೇನು=ಅಮೃತವೇನು, ಉದಕ=ನೀರು, ಬುದ್ಬುದ=ಗುಳ್ಳೆ.

ಪದ್ಯದ ಪೂರ್ತಿ ವಿವರಣೆ

ವಾಚಕರೆ ಹಿಂದಿನ ಮುಕ್ತಕದಲ್ಲಿ ಈ ಹಳತು ಹೊಸತನದ ತಿಕ್ಕಾಟವನ್ನು ಅಮೃತಕ್ಕಾಗಿ ನಡೆಯುವ ಸಮುದ್ರಮಂಥನಕ್ಕೆ ಹೋಲಿಸಿದರು ಮಾನ್ಯ ಡಿ.ವಿ.ಜಿ. ಯವರು. ಆದರೆ ಈ ಮುಕ್ತಕದಲ್ಲಿ ಒಂದು ವೇದಾಂತದ ಮಾತನ್ನು ಸೂಚಿಸಿದ್ದಾರೆ. ಇಡೀ ಜೀವನವನ್ನು ಅವರು ಒಂದು ನದಿಯ ತೆರೆ ಅಥವಾ ಅಲೆಯಂತೆ ಎಂದಿದ್ದಾರೆ. ಒಂದು ನಿಮಿಷವು ಒಂದೇ ತೆರನಾಗಿ ಇರದ ನದಿಯ ತೆರೆಗೆ ಹೋಲಿಸಿದ್ದಾರೆ. ಹೌದು ಯಾರ ಜೀವನವು ಎಂದೂ ಒಂದೇ ತೆರನಾಗಿ ಇರುವುದಿಲ್ಲ. ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ನಾನು ಅದನ್ನು kaleidoscopic ಲೈಫ್ ಎಂದು ಕರೆಯುತ್ತೇನೆ. ಕೆಲಿಡೋಸ್ಕೊಪ್ ಎನ್ನುವುದು ನಾವು ಚಿಕ್ಕಂದಿನಲ್ಲಿ ಮೂರು ಬಿಳಿಯ ಗಾಜಿನ ಪಟ್ಟಿಗಳನ್ನು ತೆಗೆದುಕೊಂಡು ಮೂರನ್ನೂ ತ್ರಿಕೋನಾಕಾರದಲ್ಲಿ ಜೋಡಿಸಿ ಎಲ್ಲ ಬದಿಯಿಂದಲೂ ಬಂಧಿಸಿ ಒಂದು ಕೊನೆಯನ್ನು ಮುಚ್ಚಿ ಸುತ್ತಲೂ ಕಾಗದವನ್ನು ಸುತ್ತಿಬಿಡುತ್ತಿದ್ದೆವು. ತೆರೆದ ಬದಿಯಿಂದ ಒಡೆದ ಗಾಜಿನ ಬಳೆಯ ಚೂರುಗಳನ್ನು ಹಾಕಿದರೆ ಒಂದು ಚಿತ್ತಾರ(ಡಿಸೈನ್) ಮೂಡುತ್ತಿತ್ತು. ಅದನ್ನು ತಿರುಗಿಸುತ್ತಾ ಹೋದಂತೆಲ್ಲ, ಬೇರೆಬೇರೆ ಚಿತ್ತಾರಗಳು ಮೂಡುತ್ತಿದ್ದವು. ಒಂದು ಬಾರಿ ಮೂಡಿದ ಚಿತ್ತಾರ ಮತ್ತೊಂದು ಬಾರಿಗೆ ಎಂದೂ ಬರುವುದಿಲ್ಲ. ಹಾಗೆಯೇ ನಮ್ಮ ಜೀವನಗಳು ಈಗ ಇದ್ದಂತೆ ಎಲ್ಲವು ಮತ್ತೆಂದಿಗೂ ಇರುವುದಿಲ್ಲ. ದಿನಕಳೆದಂತೆ ನಮ್ಮ ವಯಸ್ಸು ಒಂದು ದಿನ ಹೆಚ್ಚಾಗುತ್ತದೆ. ಒಂದು ದಿನ ಇದ್ದ ಮನೋಭಾವ ಮತ್ತೊಂದು ದಿನ ಇರುವುದಿಲ್ಲ, ಒಂದು ಗಳಿಗೆ ಇದ್ದ ನಮ್ಮ ಯೋಚನಾವಿಧ ಮತ್ತೊಂದು ಗಳಿಗೆ ಇರುವುದಿಲ್ಲ. ಇದನ್ನೇ ಮಾನ್ಯ ಗುಂಡಪ್ಪನವರು "ನಿಲುವಿಲ್ಲ" ಎಂದರು. ಇನ್ನು ನಾವು ಈಗ ಮನುಷ್ಯರಾಗಿ ಹುಟ್ಟಿದ್ದೇವೆ, ಹಿಂದೆ ಏನಾಗಿದ್ದೆವೋ ಮುಂದೆ ಏನಾಗುತ್ತೇವೆಯೋ ಗೊತ್ತಿಲ್ಲ. ನಮ್ಮ ಈ ಜೀವನ ಪ್ರಯಾಣ ಎಂದು ಮೊದಲಾಯಿತೋ ಗೊತ್ತಿಲ್ಲ. ಎಂದು ಮುಗಿಯುವುದೋ ಗೊತ್ತಿಲ್ಲ. ಪ್ರಶ್ನೆಗಳು ಉದ್ಭವವಾಗಬಹುದು. ಉತ್ತರವು ಮಾತ್ರ ಸಿಗುವುದಿಲ್ಲ. ಇದಕ್ಕೇ, ಮೊದಲಿಲ್ಲ ಕೊನೆಯಿಲ್ಲ ಎನ್ನುತ್ತಾರೆ ಶ್ರೀ ಗುಂಡಪ್ಪನವರು. ನಮ್ಮ ಸನಾತನ ವೇದಾಂತದ ಪ್ರಕಾರ ಒಂದು ಜೀವಿ ಮಾನವನಾಗಿ ಹುಟ್ಟಬೇಕಾದರೆ ಅದಕ್ಕೆ ಮೊದಲು 84 ಲಕ್ಷ ಬಾರಿ (ಏಸು ಕಾಯಂಗಳ ಕಳೆದು 84 ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ ಎಂಬುದು ದಾಸರ ಪದ.) ಬೇರೆ ಬೇರೆ ದೇಹಗಳನ್ನು ಹೊಕ್ಕು ಹೊರಗೆ ಬಂದು ಮನುಷ್ಯನಾಗುತ್ತಾನೆ, ಅಂದರೆ ಜೀವ ಈ ಮನುಷ್ಯ ದೇಹವನ್ನು ಸೇರುತ್ತದೆ. ನಾವು ಎಂದು ಈ ಮನುಷ್ಯ ದೇಹವನ್ನು ಹೊಕ್ಕೆವೋ ಇದರಿಂದ ಮುಂದೆ ಏನೋ ಎನ್ನುವುದು ಗೊತ್ತಿಲ್ಲ. ಮತ್ತೆ ಈ ಜನ್ಮದ ನಮ್ಮ ಕರ್ಮಗಳು ಮುಂದಿನ ಜನ್ಮವನ್ನು ನಿರ್ಧರಿಸುತ್ತವೆ ಎಂದೂ ಹೇಳುತ್ತಾರೆ. ಇನ್ನೂ ಕೆಲವರು ಜೀವಿ ತಾನು ಏನಾಗಬೇಕು, ಎಲ್ಲಿಗೆ ಹೋಗಬೇಕು ಎನ್ನುವುದನ್ನು ತಾನೇ ನಿರ್ಧರಿಸುತ್ತಾನೆ ಎನ್ನುತ್ತಾರೆ. ಆ ನಿರ್ಧಾರಗಳು ನಮ್ಮ ಮನಸ್ಸು ಬುದ್ಧಿಗಳಿಗೆ ಗೊತ್ತಾಗುತ್ತವೆಯೋ ಇಲ್ಲವೋ, ಎಲ್ಲವು ಅನಿಶ್ಚಯ. ಇದಕ್ಕೆ ಇರುವ ಆದಿಯೂ ಗೊತ್ತಿಲ್ಲ ಅಂತ್ಯವು ಗೊತ್ತಿಲ್ಲ. ಇದನ್ನೇ ಗುಂಡಪ್ಪನವರು “ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ” ಎಂದರು. ಬದುಕಿನ ಅರ್ಥ ಗೊತ್ತಿಲ್ಲ, ಅಥವಾ ನಮಗೆ ಗೊತ್ತಿರುವುದು ನಮ್ಮ ದೃಷ್ಟಿಕೋನವಷ್ಟೇ, ಸಮಗ್ರ ಸತ್ಯವಲ್ಲವಲ್ಲ. ಸಾವಿನ ಅರ್ಥವಂತೂ ಗೊತ್ತಿಲ್ಲ. ಸಾವೆಂದರೆ ನಮಗೆ ಗೊತ್ತಿರುವುದು, ಒಂದು ವ್ಯಕ್ತಿ ಮೂರ್ತರೂಪದಲ್ಲಿ ಶರೀರದಿಂದ ಇರಲಾಗದ ಸ್ಥಿತಿಯೇ ಸಾವು. ನಾನು ಇದನ್ನು "ರೂಪ ಬದಲಾವಣೆ" ಎನ್ನುತ್ತೇನೆ. ಹಾಗಾಗಿ ಸಾವಿನ ಬಗ್ಗೆಯೂ ನಿಖರವಾದ ಅಭಿಪ್ರಾಯವಿಲ್ಲ. ಬದುಕೇ ನಿರ್ದಿಷ್ಟವಲ್ಲ. ಇನ್ನು ಬದುಕಿಗೆ ಸಂಬಂಧಿಸಿದ ಸುಖವೇನು? ಅಮೃತ ಅಂದರೆ ಸವಿ. ಆ ಸವಿಯನ್ನೇ ಸುಖ ಎಂದುಕೊಳ್ಳಬೇಕು. ವಿಷ (ದುಃಖ)ವೇನು? ಅದೂ ಅರ್ಥವಾಗುವುದಿಲ್ಲ. ಬದುಕೆಲ್ಲ ಒಂದು ಉದಕಬುದ್ಬುದ, ಅಂದರೆ ನೀರಿನ ಮೇಲಿನ ಗುಳ್ಳೆ ಎಂದು ಹೇಳುತ್ತಾರೆ ಗುಂಡಪ್ಪನವರು. “ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ” ಎಂದು ಪುರಂದರ ದಾಸರು “ಯಾರಿಗೆ ಯಾರುಂಟು ಎರವಿನ ಸಂಸಾರ” ಎಂಬ ಹಾಡಿನಲ್ಲಿ ಬರೆಯುತ್ತಾರೆ. ಯಾವುದೂ ನಿರಂತರವಲ್ಲ, ನಿಶ್ಚಯವಿಲ್ಲ, ನಿಶ್ಚಯವಿದ್ದರೂ ನಮಗೆ ಅದರ ಅರಿವಿಲ್ಲ. ಅಂತಹ ಭಾವಗಳನ್ನೇ ವ್ಯಕ್ತಪಡಿಸುತ್ತಾರೆ ಶ್ರೀಗುಂಡಪ್ಪನವರು. ಇದು ವೇದಾಂತದ ಮಾತು. ಇದು ಸತ್ಯ. ಈ ಸತ್ಯದ ತಳಹದಿಯಲ್ಲೇ ನಮ್ಮ ಜೀವನ ಸಾಗಬೇಕು. ಆದರೆ ನಾವು “ಅಯ್ಯೋ ಜೀವನವೆಲ್ಲ ನಶ್ವರ, ಯಾವುದೂ ಶಾಶ್ವತವಲ್ಲ ನಾನೇಕೆ ಏನಾದರೂ ಮಾಡಬೇಕು” ಎಂದು ನಿರಾಸೆಯ ಭಾವ ತಳೆಯಬಾರದು. ಅದು ಬದುಕಿಗೆ ಮಾರಕ. ಬದುಕಿಗೆ ಪೂರಕವಾದ ಸದಾಶಾಭಾವವನ್ನೇ ಇಟ್ಟುಕೊಂಡು ಜೀವನವನ್ನು ಸಾಗಿಸಬೇಕು. “ಸದಾಶಾಭಾವವಷ್ಟೇ” ಇರಬೇಕು. ಎಲ್ಲವು ಯಾವುದೋ ಒಂದು ಪರಮ ಶಕ್ತಿಯ ಅಧೀನದಲ್ಲಿ ಮತ್ತು ಅದರ ಇಚ್ಛೆಯಂತೆ ನಡೆಯುತ್ತದೆ. ನಮ್ಮ ಪ್ರಮೇಯವಿದ್ದಂತೆ ಕಂಡರೂ ಇಲ್ಲದ ಮತ್ತು ಅದಕ್ಕೆ ತದ್ವಿರುದ್ಧವಾದ ಅನುಭವಗಳು ನಮಗೆ ಆಗುತ್ತವೆ. ಹಾಗಾಗಿ ನಾವು ಆ ಪರಮ ಶಕ್ತಿಯ ಅಧೀನದಲ್ಲಿರುವುದರಿಂದ ಅದಕ್ಕೆ ಡಿ.ವಿ.ಜಿ.ಯವರು ಹೇಳುವಂತೆ “ಆವಿಚಿತ್ರಕೆ ಶರಣಾಗೋ” ಎಂಬಂತೆ ಇರಬೇಕು. ಆದರೆ ಜೀವನದಲ್ಲಿ ಇರುವಾಗ ಯಾವುದಕ್ಕೂ ಅಂಟದೆ ತಾವರೆ ಎಲೆಯ ಮೇಲಿನ ನೀರ ಹನಿಯಂತೆ ಇರಬೇಕು. ಇದ್ದರೆ ನೆಮ್ಮದಿ, ಸುಖ ಮತ್ತು ಆನಂದ. ಹೇಳುವುದು ಸುಲಭ ಆಚರಣೆ ಬಹಳ ಕಷ್ಟ. ಆದರೆ ಅಸಾಧ್ಯವಲ್ಲವಲ್ಲ!!!. ಪ್ರಯತ್ನಪಡೋಣ ಎಂದೋ ಒಂದು ದಿನ ನಮಗೂ ಆ ಆನಂದದ ನೆಲೆ ಸಿಗಬಹುದು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-19 )

ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಹೊರಳದು| ಆಳೆನಿಪುದಂತಾಗದಿರೆ ಬರಿಯ ಹೆಂಟೆ || ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ | ಕ್ಷೇಳವೇನಮೃತವೇಂ?-ಮಂಕುತಿಮ್ಮ ||

ಪದಗಳ ವಿಸ್ತರಣೆ

ಮಣ್ಣುಂಡೆಯೊಳಹೊಕ್ಕು=ಮಣ್ಣ+ಉಂಡೆ+ಒಳ+ಹೊಕ್ಕು, ಹೊರಹೊರಳದು=ಹೊರ+ಹೊರಳದು ಆಳೆನಿಪುದಂತಾಗದಿರೆ=ಆಳು+ಎನಿಪುದು+ಅಂತೆ+ಆಗದಿರೆ, ತಿಕ್ಕಿದುರಿಯ=ತಿಕ್ಕಿದ+ಉರಿಯ, ಕ್ಷೇಳವೇನಮೃತವೇಂ=ಕ್ಷೇಳವೇನು+ಅಮೃತವೇನು.

ಪದಗಳ ತಾತ್ಪರ್ಯ

ಕ್ಷೇಳ=ವಿಷ.

ಪದ್ಯದ ಪೂರ್ತಿ ವಿವರಣೆ

ಈ ದೇಹವನ್ನು ಮಣ್ಣುಂಡೆಗೆ ಹೋಲಿಸಿದ್ದಾರೆ ಮತ್ತು ಈ ದೇಹದಲ್ಲಿ ಆಡುವ ಉಸಿರು (ಗಾಳಿ) ಆಡುತ್ತಿದ್ದರೆ ನಾವುಗಳು “ಆಳು” ಎಂದು ಎನ್ನಿಸಿಕೊಳ್ಳುತ್ತೇವೆ. ಇಲ್ಲದಿದ್ದರೆ ಈ ದೇಹ ಬರೀ ಮಣ್ಣಿನ ಹೆಂಟೆ ಎಂದು ಒಂದು ಅತ್ಯುತ್ತಮ ಸತ್ಯವನ್ನು ಪ್ರತಿಪಾದಿಸುತ್ತಾರೆ. "ಬಡಿತ ನಿಂತರೆ ಬಡಿವಾರ ಬಂದ್” ಅಲ್ಲವೇ?. ಇರಲಿ ಗುಂಡಪ್ಪನವರು ಈ ಬಾಳನ್ನು ಧೂಳ ಸುಳಿ ಎಂದು ಕರೆಯುತ್ತಾರೆ. ಇದು ಬಹಳ ಸೂಕ್ತವಾಗಿದೆ. ನಾನು ಹಿಂದೆ ಒಮ್ಮೆ ಈ ಬ್ರಹ್ಮಾಂಡದ ವಿವರಣೆಯನ್ನು ಮಾಡುವಾಗ, ಇಡೀ ಬ್ರಹ್ಮಾಂಡವು ಎಷ್ಟು ದೊಡ್ಡದೆಂದರೆ, ಇದರೆದುರು ನಾವು ಒಂದು ಧೂಳ ಕಣವು ಅಲ್ಲ ಎಂದು ಹೇಳಿದ್ದೆ. ಈಗ ಮಣ್ಣಿಂದ ಆದ ಮತ್ತು ಈ ಸಮಸ್ತ ಭೂಮಮಂಡಲವನ್ನು ನಿವಾಸಸ್ಥಾನವನ್ನಾಗಿಸಿಕೊಂಡ ಪ್ರಾಣಿಗಳೆಲ್ಲವು ಧೂಳ ಕಣಗಳೇ ಎಂದು ಗುಂಡಪ್ಪನವರು ಹೇಳುತ್ತಾರೆ. ಮಣ್ಣಿಂದ ಆದ ಜೀವಕಣಗಳು ಮತ್ತು ಈ ಜೀವಕಣಗಳಿಂದಾದ ಈ ದೇಹವುಮಣ್ಣಲ್ಲವೇ? “ಮಣ್ಣಿಂದ ಕಾಯ ಮಣ್ಣಿಂದ” ಎಂದು ನಾವು ಕೇಳಿಲ್ಲವೇ? ಹಾಗೆ ಮಣ್ಣಿಂದ ಆದ ಈ ದೇಹವನ್ನು ಮಣ್ಣ ಉಂಡೆ ಎಂದು ಹೇಳಿದ್ದಾರೆ. ಈ ಮಣ್ಣ ಉಂಡೆಯಲಿ ಗಾಳಿ ಆಡುತ್ತಿದ್ದರೆ ನಾವು ಸಹ “ಆಳು” ಅಂದರೆ ಮನುಷ್ಯ ಎಂದು ಕರೆಯಲ್ಪಡುತ್ತೇವೆ. ಇಲ್ಲದಿದ್ದರೆ ಬರೇ ಮಣ್ಣ ಉಂಡೆ. ಆಗ ನಮ್ಮನ್ನು ಹೆಣ ಎನ್ನುತ್ತಾರೆ. ಮಣ್ಣಿನಲ್ಲೇ ಹೂಳುವುದೋ ಅಥವಾ ಸುಟ್ಟು ಮಣ್ಣಲ್ಲಿ ಒಂದಾಗಿಸುವುದೋ ಆಗುತ್ತದೆ ಅಲ್ಲವೇ? ಹಾಗಿದ್ದರೆ, ಈ ಬಾಳು ಅಂದರೆ ಜೀವನವು ಏನು? ಎಂದರೆ ಮಣ್ಣ ಕಣಗಳ ತಿಕ್ಕಾಟವೆನ್ನುತ್ತಾರೆ ಶ್ರೀಗುಂಡಪ್ಪನವರು. ಮಣ್ಣು ಉಂಡೆಗಳಾದ ಮಾನವರ ಪರಸ್ಪರ ಈ ತಿಕ್ಕಾಟದಲ್ಲಿ ಬೆಂಕಿ ಉಂಟಾಗುತ್ತದೆ ಮತ್ತು ಹೊಗೆಯಾಡುತ್ತದೆ. ದ್ವೇಷದ ಬೆಂಕಿ, ಅಸೂಯೆಯ ಬೆಂಕಿ, ಕೋಪದ ಬೆಂಕಿ ಹೀಗೆ ಹಲವಾರು ವಿಧದಲ್ಲಿ ಮನುಜ ಮನುಜರ ಮಧ್ಯೆ ಉಂಟಾಗುವ ತಿಕ್ಕಾಟದಿಂದ ಹತ್ತಿಕೊಳ್ಳುತ್ತದೆ ಬೆಂಕಿ. ಆ ತಿಕ್ಕಾಟದ ಪರಿಣಾಮ ಸಾವು ನೋವುಗಳ ಪರಿಣಾಮವೇ ಬೆಂಕಿಯಿಂದ ಬರುವ ಹೊಗೆ. ಇದರಿಂದ ಕೆಲವರಿಗೆ ಸುಖ ಕೆಲವರಿಗೆ ದುಃಖ. ಇದನ್ನೇ “ಕ್ಷೇಳ” ಅಂದರೆ ವಿಷವೆಂದು, ಸುಖ ಮತ್ತು ಆನಂದವನ್ನು “ಅಮೃತ”ವೆಂದೂ ಕರೆಯುತ್ತಾರೆ ಗುಂಡಪ್ಪನವರು. ಪರಮಾತ್ಮನೆಂಬ ಮಹಾಜ್ವಾಲೆಯಲ್ಲಿ ಉರಿಯುವ ಬೆಂಕಿಯಿಂದ ಸಿಡಿದ ಕೋಟ್ಯಾಂತರ ಕಿಡಿಗಳೇ, ಈ ಜೀವಿಗಳು. ಈ ಜಗತ್ತಿನಲ್ಲಿ, ಮಣ್ಣಿನ ಉಂಡೆಗಳಂತೆ ಇರುವ ನಾವು ಮತ್ತು ಈ ಉಂಡೆಯೊಳಗೆ ಗಾಳಿ ಎಂಬಂತೆ ಇರುವ ಆತ್ಮ ಅಥವಾ ಚೇತನದ ಸಮ್ಮಿಲನದಿಂದ ಉಂಟಾದ ಬದುಕೆಂಬ ತಿಕ್ಕಾಟದಲ್ಲಿ ಬೆಂಕಿಯುಗುಳಿ, ವಿಷಕಾರಿ, ಅಮೃತವ ಸವಿದು ಬಾಳ ಸವೆಸಿ ಮತ್ತದೇ ಚೇತನವನ್ನು ಸೇರುವಾಗ, ಇಲ್ಲಿ ಪಡೆದ ಅಮೃತದ ಬೆಲೆಯೇನು? ಕುಡಿದ ಅಥವಾ ಕಕ್ಕಿದ ವಿಷದ ಬೆಲೆಯೇನು? ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು. ಈ ಮುಕ್ತಕದ ಒಟ್ಟಾರೆ ಆಂತರ್ಯವೇನೆಂದರೆ, ಮಣ್ಣಿಂದ ಆಗಿ, ಮಣಲ್ಲೇ ಇದ್ದು ಮಣಲ್ಲೇ ಸೇರುವ ಈ ಮಾನವನ ಬಾಳು ಕೇವಲ ಉಸಿರಿರುವ ತನಕ. ಹೀಗೆ ಬದುಕಿರುವಾಗ ನಾವು ಪಡೆಯುವ ಸುಖ ದುಃಖ, ಅನುಭವಿಸುವ, ಕೋಪ ದ್ವೇಷ, ಅಸೂಯೆ, ಪ್ರೀತಿ, ಪ್ರೇಮ, ಅನುರಾಗ, ಬಂಧನಗಳಂಥಹ ಭಾವಗಳೆಲ್ಲವು, ಬಡಿತವಿರುವತನಕ (ಹೃದಯದ) ಅದು ನಿಂತರೆ “ಬಡಿವಾರ ಬಂದ್.” ಈ ಜೀವನದ ಎಲ್ಲಕ್ಕೂ ಒಂದು ಮಂಗಳವನ್ನು ಹಾಡುವ, ಸಾವನ್ನು ಅಪ್ಪಿ ಎಲ್ಲವನ್ನೂ ಅಲ್ಲೇ ಬಿಟ್ಟು ಹೋಗುವಾಗುವಂಥಾ ಈ ಜೀವನದಲ್ಲಿ ಪಡೆದ ಸುಖಕ್ಕೆ ಏನು ಬೆಲೆ, ದುಃಖಕ್ಕೆ ಏನು ಬೆಲೆ? ಎಲ್ಲವು ಶೂನ್ಯ. ಇಂತಹ ಭಾವಗಳನ್ನು ವ್ಯಕ್ತಪಡಿಸುವ ಈ ಮುಕ್ತಕದ ಆಂತರ್ಯವನ್ನು ವಾಚಕರು ಅವರದೇ ಅನುಭವದ ಮೂಸೆಯಲ್ಲಿ ಹಾಕಿ ನೋಡಿದಾಗ, ಪ್ರತಿಯೊಬ್ಬರಿಗೂ ಅವರವರದೇ ಅನುಭವದ ಭಾವ ಸಿಗುತ್ತದೆ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-20 )

ಕಂಡದೈವಕ್ಕೆಲ್ಲಕೈಯಮುಗಿದೇನಹುದು? ಚಂಡಚತುರೋಪಾಯದಿಂದಲೇನಹುದು? ತಂಡುಲದಹಿಡಿಯೊಂದುತುಂಡುಬಟ್ಟೆಯದೊಂದು ಅಂಡಲೆತವಿದಕೇನೋ?-ಮಂಕುತಿಮ್ಮ

ಪದಗಳ ವಿಸ್ತರಣೆ

ಕೈಯಮುಗಿದೇನಹುದು=ಕೈ+ಮುಗಿದು+ಏನು+ಅಹುದು, ಚಂಡಚತುರೋಪಾಯದಿಂದಲೇನಹುದು=ಚಂಡ+ಚತುರೋಪಾಯದಿಂದಲಿ+ಏನು+ಅಹುದು, ಚಂಡ=ಉಗ್ರ, ತಂಡುಲದಹಿಡಿಯೊಂದುತುಂಡುಬಟ್ಟೆಯದೊಂದು=ತಂಡುಲದ+ಹಿಡಿಯೊಂದು+ತುಂಡು+ಬಟ್ಟೆಯದೊಂದು, ಅಂಡಲೆತವಿದಕೇನೋ?=ಅಂಡ+ಅಲೆತವುಇದಕ

ಪದಗಳ ತಾತ್ಪರ್ಯ

ಚತುರೋಪಾಯ=ನಾಲ್ಕು ವಿಧವಾದ ಉಪಾಯಗಳು (ಸಾಮ, ದಾನ, ಭೇದ ಮತ್ತು ದಂಡ.) ತಂಡುಲ=ಅಕ್ಕಿ, ಅಂಡಲೆತ=ಸುಮ್ಮನೆ ಸುತ್ತಾಟ.

ಪದ್ಯದ ಪೂರ್ತಿ ವಿವರಣೆ

ಅಂದಿನ ಮತ್ತು ಇಂದಿನ ವಾಸ್ತವಿಕ ಚಿತ್ರಣವನ್ನು ನಮಗೆ ಗುಂಡಪ್ಪನವರು ಕೊಟ್ಟಿದ್ದಾರೆ ಈ ಮುಕ್ತಕದಲ್ಲಿ. ನಮ್ಮಲ್ಲಿ ಅನೇಕ ದೇವರುಗಳು. ಆ ದೇವರುಗಳ ಸಂಖ್ಯೆ ಎಷ್ಟಿದೆಯೆಂದರೆ ಎಣಿಸಲೂ ಸಾಧ್ಯವಿಲ್ಲ. ಒಂದುಕಡೆ ತಿರುಪತಿ ತಿಮ್ಮಪ್ಪನಾದರೆ, ಇನ್ನೊಂದು ಕಡೆ, ಬದರಿಯ ಬದರೀನಾಥ, ಒಂದುಕಡೆ ಮಧುರೆಯ ಮೀನಾಕ್ಷಿಯಾದರೆ, ಇನ್ನೊಂದು ಕಡೆ ಕಾಶಿಯ ವಿಶಾಲಾಕ್ಷಿ, ಒಂದುಕಡೆ ಪುರಿಯ ಜಗನ್ನಾಥನಾದರೆ ಇನ್ನೊಂದುಕಡೆ ತಿರುವನಂತಪುರದ ಅನಂತಪದ್ಮನಾಭ, ಒಂದುಕಡೆ ವಿನಾಯಕನಾದರೆ, ಇನ್ನೊಂದು ಕಡೆ ಷಣ್ಮುಖ, ಹೀಗೇ ಬರೆಯುತ್ತ ಹೋದರೆ ಪಟ್ಟಿ ಬಹಳ ಉದ್ದ ಆದೀತು. ದೇಶ ಕಾಲ ಸಂದರ್ಭಕ್ಕನುಗುಣವಾಗಿ ನಮಗೆ ನಾವು ಪೂಜಿಸುವ ದೇವತೆಗಳು ಬದಲಾಗುತ್ತ ಹೋಗುತ್ತಾರೆ. ಇದನ್ನೇ ಗುಂಡಪ್ಪನವರು “ಕಂಡ ದೈವಕ್ಕೆಲ್ಲ” ಎಂದಿರಬೇಕು. ಆದರೆ ಇದು ಸರಿಯೇ ಅಲ್ಲವೇ ಎಂದು ಸ್ವಲ್ಪ ವಿಶ್ಲೇಷಿಸೋಣವೇ? ಭಾರತೀಯರಾದ ನಮಗೆ ಎಲ್ಲವು ದೈವವೇ!! ಗಿಡ, ಮರ, ಬಳ್ಳಿ, ನದಿ, ಗುಡ್ಡ, ಬೆಟ್ಟ, ಆಕಾಶ, ಸೂರ್ಯ, ಚಂದ್ರ, ಎಲ್ಲ ಗ್ರಹಗಳು, ಪಕ್ಷಿ, ಮೀನು, ಪ್ರಾಣಿಗಳು, ಎಲ್ಲವು ದೇವರೇ. ಅಷ್ಟೇ ಅಲ್ಲ ಎಲ್ಲದರಲ್ಲೂ ದೈವವನ್ನು ಕಾಣುವ ಸಂಸ್ಕೃತಿ ನಮ್ಮದು. ಅವುಗಳನ್ನೆಲ್ಲ ಕಾಪಾಡುವ ಕಾರಣದಿಂದ ಅವುಗಳಿಗೆಲ್ಲ ದೈವತ್ವವನ್ನು ಆರೋಪಿಸಿದ್ದಾರೆ, ನಮ್ಮ ಪೂರ್ವಜರು. ಒಂದು ರೀತಿಯಲ್ಲಿ ಇದು ಒಳ್ಳೆಯದೇ ಅಲ್ಲವೇ ವಾಚಕರೆ? ಆದರೆ ವ್ಯಕ್ತಿ ಆಂತರ್ಯದಲ್ಲಿ ಬೆಳೆಯುತ್ತಾ ಹೋದಂತೆಲ್ಲ ಅನೇಕದಿಂದ ಏಕಕ್ಕೆ ಬರುವುದೇ ಆಧ್ಯಾತ್ಮ ಸಾಧನೆಯ ಗುರಿ. ಆಕಾರದಿಂದ ನಿರಾಕಾರಕ್ಕೆ ಬರುವುದೇ ಎಲ್ಲ ಸಾಧನೆಯ ಫಲ. ಆದರೆ ನಾವು ಏಕೆ ಈ ದೈವಕ್ಕೆ ಕೈ ಮುಗಿಯುತ್ತೇವೆ? ಇದಕ್ಕೆ ನನ್ನ ಅರಿವಿನ ಪರಿಮಿತಿಯಲ್ಲಿ ವಿವರಿಸುತ್ತೇನೆ. ನಮಗೆ ಆಸೆಗಳುಂಟು. ಆಸೆಗಳು ನಾವು ಈ ಬದುಕಿಗೆ ಅಂಟಿಕೊಂಡಿರುವುದರಿಂದ ಉಂಟು. ಈ ಆಸೆಯ ಪಕ್ಕ ಪಕ್ಕದಲ್ಲೇ ಒಂದು ಭಯವು ಉಂಟು. ಮಾನವರಿಗೆ ಎರಡು ರೀತಿಯ ಭಯಗಳುಂಟು. ಒಂದು ತನ್ನಲ್ಲಿರುವ ವಸ್ತು, ವಿಷಯ ಅಥವಾ ವ್ಯಕ್ತಿಯನ್ನು ಕಳೆದುಕೊಳ್ಳುವ ಭಯ. ಎರಡು, ತಾನು ಆಸೆ ಪಟ್ಟವಸ್ತು, ವ್ಯಕ್ತಿ, ವಿಷಯಗಳು ಸಿಗದೆ ಹೋಗುವ ಭಯ. ಮಾನವನ ಎಲ್ಲ ಭಯಗಳನ್ನೂ ಈ ಎರಡು ಅಂದರೆ ಎರಡೇ ವಿಭಾಗಗಳಲ್ಲಿ ಸೇರಿಸಬಹುದು. ಮೂರನೆಯದು ನನಗೆ ಗೋಚರಿಸುತ್ತಿಲ್ಲ. ಆದರೆ ಈ ಭಯ ಸಹಜವಾದದ್ದೇ. ಮನುಷ್ಯನಿಗೆ ತನ್ನ ಜೀವನದಲ್ಲಿ ತನಗೆ ಸಂಬಂಧಿಸಿದ ಎಲ್ಲ ವ್ಯಕ್ತಿ, ವಿಷಯ ಮತ್ತು ವಸ್ತುವಿನ ಮೇಲೆ ಮಮಕಾರವಿರುತ್ತದೆ. ಈ ಮಮಕಾರವೇ ಈ ಭಯಕ್ಕೆ ಕಾರಣ. ಈ ವ್ಯಕ್ತಿ, ವಿಷಯ ಮತ್ತು ವಸ್ತುಗಳು ಹಲವಿಧದಲ್ಲಿ ಇರಬಹುದು, ತನ್ನವರು, ಅವರಿಗೆ ಸಂಬಂಧಿಸಿದ ವಿಷಯಗಳಾದ, ಆರೋಗ್ಯ, ವಿದ್ಯೆ, ಪರಸ್ಪರ ಸಂಬಂಧಗಳು, ವಿವಾಹಕ್ಕೆ, ಪ್ರೇಮಕ್ಕೆ, ಉದ್ಯೋಗ, ಹಣಕಾಸು, ಹೀಗೆ ಹತ್ತು ಹಲವಾರು ವಿಷಯಗಳಿಗೆ ನಾವು ಅಂಟಿಕೊಂಡಿರುತ್ತೇವೆ. ಅವುಗಳಲ್ಲಿ ಇರುವುದು ಕಳೆದು ಹೋಗುವ ಭಯ ಅಥವಾ ಬಯಸಿದ್ದು ಆಗದೆ ಹೋಗಬಹುದಾದ ಭಯ. ಕಳೆದು ಹೋಗುವುದು ಏಕೆ? ಬಯಸಿದ್ದು ಆಗದೆಹೋಗುವುದು ಏಕೆ? ಎಂದು ಖಚಿತವಾಗಿ ನಮಗೆ ಅರಿಯದಾದಾಗ ಮತ್ತು ಸಂಶಯಗಳಿದ್ದಾಗ, ನಮಗರಿಯದ ಯಾವುದೋ ಶಕ್ತಿ ಅಥವಾ ನಮ್ಮನ್ನು ಕಾಯುವ, ಯಾವುದೋ ಶಕ್ತಿಗೆ ನಾವು ಕೈಮುಗಿದು, ಬೇಡುವದೋ ಅಥವಾ ಶರಣಾಗುವುದೋ ಮಾಡುತ್ತೇವೆ. ಅದನ್ನೇ ಗುಂಡಪ್ಪನವರು “ಆ ವಿಚಿತ್ರಕೆ ಶರಣಾಗೋ” ಎನ್ನುತ್ತಾರೆ. ಭಾರತೀಯರಾದ ನಮಗೆ ಎಲ್ಲವು ದೇವರೇ ಆದ್ದರಿಂದ, ಇಷ್ಟೊಂದು ಬಗೆಬಗೆಯ ದೇವರುಗಳು ನಮ್ಮಲ್ಲಿ, ಹಣಕ್ಕೊಬ್ಬ, ಗುಣಕ್ಕೊಬ್ಬ, ವಿದ್ಯೆಗೊಬ್ಬ, ಆರೋಗ್ಯಕ್ಕೊಬ್ಬ, ಪಾಪನಾಶನಕ್ಕೊಬ್ಬ, ಪರಮಾರ್ಗಕ್ಕೊಬ್ಬ. ಮತ್ತು ಈ ದೇವತೆಗಳನ್ನು ಒಲಿಸಿಕೊಳ್ಳಲು ಹಲವಾರು ವಿಧಾನಗಳು. ದರ್ಶನ, ಅರ್ಚನೆ, ಅಭಿಷೇಕ, ದಾನ, ಧ್ಯಾನ, ಭಜನೆ, ಅನ್ನ ಸಂತರ್ಪಣೆ, ಸಮಾರಾಧನೆ, ಪರೋಪಕಾರದ ಕೆಲಸಗಳು, ಹೋಮ, ಹವನ, ಯಜ್ಞ, ಯಾಗಾದಿಗಳು, ಹೀಗೆ ನಮಗೆ ತೋಚಿದ್ದು ಮತ್ತು ಪರರಿಂದ ಸೂಚಿಸಲ್ಪಟ್ಟ, ಸಾಮ, ದಾನ, ಭೇದ, ದಂಡದಂತ ಚತುರೋಪಾಯಗಳನ್ನೂ ಉಪಯೋಗಿಸಿ, ನಮ್ಮ ಕಾರ್ಯ ಸಾಧನೆಗೆ ಆ ದೇವರನ್ನು ಸದಾಕಾಲ ಒಲಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ಒಂದು ಮಾನಸಿಕ ಸ್ವಯಂ ಚಿಕಿತ್ಸೆ. ನಮ್ಮ ಮನಸ್ಸುಗಳಲ್ಲಿ ಉದ್ಭವಿಸುವ ಹಲವಾರು ಪ್ರಶ್ನೆ ಮತ್ತು ಸಂದೇಹಗಳಿಗೆ ನಾವೇ ಕಂಡುಕೊಳ್ಳುವ ಸಮಾಧಾನ. ಇದು ಆಧ್ಯಾತ್ಮ ಪ್ರಯಾಣದ ಒಂದು ಸ್ತರ. ಅವರವರ ಮಟ್ಟಿಗೆ ಸರಿ. ಆದರೆ ಗುಂಡಪ್ಪನವರು “ತಂಡುಲದಹಿಡಿಯೊಂದು ತುಂಡುಬಟ್ಟೆಯದೊಂದು” ಒಂದು ಹಿಡಿ ಅಕ್ಕಿಗಾಗಿ, ಹೊಟ್ಟೆ ತುಂಬಿಸಿಕೊಳ್ಳಲು, ಗೇಣುದ್ದಬಟ್ಟೆಗಾಗಿ, ಮೈಮುಚ್ಚಲು ಮನುಷ್ಯ ಇಷ್ಟೆಲ್ಲಾ ಮಾಡಬೇಕೆ, ಎಂಬ ಭಾವದಲ್ಲಿ ಒಂದು ವೈರಾಗ್ಯದ ವಿಷಯವನ್ನು ಪ್ರಸ್ತಾಪ ಮಾಡುತ್ತಾರೆ. ಆದರೆ ವೈರಾಗ್ಯವು ಅನುಭವದಿಂದ ಮಾತ್ರ ಬರಲು ಸಾಧ್ಯ. ಅಂತಹ ಅನುಭವವನ್ನು ಕೊಡುವುದೇ ಜೀವನ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-21 )

ಹೊನ್ನೆಂದು ಜಗದಿ ನೀಂ ಕೈಗೆ ಕೊಂಡದನು ವಿಧಿ | ಮಣ್ಣೆನುವನ್, ಅವನವರ ಮಣ್ಣೆನುವೆ ನೀನು || ಭಿನ್ನವಿಂತಿರೆ ವಸ್ತು ಮೌಲ್ಯಗಳ ಗಣನೆಯೀ | ಪಣ್ಯಕ್ಕೆ ಗತಿಯಂತೋ?-ಮಂಕುತಿಮ್ಮ ||

ಪದಗಳ ವಿಸ್ತರಣೆ

ಹೊನ್ನೆಂದು=ಹೊನ್ನು+ಎಂದು, ಬಿನ್ನವಿಂತಿರೆ=ಭಿನ್ನವು+ಇಂತಿರೆ

ಪದಗಳ ತಾತ್ಪರ್ಯ

ಹೊನ್ನೆಂದು=ಹೊನ್ನು+ಎಂದು, ಬಿನ್ನವಿಂತಿರೆ=ಭಿನ್ನವು+ಇಂತಿರೆ

ಪದ್ಯದ ಪೂರ್ತಿ ವಿವರಣೆ

ಯಾವುದನ್ನು ನೀನು ಚಿನ್ನ ಎಂದು ಕೈಗೆ ಎತ್ತಿಕೊಳ್ಳುತೀಯೋ, ಅದು ವಾಸ್ತವದಲ್ಲಿ ಚಿನ್ನವಾಗಿರದೆ, ಮಣ್ಣಂತೆ ನಿಷ್ಪ್ರಯೋಜಕವಾಗುತ್ತದೆ. ಆದರೆ ಕೆಲವು ಬಾರಿ ಬಯಸದೆ ಸಂದ ಭಾಗ್ಯವನ್ನು, ಆ ಪರಮಾತ್ಮನ ಕರುಣೆಯಿಂದವರ ರೂಪದಲ್ಲಿ ಸಂದದ್ದು ನಿನಗೆ ನಿಷ್ಪ್ರಯೋಜಕವಾಗಿ ಕಾಣುತ್ತದೆ. ಹೀಗೆ ವಸ್ತುಗಳ ನಿಜರೂಪ ಗುರುತಿಸುವುದರಲ್ಲಿ ನಾವು ವಿಫಲರಾದರೆ, ಈ ಜಗತ್ತಿನ ವ್ಯಾಪಾರ ನಡೆಯುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು. ನಮ್ಮ ಜೀವನಗಳಲ್ಲಿ ಇದು ಬಹಳ ಸತ್ಯವಾದ ಮಾತು. ನಮಗೆ ವಸ್ತುಗಳು ಬೇಕು. ವ್ಯಕ್ತಿಗಳು ಬೇಕು, ವಿಷಯಗಳು ಬೇಕು. ಆದರೆ ಆ ವಸ್ತು, ವ್ಯಕ್ತಿ, ವಿಷಯಗಳು ನಮಗೆ ಒಳಿತೋ ಇಲ್ಲವೋ ನಮಗೆ ಗೊತ್ತಿಲ್ಲ. ಎಷ್ಟೋ ಬಾರಿ ನಾವು ಇಷ್ಟಪಟ್ಟು ಆಯ್ದುಕೊಂಡದ್ದು ನಮಗೆ ತೊಂದರೆಗಳಿಗೆ, ಮಾನಸಿಕ ಹಿಂಸೆಗೆ, ಕಾರಣವಾಗಬಹುದು. ಹೀಗೆ ಆಗಲಿಕ್ಕೆ ಕಾರಣವೇನು ಎಂದರೆ, ಅದಕ್ಕೆ “ವಿಧಿ” ಯನ್ನು ಕಾರಣರಾಗಿಸುತ್ತಾರೆ ಶ್ರೀ ಗುಂಡಪ್ಪನವರು. ಆದರೆ ಅದು ಹೀಗೂ ಇರಬಹುದು. ನಾವು ಒಂದು ವಸ್ತು, ವ್ಯಕ್ತಿ, ವಿಷಯವನ್ನುಬೇಕು ಎಂದುಕೊಳ್ಳುವುದೇ ತಪ್ಪಿರಬಹುದು. ಅಥವಾ ನಮ್ಮ ಆಯ್ಕೆಯೇ ತಪ್ಪಾಗಿರಬಹುದು. ಹೊರನೋಟಕ್ಕೆ ಆ ವಸ್ತು, ವ್ಯಕ್ತಿ, ವಿಷಯಗಳು ನಮಗೆ ಹಿತವಾಗಿಯೋ, ಸವಿಯಾಗಿಯೋ ಕಂಡರೂ ನಮ್ಮ ದೈಹಿಕ ಮತ್ತು ಮಾನಸಿಕ ಪ್ರಕೃತಿಗೆ ವಿರುದ್ಧವಾಗಿರಬಹುದು. ಹಾಗಾಗಿ ದೋಷ ನಮ್ಮ ಆಯ್ಕೆಯಲ್ಲಿದೆಯೇ ಹೊರತು ಆವಸ್ತು, ವ್ಯಕ್ತಿ, ವಿಷಯದಲ್ಲಿ ಇಲ್ಲ ಅಲ್ಲವೇ?. ಹಾಗಾದಾಗ “ಹೊನ್ನೆಂದು” ನಾವು ವಸ್ತು, ವ್ಯಕ್ತಿ, ವಿಷಯಗಳನ್ನು ಆಯ್ಕೆಮಾಡಿದಾಗ, ಅದು ನಮಗೆ ಹಿತವಾಗಿಲ್ಲದೆ ನಿಷ್ಪ್ರಯೋಜಕವಾದ " ಮಣ್ಣಂತೆ" ತೋರುವುದು ಎಂಬುದು ಇಲ್ಲಿನ ಆಂತರ್ಯ. ಇನ್ನು ನಾವು ಬಯಸದೆ ಬಂದ, ಸಂದ ಮತ್ತು ಪಡೆದುಕೊಂಡ ವಸ್ತು, ವ್ಯಕ್ತಿ, ವಿಷಯಗಳು ನಮಗರಿವಿಲ್ಲದಂತೆಯೇ ನಮಗೆ ಹಿತವನ್ನು ಮಾಡುತ್ತಿರಬಹುದು. ಇದರ ಅನುಭವ ನಮಗೆ ಬಹಳ ಬಾರಿ ಆಗಿರುತ್ತದೆ. ಆದರೆ ಅದು ನಾವು ಇಷ್ಟಪಟ್ಟು ಪಡೆದು ಕೊಂಡಿಲ್ಲವಾದ್ದರಿಂದ ನಮಗೆ ಅದರ ಮಹತ್ವ ಅರ್ಥವಾಗುವುದಿಲ್ಲ. “ಅವನ ದೇಕಣಪ್ಪ ಅದೃಷ್ಟ. ಹಿಂಗೆ ಅಂದ್ಕೊಂಡೆ ಇರ್ಲಿಲ್ಲ ಕಣಯ್ಯಾ. ಎಂಥ ಚಾನ್ಸು ನೋಡು” ಇಂತಹ ಮಾತುಗಳನ್ನು ನಾವು ಎಷ್ಟೋ ಬಾರಿ ಕೇಳಿರುತ್ತೇವೆ. ಇದನ್ನೇ “ಅವನ ವರ” ಎಂದು ಶ್ರೀ ಗುಂಡಪ್ಪನವರು ಹೇಳುತ್ತಾರೆ. ಹಾಗಾದರೆ ನಾವು ಇಷ್ಟಪಟ್ಟದ್ದೆಲ್ಲ ಹಾಗೆ ಆಗುವುದೇ? ಎಂದರೆ ಇಲ್ಲ. ಎಲ್ಲ ಹಾಗಾಗುವುದಿಲ್ಲ. ಆದರೆ ಹೆಚ್ಚಿನಮಟ್ಟಿಗೆ ಹಾಗಾಗುತ್ತದೆ. ಮೇಲ್ನೋಟಕ್ಕೆ ಎಲ್ಲ ಸರಿಯಾಗಿದೆ ಎಂದು ನಾವು ಕಂಡರೂ, ಪ್ರತಿ ವ್ಯಕ್ತಿಯೂ, ತಾನು ಬಯಸಿದ್ದು, ತಾನು ಪಡೆದಿದ್ದು, ಅದರಿಂದ ತಾನು ಅನುಭವಿಸುವ ಕಷ್ಟ, ಸಂಕಟ, ಜಿಗುಪ್ಸೆ, ಇವುಗಳನ್ನು ತೋರ್ಪಡಿಸದೆ, ಆಂತರ್ಯದಲ್ಲಿ ಅನುಭವಿಸುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಏಕೆಂದರೆ ನಾವು ನೀವು ಎಲ್ಲರೂ ಇದನ್ನು ಅನುಭವಿಸಿಯೇ ಇರುತ್ತೇವೆ. ಹಾಗಾದರೆ ನಾವು ಬಯಸುವುದೇ ಬೇಡವೇ? ಎಂದು ವಿಚಾರ ಮಾಡಿದರೆ ನಮಗೆ ಸಿಗುವ ಉದಾಹರಣೆ ಹೇಗಿದೆ. ಒಂದು ತಾಯಿ, ತನ್ನ ಮಗುವಿಗೆ ಏನುಬೇಕು, ಯಾವುದು ಒಳ್ಳೆಯದು, ಯಾವುದರಿಂದ ಆ ಮಗುವಿಗೆ ಹಿತ ಆರೋಗ್ಯಕರ ಎಂದೆಲ್ಲ ಅರಿತು ಸರಿಯಾದ ಸಮಯಕ್ಕೆ ಕೊಡುತ್ತಾಳೆ. ಆದರೆ ಆ ಮಗುವಿಗೆ ಅದು ಅರ್ಥವಾಗದೆ ಕಂಡ ಕಂಡದ್ದಕ್ಕೆಲ್ಲ ರಚ್ಚೆಮಾಡಿ, ಹಠಮಾಡುತ್ತದೆ. ನಮ್ಮ ಪರಿಸ್ಥಿತಿಯೂ ಹಾಗೆ ಇದೆ. ನಮಗೆಲ್ಲರಿಗೆ ತಾಯಿ ಸ್ಥಾನದಲ್ಲಿರುವ ಆ ಪರಮಾತ್ಮ ನಮಗೆ ವಿಧಿ ಪ್ರಕಾರ, ಏನು, ಎಷ್ಟು, ಯಾವಾಗ, ಯಾರ ಮೂಲಕ, ಹಿತವಾದದ್ದನ್ನು ಕೊಡಿಸಬೇಕೋ ಕೊಡಿಸುತ್ತಾನೆ. ಅದನ್ನರಿಯದೆ ನಾವು ಬಯಸಿದ ವಸ್ತು ಸಿಗದೇ ಹೋದರೆ, “ಅಯ್ಯೋ ದೇವರೇ ನನಗೇ ಯಾಕೆ ಹೀಗೆ” ಎಂದು ಆ ದೇವರನ್ನು ಬಯ್ಯುತ್ತ, ನಮ್ಮ “ಹಣೆಬರಹಾನೆ ಇಷ್ಟು” ಎಂದು ನಮ್ಮನ್ನು ನಾವೇ ಹಳಿದುಕೊಳ್ಳುತ್ತಾ ಬದುಕುತ್ತೇವೆ. ನೋಡಿ ಒಂದು ವಿಷಯ. ಒಂದು ನೆಮ್ಮದಿಯ ವಿಷಯ. ಆ ಪರಮಾತ್ಮನ ಉಕ್ತಿ “ನೀನು ನನಗೆ ಶರಣಾಗು. ನಾನು ನಿನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ.” ಎಂದು ಹೇಳಿರುವಾಗ ಮತ್ತೇನು. ಮತ್ತೆ “ನೀ ಏನೂ ಕೇಳಬೇಡ, ಹಾಗೆ ನೀ ಏನು ಕೇಳಿದರೂ ಕೊಡುವೆ. ಆದರೆ ನೀ ಹಾಗೆ ಕೇಳಿ ಪಡೆದುಕೊಂಡ ವಸ್ತುವಿನಿಂದ ಬರುವ ಎಲ್ಲ ದುಃಖ, ಆನಂದ, ನೋವು, ಸಂಕಟ, ಕಷ್ಟ, ಕಾರ್ಪಣ್ಯಗಳನ್ನೆಲ್ಲ ನೀನೇ ಅನುಭವಿಸಬೇಕು. ಆದರೆ ನೀ ನನ್ನನ್ನು ಏನೂ ಕೇಳದಿದ್ದರೆ, ನಿನಗೇನು ಸೂಕ್ತವೋ, ಹಿತವೋ, ಅದನ್ನು ನಾನೇ ನಿನಗೆ ಸರಿಯಾದ ಸಮಯಕ್ಕೆ ಕೊಡುವೆ. ಆಯ್ಕೆ ನಿನ್ನದು” ಎಂದಾಗ. ಮತ್ತೇಕೆ ನಾವು ಕೇಳಬೇಕು?. ಹಾಗೆ ಕೇಳಬೇಕೆಂದರೆ ಆ ಪರಮಾತ್ಮನನ್ನೇ “ನನ್ನ ಮನಸ್ಸಿನಲ್ಲಿ ನಿರಂತರವಾಗಿ ನಿಲ್ಲು ಬಾ” ಎಂದು ಕೇಳಬೇಕು, ಅಲ್ಲವೆ ವಾಚಕರೆ?. ಇನ್ನು ಹೀಗೆ ನಮಗೆ ಬೇಡದ ಹಿತವಲ್ಲದ ವಸ್ತು, ವ್ಯಕ್ತಿ, ವಿಷಯಗಳನ್ನು ಬಯಸಿ ಅದರಿಂದ ಪಡಬಾರದ ಕಷ್ಟಗಳನ್ನು ಪಡುವಾಗ, ಆ ವಿಧಿಯಿಂದ ಸಿಕ್ಕ ವಸ್ತುಗಳ ಬೆಲೆ ನಾವು ಅರಿಯದಾದಾಗ ಇಲ್ಲಿ ಜಗದ್ವ್ಯಾಪಾರದಲ್ಲಿ ವ್ಯತ್ಯಯ ಉಂಟಾಗದೇ ಇನ್ನೇನು ಎನ್ನುವ ಅರ್ಥದಲ್ಲಿ “ಭಿನ್ನವಿಂತಿರೆ ವಸ್ತು ಮೌಲ್ಯಗಳ ಗಣನೆಯೀ ಪಣ್ಯಕ್ಕೆಗತಿಯಂತೋ” ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಹಾಗಾಗಿ ವಾಚಕರೆ, ತಾಯಿ ಸ್ವರೂಪದ ಆ ಪರಮಾತ್ಮನಲ್ಲಿ ಶರಣಾಗಿ ನಮ್ಮ ಆಸೆ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಲು, ನಮ್ಮ ಆಯ್ಕೆಯ ಮೇಲೆ ಆಧಾರಪಡದೆ, ಎಲ್ಲವನ್ನೂ ಆ ಪರಮಾತ್ಮನಿಗೆ ಅರ್ಪಿಸಿ, ನಮಗೆ ಸಿಕ್ಕ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಹೋದರೆ, ನಮಗೇನು ಹಿತವೋ ಅದನ್ನು ಆ ಪರಮಾತ್ಮ ನೀಡುತ್ತಾನೆ, ಅದೇ ನನಗೆ ಹಿತ ಎಂದು ಅರಿತರೆ, ನಮಗೆ ಹಿತ. ಒಟ್ಟಾರೆ ಹೇಳುವುದಾದರೆ, “ಅಹಂಕಾರ” ಬಿಟ್ಟರೆ ಹಿತ ಎನ್ನುವ ಅರ್ಥದಲ್ಲಿದೆ ಈ ಮುಕ್ತಕದ ಆಂತರ್ಯ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-22 )

ಕೃತ್ರಿಮವೋ ಜಗವೆಲ್ಲ | ಸತ್ಯತೆಯದೆಲ್ಲಿಹುದೋ? | ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು || ಚತ್ರವೀ ಜಗವಿದರೋಳಾರ ಗುಣವೆಂತಹುದೋ | ಯಾತ್ರಿಕನೆ, ಜಾಗರಿರೋ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಸತ್ಯತೆಯದೆಲ್ಲಿಹುದೋ=ಸತ್ಯತೆ+ಎಲ್ಲಿ+ಇಹುದೋ, ಕರ್ತೃವೆನಿಸಿದನೆ=ಕರ್ತೃವು+ಎನಿಸಿದನೆ, ಜಗವಿದರೋಳಾರ=ಜಗವು+ಇದರೊಳು+ಯಾರ, ಗುಣವೆಂತಹುದೋ=ಗುಣವು+ಎಂತಹುದೋ,

ಪದಗಳ ತಾತ್ಪರ್ಯ

ಕೃತ್ರಿಮ=ಢಾಂಬಿಕತೆ, ನಾಟಕ, ಬೂಟಾಟಿಕೆ. ಕರ್ತೃವು=ಜಗತ್ತನ್ನು ಸೃಷ್ಟಿಮಾಡಿದ ಶಕ್ತಿ. ಗುಪ್ತ=ಅವ್ಯಕ್ತನಾಗಿ, ಅಮೂರ್ತನಾಗಿ, ಕಣ್ಣಿಗೆ ಕಾಣದೆ. ಯಾತ್ರಿಕ=ಪಯಣಿಗ. ಜಾಗರಿರು-ಜಾಗ್ರತೆಯಾಗಿರು.

ಪದ್ಯದ ಪೂರ್ತಿ ವಿವರಣೆ

ಹಿಂದಿನ ಐದು ಮುಕ್ತಕಗಳಲ್ಲಿ ವೇದಾಂತದ ಹಲವು ವಿಚಾರಗಳನ್ನು ನಮಗೆ ಅರುಹುತ್ತಾ, ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು, ಈ ಜಗತ್ತಿನ ಪ್ರಸ್ತಾಪ ಮಾಡುತ್ತಾರೆ. ಈ ಜಗತ್ತು ಕೃತ್ರಿಮವೆನ್ನುತ್ತಾರೆ. ಇದನ್ನು ಕೇವಲ ಮಾನವರ ಜಗತ್ತಿಗೆ ಅನ್ವಯಿಸಿಕೊಳ್ಳಬೇಕು. ಏಕೆಂದರೆ, ಗಿಡ, ಮರ, ಪಶು ಪಕ್ಷಿ ಮತ್ತು ಅನ್ಯ ಜೀವಿಗಳಲ್ಲಿ ಇಂದಿಗೂ ಕೃತ್ರಿಮತೆ ನಾವು ಕಾಣುವುದಿಲ್ಲ. ಈ ಕೃತ್ರಿಮತೆ ಏನಿದ್ದರೂ ಕೇವಲ ಮಾನವರಿಗೆ ಅನ್ವಯಿಸುತ್ತದೆ. “ಏಕೆ ಹೀಗೆ? ಮಾನವರಲ್ಲಿ ಮಾತ್ರ ಏಕೆ? ಮಾನವರು ಮೊದಲಿನಿಂದಲೂ ಹೀಗೇ ಇದ್ದಾರೆಯೇ ಅಥವಾ ಈ ಕೃತ್ರಿಮತೆ ಕಾಲಕ್ರಮೇಣ ಜನಮಾನಸದಲ್ಲಿ ಹೊಕ್ಕಿದೆಯೇ?” ಎಂಬುದನ್ನು ಯೋಚಿಸಿದಾಗ ನಮಗೆ ಕಾಣುವುದು ಹೀಗೆ. ಮಾನವ ಮೊದಲಿನಿಂದಲೂ ಕೃತ್ರಿಮನಲ್ಲ. ಪ್ರಕೃತಿಯ ಮಗುವಾಗಿ ಪ್ರಕೃತಿಯಲ್ಲಿ ಒಂದಾಗಿ ಅಲ್ಲೇ ಜೀವಿಸುತ್ತಿದ್ದ. ಅವನೂ ಸಹ ಮಿಕ್ಕೆಲ್ಲ ಪ್ರಾಣಿಗಳಂತೆ, ತನ್ನ ಆಹಾರ ಹುಡುಕುವುದು, ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಮತ್ತು ತನ್ನ ಸಂತತಿಯನ್ನು ಬೆಳೆಸುವುದು, ಇಷ್ಟಕ್ಕೆ ತನ್ನ ಚಟುವಟಿಕೆಗಳನ್ನು ಸೀಮಿತಗೊಳಿಸಿಕೊಂಡಿದ್ದ. ಮಾನವ ಕಾಲಕ್ರಮೇಣ ಸಂಘ ಜೀವಿಯಾದ. ಅಲೆಮಾರಿಯಾಗಿದ್ದ ಅವನು ಒಂದು ಕಡೆ ನೆಲೆನಿಲ್ಲಲು ಆರಂಭಿಸಿದ ದಿನದಿಂದ ಅಲ್ಪ ಅಲ್ಪವಾಗಿ ಇವನಲ್ಲಿ ಇದು ತನ್ನದು, ಇದು ತನಗೆ, ಇವರು ತನ್ನವರು ಎಂಬ ಮಮಕಾರದ ಭಾವಗಳು ಬಂದವು. ಮುಕ್ತನಾಗಿದ್ದ ಮನುಷ್ಯ ತನ್ನ ಸುತ್ತ ಒಂದು ವೃತ್ತವನ್ನು ಎಳೆದುಕೊಂಡ. ಆ ವೃತ್ತದಲ್ಲಿ ಇರುವುದೆಲ್ಲ ತನ್ನದು ಎನ್ನುವ ಮಮಕಾರವನ್ನು ಬೆಳೆಸಿಕೊಂಡ. ಕ್ರಮೇಣ ಅವನ ಪರಿವಾರ ಬೆಳೆದಂತೆ, ಆ ವೃತ್ತವನ್ನೂ ದೊಡ್ದದಾಗಿಸುವ ಪ್ರಯತ್ನ. ಹೀಗೇ ಅವನಿಗೆ ವಸ್ತು ಸಂಚಯನ ಅಭ್ಯಾಸವಾಗಿ ಹೋಯಿತು. “ಇಷ್ಟಿದ್ದರೆ ಇನ್ನಷ್ಟರಾಸೆ” “ಕಡಿಮೆ ಸಂಪನ್ಮೂಲಗಳಿಗೆ ಅಧಿಕ ಬೇಡಿಕೆಯಾದರೆ, ಪೈಪೋಟಿ ಬೆಳೆಯುತ್ತದೆ” ಎನ್ನುವುದು ಅರ್ಥಶಾಸ್ತ್ರದ ಸಿದ್ಧಾಂತ. ಆ ಸಿದ್ಧಾಂತದ ಪ್ರಕಾರ, ಮನುಷ್ಯ ಮನುಷ್ಯನ ಮಧ್ಯೆತೀವ್ರ ಪೈಪೋಟಿ. ಎಲ್ಲ ವಿಷಯದಲ್ಲೂ. ಅಲ್ಲಿ ಎಲ್ಲರೂ, ಎಂದಿಗೂ ಮುಂಚೂಣಿಯಲ್ಲಿ ನಿಲ್ಲಲು ಸುಳ್ಳು, ಮೋಸ, ದಗಾ, ಎಲ್ಲವನ್ನೂ ತನ್ನ ಮನೋಭಾವದಲ್ಲಿ ಅಳವಡಿಸಿಕೊಂಡರು. ಯಾರು ಹೆಚ್ಚು ಸುಳ್ಳನ್ನು, ಹೆಚ್ಚು ಸಮರ್ಪಕವಾಗಿ, ಸುಳ್ಳರೆಂದು ಬಯಲಾಗದೆ, ಹೆಚ್ಚು ಸಮಯಕ್ಕೆ ಹೇಳಬಲ್ಲವರೋ ಅವರೇ ಈ ಪೈಪೋಟಿಯಲ್ಲಿ ಗೆಲ್ಲುತ್ತಾ ಬಂದರು. ಗೆಲುವಿಗೆ ಇದು ಒಂದು ಸೂಕ್ತ ಮಾರ್ಗವೆಂದು ಮನಗಂಡು ಅದನ್ನೇ ಅಭ್ಯಾಸಮಾಡಿ, ತಮ್ಮ ಸ್ವಭಾವವಾಗಿಸಿಕೊಂಡರು. “ಋತ”ವೆಂದರೆ ಮನದೊಳಗಿನ ಭಾವ. “ಸತ್ಯ”ವೆಂದರೆ ಆ ಮನದೊಳಗಿನ ಆ ಭಾವ ಹಾಗೇ, ಬದಲಾಗದೆ, ವ್ಯಕ್ತವಾದರೆ ಅದು ಸತ್ಯ. ಆದರೆ ಇಂದು ಋತದಲ್ಲೂ ಕುಟಿಲತೆ, ಸತ್ಯದಲ್ಲೂ ಕುಟಿಲತೆ. ಇದನ್ನೇ ಮಾನ್ಯ ಗುಂಡಪ್ಪನವರು “ಕೃತ್ರಿಮವು ಜಗವೆಲ್ಲ ಸತ್ಯತೆಯೆದಲ್ಲಿಹುದೋ” ಎಂದರು. ಆದರೆ ಇವುಗಳನ್ನೆಲ್ಲ ಮತ್ತು ಎಲ್ಲ ಪ್ರಾಣಿಗಳನ್ನು ಸೃಷ್ಟಿಸಿದ ಆ ಸೃಷ್ಟಿಕರ್ತನೂ ಎಲ್ಲೋ ಗುಹ್ಯನಾಗಿಬಿಟ್ಟಿದ್ದಾನೆ ಎನ್ನುತ್ತಾರೆ, ಶ್ರೀ ಡಿ. ವಿ. ಜಿ. ಅಂದರೆ ಮನುಷ್ಯರ ಮನಸ್ಸುಗಳಲ್ಲಿ ಆ ದೈವ ಭಕ್ತಿ, ಪರಮಾತ್ಮ ಸೃಷ್ಟಿಯಾದ ಈ ಜಗತ್ತನ್ನು ಪೂಜಾ ಭಾವದಿಂದ ನೋಡುವ ಪರಿ, "ಎಲ್ಲವು ಆ ಪರಮಾತ್ಮನ ಸೃಷ್ಟಿ, ಇದನ್ನು ನಾನು ದುರುಪಯೋಗ ಸಿಕೊಳ್ಳಬಾರದು ಮತ್ತು ಅವನು ನಿರ್ಮಿಸಿದ ಲೋಕದಲ್ಲಿ ನಾನೂ ಎಲ್ಲರಂತೆ, ಹಾಗಾಗಿ ದುರಾಸೆ, ದುರ್ಭಾವ, ದುರಾಲೋಚನೆ, ಸುಳ್ಳು, ಮೋಸ, ತಟವಟ ಇವೆಲ್ಲವು ಇರಬಾರದು, ಇದ್ದರೆ ನಾನು ಆ ದೈವದ ಅವಕೃಪೆಗೆ ಪಾತ್ರನಾಗುತ್ತೇನೆ" ಎಂಬ ಭಾವನೆಗಳು ಯಾವುದೂ ಇಲ್ಲದೆ ಸ್ವೇಚ್ಛಾ ಮನೋಭಾವ ಬೆಳೆಸಿಕೊಂಡಿರುವುದರಿಂದ, ಅವನ ಮನಸ್ಸಿನಲ್ಲಿ ಆ ದೈವವಿಲ್ಲದಿರುವುದರಿಂದ, ಆ “ಸೃಷ್ಟಿಕರ್ತನೂ ಎಲ್ಲೋ ಗುಹ್ಯನಾಗಿಬಿಟ್ಟಿದ್ದಾನೆ” ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಆ ದೇವರು ನಮ್ಮೆಲ್ಲರ ಕಲ್ಪನೆಯೆಂತೆ ಇರುವನೋ ಇಲ್ಲವೋ ಎಂಬ ಜಿಜ್ಞಾಸೆ ಬೇಡ. ಆದರೆ ಒಂದು ಮಾತು ಸತ್ಯ. ಆ ದೈವವಿದೆ, ನಾವದರ ಅಧೀನ ಎಂಬ ಭಾವಗಳು, ಮಾನವರು ಸಂಸ್ಕಾರವನ್ನು ಬೆಳೆಸಿಕೊಳ್ಳಲು ಮತ್ತು ಅವರೇ ನಿರ್ಮಿಸಿಕೊಂಡ ಸಮಾಜದಲ್ಲಿ ಒಂದು ಸಂಯಮ ಮತ್ತು ಶಿಸ್ತು ಇರಲು ಕಾರಣವಾಗಿದೆ ಎಂದರೆ ಅದು ಒಳ್ಳೆಯದೇ ಅಲ್ಲವೇ. ಅಂತಹ ದೈವದಲ್ಲಿ ಇಂದು ಭಯ ಭಕ್ತಿಗಳು ಕಾಣೆಯಾಗಿವೆ ಎನ್ನುವ ಅರ್ಥದಲ್ಲಿ “ಆ ಸೃಷ್ಟಿಕರ್ತನೂ ಎಲ್ಲೋ ಗುಹ್ಯನಾಗಿಬಿಟ್ಟಿದ್ದಾನೆ” ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ವಾಚಕರೆ ಇದರ ವಿಚಾರವನ್ನು ಎಲ್ಲರೂ ಮಾಡಲೇಬೇಕು. ಏಕೆಂದರೆ "ಯಾವುದೋ ಒಂದು ಸದ್ವಸ್ತು "ಇದ್ದರೆ ಸಮಾಜ ಒಳ್ಳೆಯ ಸಮಾಜವಾಗಿ ಪರಿವರ್ತನೆಗೊಳ್ಳುತ್ತದೆ ಎಂದು ಅರಿತರೆ, ನಮ್ಮ ಸಮಾಜ ಸುಧಾರಿಸಲು ಎಲ್ಲೋ ಒಂದು ಮಾರ್ಗವಿದೆ ಎಂದು ಅರಿತುಕೊಳ್ಳಬಹುದು. ಎಲ್ಲರೂ ಅದನ್ನು ಸಾಧಿಸಲು ಪ್ರಯತ್ನಿಸಬೇಕು. ಇನ್ನು ಈ ಸಮಾಜದಲ್ಲಿ ಹೇಗಿರಬೇಕೆಂದು ಒಂದು ಎಚ್ಚರಿಕೆಯನ್ನು ನೀಡುತ್ತಾರೆ ಶ್ರೀ ಡಿ. ವಿ. ಜಿ ಯವರು, ಇಂತಹ ವಿಚಿತ್ರವಾದ ಜಗತ್ತಿನಲ್ಲಿ ಯಾರ ಗುಣ ಹೇಗಿರುತ್ತೋ ತಿಳಿಯುವುದು ಕಷ್ಟ ಎನ್ನುತ್ತಾರೆ. ನಯವಂಚಕರಿರುವ ಈ ಜಗತ್ತಿನಲ್ಲಿ ಮೋಸ ಮಾಡುವವರು ಕಡಿಮೆಯಾದರೂ ಮೋಸ ಹೋಗುವವರ ಸಂಖ್ಯೆ ಅಧಿಕ. ಇಲ್ಲಿ ಒಂದು ವಿಷಯ ಹೇಳಬೇಕು. ಮೋಸಮಾಡಲು ಬುದ್ಧಿವಂತಿಕೆ ಬೇಕು. “ಎಲ್ಲ ಬುದ್ಧಿವಂತರೂ ಮೋಸಗಾರರಲ್ಲ. ಆದರೆ ಎಲ್ಲ ಮೋಸಗಾರರೂ ಬುದ್ಧಿವಂತರು” ಎನ್ನುವುದು ಸತ್ಯವಾದ ಮಾತು. ಇಂತಹವರ ಸಂಖ್ಯೆ ಕಡಿಮೆಯಾದರೂ ಅವರ ಬಲೆಗೆ ಬೀಳುವ ಜನರ ಸಂಖ್ಯೆ ಹೆಚ್ಚಾದ್ದರಿಂದ ಎಲ್ಲರೂ ಒಂದಲ್ಲ ಒಂದು ಬಾರಿ ಆ ಮೋಸದ ವಂಚನೆಯ ಕೃತ್ರಿಮತೆಯ, ತಟವಟದ ಜನರ ಬಲೆಯಲ್ಲಿ ಸಿಕ್ಕು ಕಷ್ಟಪಟ್ಟಿರುವವರೇ ಆಗಿರುತ್ತಾರೆ. ಹಾಗಾಗಿ ನೀ ಜಾಗರೂಕನಾಗಿರು ಎಂದು ಎಚ್ಚರಿಕೆಯನ್ನು ನೀಡುತ್ತಾರೆ. ಹಾಗೇ ನೀಡುವಾಗ “ಯಾತ್ರಿಕನೆ” ಎನ್ನುವ ಪದ ಪ್ರಯೋಗ ಮಾಡುತ್ತಾರೆ. ಹೌದು ನಾವೆಲ್ಲರೂ ಈ ಜಗತ್ತಿನಲ್ಲಿ ಜೀವನವೆನ್ನುವ ಪ್ರಯಾಣವನ್ನು ಮಾನವರೂಪದ ಈ ಮಣ್ಣಿನ ಬಂಡಿಯಲ್ಲಿ ಮಾಡುವ “ಪ್ರಯಾಣಿಕ”ರೇ, ಅಲ್ಲವೇ? ಹಾಗಾಗಿ ಈ ಜಗತ್ತು ಕೃತ್ರಿಮತೆ, ಕುಟಿಲತೆ, ಸುಳ್ಳು ಮತ್ತು ಮೋಸದಿಂದ ತುಂಬಿದೆ. ದೈವಭಕ್ತಿಯು ನಶಿಸಿದೆ. ಇಲ್ಲಿ ನೀನು ಜಾಗರೂಕನಾಗಿರು ಎಂದು ಎಚ್ಚರಿಸುವ ಭಾವವೇ ಈ ಮುಕ್ತಕ. ಆದರೆ ಈ ಸ್ಥಿತಿಅ-ನಿವಾರ್ಯ (incurable) ಅಲ್ಲ. ಎಲ್ಲರೂ ಮನಸ್ಸು ಮಾಡಿದರೆ ಸಾಧ್ಯ. ಇಲ್ಲಿ ಕೃತ್ರಿಮತೆ, ಕುಟಿಲತೆ, ಸುಳ್ಳು ಮತ್ತು ಮೋಸಗಳ ಸ್ಥಾನದಲ್ಲಿ ಕರುಣೆ, ಪ್ರೀತಿ, ಪ್ರೇಮ, ಸಹೃದಯತೆ ಮುಂತಾದ ಭಾವಗಳನ್ನು ಬೆಳೆಸಿಕೊಂಡು ನಾವಿರುವ ಜಗತ್ತನ್ನು ಸುಂದರವನ್ನಾಗಿಸಲು ನಾವೆಲ್ಲರೂ ಪ್ರಯತ್ನಪಡೋಣವೆಂದು ಹೇಳುತ್ತಾ, ಇವುಗಳನ್ನೇ ಚಿಂತಿಸುತ್ತಾ ವಿಚಾರಮಾಡುತ್ತಾ ಸುಧಾರಣೆಯ ಮಾರ್ಗ ಹುಡುಕುವ ಪ್ರಯತ್ನವನ್ನು ನಾವು ಸಹ ಮಾಡೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-23 )

ತಿರು ತಿರುಗಿ ತೊಳಲುವುದು ತಿರಿದನ್ನವುಣ್ಣುವುದು | ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು || ಮರಳಿ ಕೊರಗಾಡುವುದು, ಕೆರಳುವುದು ನರಳುವುದು | ಇರವಿದೇನೊಣರಗಳೇ?-ಮಂಕುತಿಮ್ಮ ||

ಪದಗಳ ವಿಸ್ತರಣೆ

ತಿರಿದನ್ನವುಣ್ಣುವುದು=ತಿರಿದು+ಅನ್ನವನ್ನು+ಉಣ್ಣುವುದು, ಇರವಿದೇನೊಣರಗಳೇ=ಇರವು+ಇದೇನು+ಒಣ+ರಗಳೆ,

ಪದಗಳ ತಾತ್ಪರ್ಯ

ತಿರುದು=ಭಿಕ್ಷೆಯೆತ್ತಿ, ಉಣ್ಣುವುದು=ತಿನ್ನುವುದು, ಕೆರಳುವುದು=ಕೋಪಗೊಳ್ಳುವುದು, ರಗಳೆ=ಪರದಾಟ.

ಪದ್ಯದ ಪೂರ್ತಿ ವಿವರಣೆ

ಮನುಷ್ಯ ಮತ್ತೆ ಮತ್ತೆ ಪರದಾಡುವುದು, ನಾವು ಎಲ್ಲ ಕಡೆಯೂ ಕಾಣಬಹುದು. ಪರದಾಡಿ ಅವರಿವರನ್ನು ಕಾಡಿ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವುದು. ಪಡೆದದ್ದು ಹೆಚ್ಚಾದರೆ ಮೆರೆದು ಅಹಂಕಾರ ತೋರಿಸುವುದು. ತಮ್ಮನ್ನು ತಾವು, ಬಹಳ ಸಾಧಿಸಿದೆವೆಂದು ಅಹಂಕಾರದಿಂದ ಮೆರೆಯುವುದು, ಪಡೆದದ್ದನ್ನು ಉಳಿಸಿಕೊಳ್ಳಲು ಅವರಿವರ ಮುಂದೆ ಹಲ್ಲು ಕಿರಿಯುವುದು, ಗಿಂಜುವುದು, ಬೇಡುವುದು ನಾವು ಸರ್ವೇ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣುತ್ತೇವೆ. ತಾವು ಅಂದುಕೊಂಡದ್ದು ಸಿಕ್ಕದಿದ್ದರೆ ಕೋಪಗೊಳ್ಳುವುದು ಹಾಗೂ ಕೈಲಾಗದ ತನದಿಂದ ಸಂಕಟಪಡುವುದು ಅಥವಾ ನರಳುವುದು, ಇದನ್ನೆಲ್ಲಾ ಮಾನ್ಯ ಡಿ.ವಿ.ಜಿ.ಯವರು ಸತ್ವವಿಲ್ಲದ ಒಣ ರಗಳೆ ಅಥವಾ ಸತ್ವವಿಲ್ಲದ ಜೀವನದ ಪರಿ ಎಂದು ಈ ಮುಕ್ತಕದಲ್ಲಿ ಸೂಚ್ಯವಾಗಿ ಹೇಳುತ್ತಾರೆ. ಹೊಟ್ಟೆಪಾಡಿಗಾಗಿಯೇ ಮತ್ತೆ ಮತ್ತೆ ಪರದಾಡುವುದು, ನಮಗೆ ಸೂಕ್ತವೋ ಅಲ್ಲವೋ, ನಾವು ಇಷ್ಟಪಟ್ಟು ಮಾಡುವ ಕೆಲಸವೋ ಅಲ್ಲವೋ, ಆ ಕೆಲಸದಲ್ಲಿ ನಮಗೆ ತೃಪ್ತಿ ಸಿಗುತ್ತದೆಯೋ ಇಲ್ಲವೋ, ಇವೆಲ್ಲವನ್ನೂ ಪರಿಗಣಿಸದೆ ಕೇವಲ ಉದರ ಪೋಷಣೆಗಾಗಿಯೇ ಕೆಲಸ ಮಾಡುವುದು. ಇದು ಅವಶ್ಯಕವೇ ಹೌದು. ಆದರೆ ಹೀಗೆ ಮಾಡುವ ಕೆಲಸದಲ್ಲಿ ಒಂದು ಉತ್ಸಾಹವಿಲ್ಲದೆ, ತೃಪ್ತಿಯಿಲ್ಲದೆ, ಕೇವಲ ಯಾಂತ್ರಿಕವಾಗಿ ನಾವು ನಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ. ನಮ್ಮ ಗುಣಕ್ಕೆ, ನಮ್ಮ ಸ್ವಭಾವಕ್ಕೆ ಹೊಂದುವ ಕೆಲಸ ನಾವು ಮಾಡಬೇಕೆಂದರೂ ಆಗದೆ ಕೇವಲ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತ ರಸಾನುಭವವಿಲ್ಲದೆ, ನೀರಸವಾದ ಜೀವನ ಮಾಡುತ್ತೇವೆ. ಅದನ್ನೇ ಒಣ ರಗಳೆ ಎಂದು ಗುಂಡಪ್ಪನವರು ಹೇಳುತ್ತಾರೆ. “ಉದರ ವೈರಾಗ್ಯವಿದು” ಎಂದು ಹೇಳುವ ಪುರಂದರ ದಾಸರ ಪದದಲ್ಲಿನ ಆಂತರ್ಯವು ಇದೇ ಆಗಿರುತ್ತೆ. ಹೀಗೆ ಹೊಟ್ಟೆಪಾಡಿಗಾಗಿ ಕೆಲಸಮಾಡುವಾಗ, ನಮಗೆ ಬೇಸರ, ಕೋಪ, ದ್ವೇಷ, ಅಸೂಯೆ ಮುಂತಾದವುಗಳೆಲ್ಲ ಮನಸ್ಸಿಗೆ ಬಂದು ಒಂದು ರಸಾನುಭಾವವಿಲ್ಲದೆ ಅತೃಪ್ತಿಯ ಭಾವನೆಯೇ ಇರುವುದು, ಹಾಗಾಗಿ ಈ ಜೀವನವೆಲ್ಲ ಒಂದು ಒಣ ರಗಳೆ ಎಂದು ಹೇಳುತ್ತಾರೆ. ಇದು ಹೀಗೆ ಎಲ್ಲರಿಗೂ ಇರುವುದಿಲ್ಲ. ತಮ್ಮ ಕೆಲಸವನ್ನು ಬಹಳ ಇಷ್ಟಪಟ್ಟು ಮಾಡುವವರೂ ತಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಆಸಕ್ತಿ ತನ್ಮಯತೆ ಮತ್ತು ತೃಪ್ತಿಯನ್ನು ಕಂಡುಕೊಳ್ಳುವವರೂ ಇದ್ದಾರೆ. ಆದರೆ ಅವರ ಸಂಖ್ಯೆ ಬಹಳ ಕಡಿಮೆ. ಬಹಳ ಸಂಖ್ಯೆಯ ಜನ, ಶ್ರೀ ಗುಂಡಪ್ಪನವರು ಹೇಳುವ ಹಾಗೆ ನೀರಸವಾದ ಜೀವನವನ್ನೇ ನಡೆಸುತ್ತಾರೆ. ನಾವು ಸಹ ನಮ್ಮ ನಮ್ಮ ಕಾರ್ಯಕ್ಷೇತ್ರಗಳಲ್ಲಿ ತೃಪ್ತಿಯನ್ನು ಕಂಡುಕೊಳ್ಳಬಹುದೇನೋ ಎಂದು ಆಲೋಚಿಸೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-24 )

ನರರ ಬಯಕೆಗಳೆ ಸುರರ ತಾಯ್ತಂದೆಗಳೋ? | ಸುರರಟ್ಟಹಾಸದಿನೆ ನರಭಕ್ತಿಯೊರಲೋ? || ಪರಕಿಸುವರೇನವರ್ಗಳನ್ಯೋನ್ಯಶಕ್ತಿಗಳ ಧರುಮವೆಲ್ಲಿದರಲ್ಲಿ-ಮಂಕು ತಿಮ್ಮ? ||

ಪದಗಳ ವಿಸ್ತರಣೆ

ತಾಯ್ತಂದೆಗಳೋ?=ತಾಯಿ+ತಂದೆಗಳೋ, ಸುರರಟ್ಟಹಾಸದಿನೆ=ಸುರರ+ಅಟ್ಟಹಾಸದಿ+ಇನೆ, ಪರಕಿಸುವರೇನವರ್ಗಳನ್ಯೋನ್ಯಶಕ್ತಿಗಳ=ಪರಕಿಸುವರೇನು+ಅವರ್ಗಳ+ಅನ್ಯೋನ್ಯ+ಶಕ್ತಿಗಳ, ಧರುಮವೆಲ್ಲಿದರಲ್ಲಿ=ಧರುಮವೆಲ್ಲಿ+ಇದರಲ್ಲಿ,

ಪದಗಳ ತಾತ್ಪರ್ಯ

ನರರ=ಮನುಷ್ಯರ, ಬಯಕೆಗಳೆ=ಆಸೆಗಳೆ, ಸುರರ=ದೇವತೆಗಳ ಅಟ್ಟಹಾಸದಿ=ಆರ್ಭಟದಲ್ಲಿ, ಇನೆ=ಇರಲು, ಒರಲೋ=ಕೂಗೋ, ಪರಕಿಸುವರೇನು=ಪರೀಕ್ಷಿಸುವರೇನು, ಅವರ್ಗಳ=ಅವರೀರ್ವರ, ಶಕ್ತಿಗಳ=ಪರಸ್ಪರ ಶಕ್ತಿಗಳ, ಧರುಮ=ಧರ್ಮ.

ಪದ್ಯದ ಪೂರ್ತಿ ವಿವರಣೆ

ಮನುಷ್ಯರ ಬಯಕೆಗಳೇ ಈ ದೇವತೆಗಳಿಗೆ ತಂದೆ ತಾಯಿಗಳೋ ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು. ಹೌದಲ್ಲವೇ ಈ ವಿಶ್ವದ ಎಲ್ಲವನ್ನೂ ಸೃಷ್ಟಿಸಿ ನಡೆಸಿಕೊಂಡು ಹೋಗುವವ ಆ ಪರಮಾತ್ಮನಾಗಿರುವಾಗ, ಮನುಷ್ಯರು ತಮ್ಮ ತಮ್ಮ ಸಣ್ಣ ಸಣ್ಣ ಬಯಕೆಗಳನ್ನು ಈಡೇರಿಸಿಕೊಳ್ಳಲು ಬೇರೆ ಬೇರೆ ದೇವತೆಗಳನ್ನು ಸೃಷ್ಟಿಸಿಕೊಂಡಿರುವುದರಿಂದ, ಅವರಿಗೆ ನಮ್ಮ ಬಯಕೆಗಳೇ ತಂದೆ ತಾಯಿಗಳ ಸ್ಥಾನದಲ್ಲಿರುವುದು ತಥ್ಯವಲ್ಲವೇ? ಇದನ್ನೇ ಶ್ರೀ ಗುಂಡಪ್ಪನವರು ಹೇಳುತ್ತಾರೆ. ವಿದ್ಯೆಗೆ ಒಂದು ದೇವತೆ, ಹಣಕ್ಕೆ ಒಂದು ದೇವತೆ, ಮಳೆಗೆ ಒಂದು ದೇವತೆ, ಗಾಳಿಗೊಂದು ದೇವತೆ. ನಮಗೆ ಗಿಡ ಮರ ಬಳ್ಳಿಗಳೂ ನದಿ ಬೆಟ್ಟ ಕಾಡುಗಳೂ, ಎಲ್ಲವು ದೇವತಾ ಸ್ವರೂಪವೇ. ಹಾಗಾಗಿ ನಾವೇ ನಮ್ಮ ಕಲ್ಪನಾ ಶಕ್ತಿಯಿಂದ, ಆ ಪರಮಾತ್ಮನ ಸೃಷ್ಟಿ ಎಲ್ಲಕ್ಕೂ ದೇವತಾ ರೂಪವನ್ನು ಕೊಟ್ಟಿರುವುದರಿಂದ, ಮನುಷ್ಯರ ಬಯಕೆಗಳೇ ದೇವತೆಗಳಿಗೆ ತಂದೆ ತಾಯಿ ಸ್ಥಾನದಲ್ಲಿದ್ದಾವೆ, ಎಂದು ಗುಂಡಪ್ಪನವರು ಹೇಳುತ್ತಾರೆ. ಆದರೆ ನಾವು ಯಾವುದನ್ನು ದೇವತೆ ಎಂದು ಕರೆಯುತ್ತೇವೆಯೋ, ಅವುಗಳು, ಆ ಪರಮ ಶಕ್ತಿಯು ಇಡೀ ಸೃಷ್ಟಿಯನ್ನು ನಿಯಂತ್ರಿಸಲು ನಿಯಮಿಸಲ್ಪಟ್ಟು, ಬೇರೆ ಬೇರೆ ರೂಪದಲ್ಲಿ ಇಂದ್ರ, ವರುಣ, ಅಗ್ನಿ, ವಾಯು, ದಿಕ್ಪಾಲಕರು ಎಂದು ಕರೆಸಿಕೊಳ್ಳುತ್ತ, ಈ ಜಗದ್ಯಾಪಾರವನ್ನು ನಡೆಸುತ್ತಿದೆ. ಹಾಗಾಗಿ ಇವರೆಲ್ಲ ಆ ಪರಮಶಕ್ತಿಯ ಅಧೀನದಲ್ಲಿರುವ ಮತ್ತು ಆದೇಶದಂತೆ ನಡೆಯುವವರು. “ಭೀಷಾಸ್ಮಾದ್ ವಾತಃ ಪವತೆ, ಭೀಷೋದೇತಿ ಸೂರ್ಯಃ, ಭೀಷಾಸ್ಮಾದ್ ಅಗ್ನಿಸ್ಚೇಂದ್ರಶ್ಚ” ಎಂದು ವೇದ ಹೇಳುತ್ತದೆ. ಅಂದರೆ ಆ ಪರಮ ಶಕ್ತಿಯ ಅಧೀನದಲ್ಲಿರುವುದೇ ಇವುಗಳೆಲ್ಲ ಎಂದು ಅರ್ಥ. ಅಂತಹ ದೇವತೆಗಳು ತಮ್ಮ ಅಟ್ಟಹಾಸದಿಂದ, ತಮ್ಮ ಅಧಿಪತ್ಯದಿಂದ ಮತ್ತು ಆಧಿಕ್ಯದಿಂದ ಇರುವುದರಿಂದ, ಮನುಷ್ಯರು ಹೆದರಿ ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ಈ ದೇವತೆಗಳನ್ನು ಕುರಿತು ಭಕ್ತಿಯಿಂದ ಹುಯಿಲಿಡುತ್ತಿದ್ದಾರೋ ಏನೋ ಎಂಬ ಅರ್ಥದಲ್ಲಿ “ನರಭಕ್ತಿಯೊರಲೋ” ಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು. ಅಥವಾ ದೇವತೆಗಳು ತಮ್ಮ ದೈವೀ ಶಕ್ತಿಯನ್ನು ಮನುಷ್ಯರ ಮೇಲೆ, ಅವರನ್ನು ಪರೀಕ್ಷಿಸಲು ಮತ್ತು ಮನುಷ್ಯರು ತಮ್ಮ ಭಕ್ತಿಯ ಶಕ್ತಿಯಿಂದ ಈ ದೇವತೆಗಳನ್ನೊಲಿಸಿಕೊಳ್ಳಲು, ಒಬ್ಬರಿಗೊಬ್ಬರು ಪೈಪೋಟಿ ಮಾಡುತ್ತಾ ಇದ್ದಾರೋ ಎಂದು ಒಂದು ಶಂಕೆಯನ್ನು ವ್ಯಕ್ತಪಡಿಸುತ್ತಾರೆ. ಇದರಿಂದ ಎಲ್ಲರೂ ತಾವು ಆ ಪರಮಶಕ್ತಿಯಿಂದ ಸೃಷ್ಟಿಸಲ್ಪಟ್ಟು, ಸಲಹಲ್ಪಟ್ಟು, ಅಸ್ತಿತ್ವದಲ್ಲಿದ್ದೇವೆಂಬ ಮೂಲ ಧರ್ಮವನ್ನೇ ಮರೆತಿಹರೇನು ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು. ಇಲ್ಲಿ ದೇವತೆಗಳನ್ನು ಪೂಜೆ ಮಾಡುವ ಪ್ರಕ್ರಿಯೆಯನ್ನು ವಿಮರ್ಶೆ ಮಾಡಿದ್ದಾರೆ, ಶ್ರೀ ಗುಂಡಪ್ಪನವರು. ನಾನಾ ದೇವತೆಗಳ ಪೂಜೆಯನ್ನು ವಿಮರ್ಶೆ ಮಾಡಿದ್ದಾರೆ. ಆದರೆ ವಿಮರ್ಶೆಯಷ್ಟೇ, ಅದು ಟೀಕೆಯಲ್ಲ. ಏಕೆಂದರೆ ಅನೇಕ ದೇವತಾ ಪೂಜೆಯಿಂದ ಏಕ ದೇವ ಪೂಜೆಗೆ ಹೋಗುವುದೇ ಆಧ್ಯಾತ್ಮ ಚಿಂತನೆಯ ಮತ್ತು ಪ್ರಯಾಣದ ಮೂಲ ಉದ್ದೇಶ. ಹಲವಾರು ದೇವತೆಗಳನ್ನು ಪೂಜಿಸುವುದು ಪ್ರಾಥಮಿಕ ಹಂತ. ಏಕದೈವವನ್ನು ಪೂಜೆಮಾಡುವುದು, ಆಧ್ಯಾತ್ಮದ ಉನ್ನತ ಹಂತ. ಈ ಪೂಜೆಗಳು ಅದರೊಳಗೆ ವೈವಿಧ್ಯತೆ ಮತ್ತು ಹಲ ದೇವತಾ ಪೂಜೆ ಮತ್ತು ಅಲ್ಲಿಂದ ಏಕ ದೈವದ ಆರಾಧನೆಯ ಕ್ರಮ ಇವೆಲ್ಲವನ್ನೂ ವಿಷದವಾಗಿ ತಿಳಿಯಬೇಕು. ನಾವು ಯಾವ ಸ್ತರದಲ್ಲಿದ್ದೇವೆ ಎಂದು ನಮ್ಮನ್ನೇ ನಾವು ಪರೀಕ್ಷಿಸಿಕೊಳ್ಳಬೇಕು ಮತ್ತು ಆಪರ ದೈವದಿಂದ ನಿಯಮಿಸಲ್ಪಟ್ಟ ದೇವತಾ ಆರಾಧನೆಯ ಮೂಲಕ ಆ ಪರದೈವವನ್ನು ಅರಿಯುವುದರ ಪ್ರಯತ್ನ ಮಾಡಬೇಕು. ಅನೇಕದಿಂದ ಏಕಕ್ಕೆ ಹೋಗುವ ಮಾರ್ಗದಲ್ಲಿ ಪಯಣಿಸಿ ಪರಮಾರ್ಥವನ್ನು ಸಾಧಿಸಬೇಕು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-25 )

ಜೀವಗತಿಗೊಂದು ರೇಖಾಲೇಖವಿರಬೇಕು | ನಾವಿಕನಿಗಿರುವಂತೆ ದಿಕ್ಕುದಿನವೆಣಿಸೆ || ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? | ಆವುದೀ ಜಗಕಾದಿ?-ಮಂಕುತಿಮ್ಮ ||

ಪದಗಳ ವಿಸ್ತರಣೆ

ಜೀವಗತಿಗೊಂದು=ಜೀವಗತಿಗೆ+ಒಂದು, ಭಾವಿಸುವುದೆಂತದನು=ಭಾವಿಸುವುದು+ಎಂತೆ+ಅದನು,

ಪದಗಳ ತಾತ್ಪರ್ಯ

ರೇಖಾಲೇಖ=ಒಂದು ಗೆರೆ ಅಥವಾ ನಿರ್ದಿಷ್ಟ ಮಾರ್ಗ, ನಾವಿಕ=ಹಡಗ ನಡೆಸುವವ, ಎಂತೆ=ಹೇಗೆ

ಪದ್ಯದ ಪೂರ್ತಿ ವಿವರಣೆ

ಸಮುದ್ರ ಮಧ್ಯದಲ್ಲಿ ಒಂದು ಹಡಗನ್ನು ನಡೆಸಲು ನಾವಿಕನಿಗೆ ಒಂದು ದಿಕ್ಸೂಚಿ ಇರುತ್ತದೆ. ಅದರ ಸೂಚನೆಯಂತೆ ನಾವಿಕನು ಮುಂದುವರೆಯುತ್ತಾನೆ. ಆಗ ಹಡಗು ಹೋಗಬೇಕಾದ ದಿಕ್ಕಿನಲ್ಲಿ ಹೋಗುತ್ತದೆ. ಅಂತಹ ಒಂದು ದಿಕ್ಸೂಚಿ ಜೀವನದ ಗತಿಗೆ ಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಅಂದರೆ ಜೀವನದ ಗತಿಗೆ ಒಂದು ನೇರ ನಡೆ ಇಲ್ಲ. ಆ ನೇರ ನಡೆ ಬೇಕಾದರೆ ಒಂದು ನೇರ ಗೆರೆ ಬೇಕು ಎನ್ನುತ್ತಾರೆ. ಹೌದು ಇಡೀ ಬದುಕಿಗೆ ಒಂದು ನಿರ್ದಿಷ್ಟ ಗತಿ ಅಥವಾ ಒಂದು ನಿರ್ಧಿಷ್ಟಯಾನದ ದಾರಿ ಇಲ್ಲ. ಒಟ್ಟಾರೆ ಎಲ್ಲರ ಜೀವನದ ಗತಿಯನ್ನೂ ಅವಲೋಕಿಸಿದರೆ, ಏರು ತಗ್ಗುಗಳು, ಏಳು ಬೀಳುಗಳು, ಸುಖದುಃಖಗಳು, ಒಂದೇ ರೀತಿ ಇರದ ಬಂಧ-ಸಂಬಂಧಗಳು. ಹೀಗೆ ಯಾವ ಆಯಾಮದಲ್ಲಿ ನೋಡಿದರೂ ಒಂದು ನಿರ್ದಿಷ್ಟ ಗತಿ ಇಲ್ಲ. ಏಕೆ ಹೀಗೆ, ಎಂದು ಮಂಥನ ಮಾಡಿದರೆ, ನಮಗೆ ತೋರುವುದು ಯಾವುದೋ ಒಂದು ಅವ್ಯಕ್ತ ಶಕ್ತಿಯೇ ನಮ್ಮೆಲ್ಲರ ಜೀವನವನ್ನೂ ನಡೆಸಿಕೊಂಡು ಹೋಗುತ್ತಿದೆ ಎಂದು. ಆವುದಾ ಶಕ್ತಿ ಎಂದು ಅನಾದಿಕಾಲದಿಂದಲೂ ಒಂದು ಜಿಜ್ಞಾಸೆ ನಡೆದೇ ಇದೆ. ಆದರೆ ಇನ್ನೂ ನಿರ್ದಿಷ್ಟ ಉತ್ತರ ಸಿಕ್ಕಿಲ್ಲ. ಒಬ್ಬ ಬಡವ, ಒಬ್ಬ ಧನಿಕ, ಒಬ್ಬ ರೋಗಿ ಇನ್ನೊಬ್ಬ ನಿರೋಗಿ, ಒಬ್ಬ ಅಲ್ಪಾಯುಷಿ ಮತ್ತೊಬ್ಬ ದೀರ್ಘಾಯುಷಿ, ಒಬ್ಬ ಹೆಡ್ಡ, ಮತ್ತೊಬ್ಬ ಅತಿ ಬುದ್ಧಿವಂತ, ಒಬ್ಬ ಸುಂದರ, ಮತ್ತೊಬ್ಬ ಕುರೂಪಿ, ಹೀಗೆ ಹಲವಾರು ವೈವಿಧ್ಯಗಳಿಂದ ಕೂಡಿರುವುದೇ ಜೀವನ. ಹೀಗಿರುವವರು ಹಾಗೇ ಇದ್ದು ಅವರ ಜೀವನ ಅದೇ ಗತಿಯಲ್ಲಿ ಅಂದರೆ ನೇರ ರೇಖೆಯಲ್ಲಿ ಮುಂದುವರೆಯುತ್ತದೆಯೇ? ಎಂದರೆ ಅದೂ ಇಲ್ಲ. ಎಲ್ಲವು ಬದಲಾಗುತ್ತದೆ, ಇಂದು ಇದ್ದಂತೆ ನಾಳೆ ಇರುವುದಿಲ್ಲ. ಎಲ್ಲವು ಕೆಲವೊಂದು ಬಾರಿ ಏರು ಪೇರು. ಏಕೆ ಹೀಗೆ? ಗೊತ್ತಿಲ್ಲ. ಆದರೂ ಮುಂದೆಹೋಗುತ್ತದೆ, ಒಂದು ಅಂತ್ಯವನ್ನು ಕಂಡುಕೊಳ್ಳುತ್ತದೆ. ಯಾವುದೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಎಲ್ಲವು ನಿಗೂಢ. ಆ ನಿಗೂಢತೆಯನ್ನೇ ಎಲ್ಲರೂ ವಿಧಿ, ದೇವರು, ಭಾಗ್ಯ, ಅದೃಷ್ಟ ಹೀಗೆ ನಾನಾ ಹೆಸರುಗಳಿಂದ ಕರೆದರು. ಯಾರಿಗೂ "ಅದು" ಅರ್ಥವಾಗದಿದ್ದರೂ ಅದರ ಹಿಡಿತದಿಂದ ಬಿಡಿಸಿಕೊಳ್ಳಲಾಗದು. ಪ್ರತಿಯೊಬ್ಬ ಜೀವಿಯೂ ತನ್ನ ಪೂರ್ವ ಕರ್ಮದ ಅನುಸಾರ ಅವನ ಜೀವನವನ್ನು ಅನುಭವಿಸುತ್ತಾನೆ, ಎಂದು ನಮ್ಮ ಪೂರ್ವಜರು ಹೇಳಿದ್ದಾರೆ. ಆ ಪೂರ್ವ ಕರ್ಮವು ಅವನಿಗೆ ಅರ್ಥವಾಗುವುದಿಲ್ಲ. ಯಾವ ಪೂರ್ವ ಕರ್ಮದಿಂದ ಇಂದಿನ ವಿದ್ಯಮಾನ ಹೀಗೆ ನಡೆಯುತ್ತಿದೆ ಎಂದು ಅರ್ಥವಾಗುವುದಿಲ್ಲ. ಶುದ್ಧವಾಗಿ, ಪರಮಾತ್ಮನಿಂದ ಬಂದ ಆತ್ಮಕ್ಕೆ, ಈ ಪೂರ್ವ ಕರ್ಮದ ಸಂಚಯನ ಹೇಗೆ ಆಯ್ತು, ಎಂಬುದೇ ಒಂದು ನಿಗೂಢ. ಆ ಪರಮಾತ್ಮನ ಇಚ್ಛೆಯಂತೆ ಎಲ್ಲ ನಡೆಯುತ್ತದೆ ಎನ್ನುತ್ತಾರೆ. ಅವನ ಇಚ್ಚೆಯೆಂದರೆ ಏನು? ಅದು ಏಕೆ ಹೀಗಿರುತ್ತದೆ, ಅದು ಬದಲಾಗುತ್ತಿದ್ದರೂ, ಆ ಬದಲಾವಣೆಗೆ ಕಾರಣವೇನು ಎಂದು ಅರ್ಥವಾಗುವುದಿಲ್ಲ. ಇದರ ಗುಟ್ಟನ್ನು ಛೇದಿಸಲು, ಅನಾದಿಕಾಲದಿಂದಲೂ ಪ್ರಯತ್ನ ನಡೆಯುತ್ತಿದ್ದರೂ ಅದು ಏನು ಎನ್ನುವುದು ಇನ್ನೂ ಸಹ ನಿಗೂಢ. ಇದರ ಮೊದಲು-ಕೊನೆಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂದು ಮಾನ್ಯ ಗುಂಡಪ್ಪನವರು ನಮ್ಮ ಮುಂದೆ ಒಂದು ಪ್ರಶ್ನೆ ಇಡುತ್ತಾರೆ. ಮಾನ್ಯ ವಾಚಕರೆ, ಇದು ನಿಗೂಢ. ಆದರೆ ನಮ್ಮ ಭಾರತೀಯ ಚಿಂತಕರು ಅದಕ್ಕೆ ತಮ್ಮ ತಮ್ಮದೇ ಆದ ಪರಿಭಾಷೆ, ವಿವರಣೆ ಮತ್ತು ವ್ಯಾಖ್ಯಾನಗಳನ್ನು ನೀಡಿದ್ದರೂ ಯಾವುದೂ ನಿರ್ದಿಷ್ಟವಿಲ್ಲ. ಆದರೆ ನಮಗೆ ಒಂದು ಗೊತ್ತು. ಯಾವುದು ನಿರ್ದಿಷ್ಟವಲ್ಲವೋ ಅದನ್ನು ಆ ಪರಮಾತ್ಮನ ಇಚ್ಛೆ ಎಂದುಕೊಂಡು ಅವನಿಗೆ ಶರಣಾಗಿ, ಇದೆಲ್ಲದರ ಬಗ್ಗೆ ಚಿಂತಿಸದೆ, ಬಂದ ಜೀವನವನ್ನು ಸಂತೋಷದಿಂದ ತೃಪ್ತಿಯಿಂದ ಕಳೆದರೆ ಆ ಸಂತೋಷ, ಪ್ರೀತಿ, ಪ್ರೇಮ, ನಿಸ್ವಾರ್ಥತೆ, ತೃಪ್ತಿ, ಶ್ರದ್ಧೆ, ಭಕ್ತಿಗಳೇ ನಮ್ಮ ಜೀವನಕ್ಕೆ ಒಂದು ದಿಕ್ಸೂಚಿಯಾಗಿ ನಮ್ಮನ್ನು ನೆಮ್ಮದಿಯ ದಡಕ್ಕೆ ಮುಟ್ಟಿಸಬಹುದು ಎಂದು ಆಶಿಸೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-26 )

ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ | ಇಷ್ಟ ಮೋಹಕ ದಿವ್ಯ ಗುಣಗಳೊಂದು ಕಡೆ || ಕಷ್ಟ ಭೀಭತ್ಸ ಘೋರಗಳಿನ್ನೊಂದು ಕಡೆ | ಕ್ಲಿಷ್ಟವೀ ಬ್ರಹ್ಮ ಕೃತಿ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಸೃಷ್ಟಿಯಾಶಯವದೇನಸ್ಪಷ್ಟ=ಸೃಷ್ಟಿಯ+ಆಶಯವು+ಅದು+ಏನು+ಅಸ್ಪಷ್ಟ.

ಪದಗಳ ತಾತ್ಪರ್ಯ

ಆಶಯ=ಉದ್ದೇಶ, ಸಂಶ್ಲಿಷ್ಟ=ತೊಡಕಾದದ್ದು, ದಿವ್ಯ =ಸುಂದರ , ಬೀಭತ್ಸ=ಭಯಂಕರ, ಘೋರ=ಕಷ್ಟಕರ, ಕ್ಲಿಷ್ಟ=ಬಿಡಿಸಲಾಗದ ಗಂಟು. ಬ್ರಹ್ಮ ಕೃತಿ=ಈ ಜಗತ್ತಿನ ಸೃಷ್ಟಿ.

ಪದ್ಯದ ಪೂರ್ತಿ ವಿವರಣೆ

ಆಹಾ ಎಂತಹ ವಿಷಯ! ಜಗತ್ತಿನ ಸೃಷ್ಟಿಯನ್ನು ವಿಶ್ಲೇಷಣೆ ಮಾಡುವಂತಹ ವಿಚಾರ. ಈ ಸೃಷ್ಟಿಯಾಗುವುದಕ್ಕೆ ಉದ್ದೇಶ್ಯವು ಏನಿತ್ತು ಎಂದು ಯೋಚಿಸುತ್ತಾರೆ ಮಾನ್ಯ ಗುಂಡಪ್ಪನವರು. ಅದೊಂದು ಬ್ರಹ್ಮಗಂಟು. ಬಿಡಿಸಲಾಗದ್ದು. ಏಕೆಂದರೆ ಎಂತೆಂತಾ ಮಹಾ ಮಹಿಮರು ಈ ವಿಷಯದಲ್ಲಿ ಯೋಚನೆ, ಜಿಜ್ಞಾಸೆ, ತಪಸ್ಸು, ಧ್ಯಾನ ಎಲ್ಲ ಮಾಡಿ ತಮಗೆ ತೋಚಿದ್ದನ್ನು ನಮಗೆ ಉಲ್ಲೇಖಿಸಿ ಕೊಟ್ಟಿದ್ದಾರೆ. ವೈಜ್ಞಾನಿಕ ಪರಿಭಾಷೆಗಳು ಬೇರೆ, ವೇದಾನ್ವಯ ಪರಿಭಾಷೆಗಳು ಬೇರೆ. ಸಿದ್ಧಾಂತಗಳು ಬೇರೆ, ನಂಬಿಕೆಗಳು ಬೇರೆ. ಆದರೆ ಎಲ್ಲೂ ಸಹ ಮತವಿಲ್ಲ. ನಾನು ಇಲ್ಲಿ 9ನೆ ಮುಕ್ತಕಕ್ಕೆ ವಿವರಣೆ ನೀಡುವಾಗ ಸೃಷ್ಟಿಯ ವಿಷಯಕ್ಕೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಮಂಡಿಸಿದ್ದೆ. ಅಂದು ಇಡೀ ವಿಶ್ವದ ಅಗಾಧತೆ, ನಮ್ಮ ಯೋಚನೆಗೆ ನಿಲುಕದಷ್ಟು ವಿಸ್ತಾರದ ಒಂದು ಸೂಕ್ಷ್ಮ ವಿಚಾರ ಮಾಡಿದ್ದೆ. ಆದರೆ ಯಾವ ಶಕ್ತಿ ಈ ಪ್ರಪಂಚವನ್ನು ಆಗ ಮಾಡಿಸಿತೋ, ಅದಕ್ಕೆ ಹೀಗೆ ಮಾಡುವುದಕ್ಕೆ ಯಾವ ಉದ್ದೇಶ್ಯವಿತ್ತು ಎಂಬುದು ಯಾರಿಗೂ ಗೊತ್ತಿಲ್ಲ. ಎಲ್ಲವು ಆ ಪರಮಾತ್ಮನ ಸಂಕಲ್ಪದಿಂದಲೇ ಆದದ್ದು ಎನ್ನುತ್ತಾರೆ. ಆ ಪರಮಾತ್ಮನ ಲೀಲಾ ವಿನೋದವೆನ್ನುತ್ತಾರೆ. ಆದರೆ ಹಾಗೆ ಸಂಕಲ್ಪ ಬರಲು ಕಾರಣವೇನು? ಈ ಲೀಲೆಗೆ ಕಾರಣವೇನು ಎಂದು ಗೊತ್ತಿಲ್ಲ!!!. ಇದು ಅರ್ಥವಾಗದ ವಿಷಯವೆನ್ನುತ್ತಾರೆ ಶ್ರೀ ಗುಂಡಪ್ಪನವರು. ಆದರೆ ಇಡೀ ಸೃಷ್ಟಿಯು ಬಹಳ ವೈವಿಧ್ಯಮಯ. ಒಂದು ಕಡೆ ಸುಂದರ ಮತ್ತೊಂದು ಕಡೆ ಭೀಭತ್ಸ. ನಮಗೆ ನಮ್ಮ ಭೂಮಿಯ ವಿಷಯ ಮತ್ತು ನಾವಿರುವ ಸೌರಮಂಡಲದ ಸ್ವಲ್ಪ ವಿಷಯ ಮಾತ್ರ ಗೊತ್ತು. ಅದರಾಚಿನ ವಿಷಯ ಕೆಲವು ವಿಜ್ಞಾನಿಗಳಿಗೆ ಅಲ್ಪ ಮಾತ್ರ ಗೊತ್ತಿರಬಹುದು. ಆದರೆ ಇಡೀ ಬ್ರಹ್ಮಾಂಡದ ವಿಚಾರ ನಮ್ಮ ಊಹೆಗೂ ನಿಲುಕದ್ದು. ಅದರ ವಿಚಾರ ಬಿಡಿ, ನಾವು ನಮ್ಮ ಭುವಿಯ ವಿಚಾರವನ್ನು ಮಾಡೋಣ. ನಮ್ಮ ಈ ಭುವಿಯ ಸುಂದರತೆಯ ಭಾಗವನ್ನು ನೋಡಿದರೆ ಅಲ್ಲಿ ನಮಗೆ ಸಿಗುವುದು, ಅಪ್ರತಿಮ ಬುದ್ಧಿಶಕ್ತಿಯ ಮನುಷ್ಯ, ಎಷ್ಟೊಂದು ಆವಿಷ್ಕಾರಗಳು, ಸಂಗೀತ, ಭಾಷೆ, ಕಲೆ, ವಿಜ್ಞಾನ, ಸಂಸ್ಕೃತಿ ಸಾಹಿತ್ಯದಂತಹ ಎಲ್ಲ ರೀತಿಯ ವೈವಿಧ್ಯತೆಯಿಂದ ಕೂಡಿ, ಇಡೀ ಸೃಷ್ಟಿಯನ್ನು ತನ್ನ ಉಪಯೋಗಕ್ಕೆ ಸೂಕ್ತವಾಗಿಸಿಕೊಳ್ಳಲು ನಿರಂತರ ಪ್ರಯತ್ನ. ಆ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸೂ ಸಹ ಸಿಕ್ಕಿದೆ, ಹಾಗೆ ಮಾಡುವ ಪ್ರಯತ್ನದಲ್ಲಿ ನಿಸರ್ಗದ ದುರುಪಯೋಗವಾಗಿರುವುದೊಂದನ್ನು ಬಿಟ್ಟರೆ. ಇನ್ನು ಅನ್ಯ ಪ್ರಾಣಿಗಳು, ಒಂದೊಂದೂ ಒಂದೊಂದು ರೀತಿ. ಹಲವಾರು ಬಣ್ಣಗಳು ಅದರೊಳಗೂ ಜಿರಾಫೆ, ಮೊಸಳೆ, ಹಾವು, ಹೇಸರಕತ್ತೆ, ಜಿಂಕೆ, ಹುಲಿ ಸಿಂಹ, ಚಿರತೆ ಮುಂತಾದ ಪ್ರಾಣಿಗಳನ್ನು ನೋಡಿದಾಗ, ಏನು ವಿನ್ಯಾಸ, ಏನು ರಂಗಿನಾಟ, ಆಹಾ, ಆ ಪರಮಾತ್ಮಎಷ್ಟು “ಒಳ್ಳೆಯ ಚಿತ್ರಕಾರ”ನೆನ್ನದ ಮನಸ್ಸಿರದು. ಇನ್ನು ಜಲಗರ್ಭದಲ್ಲಿರುವ ಆ ಚಿತ್ರ ವಿಚಿತ್ರ ಮೀನು ಮತ್ತು ಇತರ ಜಲಚರಗಳನ್ನು ಕಂಡಾಗ, ಅಬ್ಬಾ ಎಂತಹ ಸೃಷ್ಟಿ, ಎಂದು ಉದ್ಗಾರ ತೆಗೆಯದವನು ಅರಸಿಕನೆ ಸರಿ. ಮನುಷ್ಯನಿಗೆ ಮತ್ತು ಕೆಲವು ಪ್ರಾಣಿಗಳಿಗೆ ಒಂದೇ ಬಣ್ಣ. ಇನ್ನು ಪಕ್ಷಿ, ಕೀಟ, ಚಿಟ್ಟೆಗಳ ಪ್ರಪಂಚದಲ್ಲಿ ನುಸುಳಿದರೆ ಈ ಚಿಟ್ಟೆಗಳು ಮತ್ತು ಕೆಲವು ಚಿಟ್ಟೆಗಳನ್ನು ನೋಡಿದರೆ ಆ ಬಣ್ಣಗಳು ಆ ರಂಗೋಲೆಯಂತಹ ಚಿತ್ತಾರಗಳು ಆಹಾ! ಏನು ಸುಂದರ. ಆದರೆ ಅಯ್ಯೋ ನಾವು ಎಲ್ಲ ನ್ಯೂನತೆಗಳನ್ನೂ ಹೊಂದಿರುವ ಮನುಷ್ಯರಾಗಿ ಹುಟ್ಟಿಬಿಟ್ಟೆವಲ್ಲ, ಎಂದು ಒಂದು ಕ್ಷಣ ಅನಿಸಿಯೇ ಅನಿಸುತ್ತದೆ. ಗಿಡಮರಗಳು, ಹೂ ಹಣ್ಣುಗಳ ಪ್ರಪಂಚವೇ ಬೇರೆ. ವರ್ಣಿಸಲು ಪದಗಳೇ ಸಾಲದು. ಇದು ಈ ಸೃಷ್ಟಿಯ ಸುಂದರತೆಯ ಒಂದು ಮುಖ. ಇನ್ನು ಭೀಭತ್ಸದ, ಭೀಕರತೆಯ ಆಯಾಮವನ್ನು ನೋಡಿದರೆ, ರುದ್ರ ಭೀಕರತೆಯನ್ನು ಕಾಣಬಹುದು. ಸೃಷ್ಟಿಯ ಅಂದಗೆಡಿಸುವ ಮತ್ತು ಪ್ರಾಣ ಹಾನಿಮಾಡುವ ಧಾರಾಕಾರವಾಗಿ ಸುರಿದು ಪ್ರವಾಹವನ್ನು ಸೃಷ್ಟಿಸುವ ಮಳೆ, ಧೂಳಿನಿಂದ ಕೂಡಿದ ಬಿರುಗಾಳಿ, ಕಾಳ್ಗಿಚ್ಚು, ಭೂಕಂಪಗಳು, ಸುನಾಮಿಗಳು, ಅಗ್ನಿ ಪರ್ವತಗಳು, ಅನ್ಯ ಪ್ರಾಣಿಗಳಿಗೆ ಪ್ರಾಣ ಭಯವನ್ನುಂಟು ಮಾಡುವ ಭಯಂಕರ ಪ್ರಾಣಿಗಳು, ಹೀಗೆ ಹತ್ತು ಹಲವಾರು ಭೀಕರಗಳೂ ಈ ಜಗತ್ತಿನಲ್ಲಿ ಇವೆ. ಪ್ರೀತಿ ಪ್ರೇಮಗಳು, ಸ್ನೇಹ ಸೌಹಾರ್ದಗಳು, ಒಲುಮೆ ಔದಾರ್ಯಗಳು,ಧರ್ಮ, ದಯಾ-ದಾಕ್ಷಿಣ್ಯಗಳಂತಹ ಸುಂದರ ಭಾವಗಳು ಮನುಷ್ಯರಲ್ಲೇ ಅಲ್ಲ ಹಲವಾರು ಪ್ರಾಣಿ ಪಕ್ಷಿಗಳಲ್ಲೂ ನಮಗೆ ಕಾಣಸಿಗುವುದು. ಇದು ಭಾವನೆಗಳ ಸುಂದರತೆಯಾದರೆ, ಇನ್ನು ಕೋಪ, ದ್ವೇಷ, ರೋಷ, ಅಸೂಯೆ, ಅಹಂಕಾರ, ದುರಾಸೆ, ಮೋಹ, ಲಂಪಟತನ, ಅವ್ಯವಹಾರ, ವ್ಯಭಿಚಾರ ಇಂತಹ ದುರ್ಗುಣಗಳನ್ನು ಹೊಂದಿರುವ ಮನುಷ್ಯರೇ ಅಧಿಕ. ಪ್ರಾಣಿಗಳಲ್ಲೂ ಈ ರೀತಿಯ ಭಾವಗಳು ಇದ್ದರೂ ಅವು ಅಸ್ತಿತ್ವದ ಹೋರಾಟಕ್ಕೆ ಮಾತ್ರ ಸೀಮಿತ. ಆದರೆ ಮನುಷ್ಯ ಮಾತ್ರ ಅನಿಯಮಿತ ದುಷ್ಟ. ಒಂದು ಕಾಡಿನಲ್ಲಿ ನೀವು ಒಬ್ಬರೇ ಹೋಗುವಾಗ, ಒಂದು ಹುಲಿಯೋ ಸಿಂಹವೋ ಎದುರು ಬಂದರೆ ಹೆದರಬೇಕಾಗಿಲ್ಲ. ಏಕೆಂದರೆ ಅದು ಹಸಿದಿದ್ದರೆ ಮಾತ್ರ ನಿಮ್ಮ ಮೇಲೆರಗುವುದು. ಆದರೆ ಒಬ್ಬ ಮನುಷ್ಯ ಎದುರಿಗೆ ಬಂದರೆ, ನೀವು ಖಂಡಿತ ಹೆದರಿ ನೀರಾಗತ್ತೀರಿ. ಏಕೆಂದರೆ, ಮಾನವನಿಗೆ ಅನ್ಯರ ಮೇಲೆರಗುವುದಕ್ಕೆ ಕಾರಣವೇ ಬೇಕಿಲ್ಲ. ಇಂತಹ ವೈವಿಧ್ಯಮಯ ಜಗತ್ತನ್ನು ಸೃಜಿಸಲು ಆ ಪರಮಾತ್ಮನಿಗೆ ಏನು ಕಾರಣವಿತ್ತು. ಏನೋ ಇದ್ದಿರಬಹುದು ನಮಗೆ ಗೊತ್ತಿಲ್ಲ, ಆದರೆ ಮೇಲೆ ಹೇಳಿದ ಎಲ್ಲವನ್ನೂ ಒಳಗೊಂಡ ಸೃಷ್ಟಿಯನ್ನು ಏಕೆ ಸೃಷ್ಟಿಸಿದ ಎನ್ನುವುದು ಒಂದು ಚಿದಂಬರ ರಹಸ್ಯ. ಯಾರಿಗೂ ಅರ್ಥವಾಗದು ಎನ್ನುವ ಅರ್ಥದಲ್ಲಿ ಶ್ರೀ ಗುಂಡಪ್ಪನವರು ಈ ಮುಕ್ತಕವನ್ನು ರಚಿಸಿದ್ದಾರೆ. ಅರ್ಥವಾಗುವುದಿಲ್ಲಪ್ಪ,ಹೌದು ಅದಕ್ಕೆ ನಾವು ಏನು ಮಾಡಬೇಕು? ಎಂದರೆ ಒಳ್ಳೆಯದನ್ನು ಆರಾಧಿಸೋಣ, ಅಭಿನಂದಿಸೋಣ, ಸೃಷ್ಟಿಕರ್ತನಿಗೆ ವಂದಿಸಿ ಕೃತಜ್ಞತೆ ಸಲ್ಲಿಸೋಣ, ಒಳ್ಳೆಯದನ್ನು ಮತ್ತು ಸುಂದರವಾದದ್ದನ್ನು ಕಾಪಾಡೋಣ, ಕೆಟ್ಟದ್ದು ಅನಿವಾರ್ಯವಾದರೆ, ವಿಧಿಯೆಂದು ಅನುಭವಿಸೋಣ, ಸಾಧ್ಯವಾದರೆ ನಿವಾರ್ಯವನ್ನು ನಿವಾರಿಸೋಣ, ಮನುಷ್ಯ ಪ್ರಯತ್ನವನ್ನು ಸುಮುಖವಾಗಿ ತೆಗೆದುಕೊಂಡು ಹೋಗೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-27 )

ಧರೆಯ ಬದುಕೇನದರ ಗುರಿಯೇನು ಫಲವೇನು? | ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ || ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ | ನರನು ಸಾದಿಪುದೇನು?-ಮಂಕುತಿಮ್ಮ ||

ಪದಗಳ ವಿಸ್ತರಣೆ

ಪದಗಳ ತಾತ್ಪರ್ಯ

ಧರೆ=ಭೂಮಿ, ಬಳಸು=ಸುತ್ತು, ಪರಿಭ್ರಮಣೆ=ಸುತ್ತಾಟ, ಮೃಗ=ಪ್ರಾಣಿ, ಖಗ=ಪಕ್ಷಿ

ಪದ್ಯದ ಪೂರ್ತಿ ವಿವರಣೆ

ಈ ಭೂಮಿಯಲ್ಲಿ ಜನಿಸಿದ ನಾವು ಮತ್ತು ನಮ್ಮ ಬದುಕು, ಇದರ ಗುರಿಯೇನು? ಇದಕ್ಕಿರುವ ಪ್ರಯೋಜನವೇನು? ಸುಮ್ಮನೆ ಸುತ್ತಾಟ. ಕೇವಲ ಪ್ರದಕ್ಷಿಣೆ ಬಂದ ಹಾಗೆ. ಕೇವಲ ಹೊಟ್ಟೆ ಪಾಡಿನ ಜೀವನ. ಪ್ರಾಣಿ ಪಕ್ಷಿಗಳೂ ಸಹ ಈ ರೀತಿಯ ಹೊಟ್ಟೆ ಪಾಡಿನ ಜೀವನ ಮಾಡುತ್ತವೆ. ನಾವು ಅದಕ್ಕಿಂತ ಉತ್ತಮರೇನು ಅಲ್ಲ. ಇದೆಲ್ಲದರಿಂದ ಮನುಷ್ಯರು ಸಾಧಿಸುವುದೇನು? ಎಂದು ಈ ಮುಕ್ತಕದಲ್ಲಿ ಕೆಲವು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಾರೆ. ಇದೊಂದು ಸುಂದರವಾದ ಮುಕ್ತಕ. ಆಂತರ್ಯದಲ್ಲಿ ಅಡಗಿರುವ ಭಾವ ಬೇಸರದ, ನಿರಾಸೆಯ ಭಾವ.“ಮಾನವ ಜನ್ಮ ದೊಡ್ಡದು” ಎಂದು ದಾಸರೂ ಸಹ ಹೇಳಿದರು. ಬೇರೆ ಎಲ್ಲ ಪ್ರಾಣಿಗಳಿಗಿಂತಲೂ ನಾವೇನು ಭಿನ್ನ? ಆ ಪ್ರಾಣಿಗಳೂ ಹೊಟ್ಟೆ ಹೊರೆಯುತ್ತವೆ, ತಮ್ಮ ಸಂತತಿಯನ್ನು ಬೆಳೆಸುತ್ತವೆ. ತಮ್ಮ ಇರುವಿಕೆಗೆ ಹೋರಾಡುತ್ತವೆ ಮತ್ತೆ ಸಾಯುತ್ತವೆ. ನಾವು ಅಂದರೆ ಮನುಷ್ಯರೂ ಸಹ, ಇವುಗಳನ್ನು ಮಾಡುತ್ತೇವೆ. ಆದರೆ ಮಾನವರಾದ, ನಾವು ಉತ್ತಮ ಜೀವಿಗಳು ಎಂದು ಕರೆದುಕೊಳ್ಳಲು ನಮ್ಮ ಸಾಧನೆಯೇನು? ಎಂದು ಪ್ರಶ್ನಿಸುತ್ತಾ, ಒಂದು ಅವಲೋಕನಕ್ಕೆ ಆಸ್ಪದ ಈ ಮುಕ್ತಕದಲ್ಲಿ ಮಾಡಿಕೊಡುತ್ತಾರೆ, ಮಾನ್ಯ ಗುಂಡಪ್ಪನವರು. ಅನಾದಿ ಕಾಲದ ಮಾನವನ ಮತ್ತು ಪ್ರಾಣಿಗಳ ಬದುಕುವ ಶೈಲಿಯನ್ನು ಅವಲೋಕಿಸಿದರೆ ನಮಗೆ ವೇದ್ಯವಾಗುವುದು ಒಂದು ವಿಷಯ. ಪ್ರಾಣಿಗಳ ಜೀವನದಲ್ಲಿ ಏರು ಪೇರು ಇಲ್ಲ. ಮನುಷ್ಯನ ದುರಾಸೆಯಿಂದ ಉಂಟಾದ ಅಭಾವ ಅನಾನುಕೂಲಗಳನ್ನು ಬಿಟ್ಟರೆ ಬೇರೆ ಯಾವ ಬದಲಾವಣೆಯೂ ಇಲ್ಲ. ಆದರೆ ಮನುಷ್ಯನೋ ಬಹಳ ಬದಲಾಗಿದ್ದಾನೆ. ಪ್ರಗತಿಯ ಪಥದಲ್ಲಿರುವವನು, ಪುರೋಗಾಮಿ, ಎಂದೆಲ್ಲ ಹೊಗಳಿಕೆಗೆ ಪಾತ್ರನಾದ ಈ ಮನುಷ್ಯನ ಬದಲಾದ ಸ್ಥಿತಿಯನ್ನು ಗಮನಿಸಿದರೆ ನಮಗೆ ಕಾಣುವುದು ಒಂದು ಬೇರೆಯೇ ಚಿತ್ರ, ಬಹಳ ವಿಚಿತ್ರ. ಉತ್ತರೋತ್ತರ ಬದಲಾವಣೆಗೆ ಪ್ರಗತಿ ಎಂದು ಹೆಸರು. “ತಮಸೋಮಾ ಜ್ಯೋತಿರ್ಗಮಯ” ಕತ್ತಲೆಯಿಂದಬೆಳಕಿಗೆ. “ಅಸತೋಮಾ ಸದ್ಗಮಯ” ಅಸತ್ಯದಿಂದ ಸತ್ಯದೆಡೆಗೆ, ನಮ್ಮ ನಡಿಗೆಯಾದರೆ ಅಂದು ಸಕಾರಾತ್ಮಕವಾದ ಬೆಳವಣಿಗೆ ಮತ್ತು ಪ್ರಗತಿಪರ ಬದಲಾವಣೆ, ಆದರೆ ಅಂತಹ ಬದಲಾವಣೆಯಾಗಿದೆಯೇ? ಖಂಡಿತ ಇಲ್ಲ. ವಿಜ್ಞಾನದಲ್ಲಿ ಪ್ರಗತಿ? ಅಣು ಬಾಂಬು, ಮುಂತಾದ ಮಾರಕಾಸ್ತ್ರಗಳ ತಯಾರಿಕೆ, ನಾಶಕ್ಕೆ ನಾಂದಿ. ವೇಷಭೂಷಣದಲ್ಲಿ ಪ್ರಗತಿ? ಮೈಮುಚ್ಚುವುದಕ್ಕಿಂತ ತೋರುವುದೇ ಅಧಿಕ!!. ಭಾಷೆಯಲ್ಲಿ ಪ್ರಗತಿ? ನಮಗೆ ಯಾವುದೇ ಭಾಷೆಯೂ ಸರಿಯಾಗಿ ಮಾತನಾಡಲು, ಓದಲು ಬರೆಯಲು ಬರುವುದಿಲ್ಲ. ಸಮಾಜದಲ್ಲಿ ಪ್ರಗತಿ? ಸೌಹಾರ್ದ ಭಾವ, ಸ್ನೇಹ, ಪ್ರೀತಿ-ಪ್ರೇಮ, ಅನ್ಯೋನ್ಯ ಜೀವನ, ಒಟ್ಟು ಕುಟುಂಬಗಳ ಸಹ ಜೀವನಶೈಲಿ, ಹಿರಿಯರಲ್ಲಿ ಗೌರವ, ಮಕ್ಕಳಲ್ಲಿ ಮಮತೆ, ಕೆಲಸದಲ್ಲಿ ಶ್ರದ್ಧೆ, ದೈವದಲ್ಲಿ ಭಕ್ತಿ, ಮುಂತಾದ್ಯಾವುದಕ್ಕೂ ಮೂರು ಕಾಸಿನ ಬೆಲೆ ಇಲ್ಲದೆ, ಕೇವಲ ಸ್ವಾರ್ಥ, ದ್ವೇಷ, ಲಾಲಸೆ, ಲಂಪಟತನ, ಮೋಸ, ದಾರಿದ್ರ್ಯ, ಭೌದ್ಧಿಕ ದಿವಾಳಿತನ, ಮೌಲ್ಯಗಳ ದಿವಾಳಿತನ, ತುಂಬಿದೆ. ಇದು ಪ್ರಗತಿಯೇ? ಇನ್ನು ವಿದ್ಯಾಭ್ಯಾಸದಲ್ಲಿ ಪ್ರಗತಿ? ಸತ್ವಹೀನ, ಸತ್ಯ ರಹಿತ, ಆಳವಾದ ಅಭ್ಯಾಸವಿಲ್ಲದ, ವ್ಯಕ್ತಿತ್ವವನ್ನು ರೂಪಿಸುವಂತಹ ಅಭ್ಯಾಸಕ್ರಮವಿಲ್ಲದ, ಕೇವಲ ಹೊಟ್ಟೆಪಾಡಿಗಾಗಿ,ವಿದ್ಯೆಇಲ್ಲದಿದ್ದರೂ ವಿದ್ಯಾವಂತರೆನ್ನಿಸಿಕೊಳ್ಳುವ, ವ್ಯಕ್ತಿತ್ವವಿಲ್ಲದಿದ್ದರೂ ವ್ಯಕ್ತಿಗಳೆನಿಸಿಕೊಳ್ಳುವವರನ್ನು ತಯಾರು ಮಾಡುವುದಕ್ಕೆ, ಪ್ರಗತಿ ಎಂದು ಹೆಸರೇ? ಇನ್ನು ಆರ್ಥಿಕವಾಗಿ ನಾವು ಬಹಳಷ್ಟು ಪ್ರಗತಿಯನ್ನು ಸಾಧಿಸಿದ್ದೇವೆಂದು ಕೊಚ್ಚಿಕೊಳ್ಳುವ ನಮ್ಮ ಆರ್ಥಿಕತಜ್ಞರ ಅವಿವೇಕಕ್ಕೆ ಏನು ಹೇಳುವ? ಸಸ್ಯಶ್ಯಾಮಲವಾಗಿರುತ್ತಿದ್ದ ನಮ್ಮ ಹಳ್ಳಿಗಳೆಲ್ಲವು ಇಂದು ಬರಡುಬೆಂಗಾಡಾಗಿದೆ. ಹಳ್ಳಿಯ ಜನರೆಲ್ಲರೂ ಪಟ್ಟಣಕ್ಕೆ ವಲಸೆ. ಬಡವ ಬಲ್ಲಿದರ ನಡುವಿನ ಅಂತರ ಇನ್ನಷ್ಟು ವಿಸ್ತಾರ. ಇಡೀ ಸಮುದಾಯದ ಸಂಪತ್ತನ್ನು ಅಧಿಕಾರ ಬಲದಿಂದ, ವಶೀಲಿಯ ಬಲದಿಂದ ಕೇವಲ ಕೆಲವೇ ವ್ಯಕ್ತಿಗಳು ತಮ್ಮದಾಗಿಸಿಕೊಳ್ಳುವ ಹುನ್ನಾರ. ಯಾರಿಗೂ ಒಟ್ಟು ಸಮಾಜದ ಆರ್ಥಿಕ ಪ್ರಗತಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಪ್ರಜೆಗಳಿಂದ ಆಯ್ಕೆಯಾಗಿ, ಪ್ರಜಾಪಾಲನೆ ಮಾಡಲು ಅಧಿಕಾರವನ್ನು ಸ್ವೀಕರಿಸಿದ ದಿನದಿಂದಲೇ ಪ್ರಜೆಗಳ ಪೀಡನೆ ಶುರುವಾಗುವುದು ಪ್ರಗತಿಯೇ? ಭಾಷೆ, ಜಾತಿ, ಭೂಮಿ, ನೀರು, ದೇವರು, ಪಂಗಡ, ಮುಂತಾದವುಗಳಿಗಾಗಿ ನಿರಂತರ ಹೊಡೆದಾಟ, ಯುದ್ಧ. ಇದು ಪ್ರಗತಿಯೇ? ಯಾವುದೇ ವಿಷಯವನ್ನು ನೋಡಿದರೂ ಸತ್ವಹೀನತೆ ಮತ್ತು ಸತ್ಯಹೀನತೆ ಇದು ಪ್ರಗತಿಯೇ? ಹಾಗಾಗಿ ನರರ ಅಂದರೆ ನಾವು ಮನುಷ್ಯರ ಸಾಧನೆ ಏನೂ ಇಲ್ಲ.ನಾವು ಯಾವುದನ್ನು ಇಂದು ಸಾಧನೆ ಎಂದು ಕರೆಯುತ್ತಿದ್ದೇವೋ ಅದು ಸಾಧನೆಯಲ್ಲ. ಅಧೋಗತಿ. ಹೆತ್ತ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೋ, ಅನಾಥಾಶ್ರಮಕ್ಕೋ, ಇಲ್ಲ ಬೀದಿಯಲ್ಲಿ ಭಿಕ್ಷೆ ಬೇಡಲು ಅಟ್ಟುವ ಸಮಾಜ ನಮ್ಮದಾಗಿರಲಿಲ್ಲ. ಇಂದು ಹಾಗಾಗಿದೆ ಎಂದರೆ, ಇದು ಪ್ರಗತಿಯೇ ವಾಚಕರೆ? ಇದನ್ನೆಲ್ಲ ಕಂಡು ಹೊಟ್ಟೆಯುರಿಯಬೇಕು, ಕೋಪಬರಬೇಕು, ಇದು ಸರಿಯಿಲ್ಲ, ಇದು ಬದಲಾಗಬೇಕು, ಸತ್ಯದ, ಸತ್ವದ, ತತ್ವದ, ಶ್ರದ್ಧೆಯ, ಪ್ರೀತಿ ಪ್ರೇಮಗಳ, ಸ್ನೇಹ ಸೌಹಾರ್ದತೆಗಳ ಪುನರುತ್ಥಾನವಾಗಬೇಕು. ಮುಂದಿನ ಪೀಳಿಗೆಗೆ ಒಂದು ಸುಂದರವಾದ ಸಮಾಜದ ನಿರ್ಮಾಣವಾಗಬೇಕು. ಹಾಗಾಗದಿದ್ದಲ್ಲಿ ನಮ್ಮೆಲ್ಲರ ಸರ್ವಾಂಗೀಣ ಅಂದರೆ ಸಮಗ್ರ ನಾಶ ಖಂಡಿತ. ನಮ್ಮೆಲ್ಲರ ಪತನ ಖಂಡಿತ. ಸರಿಪಡಿಸುವ ಕೆಲಸ ತ್ವರಿತವಾಗಿ ಶುರುವಾಗಬೇಕು. ವಾಚಕರೆ, ನಮ್ಮ ನಮ್ಮ ವೃತ್ತಗಳನ್ನು ಬದಲಾಯಿಸಲು ನಾವು ಪ್ರಯತ್ನಿಸಿ ಆ ವೃತ್ತವನ್ನು ದೊಡ್ಡದಾಗಿಸಿ, ನಮ್ಮ ಕಾರ್ಯಕ್ಷೇತ್ರವನ್ನು ಇಡೀ ಸಮಾಜಕ್ಕೆ ವಿಸ್ತರಿಸಿ, ಈ ರೋಗಿಷ್ಟ ಸಮಾಜವನ್ನು ಬದಲಾಯಿಸಲು ಪ್ರಯತ್ನಿಸುವ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-28 )

ಕಾರುಣ್ಯ ಸರಸ ಸೌಂದರ್ಯ ರುಚಿಗಳೇ ಸೃಷ್ಟಿ | ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ || ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ || ತೋರುವುದಾವುದು ದಿಟವೋ?-ಮಂಕುತಿಮ್ಮ |

ಪದಗಳ ವಿಸ್ತರಣೆ

ಕಾರಣಮೆನಿಪ್ಪವೊಲು=ಕಾರಣ+ವೆನಿಪ್ಪ+ವೊಲು, ತೋರ್ಪುದೊಂದು=ತೋರ್ಪುದು+ಒಂದು, ಕಟುಕತೆಗಳೆನಿಪುದಿನ್ನೊಂದು=ಕಟುಕತೆಗಳೇ+ಎನಿಪುದು+ಇನ್ನೊಂದು, ತೋರುವುದಾವುದೋ=ತೋರುವುದು+ಅದು+ಆವುದೋ.

ಪದಗಳ ತಾತ್ಪರ್ಯ

ಕಾರುಣ್ಯ=ಅನುಕಂಪ, ಸರಸ=ವಿನೋದ, ವೆನಿಪ್ಪ=ಎನ್ನಿಸುವ, ವೊಲು=ತರಹೆ / ರೀತಿ, ಕಾರ್ಪಣ್ಯ=ಬಡತನ, ಕಟುಕತೆಗಳು=ಕಷ್ಟ ಮತ್ತು ಕ್ಲಿಷ್ಟತೆಗಳು, ಎನಿಪುದು=ತೋರುವುದು. ದಿಟ=ಸತ್ಯ,ಚಣ=ಕ್ಷಣ.

ಪದ್ಯದ ಪೂರ್ತಿ ವಿವರಣೆ

ಸಮಗ್ರ ಜೀವನದ ಚಿತ್ರದಲ್ಲಿ, ಈ ಜಗದ್ವ್ಯಾಪಾರಕ್ಕೆ, ಒಂದು ಬಾರಿ ಎನಗೆ, ಮಾನವರ ನಡುವಿನ ಕರುಣೆ, ವಿನೋದ ಸೌಂದರ್ಯ ಮುಂತಾದ ಸುಭಾವಗಳೇ ಕಾರಣವೆನಿಸುತ್ತದೆ. ಮತ್ತೆ ಕೆಲವು ಬಾರಿ ಜೀವನದ ಕಷ್ಟದುಃಖಗಳು, ಬಡತನ ಮತ್ತು ಬಡತನದಿಂದ ಕೂಡಿದ ಬದುಕಿನ ಕ್ಲಿಷ್ಟತೆಯಿಂದ ಕೂಡಿದ ಕಷ್ಟಗಳೇ ಕಾರಣವೆಂದು ಅನಿಸುತ್ತದೆ, ಇದು ಸತ್ಯವೋ ಅಥವಾ ಅದು ಸತ್ಯವೋ ಎಂದು ಅರಿಯದಾಗಿದೆ ಎಂದು ಒಂದು ಡೋಲಾಯಮಾನವಾದ ಭಾವನೆ ವ್ಯಕ್ತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ಆದರೆ, ಅವರು ಅಂದು ಕಂಡಂತೆ ಮತ್ತು ಮಾನವನ ಅಸ್ತಿತ್ವದ ಇತಿಹಾಸದ ಎಲ್ಲ ಪುಟಗಳಲ್ಲೂ ನಮಗೆ ಈ ಎರಡೂ ಮುಖಗಳು ಕಾಣುತ್ತವೆ. ಪುರಾಣಗಳಲ್ಲಿಯೂ ಅಂದಿನ ಕೆಲವು ಪಾತ್ರಗಳು ಆನಂದವನ್ನು ಅನುಭವಿಸುವುದೂ ಮತ್ತೆ ಕೆಲವು ಪಾತ್ರಗಳು ಅತೀವ ಸಂಕಷ್ಟಗಳಿಗೆ ಸಿಕ್ಕು ತೊಳಲಾಡುವುದನ್ನು ನಾವು ಕಾಣಬಹುದು. ಇಂದಿಗೂ ಅದೇ ಪರಿಸ್ಥಿತಿ. ಒಂದಿಷ್ಟೂ ಬದಲಾವಣೆಯೇ ಇಲ್ಲ. ಏಕೆ ಹೀಗೆ? ಎಂದು ಆಲೋಚಿಸಿದರೆ, ನಮಗೆ ಸೂಕ್ತ ಮತ್ತು ಸಮರ್ಪಕ ಉತ್ತರ ಸಿಗುವುದಿಲ್ಲ. ಹಾಗಾಗಿ ಸತ್ಯ "ಇದೋ-ಅದೋ"ಎನ್ನುವ ದ್ವಂದ್ವದ ಭಾವ ನಮ್ಮಲ್ಲೂ ಬರಬಹುದು. ಅದೇ ಭಾವ ಮಾನ್ಯ ಡಿ.ವಿ.ಜಿ.ಯವರಿಗೂ ಬಂದಿತ್ತು. ಕಷ್ಟ ಸುಖಗಳು ಮನುಷ್ಯರಿಗಷ್ಟೇ ಅಲ್ಲ, ಸೃಷ್ಟಿಯ ಸಕಲ ಚರಾಚರಗಳಿಗೂ, ಪ್ರಮಾಣ ಭೇದವಿದ್ದರೂ ಇದ್ದೇ ಇರುವಂಥಹದು ಸರ್ವವೇದ್ಯ ಮತ್ತು ಅನಿವಾರ್ಯ. ಆದರೆ ಇಲ್ಲಿ ನೋಡಬೇಕಾದ ವಿಷಯವೇನೆಂದರೆ, ನಮ್ಮ ನಮ್ಮ ಜೀವನಗಳಲ್ಲಿ ಕಷ್ಟ ಸುಖಗಳು ಏಕೆ ಮತ್ತು ಹೇಗೆ ಬರುತ್ತವೆ? ಎಂದು. ಅದಕ್ಕೂ ಮೊದಲು ಕಷ್ಟವೆಂದರೇನು? ಸುಖವೆಂದರೇನು? ಎಂದು ವಿಶ್ಲೇಷಿಸಿದರೆ ನಮ್ಮ ಅರಿವಿಗೆ ಬರುವುದು ಹೀಗೆ. ನಮಗೆ “ಮಮ”ಕಾರವಿದೆ. ಈ “ಮಮ”ಕಾರಕ್ಕೆ ಹಿತವಾದದ್ದು ಸುಖ ಮತ್ತು ಅಹಿತವಾದದ್ದು ದುಃಖ. ಅಂದರೆ ಕಷ್ಟಸುಖ ಎನ್ನುವುದು ಬಹಳಷ್ಟು ಬಾರಿ ಕೇವಲ ಒಂದು ಭಾವನೆ ಮಾತ್ರ. ಹಾಗಾಗಿ "ಮಮಕಾರವನ್ನು ತೊರೆದರೆ, ಜೀವಿ ಮಾನಸಿಕವಾಗಿ ತಟಸ್ಥನಾಗಿ ಸುಖದುಃಖಗಳನ್ನು ಸಮಭಾವದಿಂದ ತೆಗೆದುಕೊಳ್ಳಬಹುದು" ಎನ್ನುವ ಒಂದು ಸಿದ್ಧಾಂತವಿದೆ. ಭಗವದ್ಗೀತೆಯಲ್ಲಿ “ಸ್ಥಿತಪ್ರಜ್ಞನೆಂದರೆ ಯಾರು” ಎಂದು ಅರ್ಜುನ ಕೇಳುವ ಪ್ರಶ್ನೆಗೆ ಶ್ರೀ ಕೃಷ್ಣ ಉತ್ತರಿಸಿದ್ದೂ ಇದನ್ನೇ. ಇದು ತತ್ವ ಶಾಸ್ತ್ರ(ಫಿಲಾಸಫಿ). ಪರರಿಗೆ ಹೇಳುವುದು ಸುಲಭ, ಆದರೆ ಪಾಲಿಸುವುದು ಸುಲಭವಲ್ಲ. ಈ ಪ್ರಪಂಚದಲ್ಲಿ ನಮ್ಮ ಅಸ್ತಿತ್ವಕ್ಕೆ ಅವಶ್ಯವಾದ ಕೆಲವು ಮೂಲಭೂತ ಅವಶ್ಯಕತೆಗಳಿವೆ. ಅವುಗಳ ಅಭಾವವೇ ನಮ್ಮ ಅನಿವಾರ್ಯ ಕಷ್ಟಕ್ಕೆ ಕಾರಣ. ಅದರ ಪೂರೈಕೆ ಸಮರ್ಪಕವಾಗಿ ಆದಾಗ, ನೆಮ್ಮದಿ ಎಂದು ಅಂದುಕೊಳ್ಳುತ್ತೇವೆ ಮತ್ತು ಅವುಗಳನ್ನು ಪೂರೈಸಿಕೊಳ್ಳಲು ಹೋರಾಡುತ್ತೇವೆ. ಆದರೆ ಅಷ್ಟಕ್ಕೇ ನಮಗೆ ನೆಮ್ಮದಿ ಸಿಗುತ್ತದೆಯೇ? ಖಂಡಿತ ಇಲ್ಲ. ಏಕೆಂದರೆ “ಬಡತನಕೆ ಉಂಬುವ ಚಿಂತೆ, ಉಂಬುವುದಾದರೆ ಉಡುವ ಚಿಂತೆ, ಉಡುವುದಾದರೆ, ಮನೆಯ ಚಿಂತೆ, ಮನೆಯದಾದರೆ ಮಡದಿಯ ಚಿಂತೆ” ಎನ್ನುವುದು ಶಿವ ಶರಣರ ಉಕ್ತಿ. ಎಷ್ಟು ಸತ್ಯ. ನಮ್ಮ ಆಸೆಗಳಿಗೆ ಮಿತಿಯೇ ಇಲ್ಲ. ನಮ್ಮ ಪರಿಮಿತ ಸಾಮಥ್ಯದಲ್ಲಿ ಮತ್ತು ಯೋಗ್ಯತೆಯಲ್ಲಿ ನಾವು ಏನನ್ನು ಪಡೆಯಬಹುದೋ ಅದನ್ನು ಪಡೆದು ಸಂತುಷ್ಟರಾದರೆ ಸುಖ ಮತ್ತು ನೆಮ್ಮದಿ. ಆದರೆ ನಮಗೆ ನಮ್ಮ “ಯೋಗ್ಯತೆಯ ಮತ್ತು ಸಾಮಥ್ಯದ” ಮಿತಿಯ ಅರಿವೇ ಇಲ್ಲ. ಹಾಗಾಗಿ ನಮ್ಮ ಆಸೆಗಳಿಗೂ ಕೊನೆಯಿಲ್ಲ. ನಮಗೆ ನಮ್ಮ “ಯೋಗ್ಯತೆಯ ಮತ್ತು ಸಾಮಥ್ಯದ” ಮಿತಿಯ ಅರಿವು ಏಕಿರುವುದಿಲ್ಲವೆಂದರೆ, “ಅಹಂಕಾರ”. ನಾನು, ನನಗೆ, ನನ್ನ, ಎನ್ನುವ ಭಾವ ನಮ್ಮಲ್ಲಿ ತುಂಬಿ ತುಳುಕುತ್ತಿದೆ. ಇನ್ನು ಮಿತಿಯನ್ನು ಅರಿಯುವ ಪ್ರಯತ್ನವು ಇಲ್ಲ. ಹಾಗಿದ್ದ ಮೇಲೆ ಇನ್ನೇನು? ಈ ಜೀವನದ ಜಂಜಾಟದಲ್ಲಿ ತೊಳಲಾಡದೆ ಬೇರೆ ದಾರಿಯೇ ಇಲ್ಲ. ಈ “ಅಹಂಕಾರ”ದಿಂದ ಮತ್ತೆಲ್ಲ ದುರ್ಭಾವಗಳೂ ನಮ್ಮೊಳಗೇ ನುಗ್ಗಿ ನಮ್ಮನ್ನು ಈ ಜೀವನದ “ಆಸೆ-ಅಭಾವಗಳ” ವಿಷ ವೃತ್ತದಲ್ಲಿ ನೂಕಿ ಅದರಿಂದ ಹೊರಗೆ ಬರುವ ಮಾರ್ಗವನ್ನು ಕಾಣದೆ ತೊಳಲಾಡುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. “ಅಯ್ಯೋ ಎಂತಹ ದೌರ್ಭಾಗ್ಯ”ವೆಂದು ನಮ್ಮ ಸ್ಥಿತಿಗೆ ನಾವೇ ಕೊರಗುವಂತೆ ಮರುಗುವಂತೆ ಮಾಡುತ್ತದೆ. ಹಾಗಾದರೆ ಸುಖ-ದುಃಖಗಳೆಂಬುದು ಕೇವಲ ಭ್ರಮೆಯೆಂದಾದರೆ, ಅದರ ಹಿಂದೆ ಮನುಷ್ಯ ಏಕೆ ಇಷ್ಟೊಂದು ಪರದಾಡುತ್ತಾನೆ? ಎಂದರೆ, ಕೇವಲ ಅಜ್ಞಾನದಿಂದ. ವಸ್ತು, ವಿಷಯಗಳ ಪರಿಚಯ, ಪೂರ್ವಾಪರಗಳ ವಿವೇಚನೆ ಸರಿಯಾಗಿ ಆದಲ್ಲಿ, ತೃಪ್ತಿಯ ಒಂದು ಭಾವ ಬಂದಾಗ, ಸುಖ ದುಃಖಗಳನ್ನು ಸಮವಾಗಿ ತೆಗೆದುಕೊಳ್ಳಲು ಮನಸ್ಸಿಗೆ ಸಾಮಥ್ಯ ಮತ್ತು ಶಕ್ತಿ ಎರಡೂ ಬಂದು ನೆಮ್ಮದಿ ಸಿಗುತ್ತದೆ. ವಾಚಕರೆ, ಎಲ್ಲಿಯವರೆಗೆ, ನಮಗೆ ಈ ಪ್ರಪಂಚದ ಅಂಟು ಇದೆಯೋ ಅಲ್ಲಿಯ ತನಕ ಈ ಸುಖ ದುಃಖದ ಸಂಕಕೋಲೆಯಿಂದ ಮುಕ್ತಿ ಇಲ್ಲ. ಆದರೆ ಸಹನೆ, ಸಹಿಷ್ಣುತೆ, ತೃಪ್ತಿಯಂತಹ ಭಾವಗಳನ್ನು ನಮ್ಮ ಸ್ವಭಾವವಾಗಿಸಿಕೊಂಡರೆ, ಸುಖ ದುಃಖಗಳನ್ನು ಸಮನಾಗಿ, ಅಂದರೆ ಸುಖದಲ್ಲಿ ಉಬ್ಬದೆ ಮತ್ತು ದುಃಖದಲ್ಲಿ ಕುಗ್ಗದೆ, ತೆಗೆದುಕೊಳ್ಳುವ ಶಕ್ತಿ ನಮಗೆ ಬಂದು ನಾವು ನೆಮ್ಮದಿಯಾಗಿರಬಹುದು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-29 )

ಎರಡುಮಿರಬಹುದು ದಿಟ, ಶಿವರುದ್ರನೆಲೆ ಬೊಮ್ಮ | ಕರವೊಂದರಲಿ ವೇಣು, ಶಂಖವೊಂದರಲಿ || ಬೆರಳ್ಗೆಳೆರಡಾನುಮಿರೆ ಕೈ ಚಿಟಿಕೆಯಾಡುವುದು | ಒರುವನಾಡುವುದೆಂತು? ಮಂಕುತಿಮ್ಮ ||

ಪದಗಳ ವಿಸ್ತರಣೆ

ಎರಡುಮಿರಬಹುದು=ಎರಡುಂ+ಇರಬಹುದು, ಬೆರಳ್ಗೆಳೆರಡಾನುಮಿರೆ=ಬೆರಳ್ಗಳು+ಎರಡು+ಆನುಂ+ಇರೆ, ಒರುವನಾಡುವುದೆಂತು=ಒರುವನು+ಆಡುವುದು+ಎಂತು

ಪದಗಳ ತಾತ್ಪರ್ಯ

ದಿಟ=ಸತ್ಯ, ಬೊಮ್ಮ=ಪರಬ್ರಹ್ಮ, ಪರಮಾತ್ಮ, ಕರ=ಕೈ, ವೇಣು=ಕೊಳಲು, ಆನುಮಿರೆ=ಒಂದಕ್ಕೊಂದು ಸೇರಿದರೆ. ಒರುವ=ಒಬ್ಬ ಅಥವಾ ಒಂದು.

ಪದ್ಯದ ಪೂರ್ತಿ ವಿವರಣೆ

ಪರಮಾತ್ಮನಿಗೆ, ಶಿವನೆಂಬ ಶಾಂತ ಸುಂದರ ಮತ್ತು ಶುಭಕರವಾದ ರೂಪವು ಇರಬಹುದು ಅಥವಾ ರುದ್ರನೆಂದು ಕರೆಯಲ್ಪಡುವ ಭಯಂಕರ ರೂಪವು ಇರಬಹುದು ಅಥವಾ ಸರ್ವರನೂ ತನ್ನೆಡೆಗೆ ಆಕರ್ಷಿಸುವ, ನಯನ ಮನೋಹರ, ವೇಣುಗಾನಲೋಲನ ರೂಪವು ಇರಬಹುದು ಅಥವಾ ರಣ ಕಹಳೆಗೆ ದನಿಗೂಡಿಸಿ ಯುದ್ಧಕ್ಕೆ ಆಹ್ವಾನವೀಯುವ ಪಾಂಚಜನ್ಯವನ್ನೂದುವ ಕ್ಷಾತ್ರ ರೂಪವು ಇರಬಹುದು. ಎರಡು ರೂಪಗಳೂ ಸತ್ಯವಿರಬಹುದು. ಏಕೆಂದರೆ ಕೈ ಚಿಟಿಕೆಯಾಡಿಸಲು, ಎರಡು ಬೆರಳುಗಳೂ ಬೇಕು. ಒಂದೇ ಬೆರಳಲ್ಲಿ ಚಿಟಿಕೆಯಾಗುವುದೇ ಎನ್ನುತ್ತಾರೆ ಶ್ರೀ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ. ಇಡೀ ಸೃಷ್ಟಿಯೇ ಪರಮಾತ್ಮನ ಹಲವು ರೂಪಗಳ ಬಿಂಬವು. ಒಂದು ಅದ್ಭುತ ಪರಮ ಶಕ್ತಿಯೇ ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುವುದನ್ನು ನಾವು ನೋಡಬಹುದು. ಸಂಸ್ಕಾರ, ಶ್ರದ್ಧೆ, ವಿದ್ಯೆ, ಕಲೆ, ಸಂಗೀತ, ಸಾಹಿತ್ಯ, ಪ್ರೇಮ, ಪ್ರೀತಿ, ಸ್ನೇಹ, ಕರುಣೆ, ಸೌಹಾರ್ದದಂತಹ ಸುಂದರ ಮಾನವೀಯ ಭಾವಗಳು, ಪ್ರಕೃತಿ ಮತ್ತದರ ಉಪಯುಕ್ತ ರೂಪಗಳಾದ, ಮಳೆ, ಬೆಳೆ, ಹೊಸ ಚಿಗುರು, ಹೂವು ಹಣ್ಣು, ಮನಸ್ಸಿಗೆ ಆಹ್ಲಾದವೀಯುವ, ಪ್ರಕೃತಿ ಸೌಂದರ್ಯ, ಬೆಟ್ಟ ಗುಡ್ಡ, ನದಿ, ಝರಿ, ವೈವಿಧ್ಯಮಯ ಸಸ್ಯ ಜಗತ್ತು ಮತ್ತು ಪ್ರಾಣಿ ಜಗತ್ತು ಎಲ್ಲವು ಆ ಪರಮ ಶಕ್ತಿಯ ಒಂದು ಸುಂದರ ರೂಪವಾದರೆ, ಕುಯುಕ್ತಿ, ದ್ವೇಷ, ಮೋಸ, ಕೊಲೆ, ದರೋಡೆ, ಯುದ್ಧ, ರಕ್ತಪಾತ, ಹಸಿವು, ದಾರಿದ್ರ್ಯ, ನೋವು ಭಯೋತ್ಪಾದನೆಯಂತಹ ಅಮಾನವೀಯ ಭಾವಗಳು, ಅತಿವೃಷ್ಟಿ, ಅನಾವೃಷ್ಟಿ, ಅಗ್ನಿಪರ್ವತಗಳು, ಸುನಾಮಿ, ಭೂಕಂಪಗಳಂತಹ ಪ್ರಕೃತಿಯ ಕ್ರೂರತೆಯ ಇನ್ನೊಂದು ರೂಪ. ಇವೆಲ್ಲವು ಪರಮಾತ್ಮನ ಪ್ರೇರಣೆಯಿಂದಲೇ ನಡೆಯುತ್ತೆ ಎಂದರೆ, ಈ ಎರಡೂ ಮುಖಗಳು ಆ ಪರಮಾತ್ಮನ ಮುಖಗಳೇ ಅಲ್ಲವೇ? ಎರಡು ರೂಪಗಳಿಗೂ ಆ ಪರಮ ಶಕ್ತಿಯೇ ಪ್ರೇರಕವಲ್ಲವೇ? ಈ ಎರಡೂ ಮುಖಗಳ ಪರಿಚಯವನ್ನು ಮಾಡಿಸಿದ ಘಟನೆಗಳ ಉಲ್ಲೇಖ ನಮ್ಮಲ್ಲಿ ಹೇರಳವಾಗಿ ಸಿಗುತ್ತದೆ. ಭಕ್ತಿಗೆ ಮೆಚ್ಚಿ ಕಾರಣ ಜನ್ಮವೆತ್ತಿದ ಮಹಾನ್ ಭಕ್ತ ರಾವಣನಿಗೆ ವರ ಕೊಟ್ಟ ಶಿವನ ಶಾಂತ ರೂಪ. ಅದೇ ರಾವಣನನ್ನು ಯುದ್ಧದಲ್ಲಿ ಕೊಂದು ಮೋಕ್ಷವನ್ನು ಕರುಣಿಸಿದ ರಾಮನ ರುದ್ರ ರೂಪ. ಪರಶಿವನ ಸ್ತ್ರೀರೂಪವಾದ ಶಕ್ತಿದೇವತೆಯು, ತನ್ನ ಇಚ್ಛಾ ಮಾತ್ರದಿಂದಲೇ ಸೃಷ್ಟಿ-ಸ್ಥಿತಿ-ಲಯಗಳನ್ನು ಮಾಡತಕ್ಕ ಶಕ್ತಿ ಸಂಪನ್ನಳಾದರೂ, ಅಧರ್ಮಿಯಾದ ಮಹಿಷಾಸುರನನ್ನು ಕೊಲ್ಲಲು ರುದ್ರರೂಪ ತಾಳಿ ತನ್ನ ಆಯುಧಗಳನ್ನು ಉಪಯೋಗಿಸಿ ಅವನನ್ನು ಹತ ಮಾಡಿದ ರುದ್ರ ರೂಪ. ಆ ರುದ್ರತೆಯಲ್ಲೂ, ತನ್ನ ಆಯುಧಗಳ ಸ್ಪರ್ಶದಿಂದ ಅವನ ಪಾಪಗಳನ್ನೆಲ್ಲ ನಾಶಮಾಡಿ ಅವನಿಗೆ ಮುಕ್ತಿಯನ್ನು ನೀಡಿದ ಕರುಣಾಮಯ ತಾಯ ರೂಪ. ಶಬರಿ, ಭೀಷ್ಮ, ಜಟಾಯು, ಪ್ರಹ್ಲಾದ, ಧ್ರುವ ಇಂತಹವರಿಗೆ ಪ್ರೇಮದಿಂದ ಮುಕ್ತಿ. ಹಿರಣ್ಯಾಕ್ಷ, ಹಿರಣ್ಯಕಶಿಪು, ಪೂತನೆ, ಕಂಸ, ಚಾಣೂರ, ಮುಷ್ಟಿಕ, ಶಿಶುಪಾಲ, ಪೌಂಡ್ರಕ ವಾಸುದೇವ, ಜರಾಸಂದ, ದಂತವಕ್ತ್ರ ಮುಂತಾದವರಿಗೆ ಉಗ್ರ ರೂಪದಿ ಮುಕ್ತಿ, ಹೀಗೆ ಹತ್ತು ಹಲವಾರು ಪ್ರಸಂಗಗಳು ನಮಗೆ ಆ ಪರಮ ಶಕ್ತಿಯ ಎರಡೂ ರೂಪಗಳ ಪರಿಚಯ ಮಾಡುತ್ತದೆ. ಪ್ರಸಕ್ತ ಜಗತ್ತಿನಲ್ಲೂ ಸಹ ಇಂಥಹ ಭಿನ್ನ ರೂಪಗಳನ್ನು ನಾವು ಕಾಣುತ್ತೇವೆ. ಪರಸ್ಪರ ಸ್ನೇಹಭಾವ, ಉಪಕಾರ ಬುದ್ಧಿ, ಪ್ರೀತಿ, ಪ್ರೇಮ, ಕರುಣೆಯಂತಹ ಸಕಾರಾತ್ಮಕ ಭಾವಗಳೂ, ದುರ್ಬುದ್ಧಿ, ದುರ್ಭಾವ, ದ್ವೇಷ, ಅಸೂಯೆ, ಕ್ರೌರ್ಯದಂತಹ ನಕಾರಾತ್ಮಕ ಭಾವಗಳು ಒಂದರ ಪಕ್ಕದಲ್ಲಿ ಇನ್ನೊಂದೆಂಬಂತೆ ನಮ್ಮ ಸಮಾಜದಲ್ಲಿ ನಾವು ಕಾಣಬಹುದು. ಅಷ್ಟೇ ಏಕೆ ವಾಚಕರೆ ಒಂದೇ ವ್ಯಕ್ತಿಯಲ್ಲೇ ಇಂತಹ ಎರಡು ಮುಖಗಳನ್ನೂ ನಾವು ಕಾಣುವುದಿಲ್ಲವೇ. ಒಬ್ಬನೇ ವ್ಯಕ್ತಿ ಕೆಲವರಿಗೆ ಒಳ್ಳೆಯವನಾಗಿಯೂ, ಕೆಲವರಿಗೆ ದುಷ್ಟನಾಗಿಯೂ ತೋರುವುದಿಲ್ಲವೇ. ನಮ್ಮ ಮನಸ್ಸುಗಳಲ್ಲೇ ಈ ರೀತಿಯ ದ್ವಿಭಾವಗಳ ಗುಚ್ಚವೇ ಇಲ್ಲವೇ? ಇಂತಹ ದ್ವಿಭಾವಯುಕ್ತವೆ ಜೀವನ. ಎರಡೂ ಇರಬೇಕು ಜಗದ್ವ್ಯಾಪಾರಕ್ಕೆ. ಎಂದಿಗೂ ಎಲ್ಲರೂ ಎಲ್ಲ ಕಾಲಕ್ಕೂ ಒಳ್ಳೆಯವರಾಗಿಯೂ ಅಥವಾ ಎಲ್ಲ ಕಾಲಕ್ಕೂ ಕೆಟ್ಟವರಾಗಿಯೂ ಇರುವುದಿಲ್ಲ. ಇವೆರಡರ ಸಮ್ಮಿಶ್ರ ರೂಪವೇ ಈ ಜಗದ್ವ್ಯಾಪಾರ. ಒಂದು ಮನುಷ್ಯನಿಗೆ ಹೇಗೆ ಅಸತ್ತಿನಿಂದ ಸತ್ತಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ, ದುಃಖದಿಂದ ನೆಮ್ಮದಿಯೆಡೆಗೆ ಹೋಗಲು ಸಾಧ್ಯ ಉಂಟೋ ಹಾಗೆಯೇ ಇದರ ವಿರುದ್ಧ ದಿಕ್ಕಿನಲ್ಲಿ ಹೋಗಲೂ ಸಹ ಸಾಧ್ಯ ಉಂಟು. ಒಟ್ಟು ಸಮುದಾಯದ ಸಾಮೂಹಿಕ ಇಚ್ಛಾಶಕ್ತಿಯ ಮೇಲೆ ಆ ಸಮಾಜದ ಆಗುಹೋಗುಗಳು ನಿರ್ಭರವಾಗಿವೆ. ನಾವು ಸಹ ನಮ್ಮ ಸಮಾಜದ ಸಮಗ್ರ ವಿಶ್ಲೇಷಣೆ ಮಾಡಿ ನಾವು ಎಲ್ಲಿದ್ದೇವೆ ಎಲ್ಲಿಗೆ ಹೋಗಬೇಕು ಎಂದು ದೃಢ ನಿಶ್ಚಯ ಮಾಡಿದರೆ, ಎಂದೋ ಒಂದು ದಿನ ಸಮಾಜದ ಸಮೃದ್ಧ ಸಂಪನ್ನ ಶಾಂತ ರೂಪವನ್ನು ಕಾಣಬಹುದು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-30 )

ಬ್ರಹ್ಮವೇ ಸತ್ಯ ಸೃಷ್ಟಿಯೆ ಮಿಥ್ಯೆಯೆನ್ನುವೊಡೆ ಸಂಬಂಧವಿಲ್ಲವೇನು ವಿಷಯಯುಗಕೆ? ನಮ್ಮ ಕಣ್ಮನಸುಗಳೇ ನಮಗೆ ಸಟೆ ಪೇಳುವೊಡೆ ನೆಮ್ಮುವುದದಾರನೋ? ಮಂಕುತಿಮ್ಮ

ಪದಗಳ ವಿಸ್ತರಣೆ

ಮಿಥ್ಯೆಯೆನ್ನುವೊಡೆ=ಮಿಥ್ಯೆ+ಎನ್ನುವೊಡೆ, ಕಣ್ಮನಸುಗಳೇ=ಕಣ್ಣು+ಮನಸ್ಸುಗಳೇ, ನೆಮ್ಮುವುದದಾರನೋ=ನೆಮ್ಮುವುದು+ಅದು+ಯಾರನೋ

ಪದಗಳ ತಾತ್ಪರ್ಯ

ಬ್ರಹ್ಮ=ಸೃಷ್ಟಿಕರ್ತ, ಪರಮಾತ್ಮ, ಸೃಷ್ಟಿ=ಈ ಜಗತ್ತು, ಮಿಥ್ಯೆ=ಅಸತ್ಯವಾದದ್ದು, ಎನ್ನುವೊಡೆ=ಎಂದರೆ, ವಿಷಯಯುಗ=ಎರಡು ವಿಷಯಗಳು, ಸಟೆ=ಸುಳ್ಳು, ನೆಮ್ಮುವುದು=ನಂಬುವುದು.

ಪದ್ಯದ ಪೂರ್ತಿ ವಿವರಣೆ

ಬ್ರಹ್ಮವೇ ಸತ್ಯ ಸೃಷ್ಟಿಯೇ ಮಿಥ್ಯ ಎನ್ನುವುದಾದರೆ ಈ ಜಗತ್ತು ಮತ್ತು ಅದನ್ನು ಸೃಷ್ಟಿಮಾಡಿದ ಆ ಪರಬ್ರಹ್ಮನಿಗೂ ಯಾವುದೇ ಸಂಬಂಧವಿಲ್ಲವೇನು? ನಮ್ಮ ಕಣ್ಣು ಮನಸ್ಸುಗಳೇ ನಮಗೆ ಅಸತ್ಯವನ್ನು ಹೇಳುವುದಾದರೆ ನಂಬುವುದು ಯಾರನ್ನು ಎಂದು, ಸೃಷ್ಟಿಕರ್ತ ಮತ್ತು ಸೃಷ್ಟಿಯ ನಡುವಿನ ಸಂಬಂಧ ಕುರಿತಾದಂತಹ ಒಂದು ಅದ್ಭುತ ವಿಷಯವನ್ನು ನಮ್ಮ ಮುಂದಿಡುತ್ತಾರೆ ಶ್ರೀ ಡಿ.ವಿ.ಜಿ.ಯವರು ಈ ಮುಕ್ತಕದ ರೂಪದಲ್ಲಿ. ಆ ಪರಮ ಶಕ್ತಿಯೇ ಈ ಸೃಷ್ಟಿಗೆ ಮೂಲ. ತನ್ನ ಇಚ್ಚಾ ಶಕ್ತಿಯಿಂದಲೇ ಇಡೀ ಬ್ರಹ್ಮಾಂಡವನ್ನು ಸೃಜಿಸಿದ ಆ ಪರಮಾತ್ಮ ಎಂದು ಪುರಾಣಗಳು ಹೇಳುತ್ತವೆ. ಆ ಪರಬ್ರಹ್ಮ ಸತ್ಯವೆಂದ ಮೇಲೆ, ಈ ಜಗದ್ವ್ಯಾಪಾರವನ್ನು, ಎಂದರೆ ಹಗಲು ರಾತ್ರಿಗಳು, ಋತುಮಾನಗಳು, ಮಳೆಗಳು ಬೆಳೆಗಳು, ಜೀವಿಗಳ ಹುಟ್ಟು ಸಾವಿನ ಪ್ರಕ್ರಿಯೆಗಳು, ಹೀಗೆ ಎಲ್ಲವು ಆ ಪರಮಾತ್ಮನ ಅಧೀನದಲ್ಲಿದೆಯೆಂದರೆ, ಆ ಪರಮ ವಸ್ತುವಿಗೂ ಮತ್ತು ಅದು ಸೃಜಿಸಿದ ಈ ಸೃಷ್ಟಿಗೂ ಒಂದು ಅವಿನಾಭಾವ ಸಂಬಂಧವಿರಬೇಕಲ್ಲವೇ? ಅವನ ಸೃಷ್ಟಿಯೂ ಸತ್ಯವಾಗಿರಬೇಕಲ್ಲವೇ. ಆದರೆ “ಜಗತ್ ಮಿಥ್ಯ” ಎನ್ನುವ ಒಂದು ತತ್ವ ಪ್ರತಿಪಾದನೆಯೂ ಇದೆ. ನಮ್ಮ ಕಣ್ಣಿಗೆ ಕಾಣುತ್ತದಲ್ಲ!! ಹಾಗೆ ಕಣ್ಣಿಗೆ ಕಾಣುವುದನ್ನು ನಾವು ಅಸತ್ಯ ಎಂದು ಹೇಗೆ ನಂಬುವುದು. ಇದರಲ್ಲಿ ಯಾವುದನ್ನು ನಂಬುವುದು ಎಂದು ಒಂದು ಗಹನವಾದ ವಿಚಾರವನ್ನು ಶ್ರೀ ಗುಂಡಪ್ಪನವರು ಪ್ರಸ್ತಾಪಿಸಿದ್ದಾರೆ. ಸತ್ಯವೆಂದರೇನು? ಸಿದ್ಧಾಂತ ಪ್ರತಿಪಾದಕರ ಪ್ರಕಾರ, ಯಾವುದು ನಿತ್ಯವೂ ಅದು ಸತ್ಯ. ನಿತ್ಯವೆಂದರೆ ನಿರಂತರವಾಗಿರುವುದು. ಅಂದರೆ ಸದಾಕಾಲ ಬದಲಾಗದೆ ಹಾಗೆ ಇರುವುದು. ಹೌದು ಆ ಅರ್ಥದಲ್ಲಿ ಈ ಜಗತ್ತು ಕೇವಲ ಮಿಥ್ಯೆ ಅಥವಾ ಭ್ರಮೆ. ಈಗ ಕಂಡದ್ದು ಇನ್ನೊಂದು ಕ್ಷಣಕ್ಕೆ ಇಲ್ಲ. ಹಾಗೆ ನೋಡಿದರೆ ಪರಮಾತ್ಮಶಕ್ತಿಯನ್ನು ಬಿಟ್ಟರೆ, ಮಿಕ್ಕ ಎಲ್ಲಕ್ಕೂ ಒಂದು ಕಾಲ ಉಂಟು, ಆಮೆಗೆ 350ವರ್ಷ, ಆನೆಗೆ 185,ಮನುಷ್ಯನಿಗೆ 100 ಆದರೆ ಇರುವೆಗೆ 5 ದಿನ, ಸೊಳ್ಳೆಗೆ 3 ದಿನ. ಯಾವುದೂ ಶಾಶ್ವತವಲ್ಲ. ಪುರಾಣಗಳ ಪ್ರಕಾರ, ಬ್ರಹ್ಮ ಇಂದ್ರ ಮತ್ತು ಅವನ ಸಹಚರರಾದ ದಿಕ್ಪಾಲಕರು ಅಷ್ಟವಸ್ತುಗಳು, ಇವರೆಲ್ಲರೂ ಕೇವಲ ನಿಯಮಿತ ಅಧಿಕಾರಿಗಳು. (appointed officers) ಪರಮಾತ್ಮನ ಆದೇಶದ ಮೇರೆಗೆ ಜಗತ್ತನ್ನು ನಿಯಂತ್ರಿಸುವ ಇವರುಗಳಿಗೂ ಒಂದು ಕಾಲದ ಮಿತಿ ಉಂಟು. ಹಾಗಾಗಿ ಅವರೂ ಸಹ ನಿತ್ಯರಲ್ಲದ ಕಾರಣ ಅವರನ್ನು ಸತ್ಯವಲ್ಲವೆಂದು ಪರಿಗಣಿಸಬೇಕಾಗುತ್ತದೆ, ಅಲ್ಲವೇ? ಇಂದು ನಮಗೆ ಕಾಣುವುದು, ನಮ್ಮ ಅನುಭವಕ್ಕೆ ಬರುವುದು, ನಮ್ಮ ಸಂಪರ್ಕಕ್ಕೆ ಬರುವುದು ಎಲ್ಲವು ನಮಗೆ ಇಂದಿಗೆ ಸತ್ಯ. ಅಲ್ಲದಿದ್ದರೆ, ಅದು ಬರೀ ಭ್ರಮೆಯಾದರೆ ನಮ್ಮ ಅನುಭವಗಳು ಸುಳ್ಳೇ? ಸಾಧ್ಯವಿಲ್ಲ. ವೇದಾಂತದ ಪ್ರಕಾರ ಹಾಗಿರಬಹುದು ಆದರೆ ವಾಸ್ತವಿಕ ಬದುಕಿನಲ್ಲಿ ಆ ರೀತಿಯ ಭಾವನೆಗಳು ಜೀವನದಲ್ಲಿ ಉತ್ಸಾಹವನ್ನು ಕುಗ್ಗಿಸಿ, ಬದುಕನ್ನು ಬರಡಾಗಿಸುತ್ತದೆ. ನಾವು ಇದ್ದೇವೆ ಎಂದರೆ ನಮ್ಮ ಸುತ್ತ ಇರುವುದೆಲ್ಲ ಇದೆ ಎಂದು ಅರ್ಥ. ಇದೆ ಎಂದರೆ ಅದು ಸತ್ಯ. ಇಲ್ಲವೆಂಬುದನ್ನು ಇದೆ ಎಂದುಕೊಂಡರೆ, ಅದು ಭ್ರಮೆ. ಇರುವುದನ್ನು ಇಲ್ಲವೆಂದರೂ ಭ್ರಮೆಯೇ ತಾನೇ? ಈ ನಮ್ಮ ಜೀವನದ ಪ್ರಯಾಣದಲ್ಲಿ, ವಾಸ್ತವಿಕ ಬದುಕು ಬೇರೆ ವೇದಾಂತದ ಬದುಕು ಬೇರೆ. ವೇದಾಂತದಲ್ಲಿ ವಾಸ್ತವವನ್ನೂ ಮತ್ತು ವಾಸ್ತವದಲ್ಲಿ ವೇದಾಂತವನ್ನೂ ಸಮನ್ವಯವಾಗಿ ಬೆರೆಸಿಕೊಂಡು ನಮ್ಮನ್ನು ನಾವು ಸಾರ್ಥಕ್ಯದೆಡೆಗೆ ತೆಗೆದುಕೊಂಡು ಹೋಗಬೇಕು. ಇದಕ್ಕೆ ಅಧ್ಯಯನ ನಿಧಿಧ್ಯಾಸನಗಳ ಅವಶ್ಯಕತೆ ಇದೆ. ಅದರ ಪ್ರಯತ್ನವೇ ನಮ್ಮ ಬದುಕಾಗಬೇಕು. ಸತ್ಯ ಅಸತ್ಯಗಳ ದ್ವಂದ್ವವಿಲ್ಲದೆ ಉತ್ಸಾಹದಿಂದ ಜೀವನವನ್ನು ಆಸಕ್ತಿಯಿಂದ ಜೀವಿಸಬೇಕು. ಹಾಗೆ ಆಸಕ್ತಿಯ ಜೀವನವನ್ನು ನಡೆಸುವಾಗ ಅಂತರಂಗದಲ್ಲಿ ವಿರಕ್ತಿಯ ಭಾವವಿರಬೇಕು. ಹಾಗಿದ್ದರೆ ಸುಖ ಸಂತೋಷ ನೆಮ್ಮದಿ. ಅಂತಹ ಸ್ಥಿತಿಯನ್ನು ಸಾಧಿಸುವ ಪ್ರಯತ್ನವನ್ನು ನಾವು ಮಾಡೋಣವೆ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-31 )

ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ? ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು? ಅಚ್ಚರಿಯ ತಂತ್ರವಿದು; ಬ್ರಹ್ಮ ಸೃಷ್ಟಿಗಳೇಕೋ ಮುಚ್ಚಿಹವು ಸಾಜತೆಯ-ಮಂಕುತಿಮ್ಮ

ಪದಗಳ ವಿಸ್ತರಣೆ

ಬಚ್ಚಿಟ್ಟುಕೊಂಡಿಹುದೆ=ಬಚ್ಚಿಟ್ಟುಕೊಂಡು+ಇಹುದೆ, ಮರೆಯೊಳಿಹುದನೆ=ಮರೆಯೊಳು+ಇಹುದನೆ, ಸೃಷ್ಟಿಗಳೇಕೋ=ಸೃಷ್ಟಿಗಳು+ಏಕೋ, ನಚ್ಚುವುದು=ನೆಚ್ಚುವುದು, ನಂಬುವುದು, ಇಹುದನೆ=ಇರುವುದನ್ನು, ಸಾಜತೆಯ=ಸಹಜತೆಯ.

ಪದಗಳ ತಾತ್ಪರ್ಯ

ಪದ್ಯದ ಪೂರ್ತಿ ವಿವರಣೆ

ಸತ್ಯವಾದ ಆ ಪರಮಾತ್ಮ ವಸ್ತು ಅಸತ್ಯವಾದ ಈ ಸೃಷ್ಟಿಯ ಹಿಂದೆ ಬಚ್ಚಿಟ್ಟುಕೊಂಡಿರುವುದೇ? ನಮಗೆ ಜಗತ್ತು ಕಾಣುತ್ತದೆ. ಸಕಲವು ಇಂದ್ರಿಯ ಗ್ರಾಹ್ಯ. ಇದನ್ನು ಮಿಥ್ಯವೆಂದು, ಅಸತ್ಯವೆಂದು ಹೇಳುತ್ತಾರೆ. ಆದರೆ ಅದನ್ನು ಸೃಜಿಸಿದ ಶಕ್ತಿ ಕಾಣುವುದಿಲ್ಲ. ಭಾವಿಸಬಹುದು ಮತ್ತು ಕೇವಲ ಅನುಭವ ವೇದ್ಯ, ಅದನ್ನು ಸತ್ಯವೆನ್ನುತ್ತಾರೆ. ಕಣ್ಣಿಗೆ ಕಾಣದೆ, ಮರೆಯಲ್ಲಿರುವುದನ್ನು ಸತ್ಯವೆಂದು ನಂಬುವುದು ಹೇಗೆ? ಈ ಸೃಷ್ಟಿಕರ್ತ ಮತ್ತು ಅವನ ಸೃಷ್ಟಿಯ ತಂತ್ರ ಬಹಳ ಆಶ್ಚರ್ಯಕರವಾದವು ಮತ್ತು ಸಹಜತೆಯು ಮುಚ್ಚಿಹುದು, ಎನ್ನುತ್ತಾರೆ ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು. ನೋಡಿ ಒಂದು ಮಗುವಿಗೆ ಆನೆಯನ್ನು ನೀವು ಬಹಳ ಚೆನ್ನಾಗಿ ವಿವರಿಸುತ್ತೀರಿ. ದೊಡ್ಡ ಕಿವಿ, ಸಣ್ಣ ಕಣ್ಣು,ಸಣ್ಣ ಬಾಲ, ಬೃಹತ್ತಾದ ದೇಹ ಮತ್ತು ಕಾಲುಗಳು, ಒಂದು ದೊಡ್ಡ ಸೊಂಡಿಲು ಎಂದು ಎಷ್ಟು ಹೇಳಿದರೂ ಆ ರೂಪವನ್ನು ಆ ಮಗು ಕಲ್ಪಿಸಿಕೊಳ್ಳಲು ಸಾಧ್ಯವೇ?, ಇಲ್ಲ. ಬದಲಿಗೆ ಅದಕ್ಕೊಂದು ಆನೆಯನ್ನು ತೋರಿಸಿ, ಇದು ಆನೆ, ಎಂದು ಹೇಳಿದರೆ, ಮುಂದೆ ಅದಕ್ಕೆ ಆನೆ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು ನಿಜವಾದ ಆನೆಯ ರೂಪ ಅದರ ಮನಸ್ಸಿಗೆ ಬರುತ್ತದೆ. ನಮಗೆ ಯಾರೂ ಆ ಪರಮಾತ್ಮನನ್ನು ತೋರಿಸಿಲ್ಲ. ಹಾಗಿರಬೇಕಾದರೆ ನಾವು ಯಾವುದನ್ನು ಪರಮಾತ್ಮ ಎಂದು ನಂಬುವುದು. ಹಾಗೆ ನಾವು ಕಾಣದೆ ಇರುವ, ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಒಂದು ವಸ್ತುವನ್ನು ಸತ್ಯವೆಂದೂ, ಕಣ್ಣಿಗೆ ಕಾಣುವ ಮತ್ತು ನಮ್ಮ ನಿತ್ಯಜೀವನದಲ್ಲಿ ನೋಡುವ ಅನುಭವಿಸುವ ಮತ್ತು ಒಡನಾಡುವ ವಸ್ತು, ವ್ಯಕ್ತಿ, ವಿಷಯಗಳನ್ನು ಸುಳ್ಳು ಅಥವಾ ಮಿಥ್ಯೆ ಎನ್ನುವುದು ಏಕೆ? ಏನಿದು ತಂತ್ರ ಎನ್ನುತ್ತಾರೆ ಶ್ರೀ ಗುಂಡಪ್ಪನವರು. ನಮ್ಮ ಋಷಿ ಮುನಿಗಳು ಬಹಳ ಗಹನವಾದ ತತ್ವವನ್ನು ಪ್ರತಿಪಾದಿಸಿದ್ದಾರೆ. ಜಗತ್ತಿನಲ್ಲಿ ಯಾರೂ ಕಾಣದನ್ನು ಬಹಳ ಹಿಂದೆಯೇ ಅನುಭವದಿಂದ ಕಂಡುಕೊಂಡಿದ್ದಾರೆ. ತೆಲುಗಿನಲ್ಲಿ, ನಮ್ಮ ಗುಂಡಪ್ಪನವರಂತೆಯೇ ಒಬ್ಬ ತತ್ವಪ್ರತಿಪಾದಕ ಕವಿ, ವೇಮನ ಎಂಬುವವರಿದ್ದರು. ಸರಿ ಸುಮಾರು ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಜನಿಸಿದ, ಆ ಕವಿ ನಮ್ಮ ಗುಂಡಪ್ಪನವರ ಮುಕ್ತಕಗಳ ರೂಪದಲ್ಲಿಯೇ ತತ್ವಪ್ರತಿಪಾದಕ ಕೃತಿ "ವೇಮನಶತಕ"ವನ್ನು ರಚಿಸಿದ್ದಾರೆ. ಅವರು ಬರೆಯುತ್ತಾರೆ "ಇಂದು ಗಲಡು ಅಂದು ಲೇಡನಿ ಸಂದೇಹಮು ವಲದು, ಚಕ್ರಿ ಎಂದೆಂದು ವೆದಕಿತೆ ಅಂದಂದೇ ಗಲಡು" ಎಂದು. ‘ಇಲ್ಲಿರುವ-ಅಲ್ಲಿ ಇಲ್ಲ’ ಎಂಬ ಸಂದೇಹವು ಬೇಡ. ಆ ಚಕ್ರಧಾರಿಯು ಎಲ್ಲೆಲ್ಲಿ ಹುಡುಕಿದರೆ ಅಲ್ಲಲ್ಲಿ ಕಾಣುವ" ಎನ್ನುತ್ತಾರೆ. ಆ ಪರಮಾತ್ಮನ ಸರ್ವವ್ಯಾಪಕತ್ವವನ್ನು ಪ್ರತಿಪಾದಿಸುವ ಸಾಹಿತ್ಯ ನಮ್ಮಲ್ಲಿ ಹೇರಳವಾಗುಂಟು. "ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ" ಎನ್ನುವ ಶಿವಶರಣರು, "ಆ ಪರಮಾತ್ಮ ಎಲ್ಲಕಡೆಯೂ ಇರುವುದರಿಂದ, ಈ ಬಾಳೆ ಹಣ್ಣನ್ನು ನಾ ಮರೆಯಲ್ಲಿ ತಿನ್ನಲಾಗಲಿಲ್ಲ" ಎಂದು ತನ್ನ ಗುರುಗಳಿಗೆ ಹೇಳಿದ ನಮ್ಮ ಕನಕದಾಸರು. ಎಲ್ಲರೂ ಆ ಕಾಣದ ದೈವದ ಸರ್ವವ್ಯಾಪಕತ್ವವನ್ನು ಪ್ರತಿಪಾದಿಸಿದ್ದಾರೆ. ಕಾಣದ್ದೆಲ್ಲ ಅಸತ್ಯವೆಂದು ಹೇಳುವುದು ತಪ್ಪು. ಪ್ರೀತಿ ಪ್ರೇಮಗಳು ಕಾಣದಿದ್ದರೂ ಅದರ ಅನುಭವವಾಗುವುದಿಲ್ಲವೇ? ಗಾಳಿ ಕಾಣದಿದ್ದರೂ ನಮ್ಮನ್ನೆಲ್ಲ ಜೀವಂತವಾಗಿರಿಸಿಲ್ಲವೇ? ನಮಗೆ ವಿದ್ಯುತ್ ಕಣ್ಣಿಗೆ ಕಾಣದಿದ್ದರೂ ಬೆಳಕುಬರುವುದಿಲ್ಲವೇ? "ಕಾಣುವುದಿಲ್ಲವಲ್ಲ" ಎಂದು ಪರೀಕ್ಷಿಸಲು ಕೈ ಇಟ್ಟು ನೋಡಿ. ಅಷ್ಟೇ ನಿಮ್ಮನ್ನೇ ಬಲಿ ತೆಗೆದುಕೊಂಡು ಬಿಡುತ್ತದೆ ಅಲ್ಲವೇ? ಹಾಗೆ ನಾವು ನಮಗೆ ಕಣ್ಣಿಗೆ ಕಾಣುವುದು ಮಾತ್ರ ಸತ್ಯ, ಕಾಣದ್ದೆಲ್ಲ ಅಸತ್ಯವೆಂದು ಹೇಳಲಾಗುವುದಿಲ್ಲ. ಇದ್ದರೂ ಕಾಣದ ಆದರೆ ಸತ್ಯವೆನ್ನಿಸಿಕೊಳ್ಳುವ, ಈಗ ಕಂಡರೂ ಬದಲಾಗುತ್ತ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಸತ್ಯವೆನ್ನಿಸಿಕೊಳ್ಳುವ, ಈ ಪರಮಾತ್ಮ-ಜಗತ್ಸಂಬಂಧವನ್ನೇ ಗುಂಡಪ್ಪನವರು ಅಚ್ಚರಿಯ ತಂತ್ರ ಎನ್ನುತ್ತಾರೆ. ಕಾಣದ ದೇವರು ಮತ್ತು ಕಾಣುವ ಈ ಜಗತ್ತು ಇವುಗಳ ಬಾಂಧವ್ಯವೇ ಈ ಜಗದ್ವ್ಯಾಪಾರ. ಆದರೆ ಒಂದುಶಕ್ತಿ, ಕಣ್ಣಿಗೆ ಕಾಣದಿದ್ದರೂ ತನ್ನ ಪ್ರಭಾವ ಮತ್ತು ಪ್ರತಾಪವನ್ನು ಎಲ್ಲ ಕಡೆಯೂ ಬೀರುತ್ತಿರುವ ಅತ್ಯುತ್ತಮ ಶಕ್ತಿ, "ಪರಮ ಪೌರುಷವನ್ನು" ಪಡೆದಿರುವ ಪರಮ ಪುರುಷನೆಂದು ಕರೆಯಲ್ಪಡುವ ಆ ಶಕ್ತಿಯೇ ಎಲ್ಲವು ಆಗಿರುವಾಗ, ನಾವು ಅದನ್ನು ನಂಬದೆ ಬೇರೆ ಗತ್ಯಂತರವೇ ಇಲ್ಲ. ನಂಬದೆ ಸತ್ಯ-ಮಿಥ್ಯೆಗಳ ದ್ವಂದ್ವಗಳಲ್ಲಿ ತೊಳಲಾಡುವುದಕ್ಕಿಂತ, ನಂಬಿ ನೆಮ್ಮದಿಯಿಂದ ಇರಬಹುದಲ್ಲವೇ? ನಮ್ಮ ಭಾರತೀಯ ಸಿದ್ಧಾಂತಗಳಲ್ಲಿ ಪ್ರತಿಪಾದಿಸಲ್ಪಟ್ಟಂತೆ ಎಲ್ಲವು ಆ ಪರಮಾತ್ಮನೇ ಆದಮೇಲೆ ನಾನು, ನೀವು, ಅವನು, ಅವಳು, ಇದು, ಅದು, ಎಲ್ಲವು ಆ ಪರಮ ಶಕ್ತಿಯ ಸ್ವರೂಪವೇ ಎಂದ ಮೇಲೆ, ಎಲ್ಲವನ್ನೂ ಪ್ರೀತಿ ಪ್ರೇಮ ವಿಶ್ವಾಸದಿಂದ ಕಂಡು ಒಂದು ಸೌಹಾರ್ದಯುತವಾದ ಬಾಳು ನಡೆಸಲು ಸಾಧ್ಯವಲ್ಲವೇ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-32 )

ಪರಬೊಮ್ಮನೀ ಜಗವ ರಚಿಸಿದವನಾದೊಡದು | ಬರಿಯಾಟವವೋ ಕನಸೋ ನಿದ್ದೆ ಕಲವರಸವೋ? || ಮರುಳನವನಲ್ಲದೊಡೆ ನಿಯಮವೊಂದಿರಬೇಕು | ಗುರಿಗೊತ್ತದೇನಿಹುದೋ?-ಮಂಕುತಿಮ್ಮ ||

ಪದಗಳ ವಿಸ್ತರಣೆ

ರಚಿಸಿದವನಾದೊಡದು=ರಚಿಸಿದ+ಅವನು+ಆದೊಡೆ, ಮರುಳನವನಲ್ಲದೊಡೆ=ಮರುಳನು+ಅವನು+ಅಲ್ಲದೊಡೆ, ನಿಯಮವೊಂದಿರಬೇಕು=ನಿಯಮವು+ಒಂದು+ಇರಬೇಕು, ಗುರಿಗೊತ್ತದೇನಿಹುದೋ=ಗುರಿ+ಗೊತ್ತು+ಅದು+ಏನಿಹುದೋ

ಪದಗಳ ತಾತ್ಪರ್ಯ

ಪರಬೊಮ್ಮ=ಪರಬ್ರಹ್ಮ, ಪರಮಾತ್ಮ, ಜಗವ=ಜಗತ್ತನ್ನು, ಆದೊಡೆ=ಆದರೆ, ಕಲವರ=ಅರೆ ನಿದ್ರಾವಸ್ಥೆಯಲ್ಲಿ ಬಡಬಡಿಸುವುದು. ಮರುಳ=ಹುಚ್ಚ, ಗುರಿ=ಧ್ಯೇಯ, ಗೊತ್ತು=ಗತಿ ಮಾರ್ಗ.

ಪದ್ಯದ ಪೂರ್ತಿ ವಿವರಣೆ

ಆ ಪರಮಾತ್ಮನು, ನಾವು ಹಿಂದೆ ಹೇಳಿದಂತೆ, ಈ ಜಗತ್ತನ್ನು ಸೃಷ್ಟಿಸಿದ ಎಂದರೆ ಇದರ ಧ್ಯೇಯ ಮತ್ತು ದಿಶೆ ಎರಡೂ ಇಲ್ಲದೆ, ಒಂದು ನಿರ್ದಿಷ್ಟ ನಿಯಮವಿಲ್ಲದೆ ಏಕೆ ಹೀಗೆ ಇದೆ? ಮಾನವರಿಗೆ ಅರ್ಥವಾಗದ ಈ ಜಗತ್ತನ್ನು ಸೃಷ್ಟಿಸಿ, ಈ ಜಗತ್ತನ್ನು, ಬರಿ ಅವನಾಟವೆಂದೋ, ಕನಸೆಂದೋ, ಮಾಯೆಯೆಂದೋ ಹೇಳಿ, ಅರೆನಿದ್ರೆಯಲಿ ಆಡುವ ಅಸ್ಪಷ್ಟ ಮಾತುಗಳಂತೆ, ಈ ಜಗತ್ತಿನ ವಿಷಯದಲ್ಲಿ ಒಂದು ಸ್ಪಷ್ಟ ನಿರೂಪಣೆ ಏಕಿಲ್ಲವೆಂದು ಮತ್ತು ಇಂತಹ ಜಗತ್ತನ್ನು ಸೃಷ್ಟಿಮಾಡಿದ, ಆ ಪರಮಾತ್ಮನು ಹುಚ್ಚನಲ್ಲವಷ್ಟೇ ಎಂದು ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಪ್ರಸ್ತಾಪಿಸುತ್ತಾರೆ. ಈ ಮುಕ್ತಕಗಳನ್ನು ನೋಡಿದರೆ ಏಕೆ ಹೀಗೆ ಗುಂಡಪ್ಪನವರು ಮತ್ತೆ ಮತ್ತೆ ಇದೇ ಪ್ರಶ್ನೆಗಳನ್ನು ಬೇರೆ ಬೇರೆ ರೀತಿಯಲ್ಲಿ ಕೇಳಿದ್ದಾರೆ ಎಂದು ಸಂದೇಹವು ಬರುವುದು, ಸಹಜ. ವಿಷಯವೇಹಾಗಿದೆ. ಇದರ ವಿಚಾರವನ್ನು ಮತ್ತೆ ಮತ್ತೆ ಜಿಜ್ಞಾಸೆಗೆ ಒಳಪಡಿಸಿದರೂ ಅರ್ಥವಾಗದಷ್ಟು ಕ್ಲಿಷ್ಟ. ಓದುಗರ ಮನಸ್ಸನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚುವ ಪ್ರಯತ್ನ ಮಾನ್ಯ ಗುಂಡಪ್ಪನವರದು. ಹೀಗೆ ಅನ್ನಿಸುವುದು ಸಹಜ. ಆದರೆ ಇದರ ವ್ಯಾಪ್ತಿ ಮತ್ತು ವೈಶಾಲ್ಯ ಎಷ್ಟಿದೆ ಎಂದರೆ, ಸಮಗ್ರ ಸೃಷ್ಟಿಯನ್ನು ಅವಲೋಕನ ಮಾಡಲು ಮಾನವ ಮಾತ್ರರಿಂದೇನು, ದೇವತೆಗಳಿಗೂ ಅಸಾಧ್ಯವಾದ ವಿಷಯ. ಬ್ರಹ್ಮಾಂಡದ ಬೃಹದಾಕಾರವನ್ನು ಈಗಾಗಲೇ ಪ್ರಸ್ತಾಪ ಮಾಡಿದ್ದೇನೆ. ಕಣ್ಣಿಗೆ ಕಾಣದ್ದನ್ನು ನಾವು ಕಲ್ಪನೆ ಮಾಡಿಕೊಳ್ಳಬಹುದು ಅಥವಾ ಊಹಿಸಿಕೊಳ್ಳಬಹುದು. ಆದರೆ ಊಹೆಗೆ ನಿಲುಕದ್ದನ್ನ, ಅರ್ಥಮಾಡಿಕೊಳ್ಳುವುದು ಹೇಗೆ? ಆದರೆ ಮನುಷ್ಯನಿಗೆ ಚಿಂತನೆಯ ಶಕ್ತಿ ಎಂದಿನಿಂದ ಬಂತೋ ಅಂದಿನಿಂದ ಮೊದಲುಗೊಂಡು ಇಂದಿನವರೆಗೆ, ಹಲವಾರು ಮಹನೀಯರು, ತಮ್ಮ ತಮ್ಮ ಅರಿವಿನ ಮಿತಿಯೊಳಗೆ ಈ ಜಗತ್ತಿನ ಅರ್ಥವನ್ನು ಕಂಡುಕೊಳ್ಳಲು ಪ್ರಯತ್ನಪಟ್ಟಿದ್ದಾರೆ. ಆದರೆ ಎಲ್ಲೂ ಸಮಗ್ರ ಚಿತ್ರ ನಮಗೆ ಕಾಣುವುದಿಲ್ಲ. ಒಬ್ಬೊಬ್ಬರದು ಒಂದೊಂದು ವಿಶ್ಲೇಷಣೆ. ದೂರದಲ್ಲಿ ನಿಂತು ಒಬ್ಬೊಬ್ಬರ ವಿವರಣೆಯನ್ನು ಕಂಡಾಗ, ನಾವು ಬಹಳ ವಿಚಲಿತರಾಗಿ ಪರದಾಡುವಂತಾಗುತ್ತದೆ. ಏಕೆಂದರೆ, ಅಷ್ಟೊಂದು ವೈವಿಧ್ಯಮಯ ಚಿತ್ರಗಳು ನಮಗೆ ಕಾಣುತ್ತದೆ. ಇದೇನು ಬೊಂಬೆಯಾಟದಲ್ಲೋ ಅಥವಾ ಕನಸಿನಲ್ಲೋ ಘಳಿಗೆಗೊಂದು ಚಿತ್ರ ಮೂಡುವಂತೆ ಇದೆಯಲ್ಲ, ಈ ಸೃಷ್ಟಿಯ ವಿದ್ಯಮಾನಗಳೆಲ್ಲ, ಒಂದೇ ರೀತಿಯಲ್ಲಿ ಇಲ್ಲದಿರುವುದರಿಂದ ಅರ್ಥಮಾಡಿಕೊಳ್ಳಲು ಮತ್ತು ಮುಂದಣ ಚಿತ್ರವನ್ನು ಕಲ್ಪಿಸಿಕೊಳ್ಳಲೂ ಆಗುವುದಿಲ್ಲವಲ್ಲ ಎಂದು ನಾವು ಪರದಾಡುವಾಗ, "ಇದೊಂದು ಹುಚ್ಚು ಪ್ರಪಂಚ" ಎನ್ನುವ ಭಾವ ನಮಗೆಲ್ಲರಿಗೂ ಯಾವುದಾದರೂ ಸಮಯದಲ್ಲಿ ಬಂದಿರಬಹುದು ಅಥವಾ ಮುಂದೆಬರಬಹುದು. ಇದನ್ನೇ ಮಾನ್ಯ ಗುಂಡಪ್ಪನವರು "ಬರಿ ಆಟವೋ ಕನಸೋ ಕಲವರವೋ" ಎಂದಿದ್ದಾರೆ. ವಾಚಕರೆ, ದಯವಿಟ್ಟು ಆಲೋಚಿಸಿ. ನಮ್ಮ ಜೀವನದಲ್ಲೂ ಸಹ ನಮಗೆ ಈ ರೀತಿಯ ಭಾವನೆ ಬಂದಿರಬಹುದು. ಅರ್ಥವಾಗದ್ದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ನಮ್ಮ ಜೀವನದ ಗತಿಗೇಕೆ ಒಂದು ನಿಯಮವಿಲ್ಲ ಎಂದು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ. ಆದರೆ ನಿಯಮ ಇದೆ. ನಮಗೆ ಕಾಣುವುದಿಲ್ಲ. ಕಂಡರೂ ಅರ್ಥವಾಗುವುದಿಲ್ಲ. ಅರ್ಥವಾದರೂ ನಮ್ಮ ಮತಿಯ ಮಿತಿಯಿಂದ ಸಮಗ್ರ ಚಿತ್ರ ನಮ್ಮ ಮನಸ್ಸಿನಲ್ಲಿ ಮೂಡುವುದಿಲ್ಲ. ಯಾವುದು ನಮಗೆ ಅರ್ಥವಾಗುವುದಿಲ್ಲವೋ ಅದನ್ನು ನಾವು, ಈ ಜಗತ್ತು ಒಂದು ಮಾಯೆ, ಮಿಥ್ಯಾ ಲೋಕ ಮತ್ತು ನಮಗೆ ಈ ಜೀವನದಲ್ಲಿ ಸಂಭವಿಸುವುದೆಲ್ಲಾ ಆ ಪರಮಾತ್ಮನ ಇಚ್ಚೆಯಂತೆ ನಡೆಯುವುದು, ವಿಧಿ, ಹಣೆಬರಹ ಎಂದೆಲ್ಲ ಪರಿಭಾಷೆಯನ್ನು ಕೊಡುತ್ತಾ ಇರುತ್ತೇವೆ. ನಮಗಿರುವುದು ಅಲ್ಪ ಆಯಸ್ಸಿನ ಜೀವನ. ಎಂದು ಕೊನೆಯೋ ಗೊತ್ತಿಲ್ಲ. ಹತ್ತಾರು ಜನ್ಮದಲ್ಲಿ ಅದನ್ನೇ ಸಂಶೋಧನೆಯ ರೀತಿಯಲ್ಲಿ ಅರ್ಥೈಸುವುದಕ್ಕೆ ಪ್ರಯತ್ನಪಟ್ಟರೂ ಅರ್ಥವಾಗದ ಈ ಪರಮಾತ್ಮನ ಲೀಲೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು, ವೃಥಾ ವ್ಯರ್ಥ. ನಮಗಿಂತ ಹಿರಿಯರು, ಅನುಭವಿಗಳು, ಜ್ಞಾನವಂತರು, ಬುದ್ಧಿವಂತರು ನಮ್ಮೆದುರಿಗೆ ಇರುವಾಗ, ಅವರಾಡುವ ಮಾತುಗಳನ್ನು ಆಲಿಸಿ, ಒಳಗೆ ಮಂಥನ ಮಾಡಿಸಾರವನ್ನು ಹೀರುವ ಕೆಲಸ ಮಾಡಬೇಕೆ ಹೊರತು ವಾದ ಮತ್ತು ತರ್ಕದಲ್ಲಿ ಸಮಯ ಕಳೆದು ಸಿಕ್ಕ ಅವಕಾಶವನ್ನು ಕಳೆದುಕೊಳ್ಳುವುದು ಅವಿವೇಕದ ಕೆಲಸ. ಒಂದು ಜೀವನ ಸಿಕ್ಕಿದೆ. ಅರ್ಥಪೂರ್ಣವಾಗಿ ಜೀವಿಸುವುದು ಬಿಟ್ಟು ಅದರ ವಿಶ್ಲೇಷಣೆ ಮಾಡುತ್ತಾ, ಈಗಿರುವ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಈ ವಿಷಯದಲ್ಲಿ ನಾವು ನಮ್ಮದೇ ನಿಲುವನ್ನು ತಳೆಯಬೇಕು. ಸಾಧ್ಯವಾದಷ್ಟು ಅರ್ಥಮಾಡಿಕೊಳ್ಳಬೇಕು. ಅರ್ಥವಾಗದ್ದನ್ನು ಅವನಿಚ್ಛೆ, ವಿಧಿ ಎಂದು ಬಿಟ್ಟುಬಿಟ್ಟು ನೆಮ್ಮದಿಯಾಗಿ ಜೀವನ ಮಾಡಬೇಕು. ನಾವು ನೆಮ್ಮದಿಯಾಗಿದ್ದು ಮತ್ತೊಬ್ಬರ ನೆಮ್ಮದಿಯನ್ನು ಕೆಡಿಸದೆ ಜೀವನ ಮಾಡಿದರೆ ಅದು ಸಾರ್ಥಕ ಜೀವನ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-33 )

ನರಪರೀಕ್ಷೆಯೇ ಬೊಮ್ಮನಾಶಯವೇ? ನಮ್ಮ ಬಾಳ್| ಬರಿ ಸಮಸ್ಯೆಯೆ? ಅದರ ಪೂರಣವದೆಲ್ಲಿ? || ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ | ಗುರುವೆಂದು ಕರೆಯುವೆಯ?-ಮಂಕುತಿಮ್ಮ ||

ಪದಗಳ ವಿಸ್ತರಣೆ

ಬೊಮ್ಮನಾಶಯವೇ=ಬೊಮ್ಮನ+ಆಶಯವೇ, ಪೂರಣವದೆಲ್ಲಿ=ಪೂರನವು+ಅದೆಲ್ಲಿ, ಪ್ರಶ್ನೆಗಳನುತ್ತರವ=ಪ್ರಶ್ನೆಗಳನು+ಉತ್ತರವ, ಗುರುವೆಂದು=ಗುರುವು+ಎಂದು.

ಪದಗಳ ತಾತ್ಪರ್ಯ

ನರ=ಮಾನವ, ಬೊಮ್ಮ=ಪರಬ್ರಹ್ಮ, ಪೂರಣ=ಮುಗಿವು, ಅಂತ್ಯ, ಕುಡೆ=ಕೂಡ, ಬಾರದನ=ಬಾರದವನ

ಪದ್ಯದ ಪೂರ್ತಿ ವಿವರಣೆ

"ಬಸ್ಸಿನಲ್ಲಿ ಹೋಗುವಾಗ, ಹಿಂದೆ ನೋಡಲು ತಲೆ ಹೊರಗೆ ಹಾಕಿ, "ತಲೆ ಒಡೆಸಿಕೊಂಡವ" ನಂತೆ, ನಮಗೆ ನಮ್ಮ ಜೀವನದಲ್ಲಿ ಮರುಕ್ಷಣ ಏನಾಗುತ್ತದೆ ಎಂದು ಗೊತ್ತಿಲ್ಲ. ನಾವು ನೆನೆವುದು ಒಂದು ನಡೆಯುವುದೇ ಒಂದು. ಇಲ್ಲಿ "ನಾವು ನೆನೆದದ್ದೇ ಸರಿ ಇರಲಿಲ್ಲ, ಹಾಗಾಗಿ ಹೀಗಾಯಿತು" ಎಂದು ಅಂದುಕೊಳ್ಳುವವರು ಎಷ್ಟು ಜನ. "ಅಯ್ಯೋ ದೇವರೇ ಇದೇನು ನಿನ್ನ ಆಟ" "ನಮ್ಮ ಹಣೆಬರಹವೇ ಸರಿ ಇಲ್ಲ" "ಆ ದೇವರು ನಮ್ಮನ್ನು ಏಕೆ ಹೀಗೆ ಪರೀಕ್ಷೆ ಮಾಡುತ್ತಾನೆ" ಎಂದು ಅಂದು ಕೊಳ್ಳುವವರೇ ಬಹಳ ಜನ. ಅದನ್ನು ದೇವರಾಟ, ನಮ್ಮ ಹಣೆಬರಹ, ವಿಧಿಲಿಖಿತ ಎಂದು ಏನೇನೋ ವ್ಯಾಖ್ಯಾನವನ್ನು ನಾವು ಮಾಡುತ್ತಿರುತ್ತೇವೆ. ಅದನ್ನೇ ಮಾನ್ಯ ಗುಂಡಪ್ಪನವರು “ನರಪರೀಕ್ಷೆಯೇ ಬೊಮ್ಮನಾಶಯವೇ” ಎಂದು ಕೇಳುತ್ತಾ ನರರನ್ನು ಅವರವರ ಜೀವನದಲ್ಲಿ ಪರೀಕ್ಷಿಸುವುದೇ ಆ ಪರಮಾತ್ಮನ ಆಶಯವೋ? ಎಂದು ಪ್ರಸ್ತಾಪಿಸುತ್ತಾರೆ. ಕೆಲವರಿಗೆ ಕೊರತೆಯ ಅಥವಾ ಆಧಿಕ್ಯದ ಸಮಸ್ಯೆ, ಹಣದ, ಆರೋಗ್ಯದ, ವೃತ್ತಿಯ, ಮಕ್ಕಳ ಓದು ವಿದ್ಯಾಭ್ಯಾಸದ, ಮಕ್ಕಳೇ ಇಲ್ಲದ, ಅಕ್ಕ ಪಕ್ಕದ ಜನರ, ಪ್ರೇಮದ, ದಾಂಪತ್ಯದ, ಹೀಗೆ ಎಲ್ಲರಿಗೂ ಯಾವುದೋ ಒಂದು ರೀತಿಯ ಸಮಸ್ಯೆ ಇದೆ. ಇದು ಪ್ರಪಂಚದಲ್ಲಿರುವ ಎಲ್ಲ ಮನುಷ್ಯರಿಗೂ ಅನ್ವಯವಾಗುತ್ತದೆ. ಸಮಸ್ಯೆಗಳಿಲ್ಲದವರು ಈ ಪ್ರಪಂಚದಲ್ಲೇ ಅತೀ ವಿರಳ. ಆ ಪರಮಾತ್ಮನಿಗೂ ಇಷ್ಟು ಜೀವರಾಶಿಗಳು ಮತ್ತು ಇಡೀ ಜಗತ್ತಿನ ನಿಯಮವನ್ನು ಪಾಲಿಸುವುದೇ ಕಷ್ಟವೆನಿಸಬಹುದು. ಪ್ರತಿ ನಿಯಮಕ್ಕೂ ಒಂದು ಅಪವಾದವಿರುವಂತೆ, ಎಲ್ಲೋ ಕೋಟಿಗೊಬ್ಬನಿಗೆ ಯಾವ ಸಮಸ್ಯೆಯೂ ಇಲ್ಲದಂತೆ ಇರಬಹುದು. "ಇರಬಹುದು" ಎಂದೆ. ಎಲ್ಲವನ್ನೂ ಆ ಪರಮಾತ್ಮನೇ ಸೃಜಿಸುವವನು ಎಂಬುವುದನ್ನು ಒಪ್ಪಿಕೊಂಡರೆ, ಈ ರೀತಿಯ ಸಮಸ್ಯೆಗಳನ್ನು ಕೊಟ್ಟು ಆ ಪರಮಾತ್ಮ ಮನುಷ್ಯರನ್ನು ಪರೀಕ್ಷಿಸುವುದೇ ಆಶಯವೇನು? ಈ ಸಮಸ್ಯೆಗಳಿಗೆ ಕೊನೆಯಾವುದು? ಎಂದು ಗುಂಡಪ್ಪನವರು ಕೇಳುತ್ತಾರೆ. ಹಾಗೆ ಸಮಸ್ಯೆ ಇರುವವರೆಲ್ಲರೂ ತಮ್ಮ ತಮ್ಮ ಸಮಸ್ಯೆಗಳಿಗೆ ಕಾರಣವನ್ನೋ ಅಥವಾ ಪರಿಹಾರವನ್ನೋ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ತೃಪ್ತಿ ಇಲ್ಲದವರಿಗೆ, ಒಂದು ಸಮಸ್ಯೆ ಪರಿಹಾರವಾದರೆ ಇನ್ನೊಂದು ಉದ್ಭವವಾಗುತ್ತದೆ. ನಮ್ಮ ಅರಿವಿಗೆ ಬಾರದ ಕಾರಣಗಳಿಗಾಗಿ ನಾವು ಏನನ್ನಾದರೂ ಅನುಭವಿಸುತ್ತೇವೆ ಅದನ್ನು ತಿಳಿದುಕೊಳ್ಳಲು ಮತ್ತು ಪರಿಹಾರ ಕಂಡುಕೊಳ್ಳಲು ನಮಗಿಂತ ಅಧಿಕವಾಗಿ ತಿಳಿದವರೆನಿಸಿಕೊಂಡವರಲ್ಲಿ, ಸಂದೇಹ ನಿವಾರಣೆಗೋ ಅಥವಾ ಸೂಕ್ತ ಪರಿಹಾರಕ್ಕಾಗಿಯೋ ಹೋಗುವುದು ಸಹಜ. ಆದರೆ ಇಂದಿಗೂ ಈ ಜೀವನದಲ್ಲಿ ನಮಗೆ ನಡೆದ ವಿಷಯಗಳ ವಿಶ್ಲೇಷಣೆಯನ್ನು ಕರಾರುವಾಕ್ಕಾಗಿ ಹೇಳಿದವರಾಗಲೀ ಅಥವಾ ಸತ್ಯವನ್ನು ಅರ್ಥಮಾಡಿಕೊಂಡವರಾಗಲೀ ಇಲ್ಲ. ಆದರೆ ಕೇವಲ ಊಹೆಯಿಂದ ಮತ್ತು ತಮ್ಮ ವಾಕ್ಚಾತುರ್ಯದಿಂದ ಜನರನ್ನು ನಂಬಿಸುವುದೋ ಅಥವಾ ತೋರಿಕೆಯ ಶಾಸ್ತ್ರಗಳನ್ನು ಹೇಳಿ ಉಪಾಯವನ್ನು ಸೂಚಿಸುವುದೋ ಮಾಡುತ್ತಾರೆ. ಅದನ್ನು ಕೇಳಿದ ನಮ್ಮ "ಸಮಸ್ಯಾಪ್ರಾಣಿ" ಒಂದು ಮಾನಸಿಕ ನೆಮ್ಮದಿಯನ್ನು ಪಡೆದು ಅದನ್ನು ಪಾಲಿಸುವುದೋ ಅಥವಾ ಒಂದು ತಾತ್ಕಾಲಿಕ ಸಾಂತ್ವನವನ್ನು ಕಂಡುಕೊಳ್ಳುವುದೋ ನಡೆಯುತ್ತದೆ. ಅಂದರೆ ನಮ್ಮ ಸಮಸ್ಯೆಗಳು ಅರ್ಥವೇ ಆಗದ ಮತ್ತು ಸತ್ಯದ ಆಧಾರದ ಮೇಲೆ ನಮಗೆ ಸೂಕ್ತ ಮಾರ್ಗದರ್ಶನ ಮಾಡಲಾಗದ ವ್ಯಕ್ತಿಯನ್ನು ನಾವು "ಗುರು" ಎಂದು ಹೇಗೆ ಒಪ್ಪಿಕೊಳ್ಳುವುದು ಎಂದು ಮಾನ್ಯ ಗುಂಡಪ್ಪನವರು ಪ್ರಶ್ನಿಸುತ್ತಾರೆ. ಏನು ಮಾಡಬೇಕು ಎನ್ನುವುದೇ ಒಂದು ‘ಸಮಸ್ಯೆ’. ಹುಟ್ಟಿಯಾಗಿದೆ, ಸಾಯುವತನಕ ಕಷ್ಟವೋ ನಿಷ್ಟೂರವೋ ಅನುಭವಿಸಲೇ ಬೇಕು. ನಮಗೆ ಈ ಜೀವನದಲ್ಲಿ ನಡೆಯುವ ಗತಿ ವಿಧಿಗಳು ಸಂಪೂರ್ಣವಾಗಿ "ಏಕೆ ಹೀಗೆ ನಡೆಯುತ್ತದೆ" ಎಂದು ಅರ್ಥವಾಗುವುದೇ ಇಲ್ಲ. ನಮಗೆ ಅರ್ಥವಾಗದ ವಿಷಯವಾದ್ದರಿಂದ ಗತ್ಯಂತರವಿಲ್ಲದೆ ಬೇರೆ ಏನನ್ನೋ ನಂಬಬೇಕು, ಅನ್ಯ ದಾರಿಯಿಲ್ಲ. ಈ ಜಗತ್ತು ಮತ್ತು ಅದರಲ್ಲಿ ನಮ್ಮಂತಹ ಪಾತ್ರಧಾರಿಗಳ ನಡುವೆ ನಡೆಯುವ ನಾಟಕವೆಲ್ಲ, ಆ ಪರಮಾತ್ಮನ ಇಚ್ಛೆಯಂತೆ ನಡೆಯುತ್ತದೆ ಎನ್ನುವುದನ್ನು ಒಪ್ಪುವುದಾದರೆ, ಆ ದೇವರನ್ನು ನಂಬಬೇಕು. "ಪರೀಕ್ಷೆಯೋ ವಿಧಿಲಿಖಿತವೋ" ಅನುಭವಿಸಬೇಕು. ಏಕೆಂದರೆ ಬೇರೆ ದಾರಿ ಅಥವಾ ಪರಿಹಾರ ಇಲ್ಲ ಅಥವಾ ಇದ್ದರೂ ನಮಗೆ ಗೊತ್ತಿಲ್ಲ. ಇದನ್ನು ನಿವಾರಿಸಲು ಸಾಧ್ಯವಾಗದಾಗ ಆ ದೇವರನ್ನು ನಂಬಿ ಬಂದದ್ದನ್ನೆಲ್ಲಾ ಅನುಭವಿಸುವುದು, ನೆಮ್ಮದಿ. ಮಾಡುವ ಕೆಲಸವನ್ನು ನಿರ್ವಂಚನೆಯಿಂದ ಮಾಡುತ್ತಾ, ಎಲ್ಲವು ಆ ಪರಮಾತ್ಮನ ಇಚ್ಛೆಯಂತೆ ನಡೆಯುತ್ತದೆ ಎಂದು ಆ "ವಿಚಿತ್ರಕೆ" ಶರಣಾದರೆ ಸುಖ, ಶಾಂತಿ ಮತ್ತು ನೆಮ್ಮದಿ. ನಂಬದೆ ತೊಳಲಿ ಬಳಲುವುದೋ, ನಂಬಿ ಆನಂದಿಸುವುದೋ ನಮ್ಮ ಕೈಯಲ್ಲೇ ಇದೆ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-34 )

ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ | ಸೃಷ್ಟಿಯಲಿ ತತ್ವವೆಲ್ಲಿಯೋ ಬೆದಕಿ ನರನು || ಕಷ್ಟಪಡುತಿರಲೆನುವುದೇ ಬ್ರಹ್ಮ ವಿಧಿಯೇನೋ! | ಅಷ್ಟೇ ನಮ್ಮಯ ಪಾಡು-ಮಂಕುತಿಮ್ಮ ||

ಪದಗಳ ವಿಸ್ತರಣೆ

ಚಿಂತಿಸಿದೊಡಂ=ಚಿಂತಿಸಿ+ದೊಡಂ, ತತ್ವವೆಲ್ಲಿಯೋ=ತತ್ವವು+ಎಲ್ಲಿಯೋ, ಕಷ್ಟಪಡುತಿರಲೆನುವುದೇ=ಕಷ್ಟ+ಪಡುತಿರಲಿ+ಎನುವುದೇ

ಪದಗಳ ತಾತ್ಪರ್ಯ

ಚಿಂತಿಸಿದೊಡಂ=ಚಿಂತಿಸಿದರೂ, ಶಂಕೆಯನು=ಸಂದೇಹವನ್ನು, ಬೆಳೆಸುವೀ=ಅಧಿಕವಾಗಿಸುವ

ಪದ್ಯದ ಪೂರ್ತಿ ವಿವರಣೆ

ಈ ಜಗತ್ತಿನ ಸೃಷ್ಟಿಯ ಬಗ್ಗೆ ಎಷ್ಟು ಚಿಂತಿಸಿದರೂ ನಿವಾರಣೆಯಾಗದ ಅನುಮಾನಗಳು, ಸಂದೇಹಗಳು ಹಾಗೆ ಉಳಿದಿವೆ. ಈ ಸೃಷ್ಟಿಯ ರಹಸ್ಯವನ್ನು ಛೇಧಿಸುವುದಕ್ಕಾಗಿ, ತತ್ವಗಳ ಹುಡುಕಿ, ತಡಕಿ ಕಷ್ಟಪಡುವುದೇ ಮಾನವರಿಗೆ ಆ ಪರಮಾತ್ಮ ಬರೆದ ಹಣೆಬರಹವವೋ, ಇಷ್ಟೇಯೇ? ನಮ್ಮ ಪಾಡು ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು. ಗಾಳಿ ಹೇಗೆ ಬೀಸುತ್ತದೆ, ಮಳೆ ಹೇಗೆ ಬೀಳುತ್ತದೆ, ಬೆಂಕಿ ಏಕೆ ಸುಡುತ್ತದೆ, ಸೂರ್ಯನಾರು, ಚಂದ್ರನಾರು ಈ ಗ್ರಹಗಳೇನು?? ನಕ್ಷತ್ರಗಳೇನು? ಇಡೀ ಸೃಷ್ಟಿಯಲ್ಲಿ ಇಷ್ಟೊಂದು ಬಗೆ ಏಕೆ? ಹುಟ್ಟು ಎಂದರೆ ಏನು? ಯಾವುದರ ಹುಟ್ಟು? ಸಾವು ಎಂದರೇನು? ಸಾವಿನ ನಂತರ ಏನು? ಕೋಟಿ ಕೋಟಿ ವೈವಿಧ್ಯತೆಯನ್ನು ಹೊಂದಿರುವ ಈ ಜಗತ್ತಿನ ಸೃಷ್ಟಿಯ ಉದ್ದೇಶವೇನು? ಸೃಷ್ಟಿಯು ಹೀಗೆ ಏಕೆ ಇದೆ? ಇದರ ಹಿಂದಿನ ಶಕ್ತಿಯಾವುದು? ಅದರ ಸ್ವರೂಪವೇನು? ಇದು ಹೀಗಿರಬಹುದೇ ಅಥವಾ ಹಾಗಿರಬಹುದೇ? ಹೀಗೆ ಮಾನವನಲ್ಲಿ ವಿಚಾರ ಶಕ್ತಿ ಮೂಡಿದಾಗಿನಿಂದ ಇಂದಿನವರೆಗೆ ಹತ್ತು ಹಲವಾರು ಸಾವಿರಾರು ಪ್ರಶ್ನೆಗಳು ಮನುಷ್ಯರನ್ನು ಕಾಡಿದೆ. ಪ್ರಾಣಿಗಳನ್ನೂ ಕಾಡುತ್ತದೆಯೋ ಏನೋ! ನಮಗೆ ಗೊತ್ತಿಲ್ಲ. ಈ ಸೃಷ್ಟಿಯನ್ನು ಪರಮಾತ್ಮನ ಲೀಲಾ ವಿನೋದವೆಂದರು. ಇದು ಅವನ ಸಂಕಲ್ಪದಿಂದ ಆದದ್ದು ಎಂದರು. ಆ ಸಂಕಲ್ಪಕ್ಕೆ ಕಾರಣವನ್ನು ಬೆದಕಿ ಬೆದಕಿ, ಅವರವರಿಗೆ ಏನೇನು ತೋಚಿತೋ ಅದನ್ನೇ ಒಂದು ಸಿದ್ಧಾಂತದ ರೂಪದಲ್ಲಿ ಪ್ರತಿಪಾದಿಸಿದರು. ಅದಕ್ಕೊಂದು ಕ್ರಮವನ್ನು ವಿವರಿಸಿದರು. "ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃಸಂಭೂತಃ ಆಕಾಶಾದ್ವಾಯುಃ ವಾಯೋರಗ್ನಿಃ ಅಗ್ನೇರಾಪಃ ಅಧ್ಭ್ಯಃ ಪೃಥಿವೀ, ಪ್ರುಥಿವ್ಯಾ ಓಷದಯಃ ಓಷದೀಭ್ಯೋನ್ನಂ, ಅನ್ನಾತ್ ಪುರುಷಃ" ಹೀಗೆ ಆತ್ಮನಿಂದ ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ನೀರು, ನೀರಿನಿಂದ ಪೃಥ್ವಿ, ಪೃಥ್ವಿಯಿಂದ ಗಿಡಮರಗಳು, ಗಿಡಮರಗಳಿಂದ ಆಹಾರ, ಆಹಾರದಿಂದ ಶಕ್ತಿ ಉಂಟಾಯಿತು ಎಂದು ಒಂದು ಕ್ರಮವಾದ ಸೃಷ್ಟಿಯ ಪ್ರಕ್ರಿಯೆಯನ್ನು ಹೇಳುತ್ತಾರೆ. ಬಹಳ ವೈಜ್ಞಾನಿಕವಾಗಿ ಕಾಣುತ್ತದೆ. ನಮ್ಮ ಅನುಭವಕ್ಕೆ ಹತ್ತಿರವಾಗಿ ಕಾಣುತ್ತದೆ. ಆದರೆ ಇದನ್ನು ಎಲ್ಲರೂ ಒಪ್ಪುವುದಿಲ್ಲವೇ? ಹಾಗಾಗಿ ಇದು ಸರ್ವ ಮಾನ್ಯವಾಗಿಲ್ಲ. ಬೇರೇನೋ ಇರಬೇಕೆಂಬ ಹುಡುಕಾಟ ನಡೆದೇ ಇರುತ್ತದೆ. ಈ ರೀತಿ ಹುಡುಕಾಡುವುದೇ ಮಾನವನ ಹಣೆ ಬರಹವೋ? ಎಂದು ಶ್ರೀ ಗುಂಡಪ್ಪನವರು ಕೇಳುತ್ತಾರೆ. ನಮಗೆ ಯಾವುದೋ ತಿಳಿದಿಲ್ಲವೆಂದು ಇಟ್ಟುಕೊಳ್ಳೋಣ. ಆಗ ಯಾರೋ ಒಬ್ಬರು ತಮ್ಮ ಆತ್ಮವಿಶ್ವಾಸದಿಂದ ಮತ್ತು ವಾಗ್ಝರಿಯಿಂದ ಹೇಳಿದ ಮಾತುಗಳನ್ನು ನಂಬುವುದು ನಮ್ಮ ಪರಿಪಾಠ. ಏಕೆಂದರೆ ಮಹಾಸಾಗರದಲ್ಲಿ ಈಜಲು ಬಾರದವನಿಗೆ ಒಂದು ಹುಲ್ಲು ಕಡ್ಡಿಯನ್ನಾದರೂ ಸಹ ಹಿಡಿದುಕೊಳ್ಳಲು ಪ್ರಯತ್ನಪಡುತ್ತಾನೆ ಅಲ್ಲವೆ. ಹಾಗಿದೆ ನಮ್ಮ ಸ್ಥಿತಿಯೂ ಕೂಡ. ದೇಶ, ಕಾಲ, ಪ್ರದೇಶಗಳಿಗೆ ಅನುಗುಣವಾಗಿ ಆಯಾ ಸಮಯದಲ್ಲಿ ಯಾರು ಯಾರು ಏನೇನನ್ನು ಹೇಳಿದರೋ ಅದೆಲ್ಲ ಬೇರೆ ಬೇರೆ ತತ್ವಗಳಾಗಿ ಪ್ರತಿಪಾದಿಸಲ್ಪಟ್ಟು ಬೇರೆ ಬೇರೆ ಸಿದ್ಧಾಂತಗಳು ಆಗಿವೆ. ಅಂದರೆ ಆಂತರ್ಯದಲ್ಲಿ ಎಲ್ಲ ಸಿದ್ಧಾಂತಗಳೂ ಹೇಳುವುದು ಒಂದೇ ಸತ್ಯವನ್ನಾದರೂ, ಹೇಳುವ ರೀತಿ ಬೇರೆ ಆದ್ದರಿಂದ ಮತ್ತು ಅದರ ಬಾಹ್ಯ ರೂಪ ಬೇರೆ ಆದ್ದರಿಂದ "ಅದು ಮತ್ತು ಇದು ಬೇರೆ ಬೇರೆ" ಎನ್ನುವ ರೀತಿಯಲ್ಲಿ ನೋಡಲಾಗಿದೆ. ಹಾಗೆ ಬಂದುದೇ ಅನೇಕಾನೇಕ ಸಿದ್ಧಾಂತಗಳು. ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಶೈವ, ವೈಷ್ಣವ, ಬೌದ್ಧ, ಜೈನ, ಪಾರಸೀಕ, ಕ್ರೈಸ್ತ, ಇಸ್ಲಾಮಿಕ ಹೀಗೆ ಹತ್ತು ಹಲವಾರು ಮತಗಳು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ರೂಪದಲ್ಲಿ ಬೇರೆ ಬೇರೆ ಸಮಯದಲ್ಲಿ ಪ್ರತಿಸಾದಿಸಿದ ತತ್ವಗಳು ಮೂಲದಲ್ಲಿ ಒಂದೇ ಆದರೂ ಹೊರಗೆ ಭಿನ್ನ ಭಿನ್ನವಾಗಿ ಕಂಡು, ಜನರ "ಇದು ಸರಿಯೋ ಅಥವಾ ಅದು ಸರಿಯೋ" ಎನ್ನುವ ಸಂದೇಹಗಳಿಗೆ ಕಾರಣವಾಗುತ್ತದೆ. ಒಂದು ತತ್ವ ಎಲ್ಲರಿಗೂ ಸಮಾನವಾಗಿ ಅರ್ಥವಾಗುವಂತೆ ಇಲ್ಲದೆ, ಜನರು ಈ ಸೃಷ್ಟಿಯನ್ನು ಅರ್ಥೈಸಿಕೊಳ್ಳಲು ಪರದಾಡುತ್ತಿದ್ದಾರೆ ಎಂದು ಈ ಮುಕ್ತಕದ ಭಾವ. ಒಂದು ಶಕ್ತಿ ಈ ಸೃಷ್ಟಿಯ ಮೂಲ. ಅದರ ರೂಪಗಳು ಹಲವಾರು. ನಾವು ರೂಪಗಳನ್ನು ಬಿಡುವ, ನಾಮಗಳನ್ನು ಬಿಡುವ, ಭೇದಗಳನ್ನು ಬಿಡುವ, ಪ್ರಭೇದಗಳನ್ನು ಬಿಡುವ, ವಿದ್ಯುತ್ ತಂತಿಯಲ್ಲಿ ಹರಿಯುವ ವಿದ್ಯುತ್ ಬೇರೆ ಬೇರೆ ಸಾಧನಗಳ ಮೂಲಕ ಬೇರೆ ಬೇರೆ ಕೆಲಸಗಳಿಗಾಗಿ ಉಪಯೋಗಿಸಿದರೂ ತಾನು ಒಂದೇ ರೀತಿ ಇದ್ದಂತೆ ನಮ್ಮ ನಿಮ್ಮಲ್ಲಿ ಮತ್ತು ಎಲ್ಲ ಪ್ರಾಣಿಗಳಲ್ಲೂ ಏಕ ರೂಪದಲ್ಲಿ ಚೇತನಾ ಸ್ವರೂಪದಲ್ಲಿರುವ ಆ ಪರಮಾತ್ಮ ಶಕ್ತಿಯನ್ನು ನಾವು ಈ ಜಗತ್ತಿನಲ್ಲಿ ನಮ್ಮ ಅಸ್ಥಿತ್ವಕ್ಕೆ ಕಾರಣವೆಂದು ಸ್ಮರಿಸಿ, ನಮಿಸಿ, ಕೃತಜ್ಞತೆಯನ್ನು ಸಲ್ಲಿಸುತ್ತಾ, ನಮ್ಮ ನಮ್ಮಲ್ಲಿರುವ ಭೇದಗಳನ್ನು ಅಳಿಸುವ ಪ್ರಯತ್ನವನ್ನು ಮಾಡೋಣವೆ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-35 )

ಇರಬಹುದು; ಚಿರಕಾಲ ಬೊಮ್ಮ ಚಿಂತಿಸಿ ದುಡಿದು | ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು | ಅರಿತೆನಾನೆನ್ನುವಂತಾಗೆ ಕೃತಿಕೌಶಲದ | ಹಿರಿಮೆಗದು ಕುಂದಲ್ತೆ?-ಮಂಕುತಿಮ್ಮ ||

ಪದಗಳ ವಿಸ್ತರಣೆ

ಅರಿತೆನಾನೆನ್ನುವಂತಾಗೆ=ಅರಿತೆ+ನಾನು+ಎನ್ನುವಂತೆ+ಆಗೆ, ಹಿರಿಮೆಗದು=ಹಿರಿಮೆಗೆ+ಅದು,

ಪದಗಳ ತಾತ್ಪರ್ಯ

ಬೊಮ್ಮ=ಪರಬ್ರಹ್ಮ, ಪರಮಾತ್ಮ, ನಿರವಿಸಿಹ=ನಿರ್ಮಿಸಿರುವ, ವಿಶ್ವಚಿತ್ರವ=ಈ ಜಗತ್ತಿನ ರಹಸ್ಯವನ್ನು, ಮರ್ತ್ಯ ನರನು=ಮರಣವನ್ನು ಹೊಂದುವ ಮನುಷ್ಯನು, ಅರಿತೆನಾನೆನ್ನುವಂತಾಗೆ=ನಾನು ಅರಿತಿದ್ದೇನೆ ಎನ್ನುವಂತಾದರೆ, ಕೃತಿಕೌಶಲದ=ಕುಶಲತೆಯಿಂದ ಮಾಡಿದ

ಪದ್ಯದ ಪೂರ್ತಿ ವಿವರಣೆ

ಬಹಳ ಕಾಲ ಯೋಚನೆ ಮಾಡಿ ಶ್ರಮಪಟ್ಟು ಆ ಪರಮಾತ್ಮ ಈ ಅದ್ಭುತವಾದ ಜಗತ್ತನ್ನು ನಿರ್ಮಿಸಿರುವಾಗ, ಕೆಲ ಕಾಲ ಬದುಕಿ ಸಾವನ್ನಪ್ಪುವ ಯಃಕಶ್ಚಿತ್ ಮಾನವನೆಂಬ ಪ್ರಾಣಿ "ಇದರ ರಹಸ್ಯವನ್ನು ತಾನು ಅರಿತುಕೊಂಡುಬಿಟ್ಟೆ" ಎಂದರೆ, ತನ್ನ ಹಿರಿಮೆ, ಶ್ರಮ ಮತ್ತು ಕುಶಲತೆಗಳಿಗೆ ಕುಂದು ಅಥವಾ ಕಳಂಕ ಬಂದಂತೆ ಆಗುತ್ತದೆ ಎಂದು, ಆ ಪರಮಾತ್ಮ, ಆ ಜಗತ್ತಿನ ರಹಸ್ಯಗಳನ್ನು ಸಂಪೂರ್ಣವಾಗಿ ಮಾನವರು ಅರಿತುಕೊಳ್ಳುವಶಕ್ತಿಯನ್ನು ಕೊಡಲಿಲ್ಲವೋ ಏನೋ? ಎಂಬ ಕುಹಕವನ್ನಾಡುತ್ತಾ, ಒಂದು ವಿಡಂಬನಾತ್ಮಕವಾದ ವಿಚಾರಧಾರೆಯನ್ನು ನಮ್ಮ ಮುಂದಿಡುತ್ತಾ, ಎರಡು ವಿಚಾರಗಳನ್ನು ನಮಗೆ ತಿಳಿಸುತ್ತಾರೆ ಶ್ರೀ ಗುಂಡಪ್ಪನವರು. ಒಂದು, ಈ ಜಗತ್ತಿನ ಸೃಷ್ಟಿಯ ವೈಶಾಲ್ಯತೆ ಮತ್ತು ಸುಂದರತೆ. ಎಲ್ಲವು ಸಮರ್ಪಕವಾಗಿ ಎಲ್ಲೆಲ್ಲಿ, ಹೇಗೆ, ಯಾವ ಪ್ರಮಾಣದಲ್ಲಿ ಇರಬೇಕೋ ಎಲ್ಲವು ಹಾಗೆ ಇದೆ ಈ ಸೃಷ್ಟಿ. ಅದಕ್ಕೆ ನಮ್ಮ ದೇಹಗಳನ್ನೇ ತೆಗೆದುಕೊಳ್ಳೋಣ.ತಲೆ, ಮೆದುಳು, ಕಣ್ಣು, ಕಿವಿ, ಕತ್ತು, ಮೂಳೆಗಳು, ಚರ್ಮ, ಎಲ್ಲ ಅಂಗಾಂಗಗಳೂ ಸಹ ಒಂದಕ್ಕೊಂದು ಪೂರಕವಾಗಿ ಕೆಲಸಮಾಡುವಂತೆ ಎಷ್ಟು ಸುಂದರವಾಗಿದೆ. ಸೂರ್ಯ ಚಂದ್ರರು, ಎಲ್ಲ ಗ್ರಹಗಳು, ಅವುಗಳಲ್ಲಿನ ಪರಸ್ಪರ ಅಂತರ ಮತ್ತು ಆ ಅಂತರದಿಂದಾಗುವ ಋತುಮಾನಗಳು ಮತ್ತು ಋತುಮಾನ ಬದಲಾವಣೆಯ ಸಮಯಕ್ಕೆ ಸರಿಯಾಗಿ ಆಗಬೇಕಾದ ಬದಲಾವಣೆಗಳು ಬಹಳ ಸಮರ್ಪಕವಾಗೇ ಇದೆಯಲ್ಲ. ಇದು ಏಕೆ ಹೀಗೆ? ಹಾಗೆ ಯಾಕಿರಬಾರದು ಎಂದು ಪ್ರಶ್ನೆಯೇ ಉದ್ಭವವಾಗಬಾರದು, ಹಾಗಿದೆ ಆ ಪರಬ್ರಹ್ಮನ ಕುಶಲತೆ. ಹೀಗೇ ವರ್ಣಿಸುತ್ತಾ ಹೋದರೆ ಪದಗಳು ಮತ್ತು ಪುಟಗಳು ಸಾಲುವುದೇ ಇಲ್ಲ. ಅಷ್ಟು ಸಮರ್ಪಕ ಮತ್ತು ಪರಿಪೂರ್ಣ ಮತ್ತು ಅಷ್ಟು ಸುಂದರ. ಮತ್ತೊಂದು ಕಡೆ ಇರುವುದು, ಮಾನವರ ಅಪರಿಪೂರ್ಣತೆ, ಅಸಹಾಯಕತೆ ಮತ್ತು ನ್ಯೂನತೆಗಳು. ನಮಗೆ ಯಾವುದೂ ಸಂಪೂರ್ಣ ಅರ್ಥವಾಗುವುದಿಲ್ಲ. ಯಾವುದನ್ನೂ ಸರಿಯಾದ ದಿಕ್ಕಿನಲ್ಲಿ ಯೋಚಿಸಲಾಗುವುದಿಲ್ಲ. ಎಲ್ಲವು ಅಯೋಮಯ. ದಿಕ್ಕು ತೋಚದ ಪರಿಸ್ಥಿತಿ. ನಮ್ಮ ಮಿತಿಗಳು ಹೇಗಿವೆ ಎಂದರೆ, ಕೆಲವರು ಯೋಚಿಸಲು ಅಸಮರ್ಥರು. ಕೆಲವರಿಗೆ ಯೋಚಿಸಲು ಸಮಯವಿಲ್ಲ. ಕೆಲವರಿಗೆ ಯೋಚಿಸುವುದು ಬೇಕಿಲ್ಲ. ಕೆಲವರು ಪೂರ್ವಾಗ್ರಹ ಪೀಡಿತರು. ಕೆಲವರು ಯೋಚಿಸಲು ಇಷ್ಟಪಟ್ಟರೂ ಸಾಮಥ್ಯದ ಮಿತಿ ಇರುವವರು. ಅಂದರೆ ಒಂದು ಮಿತಿಗೆ ಮೀರಿ ಅವರು ಯೋಚಿಸಲಾರರು. ಕೆಲವರು ಅಹಂಕಾರದಿಂದ ಇಲ್ಲದ್ದನ್ನು ಇದೆಯೆಂದು ಕಲ್ಪಿಸುತ್ತಾ ತಮ್ಮ ವಾದವೇ ಸರಿಯಾದದ್ದು ಎಂದು ಮೊಂಡುವಾದ ಮಾಡುವವರು. ಹಾಗಾಗಿ ನಮಗೆ ಯಾವುದೂ ಅರ್ಥವಾಗುವುದಿಲ್ಲ. ಇದೊಂದು ಬಹಳ ವೈಶಾಲ್ಯವಿರುವ ಚಿತ್ರ. ಒಂದು ಕಡೆಯಿಂದ ಇನ್ನೊಂದು ಕಡೆಗೆ ನೋಡುವುದಕ್ಕೆ ನಮ್ಮ ಕಣ್ಣ ದೃಷ್ಟಿಯ ಹರಹು ಸಾಲದು. ಯಾವುದೋ ಒಂದು ಚೂರನ್ನು ಅರ್ಥಮಾಡಿಕೊಂಡಿದ್ದೇವೆ ಎಂದುಕೊಳ್ಳುವಷ್ಟರಲ್ಲೇ, ಮತ್ಯಾವುದೋ ಹೊಸದೊಂದು ಆಯಾಮ ಕಾಣುತ್ತದೆ. ಹೀಗೆ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ಇರುವಾಗಲೇ, ನಮ್ಮ ಇಹಲೋಕ ಯಾತ್ರೆ ಮುಗಿಯುತ್ತದೆ. ಮತ್ತೆ ಮೊದಲಿಂದ ಎಲ್ಲ ಶುರು. ಹಾಗಾಗಿ ಈ ಸೃಷ್ಟಿಯನ್ನು ಮನುಷ್ಯರಿಗೆ ಅರ್ಥವಾಗದ ರೀತಿಯಲ್ಲಿ ಅಥವಾ ಮನುಷ್ಯರಿಗೆ ಇದರ ರಹಸ್ಯ ಅರ್ಥವಾಗಬಾರದೆಂದು ಆ ಪರಮಾತ್ಮ ಈ ರೀತಿ ಸೃಷ್ಟಿಸಿದ್ದಾನೆಯೇ?ಎಂದು ಪ್ರಶ್ನೆ. ಹೆಚ್ಚು ಕ್ಷಮತೆ ಇರುವವರು ಇದನ್ನು ತಮ್ಮ ಧ್ಯಾನದಿಂದ ತಪಸ್ಸಿನಿಂದ ವೈಜ್ಞಾನಿಕ ಸಂಶೋಧನೆಗಳಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ಸಿಕ್ಕ ಯಶಸ್ಸು ಕೇವಲ ಅಲ್ಪ ಮಾತ್ರ ಮತ್ತು ಆ ಯಶಸ್ಸೂ ಸಹ ತಾತ್ಕಾಲಿಕ. ನಮಗಿಂತ ಬಲವಂತನನ್ನು ಗೆಲ್ಲಲು ನಮಗೆ ಅವನಿಗಿಂತ ಅಧಿಕ ಶಕ್ತಿ ಬೇಕು. ಇಲ್ಲದಿದ್ದರೆ ಹೋರಾಡಲು ಹೋಗಬಾರದು. ಹೋದರೆ ಸೋಲು ಖಂಡಿತ. ಈ ಜಗತ್ತಿನ ಸೃಷ್ಟಿಯ ರಹಸ್ಯ ಮತ್ತು ರೂಪವನ್ನು ಅರ್ಥೈಸಿಕೊಳ್ಳಲು ಶಕ್ತಿಯಿಲ್ಲದೆ ಇರುವಾಗ ಆ ಪರಮ ಶಕ್ತಿಗೆ ಶರಣಾಗಿ ನೆಮ್ಮದಿಯಿಂದ ಇರಬಹುದಲ್ಲವೆ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-36 )

ಎಲ್ಲೆಲಿಯುಂ ಮೋಹಸಂಭ್ರಾಂತಿಗಳ ಕವಿಸಿ | ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡೆಸಿ || ಗೆಲ್ಲಲಿಲ್ಲಿವನಾ ಪರೀಕ್ಷೆಯೊಳಗೆಂದು ವಿಧಿ | ಸೊಲ್ಲಿಪುದು ಸರಿಯೇನೋ? ಮಂಕುತಿಮ್ಮ ||

ಪದಗಳ ವಿಸ್ತರಣೆ

ಗೆಲ್ಲಲಿಲ್ಲಿವನಾ=ಗೆಲ್ಲಲಿಲ್ಲ+ಅವನಾ, ಪರೀಕ್ಷೆಯೊಳಗೆಂದು=ಪರೀಕ್ಷೆಯೊಳಗೆ+ಎಂದು,

ಪದಗಳ ತಾತ್ಪರ್ಯ

ಎಲ್ಲೆಲಿಯುಂ=ಎಲ್ಲೆಲ್ಲಿಯೂ, ಮೋಹ=ವ್ಯಾಮೋಹ, ಸಂಭ್ರಾಂತಿ=ಸಂಭ್ರಮ ಸಡಗರಕೂಡಿದ ಭಾವ, ಭ್ರಾಂತಿಯಿಂದ ಕೂಡಿದ. ಕವಿಸಿ=ಹರಡಿ, ವ್ಯಾಪಿಸಿ, ಸಲ್ಲದ=ಸರಿಯಲ್ಲದ, ಕುಮಾರ್ಗ=ಕೆಟ್ಟದಾರಿ, ಸೊಲ್ಲಿಪುದು=ಹೇಳುವುದು.

ಪದ್ಯದ ಪೂರ್ತಿ ವಿವರಣೆ

ಇಡೀ ಜಗತ್ತೇ ಒಂದು ಭ್ರಾಂತಿಯ ಉಂಡೆ. ಮಾನವನಿಗೆ ಯಾವುದೂ ಅರ್ಥವಾಗುವುದಿಲ್ಲ ಆದರೂ ಪ್ರಯತ್ನ ಮಾಡುತ್ತಾನೆ. ಅವನಿಗೆ ತನ್ನ ಅರಿವಿನ ಮಿತಿ ಉಂಟು. ಅಮಿತವಾದ ಜಗತ್ಸೃಷ್ಟಿಯ ರಹಸ್ಯವನ್ನು ಪರಿಮಿತ ಮತಿಯಿಂದ ಅರಿಯುವುದು ಹೇಗೆ? ಈ ಜಗತ್ತನ್ನು ತನ್ನ ಅಪರಿಮಿತ ಶಕ್ತಿಯಿಂದ ಅಗಾಧವಾಗಿ ಸೃಷ್ಟಿಸಿ, ಮಾನವರನ್ನು ಅಲ್ಪಮತಿಗಳನ್ನಾಗಿಸಿ, ಅವನು ಅರಿಯುವ ಪ್ರಯತ್ನದಲ್ಲಿ ಸೋತಾಗ, ಇವನು ಗೆಲ್ಲಲಿಲ್ಲ ಎಂದು ಹೇಳುವುದು ಆ ಪರಮಾತ್ಮನಿಗೆ ಸರಿಯೇ? ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರುಈ ಮುಕ್ತಕದಲ್ಲಿ. ಹಿಂದೆಯೇ ಹೇಳಿದಂತೆ, ಮಾನವನಲ್ಲಿ ವಿಚಾರ ಶಕ್ತಿ ಮೂಡಿದಂದಿನಿಂದ, ಈ ವಿಶ್ವದ ಗುಟ್ಟನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಡುತ್ತಲೇ ಇದ್ದಾನೆ. ಅವನಿಗೆ ಸಿಕ್ಕ ಸಫಲತೆ ಅಲ್ಪ. ಬದಲಿಗೆ ಆ ಪರತತ್ವವನ್ನು ಅರ್ಥೈಸುವ ಇವನ ಪ್ರಯತ್ನದಲ್ಲಿ ಕೇವಲ ಭ್ರಾಂತಿ, ಭ್ರಮೆಗಳನ್ನು ಬೆಳೆಸಿಕೊಂಡಿದ್ದಾನೆ. ಬಹಳಷ್ಟು ಜನ ತಮಗೆ ಕಂಡಂತೆ ಬೇರೆ ಬೇರೆ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. ಒಬ್ಬರು ಹೇಳುವುದನ್ನು ಮತ್ತೊಬ್ಬರು ಒಪ್ಪುವುದಿಲ್ಲ. ಪರತತ್ವವನ್ನು ಅರಿಯದಿದ್ದರೂ ತಾವು ಅರಿತಿದ್ದೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ತಮ್ಮ ವಾದವನ್ನು ದೃಢೀಕರಿಸಲು, ತಮ್ಮ ಮತವನ್ನು ಪ್ರತಿಷ್ಠಾಪಿಸಲು ಏನು ಬೇಕಾದರೂ ಮಾಡುತ್ತಾರೆ. ಅಹಂಕಾರವನ್ನು ಬೆಳೆಸಿಕೊಳ್ಳುತ್ತಾರೆ. ಮಠ ಕಟ್ಟುತ್ತಾರೆ. ಗುಂಪುಗಾರಿಕೆ ಮಾಡುತ್ತಾರೆ. ತಮ್ಮ ಅಹಂಕಾರವನ್ನು ಮತ್ತು ಆಧಿಪತ್ಯವನ್ನು ಸ್ಥಾಪಿಸಲು ಶತಪ್ರಯತ್ನ ಮಾಡುತ್ತಾರೆ. ಇದನ್ನೇ ಕುಮಾರ್ಗವೆನ್ನುತ್ತಾರೆ ಮಾನ್ಯ ಗುಂಡಪ್ಪನವರು. ವ್ಯಕ್ತಿಗತವಾಗಿ ಎಲ್ಲ ಆತ್ಮಗಳೂ ಶುದ್ಧಾತ್ಮಗಳೇ. ಪರಮಾತ್ಮನಿಂದ ಹೊರಟು ಇಂದ್ರಿಯ ಸಹಿತವಾದ ದೇಹಧಾರಣೆ ಮಾಡಿದ ನಂತರ, ಪಂಚಭೂತಗಳ ಸಂಪರ್ಕಕ್ಕೆ ಬಂದೊಡನೆಯೇ ಎಲ್ಲ ರೀತಿಯ ಭ್ರಮೆ, ಭ್ರಾಂತಿಗಳನ್ನು ಬೆಳೆಸಿಕೊಳ್ಳುತ್ತದೆ. ಇಲ್ಲಿದ್ದೂ ಅಲ್ಲಿಗೆ ಹೋಗುವ ಪ್ರಯತ್ನವನ್ನು ಮಾಡುತ್ತದೆ. ಆ ಪ್ರಯತ್ನದ ಫಲ ಸ್ವರೂಪವೇ ಅವನ ಆಧ್ಯಾತ್ಮಿಕ ಪ್ರಯಾಣ. ಎಷ್ಟೊಂದು ಮತಗಳು ಎಷ್ಟೊಂದು ಧರ್ಮಗಳು. ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಇವನ ಹಾರಾಟ ನಿರಂತರ. ಯಾವುದರಲ್ಲೂ ದೃಢವಾದ ನಂಬಿಕೆ ವಿಶ್ವಾಸವಿಲ್ಲ. ದೂರದಲ್ಲಿರುವುದು ಇವನಿಗೆ ಹಿತವಾಗಿ ಕಾಣುತ್ತದೆ. ಈ ಹುಡುಕಾಟ ಬೆದಕಾಟದಲ್ಲಿ ಇವನು ಎಲ್ಲಿಯೂ ಸಲ್ಲ. ಕಡೆಗೊಂದು ದಿನ ಇವನ ದೇಹದ ಅಂತ್ಯ. ಮತ್ತೆ ಮೊದಲಿನಿಂದ ಶುರು. ಅದೇ ಹುಡುಕಾಟ ಅದೇ ಬೆದಕಾಟ. ಇವನಿಗೆ ಆ ಪರಮಾತ್ಮನನ್ನು ಅರಿತುಕೊಳ್ಳಲು ಸಾಧ್ಯವೇ ಇಲ್ಲವೇನೋ ಎಂದು ಅನಿಸುತ್ತದೆ. ಆ ಪರಮ ಶಕ್ತಿಯ ಸ್ವರೂಪವು ಹಾಗೆ ಇದೆ. ಇಂದು ಕಂಡಂತೆ ನಾಳೆ ಇಲ್ಲ. ಒಂದೇ ವಿಷಯಕ್ಕೆ ಹತ್ತು ಹಲವಾರು ಆಯಾಮಗಳು. ಯಾವುದನ್ನು ನಂಬುವುದು ಯಾವುದು ಸತ್ಯ ಎಂದು ಈ ಮನುಷ್ಯನ ಅಲ್ಪಮತಿಗೆ ಅರ್ಥವೇ ಆಗುವುದಿಲ್ಲ. ಹಾಗಾಗಿ ಇವನು ಆ ಪರಮಾತ್ಮನ ಪರೀಕ್ಷೆಯಲ್ಲಿ ಎಂದಿಗೂ ಗೆಲ್ಲಲಾರ. ಇವನನ್ನು ಸೋಲಿಸಿ, ನೋಡಿದೆಯಾ ನೀನು ಗೆಲ್ಲಲೇ ಇಲ್ಲ ಎಂದು ಆ ಪರಮಾತ್ಮ ಕುಹಕವಾಡುವುದು ಸರಿಯೇ? ಎಂದು ಮಾನ್ಯ ಗುಂಡಪ್ಪನವರು ಕೇಳುತ್ತಾರೆ. ವಾಚಕರೆ. ಹೌದು ಆ ಪರಮಾತ್ಮನ ಸೃಷ್ಟಿ ವಿಚಿತ್ರ, ಅಗಾಧ, ಅನಂತ. ಒಂದು ಜನ್ಮದಲ್ಲಲ್ಲ ಜನ್ಮ ಜನ್ಮಾಂತರದಲ್ಲಿ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದರೆ ಅಸಾಧ್ಯವಲ್ಲ. ಪ್ರತಿಯೊಬ್ಬರ ಆತ್ಮವು ಮೂಲ ಸ್ವರೂಪದಲ್ಲಿ ಶುದ್ಧ. ಇಂದ್ರಿಯಾಕರ್ಷಣೆಯ, ಅರಿಷಡ್ವರ್ಗಗಳ, ಸಂಪರ್ಕದಿಂದ ಧೂಳು ಆವರಿಸಿದೆ. ನಿರಂತರ ಪ್ರಯತ್ನದಿಂದ ಆ ಧೂಳನ್ನು ಒರೆಸಿದರೆ, ಸತ್ವ ಮತ್ತು ತತ್ವ ಎರಡೂ ನಿಚ್ಚಳವಾಗಿ ಪ್ರಕಟವಾಗಿ ಪ್ರತಿ ಜೀವಿಯೂ ಆ ಪರಮಾತ್ಮನನ್ನು ಅರಿತುಕೊಳ್ಳಲು ಸಾಧ್ಯವಾಗಬಹುದು. ಇಂತಹ ವಿಚಾರಗಳನ್ನೇ ಮನನ ಮಾಡುತ್ತಾ ನಾವು ಆ ಪರತತ್ವವನ್ನು ಅರಿಯುವ ಪ್ರಯತ್ನವನ್ನು ಮಾಡೋಣವೆ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-37 )

ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನ | ಅವನ ವೇಷಗಳೇಕೆ ಮಾರ್ಪಡುತಲಿಹವು? || ತವಕಪಡನೇತಕೋ ಕುರುಹ ತೋರಲು ನಮಗೆ | ಅವಿತುಕೊಂಡಿಹುದೇಕೋ?-ಮಂಕುತಿಮ್ಮ ||

ಪದಗಳ ವಿಸ್ತರಣೆ

ಅವತರಿಸಿಹನು=ಅವತರಿಸಿ+ಇಹನು, ವಿಶ್ವದೇಹದೊಳೆನ್ನ=ವಿಶ್ವದೇಹದೊಳು+ಎನ್ನ, ವೇಷಗಳೇಕೆ=ವೇಷಗಳು+ಏಕೆ, ಮಾರ್ಪಡುತಲಿಹವು=ಮಾರ್ಪಡುತಲಿ+ಇಹವು, ತವಕಪಡನೇತಕೋ=ತವಕ+ಪಡನು+ಏತಕೋ, ಅವಿತುಕೊಂಡಿಹುದೇಕೋ=ಅವಿತು+ಕೊಂಡಿಹುದು+ಏಕೋ

ಪದಗಳ ತಾತ್ಪರ್ಯ

ಅವತರಿಸಿಹನು=ಅವತಾರ ಎತ್ತಿಹನು, ಬೊಮ್ಮ=ಪರಬ್ರಹ್ಮ, ವಿಶ್ವದೇಹ=ವಿಶ್ವದಲ್ಲೆಲ್ಲ, ಎನ್ನೆ=ಎನಲು, ತವಕ=ಆತುರ, ಕುರುಹ=ಗುರುತು.

ಪದ್ಯದ ಪೂರ್ತಿ ವಿವರಣೆ

ಈ ಜಗತ್ತನ್ನು ಆ ಪರಮಾತ್ಮನೇ ಸೃಷ್ಟಿಮಾಡಿದ. ಈ ಜಗತ್ತಿನಲ್ಲಿರುವ ಎಲ್ಲವನ್ನೂ ಆ ಪರಮಾತ್ಮನೇ ಸೃಷ್ಟಿಮಾಡಿದ ಮತ್ತು ಎಲ್ಲದರಲ್ಲೂ ಅವನೇ ಇರುವನೆಂದು ತತ್ವಜ್ಞಾನಿಗಳು ಹೇಳುತ್ತಾರೆ. ಎಲ್ಲವು ಅವನ ರೂಪವೇ ಎಂದು ಹೇಳುತ್ತಾರೆ. ಹಾಗಾದರೆ ಎಲ್ಲದರಲ್ಲೂ ಅವನೇ ಅವತರಿಸಿದ್ದಾನೆ ಎಂದಾದರೆ ಮತ್ತು ಪರಮಾತ್ಮ ನಿತ್ಯನೂ ಸತ್ಯನೂ ಆದಾಗ, ಈ ರೂಪಗಳ ಬದಲಾವಣೆ ಏಕೆ? ಎಲ್ಲ ರೂಪವು ಅವನೇ ಆದರೆ, ಅವನು ತನ್ನ ನಿಜ ರೂಪವನ್ನೇಕೆ ತೋರಿಸುವುದಿಲ್ಲ. ಏಕೆ ಅವಿತುಕೊಂಡಿದ್ದಾನೆ? ಎಂದು ಒಂದು ವಿಷಯವನ್ನು ಪ್ರಸ್ತಾಪಮಾಡುತ್ತಾರೆ, ಮಾನ್ಯ ಗುಂಡಪ್ಪನವರು. ತೆಲುಗಿನ ಕವಿ, ಭಕ್ತ, ಶ್ರೀ ತಾಳ್ಳಪಾಕ ಅನ್ನಮಾಚಾರ್ಯರು, ತಮ್ಮ ಒಂದು ಹಾಡಿನಲ್ಲಿ "ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಅಟು ತಾನೈ" ಎನ್ನುತ್ತಾರೆ. ಅಂದರೆ "ಎಲ್ಲರಲ್ಲೂ ಹುಟ್ಟಿ, ಎಲ್ಲರಲ್ಲೂ ಸೇರಿ ಎಲ್ಲರ ರೂಪವು ತಾನೇ ಆಗಿ" ಎಂದು ಆ ಪರಮಾತ್ಮನ ಸರ್ವವ್ಯಾಪಕತ್ವವನ್ನು ಕೊಂಡಾಡುತ್ತಾರೆ. ಅಣುವಿನಲ್ಲೂ ಬೃಹತ್ತಲ್ಲೂ, ಕೃಶದಲ್ಲೂ, ಸ್ಥೂಲದಲ್ಲೂ, ಗುಣದಲ್ಲೂ, ನಿರ್ಗುಣದಲ್ಲೂ ಹೀಗೆ ಎಲ್ಲದರಲ್ಲೂ ಚೇತನಾ ಸ್ವರೂಪನಾಗಿ ತಾನೇ ಇದ್ದರೂ ತನ್ನದೇ ಆದಂತಹ ಒಂದು ರೂಪವಿಲ್ಲದೆ ಎಲ್ಲ ರೂಪಗಳೂ ತಾನೇ ಆಗಿರುವ ಆ ಪರಮಾತ್ಮ ತನ್ನ ನಿಜ ರೂಪವನ್ನು ತೋರಲಾರನೇಕೆ ಎನ್ನುವುದೇ ಜಿಜ್ಞಾಸೆ. ಇಡೀ ಜಗತ್ತೇ ಚೇತನ ಮತ್ತು ಜಡದಿಂದಾಗಿದೆ. ಇವೆರಡರ ಸಮ್ಮಿಲಿತ ರೂಪವೇ ಈ ಜಗತ್ತು ಮತ್ತು ಈ ಜಗತ್ತಿನಲ್ಲಿರುವ ಎಲ್ಲವು ಆ ಬೃಹತ್ ಚೇತನದಿಂದಲೇ ಬಂದಿದೆ ಎನ್ನುವ ಒಂದು ಸಿದ್ಧಾಂತವು ಇದೆ. "ಯತಃ ಸರ್ವಾಣಿ ಭೂತಾನಿ ಭವನ್ಯಾದಿ ಯುಗಾಗಮೆ. ಯಸ್ಮಿನ್ಸ್ಚಪ್ರಳಯಂ ಯಾಂತಿ ಪುನರೇವ ಯುಗಕ್ಷಯೆ" ಎನ್ನುವಂತೆ ಎಲ್ಲವು ಆ ಮಹಾನ್ ಚೇತನದಿಂದ ಬಂದು ಮತ್ತೆ ಆ ಮಹಾನ್ ಚೇತನಕ್ಕೆ ಸೇರಿಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ರೂಪ ಬದಲಾವಣೆಯಾಗುತ್ತಾ ಇರುತ್ತದೆ. ಹೇಗೆ ಎಲ್ಲ ವಿದ್ಯುತ್ ಉಪಕರಣಗಳನ್ನೂ ಬೆಳಗುವ ವಿದ್ಯುತ್ ಕಣ್ಣಿಗೆ ಕಾಣದಿದ್ದರೂ ಮತ್ತು ಅದಕ್ಕೊಂದು ರೂಪವಿಲ್ಲದಿದ್ದರೂ ತಾನು ಬೆಳಗುವ ಉಪಕರಣದ ಮೂಲಕ ತನ್ನ ಅಸ್ತಿತ್ವವನ್ನು ತೋರುವಂತೆ, ಆ ಪರಮಾತ್ಮನೂ ಸಹ ತನಗೊಂದು ರೂಪವಿಲ್ಲದಿದ್ದರೂ ಈ ಜಗತ್ತಿನ ಎಲ್ಲ ವಸ್ತುಗಳಲ್ಲೂ, ಆ ವಸ್ತುವೇ ಆಗಿ ಪ್ರಕಟಗೊಂಡಿದ್ದಾನೆ ಎನ್ನುವುದು ಸಿದ್ಧಾಂತ. ರೂಪ ಕಣ್ಣಿಗೆ ಕಾಣದಿದ್ದರೂ ಆ ಚೇತನ ಅನುಭವಕ್ಕೆ ಬರುತ್ತದೆ, ಅನುಭವಿಸುವ ಮನವಿದ್ದರೆ. ವಾಚಕರೆ, ನಾವು ಸಹ ಅದನ್ನು ಅನುಭವಕ್ಕೆ ತಂದುಕೊಳ್ಳೋಣವೇ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-38 )

ಬೇರೆಯಿಸಿ ನಿಮಿಷನಿಮಿಷಕಮೊಡಲಬಣ್ಣಗಳ | ತೋರಿಪೂಸರವಳ್ಳಿಯಂತೇನು ಬೊಮ್ಮಂ? || ಪೂರ ಮೈದೋರೆನೆಂಬಾ ಕಪಟಿಯಂಶಾವ | ತಾರದಿಂದಾರ್ಗೇನು?-ಮಂಕುತಿಮ್ಮ ||

ಪದಗಳ ವಿಸ್ತರಣೆ

ನಿಮಿಷನಿಮಿಷಕಮೊಡಲಬಣ್ಣಗಳ=ನಿಮಿಷ+ನಿಮಿಷಕೆ+ಒಡಲ+ಬಣ್ಣಗಳ, ತೋರಿಪುಸರವಳ್ಳಿಯಂತೇನು=ತೋರಿಪ+ಊಸರವಳ್ಳಿಯಂತೆ+ಏನು+ಬೊಮ್ಮಂ, ಮೈದೋರೆನೆಂಬಾ=ಮೈ+ತೋರೆನು+ಎಂಬ. ಕಪಟಿಯಂಶಾವತಾರದಿಂದಾರ್ಗೇನು=ಕಪಟಿಯ+ಅಂಶಾವತಾರದಿಂದ+ಯಾರಿಗೆ+ಏನು?

ಪದಗಳ ತಾತ್ಪರ್ಯ

ಬೇರೆಯಿಸಿ=ಬೇರೆಬೇರೆಯಾಗಿಸಿ, ಒಡಲ=ರೂಪದ, ತೋರಿಪ=ತೋರಿಸುವ, ಊಸರವಳ್ಳಿ=ಗೋಸುಂಬೆ, ಬೊಮ್ಮ=ಬ್ರಹ್ಮ, ಪೂರ=ಸಂಪೂರ್ಣ, ಮೈದೋರೆ=ರೂಪತೋರೆ.

ಪದ್ಯದ ಪೂರ್ತಿ ವಿವರಣೆ

ನಾನು ಈವರೆಗೆ ಹೇಳಿರುವುದೇನು ಎಂದು ಒಂದು ಬಾರಿ ನೋಡೋಣ. ಎಲ್ಲವು ಆ ಪರಮಾತ್ಮನಿಂದ ಆಗಿ ಅವನೇ ಎಲ್ಲ ರೂಪಗಳಲ್ಲಿಯೂ ಪ್ರಕಟವಾಗಿರುವ ಎಂದು ನಮ್ಮ ನಂಬಿಕೆ. ಈ ಪ್ರಪಂಚದಲ್ಲಿ ಇರುವ ಎಲ್ಲವು ಆ ಪರಮಾತ್ಮನೇ, ತನ್ನ ಅಂಶದಿಂದ ಪ್ರಕಟವಾಗಿ(ಸಿ)ದ್ದಾನೆ ಎಂದು. ಹಾಗಾಗಿ ಯಾರು ಯಾರು ಏನೇನು ಎಂದು ಭಾವಿಸಿದರೆ ಹಾಗೆ ಅವರಿಗೆ ತೋರುವ ಆ ಪರಮಾತ್ಮ ವಸ್ತು ಏಕ ರೂಪದಲ್ಲಿ ಏಕೆ ಇಲ್ಲ? ಎಂದು ಈ ಮುಕ್ತಕದ ಹೂರಣ. ಘಳಿಗೆ ಘಳಿಗೆಗೆ ಬದಲಾಗುವ ಮನುಷ್ಯರ ಮನದ ಭಾವಕ್ಕೆ ತಕ್ಕಂತೆ ಬದಲಾಗುವ ಆ ಪರಮಾತ್ಮ ಸ್ವರೂಪವನ್ನು ಗುಂಡಪ್ಪನವರು, "ಊಸರವಳ್ಳಿಯಂತೆ ಕ್ಷಣಕ್ಕೊಂದು ರೂಪವನ್ನು ಏಕೆ ತೋರುತ್ತಾನೆ ಈ ಪರಮಾತ್ಮ? ಆಗಾಗ ಅವನೆತ್ತುವ ಅಂಶಾವತಾರಗಳಿಂದ ಯಾರಿಗೆ ಏನು ಪ್ರಯೋಜನ? ತನ್ನ ನಿಜ ರೂಪವನ್ನೇ ತೋರಬಹುದಲ್ಲ ಎಂದು, ಪ್ರಸ್ತಾಪಿಸಿ, ಓದುಗರನ್ನು ಆ ಪರಮಾತ್ಮನ ನಿಜ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರೇರೇಪಿಸುತ್ತಾರೆ. ಒಂದು ಬಾರಿ ದೇವರನ್ನು ಕಾಣುವ ತವಕದಿಂದ ಸ್ವಾಮಿ ರಾಮತೀರ್ಥರ ಬಳಿ ಒಬ್ಬ ಬಂದ. ಆಗ ನಡೆದ ಸಂವಾದ ಹೀಗಿತ್ತು: ವ್ಯಕ್ತಿ : "ಸ್ವಾಮಿ ನೀವು ದೇವರನ್ನು ನೋಡಿದ್ದೀರಂತೆ. ನನಗೂ ಆ ದೇವರನ್ನು ತೋರಿಸುತ್ತೀರಾ" ಸ್ವಾಮಿ : "ಓಹೋ ಅದಕ್ಕೇನಂತೆ, ತೋರಿಸುತ್ತೇನೆ, ಹಾ! ಅವರ ಬಳಿ ಹೋದಾಗ, ನಿನ್ನ ಪರಿಚಯ ಮಾಡಿಕೊಡಬೇಕು. ಹಾಗಾಗಿ ನೀ ಯಾರೆಂದು ಹೇಳು?" ವ್ಯಕ್ತಿ : "ರಾಜ ಗಜಪತಿ ರಾಜು" ಸ್ವಾಮಿ : "ಅದು ನಿನ್ನ ಹೆಸರು, ನೀ ಯಾರು?" ವ್ಯಕ್ತಿ : "ವಿಜಯನಗರ ಸಾಮ್ರಾಜ್ಯದ ನಿರ್ವಾಹಕ" ಸ್ವಾಮಿ : "ಅದು ನೀನಿರುವ ಹುದ್ದೆ, ಈ ಹಿಂದೆಯೂ ಆ ಹುದ್ದೆಯಲ್ಲಿ ಯಾರೋ ಇದ್ದರು. ಮುಂದೆಯೂ ಯಾರೋ ಇರುತ್ತಾರೆ, ನೀ ಯಾರು?" ಹೀಗೇ ನಾಲ್ಕಾರು ಬಾರಿ ಸ್ವಾಮಿ "ನೀ ಯಾರು, ನೀ ಯಾರು" ಎಂದು ಕೇಳಿದಾಗ, ಆ ವ್ಯಕ್ತಿ ರೋಸಿ, "ನಾ ಏನೇ ಹೇಳಿದರೂ, ನೀ ಅದು ಅಲ್ಲ, ನೀ ಯಾರು? ಎನ್ನುತ್ತೀರಿ, ಹಾಗಾದರೆ ನಾ ಯಾರು" ಎಂದು ಕುಪಿತಗೊಂಡು ಕೇಳಿದ. ಅದಕ್ಕವರು "ಅಲ್ಲಿ ಕುಳಿತುಕೋ. ನೀ ಯಾರೆಂದು ಯೋಚಿಸು, ನಿನಗೆ ನೀಯಾರೆಂದು ಅರಿವಾದಾಗ, ಆ ದೇವರು ನಿನಗೇ ಕಾಣುತ್ತಾನೆ, ನಾ ತೋರಿಸುವ ಅವಶ್ಯಕತೆಯೇ ಬರುವುದಿಲ್ಲ" ಎಂದರಂತೆ. ಆ ಪರಮಾತ್ಮನಿಗೆ ಒಂದು ರೂಪವಿದ್ದಿದ್ದರೆ, ಪಾಪ ಅವನೂ ತೋರಿಸಿಯಾನು. ಎಲ್ಲ ರೂಪಗಳೂ ಅವನೇ ಆಗಿರುವಾಗ, ಒಂದು ರೂಪವನ್ನು ಹೇಗೆ ತೋರುವುದು. ಹಾಗಾಗಿ ವಾಚಕರೆ, ಶುದ್ಧ ಮನಸ್ಸಿನಿಂದ, ಅಹಂಕಾರವನ್ನು ತೊರೆದು, ಧ್ಯಾನದಿಂದ ಆ ಪರಮ ಶಕ್ತಿಯ ಸ್ವರೂಪವನ್ನು ಎಲ್ಲೆಲ್ಲೂ ಕಾಣಬಹುದು. ಈ ರೀತಿಯ ಪ್ರೇರಣೆಯನ್ನು ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ನಮಗೆ ನೀಡುತ್ತಾರೆ. ನಾವು ಸಹ, ಅಹಂಕಾರವನ್ನು ತೊರೆಯೋಣ. ನಮ್ಮ ಅಸ್ತಿತ್ವಕ್ಕೆ ಮೂಲವಾದ ಆ ಪರಮಾತ್ಮನನ್ನು ಭಾವಿಸೋಣವೇ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-39 )

ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ | ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ || ಒಸೆದೇತಕವನೀಯನೆಮಗೊಂದು ನಿಜ ಕುರುಹ | ನಿಷೆಯೊಳುಡಕರಡವವೊಲು?-ಮಂಕುತಿಮ್ಮ ||

ಪದಗಳ ವಿಸ್ತರಣೆ

ಕಾಣ್ಬವೊಲೆಸಗೆ=ಕಾಣ್ಬ+ಒಲ್‌+ಎಸಗೆ, ಪರಬೊಮ್ಮನೆನ್ನುವೊಡೆ=ಪರಬೊಮ್ಮನು+ಎನ್ನುವೊಡೆ, ಒಸದೇತಕವನೀಯನೆಮಗೊಂದು=ಒಸೆದು+ಏತಕೆ+ಆವನು+ಈಯನು+ಎಮಗೆ+ಒಂದು, ನಿಷೆಯೊಳುಡಕರಡವೊಲು=ನಿಶೆಯ+ಒಳು+ಉಡುಕರದ+ಒಲು,

ಪದಗಳ ತಾತ್ಪರ್ಯ

ಪುಸಿಯ=ಸುಳ್ಳನ್ನು, ದಿಟವ=ನಿಜವನ್ನು, ಒಸಗೆ=ಸಹಾಯಮಾಡಲು, ಒಸೆದು=ದಯತೋರಿ, ಉಡುಕರದ=ನಕ್ಷತ್ರದ.

ಪದ್ಯದ ಪೂರ್ತಿ ವಿವರಣೆ

ಸುಳ್ಳನ್ನು ನೀನು ಸುಳ್ಳು ಎಂದು ಅರಿತುಕೊಂಡು ಸತ್ಯವನ್ನು ಕಾಣಲು ನಿನಗೆ ಸಹಾಯ ಮಾಡುವವನಂತಾದರೆ, ಆ ಪರಮಾತ್ಮನು ಮರೆಯಾಗಿ ಮುಸುಕು ಹಾಕಿಕೊಂಡಂತೆ ಇರುವುದಾದರೆ, ಅವನು ನಮ್ಮ ಮೇಲೆ ಪ್ರಸನ್ನನಾಗಿ, ರಾತ್ರಿ ಹೊತ್ತು ನಕ್ಷತ್ರದ ಕಿರಣಗಳು ನಮಗೆ ದಾರಿ ತೋರುವಂತೆ, ಒಂದು ಗುರುತನ್ನು ತನ್ನ ಇರುವಿಕೆಯ ಕುರುಹಾಗಿ ತೋರಿಸಬಾರದೇನು? ಎನ್ನುತ್ತಾರೆ ಶ್ರೀ ಗುಂಡಪ್ಪನವರು ಈ ಮುಕ್ತಕದಲ್ಲಿ. "ಜಗತ್ ಮಿಥ್ಯ"ವೆನ್ನುವ ಮಿಥ್ಯಾ ವಾದವನ್ನು ಒಪ್ಪುವುದಾದರೆ, ಜಗತ್ತು ಮಾಯೆ, ಮಿಥ್ಯೆಯಾದರೆ, ಸತ್ಯವಾವುದು ಎಂದು ನಾವು ಅರಿತುಕೊಳ್ಳಲು, ಪ್ರಯತ್ನಪಡುತ್ತೇವೆ. ಎಲ್ಲ ವೇದಾಂತಿಗಳೂ, ಸಿದ್ಧಾಂತಿಗಳೂ, ಸಾಧುಸಂತರೂ ಎಲ್ಲರೂ ಅನಾದಿಕಾಲದಿಂದಲೂ ಆ ಪರಮ ಸತ್ಯವನ್ನು ಅರಿತುಕೊಳ್ಳಲು ಪ್ರಯತ್ನಪಟ್ಟು ತಮ್ಮ ಅರಿವನ್ನು ಪ್ರತಿಪಾದಿಸಿದ್ದಾರೆ. ಅದರ ಪ್ರತಿಫಲವೇ, ಎಲ್ಲ ಮತಗಳು ಮತ್ತು ವೇದಾಂತದ ಹಲವಾರು ಕವಲುಗಳು. ಇಲ್ಲಿ ಸತ್ಯವೆಂದರೇನು? ಸುಳ್ಳೆಂದರೇನು? ಯಾವುದು ನಿತ್ಯವಲ್ಲವೋ, ಯಾವುದು ಕಾಲಕ್ರಮೇಣ ಬದಲಾಗುತ್ತದೋ, ಯಾವುದು ನಾಶವಾಗುತ್ತದೋ ಅದನ್ನು ಮಿಥ್ಯ, ಸುಳ್ಳು, ಎಂದರು. ಅದನ್ನೇ ಸತ್ಯವೆಂದು ನಂಬಿದರೆ, ಅದನ್ನು ಮಾಯೆ ಎಂದರು. ಆದರೆ, ಯಾವುದು ಸದಾಕಾಲ ಒಂದೇ ರೀತಿ ಇರುತ್ತದೋ ಅದನ್ನು ನಿತ್ಯವೆಂದರು, ಸತ್ಯವೆಂದರು. ಹಾಗಾದರೆ ನಾವು ಕಾಣುವುದೆಲ್ಲವು, ಬದಲಾಗುವುದೆಲ್ಲವು ಅಸತ್ಯವಾದರೆ ಮಿಥ್ಯವಾದರೆ ಸತ್ಯವಾವುದು? ಹೀಗೆ ನಾವು ಮಿಥ್ಯೆಯನ್ನು ಗುರುತಿಸಿ, ಸತ್ಯವನ್ನು ಅರಿತುಕೊಳ್ಳಲು, ಆ ಪರಮಾತ್ಮನೇ ಸಹಾಯ ಮಾಡುವುದಾದರೆ, ಸತ್ಯವಾದ ತನ್ನ ನಿಜ ರೂಪವನ್ನು ನಮಗೆ ತೋರಿಸಲು ಯಾವುದಾದರೂ ಒಂದು ಕುರುಹನ್ನು ನೀಡಬಹುದಲ್ಲ? ಎಂದು ಪ್ರಸ್ತಾಪಿಸುತ್ತಾರೆ, ಮಾನ್ಯ ಗುಂಡಪ್ಪನವರು. ಮನಸ್ಸು ಬುದ್ಧಿ ದೇಹ ಆತ್ಮಗಳು ಒಂದಾದಾಗ ಒಂದು ಜೀವಿಯ ಆವಿರ್ಭಾವ. ಜೀವವನ್ನು ಪ್ರಾಣವೆಂದೂ ಕರೆಯುತ್ತಾರೆ. ಒಂದು ಜೀವಿಯ ಪ್ರಾಣ, ಮನಸ್ಸು ಬುದ್ಧಿ ದೇಹವನ್ನು ಬಿಟ್ಟಾಗ, ಜೀವಿಯನ್ನು ಸತ್ತ(ಸತ್ತಿತೆಂದು)ನೆಂದು ಹೇಳುತ್ತಾರೆ. ಅಂದರೆ ಪ್ರಾಣ ಸಾಯುವುದಿಲ್ಲ, ಹೋಗುತ್ತದೆ. ಮನಸ್ಸು ಬುದ್ಧಿಗಳು, ದೇಹದಂತೆ ಇಲ್ಲವಾಗುತ್ತದೆಯಾದರೆ, ನಮ್ಮ ಅಸ್ತಿತ್ವದಲ್ಲಿ ಸತ್ಯವಾದದ್ದು ಈ ಪ್ರಾಣ ಅಥವಾ ಆತ್ಮವೊಂದೇ. ಈ ಆತ್ಮದ ಅರಿವನ್ನು ಪಡೆಯುವುದೇ ಸತ್ಯವನ್ನು ಅರಿಯುವ ದಾರಿ. ಇದು ನಮ್ಮ ಆಧ್ಯಾತ್ಮದ ಪ್ರತಿಪಾದನೆ. ಮನಸ್ಸು ಬುದ್ಧಿ ದೇಹ ಆತ್ಮಗಳಿಗೆ ಒಂದೊಂದು ಮೂಲ ಉಂಟು. ಮನಸ್ಸು ಬುದ್ಧಿಗಳಿಗೆ ಮೂಲ ಪಂಚಭೂತಗಳು, ದೇಹಕ್ಕೆ ಈ ಭೂಮಿ ಮತ್ತು ಆತ್ಮಕ್ಕೆ ಆ ಪರಮಾತ್ಮ. ಆತ್ಮವು ಸತ್ಯವಾದರೆ, ಆ ಪರಮಾತ್ಮನೂ ಸತ್ಯವಲ್ಲವೇ. ಆತ್ಮ ಆ ಪರಮಾತ್ಮನಂತೆಯೇ ಸಾಕ್ಷೀ ಭೂತವಾಗಿ ಇದೆ. ಇದನ್ನರಿಯುವುದೇ ಆಧ್ಯಾತ್ಮದ ಮೂಲ ಗುರಿ. ಇದನ್ನರಿತವರಿಗೆ ಪರಮಾತ್ಮ ಸಾಕ್ಷಾತ್ಕಾರ. ಇದನ್ನು ಯಾರು ಬೇಕಾದರೂ ಸಾಧಿಸಬಹುದು. ಅದಕ್ಕೆ ಸಾಧನೆಯ ಅವಶ್ಯಕತೆಯುಂಟು ಅಷ್ಟೇ. ಅಂತಹ ಸಾಧನೆಯ ದಾರಿಯನ್ನು, ಸತ್ಯವನ್ನರಿಯುವ ಮಾರ್ಗವನ್ನು ನಮಗೆ ಆ ಪರಮಾತ್ಮ ಕರುಣಿಸಲಿ ಎಂದು ಬೇಡುವುದೇ ಈ ಮುಕ್ತಕದ ಮೂಲ ಆಂತರ್ಯ. ಇಂತಹ ಸಾಧನೆಗೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಲು, ಸರಿಯಾದ ಮಾರ್ಗವನ್ನು ನಾವು ಸಹ ಹುಡುಕೋಣವೇ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-40 )

ನಿಶೆಯೊಳೇಂ ಕಾಣಬಾರನು ಹಗಲನೊಲ್ಲದೊಡೆ | ಶಶಿರವಿಗಳವನ ಮನೆಕಿಟಕಿಯಾಗಿರರೇಂ? || ಮಸುಕುಬೆಳಕೊಂದಾದ ಸಂಜೆಮಂಜೇನವನು | ಮಿಸುಕಿ ಸುಳಿಯುವ ಸಮಯ?-ಮಂಕುತಿಮ್ಮ ||

ಪದಗಳ ವಿಸ್ತರಣೆ

ನಿಶೆಯೊಳೇಂ=ನಿಶೆಯೊಳು+ಏಂ, ಹಗಲನೊಲ್ಲದೊಡೆ=ಹಗಲನು+ಒಲ್ಲದೊಡೆ, ಮಸುಕುಬೆಳಕೊಂದಾದ=ಮಸುಕು+ಬೆಳಕು+ಒಂದಾದ, ಸಂಜೆಮಂಜೇನವನು=ಸಂಜೆ+ಮಂಜೇನು+ಅವನು.

ಪದಗಳ ತಾತ್ಪರ್ಯ

ನಿಶೆಯೊಳು=ರಾತ್ರಿಯಲಿ, ಶಶಿರವಿಗಳು=ಸೂರ್ಯ ಚಂದ್ರರು, ಮಸುಕು=ಹಗಲು ರಾತ್ರಿಗಳೊಂದಾಗುವ ವೇಳೆ, ಮಂಜೇನು=ಕಂಡೂ ಕಾಣದ, ಮಿಸುಕಿ=ಅಲೆದಾಡುವ

ಪದ್ಯದ ಪೂರ್ತಿ ವಿವರಣೆ

ಹಗಲಲ್ಲಿ ಕಾಣಬಾರದೆಂತಾದರೆ, ರಾತ್ರಿಯಲ್ಲಿ ಏಕೆ ಕಾಣುವುದಿಲ್ಲ ಆ ಪರಮಾತ್ಮ? ರವಿ ಚಂದ್ರರು ಅವನ ಮನೆಯ ಕಿಟಕಿಗಳೇನು? ಇತ್ತ ಹಗಲೂ ಅಲ್ಲದೆ ನಿಶೆಯೂ ಅಲ್ಲದೆ ಇರುವ ಮುಸ್ಸಂಜೆಯ ಸಮಯವೇನು ಅವನು ಅಲೆದಾಡುವ ಸಮಯ ಎಂದು ಒಂದು ನೇರ ಪ್ರಶ್ನೆಯನ್ನು ಕೇಳುತ್ತಾರೆ. ಮಾನ್ಯ ಗುಂಡಪ್ಪನವರು. ಆ ದೇವರು ಯಾರು? ಅವನ ಸ್ವರೂಪವೇನು? ಅವನನ್ನು ಹೇಗೆ ಸಾಕ್ಷಾತ್ಕರಿಸಿಕೊಳ್ಳಬಹುದು? ಹೀಗೆ ಹತ್ತು ಹಲವಾರು ಸಂಶಯಗಳು ಅನಾದಿ ಕಾಲದಿಂದಲೂ ಮಾನವನನ್ನು ಕಾಡುತ್ತಿದೆ. ಕಣ್ಣು ತೆರೆದರೆ ಬೆಳಕು. ಅದನ್ನೇ ಹಗಲು ಎನ್ನುತ್ತಿರಬಹುದು ಮಾನ್ಯ ಗುಂಡಪ್ಪನವರು. ಕಣ್ಣು ತೆರೆದರೆ, ನಮಗೆ ಪ್ರಪಂಚವೆಲ್ಲ ಕಾಣುವುದು. ಕಂಡ ವಸ್ತುವಿನ ಮೇಲೆ ನಮ್ಮ ಗಮನ ಮತ್ತು ಆಲೋಚನೆ. ನಾವು ಕಣ್ಣು ತೆರೆದಿರುವಾಗ, ಇಂದ್ರಿಯಗಳ ಸೆಳೆತದಿಂದ ಮನಸ್ಸು ಚಂಚಲವಾಗಿರುವುದರಿಂದ, ಆ ಪರಮಾತ್ಮನನ್ನು ಭಾವಿಸುವುದು ಬಹಳಕಷ್ಟ. ಆದರೆ ಕಣ್ಣು ಮುಚ್ಚಿದರೆ, ಕತ್ತಲು. ಇದನ್ನೇ ನಿಶೆಯಂದಿರಬಹುದು. ಹಾಗಾಗಿ ಕಣ್ಣು ಮುಚ್ಚಿರುವಾಗ, ಬಾಹ್ಯ ವಸ್ತುಗಳು ಕಾಣದಾದಾಗ, ಅಂತರ್ಮಖಿಯಾಗಲು ಸಾಧ್ಯ. ಹಾಗೆ "ಅಂತರ್ಮಖಿಯಾದಾಗಲಾದರೂ ಆ ಪರಮಾತ್ಮ ನಮ್ಮ ಅರಿವಿಗೆ ಬರಬಹುದಲ್ಲ", ಎಂದರೆ ಕಷ್ಟ. ಆದರೆ ಅಸಾಧ್ಯವಲ್ಲ. "ಹರಿದಾಡುವಂತ, ಮನವ ನಿಲಿಸುವುದು ಬಲು ಕಷ್ಟ. ಕಾಶೀಗ್ ಹೋಗಲುಬಹುದು, ದೇಶ ಸುತ್ತಲು ಬಹುದು, ಆಸೆಸುಟ್ಟಂತಿರಬಹುದು, ಹರಿದಾಡುವಂತ, ಮನವ ನಿಲಿಸುವುದು ಬಲು ಕಷ್ಟ" ಎಂದು ದಾಸರು ಹೇಳಿದ್ದಾರೆ. ಹಾಗೆ ಕಣ್ಣು ಮುಚ್ಚಿ ಕುಳಿತರೂ ಈ ಮನಸ್ಸೆಂಬುದು ಒಂದು ಇದೆಯಲ್ಲ, ಎಲ್ಲೆಲ್ಲೋ ಸುತ್ತುತ್ತದೆ. ಏನೇನೋ ಯೋಚಿಸುತ್ತದೆ. ಈ ಯೋಚನೆ ಆಲೋಚನೆಗಳ ಸುಳಿಯಲ್ಲಿ ಆ ಪರಮಾತ್ಮನ ಧ್ಯಾನಮಾಡುವುದೂ ಸಹಕಷ್ಟ. ಆದರೆ, ಎಚ್ಚರ ಮತ್ತು ನಿದ್ದೆಗಳ ನಡುವಿನ ಒಂದು ಸ್ತರ ಉಂಟು. ಅದು ಜಾಗೃತಾವಸ್ಥೆ. ಮನದ ಎಲ್ಲಕೋಣೆಗಳ ಕಾಲ್ಪನಿಕ ಗೆರೆಗಳನ್ನು ಅಳಿಸಿ, ಮನದ ಪಟಲವನ್ನು ಒಂದೇ ಆಗಿಸಿ ಅಲ್ಲಿ ಧ್ಯಾನಮಾಡಿದರೆ, ಈ ಪ್ರಪಂಚದ ಸೆಳೆತಗಳನ್ನು ಮೀರಿ ಇಡೀ ಸೃಷ್ಟಿಗೆ ಕಾರಣವಾದ ಆ ಚೇತನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಡಬಹುದು. ಈ ಪ್ರಯತ್ನ ನಿರಂತರವಾಗಿ ಸಾಗಿದಾಗ, ಧ್ಯಾನ ಗಟ್ಟಿಯಾಗಿ ಆ ಪರಮ ಶಕ್ತಿಯ ದರ್ಶನ ಅಂತಃಚಕ್ಷುಗಳಿಗೆ ಆಗಬಹುದು. ಆದರೆ ಅದೂ ಸಹ ಒಂದು ಕ್ಷಣ ಬಂದು ಹೋಗಿಬಿಡುತ್ತದೆ. ಇದು ಅನುಭವ ವೇದ್ಯ. ಇದನ್ನೇ ಮಾನ್ಯಗುಂಡಪ್ಪನವರು "ಮಂಜೇನು" ಎನ್ನುತ್ತಾರೆ. ಹಾಗೆ ಒಂದು ಕ್ಷಣ ಬಂದು ಹೋಗುವ ಭಾವಕ್ಕೆ "ಮಿಸುಕು" ಎಂದಿದ್ದಾರೆ. ಆ ಸ್ಥಿತಿಯಲ್ಲಿ ಹೆಚ್ಚು ಸಮಯ ಇರಲು ಪ್ರಯತ್ನಪಟ್ಟರೆ ಅದು ಧ್ಯಾನವಾಗುತ್ತದೆ. ಎಲ್ಲ ಭಾವಗಳೂ ಕರಗಿ ಹೋಗಿ, ಕೇವಲ ಆ ಪರಮ ಶಕ್ತಿಯನ್ನೇ ಅನುಭವಕ್ಕೆ ತಂದುಕೊಳ್ಳುವ ಪ್ರಕ್ರಿಯೆ ಇದು. ಒಂದು ವ್ಯಕ್ತಿ, ಕೇವಲ, ತೊಂಬತ್ತು ಕ್ಷಣಗಳು, ಅಂದರೆ ಒಂದೂವರೆ ನಿಮಿಷಗಳ ಕಾಲ ಯಾವ ಅಡಚಣೆಯೂ ಇಲ್ಲದೆ ಈ ಸ್ಥಿತಿಯಲ್ಲಿ ಇರಲು ಆದರೆ ಅವನನ್ನು ಯೋಗಿ ಎನ್ನಬಹುದು. ಆಧ್ಯಾತ್ಮ ಸಾಧನೆಯ ಉತ್ತುಂಗ ಸ್ತರವದು. ಆದರೆ ಇಂದಿನ ಜಗತ್ತಿನ ಹಲವಾರು ಸೆಳೆತಗಳ ನಡುವೆ ಇದು ಬಹಳ ಕಷ್ಟ, ಆದರೆ ಅಸಾಧ್ಯವಲ್ಲ. ಇದಕ್ಕೊಂದು ಮಾರ್ಗ ಬೇಕು, ಒಬ್ಬ ಮಾರ್ಗದರ್ಶಕಬೇಕು, ನಿರಂತರ ಪ್ರಯತ್ನ ಬೇಕು. ಸಾಧಿಸಬಹುದು. ಅಂತಹ ಸಾಧನೆಯನ್ನು ನಾವು ಸಹ ಮಾಡಬಹುದೇನೋ ಎಂದು ಯೋಚಿಸುವ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-41 )

ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ | ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು || ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು | ಒದವಿಪರು ದಿಟದರಿವ-ಮಂಕುತಿಮ್ಮ? ||

ಪದಗಳ ವಿಸ್ತರಣೆ

ಕದಕಗಳಿಯನು=ಕದಕೆ+ಅಗಳಿಯನು, ಹೊರಕೆಸೆಯೇ=ಹೊರಕ್ಕೆ+ಎಸೆಯೇ ಪದವಾಕ್ಯವಿದರಾಗ=ಪದ+ವಾಕ್ಯ+ವಿದರು+ಆಗ

ಪದಗಳ ತಾತ್ಪರ್ಯ

ಕದ-ಬಾಗಿಲು, ಅಗಳಿ=ಚಿಲಕ, ಕೀಲ್ಕುಂಚಿಕೆ=ಬೀಗದ ಕೈ, ಪದವಾಕ್ಯವಿದರು=ಪದ, ವಾಕ್ಯ, ವ್ಯಾಕರಣ ಇತ್ಯಾದಿಗಳನ್ನರಿತ ಪಂಡಿತರು, ವಾದ=ಚರ್ಚೆ, ಗಡಣೆ=ಸಂಭ್ರಮ, ಒದವಿಪರು=ಸಹಾಯ ಮಾಡುತ್ತಾರೆ, ದಿಟದರಿವ=ಸತ್ಯವನ್ನು ಅರಿಯುವ.

ಪದ್ಯದ ಪೂರ್ತಿ ವಿವರಣೆ

ಆ ದೇವರನ್ನು ಗುಡಿಯಲಿ ಬಿಟ್ಟು, ಬಾಗಿಲನ್ನು ಹಾಕಿ, ಚಿಲಕ ಹಾಕಿ, ಬೀಗ ಜಡಿದು ಬೀಗದ ಕೈಯನ್ನು ಎಸೆದುಬಿಟ್ಟರೆ, ಆಗ ಪಂಡಿತರು ಮತ್ತು ವಿದ್ವಾಂಸರು ಆ ದೇವರನ್ನು ಕುರಿತ, ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುವ ವ್ಯರ್ಥವಾದವನ್ನು ಬಿಟ್ಟು, ಆ ದೇವರನ್ನು ಕುರಿತಾದ ಸತ್ಯವನ್ನು ಅರಿಯಲು ಸಹಾಯಮಾಡುವರು ಎಂಬುದು ಈ ಮುಕ್ತಕದ ವಾಚ್ಯಾರ್ಥವು. ಸಾಮಾನ್ಯವಾಗಿ ಎಲ್ಲರೂ ದೇವಸ್ಥಾನಗಳಿಗೆ ಹೋಗುತ್ತಾರೆ. ಅದು ಮಂದಿರಗಳಾಗಿರಬಹುದು, ಮಸೀದಿಗಳಾಗಿರಬಹುದು, ಚರ್ಚುಗಳಾಗಿರಬಹುದು ಅಥವಾ ಬೇರೆ ಯಾವುದೇ ಮತಕ್ಕೆ ಸೇರಿದ ಪೂಜಾಮಂದಿರವಾಗಿರಬಹುದು. ಕೆಲವರು ಪ್ರತಿನಿತ್ಯ ಹೋಗುತ್ತಾರೆ. ಕೆಲವರು ವಾರಕ್ಕೊಮ್ಮೆ ಹೋಗುತ್ತಾರೆ. ಕೆಲವರು ವಿಶೇಷ ದಿನಗಳಲ್ಲಿ ಹೋಗುತ್ತಾರೆ, ಕೆಲವರು ಒಂದು ವಾರದಲ್ಲಿ ಬೇರೆ ಬೇರೆ ದಿನಗಳಲ್ಲಿ, ಬೇರೆ ಬೇರೆ ದೇವಸ್ಥಾನಗಳಿಗೆ ಹೋಗುತ್ತಾರೆ, ಕೆಲವರು ಹೋಗುವುದೇ ಇಲ್ಲ. ಕೆಲವರು ಭಕ್ತಿಯಿಂದ ಹೋಗುತ್ತಾರೆ, ಕೆಲವರು ಶ್ರದ್ಧೆಯಿಂದ ಹೋಗುತ್ತಾರೆ, ಕೆಲವರು ಕೇವಲ ಅಭ್ಯಾಸ ಬಲದಿಂದ ಹೋಗುತ್ತಾರೆ, ಮತ್ತೆ ಕೆಲವರು ಕಾಟಾಚಾರಕ್ಕೆ ಹೋಗುತ್ತಾರೆ. ಹೀಗೆ ದೇವಾಲಯಗಳಿಗೆ ಹೋಗುವುದು ಸರಿಯೇ ತಪ್ಪೇ? ಅದು ಅವರವರ ಅಭಿಮತಕ್ಕೆ ಬಿಟ್ಟದ್ದು. ಆದರೆ ಹೀಗೆ ದೇವಸ್ಥಾನಕ್ಕೆ ಹೋಗುವುದು ಆಧ್ಯಾತ್ಮ ಪ್ರಯಾಣದ ಒಂದು ಹಂತ. ಮೂರ್ತಿ ಪೂಜೆ ಒಂದು ಹಂತ. ಅದೇ ಪರಿಪೂರ್ಣವು ಅಲ್ಲ ಮತ್ತು ಪರಮಾರ್ಥವು ಅಲ್ಲ. ಅದು ಒಂದು ಹಂತವೆಂದರೆ ಅದಕ್ಕಿಂತ ಮೇಲಿನ ಸ್ತರಕ್ಕೆ ಹೋಗುವುದು ಸರಿಯಲ್ಲವೇ? ಎಂದರೆ, ಹೌದು ಅದೇ ಸರಿಯಾದ ಆಧ್ಯಾತ್ಮ ಚಿಂತನೆ. ಯಾವುದೋ ಒಂದೇ ಒಂದು ಗುಣವಿರುವ ವಸ್ತುವಿನ ಗುಣವನ್ನು ಆ ವಸ್ತುವಿನಲ್ಲೇ ನೋಡುವುದು ಸಹಜ. ಅನ್ಯ ಮಾರ್ಗವಿಲ್ಲ. ಆದರೆ ಅನಂತ ಕಲ್ಯಾಣ ಗುಣಗಳನ್ನು ಹೊಂದಿರುವ ಆ ಪರಮಾತ್ಮ, ಸಕಲ ಚರಾಚರಗಳ ಒಡೆಯ, ಎಲ್ಲಕ್ಕೂ ಮೂಲ ಮತ್ತು ಗಮ್ಯನಾದ ಆ ಪರಮಾತ್ಮ, ಎಲ್ಲಜೀವಿಗಳಲ್ಲೂ ಚೇತನ ಸ್ವರೂಪನಾಗಿ ಇರುವಂತಹ ಪರಮಾತ್ಮ, ಒಂದು ಬೃಹತ್ ವ್ಯಾಪಕತ್ವವನ್ನು ಹೊಂದಿರುವ ಆ ಪರಮಾತ್ಮನನ್ನು ಒಂದು ಚಿತ್ರಪಟದಲ್ಲೋ ಅಥವಾ ಒಂದು ವಿಗ್ರಹದಲ್ಲೋ ಅಥವಾ ಒಂದು ದೇವಸ್ಥಾನದಲ್ಲೋ ಸೀಮಿತಗೊಳಿಸಲು ಸಾಧ್ಯವೇ? ಹಾಗೆ ಮಾಡಿದರೆ, ನಮ್ಮ ದೃಷ್ಟಿಕೋನವು ಕಿರಿದಾಗಿ ಸತ್ಯದ ಅರಿವು ಸಂಪೂರ್ಣವಾಗುವುದಿಲ್ಲ. ಹಾಗಾಗಿ ಆ ದೇವರನ್ನು ಆ ದೇವಸ್ಥಾನದಲ್ಲಿ ಇರಿಸಿ, ಬಾಗಿಲಿಗೆ ಬೀಗಹಾಗಿ, ಕೀಲಿಯನ್ನು ಬಿಸುಟು, ಎಂದರೆ ಆ ದೇವರನ್ನು ಆ ದೇವಸ್ಥಾನದಲ್ಲಿರುವ ವಿಗ್ರಹಕ್ಕೆ ಸೀಮಿತಗೊಳಿಸದೆ, ಪರಮಾತ್ಮನ ಒಂದು ವಿಸ್ತಾರವಾದ ಚಿತ್ರವನ್ನು ಕಾಣಬೇಕು ಎನ್ನುವುದು ಈ ಮುಕ್ತಕದ ಗೂಢ ಅರ್ಥ. ಎಲ್ಲಿಯತನಕ ಸೀಮಿತ ವಿಚಾರಗಳು ಇರುತ್ತವೆಯೋ, ಪಂಡಿತರು ಅದನ್ನೇ ಮಂಡಿಸುತ್ತಾ, ವಿದ್ವಾಂಸರು ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುತ್ತಾ ಜನರನ್ನು ತಪ್ಪುದಾರಿಗೆ ಕೊಂಡೊಯ್ಯುವ ವ್ಯರ್ಥವಾದವನ್ನು ಮಾಡುತ್ತಾರೆ, ಎಂದು ಹೇಳುತ್ತಾ, ಎಲ್ಲರೂ ಪರಮಾತ್ಮನ ಒಂದು ವಿಶಾಲ ರೂಪವನ್ನು ನೋಡಲು ಪ್ರಯತ್ನಿಸಿದರೆ, ಆಗ ಆ ವಿದ್ವಾಂಸರೂ ಸಹ ವ್ಯರ್ಥವಾದವನ್ನು ಬಿಟ್ಟು ನಮಗೆ ಸತ್ಯದ ಅರಿವು ಉಂಟಾಗಿಸಲು ಸಹಾಯ ಮಾಡಬಹುದು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದ ಮೂಲಕ. ವಿಗ್ರಹಾರಾಧನೆ, ದೇವಸ್ಥಾನಕ್ಕೆ ಹೋಗುವುದು, ಸರಿಯಲ್ಲ ಎಂದು ಅಲ್ಲ. ಆದರೆ ಅದೇ ಪರಮಾರ್ಥವಲ್ಲ. ಅದಕ್ಕಿಂತ ಬೆಳೆದು ವಿಸ್ತಾರವಾದ ರೂಪ ಮತ್ತು ಗಹನವಾದ ತತ್ವ ಮತ್ತು ಸತ್ಯವನ್ನು ಅರಿತುಕೊಳ್ಳುವುದು ಎಲ್ಲ ಆಧ್ಯಾತ್ಮಾಧ್ಯಾಯಿಗಳ ಕರ್ತವ್ಯ. ಮಹಡಿಯ ಮೇಲೆ ಹೋಗಲು ಮೆಟ್ಟಿಲುಗಳು ಬೇಕು. ಮೆಟ್ಟಿಲೇ ಮಹಡಿಯಾಗಲು ಸಾಧ್ಯವೇ? ನಮ್ಮ ಆಚಾರ ವಿಚಾರ ಮತ್ತು ಸಂಪ್ರದಾಯಗಳೆಲ್ಲ ಉನ್ನತ ಸತ್ಯದ ಅರಿವಿಗಾಗಿ ಇರುವ ಮೆಟ್ಟಿಲುಗಳು ಅಥವಾ ಉಪಕರಣಗಳು ಅಷ್ಟೇ. ಅವೇ ಪರಮಾರ್ಥವಲ್ಲ. ಅವುಗಳು ಬೇಕು. ಅವುಗಳ ಮೂಲಕ ಎಲ್ಲರೂ ಉನ್ನತ ಸತ್ಯದ ದರ್ಶನ ಮಾಡಿಕೊಳ್ಳಬೇಕು. ಈ ರೀತಿಯ ಉಪಕರಣಗಳನ್ನು ಉಪಯೋಗಿಸುತ್ತಾ ಮತ್ತು ಅವುಗಳನ್ನು ತೊರೆದು ಮೀರಿ ಉನ್ನತ ಸ್ಥಾನಕ್ಕೆ ಬೆಳೆದಾಗ, ಸತ್ಯವಾಗಲೂ ನಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-42 )

ಆಹ! ಈ ಮೋಹಗಳೋ, ನೇಹಗಳೋ,ದಾಹಗಳೋ | ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು? || ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ| ಈ ಹರಿಬದೊಳಗುಟ್ಟು?-ಮಂಕುತಿಮ್ಮ ||

ಪದಗಳ ವಿಸ್ತರಣೆ

ಹೃದಯಂ+ಇಹುದೆಂದು, ಬಾಯ್ಬಿಡಿಸುವುದೆ=ಬಾಯಿ+ಬಿಡಿಸ+ಬಹುದೇ, ಹರಿಬದೊಳಗುಟ್ಟು=ಹರಿಬದ+ಒಳಗುಟ್ಟು ನೇಹಗಳು=ಸ್ನೇಹಗಳು.

ಪದಗಳ ತಾತ್ಪರ್ಯ

ಊಹಿಪೆಯ=ಊಹಿಸುತ್ತೀಯಾ. ಹರಿಬ=ವ್ಯಾಪಾರ.

ಪದ್ಯದ ಪೂರ್ತಿ ವಿವರಣೆ

ಆಹಾ! ಈ ಬಂಧನಗಳು ಸ್ನೇಹಗಳು ಮತ್ತು ಬಯಕೆಗಳು ಇವುಗಳ ಮಧ್ಯೆ ಈ ಜಗತ್ತಿನ ಎಲ್ಲರಲ್ಲೂ ಹೃದಯವಿದೆಯೆಂದು ನೀನು ಅಂದುಕೊಂಡಿದ್ದೀಯಾ. ಪರಸ್ಪರ ಮಾತುಗಳ ಅಟ್ಟಹಾಸದಿಂದ ನಿಮ್ಮನ್ನೂ ಅಂತಹ ಅಟ್ಟಹಾಸಕ್ಕೆ ಪ್ರತಿಕ್ರಿಯಿಸುವುದೇ ಈ ಜಗದ್ವ್ಯಾಪಾರದ ಗುಟ್ಟು ಎನ್ನುತ್ತಾರೆ ಮಾನ್ಯ ಗುಂಡಪ್ಪನವರುಈ ಮುಕ್ತಕದಲ್ಲಿ. ಜಗತ್ತಿನ ಪರಸ್ಪರ ಸಂಬಂಧಗಳಲ್ಲಿರುವ ಪೊಳ್ಳುತನವನ್ನು ಕುಹಕವಾಡುತ್ತಾರೆ, ಡಿ.ವಿ.ಜಿ.ಯವರು. ಎಲ್ಲಸಂಬಂಧಗಳೂ ಕೇವಲ ವ್ಯಾವಹಾರಿಕವಾಗಿದೆಯೇ ಹೊರತು ಹೃದಯದ ಸಂಬಂಧಗಳು ನಶಿಸಿಹೋಗಿವೆ. ಬೂಟಾಟಿಕೆಯ ಸ್ನೇಹ, ತೋರಿಕೆಯ, ಅಟ್ಟಹಾಸದ ಸಂಬಂಧಗಳು ಮತ್ತು ಈ ಸಂಬಂಧಗಳಲ್ಲಿನ ಪೊಳ್ಳುತನ, ಇವುಗಳೇ ಈ ಮುಕ್ತಕದ ಹೂರಣ. ಅಂದು ಅವರಿಗೆ ಹಾಗೆ ಅನ್ನಿಸಿರಬೇಕಾದರೆ, ಇಂದು ಅವರಿಗೆ ಏನು ಅನ್ನಿಸುತ್ತಿತ್ತೋ ಕಾಣೆ. ಇಂದು ನಾವೆಲ್ಲಾ ಕಾಣುವ, ನಮ್ಮ ಸಮಾಜದ ವಿಷಯವನ್ನೇ ನೋಡೋಣ. ಒಂದು ಮನೆ. ಆ ಮನೆಯಲ್ಲಿ ಗಂಡ ಹೆಂಡತಿಯರ ಸಂಬಂಧ ಕೇವಲ ಒಡಂಬಡಿಕೆಯಾಗಿ ಉಳಿದಿದೆ. ಪರಸ್ಪರ ಸ್ನೇಹ, ಪ್ರೀತಿ, ತ್ಯಾಗ, ನಂಬಿಕೆಗಳ ಆಧಾರದ ಮೇಲೆ ನಿಲ್ಲಬೇಕಾದ ಈ ನಂಟು ಇಂದು ಕೇವಲ ಒಡಂಬಡಿಕೆಯಾಗಿದೆ. ಇನ್ನು ಆ ಮನೆಯಲ್ಲಿ ತಂದೆ ತಾಯಿಗಳ ಜೊತೆಗೆ ಮಕ್ಕಳ ಸಂಬಂಧ, ಮಕ್ಕಳಲ್ಲೇ ಪರಸ್ಪರ ಸಂಬಂಧ ಎಲ್ಲವು ಹೃದಯವಂತಿಕೆಯಿಲ್ಲದೆ, ಗಟ್ಟಿ ಇಲ್ಲದೆ ಟೊಳ್ಳಾಗಿದೆ. ಅವರವರ ಅವಶ್ಯಕತೆಗಳನ್ನು ಪೂರೈಸುವ ತನಕ ಎಲ್ಲರೂ ಬೇಕು. ಇದರಲ್ಲಿ ಒಂದು ಸಣ್ಣ ಬೆಳ್ಳಿಗೆರೆಯೆಂದರೆ ಆ ತಾಯಿಗೆ ಮಕ್ಕಳೆÆಡನೆ ಇರುವ ಸಂಬಂಧ. ಇದರಲ್ಲಿ ಇನ್ನೂ ಸ್ವಲ್ಪ ಸತ್ವವನ್ನು ನಾವು ಕಾಣುತ್ತೇವೆ. ಆದರೆ ತಾಯಿಯೇನೋ ಶುದ್ಧಮಮತೆ, ಪ್ರೀತಿ, ಅನುರಾಗ ಎಲ್ಲವನ್ನೂ ಹರಿಸುತ್ತಾಳೆ. ಆದರೆ ಮಕ್ಕಳೇ ರೆಕ್ಕೆ ಮೂಡಿದ ಮೇಲೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಾ, ಆ ತಾಯಿಯನ್ನೇ ಕಡೆಗಣಿಸುತ್ತಾರೆ. ಹಾಗೆ ಮಾಡದೆ ಇರುವ ಮಕ್ಕಳಿದ್ದರೆ, ಆ ತಾಯಿ ಪುಣ್ಯವಂತೆ. ಸ್ವಾರ್ಥಪೂರಿತ ಜನರೇ ತುಂಬಿರುವ ಈ ಸಮಾಜದಲ್ಲಿ ಹೃದಯವಂತಿಕೆಯನ್ನು ದುರ್ಬೀನು ಹಾಕಿಕೊಂಡು ನೋಡಿದರೂ ಕಾಣಸಿಗದು. ಅಕಸ್ಮಾತ್ ಯಾರಾದರೂ ಇದ್ದರೆ, ಅವರನ್ನು ದುರುಪಯೋಗ ಪಡಿಸಿಕೊಂಡು, ಹಿಂಡಿ ಹಿಪ್ಪೆ ಮಾಡಿ ಬಿಡುತ್ತಾರೆ, ಈ ಲೋಕದ ಜನರು, ಅಥವಾ ಅವನಿಗೆ "ಸ್ವಲ್ಪ ಹುಚ್ಚ" ಎಂದು ಹಣೆಪಟ್ಟಿ ಕಟ್ಟುತ್ತಾರೆ. ಚೆನ್ನ ಎನ್ನುವ ಪದಕ್ಕೆ ಅರ್ಥ ತಿಳಿಯದಿದ್ದರೂ, "ನಾನು-ನಾನೊಬ್ಬನೇ ಚೆನ್ನಾಗಿರಬೇಕು" ಎನ್ನುವ ದುರ್ಭಾವ. "ನಾನು" ಎನ್ನುವ ಅಹಂಕಾರ. ಸಂಸ್ಕಾರದ ಕೊರತೆ, ಸಂಸ್ಕೃತಿಯ ನಾಶ, ದುರಾಚಾರ, ವಿದ್ಯೆಗೆ ತಿರಸ್ಕಾರ ಮತ್ತು ತಾತ್ಸಾರ. ಹಿರಿಯರಲ್ಲಿ ಗೌರವವಿಲ್ಲ. ಅವರಿಂದ ಕಲಿಯಬೇಕು ಎನ್ನುವ ಆಸೆಯಿಲ್ಲ. ಒಟ್ಟಾರೆ ಹೇಳಬೇಕೆಂದರೆ ಅಧಃಪತನ. ಹೃದಯವಂತಿಕೆಯ ಕೊರತೆಯಿಂದಲೇ, ಎಲ್ಲ ಸಮಸ್ಯೆಗಳು. ಇರುವವರ ಮತ್ತು ಇಲ್ಲದವರ ನಡುವಿನ ಅಗಾಧ ಅಂತರ. ತತ್ಕಾರಣ ಪರಸ್ಪರ ದ್ವೇಷಾಸೂಯೆಗಳು. ಅಯ್ಯೋ ಹೇಳುತ್ತಾ ಹೋದರೆ ಕೊನೆ ಮೊದಲಿಲ್ಲ!!!. ಒಟ್ಟಿನಲ್ಲಿ ಹೃದಯವಂತಿಕೆಯ ಕೊರತೆಯಿಂದ ಮನುಷ್ಯರ ಪರಸ್ಪರ ಸಂಬಂಧಗಳು ಹಾಳಾಗಿವೆ, ಟೊಳ್ಳಾಗಿದೆ, ಪೊಳ್ಳಾಗಿದೆ. ಸಮಸ್ಯೆ ಏನೆಂದು ಗೊತ್ತು. ಪರಿಹಾರವನ್ನು ನಾವುಗಳೇ ಕಂಡುಹಿಡಿದುಕೊಂಡು ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಸಮಾಜವನ್ನು ಮತ್ತು ಒಟ್ಟು ಪರಿಸರವನ್ನು ಸರಿಪಡಿಸಿಕೊಳ್ಳುವುದೇ, ಈಗ ಆಗಬೇಕಾಗಿರುವ ಕೆಲಸ. ಪ್ರಯತ್ನ ಪಟ್ಟರೆ ಅಸಾಧ್ಯವಾದುದೇನಲ್ಲ. ಈ ನಿಟ್ಟಿನಲ್ಲಿ ನಾವು ಸಹಪ್ರಯತ್ನಪಡೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-43 )

ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತತ್ತಲುಂ | ಮೂಲೆಮೂಲೆಯೆಲಿ ವಿದ್ಯುಲ್ಲಹರಿಯೊಂದು || ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ | ಚಾಲಿಪುದು ಬಿಡು ಕೊಡದೆ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಸುತ್ತಲೆತ್ತತ್ತಲುಂ=ಸುತ್ತಲು+ಎತ್ತೆತ್ತಲುಂ, ವಿದ್ಯುಲ್ಲಹರಿಯೊಂದು=ವಿದ್ಯುಲ್ಲಹರಿ+ಒಂದು,

ಪದಗಳ ತಾತ್ಪರ್ಯ

ವಿದ್ಯುಲ್ಲಹರಿ=ಚೇತನದ ಲಹರಿ, ಧೂಲಿಕಣ=ಧೂಳಿನ ಕಣ, ಚಾಲಿಪುದು=ಸಕ್ರಿಯವಾಗಿಡುವುದು

ಪದ್ಯದ ಪೂರ್ತಿ ವಿವರಣೆ

ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣೀಭೂತವಾದ ಆ ಪರಮ ಶಕ್ತಿಯನ್ನು ಎಲ್ಲ ಸಾಧಕರೂ, ಸಿದ್ಧರೂ, ಸತ್ಪುರುಷರೂ, ಭಕ್ತರೂ ತಮ್ಮ ಭಕ್ತಿ ಪಾರವಶ್ಯದಲ್ಲಿ ಅನುಭವಿಸಿದ್ದಾರೆ. ಮೇಲೆ, ಕೆಳಗೆ, ಒಳಗೆ, ಹತ್ತಿರ, ದೂರ, ಸುತ್ತಲು ಮತ್ತು ಎತ್ತೆತ್ತಲೂ ಆ ವಿದ್ಯುಲ್ಲಹರಿಯು ಎಲ್ಲವನ್ನು "ಬಿಡು ಕೊಡದೆ" ಎಂದರೆ ನಿರಂತರವಾಗಿ, ಒಂದು ಕ್ಷಣವು ವಿರಾಮವಿಲ್ಲದೇ ನಡೆಸುತ್ತಿದೆ ಎಂದು ಈ ಮುಕ್ತಕದ ಆಂತರ್ಯ. ಆದಿ ಕಾವ್ಯ ಋಗ್ವೇದದ, ಪುರುಷ ಸೂಕ್ತದಲ್ಲಿ "ಸ ಭೂಮಿಂ ವಿಶ್ವತೋ ವೃತ್ವಾ ಅತ್ತ್ಯತಿಷ್ಟತ್ ದಶಾಂಗುಲಂ" ಎಂದುಬರುತ್ತದೆ. ಅಂದರೆ ಯಾವುದೇ ಒಂದು ವಸ್ತುವು ಮಿಕ್ಕೆಲ್ಲ ವಸ್ತುಗಳನ್ನೂ ತನ್ನ ಅಧೀನದಲ್ಲಿಟ್ಟುಕೊಂಡಿರಬೇಕಾದರೆ, ತಾನು ಅದೆಲ್ಲದರಕ್ಕಿಂತ ಮೇಲೆ ಇರಬೇಕು. ಹೌದಲ್ಲವೇ? ಹಾಗೆಯೇ, ಎಲ್ಲ ಸೃಷ್ಟಿಯನ್ನು ತನ್ನ ಅಧೀನದಲ್ಲಿಟ್ಟುಕೊಂಡಿರುವ ಆ ಪರಮ ಶಕ್ತಿಯು, ಈ ನಾವಿರುವ ಭೂಮಿಯನ್ನೂ ಸೇರಿ ಇಡೀ ವಿಶ್ವವನ್ನೇ ತನ್ನ ಅಧೀನದಲ್ಲಿಟ್ಟುಕೊಂಡಿರುವುದರಿಂದ ಅದು "ಅತ್ತ್ಯತಿಷ್ಟತ್ ದಶಾಂಗುಲಂ". ಇವೆಲ್ಲವನ್ನೂ ಮೀರಿ ಹತ್ತು ಅಂಗುಲ ಮೇಲಿದೆ ಎಂದು ಅರ್ಥ. ಅಷ್ಟೇ ಅಲ್ಲ ಅದು ತಾನೇ ಸೃಷ್ಟಿಸಿರುವ, ತನ್ನ ಅಧೀನದಲ್ಲಿರುವ, ಇಡೀ ಸೃಷ್ಟಿಯನ್ನು ತನ್ನ ಶಕ್ತಿಯಿಂದಲೇ ನಡೆಸಿಕೊಂಡು ಹೋಗುತ್ತದೆ ಎಂದು ಈ ಮುಕ್ತಕದ ಆಂತರ್ಯ. ಆದರೆ ನಾವು ನೋಡಬೇಕಾದ ಒಂದು ಅಂಶವಿದೆ. ಸಕಲ ಪ್ರಾಣಿಗಳಿಗೂ, ಅಂದರೆ ಆಕಾಶದಲ್ಲಿ ಹಾರುವ ಎಲ್ಲ ಪಕ್ಷಿಗಳಿಗೂ, ಭೂಮಿಯ ಮೇಲಿರುವ ಎಲ್ಲ ಪ್ರಾಣಿಗಳಿಗೂ, ಕೀಟಗಳಿಗೂ, ಕ್ರಿಮಿಗಳಿಗೂ ಮತ್ತು ಎಲ್ಲ ಜಲಚರಗಳಿಗೂ ಒಂದು ಸಮಾನವಾದ ಅಂಶವುಂಟು. ಅದೇನೆಂದರೆ, ಎಲ್ಲಕ್ಕೂ ಒಂದು ದೇಹ, ಒಂದು ಮನಸ್ಸು, ಒಂದು ಬುದ್ಧಿ ಮತ್ತು ಒಂದು ಚೇತನ ಉಂಟು. ಈ ನಾಲ್ಕೂ ಬೇಕಾದ ಪ್ರಮಾಣದಲ್ಲಿ ಇರುವುದರಿಂದ ಈ ಎಲ್ಲ ಪ್ರಾಣಿಗಳ ಅಸ್ತಿತ್ವ. ದೈಹಿಕ ರೂಪ ಮತ್ತು ಅದರ ಮಿತಿ ಮತ್ತು ಪರಿಮಿತಿಗಳು, ಮನಸ್ಸು ಬುದ್ಧಿಗಳ ವಿಕಾಸದ ಸ್ತರಗಳ ಅನ್ವಯ, ಆಯಾ ಪ್ರಾಣಿಗಳ ಸ್ವಭಾವಗಳು, ಕ್ರಿಯೆಗಳು ಇರುತ್ತವೆ. ಈ ಎಲ್ಲ ಪ್ರಾಣಿ ಪಕ್ಷಿಗಳೂ ಭೂಮಿಗೆ ಸಮಾನಾಂತರವಾಗಿದ್ದರೆ, ಮನುಷ್ಯ ಮಾತ್ರ ಲಂಬವಾಗಿದ್ದಾನೆ. ಹಾಗಾಗಿ ಮನುಷ್ಯ ಊರ್ಧ್ವಮುಖವಾಗಿ ಯೋಚಿಸಲು ಸಾಮರ್ಥ್ಯವನ್ನು ಪಡೆದುಕೊಂಡು ಅನ್ಯ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಸರಿ ಹಾಗಿದ್ದರೆ ಅನ್ಯ ಪ್ರಾಣಿಗಳಿಗೆ ಹೋಲಿಸಿದರೆ, ಮಾನವರ ಜಗತ್ತಿನಲ್ಲಿ ಮಾತ್ರ ಏಕೆ ಇಷ್ಟೊಂದು ಹಿಂಸೆದ್ವೇಷ ಮುಂತಾದ ಕುಬುದ್ಧಿಗಳೇ ತುಂಬಿದೆ ಎಂದರೆ, ಆ ಪರಮಾತ್ಮ ಎಲ್ಲ ಮನಸ್ಸು ಬುದ್ಧಿ ದೇಹಾತ್ಮಗಳನ್ನು ಒಂದುಗೂಡಿಸಿ, ಅಷ್ಟಕ್ಕೇ ಬಿಟ್ಟಿದ್ದರೆ ಸಾಕಿತ್ತು. ಆದರೆ ಇವೆಲ್ಲವನ್ನೂ ಸೇರಿಸಿ ಒಂದು ಚೂರು "ಅಹಂಕಾರ"ವನ್ನೂ ಇಟ್ಟ. ಅನ್ಯ ಪ್ರಾಣಿಗಳಲ್ಲಿ ಅದು ಕೇವಲ ತನ್ನ ಆಹಾರ ಹುಡುಕುವುದು ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕೆ ಮಾತ್ರ ಉಪಯೋಗಿಸಿದರೆ, ಈ ಮನುಷ್ಯ ಮಾತ್ರ ಸ್ವಾರ್ಥದಿಂದ ಅಹಂಕಾರವನ್ನು ಪರ ಹಿಂಸೆಗೆ, ದುರಾಸೆಗೆ, ಲೂಟಿಗೆ, ಹೀಗೆ ಮಾನವಕುಲಕ್ಕೆ ಮಾರಕವಾದ ಎಲ್ಲ ಕಾರ್ಯಗಳಿಗೂ ಉಪಯೋಗಿಸುತ್ತಾ ಇಡೀ ಪ್ರಪಂಚವನ್ನು ಒಂದು ಮಹಾ ರಣರಂಗವನ್ನಾಗಿ ಪರಿವರ್ತಿಸಿದ್ದಾನೆ. ಎಲ್ಲ ಜೀವಿಗಳಲ್ಲೂ ಎಲ್ಲ ಸೃಷ್ಟಿಗೂ ಕಾರಣನಾದವನು ಮತ್ತು ನಡೆಸುವವನೂ ಪರಮಾತ್ಮನೇ ಆದಾಗ, ಇಂದಿನ ಪರಿಸ್ಥಿತಿಗೂ ಆ ಪರಮಾತ್ಮನೇ ಕಾರಣವೆನ್ನುವವರು ಬಹಳ ಮಂದಿ. ಒಂದು ಉಸಿರು ಒಳಗೆ ಹೋದದ್ದು ಹೊರಗೆ ಬಾರದಿದ್ದರೋ ಅಥವಾ ಹೊರಗೆ ಬಂದ ಒಂದು ಉಸಿರು ಒಳಗೆ ಹೋಗದಿದ್ದರೋ ಮುಗಿಯಿತು ಇವನ ಕಥೆ. ಇಷ್ಟು ಪರಿಮಿತ ಸಾಮರ್ಥ್ಯವನ್ನಿಟ್ಟುಕೊಂಡು ಈ ಮನುಷ್ಯ ಹಾರಾಡುವುದನ್ನು ನೋಡಿದರೆ, ಅವನ ಮೌಢ್ಯಕ್ಕೆ ಅಚ್ಚರಿಯಾಗುತ್ತದೆ. ಇದು ಅಹಂಕಾರದ ಫಲ. ನಾನು ಎಲ್ಲ ಪ್ರಾಣಿಗಳಂತೆ. ನಮ್ಮ ಅಸ್ತಿತ್ವಕ್ಕೆ ಕಾರಣವಾದ ಆ ವಿದ್ಯುಲ್ಲಹರಿ ಅಥವಾ ಆ ಮಹಾ ಚೇತನದ ಮುಂದೆ ನಾನೇನೂ ಇಲ್ಲ, ಹಾಗಾಗಿ ತಗ್ಗಿ ಬಗ್ಗಿ, ವಿನಯದಿಂದ, ಅಹಂಕಾರವನ್ನು ತೊರೆದು ನಡೆದು ಒಂದು ಸು-ಸಮಾಜದ ನಿರ್ಮಾಣಕ್ಕೆನಾವು ನಾಂದಿ ಹಾಡುವ ಎನ್ನುವ ಭಾವನೆ ತಳೆದರೆ ಚೆಂದ. ಇಲ್ಲದಿದ್ದರೆ ಪತನವೇ ಹಾದಿ. ಆಯ್ಕೆ ನಮ್ಮದು ಸುಖ ನಮ್ಮದು ದುಃಖ ನಮ್ಮದು. ಅಳಿವು ಮತ್ತು ಉಳಿವು ನಮ್ಮ ಕೈಯಲ್ಲಿಯೇ ಇದೆ. ವಾಚಕರೆ, ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಲು ಸೂಕ್ತ ಸಮಯ ಬೇರೊಂದಿಲ್ಲ್ಲ. ನಮ್ಮನ್ನು ನಾವು ಸರಿಪಡಿಸಿಕೊಳ್ಳುವ ಪಣ ತೊಡಬೇಕು ಅಷ್ಟೇ!!!!

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-44 )

ಮಂದಾಕ್ಷಿ ನಮಗಿಹುದು ಬಲುದೂರ ಸಾಗದದು | ಸಂದೆ ನಸುಕಿನೊಳಿಹುದು ಜೀವನದ ಪಥವು || ಒಂದುಮೆಟುಕದು ಕೈಗೆ; ಏನೋ ಕಣ್ಕೆಣಕುವುದು | ಸಂದಿಯವೆ ನಮ್ಮ ಗತಿ-ಮಂಕುತಿಮ್ಮ ||

ಪದಗಳ ವಿಸ್ತರಣೆ

ನಮಗಿಹುದು=ನಮಗೆ+ಇಹುದು, ನಸುಕಿನೊಳಿಹುದು=ನಸುಕಿನೊಳು+ಇಹುದು, ಒಂದುಮೆಟುಕದು=ಒಂದುಂ+ಎಟುಕದು, ಕಣ್ಕೆಣಕುವುದು=ಕಣ್‌+ಕೆಣಕುವುದು

ಪದಗಳ ತಾತ್ಪರ್ಯ

ಮಂದಾಕ್ಷಿ=ಸ್ಪಷ್ಟವಿಲ್ಲದ ದೃಷ್ಟಿ, ಸಂದೆ=ಸಂಜೆ, ಸಂದಿ=ಸಂದೇಹ ಅಥವಾ ಸಂದಿಗ್ಧ

ಪದ್ಯದ ಪೂರ್ತಿ ವಿವರಣೆ

ನಮ್ಮ ಮನಸ್ಸಿನ ಕಣ್ಣುಗಳು ಮಂದವಾಗಿವೆ. ಒಂದು ವಿಶಾಲವಾದ ದೃಷ್ಟಿ ನಮಗೆ ಇಲ್ಲ. ನಮ್ಮ ಆಲೋಚನೆಗಳು ಸ್ಪಷ್ಟವಿಲ್ಲದೆ ಸಂಜೆಗತ್ತಲಂತೆ ಮಸುಕು ಮಸುಕಾಗಿರುವುದರಿಂದ ನಾವು ನಡೆಸುವ ನಮ್ಮ ಜೀವನದ ಪರಿಯೂ ಸಹ ಸ್ಪಷ್ಟತೆ ಇಲ್ಲದೆ ಮಸುಕಾಗಿದೆ. ನಮ್ಮ ಅಪೇಕ್ಷೆಗಳು ನಮಗೇ ಸ್ಪಷ್ಟವಾಗಿಲ್ಲ. ಸರಿಯಾದ ವಸ್ತು ಇನ್ನೇನು ಸಿಕ್ಕಿತು ಎನ್ನುವ ವೇಳೆಗೆ, ನಮ್ಮ ಕಣ್ಣು ಅನ್ಯ ವಸ್ತುವಿನ ಮೇಲೆ ಬಿದ್ದು ನಮ್ಮನ್ನು ವಿಚಲಿತಗೊಳಿಸಿ, ಸಂದೇಹ ಮತ್ತು ಸಂದಿಗ್ಧಕ್ಕೆ ತಳ್ಳಿಬಿಡುತ್ತದೆ ಎನ್ನುವುದು ಈ ಮುಕ್ತಕದ ಹೂರಣ. ಇಲ್ಲಿ ಮಾನ್ಯ ಗುಂಡಪ್ಪನವರು, ನಮ್ಮ ಮಾನಸಿಕ ದೃಷ್ಟಿಕೋನದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಸಂಕುಚಿತ ಸ್ವಭಾವದ ನಮ್ಮ ದೃಷ್ಟಿಯೂ ಸಂಕುಚಿತ. ಒಂದು ವಿಶಾಲ ಮನೋಭಾವವನ್ನು ನಾವು ಕಳೆದುಕೊಂಡಿದ್ದೇವೆ. ನಾವು ಯಾವುದೇ ವಿಚಾರವನ್ನು ತೆಗೆದುಕೊಂಡರೂ ಒಂದು ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಲು ಅಸಮರ್ಥರಾಗಿದ್ದೇವೆ. ಯಾವುದೂ ಸ್ಪಷ್ಟವಿಲ್ಲ. ನಮ್ಮ ಸಂಬಂಧಗಳು ಸ್ಪಷ್ಟವಾಗಿ ಗಟ್ಟಿಯಾಗಿಲ್ಲ. ನಮ್ಮ ಸ್ನೇಹಗಳು ಗಟ್ಟಿಯಾಗಿಲ್ಲ. ನಮ್ಮ ಬೇಕು ಬೇಡಗಳ ಬಗ್ಗೆ ನಮಗೆ ನಿಖರವಾದ ಅಭಿಪ್ರಾಯವಿಲ್ಲ. ಒಟ್ಟಾರೆ ನಮಗೆ ಯಾವುದೂ ಸ್ಪಷ್ಟವಿಲ್ಲ. ಎಲ್ಲಾ ಮಸುಕು ಮಸುಕು. ನಮ್ಮ ದೃಷ್ಟಿಯೇ ಹಾಗಿರಬೇಕಾದರೆ ನಮ್ಮ ಜೀವನವು ಹಾಗೇ ಇರುವುದು ಸಹಜ ತಾನೇ? ನಮ್ಮ ಜೀವನಗಳನ್ನೇ ತೆಗೆದು ಕೊಳ್ಳೋಣ. ನಮ್ಮ ವಿದ್ಯಾಭ್ಯಾಸದಲ್ಲಿ ನಮಗೆ ನಮ್ಮ ಸಾಮರ್ಥ್ಯದ ಅರಿವಿಲ್ಲ. ಆ ಸಾಮರ್ಥ್ಯಕ್ಕೆ ತಕ್ಕಂತ ವಿದ್ಯಾಭ್ಯಾಸವಿಲ್ಲ. ಸರಿ ಏನೋ ಓದಿದ್ದಾರೆ ಎಂದರೆ ಆ ಓದಿಗೆ ತಕ್ಕಂತ ಉದ್ಯೋಗವಿಲ್ಲ. ಓದು ಸಿವಿಲ್‌ ಇಂಜಿನಿಯರಿಂಗ್, ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಎಂತಹ ವಿಪರ್ಯಾಸ. ಸರಿ ಏನೋ ಉದ್ಯೋಗ ಮಾಡುತ್ತಾರೆ ಎಂದರೆ, ಮಾಡುವ ಕೆಲಸದಲ್ಲಿ ಆಸ್ಥೆ ಇಲ್ಲ, ಆಸಕ್ತಿಯಿಲ್ಲ ಮತ್ತು ತೃಪ್ತಿಯೂ ಇಲ್ಲ. ಅಕಸ್ಮಾತ್ ನಮಗೆ ಒಂದು ಹುಟ್ಟು ಸಿಕ್ಕಿದೆ. ನಮಗೆ ನಮ್ಮ ಜೀವನದ ಗುರಿಯಿಲ್ಲ. ನಾವು ಏನಾಗಬೇಕು ಅಥವಾ ನಮಗೆ ಏನು ಬೇಕು ಎನ್ನುವುದು ನಮಗೆ ಗೊತ್ತಿಲ್ಲ. ಸುಮ್ಮನೆ ಬೆಳಗಾಗುತ್ತದೆ, ಏಳುತ್ತೇವೆ, ತಿನ್ನುತ್ತೇವೆ, ಏನೋ ಕೆಲಸ ಮಾಡುತ್ತೇವೆ, ಮತ್ತೆ ತಿನ್ನುತ್ತೇವೆ, ಮಲಗುತ್ತೇವೆ. ಮಲಗುವ ಮುಂಚೆ ನಾವು ಇಂದಿನ ಸಾಧನೆಯೇನು ಎಂದು ಯೋಚನೆ ಮಾಡಿದರೆ, ಎಲ್ಲವು ಶೂನ್ಯ. ನಮ್ಮ ಸಂಬಂಧಗಳನ್ನು ತೆಗೆದುಕೊಳ್ಳೋಣ. ನಮಗೆ ನಮ್ಮ ತಂದೆ ತಾಯಿಗಳೊಡನಾಗಲೀ, ಅಣ್ಣತಮ್ಮೊಂದಿರೊಡನಾಗಲೀ, ಬಂಧುಗಳೊಡನಾಗಲೀ, ಸ್ನೇಹಿತರೊಡನಾಗಲೀ, ಸಮಗ್ರವಾಗಿ ಸಮಾಜದೊಡನಾಗಲೀ ಒಂದು ಸ್ಪಷ್ಟವಾದ ಗಟ್ಟಿಯಾದ ಸಂಬಂಧವೇ ಇಲ್ಲ. ನಮ್ಮ ಸಂಸ್ಕೃತಿಯ ಬಗ್ಗೆಯಾಗಲೀ ಸಂಸ್ಕಾರಗಳ ಬಗ್ಗೆಯಾಗಲೀ ಒಂದು ನಿಖರವಾದ ಅಭಿಪ್ರಾಯ ಮತ್ತು ದೃಷ್ಟಿಕೋನವಿಲ್ಲ. ಎಲ್ಲವು ಮಸುಕು ಮಸುಕು. ಇನ್ನು ನಮ್ಮ ಜೀವನದ ಪಥವು ಸ್ಪಷ್ಟವಾಗಿರುವುದೆಂತು? ಆ ಪ್ರಾಣಿಗಳ ಬದುಕಿಗೂ ನಮ್ಮ ಬದುಕಿಗೂ ಎಷ್ಟು ವ್ಯತ್ಯಾಸವಿದೆ? ಕಡೆಯ ಪಕ್ಷ ಅವುಗಳಿಗೆ "ಏನೋ ಒಂದು ಇಲ್ಲ" ಎನ್ನುವುದು ಸ್ಪಷ್ಟ. ನಮಗೆ ಆ ಸ್ಪಷ್ಟತೆಯೂ ಇಲ್ಲ. ಇದಕ್ಕೆಲ್ಲ ಏನು ಕಾರಣ? ನನ್ನ ಅಲ್ಪ ಮತಿಗೆ ಹೊಳೆಯುವುದು ಇಷ್ಟು. ಸ್ವಾರ್ಥ ಮತ್ತು ಅಹಂಕಾರಗಳೇ ನಮ್ಮನ್ನು ಈ ಗತಿಗೆ ತಳ್ಳಿವೆ. "ನನಗೆ ಎಲ್ಲವು ಬೇಕು" ಎನ್ನುವ ಸ್ವಾರ್ಥದಿಂದ ಏನು ಬೇಕು ಎನ್ನುವುದೇ ತಿಳಿಯದಾಗಿದೆ. ಎಲ್ಲವು ಬೇಕು ಎನ್ನುವವನು ಏನೇನನ್ನು ಪಡೆದುಕೊಳ್ಳಲು ಸಾಧ್ಯ? ಪಡೆದುಕೊಂಡು ಅಥವಾ ದಕ್ಕಿಸಿಕೊಂಡು ಅನುಭವಿಸುವ ಸಾಮರ್ಥ್ಯ ಬೇಡವೇ? ಏನನ್ನೋ ಪಡೆದಾಕ್ಷಣ ಬೇರೆ ವಸ್ತುಗಳ ಮೇಲೆ ಕಣ್ಣು. ಹೀಗೆ ನಮ್ಮ ಬೇಕು ಬೇಡಗಳ ಅಸ್ಪಷ್ಟತೆ. "ನನಗೆ ಎಲ್ಲವು ತಿಳಿದಿದೆ" ಎನ್ನುವ ಅಹಂಕಾರದಿಂದ ಅರಿವಿನ ಬಾಗಿಲು ಮುಚ್ಚಿ ಹೋಗಿದೆ. ಮೇಲಕ್ಕೆ ಹೋಗಬೇಕಾದವನು, ನಾನು ಕೆಳಗೆ ಇದ್ದೇನೆ ಎಂದು ಅರಿತರೆ ಮಾತ್ರ ಮೇಲಕ್ಕೆ ಹೋಗಲು ಸಾಧ್ಯ. ನಾನು ಮೇಲೆ ಇದ್ದೇನೆ ಎನ್ನುವವನು, ಇನ್ನು ಮೇಲಕ್ಕೆ ಹೋಗುವುದು ಹೇಗೆ? ಅಗಾಧ ಜ್ಞಾನ ಸಮುದ್ರದಲ್ಲಿ ನನಗೆ ತಿಳಿದಿರುವುದು ಒಂದು ತೊಟ್ಟು ಹನಿಯೂ ಅಲ್ಲ ಎಂದು ತಿಳಿದವನಿಗೆ, ಇನ್ನಷ್ಟು ತಿಳಿದುಕೊಳ್ಳುವ ಅವಕಾಶ. ನನಗೆ ಎಲ್ಲ ಗೊತ್ತು ಎನ್ನುವ ಮೂರ್ಖತನಕ್ಕೆ ಮದ್ದುಂಟೆ? ಎಲ್ಲರೂ ಹಾಗಿದ್ದಾರೆಯೇ? ಖಂಡಿತ ಇಲ್ಲ, ಎಲ್ಲೋ ಕೆಲವು ಜನ ಸಜ್ಜನರು, ಸ್ವಾರ್ಥರಹಿತರು, ನಿಜಾರ್ಥದಲ್ಲಿ ಜ್ಞಾನಿಗಳು, ವಿಶಾಲ ಮನೋಭಾವದ ಮಹಾನುಭಾವರು, ಲೋಕ ಕಲ್ಯಾಣಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಿಟ್ಟಿರುವವರೂ, ಸಕಲ ಜೀವರಾಶಿಗಳ ಹಿತವನ್ನೇ ಬಯಸುವವರೂ ಇದ್ದಾರೆ. ಎಲೆಮರೆಕಾಯಿಗಳಂತಿರುವ, ಸ್ವ-ಪ್ರಚಾರಕ್ಕೆ ಬಾಯಿಬಿಡದ ಅಂತಹವರ, ನಿಸ್ವಾರ್ಥ ಕಾರ್ಯ ಕಲಾಪಗಳಿಂದಲೇ ಈ ಜಗತ್ತಿನಲ್ಲಿ ಇನ್ನೂ ಸ್ವಲ್ಪ ಒಳಿತು ಉಳಿದಿದೆ. ಅಂಥವರಿಗೆ ನಮ್ಮ ನಮನ. ನಾವು ಸಹ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಮನಸ್ಸೇನು? ಆ ಮನಸ್ಸಿನ ಬೇಕು ಬೇಡಗಳೇನು? ಸ್ಪಷ್ಟವೇ? ಅಸ್ಪಷ್ಟವೆ? ಸರಿಯೇ? ತಪ್ಪೇ? ನಮ್ಮ ಸಾಮರ್ಥ್ಯವೇನು? ಅರ್ಹತೆಗಳೇನು? ಹೀಗೆ ಸಮಗ್ರ ಚಿಂತನೆ ಮಾಡಿ ನಮ್ಮನ್ನು ನಾವು ಸರಿಪಡಿಸಿಕೊಂಡರೆ, ನಮ್ಮ ಬದುಕು ಮತ್ತು ಇತರರ ಜೀವನವು ಸುಧಾರಿಸುವುದರಲ್ಲಿ ನನಗೆ ಸಂದೇಹವೇ ಇಲ್ಲ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-45 )

ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು | ಮಂಕುವಿಡಿಸಲು ಸಾಕು ಮಣ್ಣುಂಡೆ ಕಣ್ಗೆ || ಶಂಕೆಗೆಡೆಯಿರದು ಕತ್ತಲೆಯೇ ಜಗವನು ಕವಿಯೆ | ಬೊಂಕುದೀವಿಗೆ ತಂಟೆ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಬೆಂಕಿಯುಂಡೆಯ=ಬೆಂಕಿಯ+ಉಂಡೆಯ, ಬೆಣ್ಣೆಯುಂಡೆಯ=ಬೆಣ್ಣೆಯ+ಉಂಡೆಯ, ಮಂಕುವಿಡಿಸಲು=ಮಂಕು+ವಿಡಿಸಲು, ಮಣ್ಣುಂಡೆ=ಮಣ್ಣ+ಉಂಡೆ, ಶಂಕೆಗೆಡೆಯಿರದು=ಶಂಕೆಗೆ+ಎಡೆ+ಇರದು

ಪದಗಳ ತಾತ್ಪರ್ಯ

ಬೆಂಕಿಯುಂಡೆ=ಸೂರ್ಯ, ಬೆಣ್ಣೆಯುಂಡೆ=ಚಂದ್ರ, ವಿಡಿಸಲು-ಬಿಡಿಸಲು, ಮಣ್ಣುಂಡೆ=ಹಣತೆ, ಶಂಕೆಗೆಡೆಯಿರದು=ಸಂಶಯಕ್ಕೆ ಸ್ಥಳವಿರದು, ಬೊಂಕುದೀವಿಗೆ=ಅಸತ್ಯವಾದ ಜ್ಞಾನ.

ಪದ್ಯದ ಪೂರ್ತಿ ವಿವರಣೆ

ಸೂರ್ಯನ ಬೆಳಕಾಗಲೀ ಅಥವಾ ಚಂದ್ರನ ಬೆಳಕಾಗಲೀ ಅಥವಾ ಒಂದು ಪುಟ್ಟ ಹಣತೆಯಾದರೂ ಸಹ ನಮಗೆ ನೋಡಲು ಅನುವು ಮಾಡಿಕೊಡುತ್ತದೆ. ಆದರೆ ಜಗತ್ತನ್ನು ಸಂಪೂರ್ಣ ಕತ್ತಲೆ ಆವರಿಸಿದರೆ, ನೋಡುವ ಪ್ರಶ್ನೆಯೇ ಬರುವುದಿಲ್ಲ. ಆದರೆ ಒಂದು ಅರ್ಧಂಬರ್ಧವಾಗಿ ಕತ್ತಲೆ ಬೆಳಕಿನಾಟ ಕೇವಲ ತೊಂದರೆಯನ್ನು ಕೊಡುತ್ತದೆ ಎಂದು ಸೂಚ್ಯವಾಗಿ ಒಂದು ಗಹನವಾದ ವಿಷಯವನ್ನು ಪ್ರಸ್ತಾಪ ಮಾಡುತ್ತಾರೆ, ಮಾನ್ಯ ಗುಂಡಪ್ಪನವರು. ವಾಚಕರೆ ನೋಡಿ ಸತ್ಯವನ್ನು ಅರಿಯಲು ಅಥವಾ ನೋಡಲು ನಮಗೆ ಬೆಳಕು ಜ್ಞಾನದ ರೂಪದಲ್ಲಿ ಬೇಕು. ಆ ಬೆಳಕು ಪ್ರಖರವಾದ ಮತ್ತು ಜ್ಞಾನಕ್ಕೆ ಪ್ರತೀಕವಾದ ಸೂರ್ಯನ ಬೆಳಕಿನಂತಹ ಜ್ಞಾನವಾಗಬಹುದು. ಹೆಚ್ಚು ತೀಕ್ಷ್ಣವಲ್ಲದ ಬೆಳಕನ್ನು ನೀಡುವ ಚಂದ್ರನಂತೆ, ಶಾಂತ ಜ್ಞಾನವಾಗಬಹುದು ಅಥವಾ ಎಲ್ಲಕಡೆಯೂ ಕತ್ತಲಿದ್ದರೂ ಸಮೀಪದ ವಸ್ತುಗಳನ್ನು ನಿಚ್ಚಳವಾಗಿ ತೋರುವ ಹಣತೆಯ ಬೆಳಕಂತೆ ಕ್ಲುಪ್ತವಾದರೂ ಸತ್ಯವಾದ ಜ್ಞಾನವನ್ನು ನೀಡುವ ಬೆಳಕಾದರೂ ಸಾಕು. ನಮಗೆ ಸತ್ಯದ ಅರಿವಾಗುತ್ತದೆ. ಬೆಳಕಿನಲ್ಲಿ ವಸ್ತು ವಿಷಯಗಳನ್ನು ಕಂಡರೆ ವಸ್ತುಗಳಲ್ಲಿ ವ್ಯತ್ಯಾಸ ಕಾಣುವುದು ಮತ್ತು ಅರಿತುಕೊಳ್ಳುವ ಅಪೇಕ್ಷೆ ಮತ್ತು ಪ್ರಕ್ರಿಯೆ ನಡೆಯುತ್ತದೆ. ಆದರೆ ಸಂಪೂರ್ಣ ಕತ್ತಲೆಯೇ ಆಗಿಬಿಟ್ಟರೆ, ನಮಗೆ ಶಂಕೆಯೇ ಇರದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಅಂದರೆ ಸಂಪೂರ್ಣ ಕತ್ತಲೆಯಂತೆ, ಸಂಪೂರ್ಣ ಅಜ್ಞಾನವೇ ತುಂಬಿಬಿಟ್ಟರೂ “ಇದೋ, ಅದೋ, ಅಥವಾ ಯಾವುದು” ಎನ್ನುವ ಶಂಕೆ ಬರುವುದಿಲ್ಲ. ಆದರೆ ಅರ್ಧಂಬರ್ಧ ಬೆಳಕು ಅಥವಾ ಸುಳ್ಳಾದ, ಬೆಳಕಲ್ಲದ ಬೆಳಕು ಬಂದಾಗ, ಅಂದರೆ, ಸತ್ಯವಾದ ಜ್ಞಾನವಲ್ಲದೆ ಇದ್ದರೆ ಅಸತ್ಯ ವಾದವನ್ನು ಪ್ರತಿಪಾದಿಸುವ “ಪದವಿದರರು” ತಮ್ಮ ತಮ್ಮ ಸಿದ್ಧಾಂತಗಳಿಂದ ಜನರಲ್ಲಿ ಇನ್ನಷ್ಟು ಶಂಕೆ, ಗೊಂದಲ ಮತ್ತು ತಂಟೆ ಉಂಟು ಮಾಡುತ್ತಾರೆ ಎಂದು ಹೇಳುತ್ತಾರೆ ಮಾನ್ಯಗುಂಡಪ್ಪನವರು. ಯಾವುದೇ ವಿಷಯದ ಬಗ್ಗೆ ಒಂದೇ ಒಂದು ಸತ್ಯವಿರುತ್ತದೆ. ಎರಡು ಸತ್ಯವಿರಲು ಸಾಧ್ಯವಿಲ್ಲ. ಹಾಗೆ ಆ ಸತ್ಯವನ್ನು ಅರಿತುಕೊಳ್ಳಲು ಜ್ಞಾನ ಬೇಕು. ಅದು ಪ್ರಖರವಾದ ಶಾಸ್ತ್ರಾಧಾರಿತ ಜ್ಞಾನವಾಗಬಹುದು ಅಥವಾ ಶಾಂತ ಸ್ವರೂಪದ, ಕೇಳಿದ, ಚಿಂತಿಸಿ ಕಂಡುಕೊಂಡ, ಅನುಭವದ ಜ್ಞಾನವಾಗಬಹುದು ಅಥವಾ ನಮ್ಮ ಪರಿಮಿತ ಅರಿವಿಗೆ ಬಂದ ಸತ್ಯದ ರೂಪವಿರಬಹುದು. ಯಾವುದಾದರೂ ಸರಿಯೇ ಅದು ಜ್ಞಾನ ಮತ್ತು ಸತ್ಯವಾದ ಜ್ಞಾನವಾಗಿರಬೇಕು. ಅಕಸ್ಮಾತ್ ನಾವು ಈ ಜ್ಞಾನದ ಮತ್ತು ಜ್ಞಾನವನ್ನು ಪಡೆದುಕೊಂಡು ಸತ್ಯದ ಶೋಧಕ್ಕೆ ಹೋಗದೆ ಅಜ್ಞಾನಿಗಳಾಗಿ ಉಳಿದರೆ ನಮಗೆ ಶಂಕೆಯೇ ಬರುವುದಿಲ್ಲ. ಆದರೆ ತಂಟೆ ಎಲ್ಲಿದೆಯಂದರೆ, ಎಡಬಿಡಂಗಿ ಜ್ಞಾನ, ಶಾಸ್ತ್ರವನ್ನು ಓದಿಕೊಂಡು(ಅರಿತುಕೊಂಡು ಅಲ್ಲ) ತಾನೇ ಮಹಾ ಪಂಡಿತ ಎಂದು ಕೊಚ್ಚಿಕೊಳ್ಳುವ ಅರೆ ಜ್ಞಾನಿಗಳು ಪ್ರತಿಪಾದಿಸುವ ತತ್ವಗಳು ಭಿನ್ನ ಭಿನ್ನವಾಗಿ ಜನರನ್ನು ಗೊಂದಲಕ್ಕೆ ಈಡುಮಾಡುತ್ತದೆ ಮತ್ತು ಭೇದಗಳನ್ನು ಉಂಟುಮಾಡಿ ತಂಟೆಗೆ ಕಾರಣವಾಗುತ್ತದೆ. ವಾಚಕರೆ, ಒಟ್ಟಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದ ಮೂಲಕ ನಮಗೆ ಒಂದು ಸಂದೇಶವನ್ನು ಕೊಡುತ್ತಾರೆ. ಅದೇನೆಂದರೆ ಯಾವುದನ್ನೂ ಸರಿಯಾಗಿ ವಿಚಾರ ಮತ್ತು ವಿಮರ್ಶೆ ಮಾಡದೆ ಅರೆ ಬರೆಜ್ಞಾನ ಪಡೆಯುವುದಕ್ಕಿಂತ ತಿಳಿದುಕೊಳ್ಳುವುದನ್ನು ಸರಿಯಾಗಿ ಅಥವಾ ಸತ್ಯವಾದುದನ್ನೇ ತಿಳಿದುಕೊಳ್ಳಬೇಕು ಎಂದು. ಅಂತಹ ಸತ್ಯವಾದ ಜ್ಞಾನವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವು ನಡೆಯಲಿ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-46 )

ಇರಲಿ ಜೀವರಹಸ್ಯವರೆಪರದೆಯೊಳಗಡಗಿ | ಅರಸಿ ವರಿಸುವರಾರು ಬೀದಿಬತ್ತಲಿಯ? || ಅರಳಿಪುದದಡಗಿರ್ದೊಡಾಗ ನಮ್ಮೆದೆಗಣ್ಣ | ಸುರಸತೆಯ ಕುತುಕದಿಂ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಜೀವರಹಸ್ಯವರೆಪರದೆಯೊಳಗಡಗಿ=ಜೀವ+ರಹಸ್ಯ+ಅರೆಪರದೆ+ಒಳಗೆ+ಅಡಗಿ. ಅರಳಿಪುದದಡಗಿರ್ದೊಡಾಗ=ಅರಳಿಪುದು+ಅದು+ಅಡಗಿ+ಇರ್ದೊಡೆ+ಆಗ. ನಮ್ಮೆದೆಗಣ್ಣ=ನಮ್ಮ+ಎದೆಗಣ್ಣು

ಪದಗಳ ತಾತ್ಪರ್ಯ

ಅರೆಪರದೆ=ಮಸುಕಾದ ಜ್ಞಾನ, ಅರಳಿಪುದು=ವಿಕಸನ ಮಾಡುವುದು, ಎದೆಗಣ್ಣು=ಅಂತರ್ಜ್ಞಾನ.

ಪದ್ಯದ ಪೂರ್ತಿ ವಿವರಣೆ

ಈ ಸೃಷ್ಟಿಯ ರಹಸ್ಯವು ತನ್ನ ನಿಜರೂಪವ ತೋರದೆ, ಒಂದು ಮಸುಕಾದ ಪರದೆಯೊಳಗೆ ಅಡಗಿದ್ದರೆ ಇರಲಿ. ನಮಗೆ ನಿಜವಾದ ಜ್ಞಾನವನ್ನು ಕೊಡಬೇಕಾದ ವಸ್ತು ಹೀಗೆ ಅಡಗಿ ಕುಳಿತಿದ್ದರೆ, ಹಾದಿಯಲ್ಲಿ ಹೋಗುವ ಓರ್ವ ಹುಚ್ಚಿಯನ್ನು ಯಾರಾದರೂ ಹುಡುಕಿಕೊಂಡು ಹೋಗಿ ಹೇಗೆ ವರಿಸುವುದಿಲ್ಲವೋ ಹಾಗೆ, ನಮ್ಮ ಅಂತಃಚಕ್ಷು ಕಾಣದ ವಸ್ತುವನ್ನು ಅರಿಯಲು ಕಾತರದಿಂದ ಕಾಯುತ್ತಿರುತ್ತದೆ ಎಂದು ಪರಮಾತ್ಮನನ್ನು ಅರಿತುಕೊಳ್ಳುವ ವಿಚಾರವನ್ನು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ. ಹೌದು ನಮಗೆ ಅರಿವಾಗುವುದಿಲ್ಲ. ನಮಗೆ ಎಲ್ಲವು ಮಸುಕು. ಯಾವುದೂ ನಿಚ್ಚಳವಿಲ್ಲ. ನಾವೆಲ್ಲಾ ಬಹಳ ವಿಚಲಿತರಾಗಿದ್ದೇವೆ. ಏಕೆಂದರೆ ನಮ್ಮೆದುರಿಗೆ ಹಲವಾರು ರೂಪಗಳ ವಿವರಣೆ ಇದೆ. ಹಲವಾರು ಸಿದ್ಧಾಂತಗಳು, ಹಲವಾರು ಭೇದಗಳು ಮತ್ತು ಮತಗಳು. ಯಾವುದನ್ನು ನಂಬುವುದು, ಯಾವುದನ್ನು ಹಿಡಿದುಕೊಳ್ಳುವುದು, ಯಾವುದನ್ನು ಬಿಡುವುದು. ಎಲ್ಲವು ಮಸುಕು ಮಸುಕು. ಏಕೆಂದರೆ ನಮ್ಮನ್ನು ಸತ್ಯವಾದ ಜ್ಞಾನದೆಡೆಗೆಕೊಂಡೊಯ್ಯಬೇಕಾದ ವಸ್ತುವೇ ಅಡಗಿ ಕುಳಿತಿದೆ. "ಅರಳಿಪುದು ಅದು ಅಡಗಿ ಇರ್ದೊಡೆ" ಹಾಗಿರುವಾಗ ನಾವು ಏನು ಮಾಡಬೇಕು. ಆ ಸತ್ಯದ ಅರಿವಾಗುವ ತನಕ ಹೃದಯದ ಕಣ್ಣನ್ನು, ಮನಸ್ಸಿನ ಕಣ್ಣನ್ನು ತೆರೆದಿಟ್ಟುಕೊಂಡು ಕಾತರದಿ ಕಾಯುವುದನ್ನು ಬಿಟ್ಟರೆ ಬೇರೆ ಏನು ದಾರಿ ಎನ್ನುವ ಭಾವ ವ್ಯಕ್ತವಾಗಿದೆ ಈ ಮುಕ್ತಕದಲ್ಲಿ. ನೋಡಿ ನಮ್ಮ ಸಮಾಜದಲ್ಲಿ ಏನೆಲ್ಲ ನಂಬಿಕೆಗಳುಂಟು. ಆದರೆ ಯಾವುದೂ ಸಹ “ಇದೇ ಪರಮ ಸತ್ಯ”ವೆನ್ನುವ ಗುಂಪಿಗೆ ಸೇರಲಾರದು. ಏಕೆಂದರೆ ಪರಮ ಸತ್ಯದ ಅರಿವು ನಮಗಿಲ್ಲ. ಹಾಗೆ ಇದ್ದಿದ್ದರೆ, ಇಷ್ಟು ಭೇದಗಳು ಇರುತ್ತಿರಲಿಲ್ಲ ಅಲ್ಲವೇ? ಕೆಲವರಿಗೆ, ಶಿವರೂಪ, ಕೆಲವರಿಗೆ ವಿಷ್ಣುರೂಪ, ಕೆಲವರಿಗೆ ಎರಡೂ. ಕೆಲವರಿಗೆ “ಒಂದು” (ಅದ್ವೈತ) ಕೆಲವರಿಗೆ ಯಾವುದೋ ವಿಶೇಷವಾದ “ಒಂದು” (ವಿಶಿಷ್ಟಾದ್ವೈತ) ಕೆಲವರಿಗೆ ಒಂದಲ್ಲ, ಎರಡು (ದ್ವೈತ). ಕೆಲವರಿಗೆ “ಕರ್ತಾರ” ಕೆಲವರಿಗೆ “ಅಲ್ಲಾ”. ಹೀಗೆ ಬೇರೆ ಬೇರೆ ಜನರಿಗೆ ಬೇರೆಯಾದರೆ, ಒಂದೇ ಸತ್ಯದ ದರ್ಶನವಾಗಿಲ್ಲವೆಂದೇ ಅರ್ಥವಲ್ಲವೇ? ಇನ್ನೂ ಸ್ವಲ್ಪ ಆಳವಾಗಿ ಹೋದರೆ, ಆ ಒಂದನ್ನೋ ಅಥವಾ ಎರಡನ್ನೋ ಅರಿಯುವ ಪರಿಯಾದರೂ ಒಂದೇ ಇದೆಯೋ ಎಂದರೆ, ಅದೂ ಇಲ್ಲ. ವೈಷ್ಣವರಲ್ಲಿ ಶ್ರೀ ವೈಷ್ಣವರು, ಮಾಧ್ವರು, ಸ್ಮಾರ್ತರು, ಗೌಡೀಯರು,ಸ್ವಾಮೀ ನಾರಾಯಣ ಪಂಥದವರು, ಇನ್ನು ಶೈವರಲ್ಲಿ “ಸ್ಥಾವರ” ಲಿಂಗವನ್ನು ಪೂಜಿಸುವ ಶೈವರು, “ಜಂಗಮ” ಲಿಂಗವನ್ನು ಪೂಜಿಸುವ ವೀರಶೈವರು. ಈ ಎಲ್ಲ ಪಂಗಡಗಳಲ್ಲೂ ಒಳಪಂಗಡಗಳು ಮತ್ತು ಆ ಒಳಪಂಗಡಗಳಲ್ಲಿ ಒಳಪಂಗಡಗಳು. ಈ ಭೇದಗಳ ಬಗ್ಗೆ ಬರೆದರೆ ಒಂದು ಗ್ರಂಥವನ್ನೇ ಬರೆಯಬಹುದು. ಆದರೆ ಆ ಪರಮ ಸತ್ಯದ ಬಗ್ಗೆ ಬರೆಯಲು ಒಂದು ಪುಟದಷ್ಟೂ ಗೊತ್ತಿಲ್ಲ. ಇದೆಲ್ಲ ಏಕೆ, ಏನು ಎಂದು ಆಲೋಚನೆ ಮಾಡಿದರೆ, ನಮಗೆ ಇನ್ನಷ್ಟು ಗೊಂದಲವುಂಟಾಗುತ್ತದೆ. ಕೆಲವರಿಗೆ ವಾರಕ್ಕೊಂದು ದೇವರು. ದಿನಕ್ಕೊಂದು ದೇವರು. ಆ ದೇವರುಗಳಿಗೆ ಬೇರೆ ಬೇರೆಯಾದ ವ್ರತನೇಮಗಳು. ಕೆಲವರಿಗೆ ಇದ್ದಾನೆ, ಕೆಲವರಿಗೆ ಇಲ್ಲ. ಕೆಲವರಿಗೆ ಗೊತ್ತಿಲ್ಲ. ಯಾರೋ ಒಬ್ಬ ಅವನ ಅನುಭವದ ಸೀಮಿತ ಮಿತಿಯಿಂದ ಏನನ್ನೋ ಹೇಳುತ್ತಾನೆ. ನಾವು ಯೋಚನೆ, ಚಿಂತನೆ ಮಾಡಲು ಅಸಮರ್ಥರು. ಅವನ ಬಾಲ ಹಿಡಿದು ಅವನು ಹೇಳಿದ್ದನ್ನು ನಂಬುತ್ತೇವೆ. ಅವನ ದರ್ಶನವನ್ನು ನಮ್ಮ ದರ್ಶನವೆಂದು ಹೇಗೆ ನಂಬುವುದು. ಹೀಗೆ ಇಷ್ಟೊಂದು ಭೇದಗಳಿರುವಾಗ, ಒಂದು ಸತ್ಯವು ಇನ್ನೂ ಪ್ರಕಟವಾಗದೆ, ಅಡಗಿಕುಳಿತಂತೆ ಅಲ್ಲವೇ? ಯಾವುದೂ “ಇದೇ-ಇದು” ಎಂದು ನಿಷ್ಕರ್ಷೆಯಾಗದಿರುವಾಗ, ನಾವು ಯಾವುದನ್ನೋ ಒಂದನ್ನು ಹಿಡಿದುಕೊಂಡು ಹೋದರೆ ದಾರಿಯಲ್ಲಿ ಹೋಗುವ ಹುಚ್ಚಿಯನ್ನು ಇಷ್ಟಪಟ್ಟು ಮದುವೆ ಮಾಡಿಕೊಂಡಹಾಗೆ ಎನ್ನುತ್ತಾರೆ ಶ್ರೀ.ಡಿ.ವಿ.ಜಿ. ಯವರು. ಹಾಗಾಗಿ ವಾಚಕರೆ, ನಾವು ಏನು ಮಾಡಬೇಕು ಎಂದರೆ, ಅಂತರ್ಮುಖಿಗಳಾಗಬೇಕು. ನಮ್ಮ ಒಳಗಿರುವ ಜ್ಞಾನದ ಕಣ್ಣನ್ನು ಉದ್ದೀಪನಗೊಳಿಸಬೇಕು, ಒಬ್ಬ ಸರಿಯಾದ ಗುರುವನ್ನು ಆಶ್ರಯಿಸಬೇಕು ಮತ್ತು ನಮಗೆ ಆ ಪರಮ ಸತ್ಯದ ಅರಿವಾಗುವ ತನಕ ಕಾಯಬೇಕು. ಎಂದೋ ಒಂದು ದಿನ ನಮಗೂ ಅರಿವು ಮೂಡುತ್ತದೆ ಮತ್ತು ಆ ಪರಮ ಶಕ್ತಿಯ ನಿಜ ಸ್ವರೂಪದ ದರ್ಶನವಾಗುತ್ತದೆ. ಹಾಗೆಂದರೆ, ನಾಲ್ಕು ಕೈಗಳಿಂದ, ಶಂಖ ಚಕ್ರಗಳಿಂದ ಅಲಂಕೃತನಾದ ವಿಷ್ಣುವೋ ಅಥವಾ ತ್ರಿಶೂಲಪಾಣಿಯಾಗಿ ವಿಷಕಂಠನಾದ ಶಿವನೋ ಕಾಣುತ್ತಾರೆಂದಲ್ಲ. ಆ ರೂಪದ ಹಿಂದಿರುವ ತತ್ವದ ದರ್ಶನವಾಗುತ್ತದೆ. ಅದೇ ಆಧ್ಯಾತ್ಮ ಸಾಧನೆಯ ಉದ್ದೇಶ. ಬನ್ನಿ ನಾವೆಲ್ಲರೂ ಈ ನಿಟ್ಟಿನಲ್ಲಿ ನಮ್ಮ ಹೃದಯದ ಕಣ್ಣುಗಳನ್ನು ತೆರೆಯಲು ಪ್ರಯತ್ನಪಟ್ಟು ಒಂದೇ ಸತ್ಯದ ಮತ್ತು ಸತ್ವ ಭರಿತವಾದ ತತ್ವದ ದರ್ಶನಕ್ಕಾಗಿ ಕಾಯೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-47 )

ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು? | ಅರೆಬೆಳಕು ಧರೆಯೊಳೆಂದೊರಲಿ ಸುಖವೇನು? || ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ | ಪರಿಕಿಸಿದೊಡದು ಲಾಭ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಧರೆಯೊಳೆಂದೊರಲಿ=ಧರೆಯೊಳು+ಎಂದು+ಒರಲಿ. ಬೆಳಕಿನೊಳಾದನಿತ=ಬೆಳಕಿನೊಳು+ಆದ+ಇನಿತ. ಅರೆಗಣ್ಣು=ಅರ್ಧಂಬರ್ಧ ಜ್ಞಾನ.

ಪದಗಳ ತಾತ್ಪರ್ಯ

ಅರೆಬೆಳಕು=ಅರ್ಧಬೆಳಕು. ಒರಲಿ=ಕೂಗಿ. ಇನಿತ=ಒಂದಿಷ್ಟು, ಪರಿಕಿಸಿದೊಡದು=ಪರೀಕ್ಷಿಸಿದರೆ ಅದು.

ಪದ್ಯದ ಪೂರ್ತಿ ವಿವರಣೆ

“ನಮಗೆ ತಿಳಿದಿರುವುದು ಅರೆ ಬರೆ. ಈ ಅರೆ ಬರೆ ಜ್ಞಾನವನ್ನು ಇಟ್ಟುಕೊಂಡು ನಾವು ಪೂರ್ಣ ಸತ್ಯವನ್ನು ಪಡೆಯುವುದು ಹೇಗೆ?” ಎಂದು ಗೋಳಾಡದೆ, ಇರುವ ಅರಿವಿನಿಂದ ಸಂಪೂರ್ಣ ಜ್ಞಾನವನ್ನು ಪಡೆದುಕೊಳ್ಳಲು ಪ್ರಯತ್ನಿಸಿದರೆ ಅದು ಲಾಭದಾಯಕವೆನ್ನುತ್ತಾರೆ ಶ್ರೀ ಗುಂಡಪ್ಪನವರು. ಈ ಜಗತ್ತಿನ ಯಾವುದೇ ಭಾಗದಲ್ಲಿ ದಿನದ ಅರ್ಧಭಾಗ ಬೆಳಕು ಇನ್ನರ್ಧ ಭಾಗ ಕತ್ತಲು. ಬೆಳಕಿನಲ್ಲಿ ನಾವು ನಮ್ಮ ಕೆಲಸ ಕಾರ್ಯಗಳು ಮಾಡುವ ಹಾಗೆ, ಇರುವ ಜ್ಞಾನವನ್ನು ಉಪಯೋಗಿಸಿದರೆ ಲಾಭ ಎನ್ನುತ್ತಾರೆ. ಮಾನ್ಯ ಗುಂಡಪ್ಪನವರು. ಒಬ್ಬ ಒಂದು ರಾತ್ರಿ ಎಲ್ಲೋ ಹೋಗಬೇಕಿತ್ತು. ಕತ್ತಲೆ. ಕೈನಲ್ಲಿ ಒಂದು ಲಾಟೀನು. ಅವನು ಹೋಗಬೇಕಾದ ದೂರ ಹತ್ತು ಮೈಲು. ಅಯ್ಯೋ ಈ ಕಡಿಮೆ ಬೆಳಕಿನ ಲಾಟೀನು ಇಟ್ಟುಕೊಂಡು ಅಷ್ಟು ದೂರ ನಾ ಹೇಗೆ ಸವೆಸುವುದು ಎಂದು ಯೋಚಿಸುತ್ತಾ ಕುಳಿತಿದ್ದ. ಆಗ ಅವನಿಗೆ ಒಬ್ಬರು ಒಂದು ಸೂಚನೆಯನ್ನು ಕೊಟ್ಟರು.“ನಿನ್ನ ಲಾಟೀನಿನ ಬೆಳಕು ಹತ್ತು ಹೆಜ್ಜೆಗೆ ಸಾಕಾಗುವಷ್ಟು ಬೆಳಕನ್ನು ನೀಡುತ್ತದೆ. ಹಾಗಾಗಿ ಮೊದಲ ಹತ್ತು ಹೆಜ್ಜೆ ಆ ಬೆಳಕಿನ ಸಹಾಯದಿಂದ ನಡೆ. ಮುಂದಕ್ಕೆ ಇನ್ನೂ ಹತ್ತು ಹೆಜ್ಜೆ ನಿಚ್ಚಳವಾಗಿ ಕಾಣುವುದು. ಇದೇ ರೀತಿ ನೀ ಸವೆಸಬೇಕೆಂದಿರುವ ಹತ್ತೂ ಮೈಲಿಗಳನ್ನು ದಾಟಬಹುದು” ಎಂದು. ಅವರ ಮಾತ ಕೇಳಿ ಅವನು ಹತ್ತೂ ಮೈಲಿಗಳನ್ನು ಅನಾಯಾಸವಾಗಿ ದಾಟಿದ. ವಾಚಕರೆ, ಎಲ್ಲ ಮಾನವರಿಗೂ ಒಂದಿನಿತು ಜ್ಞಾನವಿರುತ್ತದೆ. ಅವರು ಹುಟ್ಟಿಬಂದ ಮನೆಯ ವಾತಾವರಣ, ಅವರಿರುವ ಸಮಾಜ, ಅವರಿಗೆ ದೊರೆತ ವಿದ್ಯಾಭ್ಯಾಸ, ಅವರಿಗೆ ದೊರೆತ ಸಾಂಗತ್ಯ ಅವರು ಓದುವ ಪುಸ್ತಕ, ಹೀಗೆ ಹಲವಾರು ವಿಷಯಗಳ ಮೇಲೆ ಆಧಾರವಾಗಿರುತ್ತದೆ. ಹಾಗಾಗಿಯೇ ಜನರಲ್ಲಿ ಅರಿವಿನ ಪ್ರಮಾಣದ ವ್ಯತ್ಯಾಸ ಮತ್ತು ಅರಿವಿನ ವ್ಯತ್ಯಯ. ಅಯ್ಯೋ ಅವರಿಗೆ ಎಷ್ಟು ವಿಷಯ ಗೊತ್ತು, ನನಗೇನೂ ಗೊತ್ತಿಲ್ಲ ಎಂದು ಹಲುಬುವುದಕ್ಕಿಂತ, ನಮಗೆ ಗೊತ್ತಿರುವ ವಿಚಾರಗಳನ್ನೇ ಚಿಂತಿಸಿ, ಅಂತರಂಗದಲ್ಲಿ ಮಥಿಸಿ, ಜ್ಞಾನಿಗಳೊಡಗೂಡಿ, ಆಲಿಸಿ, ಸಂದೇಹಗಳನ್ನು ನಿವಾರಿಸಿಕೊಂಡು, ನಮ್ಮೊಳಗೆ ನಾವೇ ವಿಚಾರ ಮಂಥನಮಾಡಿಕೊಂಡರೆ, ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳಬಹುದು. ಹಾಗಾಗಿ, ನಾವು ಸತ್ಯವಾಗಿ ನಮ್ಮ ನಮ್ಮ ಅರಿವಿನ ಸ್ತರವನ್ನು ಅರಿತುಕೊಳ್ಳಬೇಕು. ಅರಿತಿದ್ದನ್ನು ಸಂದೇಹವಿಲ್ಲದೆ ಗಟ್ಟಿಮಾಡಿಕೊಳ್ಳಬೇಕು. ಮೇಲೆ ಹೇಳಿದ ವಿಧಾನದಲ್ಲಿ ಅದನ್ನು ವಿಸ್ತರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಾಗೆ ಮಾಡಿದರೆ ನಮಗೆ ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಲಾಭವಾಗುತ್ತದೆ ಎನ್ನುವುದೇ ಈ ಮುಕ್ತಕದ ಹೂರಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-48 )

ಒಂದಿಹುದುಪಾಯವೋರೊವರ್ನರೆಗಣ್ಣುಗಳು | ವೊಂದೊಂದು ಸತ್ಯಾಂಶಕಿರಣಗಳ ಪಿಡಿದು || ಒಂದುಗೂಡಿದೊಡವರ್ಗಳರಿವನೆಲ್ಲವನಾಗ | ಮುಂದುಸಾಗುವೆವಿನಿತು-ಮಂಕುತಿಮ್ಮ ||

ಪದಗಳ ವಿಸ್ತರಣೆ

ಒಂದಿಹುದುಪಾಯವೋರೊವರ್ನರೆಗಣ್ಣುಗಳು=ಒಂದು+ಇಹುದು+ಉಪಾಯ+ವೋರೊವರ್ನ+ಅರೆಗಣ್ಣುಗಳು, ಒಂದುಗೂಡಿದೊಡವರ್ಗಳರಿವನೆಲ್ಲವನಾಗ=ಒಂದು+ಕೂಡಿದೊಡೆ+ಅವರ+ಅರಿವನೆಲ್ಲವ+ಆಗ

ಪದಗಳ ತಾತ್ಪರ್ಯ

ಅರೆಗಣ್ಣುಗಳು=ಅರೆಬರೆ ಜ್ಞಾನ, ಇನಿತು=ಸ್ವಲ್ಪ.

ಪದ್ಯದ ಪೂರ್ತಿ ವಿವರಣೆ

ಎಲ್ಲರಲ್ಲೂ ಅವರವರ ಭಾವಕ್ಕೆ ಅನುಗುಣವಾಗಿ ಅಲ್ಪ ಸ್ವಲ್ಪ ಜ್ಞಾನವಿರುತ್ತದೆ. ಜ್ಞಾನಶೂನ್ಯ ಎಂಬುವವನು ಇರಲು ಸಾಧ್ಯವೇ ಇಲ್ಲ. ಹಾಗೆ ಎಲ್ಲರಿಗೂ ಇರುವ ಅಲ್ಪ ಸ್ವಲ್ಪ ಜ್ಞಾನಗಳನ್ನೆಲ್ಲ, ಎಲ್ಲರ ಮನದಲ್ಲಿರುವ ಸತ್ಯವಾದ ವಿಚಾರಗಳನ್ನು ಒಂದು ಕಡೆ ಸೇರಿಸಿ ಎಲ್ಲರೂ ತಮ್ಮ ಮತವೇ ಉತ್ತಮವಾದದ್ದು ಎಂಬ ಭಾವನೆ ತೊರೆದು ಒಮ್ಮತದಿಂದ ಮುಂದೆ ಹೋದರೆ, ಎಲ್ಲರೂ ಪರಮ ಸತ್ಯವನ್ನರಿಯುವ ಹಾದಿಯಲ್ಲಿ ಒಂದಿಷ್ಟು ಮುಂದಕ್ಕೆ ಹೋಗಬಹುದು ಎನ್ನುವುದು ಈ ಮುಕ್ತಕದ ಮೂಲಕ ಮಾನ್ಯ ಗುಂಡಪ್ಪನವರ ಪ್ರಸ್ತಾಪ. ನೋಡಿ ಪ್ರತಿಯೊಂದು ವಿಷಯದಲ್ಲೂ ಪ್ರತಿಯೊಬ್ಬರೂ ಅವರವರದೇ ಅಭಿಪ್ರಾಯಗಳನ್ನು ಇಟ್ಟುಕೊಂಡಿರುತ್ತಾರೆ. ಬಹಳ ಕಡಿಮೆ ಸಂದರ್ಭದಲ್ಲಿ ಇಬ್ಬರ ಅಭಿಮತ ಸೇರುತ್ತದೆ. ಆದರೆ ಪ್ರತಿಯೊಬ್ಬರ ಅಭಿಮತವನ್ನೂ ಬೇರೆಬೇರೆಯಾಗಿ, ಪೂರ್ವಾಗ್ರಹವಿಲ್ಲದೆ, ನೋಡಿದರೆ ಎಲ್ಲವು ಸರಿಯೆಂದು ಕಾಣುತ್ತದೆ. ಇದೇ ರೀತಿ ಆ ಪರಮಾತ್ಮನನ್ನು ಅರಿಯುವ ಪರಿಯಲ್ಲೂ ಪ್ರತಿಯೊಬ್ಬರಿಗೂ ಅವರವರದೇ ಆದಂತಹ ಅಭಿಪ್ರಾಯಗಳಿರುತ್ತದೆ. ಅದು ಅವರವರ ಭಾವಕ್ಕೆ ಬಂದದ್ದು. ಅಲ್ಲಗೆಳೆಯುವಂತಿಲ್ಲ. ಆದರೆ ಯಾವುದೂ ಸಂಪೂರ್ಣ ಸತ್ಯದೆಡೆಗೆ ನಮ್ಮನ್ನು ಕೊಂಡುಹೋಗುವಲ್ಲಿ ಅಸಮರ್ಥವಾಗಿರುತ್ತದೆ. ಈ ಜಗತ್ತಿನಲ್ಲಿರುವ ಎಲ್ಲ ಮತಗಳೂ ಹಾಗೆಯೇ. ಹತ್ತು ಹಲವಾರು. ಉದ್ದೇಶ ಒಂದೇ ಆದರೂ ಮಾರ್ಗಗಳು ಬೇರೆ ಬೇರೆ. ಕೆಲವರದು ವಿಸ್ತಾರ, ಮತ್ತೆ ಕೆಲವರದು ಕ್ಲುಪ್ತ. ಕೆಲವರದು ಸುಲಭ, ಮತ್ತೆ ಕೆಲವರದು ಕ್ಲಿಷ್ಟ. ಗುಂಪು ಗುಂಪುಗಳಾಗಿ ಜನರು, ತಮ್ಮ ಯೋಚನಾ ಸಾಮರ್ಥ್ಯಕ್ಕೆ ತಿಲಾಂಜಲಿ ಕೊಟ್ಟು ಕೆಲವರನ್ನು ಮತ್ತು ಕೆಲವರ ಅಭಿಮತವನ್ನು, ನಂಬುತ್ತಾರೆ. ಅದನ್ನು ಅಂಧಾನುಕರಣೆ ಎನುತ್ತೀರೋ ಅಥವಾ ಮೂಢನಂಬಿಕೆ ಎನುತ್ತೀರೋ ವಾಚಕರ ಅಭಿಮತಕ್ಕೆ ಬಿಟ್ಟದ್ದು. ಈ ಮತ ಪ್ರತಿಪಾದಕರು ತಮ್ಮ ಮತವೇ ಉತ್ತಮ, ಉತ್ಕೃಷ್ಟ, ಬೇರೆಲ್ಲವು ಸರಿಯಿಲ್ಲ ಎನ್ನುವ ಭೇದವನ್ನು ಅವರ ಅನುಯಾಯಿಗಳ ಮನದಲ್ಲಿ ಬಿತ್ತಿ, ತಮ್ಮ ಅನುಯಾಯಿಗಳ ಸಂಖ್ಯೆಯನ್ನು ಬೆಳೆಸಿಕೊಳ್ಳುವುದರಲ್ಲಿ ನಿರಂತರ ನಿರತರು. ಹಾಗಾಗಿಯೇ ಇಷ್ಟೊಂದು ಮತಗಳು, ಮತಭೇದಗಳು ಮತ್ತು ಮತೀಯ ಕಲಹಗಳು. ಅಜ್ಞಾನದ ಪರಮಾವಧಿ !!!! ನಾವೇನು ಮಾಡಬೇಕು ಎಂದರೆ, ಮೊದಲು ನಮ್ಮ ಮನದಿಂದ ದ್ವೇಷವನ್ನು ತೆಗೆಯಬೇಕು. ಅಹಂಕಾರವನ್ನು ತೆಗೆಯಬೇಕು. ಅನ್ಯರನ್ನು ಸಹಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ನಮಗೆ ಪ್ರತಿಯೊಬ್ಬರ ಮತದಲ್ಲೂ ಒಂದು ಮೂಲ ಸತ್ಯದ ದರ್ಶನವಾಗುತ್ತದೆ. ಹಾಗೆ ಎಲ್ಲರಲ್ಲೂ ಕಾಣುವ ಒಂದು ಸಮಾನ ಸತ್ಯಾಂಶವನ್ನು ತೆಗೆದುಕೊಂಡು ಅದನ್ನು ನಮ್ಮೆಲ್ಲರ ನಡಿಗೆಯ ಪ್ರಾರಂಭ ಬಿಂದುವನ್ನಾಗಿ ಗುರುತಿಸಿಕೊಂಡು ಅಲ್ಲಿಂದ ಮುಂದಕ್ಕೆ ಹೋದರೆ, ನಾವೆಲ್ಲರೂ ಏಕಮತದಿಂದ ಪರಮಾತ್ಮನನ್ನು ಅರಿಯುವ ನಮ್ಮ ಪ್ರಯತ್ನದಲ್ಲಿ ಸಫಲತೆಯನ್ನು ಪಡೆಯಬಹುದು ಅಲ್ಲವೆ? ಆದರೆ ಎಲ್ಲಿಯ ತನಕ, ಅಸಹಿಷ್ಣುತೆ ಮತ್ತು ಅಹಂಕಾರಗಳು ಇರುತ್ತವೆಯೋ, ಅದು ಅಸಾಧ್ಯ. ಹಾಗಾಗಿ ನಾವು ಅಹಂಕಾರವನ್ನು ಮತ್ತು ಅಂಧಾನುಕರಣೆಯನ್ನು ತೊರೆದು ಜಾತಿ, ಮತ, ವರ್ಣ, ಲಿಂಗಭೇದಗಳನ್ನು ಅಳಿಸಿ ಒಮ್ಮತದಿಂದ ನಮ್ಮೆಲ್ಲರ ಅಂತಃಸತ್ಯವನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ಮಾಡಿ ತನ್ಮೂಲಕ ಪರಮ ಸತ್ಯದ ಅರಿವಿನೆಡೆಗೆ ಹೋಗೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-49 )

ಪಂಡಿತರೆ ಶಾಸ್ತ್ರಿಗಳೆ ಮಿಥ್ಯೆಯಿಂ ತಥ್ಯಕ್ಕೆ | ಖಂಡಿತದಿ ಸೇತುವೆಯ ಕಟ್ಟುವೊಡೆ ನೀವು || ಕಂಡಿಹಿರ ನರಹೃದಯದಾಳ ಸುಳಿ ಬಿರುಬುಗಳ | ದಂಡವದನುಳಿದ ನುಡಿ-ಮಂಕುತಿಮ್ಮ ||

ಪದಗಳ ವಿಸ್ತರಣೆ

ನರಹೃದಯದಾಳ=ನರ+ಹೃದಯದ+ಆಳ,ದಂಡವದನುಳಿದ=ದಂಡವು+ಅದನು+ಉಳಿದ

ಪದಗಳ ತಾತ್ಪರ್ಯ

ಪಂಡಿತರೆ=ಪಾಂಡಿತ್ಯವನ್ನರಿತವರೆ, ಶಾಸ್ರಗಳೆ=ಶಾಸ್ತ್ರಗಳನ್ನರಿತವರೆ, ಮಿಥ್ಯೆಯಿಂ=ಸುಳ್ಳಿನಿಂದ, ತಥ್ಯಕ್ಕೆ=ಸತ್ಯಕ್ಕೆ ಕಟ್ಟುವೊಡೆ=ಕಟ್ಟುವಾಗ, ಬಿರುಬು=ಕಾಠಿಣ್ಯ

ಪದ್ಯದ ಪೂರ್ತಿ ವಿವರಣೆ

ಪಾಂಡಿತ್ಯವನ್ನು ಪ್ರತಿಪಾದಿಸುವ ಪಂಡಿತರೆ ಮತ್ತು ಶಾಸ್ತ್ರವನ್ನು ಪ್ರತಿಪಾದಿಸುವ ಶಾಸ್ತ್ರಿಗಳೆ, ನಿಮ್ಮ ಪಾಂಡಿತ್ಯದಿಂದ ಮತ್ತು ಶಾಸ್ತ್ರ ಪ್ರತಿಪಾದನೆಯಿಂದ ಸುಳ್ಳನ್ನೇ ನಿಜವೆಂದು ನಿರೂಪಿಸಲು ಮತ್ತು ಇವೆರಡರ ಮಧ್ಯೆ ಒಂದು ಸೇತುವೆಯನ್ನು ಕಟ್ಟುವಾಗ ಸಾಮಾನ್ಯ ಮನುಜರ ಹೃದಯದಾಳದಲ್ಲಿ ಇರುವ ಗೊಂದಲಗಳು, ಅವರು ಅನುಭವಿಸುವ ಕಾಠಿಣ್ಯಗಳನ್ನು ಕಂಡಿದ್ದೀರಾ ಎಂದು ಕೇಳುತ್ತಾ ಸಾಮಾನ್ಯರ ಮನದ ಭಾವದ ಮುಂದೆ ಎಲ್ಲ ಪಾಂಡಿತ್ಯವು ಮತ್ತು ಶಾಸ್ತ್ರಗಳೂ ದಂಡವೆನ್ನುತ್ತಾರೆ (ನಿಷ್ಪ್ರಯೋಜಕ) ಮಾನ್ಯ ಗುಂಡಪ್ಪನವರು. “ಪುಸ್ತಕದ ಬದನೇಕಾಯಿ” ಎನ್ನುವ ಮಾತು ಒಂದು ಇದೆ. ಅಂದರೆ ಯಾರೋ ಬರೆದ ವಿಷಯವನ್ನು ಓದಿಕೊಂಡು ಮನನಮಾಡಿಕೊಂಡು ತಮ್ಮ ವಾಗ್ಝರಿಯಿಂದ ತಾವು ಅರಿತಿದ್ದು ಸತ್ಯವೋ-ಸುಳ್ಳೋ ಎಂದು ವಿವೇಚನೆಯಿಲ್ಲದೆ ತಮ್ಮ ಪಾಂಡಿತ್ಯವನ್ನು ಪ್ರಸ್ತುತಪಡಿಸುವ ಪಂಡಿತರ ಪರಿ ಮತ್ತು ತಮ್ಮ ಅನುಭವಕ್ಕೆ ತಂದುಕೊಳ್ಳದೆ ಶಾಸ್ತ್ರವನ್ನು ಓದಿಕೊಂಡು, ಆ ಶಾಸ್ತ್ರದಲ್ಲಿನ ವಿಧಾನಗಳು, ವೈಜ್ಞಾನಿಕವೋ ಅಥವಾ ಮಾತ್ರಮೂಢನಂಬಿಕೆಯೋ ಎಂಬುದನ್ನು ಪರೀಕ್ಷಿಸದೆ ತಾವು ತಿಳಿದದ್ದೇ ಸತ್ಯವೆಂದು ಜನಗಳಿಗೆ ತಮ್ಮ ಮತವನ್ನು ರುಬ್ಬುವ ಶಾಸ್ತ್ರ ಪ್ರತಿಪಾದಕರ ವಿಧಾನ, ಎರಡೂ ಸರಿಯಲ್ಲ. ಅವರು ಕೆಲವು ಬಾರಿ ತಮ್ಮ ಅರಿವು ಸತ್ಯಕ್ಕೆ ದೂರವಾಗಿದೆ ಎಂದು ಅರಿತಿದ್ದರೂ ತಾವು ತಿಳಿದದ್ದೇ ಸತ್ಯವೆಂದು ಪ್ರತಿಪಾದಿಸಿ, ತಮ್ಮ ಸ್ಥಾನವನ್ನು ಸುಭದ್ರವಾಗಿಸಿಕೊಳ್ಳಲು ಸತ್ಯ ಮತ್ತು ಸುಳ್ಳಿನ ಮಧ್ಯೆ ಒಂದು ಸೇತುವೆಯನ್ನು ಕಟ್ಟುತ್ತಾರೆ. ಇವರು ಪ್ರತಿಪಾದಿಸುವ ವಿಷಯಗಳನ್ನು ಇನ್ನು ಸ್ವಲ್ಪ ಸಮಯದ ನಂತರ ಬೇರೆ ಯಾರೋ ಸುಳ್ಳೆಂದು ನಿರೂಪಿಸುತ್ತಾರೆ!!! ಏಕೆಂದರೆ ಅವರಿಗೆ ಸಾಮಾನ್ಯ ಮಾನವರ ಮನದ ಅಂತರಂಗದಲ್ಲಿರುವ ಭಾವನೆಗಳು ಅರ್ಥವೇ ಆಗುವುದಿಲ್ಲ ಅಥವಾ ಇವರುಗಳು ಅದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ. ಅವುಗಳು ಸತ್ಯಕ್ಕೆ ಹತ್ತಿರವಾಗಿರುತ್ತವೆ. ಏಕೆಂದರೆ ಅವು ಅನುಭವದ ಮೂಸೆಯಿಂದ ಎರಕ ಹೊಯ್ದಂತಾಗಿರುತ್ತದೆ. ಪ್ರತಿಯೊಂದು ವಸ್ತು ಮತ್ತು ವಿಷಯ ಅವರು ಸ್ವತಃ ಅನುಭವಿಸಿ ನಿಜ ಭಾವಗಳನ್ನು ಅರ್ಥೈಸಿಕೊಂಡು ಅನುಭವಿಸಿರುತ್ತಾರೆ. ಆ ರೀತಿಯ ಯಾವ ಅನುಭವವು ಇಲ್ಲದೆ, ಕೇವಲ ಪುಸ್ತಕದ ಮಾತು ಶಾಸ್ತ್ರದ ವಿಷಯವನ್ನು ಪ್ರತಿಪಾದಿಸುವ ಪಂಡಿತರ ನುಡಿಗಳಿಗಿಂತ ಜನ ಸಾಮಾನ್ಯರ ಆಂತರ್ಯದ ಅನುಭವದ ಭಾವಗಳಿಗೆ ಹೆಚ್ಚು ಮಹತ್ವ ಎನ್ನುತ್ತಾರೆ ಶ್ರೀ ಗುಂಡಪ್ಪನವರು. ವಾಚಕರೆ ಇದು ನಮಗೂ ಅನುಭವಕ್ಕೆ ಬಂದಿರುವ ವಿಷಯವೇ. ಆದರೆ ಶಾಸ್ತ್ರ ಮತ್ತು ಪುಸ್ತಕದ ವಿಚಾರಗಳನ್ನು ಸಂಪೂರ್ಣ ತೊರೆಯಬೇಕೆ ಎನ್ನುವುದು ಪ್ರಶ್ನೆ? ಅಲ್ಲ. ಹಾಗೆ ತೊರೆಯುವುದೂ ಬೇಡ. ನಾವು ಏನು ಮಾಡಬೇಕೆಂದರೆ, ಆ ಪುಸ್ತಕಗಳ ಮತ್ತು ಶಾಸ್ತ್ರಗಳ ವಿಷಯಗಳನ್ನು ನಮ್ಮ ವಿಚಾರಕ್ಕೆ ಒಳಪಡಿಸಿ, ತಿಕ್ಕಿ,ತೀಡಿ, ಕಡೆದು ಅದರೊಳಗಿನ ಸತ್ವವನ್ನು ನಮ್ಮ ಅನುಭವಗಳೊಂದಿಗೆ ಮಿಶ್ರಣ ಮಾಡಿ ನಮಗೆ ಗೋಚರವಾದ ಸತ್ಯವನ್ನು ನಾವು ನಮ್ಮ ಮನಸ್ಸುಗಳಲ್ಲಿ ಗಟ್ಟಿಮಾಡಿಕೊಳ್ಳಬೇಕು. ಹೇಗೆ ಒಂದು ಹಂಸವು ನೀರು ಬೆರೆತ ಹಾಲಿನಲ್ಲಿ ನೀರನ್ನು ತೊರೆದು ಹಾಲನ್ನು ಮಾತ್ರ ಹೀರುತ್ತದೋ ಹಾಗೆ ನಾವು ಈ ಶಾಸ್ತ್ರ ಮತ್ತು ಪಾಂಡಿತ್ಯದ ವಿಚಾರಗಳಲ್ಲಿರುವ ಸತ್ವವನ್ನು ಹೀರಿ ನಮ್ಮ ವಿಚಾರವನ್ನು ಶುದ್ಧಿಮಾಡಿಕೊಳ್ಳಬೇಕು. ಶುದ್ಧ ವಿಚಾರದಿಂದ, ಶುದ್ಧ ಆಚರಣೆ. ಶುದ್ಧ ಆಚರಣೆಯಿಂದ ಮನೋ ನೆಮ್ಮದಿ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-50 )

ಮನೆಯೆಲ್ಲಿ ಸತ್ಯಕ್ಕೆ? ಶೃತಿ ತರ್ಕಮಾತ್ರದೊಳೆ? | ಅನುಭವಮುಮದರೊಂದು ನೆಲೆಯಾಗದಿಹುದೇಂ? || ಮನುಜಹೃದಯಾಂಗಣದೊಳೆನಿತೆನಿತೊ ದನಿಯುದಿಸಿ | ಅಣಕಿಪುವು ತರ್ಕವನು-ಮಂಕುತಿಮ್ಮ ||

ಪದಗಳ ವಿಸ್ತರಣೆ

ಅನುಭವಮುಮದರೊಂದು=ಅನುಭವಮುಂ+ಅದರೊಳು+ಒಂದು,ನೆಲೆಯಾಗದಿಹುದೇಂ=ನೆಲೆ+ಆಗದಿಹುದು+ಅದೇಂ, ಮನುಜಹೃದಯಾಂಗಣದೊಳೆನಿತೆನಿತೊ=ಮನುಜ+ಹೃದಯ+ಆಂಗಣದೊಳು+ಎನಿತು+ಇನಿತೋ, ದನಿಯುದಿಸಿ=ದನಿಯು+ಉದಿಸಿ ,

ಪದಗಳ ತಾತ್ಪರ್ಯ

ಅಣಕಿಪುವು=ಅಣಕವಾಡುತ್ತದೆ, ಉದಿಸಿ=ಉದ್ಭವವಾಗಿ.

ಪದ್ಯದ ಪೂರ್ತಿ ವಿವರಣೆ

ಸತ್ಯಕ್ಕೆ ಎಲ್ಲಿ ಮನೆ? ಶೃತಿ ತರ್ಕ ಮತ್ತು ವಾದಗಳಲ್ಲಿ ಮಾತ್ರವೇನು? ಮನುಜರ ಅನುಭವವು ಸತ್ಯವನ್ನು ನುಡಿಯಬಾರದೇನು? ಮನುಜರ ಹೃದಯದ ಆಂಗಣದಲ್ಲಿ ಹತ್ತು ಹಲವಾರು ಸತ್ಯದ ಭಾವಗಳು ಉದಯಿಸಿ ಈ ಶಾಸ್ತ್ರ ತರ್ಕ ಮತ್ತು ವಾದಗಳು ಪ್ರತಿಪಾದಿಸುವ ಸತ್ಯವನ್ನೆಲ್ಲ ಅಣಕಿಸುತ್ತವೆ ಎನ್ನುತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ಹಿಂದಿನ ಮುಕ್ತಕದಲ್ಲಿ ಹೇಳಿದ ಪಂಡಿತರು ಮತ್ತು ಶಾಸ್ತ್ರಿಗಳು ಉಲ್ಲೇಖಿಸುವ ಶೃತಿ, ತರ್ಕ ಮತ್ತು ವಾದಗಳಲ್ಲಿ ಮಾತ್ರ ಸತ್ಯವಿದೆಯೋ? ಏಕೆ ಸಾಮಾನ್ಯ ಜನರ ಅನುಭವಗಳಲ್ಲೂ ಸತ್ಯವಿರಬಾರದೇನು? ಎಂದು ಕೇಳುತ್ತಾರೆ ಗುಂಡಪ್ಪನವರು ಈ ಮುಕ್ತಕದಲ್ಲಿ, ಮುತ್ತಿನಂಥಾ ಮಾತು. ಏಕೆಂದರೆ ನಮ್ಮಲ್ಲಿ ಒಂದು ಮಾತಿದೆ. “ವೇದಸುಳ್ಳಾದರೂ ಗಾದೆ ಸುಳ್ಳಾಗೋದಿಲ್ಲ” ಎಂದು. ಅಂದರೆ ಎಲ್ಲರೂ ನಂಬುವುದು ವೇದಗಳು ಸತ್ಯವನ್ನು ಮತ್ತು ಸತ್ವವನ್ನು ನುಡಿಯುತ್ತದೆ ಎಂದು. ಅಂದರೆ ವೇದದಲ್ಲಿ ಸತ್ಯವಿದೆ ಎಂದು. ಅದು ಅಕ್ಷರಶಃ ಸತ್ಯ. ಆದರೆ ಅವುಗಳನ್ನು ಓದಿ ಅವಕ್ಕೆ ವ್ಯಾಖ್ಯಾನ ಬರೆಯುವ ಪಂಡಿತರು ಅವುಗಳನ್ನು ತಮ್ಮ ಚಿಂತನೆಯ ಹಾದಿಯಲ್ಲಿ ವಿಮರ್ಶಿಸುತ್ತಾ, ಹಲಬಾರಿ ಮೂಲದಲ್ಲಿರುವ ಸತ್ಯವನ್ನು ಮತ್ತು ಸತ್ವವನ್ನು ತಿರುಚಿ ಬರೆಯುತ್ತಾರೆ. ಅದು ಅವರ ಅನುಭವ. ಪೂರ್ಣ ಸತ್ಯವಾಗಿರುವುದಿಲ್ಲ. ಅಂತಹಾ ಉಕ್ತಿಗಳಾದರೂ ಎಂದಾದರೂ ಸುಳ್ಳಾಗಿರಬಹುದು ಆದರೆ ಗಾದೆ ಸುಳ್ಳಾಗೋಲ್ಲ ಎಂದು. ಏಕೆಂದರೆ ಗಾದೆ ಮಾತುಗಳು ಈ ಮುಕ್ತಕದಲ್ಲಿ ಹೇಳಿದ ಹಾಗೆ “ಸಾಮಾನ್ಯ ಮನುಜಹೃದಯದ ಆಂಗಣದೊಳಗಿಂದ” ಬಂದಂತಹ ಅಣಿಮುತ್ತುಗಳು. ಗಟ್ಟಿ ಮತ್ತು ಆಳವಾದ ಅನುಭವದಿ ನುಡಿಯುವ ಮಾತುಗಳು ಮನುಜನ ಹೃದಯಾಂತರಾಳದಿಂದ ಮೂಡಿಬರುತ್ತವೆ ಮತ್ತು ಅವು ಸತ್ಯವನ್ನೇ ಹೇಳುತ್ತವೆ. ಅಂಥಹ ಸತ್ಯವಾದ ಮಾತುಗಳು ಮೇಲೆ ಹೇಳಿದ ಶೃತಿ ಮತ್ತು ತರ್ಕದೊಳಗಿನ ವಿಶ್ಲೇಷಣೆಗಳನ್ನು ಅಣಕಿಸುವಂತಿರುತ್ತವೆ. ಹಾಗಾಗಿ ನಾವು ಇವೆರಡನ್ನೂ ಪರೀಕ್ಷಿಸಿ ಸತ್ಯವನ್ನು ಮಾತ್ರ ಗ್ರಹಿಸಬೇಕು ಎಂದು ಅವರ ಅಭಿಪ್ರಾಯ. ವಾಚಕರೆ, ಸಾಮಾನ್ಯ ಜನರ ಮತ್ತು ಅವರ ಅನುಭವದಿಂದ ಮೂಡಿದ ಮತ್ತು ಮನಸ್ಸಿನಿಂದ ಮೂಡಿದ ಮಾತುಗಳು ಸದಾಕಾಲಕ್ಕೂ ಸತ್ಯವಾಗಿ ಉಳಿಯುತ್ತವೆ. ತರ್ಕಮೀಮಾಂಸೆಗಳಂತಹ ಗ್ರಂಥಗಳು ಪ್ರತಿಪಾದಿಸುವುದಕ್ಕಿಂತ ಹೆಚ್ಚಾಗಿ ಈ ಜನಮನ ನುಡಿಗಳು ನಮಗೆ ಹೃದ್ಯವಾಗಿರುತ್ತವೆ, ಬೇಗ ಮನಸ್ಸಿಗೆ ನಾಟುತ್ತವೆ ಮತ್ತು ಬಹಳ ಕಾಲ ನಿಲ್ಲುತ್ತವೆ. ಅಂತಹ ವಿಷಯಗಳನ್ನು ನಾವು ಸಹ ಗ್ರಹಿಸಿ ಸತ್ಯವನ್ನರಿಯುವ ಪ್ರಯತ್ನವನ್ನು ಮಾಡೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-51 )

ಸೆಳೆಯುತಿರ್ಪುದೊಂದು ಹೊರಬೆಡಗಿನೆಳೆಗಳೆ | ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು || ಎಳೆದಾಟವೇಂ ಋಣಾಕರ್ಷಣೆಯೋ? ಸೃಷ್ಟಿ ವಿಧಿ | ಯೊಳತಂತ್ರವೋ? ನೋಡು-ಮಂಕುತಿಮ್ಮ ||

ಪದಗಳ ವಿಸ್ತರಣೆ

ಸೆಳೆಯುತಿರ್ಪುದೊಂದು=ಸೆಳೆಯುತ+ಇರುವುದು+ಅದು+ಒಂದು, ಹೊರಬೆಡಗಿನೆಳೆಗಳೆನ್ನೊಳಗಿನಸುವೆಲ್ಲವನು=ಹೊರ+ಬೆಡಗಿನ+ಎಳೆಗಳು+ಎನ್ನ+ಒಳಗಿನ+ಅಸು+ಎಲ್ಲವನು, ಸೃಷ್ಟಿ ವಿಧಿ ಯೊಳತಂತ್ರವೋ=ಸೃಷ್ಟಿ+ವಿಧಿಯ+ಒಳತಂತ್ರವೋ.

ಪದಗಳ ತಾತ್ಪರ್ಯ

ಬೆಡಗು=ಆಕರ್ಷಣೆ, ಅಸು=ಪ್ರಾಣ, ಚೇತನ, ಋಣಾಕರ್ಷಣೆ=ಪೂರ್ವಕರ್ಮದ ಸೆಳೆತ.

ಪದ್ಯದ ಪೂರ್ತಿ ವಿವರಣೆ

ಹೊರಜಗತ್ತಿನ ಆಕರ್ಷಣೆಗಳು ನನ್ನೊಳಗಿನ ಚೇತನವನ್ನು ಬಿಗಿದು ಕಟ್ಟಿ ಹಾಕಿ ಎಳೆಯುತ್ತಿದೆ. ಇದು ಏನು ಎಳೆದಾಟವವೋ ಅಥವಾ ಪೂರ್ವ ಕರ್ಮಗಳ ಸೆಳೆತವೋ? ಅಥವಾ ಈ ಜಗತ್ತಿನ ಸೃಷ್ಟಿಯ ನಿಯಮದ ಒಳತಂತ್ರವೋ ಎನ್ನುವುದನ್ನು ನೀನೆ ಪರಿಕಿಸಿ ನೋಡು ಎನ್ನುತ್ತಾರೆ ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು. ಹೊರ ಜಗತ್ತಿನಲ್ಲಿರುವ ಎಲ್ಲ ವಸ್ತುಗಳೂ ನಮ್ಮನ್ನು ತುಂಬಾ ಆಕರ್ಷಿಸುತ್ತವೆ. ಹಾಗೆಯೇ ಎಲ್ಲ ಪ್ರಾಣಿಗಳಿಗೂ ಈ ಜಗತ್ತಿನ ಎಲ್ಲ ವಸ್ತುಗಳೂ ಆಕರ್ಷಣೀಯವೇ. ನಾವು ನಮ್ಮ ಅನುಭವವನ್ನು ಹೇಳಿಕೊಳ್ಳುತ್ತೇವೆ. ಅನ್ಯಪ್ರಾಣಿಗಳು ಹೇಳಿಕೊಳ್ಳಲಾಗದಿದ್ದರೂ ಅನುಭವಿಸುತ್ತವೆ. ಇರಲಿ “ದ್ರುಷ್ಯಮಾಣೆ ಭವೇತ್ಪ್ರೀತಿ:” ಎಂದರೆ ವಸ್ತುಗಳನ್ನು ಕಂಡರೆ ಅದರಲ್ಲಿ ನಮಗೆ ಪ್ರೀತಿಯುಂಟಾಗುತ್ತದೆ. ಪಡೆಯಬೇಕು ಎನ್ನುವ ಆಸೆಯುಂಟಾಗುತ್ತದೆ. ಪಡೆಯುವಂತಹ ಸಾಧ್ಯತೆಗಳಿದ್ದರೆ, ಪ್ರಯತ್ನವು ನಡೆಯುತ್ತದೆ. ಕೆಲವು ಸಲ ಸಫಲತೆಯೂ ದೊರಕುತ್ತದೆ. ಸಿಗಲಿ ಬಿಡಲಿ ಆಸೆಪಡುವುದಂತೂ ಉಂಟು. ಆಕರ್ಷಿತರಾಗುವುದಂತೂ ಉಂಟು. ಆ ಆಕರ್ಷಣೆಯಿಂದ ನಮ್ಮ ಅಸ್ತಿತ್ವವು ಸಂತಸಪಡುವುದೂ ಉಂಟು, ಹಾಗೇ ನೋವುಣ್ಣುವುದೂ ಉಂಟು. ಏಕೆ ಈ ನೋವು? ಏಕೆ ಈ ಆಕರ್ಷಣೆ? ಎನ್ನುವುದೇ ಈ ಮುಕ್ತಕದ ಹೂರಣ. ನೋಡಿ, ನಮ್ಮಲ್ಲಿ ಶುದ್ಧವಾದ ಆತ್ಮ ಉಂಟು. ಯುಕ್ತಾಯುಕ್ತಗಳ ವಿವೇಚನೆಯೂ ಉಂಟು. ಬಹು ಚಂಚಲ ಮನಸ್ಸೂ ಉಂಟು. ಒಂದಕ್ಕೊಂದಕ್ಕೆ ಅವಿನಾಭಾವ ಸಂಬಂಧ. ಈ ಸಂಬಂಧಕ್ಕೆ ಕಾರಣಗಳು ಹಲವು. ನಾವು ಎಲ್ಲದರಿಂದಲೂ ಯಾವಾಗಲೂ ಆಕರ್ಷಿತರಾಗುವುದಿಲ್ಲ. ಈ ಆಕರ್ಷಣೆಯ ಸ್ವರೂಪ ಬದಲಾಗುತ್ತಾ ಇರುತ್ತದೆ. ಇಂದು ಇದ್ದಂತೆ ನಾಳೆ ಇಲ್ಲ. ಮುಂಜಾನೆಗಿದ್ದದ್ದು, ಸಂಜೆಗಿಲ್ಲ. ಹೀಗೆ ಒಂದೇ ರೂಪದಲ್ಲಿ ಇರದೇ ನಮ್ಮನ್ನು ಬೇಕು ಬೇಡಗಳ, ಇಷ್ಟ, ಅನಿಷ್ಟಗಳ ನಡುವೆ ಗೊಂದಲಕ್ಕೆ ಸಿಲುಕಿಸುತ್ತದೆ. ನಾವು “ಇಲ್ಲಿ” ಅಂದರೆ ಈ ಜಗತ್ತಿನ ವಸ್ತು, ವಿಷಯ, ವ್ಯಕ್ತಿಗಳ ಸಂಪರ್ಕದಲ್ಲಿ ನಮ್ಮ ಮನಸ್ಸನ್ನು ಸದಾ ತೊಡಗಿಸಿಕೊಂಡರೆ ಈ ಗೊಂದಲಗಳು ಸಹಜ. ಹಾಗೆಂದು, ಇದನ್ನು ಬಿಡಬೇಕು ಎಂದಲ್ಲ. ಇರಬೇಕು, ಇರದಂತೆ ಇರಬೇಕು. ಈ ಆಕರ್ಷಣೆಗಳು, ಅಂಟುಗಳು ನಮ್ಮ ಮನಸ್ಸಿನ ತುಮಲ ತೊಯ್ದಾಟಗಳಿಗೆ ಕಾರಣವೇನು? ನಮ್ಮ ಸ್ವಭಾವ, ಪೂರ್ವಸಂಚಿತ ಗುಣಗಳ ವಾಸನೆ, ಇಲ್ಲಿ ನಾವು ಜನಿಸಿದಂದಿನಿಂದ ಪಡೆದು ಕೊಂಡು, ಬೆಳೆಸಿಕೊಂಡ ಹತ್ತು ಹಲವಾರು ಗುಣ ಸ್ವಭಾವಗಳು. ಆ ವಸ್ತು ವಿಷಯಗಳ ಅಂದ ಚೆಂದ ರುಚಿ ಗುಣಗಳೆಲ್ಲವು ನಮ್ಮನ್ನು ಸೆಳೆಯುತ್ತವೆ. ಇವೆಲ್ಲವು ಈ ಆಕರ್ಷಣೆಗೆ ಕಾರಣ. ಆದರೆ ಇದು ಸರಿಯೇ? ತಪ್ಪೇ? ಸರಿ ಮತ್ತು ತಪ್ಪು ಎರಡೂ. ಸರಿ ಏಕೆಂದರೆ, ಜಗತ್ತಿನ ಎಲ್ಲರೂ ಈ ಜಗತ್ತಿನ ವಸ್ತು ವಿಷಯಗಳಿಂದ ವಿಮುಖರಾದರೆ ಈ ಜಗದ್ವ್ಯಾಪಾರದ ಗತಿ. ಎಲ್ಲವು ನಿಂತುಹೋದರೆ, ಎಲ್ಲ ನಿಸ್ತೇಜ, ನೀರವ ಮತ್ತು ಬರಡು. ಆ ಪರಮಾತ್ಮನ ಲೀಲಾವಿನೋದ ಕೊನೆಯಾದರೆ ಏನು ಚೆನ್ನ? ಹಾಗಾಗಿ ಈ ಆಕರ್ಷಣೆ ಸರಿ. ತಪ್ಪು ಏಕೆಂದರೆ “ಸಿಂಬಳದಹುಳು”ವಿನ ತರಹೆ ಇದರಲ್ಲೇ ಅಂಟಿಕೊಂಡರೆ ಅದೂ ಅಸಹ್ಯ. ಹಾಗಾಗಿ ಎಲ್ಲವನ್ನೂ ನೋಡಬೇಕು ಆಕರ್ಷಿತರಾಗಬೇಕು, ಅನುಭವಿಸಬೇಕು ಮತ್ತು ಬಿಡಬೇಕು. ಆಗಲೇ ಜೀವನದಲ್ಲಿ ಒಂದು ಚೆಂದ, ಚೆಲುವು. ಆದರೆ ಎಷ್ಟು ಆಕರ್ಷಿತರಾಗಬೇಕು, ನಮ್ಮನ್ನು ನಾವು ಅದರೊಳಗೆ ಎಷ್ಟರಮಟ್ಟಿಗೆ ಮುಳುಗಿಸಿಕೊಳ್ಳಬೇಕು, ಯಾವಾಗ ಬಿಡಬೇಕು ಎನ್ನುವುದೇ ಪ್ರಶ್ನೆ. ಬಿಡುವ ಪ್ರಯತ್ನ ಮಾಡುವುದೇ ಆಧ್ಯಾತ್ಮ ಪ್ರಯಾಣದ ಗುರಿ. ಆ ಪ್ರಯಾಣವನ್ನು ಮಾಡಬೇಕು ಎನ್ನುವ ರೀತಿಯಲ್ಲಿ “ನೋಡು” ಎನ್ನುತಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕ ದಂತ್ಯದಲ್ಲಿ. ನಾವು ಸಹ ಈ ವಿಷಯದಲ್ಲಿ ನಮ್ಮ ನಮ್ಮ ವಿಶ್ಲೇಷಣೆಯನ್ನು ನಾವೇ ಮಾಡಿಕೊಳ್ಳಬೇಕು. ಗುರಿ ಮುಟ್ಟುವ ಪ್ರಯತ್ನ ಮಾಡಬೇಕು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-52 )

ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ | ಮುಗಿವ ತರಣಿಯ ರಕ್ತ ಹಿತವೆನಿಸದೇಕೋ || ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ | ಬಗೆವೆನ್ನ ಮನಸಿನೊಳೊ? ಮಂಕುತಿಮ್ಮ ||

ಪದಗಳ ವಿಸ್ತರಣೆ

ಗಗನನೀಲಿಮೆಯೆನ್ನ=ಗಗನದ+ನೀಲಿಮೆಯು+ಎನ್ನ, ಸೊಗವೀವಂತೆ=ಸೊಗವ+ಈವಂತೆ, ಹಿತವೆನಿಸದೇಕೋ=ಹಿತವೆನಿಸದು+ಏಕೋ,

ಪದಗಳ ತಾತ್ಪರ್ಯ

ನೀಲಿಮೆ=ನೀಲಿ ಬಣ್ಣ, ಎನ್ನ=ನನ್ನ, ಕಣ್ಗೆ=ಕಣ್ಣುಗಳಿಗೆ, ಸೊಗವ=ಆನಂದವ, ಈವಂತೆ=ಕೊಡುವಂತೆ, ಮುಗಿವ=ಮುಳುಗುವ, ತರಣಿ+ಸೂರ್ಯ, ರಕ್ತ=ಕೆಂಪು, ಸೊಗದ=ಸೊಗಸಿನ, ಬಗೆವ=ತಿಳಿಯುವ.

ಪದ್ಯದ ಪೂರ್ತಿ ವಿವರಣೆ

ಆಕಾಶದ ತಿಳಿನೀಲಿ ಬಣ್ಣವು ಎನ್ನ ಮನಸ್ಸಿಗೆ ಹಿತವನ್ನು ಕೊಡುತ್ತದೆ. ಆದರೆ ಮುಳುಗುವ ಸೂರ್ಯನ ಕೆಂಪು ಬಣ್ಣ ಎನಗೇಕೋ ಹಿತವನ್ನು ಕೊಡುವುದಿಲ್ಲ. ಆ ಹಿತ ಎನ್ನುವುದು ಆಕಾಶದ ನೀಲಿ ಬಣ್ಣದಲ್ಲಿದೆಯೋ ಅಥವಾ ಮುಳುಗುವ ಸೂರ್ಯನ ರಕ್ತ ವರ್ಣದಲ್ಲಿದೆಯೋ ಅಥವಾ ಎರಡೂ ಅಲ್ಲದೆ, ಹಿತವೆಂದು ತಿಳಿಯುವ ನಮ್ಮ ಮನಸ್ಸಿನಲ್ಲಿ ಇದೆಯೋ ಎಂದು ಪ್ರಸ್ತಾಪ ಮಾಡುತ್ತಾರೆ, ಶ್ರೀ ಗುಂಡಪ್ಪನವರು. ನೀಲಿ ಬಣ್ಣ ಪ್ರಶಾಂತತೆಯ ಪ್ರತೀಕ. ಅದಕ್ಕೆ ನಮ್ಮಲ್ಲಿ ಹಲವು ದೇವತೆಗಳಿಗೆ ನೀಲಿಬಣ್ಣದ ವರ್ಣನೆ. ಹಾಗಾಗಿ ನೀಲಿ ಬಣ್ಣ ಮನಸ್ಸಿಗೆ ಮುದವನ್ನು ಕೊಡುವುದು ಸಹಜ. ಆದರೆ ತನ್ನ ಕೆಲಸ ಮುಗಿಸಿ ಹಿಂತಿರುಗಿ ಹೋಗುವ ಆ ಸೂರ್ಯನ ರಕ್ತವರ್ಣವು ರುದ್ರತೆಯನ್ನು ತೋರುತ್ತದೆ, ಹಾಗಾಗಿ ನನಗೆ ಮನಸ್ಸಿಗೆ ಹಿತವೆನಿಸುವುದಿಲ್ಲ ಎನ್ನುತ್ತಾರೆ ಶ್ರೀ ಗುಂಡಪ್ಪನವರು. ಅಷ್ಟಕ್ಕೇ ನಿಲ್ಲಿಸದೆ, ಹೌದು ಆ ಹಿತವು ನೀಲಿ ಬಣ್ಣದಲ್ಲಿದೆಯೋ ಅಥವಾ ರಕ್ತವರ್ಣದಲ್ಲಿದೆಯೋ ಅಥವಾ ನನ್ನ ಭಾವನೆಯಲ್ಲಿ ಮಾತ್ರ ಆ ಹಿತ ಮತ್ತು ಅಹಿತಗಳಿವೆಯೋ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ. ಹೌದು ಒಂದು ಆಂಗ್ಲ ನುಡಿ “ಚೆಂದ ನೋಡುವವನ ಕಣ್ಣಲ್ಲಿ” ಎಂದು ಹೇಳುತ್ತದೆ. ಒಬ್ಬರಿಗೆ ಚೆಂದವಾಗಿ ಕಂಡದ್ದು ಮತ್ತೊಬ್ಬರಿಗೆ ಚೆಂದವಲ್ಲದೆ ಇರಬಹುದು. ಒಬ್ಬರಿಗೆ ಇಂದು ಚೆಂದವಾಗಿ ಕಂಡದ್ದು ನಾಳೆ ಚಂದವಲ್ಲದೆ ಇರಬಹುದು. ಈ ಅದು ಚೆನ್ನ-ಇದು ಚೆನ್ನ, ಅದು ಚೆನ್ನಾಗಿಲ್ಲ, ಅಥವಾ ಇದು ಚೆನ್ನಾಗಿಲ್ಲ, ಇದು ಸುಮಾರು, ಇದು ಅಸಹ್ಯ, ಇದು ಅತೀ ಸುಂದರ, ಹೀಗೆ ಒಂದು ವಸ್ತು ಅಥವಾ ವಿಷಯದ ಬಗ್ಗೆ ನಮ್ಮ ಅಭಿಪ್ರಾಯಗಳು, ಅಭಿಪ್ರಾಯಗಳಷ್ಟೇ ಆಗಿರುತ್ತದೆ ಹೊರತು, ನಾವು ಅಭಿಪ್ರಾಯ ವ್ಯಕ್ತಪಡಿಸುವ ಆ ವಸ್ತು ವಿಷಯದಲ್ಲಿ ಯಾವ ವ್ಯತ್ಯಾಸವು ಆಗುವುದಿಲ್ಲ್ಲ, ಅಲ್ಲವೇ? ಆದರೆ ಆ ಚೆಲುವು ಎನ್ನುವುದು ನೋಡುವವನ ಮನಸ್ಸಿನಲ್ಲಿ ಇರುತ್ತದೆ ಎನ್ನುವುದು ವಾಡಿಕೆ. “ಯದ್ಭಾವಂ ತದ್ಭವತಿ” ನಾವು ಹೇಗೆ ಅಂದುಕೊಂಡರೆ ಹಾಗೆ ಎನ್ನುವುದು ಸೂಕ್ತ. ಹಾಗಾಗಿ ಒಂದು ವಸ್ತುವಿನ ಚೆಂದ ನಮ್ಮ ಮನಸ್ಸಿನ ಮೇಲೆ ಆಧಾರಪಟ್ಟಿರುತ್ತದೆ. ನನಗೆ ಒಬ್ಬ ಸ್ನೇಹಿತರಿದ್ದಾರೆ, ನಮ್ಮ ಬೀದಿಯ ನಾಯಿಗಳ ಕಂಡು ಅವರಿಗೆ ತುಂಬಾ ಪ್ರೀತಿ ತುಂಬಾ ಮರುಕ “ಅಯ್ಯೋ ಪಾಪ ಅದನ್ನು ನೋಡಿ ಹೇಗೆ ಸೊರಗಿ ಹೋಗಿದೆ, ಇವಕ್ಕೆಲ್ಲ ಯಾರು ಊಟ ಹಾಕುತ್ತಾರೋ” ಹೀಗೆ ಅವರ ಕರುಣಾ ಪೂರಿತ ಭಾವಲಹರಿ ಹರಿಯುತ್ತಲೇ ಇರುತ್ತದೆ. ಪುಟ್ಟಮರಿಗಳನ್ನು ನೋಡಿದಾಗ “ಅಯ್ಯೋ ಮುಂಡೇದು, ಎಷ್ಟು ಚೆನ್ನಾಗಿದೆ ನೊಡ್ರೀ” ಎಂದು ರಾಗ ಎಳೀತಾರೆ. ಕೆಲವರಿಗೆ ಆ ನಾಯಿಗಳನ್ನು ಕಂಡರೆ ಹೆದರಿಕೆ. ಕೆಲವರಿಗೆ ಅದನ್ನು ಕಂಡರೆ ಅಸಹ್ಯ. ಆದರೆ ಆ ನಾಯಿ ಚೆನ್ನವು ಅಲ್ಲ ಅಸಹ್ಯವು ಅಲ್ಲ. ಚೆನ್ನ ಅಥವಾ ಅಸಹ್ಯ ಎನ್ನುವುದು ನಮ್ಮ ನಮ್ಮ ಭಾವನೆ ಅಷ್ಟೇ. “ಸದಾ ಮುದವ ನೀಡುವುದೇ ಸೊಬಗು” ಎನ್ನುವ ಒಂದು ಆಂಗ್ಲ ನುಡಿ ಇದೆ. ಅಂದರೆ ಯಾವುದು ಸದಾಕಾಲ ಮನಸ್ಸಿಗೆ ಹಿತವೆನಿಸುತ್ತದೋ ಅದೇ ಸುಂದರ. ಆದರೆ ಚೆನ್ನ, ಸೊಬಗು, ಸುಂದರ, ಸೊಗಸು ಎನ್ನುವ ಗುಣವಾಚಕಗಳೆಲ್ಲ ಮನೋಜನ್ಯ. ಹಾಗಾಗಿ ಇವೆಲ್ಲ (relative) ಒಂದೇ ರೀತಿ ಇರುವುದಿಲ್ಲ. ಮನಸ್ಸಿನ ಭಾವ ಬದಲಾಗುತ್ತಾ ಇದ್ದಂತೆ ನಮ್ಮ ಅಭಿಪ್ರಾಯಗಳೂ ಬದಲಾಗುತ್ತಾ ಇರುತ್ತವೆ. ಆದರೆ ಒಂದು ಒಳ್ಳೆಯ ಮನಸ್ಸು ಎಲ್ಲದರಲ್ಲೂ ಸೊಬಗನ್ನೇ ನೋಡುತ್ತದೆ. ಈ ಪರಮಾತ್ಮನ ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ ಒಂದು ಅಂದವಿದೆ. ಅದು ಅವನ ಇಚ್ಚೆಯಿಂದ ಆದದ್ದು. ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ ಒಂದು ಕಾರಣವಿದೆ. ಅದನ್ನು ವಿಮರ್ಶಿಸುವ ಅರ್ಹತೆ ಅಧಿಕಾರ ನಮಗಿಲ್ಲ. ಏಕೆಂದರೆ ನಾವು ಸಹ ಈ ಸೃಷ್ಟಿಯ ಒಂದು ಭಾಗ ಅಲ್ಲವೇ? ಅದು ಯಾರಾದರೂ ಚೆನ್ನಾಗಿಲ್ಲ ಎಂದರೆ, ಆ ಪರಮಾತ್ಮನ ಸೃಷ್ಟಿಯನ್ನೇ ಪ್ರಶ್ನಿಸಿದಂತಾಗುತ್ತದೆ. ಒಳ್ಳೆಯ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಎಲ್ಲವನ್ನೂ ಪ್ರೀತಿಸಬೇಕು. ಯಾವುದನ್ನೂ ಇಷ್ಟಪಡದಂತಹ ಮನೋಭಾವ ನಮಗೆ ಬರಲೇಬಾರದು. ಎಲ್ಲವನ್ನು ಇಷ್ಟಪಡುವ ಮತ್ತು ಎಲ್ಲದರಲ್ಲೂ ಚೆಲುವನ್ನು ಕಾಣುವ ಮನೋಭಾವವನ್ನು ನಾವು ಬೆಳೆಸಿಕೊಳ್ಳೋಣವೇ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-53 )

ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ? ದಿನಪನದೆ? ಚಂದ್ರನದೆ? ನೀರಿನದೇ? ನಿನದೆ? ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು? ಗುಣಕೆ ಕಾರಣವೊಂದೆ?-ಮಂಕುತಿಮ್ಮ

ಪದಗಳ ವಿಸ್ತರಣೆ

ಪದಗಳ ತಾತ್ಪರ್ಯ

ತೃಣಕೆ=ಹುಲ್ಲಿಗೆ, ದಿನಪ=ಸೂರ್ಯ, ತಣಿತಣಿವ=ಆನಂದಿಸುವ.

ಪದ್ಯದ ಪೂರ್ತಿ ವಿವರಣೆ

ಭೂಮಿಯಲ್ಲಿ ಚಿಗುರುವ ಹುಲ್ಲಿಗೆ ಆ ಹಸಿರುಬಣ್ಣ ಎಲ್ಲಿಂದ ಬಂತು. ಅದರ ಮೂಲವಾದ ಬೇರಿನದದೋ? ಅದು ಬೆಳೆವ ಭೂಮಿಯದೋ? ಬೆಳಕ ನೀಡುವ ಸೂರ್ಯನದೋ? ಅಥವಾ ಚಂದ್ರನದೋ? ಬೆಳೆಗೆ ಪೂರಕವಾದ ನೀರಿನದೋ? ಅಥವಾ ಅದನ್ನು ಬೆಳೆಸಿದ ನಿನ್ನದೋ? ಅಥವಾ ತಂಪ ಕಾಣುವ ನಿನ್ನ ಕಣ್ಣಿನ ಪುಣ್ಯದ್ದೋ? ನೀ ನೋಡುವ ಆ ಹಸಿರಿನ ಗುಣಕ್ಕೆ ಒಂದೇ ಕಾರಣವೋ? ಎಂದು ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ಹೌದಲ್ಲವಾ? ಹಲವು ಬಾರಿ ನಮಗೂ ಇಂತಹ ಪ್ರಶ್ನೆಗಳು ಮನದಲ್ಲಿ ಉದ್ಭವವಾಗಿರಬಹುದು. ನಾವು ನೋಡುವ ಪ್ರತಿ ವಸ್ತುವಿನಲ್ಲೂ ಹಲವು ಸೋಜಿಗಗಳನ್ನು ನಾವು ಕಾಣಬಹುದು. ಆದರೆ ಆ ಸೋಜಿಗಕ್ಕೆ ಒಂದು ಕಾರಣವನ್ನು ಹುಡುಕಲು ನಮ್ಮಿಂದಾಗುವುದಿಲ್ಲ. ಏಕೆಂದರೆ ಒಂದು ಕಾರಣದಿಂದ ಆದಂತಹ ವಸ್ತುವಾವುದೂ ಈ ಪ್ರಪಂಚದಲ್ಲಿ ಇಲ್ಲವೆಂಬುದೆ ನನ್ನ ಗಟ್ಟಿ ನಂಬಿಕೆ. ಹಾರುವ ಹಕ್ಕಿಯ ಬಣ್ಣ, ರೆಕ್ಕೆಯ ವಿನ್ಯಾಸ, ಹಾವಿನ ರೂಪ, ಅದರ ಮೈಮೇಲಿನ ಚಿತ್ತಾರಗಳು, ಅಬ್ಬಾ ಎಂತಹ ವಿಚಿತ್ರ. ಇದೊಂದೂ ನಮಗೆ ಅರ್ಥವಾಗುವುದಿಲ್ಲ. ಎಲ್ಲವು ವಿಸ್ಮಯ. ಈಗ ಆ ಹಸಿರು ಹುಲ್ಲಿನ ವಿಷಯವನ್ನೇ ತೆಗೆದುಕೊಳ್ಳೋಣ. ಅದರ ಹಸಿರು ಬಣ್ಣ ಎಲ್ಲಿಂದ ಬಂತು. ಅದರ ಮೂಲ ಬೇರಿನಿಂದ ಬಂತೆ? ಅಲ್ಲ. ಏಕೆಂದರೆ ಬೇರಿನ ಬಣ್ಣ ಹಸುರಲ್ಲ. ಅದು ಬೆಳೆದ ಭೂಮಿಯಿಂದ ಬಂತೆ, ಅಲ್ಲ. ಭೂಮಿಯ ಬಣ್ಣ ಕೆಂಪು. ಸೂರ್ಯನಿಂದಲೇ ಅಥವಾ ಚಂದ್ರನಿಂದಲೇ ಎಂದರೆ, ಅವರ ಬಣ್ಣವು ಹಸುರಲ್ಲ. ಇನ್ನು ಅದನ್ನು ಪೋಷಿಸಿ ಬೆಳೆಸಿದ ನೀರಿನಿಂದ ಬಂತೆ ಎಂದರೆ ಅದೂ ಅಲ್ಲ. ಏಕೆಂದರೆ ನೀರಿನ ಬಣ್ಣವು ಹಸಿರಲ್ಲ ಅಥವಾ ಅದನ್ನು ಬೆಳೆಸಿದ ನಿನ್ನಿಂದ ಬಂತೆ ಎಂದರೆ, ನೀನೋ ಕರಿಯ ಅಥವಾ ಯಾವುದೋ ಪುಣ್ಯಶೇಷದಿಂದ ನಿನ್ನ ಕಣ್ಣಿಗೆ ಅದು ಹಸಿರಾಗಿ ಕಾಣುತ್ತದೆಯೇ ಎಂದರೆ ಅಲ್ಲ ಏಕೆಂದರೆ ಅದು ಕಾಣುವುದಷ್ಟೇ ಅಲ್ಲ ವಾಸ್ತವವಾಗಿಯೂ ಅದು ಹಸುರಾಗೆ ಇದೆ. ಹಾಗಾದರೆ ಆ ಹಸಿರಬಣ್ಣ ಎಲ್ಲಿಂದ ಬಂತು? ಇದು ಯಕ್ಷಪ್ರಶ್ನೆ. ವಿಜ್ಞಾನಿಗಳು ಹೇಳುತ್ತಾರೆ, “ಅದು ಅದೇನನ್ನೋ ಹೀರಿಕೊಂಡು, ಇದರೊಳಗೆ ಸೇರಿ, ಅದಾಗಿ ಅದರಿಂದ ಇದಾಗಿ ಹೀಗೆ ಹಸುರಾಗಿದೆ” ಎಂದು. ಅವರ ವಾದವನ್ನು ಸತ್ಯವೆಂದೊಪ್ಪಿಕೊಂಡರೂ ‘ಅದನ್ನೆಲ್ಲ ಆಗ ಮಾಡಿಸಿದ ಶಕ್ತಿ ಯಾವುದು?’ ಅಂದರೆ ಒಂದು ಪರಮ ಶಕ್ತಿ. ಅದೇ ಪರಮಾತ್ಮ ಶಕ್ತಿ. ಅದಕ್ಕೆ ಅದೇ ಸಾಟಿ. ಇದನ್ನೇಕೆ ಹೇಳಿದ್ದಾರೆ ಗುಂಡಪ್ಪನವರು ಎಂದು ಯೋಚನೆ ಮಾಡಿದರೆ, ನನಗೆ ಒಂದು ವಿಷಯ ಹೊಳೆಯುತ್ತದೆ.ನಾವು ಮನುಷ್ಯರು, ನಾನು ಮಾಡಿದೆ ಅಥವಾ ನಾ ಹಾಗೆ ಮಾಡುತ್ತೇನೆ ಎಂದು ಡಂಬವಾಡುತ್ತೇವೆ. ಎಂತಹ ಹೀನ ಯೋಚನೆ ನಮ್ಮದು. ಒಂದು ತುತ್ತು ಅನ್ನ ತಿನ್ನಬೇಕಾದರೆ, ಅದಕ್ಕೆ ಕಾರಣವಾದ ಆ ಕಾಳು, ಆ ಭೂಮಿ, ಆ ಭೂಮಿಯ ಸತ್ವ, ನೀರು, ಬಿಸಿಲು, ಅದನ್ನು ಬೆವರು ಸುರಿಸಿ ಬೆಳೆದು ಕಾಪಾಡಿದ ಆ ರೈತನ ಶ್ರಮ, ಭತ್ತವನ್ನು ಅಕ್ಕಿಯನ್ನಾಗಿಸಲು ಸಾಗಿಸಿದ ಆ ಬಂಡಿ ಮತ್ತದನ್ನು ಮಾಡಿದ ಬಡಗಿ, ಆ ಬಂಡಿಯನ್ನು ಹೊತ್ತು ಎಳೆದ ಆ ಎತ್ತುಗಳು, ಅದನ್ನು ಕುಟ್ಟಿದ ಕೈಗಳು, ಅಯ್ಯೋ ಬಿಡಿ ಹೇಳುತ್ತಾ ಹೋದರೆ, ಹನುಮಂತನ ಬಾಲದಂತೆ ಬೆಳೆಯುತ್ತದೆ ಪಟ್ಟಿ. ನಾವು ಕೇವಲ ತಿನ್ನುತ್ತೇವೆ ಅಷ್ಟೇ. ಒಂದಿಷ್ಟೂ ಕೃತಜ್ಞತೆ ಇಲ್ಲದೆ, ಕೇವಲ ದುಡ್ಡು ಕೊಟ್ಟಿದ್ದೇನೆ ಎನ್ನುವ ಅಹಂಕಾರ ಬಿಟ್ಟರೆ ಇನ್ನೇನೂ ಇಲ್ಲ. ಅಹಂಕಾರಪಡಲಿಕ್ಕೆ ಒಂದಿಷ್ಟೂ ಅರ್ಹತೆ, ಯೋಗ್ಯತೆ ಎರಡೂ ಇಲ್ಲದ ನಾವು ಸಹ ಹೀಗೆ ಮಾತನಾಡುತ್ತೇವೆ. ಆ ಪರಮಾತ್ಮ ತನ್ನಿಚ್ಛೆಯಂತೆ ತನ್ನ ಸಂತೋಷಕ್ಕಾಗಿಯೇ ಎಲ್ಲವನ್ನೂ ಸೃಜಿಸಿ ತಾನು ಆನಂದಪಡುತ್ತಾನೆ. ಇದರಲ್ಲಿ ನಾವು ಅಹಂಕಾರಪಡಬಾರದು. “ಈಶಾವಾಸ್ಯಮಿದಂ ಸರ್ವಂ ಯತ್ ಕಿಂಚಿತ್ ಜಗತ್ಯಾಂ ಜಗತ್,ತೇನ ತ್ಯಕ್ತೇನ ಭನ್ಜೀತಾ ಮಾ ಗ್ರುಧಃ ಕಸ್ಯಸ್ವಿದ್ಧನಂ” ಎನ್ನುತ್ತದೆ ಈಶಾವಾಸ್ಯ. ಹಾಗಾಗಿ ಎಲ್ಲವು ಪರಮಾತ್ಮ, ಎಲ್ಲವು ಪರಮಾತ್ಮನಿಂದ ಮತ್ತು ಎಲ್ಲವು ಪರಮಾತ್ಮನಿಗಾಗಿ ಎನ್ನುವುದನ್ನು ಮನದಟ್ಟು ಮಾಡಿಕೊಂಡರೆ ಅಹಂಕಾರ ಬಿಡಬಹುದು. ಅಹಂಕಾರ ಬಿಟ್ಟರೆ ಆನಂದವಾಗಿರಬಹುದು. ವಾಚಕರೆ ಎಲ್ಲರೂ ಆಲೋಚನೆ ಮಾಡಬೇಕಾದ ವಿಷಯ. ನಾನು ಮಾಡುತ್ತೇನೆ. ನೀವು ಮಾಡುತ್ತೀರಾ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-54 )

ಫಲವಿಲ್ಲ ಕಾರ್ಯಕಾರಣವಾದದಿಂ ತತ್ವ | ಸಿಳುಕದೆಮ್ಮೆಯ ತರ್ಕಕರ್ಕಶಾಂಕುಶಕೆ || ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ | ತಿಳಿಮನದೆ ನೋಳ್ಪಂಗೆ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಕಾರ್ಯಕಾರಣವಾದದಿಂ=ಕಾರ್ಯ+ಕಾರಣ+ವಾದದಿಂ,ಸಿಳುಕದೆಮ್ಮೆಯ=ಸಿಲುಕದು+ಎಮ್ಮಯ, ತರ್ಕಕರ್ಕಶಾಂಕುಶಕೆ=ತರ್ಕ+ಕರ್ಕಶ+ಅಂಕುಶಕೆ,ಸುಳಿವುದಾಗೀಗಳದು=ಸುಳಿವುದು+ಆಗೀಗಳು+ಅದು, ಸೂಕ್ಷ್ಮಾನುಭವಗಳಲಿ=ಸೂಕ್ಷ್ಮ+ಅನುಭವಗಳಲಿ.

ಪದಗಳ ತಾತ್ಪರ್ಯ

ಪದ್ಯದ ಪೂರ್ತಿ ವಿವರಣೆ

ಈ ಜಗತ್ತಿನ ಸೃಷ್ಟಿಯ ಕರ್ತೃ, ಕರಣ, ಕಾರ್ಯ, ಕಾರಣ ಇವುಗಳ ಬಗ್ಗೆ ಅತಿಯಾದ ವಾದ ವಿವಾದದಿಂದ ನಮಗೆ ತತ್ವವು ಸಿಗುವುದೇ ಇಲ್ಲ. ಆದರೆ ನಿರ್ಮಲವಾದ ಮತ್ತು ತಿಳಿಯಾದ ಮನದಲ್ಲಿ ಆಗಾಗ ಸೂಕ್ಮಾನುಭವಕ್ಕೆ ಅದು ಗೋಚರವಾಗಬಹುದು. ಯಾರಿಗೆ? ನೋಡಲು ಇಚ್ಚಿಸುವವರಿಗೆ ಮತ್ತು ನೋಡುವವರಿಗೆ ಅದು ಆಗಾಗ ಗೋಚರಿಸುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ನೋಡಿ, ಒಂದು ಸೃಷ್ಟಿಯಿದೆ. ಹಾಗೆಂದ ಮೇಲೆ ಅದಕ್ಕೊಂದು ಸೃಷ್ಟಿಕರ್ತನಿದ್ದಾನೆ. ಈ ಸೃಷ್ಟಿ ಕಾರ್ಯಕ್ಕೊಂದು ಕರಣವಿರಬೇಕು. ಕರಣ ಮತ್ತು ಕಾರ್ಯವಿದ್ದರೆ ಕಾರಣವು ಇರಬೇಕು. ಇದರ ಬಗ್ಗೆ ಲಕ್ಷಾಂತರ ವಾದಗಳು ವಿವಾದಗಳು ತರ್ಕಗಳು ಇವೆ. ಆದರೂ ಅದು ಏನು ಎಂದು ಯಾರಿಗೂ ನಿಚ್ಚಳವಾಗಿ ತಿಳಿದಿಲ್ಲ. ಅದನ್ನು ತಿಳಿಯಲು ಪ್ರಯತ್ನಿಸಿದವರೆಲ್ಲಾ, ತಮ್ಮ ತಮ್ಮದೇ ಆದ ವಿಧಾನದಲ್ಲಿ ಅದನ್ನು ನೋಡಲು ಪ್ರಯತ್ನಿಸಿ, ತಮ್ಮದೇ ಆದ ತತ್ವವನ್ನು ಪ್ರತಿಪಾದಿಸಿದ್ದಾರೆ. ಯಾವುದೂ ಅಂತಿಮವಲ್ಲ. ಹಾಗಾಗಿ ನಮ್ಮ ತರ್ಕವೆಂಬ ಒರಟಾದ ಆಯುಧಗಳಿಂದ ಅದನ್ನು ಕೆದಕುವ ಬದಲು ಮನವನ್ನು ನಿರ್ಮಲವಾಗಿಸಿಕೊಂಡು ಅದರ ಬಗ್ಗೆ ಚಿಂತಿಸಿದರೆ, ಪ್ರತಿಯೊಬ್ಬರಿಗೂ ಅದು ಗೋಚರವಾಗುತ್ತದೆ. ಆದರೆ ಮನಸ್ಸನ್ನು ನಿಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ಕೆಲವು ಬಾರಿ ನಮ್ಮ ಅನುಭವಕ್ಕೆ ಒಂದು ಮಿಂಚಂತೆ ಬಂದು ಹೋಗುತ್ತದೆ. ಇದು ಪ್ರತಿಯೊಬ್ಬರಿಗೂ ಅನುಭವ ವೇದ್ಯ. ಅದನ್ನು ಅರಿತುಕೊಳ್ಳಲು, ಪಾಂಡಿತ್ಯ ಬೇಕಿಲ್ಲ. ವಾದ ಬೇಕಿಲ್ಲ. ಚರ್ಚೆ ಬೇಕಿಲ್ಲ. ಏಕೆಂದರೆ ವಾದ ಮಾಡಿದರೆ ವಿವಾದವಾಗುತ್ತದೆ. ಚರ್ಚೆ ಮಾಡಿದರೆ, ಹಲವು ಆಯಾಮಗಳು ತೆರೆದುಕೊಳ್ಳುತ್ತವೆ. ಸತ್ಯ ಗೋಚರವಾಗುವುದಿಲ್ಲ. ಸತ್ಯ ಗೋಚರವಾಗಬೇಕಾದರೆ, ಮನಸ್ಸಿನ, ಬುದ್ಧಿಯ ಚಟುವಟಿಕೆಗಳನ್ನು, ಎಲ್ಲ ವಿಚಾರ, ತರ್ಕಗಳನ್ನೂ ಕುತರ್ಕಗಳನ್ನೂ ಬದಿಗಿಟ್ಟು ನಿರ್ಮಲ ಅಂತಃಕರಣದಲ್ಲಿ ಅದನ್ನು ಅನುಭವಿಸಿದರೆ, ಆಗಾಗ ನಮಗೆ ಗೋಚರವಾಗಬಹುದು. ಅಂತಹ ಸತ್ವಯುತವಾದ ಸತ್ಯವನ್ನು ಮನಸ್ಸಿನಲ್ಲಿ ದೀರ್ಘಕಾಲ ಅನುಭವಿಸಿದರೆ, ನಮಗೆ ಶಾಂತಿ ಮತ್ತು ನೆಮ್ಮದಿ. ಇದರ ಬಗ್ಗೆ ಹೆಚ್ಚು ವಿವರಣೆ ಅನಗತ್ಯ. ವಾಚಕರು ತಮ್ಮ ತಮ್ಮಲ್ಲೇ ಅನುಭವಿಸಬೇಕು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-55 )

ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ? | ಅರಿಯುವಂ ಸೋಂಕಿಂದೆ ಬಿಸಿಲುತನಿವುಗಳ || ನರನುಮಂತೆಯೇ ಮನಸಿನನುಭವದಿ ಕಾಣುವನು | ಪರಸತ್ವಮಹಿಮೆಯನು-ಮಂಕುತಿಮ್ಮ ||

ಪದಗಳ ವಿಸ್ತರಣೆ

ಕುರುಡನಿನಚಂದ್ರರನು=ಕುರುಡ+ಇನ+ಚಂದ್ರರನು, ಬಿಸಿಲುತನಿವುಗಳ=ಬಿಸಿಲು+ತನಿವುಗಳ, ನರನುಮಂತೆಯೇ=ನರನುಂ+ಅಂತೆಯೇ, ಮನಸಿನನುಭವದಿ=ಮನಸಿನ+ಅನುಭವದಿ, ಪರಸತ್ವಮಹಿಮೆಯನು=ಪರಸತ್ವ+ಮಹಿಮೆಯನು.

ಪದಗಳ ತಾತ್ಪರ್ಯ

ಇನ=ಸೂರ್ಯ, ಸೋಂಕಿಂದೆ=ಸ್ಪರ್ಶದಿಂದ, ತನಿವುಗಳ=ತಂಪನ್ನು, ನರನುಮಂತೆಯೇ=ನರನೂ ಹಾಗೆಯೇ, ಪರಸತ್ವ=ಪರಮಾತ್ಮ ತತ್ವವನು.

ಪದ್ಯದ ಪೂರ್ತಿ ವಿವರಣೆ

ಕುರುಡನಿಗೆ ಸೂರ್ಯ ಚಂದ್ರರನು ಕಾಣಲಾಗುವುದೆ? ಬಿಸಿಲು ಮತ್ತು ತಂಪನ್ನು ಅವನು ಸ್ಪರ್ಶಮಾತ್ರದಿಂದಲೇ ಅರಿಯುವುದಿಲ್ಲವೇ ಮನುಷ್ಯನೂ ಸಹ ಮನಸ್ಸಿನ ಅನುಭವದಿಂದ ಪರಮಾತ್ವ ತತ್ವವನು ಕಾಣುತ್ತಾನೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. “ಅವರವರ ಭಾವಕ್ಕೆ ಅವರವರ ಬಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ. ಹರನ ಭಕ್ತರಿಗೆ ಹರ, ಹರಿಯ ಭಕ್ತರಿಗೆ ಹರಿ, ನರರೇನು ಭಾವಿಸುವರದರಂತೆ ಕಾಣುವನು” ನಿಜಗುಣ ಶಿವಯೋಗಿಗಳ ಮಾತು. ಎಂತಹ ಸತ್ಯ. ಇಲ್ಲಿ ಕಣ್ಣಿಗೆ ಕಾಣುವುದು ಇಲ್ಲ. ಪರಮಾತ್ಮ ಎನ್ನುವುದು ಕೇವಲ ಭಾವನೆಗೆ ಬರುವ ವಿಚಾರ ಮತ್ತು ವಿಷಯ. ಹೇಗೆ ಒಬ್ಬ ಕಣ್ಣಿಲ್ಲದ ಮನುಷ್ಯ, ಸೂರ್ಯನ ತಾಪ ಮತ್ತು ಶೀತಲ ಚಂದ್ರನನ್ನು ತನ್ನ ಅನುಭವದಿಂದಲೇ ತಿಳಿದುಕೊಳ್ಳುತ್ತಾನೋ ಹಾಗೆಯೇ ಪ್ರತಿಯೊಬ್ಬ ನರನೂ ಆ ಪರಮಾತ್ವ ತತ್ವವನ್ನು ಕೇವಲ ಭಾವನೆಯಿಂದಲೇ ತಿಳಿದುಕೊಳ್ಳಬೇಕು ಎಂದು ಈ ಮುಕ್ತಕದ ಹೂರಣ. ನೋಡಿ ಒಬ್ಬ ವಟುವಿಗೆ ಉಪನಯನವನ್ನು ಮಾಡುತ್ತಾರೆ. ಆಚಮನ, ಪ್ರಾಣಾಯಾಮ ಜಪ ತಪಗಳ ನಿಯಮವನ್ನು ಬಾಹ್ಯ ಚಟುವಟಿಕೆಗಳಿಂದ ಹೇಳಿಕೊಡುತ್ತಾರೆ. ಅವನೂ ಸಹ ಅವರು ಹೇಳಿ ಕೊಟ್ಟಂತೆಯೇ, ನಿಲ್ಲುವುದು, ಕೂರುವುದು, ಪ್ರಾಣಯಾಮ, ಅರ್ಘ್ಯ ಮುಂತಾದ ಕರ್ಮಗಳನ್ನು ಮಾಡುತ್ತಾನೆ ಮತ್ತು ಆ ಸಮಯದಲ್ಲಿ ಬಾಯಿಂದ ಉಚ್ಚರಿಸುವ ಮಂತ್ರಗಳನ್ನೂ ಸ್ಫುಟವಾಗಿ ಉಚ್ಚಾರ ಮಾಡುತ್ತಾನೆ. ಗಾಯತ್ರಿ ಮಂತ್ರವನ್ನೂ ಹೇಳುತ್ತಾ ಜಪ ಮಾಡುತ್ತಾನೆ. ಇದೆಲ್ಲವನ್ನು ಹೇಳಿ ಕೊಡಬಹುದು ಆದರೆ ಅವನ ಆಂತರ್ಯದಲ್ಲಿ ನಡೆಯುವ ಮನೋವ್ಯಾಪಾರವನ್ನು ಮತ್ತು ಕ್ರಿಯೆಯನ್ನೂ ಹೇಳಿಕೊಡಲು ಸಾಧ್ಯವೇ? ಪ್ರತಿಯೊಬ್ಬರಿಗೂ ಅವರವರದೇ ಆದಂತ ಅನುಭವವಿರುತ್ತದೆ. ಪ್ರತಿಯೊಬ್ಬರಿಗೂ ಅವರವರ ಅನುಭವದ ಪ್ರಕಾರ ಆ ಪರತತ್ವದ ದರ್ಶನವಾಗುತ್ತದೆ. ಗಾಯತ್ರಿಯನ್ನು ಹೇಳಿಕೊಡಬಹುದು. ಆದರೆ ಆ ಮಂತ್ರಕ್ಕೆ ಅಧಿದೇವತೆಯನ್ನು ಮನಸ್ಸಿನಲ್ಲಿ ಅವಾಹಿಸಿಕೊಂಡು ಜಪಮಾಡುವುದು ಅವರವರಿಗೆ ಬಿಟ್ಟದ್ದು. ಇದು ಮತ, ಪಂಥ, ಭೇದವಿಲ್ಲದೆ, ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಪ್ರತಿಯೊಬ್ಬರ ಅಂತರಂಗವನ್ನು ಹೊಕ್ಕು ನೋಡಲು ಸಾಧ್ಯವಿಲ್ಲ. ಆದರೆ ಅದನ್ನು ಹೊಕ್ಕು ನೋಡಿದರೆ, ಯಾರಿಗೆ ಎಷ್ಟು ಭಾವಿಸಲು ಸಾಧ್ಯವೋ ಅವರಿಗೆ ಆ ಪರಮಾತ್ಮ ಅಷ್ಟು. ನೀವು ದೊಡ್ಡದಾಗಿ ಭಾವಿಸಿದರೆ, ದೊಡ್ಡದು, ಸಣ್ಣದಾಗಿ ಭಾವಿಸಿದರೆ ಸಣ್ಣದು. ಇಡೀ ಬ್ರಹ್ಮಾಂಡವನ್ನೇ ಪರಮಾತ್ಮನೆಂದೂ ಭಾವಿಸಬಹುದು ಅಥವಾ ನಿಮ್ಮ ಮನೆಯಲ್ಲಿರುವ ಒಂದು ಸಣ್ಣ ಮೂರ್ತಿಯನ್ನೇ ದೇವರೆಂದು ಭಾವಿಸಬಹುದು. ಮೊದಲನೆಯದು ಬೃಹತ್ ನಿರಾಕಾರ ಭಾವ, ಎರಡನೆಯದು ಸಂಕುಚಿತ ಮೂರ್ತಿ ಪೂಜೆ. ಇದೆ ಅಂದರೆ ಇದೆ ; ಇಲ್ಲ ಅಂದರೆ ಇಲ್ಲ. ಹಾಗಾಗಿ ಆ ಪರಮಾತ್ಮ ಎನ್ನುವುದು ಬೃಹತ್ತಾಗಿ, ಮಹತ್ತಾಗಿ ಎಲ್ಲವು ತಾನೇ ತಾನಾಗಿ ತನ್ನ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಹೋಗುತ್ತಿದ್ದರೂ, ಅದು ನಮ್ಮ ಭಾವನೆಗೆ ಬರುವುದು ನಾವು ಎಷ್ಟು ಭಾವಿಸಿದರೆ ಅಷ್ಟು. ಹೇಗೆ ಭಾವಿಸಿದರೆ ಹಾಗೆ. ನಮ್ಮ ಭಾವನೆ, ನಮ್ಮ ಅನುಭವ, ನಾವು ಕಾಣುವ ರೂಪ, ನಮಗಷ್ಟೇ ಸೀಮಿತ. ಅದನ್ನು ಅನ್ಯರು ನೋಡುವುದಕ್ಕಾಗಲೀ ಅಥವಾ ನೀವು ಪರರಿಗೆ ಅದನ್ನು ತೋರಿಸುವುದಕ್ಕಾಗಲೀ ಸಾಧ್ಯವಿಲ್ಲ. ಹಾಗಾಗಿ ವಾಚಕರೆ, ನಾವು ಭಾವಿಸಬೇಕು, ನಮ್ಮ ಭಾವನೆಗಳಲ್ಲಿ ಆ ಪರತತ್ವ ಬೃಹತ್ತಾಗಬೇಕು ಮತ್ತು ಆ ಭಾವ ಗಟ್ಟಿಯಾಗಿ ದೀರ್ಘಕಾಲ ಇರಬೇಕೆಂಬುವ, ಪ್ರಯತ್ನ ನಮ್ಮದಾಗಬೇಕು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-56 )

ಮೇಲಿಂದ ನಕ್ಷತ್ರ ಜಯಘೋಷ ಸುತ್ತಣಿಂ | ಭೂಲೋಕದರಚು ಕೆಳಗಿಂ ಮೂಳೆಯಳುವು || ಕೇಳಬರುತೀ ಮೂರುಕೂಗೆನ್ನ ಹೃದಯದಲಿ | ಮೇಳಯಿಸುತಿದೆ ಸಂತೆ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಭೂಲೋಕದರಚು=ಭೂಲೋಕದ+ಅರಚು, ಮೂಳೆಯಳುವು=ಮೂಲೆಯ+ಅಳುವು, ಕೇಳಬರುತೀ=ಕೇಳಬರುತ+ಈ, ಮೂಳೆಯಳುವು=ಮೂಳೆಯ+ಅಳುವು,

ಪದಗಳ ತಾತ್ಪರ್ಯ

ಸುತ್ತಣಿಂ=ಸುತ್ತಲಿಂದ, ಕೆಳಗಿಂ=ಕೆಳಗಿನಿಂದ,

ಪದ್ಯದ ಪೂರ್ತಿ ವಿವರಣೆ

ಆಕಾಶದಿಂದ ನಕ್ಷತ್ರಗಳ ಮಿಣುಕಾಟ, ಸುತ್ತಲಿಂದ ಈ ಭೂಲೋಕದ ಪಂಚಭೂತಗಳಿಂದಾದ ಎಲ್ಲ ಪ್ರಾಣಿಗಳ ಬದುಕಿನ ಹೊಡೆದಾಟದ ಶಬ್ದ, ಈ ಭೂಮಿಯ ಮೇಲೆ ಅಳಿದುಹೋದ ಎಲ್ಲ ಪ್ರಾಣಿಗಳ ಕೊರಗು, ಕೂಗಾಟ, ಈ ಮೂರೂ ಸ್ತರಗಳಲ್ಲಿನ ಭಾವಗಳು ನನ್ನ ಹೃದಯದಲಿ ಸೇರಿ ಸಂತೆ ಮಾಡುತ್ತಿವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ಇಡೀ ಸೃಷ್ಟಿಯ ವಿಸ್ಮಯಗಳು, ಕಾಣುವ, ಕಾಣದ, ಕೇವಲ ಊಹಿಸಿ ಅನುಭವಿಸಬಹುದಾದ ಆ ವಿಸ್ಮಯಭರಿತ ಲೋಕದ ಬಗ್ಗೆ ನಮ್ಮ ಆಲೋಚನೆ, ಕಂಡದ್ದು, ಕೇಳಿದ್ದು, ಅನುಭವಿಸಿದ್ದು ಎಲ್ಲದರ ವಿಚಾರ ತಲೆಯಲ್ಲಿ. ಇನ್ನು ನಮಗೆ ಕಾಣುವ ಸೂರ್ಯ ಚಂದ್ರರು, ನಕ್ಷತ್ರ ಪುಂಜಗಳು, ಗಾಳಿ, ಮಳೆ, ಮೋಡ, ಮಿಂಚು, ಗುಡುಗು, ಸಿಡಿಲುಗಳಂತಹ ವಿಷಯಗಳು ಮತ್ತು ಅವುಗಳ ಕಾರ್ಯ ವೈಖರಿಯ ಬಗ್ಗೆ ಮತ್ತು ಕಡೆಯದಾಗಿ ನಮ್ಮ ಭೂಮಿಯ ಮೇಲಿರುವ ಮತ್ತು ಅಳಿದು ಹೋದ ಸಕಲ ಪ್ರಾಣಿಗಳ ಬಗ್ಗೆ ವಿಚಾರ ವಿಷಯಗಳೆಲ್ಲ ನಮ್ಮ ತಲೆಗಳಲ್ಲಿ ಸೇರಿಕೊಂಡು ಒಂದು ಸಂತೆಯಲ್ಲಿ ಆಗುವಷ್ಟು ಗಲಭೆಯ ಶಬ್ದ ನಮ್ಮ ಅಂತರ್ಯದಲ್ಲಿ ನಡೆಯುತ್ತಿರುತ್ತದೆ ಎನ್ನುವುದೇ ಈ ಮುಕ್ತಕದ ಹೂರಣ. ಹೌದಲ್ಲವೇ, ನಮಗೆ ಬೇಕೋ ಬೇಡವೋ ಎಲ್ಲ ವಿಚಾರಗಳನ್ನೂ ನಮ್ಮ ಅರಿವಿಗೆ ರವಾನಿಸುವ, ಪಂಚಸ್ಪರ್ಶ ಇಂದ್ರಿಯಗಳು ಮತ್ತು ಪಂಚ ಜ್ಞಾನೇಂದ್ರಿಯಗಳು ಸದಾ ಪೈಪೋಟಿ ಮಾಡುತ್ತಿರುತ್ತವೆ. ಏನೆಲ್ಲಾ ತುಂಬಿಕೊಂಡು ನಮ್ಮ ಮನಸ್ಸು ಬುದ್ಧಿಗಳು ಒಂದು ಕಸದ ತೊಟ್ಟಿಯ ತರಹವೇ ಆಗಿರುತ್ತದೆ. ಹಲವು ಬಾರಿನಮಗೆ ಆಶ್ಚರ್ಯ ಮತ್ತು ಬೇಸರ ಎರಡೂ ಆಗುತ್ತದೆ. “ಥೂ!! ಇದೇನು ನಮ್ಮ ಮನಸ್ಸಲ್ಲಿ ಇಷ್ಟೊಂದು ಹೊಲಸು ತುಂಬಿದೆಯಲ್ಲ? ಎಂದು. “ಮನಸ್ಸು ನಿರ್ಮಲವಾಗಿರಿಸಿಕೊಳ್ಳಬೇಕು” ಎಂದು ಹೇಳುತ್ತಾರೆ. ಅಂದರೆ ಈಗ “ಮಲ” ಅಂದರೆ ಕಶ್ಮಲಭರಿತವಾಗಿದೆ ಎಂದು ಅರ್ಥ ಅಲ್ಲವೇ? ಆದರೆ ನಮ್ಮ ಸ್ವಭಾವ ಗುಣಕ್ಕೆ ಅನುಗುಣವಾಗಿ ನಮ್ಮ ವಿಚಾರಗಳಿರುತ್ತವೆ. ಸರಿ ಅದಕ್ಕೆ ಏನು ಮಾಡಬೇಕು? “ಹೀಗೆ ಬೇಡದ ವಿಚಾರಗಳೆಲ್ಲ ನನ್ನ ತಲೆಯಲ್ಲಿ ತುಂಬಿಕೊಳ್ಳಲು ನನ್ನ ಪ್ರಯತ್ನ ಮತ್ತು ಪ್ರಮೇಯವೇನೂ ಇಲ್ಲವಲ್ಲ!!!” ಎಂದು ನೀವು ಕೇಳಬಹುದು. ಹೌದು ಆದರೆ ನಮ್ಮ ಆಂತರಿಕ ಶುದ್ಧತೆಗೆ ಏನು ಬೇಕೋ ಅಂತಹ ಸದ್ವಿಚಾರಗಳನ್ನು ಮಾತ್ರ ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಸ್ವಾತಂತ್ರ್ಯ ಮತ್ತು ಸಾಮರ್ಥ್ಯ ಎರಡನ್ನೂ ಆ ಪರಮಾತ್ಮ ನಮಗೆ ಕರುಣಿಸಿದ್ದಾನೋ ಇಲ್ಲವೋ? ಪ್ರಯತ್ನಪಟ್ಟರೆ, ನಾವು ವೈಚಾರಿಕ ಶುದ್ಧತೆಯನ್ನು ಪಡೆದುಕೊಂಡು ರೂಢಿಸಿಕೊಳ್ಳಬಹುದು. ಅಂತಹ ಪ್ರಯತ್ನವನ್ನು ಮಾಡುವ ನಿಟ್ಟಿನಲ್ಲಿ ನಮ್ಮೆಲ್ಲ ಓದು, ವಿದ್ಯಾಭ್ಯಾಸ, ಆಚಾರ, ವಿಚಾರ, ಸ್ನೇಹ, ಸಂಬಂಧಗಳು, ಪೂಜೆ, ಧ್ಯಾನಗಳು, ಇದ್ದರೆ ನಾವು ಶುದ್ಧರಾಗಲು ಸಾಧ್ಯ. ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖ ಮಾಡಿದ ಆ ಮಾನಸಿಕ ಸಂತೆಯಿಂದ ಹೊರಬರಲು ಸಾಧ್ಯ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-57 )

ಆಗುಂಬೆಯಸ್ತಮಯ ದ್ರೋಣಪರ್ವತದುದಯ | ತ್ಯಾಗರಾಜನ ಗಾನ ವಲ್ಮೀಕಿ ಕವನ || ಆಗಿಸವೆ ತಾವಿವೆಮಂತರಂಗದಿ ಸತ್ಯ | ಯೋಗಪುಲಕಾಂಕುರವ?-ಮಂಕುತಿಮ್ಮ ||

ಪದಗಳ ವಿಸ್ತರಣೆ

ಆಗುಂಬೆಯಸ್ತಮಯ=ಆಗುಂಬೆಯ+ಅಸ್ತಮಯ, ದ್ರೋಣಪರ್ವತದುದಯ=ದ್ರೋಣಪರ್ವತದ+ಉದಯ, ತಾವಿವೆಮಂತರಂಗದಿ=ತಾವು+ಇವು+ಎಮ್ಮಯ+ಅಂತರಂಗದಿ, ಯೋಗಪುಲಕಾಂಕುರವ=ಯೋಗ+ಪುಲಕ+ಅಂಕುರವ

ಪದಗಳ ತಾತ್ಪರ್ಯ

ದ್ರೋಣ ಪರ್ವತ=ಬಾಬಾ ಬುಡನಗಿರಿ ಬೆಟ್ಟ. ಆಗಿಸಿವೆ=ಉಂಟು ಮಾಡಿವೆ. ಪುಲಕಾಂಕುರ=ರೋಮಾಂಚನ.

ಪದ್ಯದ ಪೂರ್ತಿ ವಿವರಣೆ

ಆಗುಂಬೆಯ ಸೂರ್ಯಾಸ್ತಮಾನ, ದ್ರೋಣಪರ್ವತದ ಸೂರ್ಯೋದಯ, ತ್ಯಾಗರಾಜನ ಗಾನ, ವಾಲ್ಮೀಕಿಯ ಕವನ ಇವೆಲ್ಲವು ನಮ್ಮ ಅಂತರಂಗದಲ್ಲಿ ಸತ್ಯದ ದರ್ಶನವನ್ನು ಮಾಡಿಸಿ ರೋಮಾಂಚನಗೊಳಿಸುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ನಮ್ಮಲ್ಲಿ ಬಹಳಷ್ಟು ಜನಕ್ಕೆ ಸೂರ್ಯೋದಯ ಮತ್ತು ಸೂರ್ಯಾಸ್ತಮಾನಗಳನ್ನು ನೋಡಿ ಗೊತ್ತೇ ಇಲ್ಲ. ಹಿಂದೆ ಎಂದೋ ನೋಡಿರುವುದು ಮರೆತೇ ಹೋಗಿದೆ. ಇಡೀ ಸೃಷ್ಟಿಯಲ್ಲಿ ಅತ್ಯದ್ಭುತವಾದದ್ದು ಮಾನವನಸೃಷ್ಟಿ. ಏಕೆಂದರೆ ತಾನು ಇರುವುದಷ್ಟೇ ಅಲ್ಲ ತನ್ನೊಡನೆ ಆದಂತಹ ಎಲ್ಲ ಸೃಷ್ಟಿಯನ್ನೂ ನೋಡಿ ಆನಂದಿಸುವ ಕಲೆ ಕೇವಲ ಮಾನವನಿಗೆ ಮಾತ್ರ ಗೊತ್ತು. ಆದರೆ ಆನಂದಪಡುವುದನ್ನು ಮರೆತೆ ಹೋಗಿದ್ದಾನೆ ಈ ಮನುಷ್ಯ. ವಸ್ತು ವಿಷಯಗಳ, ಯಾಂತ್ರಿಕತೆಯ, ಸ್ವಾರ್ಥದ ಮತ್ತು ಅಹಂಕಾರದ ಕಾಡಿನಲ್ಲಿ ಮನುಷ್ಯ ಕಳೆದು ಹೋಗಿದ್ದಾನೆ. ಅವನಿಗೆ ಇಂದು ಒಂದು ಸೂರ್ಯೋದಯವೋ, ಸೂರ್ಯಾಸ್ತಮಾನವೋ, ಸಂಗೀತವೋ ಅಥವಾ ಕಾವ್ಯರಸಧಾರೆಯೋ ಸಂತೋಷವನ್ನು ಕೊಡುವುದಿಲ್ಲ. ಅವುಗಳೆಲ್ಲ ಇಂದಿಗೂ ಸಂತೋಷಕ್ಕೆ ಮತ್ತು ಆನಂದಕ್ಕೆ ಕಾರಣವಾಗಿಯೇ ಉಳಿದಿವೆ. ಆದರೆ ಮನುಷ್ಯನಿಗೆ ಅವೆಲ್ಲವನ್ನು ನೋಡಿ, ಕೇಳಿ ಅಥವಾ ಓದಿ ಆನಂದಪಡುವ ಮನಸ್ಸೇ ಇಲ್ಲವಾಗಿದೆ. ಇದು ದುರಂತ. ಪಾಪ ಕೆಲವರಿಗೆ ಜೀವನ ಜಂಜಾಟದಲ್ಲಿ, ಅನಿವಾರ್ಯತೆಯಲ್ಲಿ ಮತ್ತು ಒತ್ತಡದಲ್ಲಿ ಈ ವಿಷಯಗಳಿಗೆಲ್ಲಾ ಗಮನ ಕೊಡುವುದಕ್ಕೆ ಸಾಧ್ಯವಿಲ್ಲ. ಅವರು ಕರ್ಮ ಯೋಗಿಗಳು. ಆದರೆ ಎಲ್ಲವು ಇದ್ದು ಆದರೂ ಕೊರಗುತ್ತಾ ಇರುವವರಿಗೆ ಆನಂದವಾಗಿರುವುದಕ್ಕೆ ಈ ಸೂರ್ಯೋದಯ, ಸೂರ್ಯಾಸ್ತಮಾನ, ಸಂಗೀತ ಮತ್ತು ಸಾಹಿತ್ಯಗಳು ಖಂಡಿತ ಸಹಾಯ ಮಾಡುತ್ತವೆ. ಅದರ ಕಡೆಗೆ ಒಲವ ತೋರಿಸಿ ತಮ್ಮನ್ನು ತಾವು ಅದರಲ್ಲಿ ತೊಡಗಿಸಿಕೊಂಡರೆ, ಸಂತೋಷಪಡುವ ಸ್ಥಿತಿಗೆ ಬರಬಹುದು. ಇಡೀ ಸೃಷ್ಟಿಗೆ ಪೂರಕವಾದ ಈ ಸೂರ್ಯೋದಯ, ಸೂರ್ಯಾಸ್ತಮಾನಗಳು, ಮಾನವನ ಅತ್ಯದ್ಭುತ ಆವಿಷ್ಕಾರವಾದ ಸಂಗೀತ ಜ್ಞಾನ ಮತ್ತು ಜಗತ್ತಿನಲ್ಲೆಲ್ಲೂ ಲಭ್ಯವಾಗದ ನಮ್ಮ ಭಾರತೀಯ ಸಾಹಿತ್ಯದ ಮುಕುಟದಂತಿರುವ ವಾಲ್ಮೀಕಿಯ ರಚನೆ ಇವೆಲ್ಲದರಲ್ಲಿ ಯಾವುದಾದರೊಂದರಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಸತ್ಯವಾಗಿಯೂ ಮಾನಸಿಕ ನೆಮ್ಮದಿ ಮತ್ತು ಸಂತೋಷ ದೊರಕುತ್ತದೆಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು. ನನ್ನ ಮಟ್ಟಿಗೆ ಸಾಹಿತ್ಯ ಮತ್ತು ಸಂಗೀತಗಳೆರಡೂ ಸಹ ಏಕಾಗ್ರತೆಯನ್ನು ನೀಡಿ ಧ್ಯಾನಕ್ಕೆ, ಆಧ್ಯಾತ್ಮ ಚಿಂತನೆಗೆ ಬಹಳ ಸಹಾಯ ಮಾಡುತ್ತವೆ ಎಂಬುದನ್ನು ಮನಗಂಡಿದ್ದೇನೆ. ವಾಚಕರೆ ಈ ಜಗತ್ತಿನಲ್ಲಿ ಆನಂದ ಪಡುವುದಕ್ಕೆ ಅಸಂಖ್ಯಾತ ಸಾಧನಗಳು ಇವೆ. ಹಾಗೆಯೇ ದುಃಖಪಡುವುದಕ್ಕೆ, ಕೊರಗುವುದಕ್ಕೆ ಮತ್ತು ಗೋಳಾಡುವುದಕ್ಕೂ ಅಸಂಖ್ಯಾತ ಕಾರಣಗಳು ಮತ್ತು ಮಾರ್ಗಗಳಿವೆ. ನಮಗೆ ಏನು ಬೇಕು ಎನ್ನುವುದು ಮುಖ್ಯ. ಈ ಜಗತ್ತಿನ ಅಂಗಡಿಯಲ್ಲಿ ಎಲ್ಲವು ಇದೆ. ಆಯ್ಕೆ ನಮ್ಮದು, ಸುಖ ದುಃಖಗಳು ನಮ್ಮ ಕೈಯಲ್ಲೇ ಇದೆ. ಮೊದಲು ನಮಗೆ ಏನು ಬೇಕು ಎನ್ನುವುದನ್ನು ನಿಶ್ಚಯಿಸಿ ನಂತರ ಅದನ್ನು ಪಡೆಯುವ ಪ್ರಯತ್ನವನ್ನು ಪಟ್ಟರೆ ನಮಗೆ ಜಯ ಖಂಡಿತ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-58 )

ಮಲೆಕಣಿವೆಗಳ ಬೆರಗು ಪ್ರಕೃತಿಕೋಪದ ಗುಡುಗು | ಕೆಳೆಯೊಲವು ನಲ್ಲೆಯ ವಿಯೋಗವಿಂತಹವು || ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ | ನೊಳದನಿಯದೊಂದರಿಂ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಮೂಕಗೊಳಿಪುವುವೆನ್ನ=ಮೂಕ+ಗೊಳಿಪುವುವು+ಎನ್ನ, ನೊಳದನಿಯದೊಂದರಿಂ=ಒಳದನಿ+ಅದರ+ಒಂದರಿಂ ಮಲೆ=ಬೆಟ್ಟ,

ಪದಗಳ ತಾತ್ಪರ್ಯ

ಕಣಿವೆ=ಕೊರಕುಗಳು, ಕೆಳೆ=ಗೆಳೆತನ, ನಲ್ಲೆ=ಪ್ರೇಯಸಿ, ವಿಯೋಗ=ದೂರ ಸರಿವಾಟ, ಮನದೋಟವನು=ಮನಸ್ಸಿನ ಚಂಚಲ ಪ್ರಕೃತಿಯನು, ಮೂಕಗೊಳಿಪುವುವು=ಸುಮ್ಮನಾಗಿಸುವುವು.

ಪದ್ಯದ ಪೂರ್ತಿ ವಿವರಣೆ

ಬೆಟ್ಟಗುಡ್ಡಗಳು ಅದರಲ್ಲಿರುವ ಕಣಿವೆಗಳು, ಪ್ರಕೃತಿ ವಿಕೋಪದ ಗುಡುಗು, ಸಿಡಿಲು, ಮಳೆ, ಚಂಡಮಾರುತದಂತಹ ವಿಷಯಗಳು, ಸ್ನೇಹಿತನ ಒಲವು, ಪ್ರೇಯಸಿಯ ವಿಯೋಗದಂತಹ ವಿಷಯಗಳು ನಮ್ಮ ಮನಸ್ಸನ್ನು ಆಳುವಾಗ, ಇವುಗಳನ್ನೆಲ್ಲ ನಿಲ್ಲಿಸಿ, ಮನಸ್ಸನ್ನು, ನಮ್ಮ ಒಳದನಿಯು, ಅಂದರೆ ಅಂತರಂಗದ ದನಿ, ಮಾತ್ರ ಸುಮ್ಮನಾಗಿಸುವುದು ಎಂದು ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು ಹೇಳುತ್ತಾರೆ. ಭಗವದ್ಗೀತೆಯಲ್ಲಿ ಒಂದು ಉಲ್ಲೇಖ ಬರುತ್ತದೆ. “ಈ ದೇಹವನ್ನು ಒಂದು ರಥವೆಂದು ತಿಳಿ. ಆತ್ಮನೇ ಯಜಮಾನ, ಬುದ್ಧಿಯೇ ಸಾರಥಿ, ಮನಸ್ಸೇ ಲಗಾಮು ಮತ್ತು ಓಡುವ ಆರು ಕುದುರೆಗಳೇ ಅರಿಷಡ್ವರ್ಗಗಳು” ಎನ್ನುತ್ತಾನೆ ಶ್ರೀ ಕೃಷ್ಣ. ಎಲ್ಲಿಯ ತನಕ ಓಡುವ ಕುದುರೆಗಳು ಲಗಾಮಿನ ಮೂಲಕ ಸಾರಥಿಯ ಹಿಡಿತದಲ್ಲಿರುತ್ತದೆಯೋ ಅಲ್ಲಿಯತನಕ ಆ ಯಜಮಾನನೆನ್ನಿಸಿಕೊಂಡವನು, ಸೇರಬೇಕಾದ ಸ್ಥಳವನ್ನು ಸೇರುತ್ತಾನೆ. ಲಗಾಮಿನ ಮೇಲೆ ಸಾರಥಿಯ ಹಿಡಿತ ಸಡಿಲವಾಗಿ ಕುದುರೆಗಳು ಮನಸೋ ಇಚ್ಛೆ ಓಡಿದರೆ, ಆಗ ಆ ಯಜಮಾನ ಮತ್ತು ಆ ಸಾರಥಿ, ಇಬ್ಬರೂ ಕುದುರೆಗಳು ಅವರನ್ನು ಎಲ್ಲಿ ಕೊಂಡು ಹೋಗುತ್ತದೆಯೋ ಅಲ್ಲಿಗೆ ಹೋಗುತ್ತಾರೆ. ಅಂದರೆ ಎಲ್ಲಿಯ ತನಕ ನಮ್ಮ ಮನಸ್ಸು ಬುದ್ಧಿಯ ಹಿಡಿತದಲ್ಲಿರುತ್ತದೆಯೋ ಅಲ್ಲಿಯತನಕ ನಮಗೆ ಶ್ರೇಯಸ್ಸು. ಎಂದು ನಮ್ಮ ಮನಸ್ಸು ವಿಷಯಗಳ ವ್ಯಕ್ತಿಗಳ ಮತ್ತು ವಸ್ತುಗಳ ಆಕರ್ಷಣೆಯ ಹಿಡಿತಕ್ಕೆ ಹೋಗುತ್ತದೆಯೋ, ಆಗ ಆತ್ಮ ಸೊರಗುತ್ತದೆ. ಇದನ್ನೇ ಮಾನ್ಯ ಗುಂಡಪ್ಪನವರು ಸೂಚ್ಯವಾಗಿ “ನಿಲಿಸಿಮನದೋಟವನು” ಎನ್ನುತ್ತಾರೆ ಈ ಮುಕ್ತಕದಲ್ಲಿ. ಮಿತ್ರರೇ, ಆತ್ಮಾವಲೋಕನ ಮಾಡಿಕೊಂಡಾಗ, ನಮಗೆ ತಿಳಿಯುತ್ತದೆ, ಮನಸ್ಸೆಂಬುದು ಕೋತಿ. ಅದು ಕ್ಷಣಕ್ಷಣಕ್ಕೂ ಮರದಿಂದ ಮರಕ್ಕೆ ಕೊಂಬೆಯಿಂದ ಕೊಂಬೆಗೆ, ಅಂದರೆ ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಹಾರುತ್ತಾ, ವ್ಯರ್ಥವಾಗಿ ತಿರುಗುತ್ತಲೇ ಇರುತ್ತದೆ. ಇದು ಪ್ರತಿಯೊಬ್ಬರ ಸ್ಥಿತಿ. “ಹರಿದಾಡುವಂಥಾಮ ನವ ನಿಲಿಸುವುದು ಬಲು ಕಷ್ಟ” ಎಂದು ದಾಸರು ಹೇಳಿದ್ದಾರೆ. ಅರೆ! ದಾಸರೇ ಹಾಗೆ ಹೇಳಿದ ಮೇಲೆ ನಾವು ಮಾಡುವುದು ಏನು? ಎಂದು ನಾವು ಸುಮ್ಮನಾಗಿ ಬಿಡಬಹುದು. ಆದರೆ ದಾಸರು “ಕಷ್ಟ” ಎಂದರೆ ಹೊರತು “ಅಸಾಧ್ಯ” ಎಂದು ಹೇಳಲಿಲ್ಲವಲ್ಲ!!! ಹಾಗಾದರೆ ಏನು ಮಾಡಬೇಕು? “ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನನೊಳದನಿಯದದೊಂದರಿಂ” ನೋಡಿ, ಇದು ಗುಂಡಪ್ಪನವರ ಸಲಹೆ. ಮನಸ್ಸಿನ ಓಟವನ್ನು ನಿಲ್ಲಿಸಿ ಮೂಕವಾಗಿಸಬೇಕು. ಹೇಗೆ? ಎಂದರೆ ಅಂತರಂಗದ ಅರಿವಿನಿಂದ ಮಾತ್ರ ಸಾಧ್ಯವೆನ್ನುತ್ತಾರೆ ಮಾನ್ಯ ಗುಂಡಪ್ಪನವರು. ಹಾಗಾಗಿ ನಾವು ಅಂತರ್ಮುಖಿಗಳಾಗಬೇಕು. ಗುಹ್ಯರಾಗಬೇಕು. ಒಳದನಿಯನ್ನು ಉತ್ತೇಜಿಸಬೇಕು. ಅದನ್ನು ಕೇಳಬೇಕು ಮತ್ತು ಅದರಂತೆ ನಡೆಯಬೇಕು. ಆಗ ಮನಸ್ಸಿಗೆ ನೆಮ್ಮದಿ, ಸುಖ, ಶಾಂತಿ ಮತ್ತು ಆನಂದದ ಅನುಭವವನ್ನು ನಾವ ಪಡೆಯಬಹುದು. ಇದು ಕೇವಲ ಪ್ರಯತ್ನದಿಂದ ಸಾಧ್ಯ. ವಾಚಕರೆ, ಇದೊಂದು ಪರೀಕ್ಷೆ. ಪ್ರಶ್ನೆ ಪತ್ರಿಕೆಗಳನ್ನೂ ನಾವೇ ತಯಾರು ಮಾಡಿ, ನಾವೇ ಉತ್ತರ ಬರೆದು, ನಮ್ಮನ್ನು ನಾವೇ ಮೌಲ್ಯಮಾಪನಕ್ಕೆ ಒಳಪಡಿಸಿಕೊಳ್ಳುವಂಥಾ ಪರೀಕ್ಷೆ. ಇಲ್ಲಿ ಪ್ರಯತ್ನ ಗಟ್ಟಿ ಮತ್ತು ದೀರ್ಘವಾದರೆ, ಯಶಸ್ಸು ನಿಶ್ಚಯ. ಅಂಥಹ ಪ್ರಯತ್ನವನ್ನು ಮಾಡುವ ದೃಢ ನಿಶ್ಚಯಬೇಕು. ಒಮ್ಮೆ ತೀವ್ರವಾಗಿ ತೊಡಗಿಸಿಕೊಂಡರೆ, ಅದೇ ನಮ್ಮನ್ನು ಮುಂದಕ್ಕೆ ಎಳೆದುಕೊಂಡು ಹೋಗುತ್ತದೆ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-59 )

ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ | ಮನಗಾಣಿಸಲು ನಿಮಗೆ ದೈವದದ್ಭುತವ? || ಮನುಜರೊಳಗಾಗಾಗ ತೋರ್ವ ಮಹನೀಯಗುಣ | ವನುವಾದ ಬೊಮ್ಮನದು-ಮಂಕುತಿಮ ||

ಪದಗಳ ವಿಸ್ತರಣೆ

ಮಣಿಮಂತ್ರತಂತ್ರಸಿದ್ಧಿಗಳ=ಮಣಿ+ಮಂತ್ರ+ತಂತ್ರ+ಸಿದ್ಧಿಗಳ, ಸಾಕ್ಷ್ಯಗಳೇಕೆ=ಸಾಕ್ಷ್ಯಗಳು+ಏಕೆ, ಮನಗಾಣಿಸಲು=ಮನ+ಕಾಣಿಸಲು, ದೈವದದ್ಭುತವ=ದೈವದ+ಅದ್ಭುತವ, ಮನುಜರೊಳಗಾಗಾಗ=ಮನುಜರೋಲು+ಆಗಾಗ, ಮಹನೀಯಗುಣವನುವಾದ=ಮಹನೀಯ+ಗುಣವ+ಅನುವಾದ

ಪದಗಳ ತಾತ್ಪರ್ಯ

ತೋರ್ವ=ತೋರುವ, ಬೊಮ್ಮನದು=ಬ್ರಹ್ಮನದು

ಪದ್ಯದ ಪೂರ್ತಿ ವಿವರಣೆ

ಆ ಪರತತ್ವದ ಅದ್ಭುತ ಕ್ರಿಯೆಗಳನ್ನು ನೋಡಲು, ಮನಗಾಣಲು, ನಾವು ಮಂತ್ರ ತಂತ್ರ ಸಿದ್ಧಿಗಳಿಗೆ ಏಕೆ ಶರಣಾಗಬೇಕು? ಮನುಜರಲ್ಲಿ ಆಗಾಗ ಕಾಣುವ ಮಹನೀಯ ಗುಣಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ನಮಗೆ ದೈವದ ಕ್ರಿಯೆ ಅರ್ಥವಾಗುತ್ತದೆ, ಎನ್ನುವುದೇ ಈ ಮುಕ್ತಕದ ಹೂರಣ. ನಿಜ. ಇದೊಂದು ವೃತ್ತ. ಇದರ ಕ್ರಿಯೆ ಅರ್ಥಮಾಡಿಕೊಳ್ಳುವುದು ಕಷ್ಟ. ಏಕೆಂದರೆ ನಮಗೆ ನೋಡಲು ಬರುವುದಿಲ್ಲ. ಅರ್ಥಮಾಡಿಕೊಳ್ಳಲು ಬರುವುದಿಲ್ಲ. ಈ ಜಗತ್ತನ್ನು ಸೃಷ್ಟಿಸಿ, ನಡೆಸಿಕೊಂಡು ಹೋಗುತ್ತಿರುವ ಆ ಅದ್ಭುತ ಚೇತನದ ಕಾರ್ಯ ವೈಖರಿಗೆ ಒಂದು ಪರಿಭಾಷೆಯನ್ನು ನೀಡುವುದು ಬಹಳ ಕಷ್ಟ. ನಮ್ಮ ಜೀವನದಲ್ಲಿ ನಡೆಯುವುದೆಲ್ಲವನ್ನೂ ಅರ್ಥೈಸುವುದು, ಕಾರಣ ಹುಡುಕುವುದು ಬಹಳ ಕಷ್ಟ. ಹಾಗೆ ನಾವು ಒಂದು ರೀತಿಯಲ್ಲಿ ಅರ್ಥಮಾಡಿಕೊಂಡರೂ, ಅದು ನಿಜವಾದ ಕಾರಣವಾಗಿಲ್ಲದೇ ಇರಬಹುದು. ನಮ್ಮಲ್ಲಿ ಸಾಧಾರಣವಾಗಿ ಒಂದು ಮಾತನ್ನು ಕೇಳುತ್ತಲಿರುತ್ತೇವೆ. ಯಾರಾದರೂ ನಮಗೆ ಸಂಕಟ ಸಮಯದಲ್ಲಿ ಅನಪೇಕ್ಷಿತವಾಗಿ ಸಹಾಯ ಮಾಡಿದಾಗ “ದೇವರು ಬಂದಂಗೆ ಬಂದ್ಯಪ್ಪ” ಎನ್ನುವ ರೂಢಿ ಇದೆ ಅಲ್ಲವೇ? ಅಂದರೆ ಏನು ಆ ವ್ಯಕ್ತಿಯಲ್ಲಿ ನಾವು ದೇವರನ್ನು ಕಾಣುತ್ತೇವೆ ಮತ್ತು ಅವರಿಂದ ಆದ ಉಪಕಾರವನ್ನು ಆ ದೇವರೇ ಮಾಡಿದ ಎನ್ನುವ ರೀತಿಯಲ್ಲಿ ಅರ್ಥೈಸುತ್ತೇವೆ. ನಮಗೆ ಸಹಾಯಬೇಕು. ಯಾರು ಮಾಡುತ್ತಾರೆಂದು ಗೊತ್ತಿಲ್ಲ. ಹಾಗೆ ಗೊತ್ತಿಲ್ಲದಿರುವಾಗ ನಮಗೆ ದೇವರ ಮೇಲೆ ನಂಬಿಕೆ. ಆ ಸಮಯದಲ್ಲಿ ಯಾರೇ ಸಹಾಯ ಮಾಡಿದರೂ ಅದನ್ನು ದೇವರೇ ಮಾಡಿದನೆಂದು ವ್ಯಾಖ್ಯಾನ ಮಾಡುತ್ತೇವೆ. ಇದೇ ಜಗತ್ತು. ಎಂದೋ ಒಂದು ಕಾಲವಿತ್ತು. ಗಜೇಂದ್ರನಿಗೆ, ಪ್ರಹ್ಲಾದನಿಗೆ, ಧ್ರುವನಿಗೆ, ಗೋಕರ್ಣನಿಗೆ, ಅರ್ಜುನ ಮುಂತಾದವರಿಗೆ ಆ ಪರಮಾತ್ಮ ನೇರ ಸಹಾಯ ಮಾಡಿದ ದೃಷ್ಟಾಂತಗಳು. ಆದರೆ, ಇಂದು ನಾವು ಅಂತಹ ಅನುಭವಗಳನ್ನು ಪಡೆಯಲು ಸಾಧ್ಯವೇ ಇಲ್ಲ. ಇಂದು ನಾವು ನಮ್ಮ ಸುತ್ತಲಿರುವ ಮನುಷ್ಯರಲ್ಲಿ ಅವರ ಕಲ್ಯಾಣ ಗುಣಗಳಿಂದ ಅವರ ಮೂಲಕವೇ ಆ ದೈವದ ಅನುಭವವನ್ನು ಪಡೆಯಬೇಕು. ಇಂದು ಮಂತ್ರ ತಂತ್ರಗಳಿಂದ ಆ ದೈವವನ್ನು ಸಿದ್ಧಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಟ್ರಾನ್ಸಿಮಿಟರ್ ಸಶಕ್ತವಾಗಿದ್ದರೂ, ರಿಸೀವರ್ ಹಾಳಾಗಿದೆಯಲ್ಲ. ಹಾಗಾಗಿ ನಮ್ಮ ಸುತ್ತಲಿನ ಜನರಲ್ಲಿ ಇರುವ ಆ ಪರಮಾತ್ಮನ ಕಲ್ಯಾಣ ಗುಣಗಳಾದ ಪ್ರೀತಿ, ಸಹನೆ, ದಯೆ, ಕರುಣೆ ಮುಂತಾದವುಗಳನ್ನು ಗುರುತಿಸಿದರೆ ಒಳ್ಳೆಯದು. ಅವುಗಳಲ್ಲೇ ನಾವು ದೈವವನ್ನು ಕಾಣಬೇಕು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು. ಇಂದೂ ಸಹ ಸಾಕಷ್ಟು ಜನ ಅಂತಹ ಮಹನೀಯರು ಇದ್ದಾರೆ. ಪ್ರತ್ಯಕ್ಷವಾಗಿ ಸಮಾಜಕ್ಕೆ ನಿಸ್ವಾರ್ಥ ಸೇವೆಮಾಡುತ್ತಿರುವ ಜನರು, ಎಲೆಮರೆಕಾಯಿಗಳಂತೆ ಇದ್ದಾರೆ. ಇಡೀ ಕರುನಾಡು ಹೆಮ್ಮೆಪಡುವಂಥಾ, ಮೋಕ್ಷಗುಂಡಂ ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ರಂಥವರು, (ರಾಜಋಷಿ ಎಂದು ಅವರಿಗೆ ಬಿರುದು) ಸಾಲುಮರದ ತಿಮ್ಮಕ್ಕ, ಮದರ್ ತೆರೇಸಾರಂಥವರು, ಲೋಕ ಕಲ್ಯಾಣವನ್ನು ಮಾತ್ರ ಗುರಿಯಾಗಿರಿಸಿಕೊಂಡು ಸಾಧನೆಯನ್ನು ಮಾಡುವ ಸಾಧುಗಳು, ಸಂತರು, ಮಠ ಮಾನ್ಯಗಳು ಏನೂ ಇಲ್ಲದೆ ಕೆಲಸ ಮಾಡುತ್ತಾ ಒಟ್ಟು ಸಮುದಾಯದ ಹಿತವನ್ನೇ ಬಯಸುವ ಮಹನೀಯರು ನಮ್ಮ ಅಕ್ಕಪಕ್ಕದಲ್ಲೇ ಇರುತ್ತಾರೆ. ಅವರ ನಿಸ್ವಾರ್ಥ ಸೇವೆಯನ್ನು ನಾವು ದೈವ ಕೃಪೆ ಎಂದೇ ಪರಿಗಣಿಸಬೇಕಾಗುತ್ತದೆ. ಆ ಪರಮಾತ್ಮ ಪ್ರತ್ಯಕ್ಷವಾಗಿ ನಮಗೆ ಒದಗದಿದ್ದರೂ ಪರೋಕ್ಷವಾಗಿ ಇಂಥಹ ಮಹನೀಯರ ಮೂಲಕ ನಮಗೆ ಮತ್ತು ಇಡೀ ಸಮಾಜಕ್ಕೆ ಒದಗುತ್ತಲೇ ಇರುತ್ತಾನೆ. ನಾವು ಸಹ ಅಂತಹ ಗುಣಗಳನ್ನು ಗುರುತಿಸುತ್ತಾ, ಅಂತಹವರ ಕಾರ್ಯಕ್ಕೆ ಸಾಕಷ್ಟು ಒತ್ತಾಸೆಯನ್ನು ನೀಡುತ್ತಾ, ಅಂತಹ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-60 )

ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ | ಕಾಶಿಯಾ ಶಾಸ್ತ್ರಗಳನಾಕ್ಸಫರ್ಡಿನವರು || ದೇಶಕಾಲವಿಭಾಗ ಮನದ ರಾಜ್ಯದೊಳಿರದು | ಶ್ವಾಸವದು ಬೊಮ್ಮನದು-ಮಂಕುತಿಮ್ಮ ||

ಪದಗಳ ವಿಸ್ತರಣೆ

ಕಬ್ಬಗಳನೋದುವರು=ಕಬ್ಬಗಳನು+ಓದುವರು, ಶಾಸ್ತ್ರಗಳನಾಕ್ಸಫರ್ಡಿನವರು=ಶಾಸ್ತ್ರಗಳನು+ಆಕ್ಸಫರ್ಡಿನವರು,

ಪದಗಳ ತಾತ್ಪರ್ಯ

ರಾಜ್ಯದೊಳಿರದು=ರಾಜ್ಯದೊಳು+ಇರದು , ಕಬ್ಬಗಳು=ಕಾವ್ಯಗಳು, ಬೊಮ್ಮನದು=ಪರಮಾತ್ಮನದು

ಪದ್ಯದ ಪೂರ್ತಿ ವಿವರಣೆ

ಜಗತ್ತಿನ ವಿಶಾಲತೆಗೆ ಒಂದು ಕನ್ನಡಿ ಈ ಮುಕ್ತಕ. “ಗ್ಲೋಬಲ್‌ ವಿಲೇಜ್” ಎಂದು ಇತ್ತೀಚೆಗೆ ಒಂದು ಪದಪ್ರಯೋಗವನ್ನು ನಾವು ಕೇಳುತ್ತಿದ್ದೇವೆ. ನಾವು ಇಲ್ಲಿ ಕುಳಿತುಕೊಂಡು ಪ್ರಪಂಚದ ಯಾವುದೇ ಮೂಲೆಯಲಿರುವ ಜನರೊಡನೆ ಸಂಪರ್ಕಿಸಲು ನಾನಾ ವಿಧವಾದ ಸಂಪರ್ಕ ಸಾಧನಗಳನ್ನು ಇಂದು ಹೊಂದಿದ್ದೇವೆ. ಎಲ್ಲಿಯೋ ಹುಟ್ಟಿ ಬೆಳೆದ, ಆಲ್ಬರ್ಟ್ ಕಾಮೂವಿನ ನಾಟಕಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತೇವೆ. ಶೇಕ್ಸಪಿಯರನ ನಾಟಕಗಳನ್ನೂ ಆಡುತ್ತೇವೆ. ಅಲ್ಲಿ ಅವರುಗಳು ನಮ್ಮ ಭಾರತೀಯ ಸಂಸ್ಕೃತಿಯ ಕತೆ ನಾಟಕ ಶಾಸ್ತ್ರಗಳನ್ನು ಓದುತ್ತಾರೆ. ಇಂಗ್ಲೆಂಡಿನ ಶಾಲೆಗಳಲ್ಲಿ ಪ್ರಾರ್ಥನೆಯಲ್ಲಿ “ಸಹನಾವವತು” ಹೇಳುತ್ತಾರೆ. ಆದರೆ ದುರಂತವೆಂದರೆ, ಇಲ್ಲಿ ಭಾರತದಲ್ಲಿ ಅದನ್ನು ಶಾಲೆಗಳಲ್ಲಿ ಹೇಳಿದರೆ ಅದಕ್ಕೊಂದು ಬಣ್ಣ ಕಟ್ಟಿ ಗೊಂದಲವೇ ಆಗುತ್ತದೆ. ಇರಲಿ, ಹೀಗೆ ಬೇರೆ ಬೇರೆ ದೇಶಗಳ ಭಾಷೆ ಮತ್ತು ಸಂಸ್ಕೃತಿಗಳನ್ನು ಬೇರೆ ಬೇರೆ ದೇಶಗಳಲ್ಲಿ ಅನುಕರಿಸಿ, ಅನುಸರಿಸುವಾಗ ಇಡೀ ಜಗತ್ತೇ ಒಂದು ಮನೆಯಾಗುವ ಸಂಭವ ಇದೆ ಎಂದು ಅರ್ಥ ತಾನೇ, “ವಿದ್ವತ್ವಂಚನೃಪತ್ವಂಚ ನೈವ ತುಲ್ಯಂ ಕದಾಚನ | ಸ್ವದೇಶೆ ಪೂಜ್ಯತೆ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೆ” ಎನ್ನುತ್ತದೆ ಸುಭಾಷಿತ. ಹಾಗೆ ವಿದ್ಯೆಗೆ ದೇಶ ಕಾಲದ ಎಲ್ಲೆ ಇರುವುದಿಲ್ಲ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ಹೌದು ಮನಸ್ಸು ವಿಶಾಲವಾದರೆ, ಮನಸ್ಸಿನ ಚಿಂತನೆ ವಿಶಾಲವಾದರೆ ಅದು ಸಾಧ್ಯ. ಆದರೆ ಜಾತಿ, ಮತ, ದೇಶ, ಭಾಷೆ, ವರ್ಣಗಳ ಸಣ್ಣ ಸಣ್ಣ ವೃತ್ತಗಳ ಗೆರೆಗಳನ್ನು ನಮ್ಮ ಸುತ್ತ ನಾವೇ ಎಳೆದುಕೊಂಡು “ಕೂಪಸ್ಥ ಮಂಡೂಕ”ದ ರೀತಿ ಬಾಳುವ ನಮಗೆ ಜಗದ್ವೈಶಾಲ್ಯದ ಮನೋಭಾವ ಹೇಗೆ ಬರಬೇಕು ಹೇಳಿ? ಇಂದು ಜಗತ್ತು ಇರುವುದೇ ಹಾಗೆ. ಒಬ್ಬರು ಹಾಗಾದರೆ, ಮತ್ತೊಬ್ಬರೂ ತಮ್ಮ ಪ್ರತಿಷ್ಠೆ ತೋರುವುದಕ್ಕೋ ಅಥವಾ ತಮ್ಮನ್ನು ಮತ್ತು ತಮ್ಮತನವನ್ನು ಕಾಪಾಡಿಕೊಳ್ಳುವುದಕ್ಕೋ, ಇವರೂ ಹಾಗಾಗುತ್ತಾರೆ. ಇದಕ್ಕೆ ಕೊನೆ ಎಲ್ಲಿ. ಆ ದೇವರೇ ಬಲ್ಲ. ಇಷ್ಟೆಲ್ಲಾ ವಿರೋಧ-ವೈವಿಧ್ಯತೆಗಳಲ್ಲಿ ಮನುಷ್ಯ ಒಂದು ವಿಚಾರ ಮರೆತು ಹೋಗಿದ್ದಾನೆ. ಎಲ್ಲ ಮನುಷ್ಯರೂ ಬದುಕಿರುವುದೇ ಉಸಿರಾಟದಿಂದ ಮತ್ತು ಆ ಉಸಿರು ಪರಮಚೇತನದ ಕರುಣೆಯಿಂದ ನಮಗೆ ಸಿಕ್ಕಿದೆ. ವಾಚಕರೆ, ನೋಡಿ ಒಂದು ಉಸಿರು ಒಳಗೆ ಹೋದದ್ದು ಹೊರಗೆ ಬರದಿದ್ದರೆ ಅಥವಾ ಹೊರಗೆ ಬಿಟ್ಟ ಉಸಿರು ಮತ್ತೆ ಒಳಗೆ ಹೋಗದಿದ್ದರೆ ನಮ್ಮ ಬದುಕಿಗೆ ಅಂತ್ಯ. ಇಷ್ಟು ದುರ್ಬಲ, ಸೂಕ್ಷ್ಮ, ನಾಜೂಕಾದದ್ದು (fragile) ನಮ್ಮ ಬದುಕು. ನಾವು ಎಷ್ಟು ದಿವಸ ಬದುಕಿರಬೇಕು ಎನ್ನುವುದು ಆ ಪರಮ ಶಕ್ತಿಯ ಇಚ್ಛೆಯ ಮೇಲೆ ನಿರ್ಭರವಾಗಿದೆ ಎಂಬುವುದು ಆಸ್ತಿಕರ ನಂಬಿಕೆ. ಇರಲಿ ಯಾವುದೋ ಒಂದು ಶಕ್ತಿಯ ಅಧೀನ ನಾವೆಲ್ಲಾ. ಹಾಗೆ ಅಷ್ಟು ನಾಜೂಕಾದ ಬದುಕನ್ನು ನಡೆಸುವ ನಾವು, ಈ ಕ್ಷಣ ಇದೆ-ಮತ್ತೊಂದು ಕ್ಷಣ ಇಲ್ಲ, ಎನ್ನುವಂಥಾ ಬದುಕಿಟ್ಟುಕೊಂಡು ಅಹಂಕಾರ ಪಡುವುದು ಮೂರ್ಖತನವಲ್ಲದೆ ಮತ್ತೇನು? ಬನ್ನಿ ನಾವು ಈ ಜಾತಿ, ಮತ, ದೇಶ, ಭಾಷೆ, ವರ್ಣಗಳ ಸಣ್ಣ ಸಣ್ಣ ವೃತ್ತಗಳ ಗೆರೆಗಳನ್ನು ಅಳಿಸಿ ಅಹಂಕಾರವನ್ನು ತೊರೆದು, ಪರಸ್ಪರ ಪ್ರೀತಿ, ಸದ್ಭಾವನೆ, ವಿಶ್ವಾಸಗಳನ್ನು ಬೆಳೆಸಿಕೊಂಡು ವಿಶ್ವಮಾನವರಾಗೋಣ. ಇಡೀ ವಿಶ್ವವನ್ನೇ ಎಲ್ಲ ಪ್ರಾಣಿಗಳೂ ಪ್ರಶಾಂತವಾಗಿ ಜೀವಿಸಲು ಒಂದು ಸುಂದರ ತಾಣವನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-61 )

ನಕ್ಷತ್ರ ಮಂಡಲದಿನಾಚೆಯಿಂದೊಂದು ದನಿ | ವಕ್ಷೋಗುಹಾಂತರದಿನೊಂದು ದನಿಯಿಂತಿ || ಸಾಕ್ಷಿದ್ವಯವು ನಿನ್ನಳೊಂದುಗೂಡಿದೊಡದೇ | ಪ್ರೇಕ್ಷೆ ಪರಬೊಮ್ಮನದು-ಮಂಕುತಿಮ್ಮ ||

ಪದಗಳ ವಿಸ್ತರಣೆ

ಮಂಡಲದಿನಾಚೆಯಿಂದೊಂದು=ಮಂಡಲದ+ಆಚೆಯಿಂದ+ಒಂದೊಂದು, ವಕ್ಷೋಗುಹಾಂತರದಿನೊಂದು=ವಕ್ಷ+ಗುಹಾಂತರದ+ಇನ್ನೊಂದು, ನಿನ್ನಳೊಂದುಗೂಡಿದೊಡದೇ=ನಿನ್ನೊಳು+ಒಂದುಗೂಡಿದೊಡೆ+ಅದೇ,

ಪದಗಳ ತಾತ್ಪರ್ಯ

ವಕ್ಷ=ಹೃದಯ, ಪ್ರೇಕ್ಷೆ=ಸಾಕ್ಷಾತ್ಕಾರ, ದರ್ಶನ, ಪರಬೊಮ್ಮನದು=ಪರಬ್ರಹ್ಮನದು

ಪದ್ಯದ ಪೂರ್ತಿ ವಿವರಣೆ

ನಕ್ಷತ್ರ ಮಂಡಲದ ಆಚೆಯಿಂದ ಒಂದು ದನಿ, ವಕ್ಷ ಗುಹಾಂತರದಿಂದ ಒಂದು ದನಿಯಂತೆ ಈ ಸಾಕ್ಷಿದ್ವಯವು ನಿನ್ನೊಳಗೆ ಒಂದುಗೂಡಿದೊಡೆ ಅದೇ ಪರಬ್ರಹ್ಮನ ದರ್ಶನವನ್ನು ನೀಡುತ್ತದೆ ಎಂಬುದೇ ಈ ಮುಕ್ತಕದ ಹೂರಣ. ಒಂದು ದೈವೀ ದನಿ ಮತ್ತೊಂದು ಅಂತರ್ದನಿ. ಎರಡರ ಸಮ್ಮಿಲನವೇ ಪರಮಾತ್ಮ ದರ್ಶನ. ನಾವು ಯಾವುದಾದರೊಂದು ದನಿಯನ್ನು ಕೇಳಬಹುದಲ್ಲವೆ. ಈ ಎರಡೂ ದನಿಗಳನ್ನು ಕೇಳುವುದು ಹೇಗೆ. ಅವುಗಳನ್ನು ಮೇಳೈಸುವುದು ಹೇಗೆ ಎಂಬುದೇ ಆಧ್ಯಾತ್ಮ ವಿದ್ಯೆಯ ಅಂತಿಮ ಪಾಠ. ಇಡೀ ಸೃಷ್ಟಿಯನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ ಅಸಾಧ್ಯವಲ್ಲ. ಹಾಗೆ ಕಲ್ಪಿಸಿಕೊಳ್ಳಲಾದರೆ, ಅದನ್ನು ಅಂತಃಚಕ್ಷುವಿನಿಂದ ನೋಡಲು ಸಾಧ್ಯವಾದರೆ ಮತ್ತು ಅದನ್ನು ನಮ್ಮ ಅಂತರಂಗದಲ್ಲಿ ಈ ಪಂಚಭೂತಗಳ, ಪಂಚ ಜ್ಞಾನೇಂದ್ರಿಯಗಳ, ಪಂಚ ಸ್ಪರ್ಶೇಂದ್ರಿಯಗಳ ಪ್ರಭಾವ ಮತ್ತು ಪರಿಧಿಯಿಂದ ಹೊರತುಪಡಿಸಿ ನೋಡಿದಾಗ ಆ ಬೃಹತ್ಚೇತನದ ಅದ್ಭುತ ಕಾರ್ಯದ ಅರಿವಾಗಿ, ನಾವು ಪರಮಾತ್ಮ ದರ್ಶನ ಮಾಡಿಕೊಳ್ಳಬಹುದು. ಇದನ್ನು ವಿವರಿಸುವುದು ಕಷ್ಟ. ನಾ ಹಿಂದೆ ಹೇಳಿದ ಹಾಗೆ ಇದು ಕೇವಲ ಅನುಭವ ವೇದ್ಯ ಇದನ್ನು ಇನ್ನೊಂದು ರೀತಿ ನೋಡಬಹುದು. ನಮಗೆ ಬಹಳಷ್ಟು ಜನರ ಬೋಧನೆಗಳು, ನಮ್ಮ ಓದಿನಿಂದ ಬಹಳಷ್ಟು ವಿಚಾರಗಳು, ತಿಳಿದವರಿಂದ, ಪಂಡಿತರಿಂದ, ಸಾಧು ಸಂತರಿಂದ, ಸಾಧನೆ ಮಾಡಿದವರಿಂದ ಕೇಳಿದ ವಿಚಾರಗಳಿಂದ ಸ್ವಲ್ಪಮಟ್ಟಿಗೆ ಹಲವು ವಿಚಾರಗಳು ನಮ್ಮ ಅರಿವಿಗೆ ಬರುತ್ತವೆ. ನಾವು ನಮ್ಮ ಅಂತರಂಗದಲ್ಲಿ ಅಂತರ್ಮುಖಿಗಳಾಗಿ ಅನುಭವಿಸುವ ಕೆಲವು ವಿಚಾರಗಳು ನಮ್ಮ ಅರಿವಿಗೆ ಬರುತ್ತವೆ. ಎರಡೂ ವಿಚಾರಗಳನ್ನು ಮಂಥನ ಮಾಡಿ ಸಾಧ್ಯಾಸಾಧ್ಯತೆಗಳನ್ನು, ಸಾಧಕ ಬಾಧಕಗಳನ್ನು, ವಿಚಾರದ ಒರೆಗೆಹಚ್ಚಿ ನಮಗೆ ಸರಿ ಕಂಡದ್ದನ್ನು ನಂಬಿ, ನಮ್ಮ ನಂಬಿಕೆಯನ್ನು ಗಟ್ಟಿ ಮಾಡಿಕೊಂಡು, ನಮ್ಮ ಅನುಭವವನ್ನು ದೀರ್ಘಕಾಲ ಅನುಭವಿಸುವಂತಾದರೆ ಆ ಪರಮಾತ್ಮನ ಸತ್ಯರೂಪದ ದರ್ಶನ ನಮಗೆ ಖಂಡಿತ ಆಗುತ್ತದೆ. ಇದನ್ನೇ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ “ಸಾಕ್ಷಿ ದ್ವಯವು” ಎಂಬ ಪದ ಪ್ರಯೋಗದಿಂದ ಉಲ್ಲೇಖಿಸಿದ್ದಾರೆ. ಇದನ್ನು ಅನುಭವಿಸಬೇಕು. ಅಂತರಂಗದಲ್ಲಿ ತಂದುಕೊಂಡು ಸಂತೋಷಿಸಬೇಕು, ಕಂಡುಕೊಳ್ಳಬೇಕು ಸ್ಥಿರಮಾಡಿಕೊಳ್ಳಬೇಕು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-62 )

ಭೌತವಿಜ್ಞಾನಿ ರವಿತಾರೆಧರೆಗಳ ಚಲನ | ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ | ಪ್ರೀತಿರೋಷಗಳನವನಳೆವನೇನ್? ಅವ್ಯಕ್ತ | ಚೇತನವನರಿವನೇಂ? ಮಂಕುತಿಮ್ಮ ||

ಪದಗಳ ವಿಸ್ತರಣೆ

ಪದಗಳ ತಾತ್ಪರ್ಯ

ಪದ್ಯದ ಪೂರ್ತಿ ವಿವರಣೆ

ಭೌತವಿಜ್ಞಾನಿಯು ಸೂರ್ಯ, ನಕ್ಷತ್ರ, ಭೂಮಿಗಳ ತಿರುಗುವ, ಸುಡುವ, ಪ್ರಭಾವ ಬೀರುವ ಶಕ್ತಿಗಳ ಗುಣಾಕಾರ ಭಾಗಾಕಾರ ಲೆಕ್ಕಾಚಾರವನ್ನು ಮಾಡುತ್ತಾನೆ. ಆದರೆ ಮಾನವ ಮನಸ್ಸುಗಳಲ್ಲಿ ಪರಸ್ಪರ ಪ್ರೀತಿ ದ್ವೇಷ ರೋಷಗಳ ಶಕ್ತಿಯನ್ನು ಅಳೆಯುತ್ತಾನೆಯೇ? ಸಕಲ ಸೃಷ್ಟಿಯನ್ನೂ ಒಂದು ಸೂತ್ರದಲ್ಲಿ ಹೆಣೆದು ಅದರ ಗತಿ ವಿಧಿಗಳನ್ನು ನಿಯಂತ್ರಿಸುವ ಆ ಬೃಹತ್ ಚೇತನವನ್ನು ಅವನಿಂದ ಅರಿಯಲು ಸಾಧ್ಯವೇ ಎಂದು ಕೇಳುತ್ತಾರೆ ಮಾನ್ಯಗುಂಡಪ್ಪನವರು. ವಿಜ್ಞಾನಿಗಳ ಸಂಶೋಧನೆಗಳಿಂದ ಅವರಿಗೆ ಈ ಸೃಷ್ಟಿಯ ರಹಸ್ಯಗಳು ಅರಿವಿಗೆ ಬಂದಿರುವುದು ಕೇವಲ ಅಣುಮಾತ್ರ. ಊಹೆಗೂ ನಿಲುಕದ ಈ ಸೃಷ್ಟಿಯನ್ನು ಅವರ ಕೈಲಿ ಅರಿಯಲು ಸಾಧ್ಯವೇ ಇಲ್ಲ. ಅಮಿತವಾದಂತಹ ಈ ಜಗತ್ತನ್ನು ಮಿತ ಬುದ್ಧಿಯಿಂದ ಅರಿಯಲು ಸಾಧ್ಯವೇ? ಏನೋ ಒಂದಿಷ್ಟು ಲೆಕ್ಕಾಚಾರ ಹಾಕಿ "ಇದು ಹೀಗಿರಬಹುದು ಅಥವಾ ಅದು ಹಾಗಿರಬಹುದು" ಎಂದು ಅಂದಾಜು ಮಾಡಬಹುದು. ಸ್ವಲ್ಪಮಟ್ಟಿಗೆ ಅರಿಯಲೂ ಸಾಧ್ಯ. ಆದರೆ ಇಂದು ಇವರುಗಳು ಕಂಡುಕೊಂಡಂತಹ ವಿಚಾರಗಳು, ಎಂದಿಗೂ ಹೀಗೇ ಇರುವುದಿಲ್ಲ. ಬದಲಾಗುತ್ತಾ ಇರುವ ಈ ಜಗತ್ತಿನ ಪರಿಯನ್ನು ನಿಖರವಾಗಿ ಹೇಳಲು ಸಾಧ್ಯವೇ ಇಲ್ಲ, ಕೇವಲ ಊಹಿಸಬಹುದು. "ಹೀಗಿರಬಹುದು ಅಥವಾ ಹಾಗಿರಬಹುದು" ಎಂದು ಕಲ್ಪಿಸಿಕೊಳ್ಳಬಹುದು ಮತ್ತು ಕಲ್ಪಿಸಿದ್ದನ್ನು ಸಿದ್ಧಾಂತವನ್ನಾಗಿ ಪ್ರತಿಪಾದಿಸಬಹುದು. ಆದರೆ ಕೆಲವು ವರ್ಷಗಳ ಬಳಿಕ ಆ ಸಿದ್ಧಾಂತಗಳು ಸತ್ಯಕ್ಕೆ ದೂರವೆನ್ನುವುದನ್ನು ಮತ್ತಾರೋ ದೃಢಪಡಿಸುತ್ತಾರೆ. ಹಾಗಾಗಿ ವಿಜ್ಞಾನಿಗಳಿಂದ ಸೃಷ್ಟಿಯ ರಹಸ್ಯವನ್ನು, ಅವರ ಗುಣಾಕಾರ,ಭಾಗಾಕಾರಗಳ, ಲೆಕ್ಕಾಚಾರದಿಂದ ಅರಿಯಲು ಸಾಧ್ಯವಿಲ್ಲ ಎನ್ನುವುದು ಮಾನ್ಯ ಗುಂಡಪ್ಪನವರ ಮತ ಮತ್ತು ಸತ್ಯವು ಕೂಡ. ಸೂರ್ಯ, ನಕ್ಷತ್ರ, ಭೂಮಿಗಳ ತಿರುಗುವ, ಸುಡುವ, ಪ್ರಭಾವ ಬೀರುವ ಶಕ್ತಿಗಳನ್ನು ಮತ್ತು ಅದರ ಲೆಕ್ಕಾಚಾರವನ್ನುಈ ಭೌತ ವಿಜ್ಞಾನಿಗಳು ಅಲ್ಪ ಸ್ವಲ್ಪ ಹಾಕಿಬಿಡಬಹುದು. ಆದರೆ ಮಾನವನ ಮನಸ್ಸಿನಲ್ಲಿ ಇರುವ ಪ್ರೀತಿ ಪ್ರೇಮಕೋಪ ದ್ವೇಷದ ಭಾವಗಳ ಸಂವೇದನೆಯ ಒತ್ತಡ, ವೇಗದ ಲೆಕ್ಕಾಚಾರವನ್ನು ಯಾರಿಂದಲೂ ಹಾಕಲು ಸಾಧ್ಯವಿಲ್ಲವೆನ್ನುತ್ತಾರೆ, ಮಾನ್ಯ ಗುಂಡಪ್ಪನವರು. ಹೌದು ಮಾನವನ ಮನಸ್ಸೂ ಸಹ ಈ ಸೃಷ್ಟಿಯಷ್ಟೇ ಅಗಾಧ ಮತ್ತು ಆಳ. ವೇದಾಂತದಲ್ಲಿ ಅದನ್ನು ಬಹಳ ಆಳವಾದದ್ದು, ನಿಗೂಢವಾದದ್ದು ಊಹೆಗೆ ನಿಲುಕದ್ದು ಎನ್ನುವ ಅರ್ಥದಲ್ಲಿ “ಗುಹ್ಯ” ಎನ್ನುತ್ತಾರೆ. ಒಬ್ಬರ ಮನಸ್ಸಿನ ಆಳವನ್ನು ಅರಿಯುವುದು ಸಾಧ್ಯವಿಲ್ಲ. ಮೇಲಿನ ರೂಪವೇ ಬೇರೆ, ಆಂತರ್ಯದ ಚಿತ್ರವೇ ಬೇರೆ. ಇದನ್ನೂ ಸಹ ವಿಜ್ಞಾನಿಗಳು ಅರಿಯುವಲ್ಲಿ ಅಸಫಲರು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು. ಹೀಗೆ ಯಾವುದನ್ನೂ ನಿಖರವಾಗಿ ಸಂಪೂರ್ಣವಾಗಿ ದೃಢಪಡಿಸಲಾಗದ ವೈಜ್ಞಾನಿಕ ಸಿದ್ಧಾಂತಗಳು, ಇನ್ನು ಇವೆಲ್ಲವನ್ನೂ ಸೃಜಿಸಿ, ಅವುಗಳ ಸೂತ್ರವನ್ನು ಕೈಲಿಟ್ಟುಕೊಂಡು, ಆಡಿಸುತ್ತಿರುವ ಆ ಬೃಹತ್ ಚೇತನ ರೂಪವಾದ ಪರಮಾತ್ಮನನ್ನು ಪರಮ ಚೇತನವನ್ನು ವಿಜ್ಞಾನಿಗಳಿಂದ ಅರಿಯಲು ಸಾಧ್ಯವೇ? ವೈಜ್ಞಾನಿಕ ಪ್ರಯೋಗಗಳ ಪರಿಧಿಯೊಳಗೆ ಇವುಗಳನ್ನು ತರುವುದು ಸಾಧ್ಯವೇ ಇಲ್ಲವೆಂದು ಮಾನ್ಯ ಗುಂಡಪ್ಪನವರ ಪ್ರತಿಪಾದನೆ ಈ ಮುಕ್ತಕದಲ್ಲಿ. ನಾವು ಸಹ ಇವುಗಳನ್ನೆಲ್ಲ ಪ್ರಮಾಣಿಸಿ ನೋಡುವ ಅರೆ ವೈಜ್ಞಾನಿಕತೆಯ ಹಂಗಿಗೆ ಬೀಳದೆ, ಕೇವಲ ಅನುಭವಕ್ಕೆ ತಂದುಕೊಳ್ಳಬಹುದು ಅಥವಾ ತಂದುಕೊಳ್ಳುವ ಪ್ರಯತ್ನವನ್ನು ಮಾಡಬಹುದು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-63 )

ನರಭಾಷೆ ಬಣ್ಣಿಪುದೆ ಪರತತ್ವರೂಪವನು? | ಅರಿಯದದು ನಮ್ಮೆದೆಯ ಭಾವಗಳನೊರೆಯೆ || ಪರಮಾನುಭವಗಳುಲಿಯನುಭವಿಗಳೊಳಕಿವಿಗೆ | ಒರಟುಯಾನವು ಭಾಷೆ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಅರಿಯದದು=ಅರಿಯದು+ಅದು, ನಮ್ಮೆದೆಯ=ನಮ್ಮ+ಎದೆಯ, ಭಾವಗಳನೊರೆಯೆ=ಭಾವಗಳನು+ಒರೆಯೆ, ಪರಮಾನುಭವಗಳುಲಿಯನುಭವಿಗಳೊಳಕಿವಿಗೆ=ಪರಮ+ಅನುಭವಗಳ+ಉಲಿಯನು+ಅನುಭವಿಗಳ+ಒಳ+ಕಿವಿಗೆ,

ಪದಗಳ ತಾತ್ಪರ್ಯ

ನರಭಾಷೆ=ಮಾನವರ ಭಾಷೆ, ಬಣ್ಣಿಪುದೆ=ವರ್ಣಿಸುವುದೆ, ಪರತತ್ವ=ಪರಮಾತ್ಮ ತತ್ವ, ಪರಮಾನುಭವಗಳಉಲಿ=ಪರಮಾತ್ಮನ ಅನುಭವದ ಭಾಷೆ, ಅನುಭವಿಗಳ=ಸಾಧಕರ, ಒಳಕಿವಿಗೆ=ಅಂತರಂಗದ ಭಾವಕ್ಕೆ.

ಪದ್ಯದ ಪೂರ್ತಿ ವಿವರಣೆ

ನಾವಾಡುವ ನರಭಾಷೆಗೆ ಒಂದು ಮಿತಿ ಇದೆ. ಈ ಭಾಷೆಯಲ್ಲಿ ಆ ಪರಮಾತ್ಮ ಸ್ವರೂಪವನ್ನು ಬಣ್ಣಿಸಲು ಸಾಧ್ಯವಿಲ್ಲ. ನಮ್ಮ ಅಂತರಂಗದ ಭಾವವನ್ನು ಹೇಳಲು ಈ ಭಾಷೆ ಸಾಲದು. ಪರತತ್ವದ ಅನುಭವದ ಮಾತುಗಳು ಕೇವಲ ನಮ್ಮ ಒಳಗಿವಿಗೆ ಕೇಳಿಸುತ್ತದೆ. ಮಾನವರ ಭಾಷೆಯಲ್ಲಿ ವಿವರಿಸುವುದು ಒಂದು ನೇರವಲ್ಲದ ಸುಗಮವಲ್ಲದ ಪ್ರಯಾಣದಂತೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ನಮ್ಮಲ್ಲಿ ಆಚಾರ್ಯತ್ರಯರಾದ ಶಂಕರರು, ರಾಮಾನುಜರು ಮತ್ತು ಮಧ್ವರು ಭಗವದ್ಗೀತೆಗೆ, ಬ್ರ್ರಹ್ಮಸೂತ್ರಗಳಿಗೆ ಮತ್ತು ವೇದಗಳಿಗೆ ಪರಿಭಾಷೆಯನ್ನು ಬರೆದಿದ್ದಾರೆ. ಅವುಗಳನ್ನು “ಭಾಷ್ಯ” ಎನ್ನುತ್ತಾರೆ. ಅಂದರೆ ಭಾಷೆಯಲ್ಲಿ ವಿವರಿಸಿದ ವಿಷಯಗಳು ಎಂದು ಅರ್ಥ. ಅವು ಅವರುಗಳು ತಮ್ಮ ಅನುಭವದಿಂದ ಮನಗಂಡ ವಿಚಾರಗಳು. ಅವರ ಅನುಯಾಯಿಗಳು ಅವುಗಳನ್ನೇ ಅನುಸರಿಸುತ್ತಾರೆ. “ಶಂಕರರು ಹೀಗೆ ಹೇಳಿದ್ದಾರೆ, ರಾಮಾನುಜರು ಹಾಗೆ ಹೇಳಿದ್ದಾರೆ, ನೋಡಿ ಮಧ್ವರು ಭಿನ್ನವಾಗಿ ವ್ಯಾಖ್ಯಾನ ಮಾಡಿದ್ದಾರೆ” ಎಂದು ಅವರೇನು ಹೇಳಿದರೋ ಮತ್ತು ಇವರೇನು ಅರ್ಥಮಾಡಿಕೊಂಡರೋ ಅದು ಅವರವರಿಗೇ ಗೊತ್ತು. ಅವರ ಅನುಭವ ಇವರ ಅನುಭವವಾಗಲು ಸಾಧ್ಯವೇ ಇಲ್ಲ. ಏಕೆಂದರೆ ಕೆಲವು ವಿಷಯಗಳು ಕೇವಲ ಅನುಭವ ವೇದ್ಯ. “ನನಗೆ ಹೇಳಲು ಶಬ್ದಗಳೇ ಸಿಗುತ್ತಿಲ್ಲ” ಎಂದು ಕೆಲವರು ಹಲವು ಬಾರಿ ಹೇಳಿರುವುದನ್ನು ಕೇಳಿರಬಹುದು. ಹೌದು, ನಮ್ಮ ಪ್ರೀತಿ ಪ್ರೇಮ ಕರುಣೆ, ಕೋಪ, ದ್ವೇಷ ಇಂಥಹ ಭಾವನೆಗಳನ್ನು ವಿವರಿಸಲು ನಮ್ಮಲ್ಲಿ ಶಬ್ಧಗಳಿರುವುದಿಲ್ಲ. ಏಕೆಂದರೆ ಮನಸ್ಸಿನ ಭಾವ ಕೇವಲ ಭಾವವಾಗಿರುತ್ತೆ. ಹಾಗೆಯೇ ಜಗತ್ತಿನ ಸೂತ್ರವನ್ನೆಲ್ಲ ತನ್ನ ಕೈಯಲ್ಲಿಟ್ಟುಕೊಂಡಿರುವ ಆ ಬೃಹತ್ ಚೇತನವನ್ನು ನಮ್ಮ ಸಾಧಾರಣ ಭಾಷೆಯಿಂದ ವಿವರಿಸಲುಸಾಧ್ಯವಿಲ್ಲವೆಂಬುದೇ ಈ ಮುಕ್ತಕದ ಹೂರಣ. ಇದನ್ನೇ “ಅವರವರ ಭಾವಕ್ಕೆ......... ನರರೇನು ಭಾವಿಸುವರದರಂತೆ ಕಾಣುವನು” ಎಂದು ನಿಜಗುಣ ಶಿವಯೋಗಿಗಳು ಹೇಳಿಲ್ಲವೇ. ಆ ಪರಮಾತ್ಮನನ್ನು ಅನುಭವಿಸುವ ಭಾವ ಮತ್ತು ಭಾವನೆಯನ್ನು ನಮ್ಮ ಭಾಷೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ಭಾಷೆಗೆ ಒಂದು ಮಿತಿ ಇದೆ. ಭಾವಕ್ಕೆ ಒಂದು ಮಿತಿ ಇದೆ. ಆದರೆ ಭಾವದ ಮಿತಿ ಭಾಷೆಯ ಮಿತಿಗಿಂತ ಬಹಳ ವಿಶಾಲ ಮತ್ತು ಅಗಾಧ. ಹಾಗೇನಾದರೂ ಆ ಪರಮಾತ್ಮಾನುಭವವನ್ನು ಭಾಷೆಯಲ್ಲಿ ವಿವರಿಸಲು ಪ್ರಯತ್ನಪಟ್ಟರೆ, ಒಂದು ಹಳ್ಳ ತಿಟ್ಟುಗಳು, ಕಲ್ಲು ಮುಳ್ಳುಗಳಿಂದ ತುಂಬಿದ ಅಂಕುಡೊಂಕಾದ ರಸ್ತೆಯ ಮೇಲೆ ಗಾಡಿ ಓಡಿಸಿದಂತಾ ಒರಟು ಪ್ರಯಾಣವಾಗುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ಹಾಗಾಗಿ ವಾಚಕ ಮಹಾಶಯರೇ ಆ ಪರಮ ಚೇತನವನ್ನು ಮತ್ತು ಅದರ ಲೀಲೆಯನ್ನು ಕೇವಲ ಅನುಭವಿಸಬೇಕು. ನಮ್ಮ ಅನುಭವ ನಮ್ಮದೇ ಆಗಿರಬೇಕು ಮತ್ತು ಎಲ್ಲರ ಅನುಭವವು ಅವರವರದೇ ಆಗಿರಬೇಕು. ನಮ್ಮ ಅನುಭವದ ದನಿ ನಮ್ಮ ಒಳಗಿವಿಗಳಿಗೆ ಕೇಳಿಸಬೇಕು. ಭಾಷೆಯಿಲ್ಲದ, ಶಬ್ದವಿಲ್ಲದ ಒಂದು ಶಾಂತ ಸುಂದರ ಅನುಭೂತಿ ನಮ್ಮಲ್ಲಿ ಆಗಬೇಕು. ಅಂತಹ ಅನುಭವವನ್ನು ಪಡೆಯುವ ವಿಧಾನವನ್ನು ಹಲವು ಸಜ್ಜನರಿಂದ ಅರಿತುಕೊಳ್ಳುವ. ಆದರೆ ನಮ್ಮ ಅನುಭವವನ್ನು ನಾವೇ ಪಡೆದುಕೊಳ್ಳಬೇಕು. ಪಡೆದುಕೊಳ್ಳುವ ಪ್ರಯತ್ನವನ್ನು ನಿರಂತರ ಮಾಡಿದಾಗ ನಮಗದರ ಅನುಭವ ಆಗಬಹುದು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-64 )

ಚಿತ್ತದನುಭವ ಭಾವ ಸಂಭಾವನೆಗಳೆಲ್ಲ | ಬತ್ತವದನು ವಿಚಾರಯುಕ್ತಿಗಳು ಕುಟ್ಟೆ || ತತ್ವತಂಡುಲ ದೊರೆಗುಮುದು ವಿವೇಚಿತತತ್ವ | ನಿತ್ಯ ಭೋಜನ ನಮಗೆ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಚಿತ್ತದನುಭವ=ಚಿತ್ತದ+ಅನುಭವ, ಸಂಭಾವನೆಗಳೆಲ್ಲ=ಸಂಭಾವನೆಗಳು+ಎಲ್ಲ, ಬತ್ತವದನು=ಬತ್ತವು+ಅದನು, ವಿಚಾರಯುಕ್ತಿಗಳು=ವಿಚಾರ+ಯುಕ್ತಿಗಳು,

ಪದಗಳ ತಾತ್ಪರ್ಯ

ಚಿತ್ತ=ಮನಸ್ಸು, ಸಂಭಾವನೆ=ಆಲೋಚನೆ, ಕುಟ್ಟೆ=ಕುಟ್ಟಿದರೆ, ತಂಡುಲ=ಅಕ್ಕಿ, ದೊರೆಗುಂ=ದೊರೆತರೆ, ವಿವೇಚಿತ=ವಿವೇಚನೆಯ ಮೂಸೆಯಿಂದ ಹೊರಬಂದ, ನಿತ್ಯ ಭೋಜನ=ಮನಸ್ಸಿಗೆ, ಬುದ್ಧಿಗೆ ನಿತ್ಯದ ಆಹಾರ.

ಪದ್ಯದ ಪೂರ್ತಿ ವಿವರಣೆ

ನಮ್ಮ ಮನಸ್ಸಿನಲ್ಲಿ ಬರುವ ಭಾವ, ಅನುಭವ ಮತ್ತು ಆಲೋಚನೆಗಳೆಲ್ಲ ಭತ್ತದಂತೆ. ಅದನ್ನು ಯುಕ್ತಿ ಮತ್ತು ವಿಚಾರವೆಂಬ ಒನಕೆಗಳಿಂದ ಕುಟ್ಟಿದರೆ ತತ್ವವೆಂಬ ಅಕ್ಕಿ ನಮಗೆ ದೊರೆಯುವುದು. ಹಾಗೆ ದೊರೆತ ಅಕ್ಕಿ ರೂಪದ ತತ್ವವೇ ನಮ್ಮ ಬೌದ್ಧಿಕತೆಗೆ ಆಹಾರ ಎಂಬುದೇ ಈ ಮುಕ್ತಕದ ತಾತ್ಪರ್ಯ. ನಮ್ಮ ಮನಸ್ಸಿನಲ್ಲಿ ನಡೆಯುವ ವಿಚಾರ ಮಂಥನಕ್ಕೆ ಒತ್ತು ಕೊಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ನಮಗೆ ಮನಸ್ಸು ಉಂಟು. ಬುದ್ಧಿಯೂ ಉಂಟು. ವಿಚಾರ ಮಾಡುವ ಶಕ್ತಿಯೂ ಉಂಟು. ಅನ್ಯ ಪ್ರಾಣಿಗಳಿಗೂ ಇವೆಲ್ಲವು ಇದೆ. ಆದರೆ ಅವುಗಳ ಆ ಶಕ್ತಿಗಳಿಗೆ ಒಂದು ಮಿತಿ ಇದೆ. ಅಮಿತವಾದ ಬುದ್ಧಿ ಮತ್ತು ಅಗಾಧ ವಿಚಾರ ಶಕ್ತಿಯನ್ನು ಹೊಂದಿರುವ ಈ ಮನುಷ್ಯ ಪ್ರಾಣಿ ಹಲ ದಿಕ್ಕಿನಲ್ಲಿ ವಿಚಾರ ಮಾಡುವ ಕ್ಷಮತೆಯನ್ನು ಹೊಂದಿದ್ದಾನೆ. ನಮ್ಮ ಮನಸ್ಸುಗಳಲ್ಲಿ ಬರುವ ಅನುಭವ ಜನ್ಯವಾದ ಭಾವನೆಗಳು ಮತ್ತು ಆ ಭಾವನೆಗಳಿಗನುಗುಣವಾಗಿ ಬರುವ ಆಲೋಚನೆಗಳನ್ನು ವಿಚಾರ ಶಕ್ತಿಯ ಮಂಥನಕ್ಕೆ ಒಳಪಡಿಸಬೇಕು. ಭತ್ತವನ್ನು ಕುಟ್ಟಿದ ಹಾಗೋ, ಮೊಸರನ್ನು ಕಡೆದ ಹಾಗೋ ಮಾಡಿದರೆ ಅದರಿಂದ ನಮಗೆ ಜ್ಞಾನ ಉಂಟಾಗುತ್ತದೆ. ಸಾಧ್ಯಾಸಾಧ್ಯತೆಗಳ, ಯುಕ್ತಾಯುಕ್ತತೆಗಳ, ಮಥನವಾಗಿ ಅನವಶ್ಯಕವಾದ ವಿಷಯಗಳನ್ನು ದೂರ ತಳ್ಳಿ ನಮಗೆ ಏನು ಒಳ್ಳೆಯದೋ ಅಥವಾ ಒಳ್ಳೆಯದನ್ನು ಮಾಡಲು ಯಾವುದು ಅವಶ್ಯವೋ ಅದನ್ನು ಮಾತ್ರ ಉಳಿಸಿಕೊಳ್ಳಬಹುದು. ಹಾಗೆ ಉಳಿಸಿಕೊಂಡರೆ ಅದು ಜ್ಞಾನ. ಆದರೆ ಇಂದಿನ ಪರಿಸ್ಥಿತಿ ಅದಲ್ಲ, ಸೆಳೆತಗಳು ಬಹಳ. ಮಾನಸಿಕ ವೈಕಲ್ಯಕ್ಕೆ ಹಲವಾರು ದಾರಿಗಳು. ದೂರದರ್ಶನ, ವೃತ್ತಪತ್ರಿಕೆಗಳು, ಅಂತರ್ಜಾಲ, ಅಂತರ್ಜಾಲದಲ್ಲಿ ಈ ಮುಖ ಪುಸ್ತಕದಂತ ಅಂಗಗಳು, ಇನ್ನು ವಾಹನಗಳು, ಊಟದ ಮಳಿಗೆಗಳು, ಸುತ್ತಾಟ ಭೋಜನ ಕೂಟಗಳು, ವೃತ್ತಿ, ಇವುಗಳ ಮಧ್ಯೆ ಯೋಚನೆ ಅಥವಾ ಆಲೋಚನೆ ಮಾಡಲು ನಮಗೆ ವ್ಯವಧಾನವೇ ಇಲ್ಲ. ನಾವು ಬಹಳ ವ್ಯಸ್ತರು. ನಮಗೆ ಪುಸ್ತಕ ಓದಲು ವ್ಯವಧಾನವಿಲ್ಲ. ಅರಿತವರೊಡನೆ ವಿಚಾರ ವಿನಿಮಯ ಮಾಡಲು ಆಸ್ಥೆ ಇಲ್ಲ, ಯಾರಾದರೂ ಹೇಳಿದರೆ ಕೇಳುವ ಮನೋಭಾವವು ಇಲ್ಲ, ಹೆಚ್ಚಿನ ವಿಚಾರಗಳನ್ನು ಅರಿತುಕೊಳ್ಳುವ ಮನಸ್ತತ್ವವು ಇಲ್ಲ. ಹಾಗಿರಬೇಕಾದರೆ ಇನ್ನು ಭಾವವು ಇಲ್ಲ, ಅನುಭವವು ಇಲ್ಲ, ವಿಚಾರವು ಇಲ್ಲ. ಎಲ್ಲವು ಮೇಲೆ ಮೇಲೆ, ತಳುಕು ಹೆಚ್ಚು. ಗಾಢವಾದ ಬಂಧನಗಳಿಲ್ಲ, ಸಂಬಂಧಗಳಿಲ್ಲ. ಭಾವನೆಗಳಿಲ್ಲ, ಆಳವಾದ ವಿಚಾರಗಳಿಲ್ಲ. ಅನುಭವಗಳನ್ನು ಭಾವಿಸುವುದಕ್ಕಾಗಲೀ, ಅನುಭವಿಸುವುದಕ್ಕಾಗಲೀ ಸಮಯವೇ ಇಲ್ಲದಾಗ, ವಿಚಾರ ಬೆಳೆಯಲು ಹೇಗೆ ಸಾಧ್ಯ ಹೇಳಿ? ವಿಚಾರ ಬೆಳೆಯದೆ ಸತ್ಯ ದರ್ಶನವಾಗುವುದು ಹೇಗೆ ಹೇಳಿ? ವಿಪರ್ಯಾವೆಂದರೆ ಇಂದು ನಾವು ಯಾವುದನ್ನು ತೊರೆಯಬೇಕೋ ಅದಕ್ಕೆ ಅಂಟಿಕೊಂಡು ಮತ್ತು ಯಾವುದಕ್ಕೆ ಅಂಟಿಕೊಳ್ಳಬೇಕೋ ಅದರಿಂದ ದೂರವಾಗಿ ವೈಚಾರಿಕತೆಯ ಬಡತನದಿಂದ ಬಳಲುತ್ತಿದ್ದೇವೆ. (poverty of intellectualism). “ಏನು ನಮಗೆ ವಿಚಾರ ಶಕ್ತಿ ಇಲ್ಲವೇ?” ಎಂದು ನೀವು ಕೇಳಿದರೆ, ಖಂಡಿತ ಇದೆ. ಆದರೆ ಮೇಲೆ ಹೇಳಿದ ಕಾರಣಗಳಿಗೆ ಕೆಲವರು ವಿಚಾರ ಮಾಡುವುದಿಲ್ಲ. ಇನ್ನು ಕೆಲವರು ವಿಚಾರ ಮಾಡುತ್ತಾರೆ ಆದರೆ ತಮ್ಮ ಕುತರ್ಕದಿಂದ ಎಲ್ಲವನ್ನೂ ಪರಿಕಿಸುವ, ವಿಡಂಬನಾತ್ಮಕವಾಗಿ ನೋಡುವ, ಕುಹಕವಾಡುವ ಮತ್ತು ಅವಹೇಳನ ಮಾಡುವ ಕೆಲಸವನ್ನು ಮಾಡುತ್ತಾ, ಶುದ್ಧ ತತ್ವವನ್ನು, ಸತ್ವವನ್ನು ಅರಿಯುವ ದಿಶೆಯಿಂದ ವಿಮುಖರಾಗಿದ್ದಾರೆ. ಇಂತಹವರು ಸತ್ಯವಾಗಿ ಯಾರಾದರೂ ವಿಚಾರವನ್ನು ಮಾಡಬೇಕೆಂದು ನಿಶ್ಚಯಿಸಿದ್ದರೆ, ಅವರನ್ನೂ ವಿಮುಖರನ್ನಾಗಿಸಲು ಪ್ರಯತ್ನಿಸುತ್ತಾರೆ. ಹಾಗಾಗಿ ವಾಚಕರೆ ನಮಗೆ ಸತ್ಯವಾಗಿಯೂ ಸತ್ಯದ ಮತ್ತು ತತ್ವದ ದರ್ಶನವಾಗಬೇಕಾದರೆ, ನಾವು ವಿಚಾರವಂತರಾಗಬೇಕು. ವಿಚಾರವಾದಿಗಳಾಗಬಾರದು. ನಮ್ಮ ಅನುಭವಗಳನ್ನು ಭಾವಿಸುತ್ತಾ ಅದನ್ನು ವಿಚಾರದ ಒರೆಗೆ ಹಚ್ಚಿ ನಮ್ಮದೇ ಆದಂತಹ, ನಮ್ಮ ಆಂತರ್ಯದಲ್ಲಿ ಸ್ಫುರಿಸಿದಂತಹ ಸತ್ಯವನ್ನು ತತ್ವವನ್ನು ಕಂಡುಕೊಳ್ಳಬೇಕು. ಅದಕ್ಕೆ ಪೂರ್ವಾಗ್ರಹಗಳನ್ನು ಬಿಟ್ಟು, ಅಂತರ್ಮುಖಿಗಳಾದರೆ ನಮಗೆ ಎಲ್ಲವು ನಿಚ್ಚಳವಾಗಿ ತೋರುವುದು. ಅಂತಹ ಪ್ರಯತ್ನವನ್ನು ನಾವು ಮಾಡೋಣವೆ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-65 )

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ | ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ || ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ | ಶಾಸ್ತ್ರತನದಿಂದಲ್ಲ-ಮಂಕುತಿಮ್ಮ ||

ಪದಗಳ ವಿಸ್ತರಣೆ

ದೊರೆತರಿವು=ದೊರೆತ+ಅರಿವು, ಬೆಳೆದರಿವು=ಬೆಳೆದ ಅರಿವು, ಸಾಕ್ಷಾತ್ಕಾರವಂತರೀಕ್ಷಣೆಯಿಂದ=ಸಾಕ್ಷಾತ್ಕಾರ+ಅಂತರ+ವೀಕ್ಷಣೆಯಿಂದ,

ಪದಗಳ ತಾತ್ಪರ್ಯ

ಶಾಸ್ತ್ರತನದಿಂದಲ್ಲ=ಶಾಸ್ತ್ರತನದಿಂದ+ಅಲ್ಲ, ಮಸ್ತಕದಿ=ತಲೆಯಲ್ಲಿ, ಚಿತ್ತದೊಳು=ಅಂತರಂಗದಲ್ಲಿ, ತರು=ಗಿಡ.

ಪದ್ಯದ ಪೂರ್ತಿ ವಿವರಣೆ

ಪುಸ್ತಕಗಳನ್ನು ಓದಿ ಪಡೆದುಕೊಂಡ ಪಾಂಡಿತ್ಯ ತಲೆಯ ಮೇಲೆ ತಂದಿಟ್ಟುಕೊಂಡಂತ ಕಿರೀಟದಲ್ಲಿನ ಮಣಿಯಂತೆ. ಆದರೆ ನಮ್ಮ ಅನುಭವಗಳನ್ನು ವಿಚಾರದ ಒರೆಗೆ ಹಚ್ಚಿ ನಮ್ಮ ಚಿತ್ತದಲ್ಲಿ ಸ್ಫುರಿಸಿದ ಜ್ಞಾನ, ತನ್ನ ಸ್ವಾಭಾವಿಕ ಗುಣಕ್ಕೆ, ಮಣ್ಣಿನ ಸಾರ, ಪರಿಸರದ ಪ್ರಭಾವದಿಂದ ತನ್ನೊಳಗಿಂದಲೇ ವಿಕಸಿತವಾಗುವ ಒಂದು ಗಿಡದ “ಪುಷ್ಪದಂತೆ” ಎನ್ನುತ್ತಾರೆ, ಮಾನ್ಯ ಗುಂಡಪ್ಪನವರು. ಪುಸ್ತಕಗಳನ್ನು ಓದಿ, ಬಾಯಿಪಾಠ ಮಾಡಿ ಅಥವಾ ನೆನಪಿನಲ್ಲಿಟ್ಟುಕೊಂಡು, ಸಮಯ ಸಂದರ್ಭ ಬಂದಾಗ ಅದನ್ನು ಉಪಯೋಗಿಸುವುದು ಜಾಣತನ. ಆದರೆ ಅದು ಜ್ಞಾನವಲ್ಲ. ಅದು ಕೇವಲ ತೋರಿಕೆಗೆ ಅಥವಾ ಹೊಟ್ಟೆಪಾಡಿಗೆ. ಹೇಗೆ ರಾಜ ತನ್ನ ರಾಜತನವನ್ನು ಬಿಂಬಿಸಲು ಒಂದು ಕಿರೀಟವನ್ನು ತಂದು ಇಟ್ಟುಕೊಳ್ಳುತ್ತಾನೆಯೋ ಹಾಗೆ. ಅದು ಅವಿದ್ಯೆ. ಕೇವಲ ಕಲಿತ ವಿದ್ಯೆ. ನಮ್ಮಲ್ಲಿ ಒಂದು ಗಾದೆ ಇದೆ. “ಕಟ್ಟಿಕೊಟ್ಟ ಬುತ್ತಿ, ಹೇಳ್ಕೆÆಟ್ಟ ಬುದ್ಧಿ ಎಷ್ಟು ದಿವಸಾ” ಅಂತ. ಹಾಗಾಗಿ ತಂದಿಟ್ಟುಕೊಂಡ ಅರಿವು ನಮ್ಮದಾಗಲು ಸಾಧ್ಯವಿಲ್ಲ ಅಥವಾ ಸದಾ ನಮ್ಮೊಡನಿರಲು ಸಾಧ್ಯವಿಲ್ಲ. ಶಾಸ್ತ್ರಗಳನ್ನು ಓದಿ ಪಾಂಡಿತ್ಯವನ್ನು ಪಡೆದು ಕೇವಲ ಪಾಂಡಿತ್ಯವನ್ನು ಪ್ರದರ್ಶಿಸುವುದಕ್ಕೂ, ಅನುಭವಿಸಿ ಮಥಿಸಿ ಅಂತರಂಗದಲ್ಲಿ ಪಡೆದುಕೊಂಡ ಜ್ಞಾನಕ್ಕೂ ಬಹಳ ಅಂತರವುಂಟು ಎನ್ನುವುದು ಈ ಮುಕ್ತಕದ ಹೂರಣ. ಆದರೆ ವಸ್ತು ವಿಷಯವನ್ನು ಕುರಿತು ನಮ್ಮ ಮನಸ್ಸು ಬುದ್ಧಿಗಳ ಆಂತರ್ಯದಲ್ಲಿ ವಿಚಾರ ಮಂಥನದಿಂದ ಉಂಟಾಗುವ ಜ್ಞಾನ ನಮ್ಮಲ್ಲಿ ಸ್ಥಿರವಾಗಿ ನಮ್ಮ ಸ್ವಭಾವವೇ ಆಗಿ ನಿಲ್ಲುತ್ತದೆ. ಅದು ಒಂದು ಗಿಡ ತನ್ನ ಒಡಲಿನಿಂದ ತನ್ನ ಗುಣಗಳನ್ನು, ತಾ ನಿಂತ ಭೂಮಿಯ ಸಹಾಯದಿಂದ ಆ ಭೂಮಿಯೊಳಗಿನ ರಸಗಳ ಸಹಾಯದಿಂದ ವಿಕಸಿತಗೊಳಿಸಿ ತಾನೇ ಮೊಗ್ಗಾಗಿ ಅರಳಿ ಹೂವಾಗಿ ಸೊಗಸನೀಯುವಂತೆ. ನೋಡಿ ಎರಡು ಭಿನ್ನವಾದ ಗಿಡಗಳನ್ನು ಪಕ್ಕಪಕ್ಕದಲ್ಲೆ ಹಾಕಿದರೂ, ಅವು ಒಂದೇ ನೆಲ, ಒಂದೇ ಗಾಳಿ, ಒಂದೇ ನೀರು, ಒಂದೇ ಪರಿಸರವನ್ನು ಹಂಚಿಕೊಂಡರೂ ಅರಳಿಸುವ ಹೂವು ಬೇರೆ ಬೇರೆ. ಅದರ ರೂಪ ಬಣ್ಣ ಸುವಾಸನೆಯೇ ಬೇರೆ ಬೇರೆ. ಏಕೆಂದರೆ ಅದು ಅಂತರಂಗದಲ್ಲಿ ಮಥಿಸಿ ತನ್ನದಾಗಿಸಿಕೊಂಡು ಅರಳಿಸಿದ ಹೂವಾದ್ದರಿಂದ. ವಾಚಕರೆ ತಂದೆ ತಾಯಿಯರ ಮಮತೆಯ ಪರಿಯಲ್ಲಿ, ದತ್ತು ತೆಗೆದುಕೊಂಡ ಮಕ್ಕಳಿಗೂ ತಾವೇ ಹೆತ್ತ ಮಗುವಿಗೂ ಎಷ್ಟು ವ್ಯತ್ಯಾಸವಿರುತ್ತದೆ ಅಲ್ಲವೇ? ಇಲ್ಲ ಹಾಗಿರುವುದಿಲ್ಲ ನಾವು ಅದನ್ನು ನಮ್ಮ ಮಗುವಿನಂತೆಯೇ ನೋಡಿಕೊಳ್ಳುತ್ತೇವೆ ಎಂದು ಎಷ್ಟು ವಾದಿಸಿದರೂ ಅಂತರಂಗದ ಭಾವನೆಯಲ್ಲಿ ಖಂಡಿತ ವ್ಯತ್ಯಾಸವಿರುತ್ತದಲ್ಲವೇ? ಹಾಗೆಯೇ ಪುಸ್ತಕದ ವಿದ್ಯೆಗೂ ಆಂತರ್ಯದಲ್ಲಿ ನಮ್ಮದೇ ಆದ ಅನುಭವಜನ್ಯವಾದ ಜ್ಞಾನಕ್ಕೂ ಬಹಳವ್ಯತ್ಯಾಸವುಂಟು. ಇದನ್ನು ಹೆಚ್ಚು ವಿವರಿಸುವುದಕ್ಕಿಂತ ಅನುಭವಕ್ಕೆ ತಂದುಕೊಳ್ಳುವುದು ಉಚಿತ!!!!

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-66 )

ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ | ಅರ್ಥವೇಂ ಕ್ರಿಮಿಕೀಟಕೋಟಿ ರಚನೆಯಲಿ || ಕರ್ತನಾಲೋಚಿಸಿದ ದುಂದಿನವನೆಂಬ ನುಡಿ | ಯರ್ಧದೃಷ್ಟಿಯ ವಿವರ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಕರ್ತನಾಲೋಚಿಸಿದ=ಕರ್ತನು ಆಲೋಚಿಸಿದ, ದುಂದಿನವನೆಂಬ=ದುಂದಿನವ+ಎಂಬ, ನುಡಿಯರ್ಧದೃಷ್ಟಿಯ=ನುಡಿಯ+ಅರ್ಧ+ದೃಷ್ಟಿಯ+ವಿವರ, ವ್ಯರ್ಥವೆಂದೆನಿಪುದಲ=ವ್ಯರ್ಥವು+ಎಂದು+ಎನಿಪುದು+ಅಲ, ಯರ್ಧದೃಷ್ಟಿಯ=ಅರ್ಧ+ದೃಷ್ಟಿಯ.

ಪದಗಳ ತಾತ್ಪರ್ಯ

ಪದ್ಯದ ಪೂರ್ತಿ ವಿವರಣೆ

ವ್ಯರ್ಥವೆಂದೆನಿಸುತ್ತದೆ ಸೃಷ್ಟಿಯಲಿ ಬಹುಭಾಗ, ಈ ಕ್ರಿಮಿ ಕೀಟ ಕೋಟಿಗಳ ಸೃಷ್ಟಿಯಲಿ ಅರ್ಥವೇನು? ಆ ಸೃಷ್ಟಿಕರ್ತನು ಈ ಸೃಷ್ಟಿಯನ್ನು ರಚಿಸುವಾಗ ತನ್ನ ಶಕ್ತಿಯ ದುಂದುಪಯೋಗ ಮಾಡಿರಬಹುದೆಂದು ಯಾರಾದರೂ ಆಲೋಚಿಸಿದರೆ ಅದು ಅವರ ಅಪರಿಪೂರ್ಣ ಜ್ಞಾನದ, ಯೋಚನಾ ದಾರಿದ್ರ್ಯದ ಸೂಚಕವೆಂದು ಈ ಮುಕ್ತಕದ ಹೂರಣ. ಕೆಲವರಿಗೆ “ಛೆ ಈ ಪರಮಾತ್ಮ ಅದೇನನ್ನೆಲ್ಲಾ ಸೃಷ್ಟಿಸಿ ಬಿಟ್ಟಿದ್ದಾನೆ, ತನ್ನ ಸೃಷ್ಟಿಯ ಶಕ್ತಿಯನ್ನು ಅನಾವಶ್ಯಕವಾಗಿ ದುಂದು ಮಾಡಿಕೊಂಡುಬಿಟ್ಟಿದ್ದಾನೆ” ಎಂದು ಅನ್ನಿಸಬಹುದು. ಅದು ಸಂಕುಚಿತ ಭಾವ. ಆ ಪರಮಾತ್ಮನ ಈ ಸೃಷ್ಟಿಗೆ ಕಾರಣವನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವೇ? ಇಲ್ಲಿ ಒಂದಕ್ಕೊಂದು ಪೂರಕವಾಗಿದೆ. ಒಂದು ಅಣುವಿಗೆ ಮತ್ತೊಂದು ಅಣು ಪೂರಕ. ಆದರೆ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಮನುಷ್ಯ ಈ ಎಲ್ಲ ಸೃಷ್ಟಿಯೂ ತನಗಾಗಿ ಆಗಿದೆ ಎಂದು ಅಂದು ಕೊಳ್ಳುತ್ತಾನೆ ಮೂರ್ಖತನದಿಂದ. ಪರಮಾತ್ಮನ ಸೃಷ್ಟಿಗೆಲ್ಲವು ಒಂದು ಕಾರಣವಿದೆ. ಅದನ್ನು ನೋಡಲುಬಾರದೆ, ಅರೆಜ್ಞಾನದಿಂದ ವ್ಯಾಖ್ಯಾನ ಮಾಡುವ ಈ ಮನುಷ್ಯನ ಅಜ್ಞಾನಕ್ಕೆ ಏನು ಹೇಳಬೇಕೋ ಗೊತ್ತಿಲ್ಲ. ಪಶು ಪಕ್ಷಿಗಳು, ಪ್ರಾಣಿಗಳು, ಅನಂತ ಪ್ರಭೇದಗಳಿರುವ ಜಲಚರಗಳು, ಕೋಟಿ ಕೋಟಿ ವಿಧದ ಕ್ರಿಮಿ, ಕೀಟಗಳು, ಮರಗಳು, ಗಿಡ, ಬಳ್ಳಿಗಳು, ಸಸಿ, ಪೊದೆಗಳು, ಬೃಹತ್ ಹೆಮ್ಮರಗಳು, ಎಷ್ಟೊಂದು ತರಹೆ ಹೂಗಳು ಹಣ್ಣುಗಳು, ಬೆಟ್ಟ ಗುಡ್ಡಗಳು, ನದಿ ತೊರೆಗಳು. ಒಂದೊಂದಕ್ಕೆ ಒಂದೊಂದು ಬಣ್ಣ. ಬೇರೆ ಬೇರೆ ಆಕಾರ ರುಚಿ ವಾಸನೆ, ಅಬ್ಬಬ್ಬಾ ಒಂದು ಶತಾಂಶವನ್ನು ವಿವರಿಸಲು ಸಹಸ್ರ ಪುಟಗಳ ಹೊತ್ತಿಗೆಯೂ ಸಾಲದು, ಈ ಎಲ್ಲವನ್ನೂ ಆ ಪರಮಾತ್ಮ ಸೃಜಿಸಿ ತಾನೂ ಅದರಲ್ಲಿ ಇರುತ್ತಾ ಆನಂದ ಪಡುತ್ತಿದ್ದಾನೆ. ಅವೆಲ್ಲವನ್ನೂ ಅವನು ತನ್ನ ಆನಂದಕ್ಕೆ ಸೃಷ್ಟಿಸಿಕೊಂಡಿದ್ದಾನೆ. ಮನುಷ್ಯನನ್ನೂ ಸಹ. ಆದರೆ ಮನುಷ್ಯ ಹೆಡ್ಡತನದಿಂದ, “ಪರಮಾತ್ಮ ನಮಗಾಗಿ ಎಲ್ಲವನ್ನೂ ಸೃಷ್ಟಿಸಿದ್ದಾನೆ” ಎಂದು ತಿಳಿದಿದ್ದಾನೆ. ಈ ಗಿಡಮರಗಳು ನನಗಾಗಿ. ಅದರಲ್ಲಿ ಬಿಡುವ ಹಣ್ಣು ಹೂಗಳು ನನಗಾಗಿ. ಕೆಲವು ಪ್ರಾಣಿಗಳು ನನಗೆ ತಿನ್ನಲು ಬೇಕು, ಅದರ ನಾಶ. ಕೆಲವು ಪ್ರಾಣಿಗಳು ನನಗೆ ಔಷಧಿಯನ್ನು ಕೊಡುತ್ತವೆ, ಅದರ ನಾಶ. ಕೆಲವು ಪ್ರಾಣಿಗಳಿಂದ ನನಗೆ ಪ್ರಾಣ ಭಯ, ಅದರ ನಾಶ. ಕೆಲವು ಪ್ರಾಣಿಗಳು ನನಗೆ ಊಳಿಗ ಮಾಡಬೇಕು. ಅದರ ಸ್ವಾತಂತ್ರ್ಯದ ನಾಶ. ಹಾರುವ ಹಕ್ಕಿಯನ್ನೂ ಬಿಟ್ಟಿಲ್ಲ, ನೀರಿನ ಮೀನನ್ನೂ ಬಿಟ್ಟಿಲ್ಲ. ಮನೆ ಕಟ್ಟಲು ನಾಟಾ ಬೇಕು. ಕಡಿ ಮರ. ಜಲ್ಲಿ ಬೇಕು ಕಡಿ ಬೆಟ್ಟ. ಹೀಗೆ ಆತನ ಕಣ್ಣು, ಕಲ್ಲು, ಮಣ್ಣು, ಮರ, ಲೋಹ, ಅದಿರು, ನೀರು, ಎಲ್ಲದರ ಮೇಲೆ ವಕ್ರ ದೃಷ್ಟಿ. ಮನುಷ್ಯನೂ ಸಹ ಸೃಷ್ಟಿಯ ಎಲ್ಲರಂತೆ ಆದರೂ ಅವನು ಯಾವುದನ್ನೂ ಇರಗೊಡಲಾರ, ಆಸೆ. ಅದಕ್ಕೆ ಪೂರಕವಾಗಿ ಅವನಿಗೆ ಅನ್ಯ ಪ್ರಾಣಿಗಳಿಗಿಂತ ಹೆಚ್ಚು ಬುದ್ಧಿ ಶಕ್ತಿ. ಅನ್ಯ ಪ್ರಾಣಿಗಳಿಗಿಂತ ಹೆಚ್ಚು ಸಾಮರ್ಥ್ಯ. ಅದನ್ನು ಕೊಟ್ಟವನೂ ಆ ಪರಮಾತ್ಮನೇ ಆದರೂ ಮನುಷ್ಯ “ನಾನು” ಎಂದು ಬೀಗುತ್ತಾನೆ. ನಾನೂ ಸಹ ಈ ಪರಮಾತ್ಮನ ಸೃಷ್ಟಿಯಲ್ಲಿ ಎಲ್ಲದರಂತೆ ಒಂದು. ಇದನ್ನು ನಾಶ ಮಾಡುವ ಹಕ್ಕು ನನಗಿಲ್ಲ, ಹಾಗಾಗಿ ನಾನು ಇದನ್ನು ನಾಶಮಾಡಬಾರದು ಎಂಬುದನ್ನು ಮನುಷ್ಯ ಎಂದು ಅರಿತುಕೊಳ್ಳುತ್ತಾನೋ ಅಂದು ಅವನು ಈ ಜಗತ್ತಿನಲ್ಲಿ ನೆಮ್ಮದಿಯಿಂದ ಇರಬಹುದು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-67 )

ಸೃಷ್ಟಿಸಂಕಲ್ಪ ಲಿಪಿಯೆಲ್ಲ ನಮ್ಮೆದುರಿಲ್ಲ | ದೃಷ್ಟಿಗೋಚರವದರಳೊಂದು ಗೆರೆ ಮಾತ್ರ || ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ? | ಕ್ಲಿಷ್ಟದ ಸಮಸ್ಯೆಯದು-ಮಂಕುತಿಮ್ಮ ||

ಪದಗಳ ವಿಸ್ತರಣೆ

ಲಿಪಿಯೆಲ್ಲ=ಲಿಪಿಯು+ಎಲ್ಲ, ನಮ್ಮೆದುರಿಲ್ಲ=ನಮ್ಮೆದುರು+ಇಲ್ಲ, ದೃಷ್ಟಿಗೋಚರವದರಳೊಂದು=ದೃಷ್ಟಿಗೋಚರವು+ಅದರೊಳು+ಒಂದು, ಅಷ್ಟರಿಂದಿದು=ಅಷ್ಟರಿಂದ+ಅದು, ಶಿಷ್ಟವೆನ್ನುವುದೆ=ಶಿಷ್ಟವು+ಎನ್ನುವುದು. ಸೃಷ್ಟಿಸಂಕಲ್ಪ=ಜಗತ್ತಿನ ಸೃಷ್ಟಿಯ ಸಂಕಲ್ಪ (ನಕಾಶೆ

ಪದಗಳ ತಾತ್ಪರ್ಯ

ಲಿಪಿ=ಲೇಖಾ ದಾಖಲೆ.

ಪದ್ಯದ ಪೂರ್ತಿ ವಿವರಣೆ

“ಜಗತ್ತು ಸೃಷ್ಟಿಯಾಗುವ ಮುಂಚಿನ ಲೇಖಾ ಅಥವಾ ರೇಖಾ ಚಿತ್ರ ನಮ್ಮ ಬಳಿ ಇಲ್ಲ. ನಾವು ಕಾಣಲಾಗಿರುವುದು ಒಂದು ಬೃಹತ್ ಚಿತ್ರದಲ್ಲಿ ಒಂದೇ ಗೆರೆ ಮಾತ್ರ. ಅಷ್ಟು ಸಣ್ಣ ಗೆರೆಯನ್ನು ಕಂಡು ನಾವು ಈ ಸೃಷ್ಟಿಯನ್ನು ಕುರಿತು ವ್ಯಾಖ್ಯಾನ ಮಾಡುತ್ತಾ, ಇದು ಸರಿ ಇದು ತಪ್ಪು ಎನ್ನುವುದು ಸರಿಯೇ?” ಎಂದು ಕೇಳುತ್ತ, ಇದು ಬಹಳ ಕ್ಲಿಷ್ಟದ ಸಮಸ್ಯೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ನಾವು ಒಂದು ಮನೆ ಕಟ್ಟಬೇಕಾದರೆ ಅದಕ್ಕೊಂದು ನಕಾಶೆ ಬೇಕು. ನೀವು ಯಾರಾದರೂ ಸಿವಿಲ್ ಎಂಜಿನಿಯರ್ನ್ನು ಸಂಪರ್ಕಿಸಿದರೆ, ಅವರು ಮೊದಲು ನಿವೇಶನದ ಅಳತೆ ಹಾಕಿ, ನಿಮ್ಮೊಡನೆ ಮಾತುಕತೆ ಮಾಡಿ, ನಿಮ್ಮ ಬೇಕು ಬೇಡಗಳನ್ನೆಲ್ಲ ವಿಚಾರಿಸಿ, ಒಂದಲ್ಲ ನಾಲ್ಕು ಬಾರಿ ಗೆರೆ ಎಳೆದು, ನಿಮಗೆ ತೋರಿಸಿ, ನೀವು ಹೇಳಿದ ಮತ್ತು ಅವರಿಗೆ ತೋಚಿದ ಮಾರ್ಪಾಡುಗಳನ್ನು ಮಾಡಿಕೊಂಡು ನಂತರ ಒಂದು ರೇಖಾ ನಕಾಶೆಯನ್ನು ತಯಾರು ಮಾಡುತ್ತಾರೆ. ನಂತರ ಅದರ “ಮುನ್ನೋಟದ” ನಕಾಶೆ ತಯಾರುಮಾಡಿ, “ನೋಡಿ ನಿಮ್ಮ ಮನೆ ಅಥವಾ ಕಟ್ಟಡ ಸಂಪೂರ್ಣವಾದಾಗ ಹೀಗೆ ಕಾಣುತ್ತದೆ” ಎಂದು ನಿಮಗೆ ತೋರಿಸುತ್ತಾರೆ. ತದನಂತರ, ಈ ಎರಡರ ನೀಲಿ ನಕಾಶೆ ತಯಾರು ಮಾಡಿ, ಕಟ್ಟಡ ಕೆಲಸ ನಡೆಯುವಷ್ಟು ದಿನವು ಆ ನಕಾಶೆಯನ್ನು ಬಳಿಯಲ್ಲಿ ಇಟ್ಟುಕೊಂಡು, ಕಟ್ಟಡವು ಅದರ ಪ್ರಕಾರ ಬರುತ್ತಿದೆಯೇ ಇಲ್ಲವೇ ಎಂದು ನೋಡುತ್ತಾ ಇರುತ್ತಾರೆ. ಅಷ್ಟು ಮಾಡಿದರೂ ಎಲ್ಲೋ ಒಂದು ಕೊರತೆ ನಿಮಗೆ ಕಾಣುತ್ತದೆ. ಈ ಜಗತ್ತು ಎಷ್ಟು ದೊಡ್ಡದೆಂದರೆ ನಾವದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲವೆಂದು ನಾ ಈ ಹಿಂದೆ ಹೇಳಿದ್ದೇನೆ. ಶತ ಶತ ಕೋಟಿ ಕೋಟಿ ಕಿಲೊಮೀಟರ್ (ಇದು ಬರೀ ಊಹೆ ಅಷ್ಟೇ-ಕಂಡವರಾರು) ವಿಸ್ತೀರ್ಣವಿರುವ ಈ ಜಗತ್ತನ್ನು ನಿರ್ಮಾಣ ಮಾಡುವಾಗ, ಇನ್ನೆಂತಹ ರೇಖಾಚಿತ್ರವನ್ನು ಆ ಪರಮಾತ್ಮ ತಯಾರು ಮಾಡಿರಬೇಕು. ಅದನ್ನು ನಾವು ನೋಡಿಲ್ಲ. ಆದರೆ ಆ ರೇಖಾ ಚಿತ್ರದ ಯಾವುದೋ ಒಂದು ಗೆರೆಯನ್ನು ನೋಡಿ ನಾವು, “ಇದು ಸರಿ ಅದು ತಪ್ಪು” ಎಂದು ವ್ಯಾಖ್ಯಾನ ಮಾಡುವುದು ಎಷ್ಟು ಸರಿ! ಹಾಗೆ ಹೇಳುವುದು ಸರಿಯೇ. ಅಂದರೆ ಈ ಸೃಷ್ಟಿಯ ಆಯ ಅಳತೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ. ವಿವರಿಸಲೂ ಸಾಧ್ಯವಿಲ್ಲ. ಊಹೆ ಮಾಡಿಕೊಳ್ಳಲೂ ಸಾಧ್ಯವಿಲ್ಲದಂತಹ ಆ ಸೃಷ್ಟಿಯಲ್ಲಿ ಕೊರತೆಗಳನ್ನು ಕಾಣುವುದು ಅವಿವೇಕತನವಲ್ಲದೆ ಮತ್ತೇನು. ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ವ್ಯಾಖ್ಯಾನ ಮಾಡುವುದು ಎಷ್ಟೊಂದು ಮೂರ್ಖತನವಲ್ಲವೇ? ಮತ್ತೊಂದು ವಿಷಯವೇನೆಂದರೆ, ಒಂದು ರೇಖಾಚಿತ್ರವನ್ನು ತಯಾರು ಮಾಡಿದರೆ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಈ ಜಗತ್ತಿನ ರೂಪ ನಿರಂತರ ಬದಲಾಗುತ್ತಾ ಇರುತ್ತದೆ. ಏಕೆಂದರೆ ಇದರ ಹಿಂದಿರುವುದು ಆ ಬೃಹತ್ ಚೇತನ. ಹಾಗಾಗಿ ಚೈತನ್ಯಮಯವಾದ ಈ ಜಗತ್ತು ನಿರಂತರ ಬದಲಾಗುತ್ತಾ ಹಲವಾರು ವಿಸ್ಮಯಗಳನ್ನು ಪ್ರಕಟಿಸುತ್ತಾ, ಪ್ರದರ್ಶಿಸುತ್ತಾ ಇರುತ್ತದೆ. ಆ ಪರಮಾತ್ಮನ ಸೃಷ್ಟಿಯಲ್ಲೂ ಕೊರತೆಗಳನ್ನು ಹುಡುಕದೆ, ಅವನ ಸೃಷ್ಟಿಗೆ ಅವನಿಗೆ ಮಾತ್ರ ಗೊತ್ತಿರುವ ಒಂದು ಕಾರಣವಿದೆ. ಅದನ್ನರಿಯಲು ನಮಗೆ ಸಾಧ್ಯವಿಲ್ಲ. ನಮ್ಮಲ್ಲಿ ಬಹಳಷ್ಟು ಜನ ನಿಮಗೆ ಸಿಗುತ್ತಾರೆ. ಯಾವುದಾದರೂ ವಿಷಯವನ್ನು ಕೊಡಿ. ಅವರಿಗೆ ಗೊತ್ತಿದೆಯೋ ಇಲ್ಲವೋ ಗಂಟೆಗಟ್ಟಲೆ ಭಾಷಣವನ್ನೇ ಮಾಡಿಬಿಡುತ್ತಾರೆ. ನೋಡುವವರಿಗೆ “ಆಹಾ ಓಹೋ” ಎನ್ನಿಸಬೇಕು ಹಾಗೆ ಇರುತ್ತೆ ಅವರ ಬುರುಡೆ. ಅವರಿಗೆ ಎಲ್ಲವನ್ನು ತಮ್ಮ ಶೈಲಿಯಲ್ಲಿ ಟೀಕೆ ಮಾಡಲು ಬರುತ್ತದೆ, ಸರಿತಪ್ಪುಗಳ ಅರಿವಿಲ್ಲದೆಯೇ? ಅದರಿಂದ ಯಾವ ಪ್ರಯೋಜನವು ಇಲ್ಲ. ಕೇವಲ ನಮ್ಮ ಅಹಂಕಾರದ ತೃಷೆಯನ್ನು ತಣಿಸಲಷ್ಟೇ ಉಪಯೋಗ. ವಾಚಕರೆ ನಾವು ನಮಗೆ ಅರಿಯದ ವಿಷಯದ ವ್ಯಾಖ್ಯಾನ ಮಾಡುವಂತಹ ಸಾಹಸವನ್ನು ಮಾಡದೆ, ನಮ್ಮ ನಮ್ಮ ಅರಿವಿನ ಪರಿಧಿ ಮತ್ತು ಮಿತಿಗಳಲ್ಲಿ ಈ ಜಗತ್ತನ್ನು ಮತ್ತು ಅದನ್ನು ಸೃಷ್ಟಿಮಾಡಿದ ಪರಮಾತ್ಮನ ಮಹತ್ವ ಮಹಿಮೆಯನ್ನು ಅನುಭವಿಸುತ್ತಾ, ಆನಂದದಿಂದ ಜೀವನವನ್ನು ಕಳೆಯುವ ಪ್ರವೃತ್ತಿ ನಮ್ಮದಾಗಬೇಕು. ಆಗಲೇ ನಿಜವಾದ ಸುಖ ಮತ್ತು ಆನಂದ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-68 )

ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವುಗಳಲ್ಲಿ | ಎಲ್ಲಿ ಪರಿಪೂರಣವೊ ಅದನರಿಯುವನಕ || ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ? | ಎಲ್ಲ ಬಾಳು ರಹಸ್ಯ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಸೊಲ್ಲಿಸುವರಾರು=ಸೊಲ್ಲಿಸುವರು+ಯಾರು, ಪೇಟಿಯೊಳಗುಟ್ಟ=ಪೇಟಿಯ+ಒಳಗುಟ್ಟ.

ಪದಗಳ ತಾತ್ಪರ್ಯ

ಅರೆಬೆಳಕು=ಸ್ಪಷ್ಟವಿಲ್ಲದ ಜ್ಞಾನ. ಅರೆಸುಳಿವು=ಆ ಜ್ಞಾನದ ಮಾರ್ಗಗಳೂ ನಿಚ್ಚಳವಲ್ಲ, ಪರಿಪೂರಣವೊ=ಪರಿಪೂರ್ಣವೋ, ಅದನರಿರುವನಕ=ಅದನ್ನು ಅರಿಯುವ ತನಕ. ಸೊಲ್ಲಿಸುವರಾರು-ಹೇಳುವವರಾರು, ಪೇಟಿಯೊಳಗುಟ್ಟ=ಪೆಟ್ಟಿಗೆಯೊಳಗಿನ ಗುಟ್ಟ.

ಪದ್ಯದ ಪೂರ್ತಿ ವಿವರಣೆ

ಎಲ್ಲ ವಿಷಯಗಳಲ್ಲೂ ಅರೆ ಬರೆ ಜ್ಞಾನ ಮತ್ತು ತಿಳುವಳಿಕೆ. ಆ ತಿಳುವಳಿಕೆಯನ್ನು ಪಡೆವ ಮಾರ್ಗಗಳೂ ಸಹ ಅರ್ಧಂಬರ್ಧ ಮತ್ತು ಯಾವುದೂ ನಿಚ್ಚಳವಲ್ಲ. ಅದು ನಮಗೆ ಸಂಪೂರ್ಣ ಜ್ಞಾನ ಬರುವ ತನಕ ಹಾಗೆಯೇ ಇರುತ್ತದೆ. ಆದರೆ ನಮಗೆ ಆ ಪರಿಪೂರ್ಣ ಜ್ಞಾನವನ್ನು ಹೇಳಿಕೊಡುವವರಾರು. ಈ ಜೀವನವೆಲ್ಲ ಒಂದು ನಿಗೂಢ ಅಥವಾ ರಹಸ್ಯ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ವಾಚಕರೆ, ನಮಗೇನು ಗೊತ್ತು ಹೇಳಿ? ನಮಗೇನು ಗೊತ್ತು ಎನ್ನುವುದೇ ಗೊತ್ತಿಲ್ಲ!!! ನಮ್ಮ ಜನ್ಮದಿಂದ ಹಿಡಿದು ನಮ್ಮೊಡನೆ ನಡೆಯುವ ಎಲ್ಲ ವಿದ್ಯಮಾನಗಳನ್ನು ನಾವು ಎಂದೂ ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ. ಸಾಧ್ಯವು ಇಲ್ಲ. ಏಕೆಂದರೆ ಮೊದಲನೆಯದಾಗಿ ವಸ್ತು ವಿಷಯ ಅಥವಾ ವ್ಯಕ್ತಿಯನ್ನು ಸಂಪೂರ್ಣ ಅರ್ಥಮಾಡಿಕೊಳ್ಳಬೇಕಾದರೆ, ನಾವು ಆ ವಸ್ತು ವಿಷಯ ಮತ್ತು ವ್ಯಕ್ತಿಗಳನ್ನು ಎಲ್ಲಾ ಆಯಾಮಗಳಿಂದಲೂ ಪರಿಕಿಸಿ ನೋಡಬೇಕು. ಎರಡನೆಯದಾಗಿ, ಯಾವುದೇ ಪೂರ್ವಾಗ್ರಹವಿಲ್ಲದೆ ಶುದ್ಧಮನಸ್ಕರಾಗಿ ಅದನ್ನು ಅರ್ಥಮಾಡಿಕೊಳ್ಳಲು ನಮಗೆ ಇಚ್ಛೆ ಇರಬೇಕು. ಆಗ ಅದು ಅರ್ಥವಾಗುತ್ತದೆ. ನಾವು ಹಾಗೆ ಇರಲು ಸಾಧ್ಯವಿಲ್ಲ. ನಮಗೆ “ಅರೆಬೆಳಕು ಅರೆಸುಳಿವು” ಹಾಗಾಗಿ ನಮಗೆ ಅರ್ಥವಾಗುವುದಿಲ್ಲ. ಈ ಜಗತ್ತಿನಲ್ಲಿ ಲಕ್ಷಾಂತರ ವರ್ಷಗಳಿಂದ ಇರುವ ಮನುಷ್ಯನಿಗೆ ಯೋಚನೆ ಮಾಡುವ ಶಕ್ತಿ ಬಂದಾಗಿನಿಂದಲೂ ಇದರ ಬಗ್ಗೆ ಯೋಚನೆ ಮಾಡುತ್ತಲೇ ಇದ್ದಾನೆ. ಕೆಲವರು ಅಲ್ಪಸ್ವಲ್ಪ ತಿಳಿದಿದ್ದಾರೆ. ಆದರೆ ಎಲ್ಲವನ್ನೂ ಅಲ್ಲ. ಇಡೀ ಜಗತ್ತಿನಲ್ಲಿ ಬಹಳಷ್ಟು ದಾರ್ಶನಿಕರು ಆಗಿ ಹೋಗಿದ್ದಾರೆ. ವೇದಕಾಲದ ಋಷಿಗಳು, ಭಾರತೀಯ ಉಪನಿಷತ್ತಿನ ಕಾಲದ ದಾರ್ಶನಿಕರು, ಗ್ರೀಕ್ ದೇಶದ ತತ್ವಶಾಸ್ತ್ರಜ್ಞರು ಹಲವಾರು ವಿಚಾರದಲ್ಲಿ ಈ ಜಗತ್ತಿನ ಸೃಷ್ಟಿಗೆ ಒಂದು ಸೂಕ್ತ ವ್ಯಾಖ್ಯಾನ ಮಾಡಲು ಪ್ರಯತ್ನಪಟ್ಟಿದ್ದಾರೆ. ವೇದಗಳು, ಉಪನಿಷತ್ತುಗಳು, ಭಗವದ್ಗೀತೆ, ಭಾಗವತ, ಪುರಾಣಗಳು, ಅವಕ್ಕೆ ಬೇರೆ ಬೇರೆ ಆಚಾರ್ಯರುಗಳು ಬರೆದ ಭಾಷ್ಯಗಳು ಮತ್ತು ಹೊರದೇಶಗಳ ದಾರ್ಶನಿಕರ ‘ಜಂಡವೆಸ್ತಾ, ಬೈಬಲ್‌, ಕುರಾನ್'ಗಳೆಲ್ಲವು ತಮ್ಮದೇ ಆದ ರೀತಿಯಲ್ಲಿ ಜಗತ್ತಿನ ಕರ್ತನ ಕ್ರಿಯೆಗೆ ಒಂದು ಸೂಕ್ತ ಪರಿಭಾಷೆಯನ್ನು ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸ್ವಲ್ಪಮಟ್ಟಿಗೆ ಯಶಸ್ಸನ್ನೂ ಕಂಡಿದ್ದಾರೆ. ಆದರೆ ಸಂಪೂರ್ಣ ಸತ್ಯವನ್ನು ಕಂಡುಕೊಳ್ಳಲು ವಿಫಲರಾಗಿದ್ದಾರೆ. ಎಲ್ಲರದೂ ಅವರವರು ಕಂಡುಕೊಂಡ ಅಂತರಂಗದ ಸತ್ಯವಷ್ಟೇ. ನಮ್ಮ ಅರಿವಿನ ಪರಿಧಿಯೊಳಕ್ಕೆ ಬಾರದು. ಹಾಗಾಗಿ ರಹಸ್ಯ. ಹಾಗಾಗಿ ಜಗತ್ತಿನ ಸತ್ಯವನ್ನು ಯಾರು ಹೇಳುವವರು ಎಂದು ಮಾನ್ಯ ಗುಂಡಪ್ಪನವರು ಪ್ರಶ್ನಿಸುತ್ತಾರೆ. ಹಾಗೆ ನಾವು ಯೋಚಿಸಿದಾಗ, ನಮಗೂ ಯಾರೂ ಹೇಳಲು ಸಾಧ್ಯವಿಲ್ಲ. ನಾವು ನಮ್ಮ ನಮ್ಮ ರೀತಿಯಲ್ಲೇ ಅನುಭವಿಸಬೇಕು. ಈ ಜಗತ್ತನ್ನು ಸೃಷ್ಟಿಸಿದ ಆ ಪರಮಾತ್ಮನ ಕ್ರಿಯೆಯ ಬಗ್ಗೆ ನಮಗೆ ಸಂಪೂರ್ಣ ಜ್ಞಾನ ಉಂಟಾಗುವವರೆಗೂ, ನಮಗೆ ಈ ಅರೆಬರೆ ಜ್ಞಾನ ಮತ್ತು ಅರೆಬರೆ ದೃಷ್ಟಾಂತಗಳೇ ಇರುತ್ತವೆ. ಈ ಜಗತ್ತಿನ ಸೃಷ್ಟಿಯ ಪೆಟ್ಟಿಗೆಯೊಳಗೆ ಏನಿದೆ ಎಂಬುದನ್ನು ಅರಿಯಲು ಸಾಧ್ಯವೇ ಇಲ್ಲ. ಇದು ರಹಸ್ಯ. ಏಕೆಂದರೆ ಒಂದು ಅದ್ಭುತ ಮತ್ತು ಬೃಹತ್ತಾದ ವಿಷಯದ ಸಮಗ್ರ ಅವಲೋಕನ ಮಾಡಿ ಅರಿವಿಗೆ ತಂದುಕೊಳ್ಳುವುದಕ್ಕೆ ಅಷ್ಟೇ ದೊಡ್ಡ ಜ್ಞಾನ ಮತ್ತು ದೃಷ್ಟಿ ಬೇಕು. ಅದನ್ನು ತಂದುಕೊಳ್ಳುವ ಪ್ರಯತ್ನವನ್ನು ನಾವು ಮಾಡಬಹುದು.ಅದನ್ನು ಮಾಡುತ್ತಾ ನಾವು ನಮ್ಮದೇ ಆದ ಸತ್ಯವನ್ನು ಅರಿಯಲು ಪ್ರಯತ್ನಪಡೋಣವೇ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-69 )

ಹೆಸರನರಿಯದ ಸಸಿಯೊಳಿರದೆ ರಸಗಂಧಗಳು? | ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೆ? || ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು | ಉಸಿರುತಿಹೆವದ ನಾವು-ಮಂಕುತಿಮ್ಮ ||

ಪದಗಳ ವಿಸ್ತರಣೆ

ಹೆಸರನರಿಯದ=ಹೆಸರನು+ಅರಿಯದ, ಸಸಿಯೊಳಿರದೆ=ಸಸಿಯೊಳು+ಇರದೆ, ಬಿಸಿಲದನು=ಬಿಸಿಲು+ಅದನು, ಬಿಡಿಸದಿಹುದೆ=ಬಿಡಿಸದೆ+ಇಹುದೆ, ಗಾಳಿಯದನೊಯ್ದು=ಗಾಳಿಯು+ಅದನು+ಒಯ್ದು,

ಪದಗಳ ತಾತ್ಪರ್ಯ

ಉಸಿರುತಿಹೆವದ=ಉಸಿರುತಿಹೆವು+ಅದ, ಹೆಸರನರಿಯದ=ಹೆಸರೇ ಗೊತ್ತಿಲ್ಲದ, ರಸಗಂಧಗಳು=ಮಕರಂದ ಮತ್ತು ಪರಿಮಳ, ದಿಸೆದಿಸೆಗಳೊಳು=ದಿಕ್ಕು ದಿಕ್ಕುಗಳಲ್ಲಿ, ಉಸಿರುತಿಹೆವದ=ಆ ಗಾಳಿಯನ್ನು ಸೇವಿಸುತ್ತಿದ್ದೇವೆ.

ಪದ್ಯದ ಪೂರ್ತಿ ವಿವರಣೆ

ನಮಗೆ ಹೆಸರೇ ಗೊತ್ತಿಲ್ಲದ ಸಸಿಯಲ್ಲಿ ಮಕರಂದ ಮತ್ತು ಸುಗಂಧಗಳಿರುವುದಿಲ್ಲವೇ? ಆ ಸೂರ್ಯನ ಬೆಳಕಿನಿಂದ ಅವು ಬೆಳೆಯುವುದಿಲ್ಲವೇ? ಆ ಗಿಡಗಳಲ್ಲಿರುವ ಸುಗಂಧವನ್ನು ಗಾಳಿಯು ದಿಕ್ಕು ದಿಕ್ಕುಗಳಿಗೆ ಪಸರಿಸದೆ? ಅಂತಹ ಗಾಳಿಯನ್ನು ನಾವು ಉಸಿರಾಡುತ್ತಿಲ್ಲವೇ? ಎಂದು ಒಂದು ಗಹನವಾದ ವಿಚಾರವನ್ನು ಈ ಮುಕ್ತಕದ ಮೂಲಕ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು. ನಾವು ಉಸಿರಾಡುವ ಗಾಳಿಯಲ್ಲಿ ಯಾವ ಯಾವ ತೋಟದ ಯಾವ ಯಾವ ಗಿಡದ ಹೂ ಪುಷ್ಪಗಳ ಸುಗಂಧ ಮಿಳಿತವಾಗಿದೆಯೋ ನಮಗರಿವಿರುವುದಿಲ್ಲ. ಎರಡನೆಯದಾಗಿ ಹೆಸರೇ ಇಲ್ಲದ ಅಥವಾ ನಮಗೆ ಗೊತ್ತಿರದ ಗಿಡವಾದರೂ, ಅದರ ಹೂಗಳಿಗೂ ಒಂದು ಸುಗಂಧವಿರುತ್ತದೆ. ಆ ಗಿಡದ ಬೆಳವಣಿಗೆಗೂ ಆ ನಭೋಮಂಡಲದಲ್ಲಿರುವ ಸೂರ್ಯನೇ ಕಾರಣ ಮತ್ತು ಬೀಸುವ ಗಾಳಿಯೂ ಭೇದಭಾವವಿಲ್ಲದೆ ಎಲ್ಲಗಿಡಗಳ ಸುಗಂಧವನ್ನೂ ತನ್ನೊಡಲಲ್ಲಿ ಸೇರಿಸಿಕೊಂಡು ಬೀಸುತ್ತದೆ ಮತ್ತು ಆ ಹಲ ಸುಗಂಧಭರಿತ ವಾಯುವನ್ನು ನಾವು ಸೇವಿಸುತ್ತೇವೆ. ಇಲ್ಲಿ ನಾವು ಅರಿಯಬೇಕಾದದ್ದು ಏನೆಂದರೆ ಹೇಗೆ ಆ ಸೂರ್ಯ, ಗಾಳಿ ಮತ್ತು ನಾವು ಉಸಿರಾಡುವ ಪ್ರಕ್ರಿಯೆ ಎಲ್ಲವು ಭೇದವಿಲ್ಲದೆ ತಮ್ಮ ತಮ್ಮ ಕೆಲಸವನ್ನು ಮಾಡುತ್ತವೆಯೋ, ಹಾಗೆಯೇ ಈ ಜಗತ್ತಿನಲ್ಲಿ ಆ ಪರಮಚೇತನವು ಸಹ ಭೇದಭಾವವಿಲ್ಲದೆ ಎಲ್ಲವನ್ನೂ ಸಮನಾದ ಭಾವದಿಂದ ನೋಡಿಕೊಳ್ಳುತ್ತದೆ. ಸೃಷ್ಟಿಸಿದ ಪ್ರತಿ ಜೀವಿಗೂ ಅದರ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಏನೇನು ಬೇಕೋ ಅದನ್ನೆಲ್ಲ ಮೊದಲೇ ಸಿದ್ಧಪಡಿಸಿದೆ. ಭೇದವೇನಿದ್ದರೂ ನಮ್ಮ ಮನಸ್ಸುಗಳಲ್ಲಿ ಮಾತ್ರ. ನಾವುಗಳು ಅದರ ಉದ್ದೇಶ, ಅದರ ಕಾರ್ಯವೈಖರಿಯ ಬಗ್ಗೆ ಚಿಂತಿಸದೆ ಅನುಭವಿಸುತ್ತಾ ಇರುತ್ತೇವೆ. ಹಾಗೆಯೇ ಅಜ್ಞಾತರಾದ ಹಲವಾರು ಜನ ಈ ಜಗತ್ತಿನ ಒಳಿತಿಗಾಗಿ ಯಾವ ಫಲಾಪೇಕ್ಷೆಯೂ ಇಲ್ಲದೆ, ಅಹರ್ನಿಶಿ ದುಡಿಯುತ್ತಾರೆ ಮತ್ತು ನಿರಂತರ ದುಡಿಯುತ್ತಲೇ ಇರುತ್ತಾರೆ. ಅವರ ಹೆಸರು ಯಾವ ಮಾಧ್ಯಮದಲ್ಲೂ ಪ್ರಚಾರವಾಗುವುದಿಲ್ಲ. ಅವರು ನಮ್ಮ ಸುತ್ತಮುತ್ತಲೇ ಇದ್ದರೂ ನಮಗೆ ತಿಳಿದಿರುವುದಿಲ್ಲ. ಆದರೆ ಅವರ ಕಾರ್ಯದ ಫಲ ಮಾತ್ರ ಇಡೀ ಸಮಾಜಕ್ಕೆ ದೊರೆಯುತ್ತದೆ. ತಮ್ಮ ಕಾರ್ಯದ ಫಲವನ್ನು ಯಾರು ಪಡೆದುಕೊಂಡಿದ್ದಾರೆ ಎಂದು ಅವರೂ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅವರು ನಿಸ್ವಾರ್ಥಿಗಳು. ಸಹಸ್ರಾರು ವರ್ಷಗಳ ಪುರಾತನವಾದ ವೇದಗಳ ಕರ್ತೃಗಳು ಯಾರೆಂದು ಯಾರೂ ಅರಿಯರು. ಆದರೆ ಅದರಲ್ಲಿನ ಅರಿವು, ಕ್ರಮ ಮತ್ತು ಜ್ಞಾನವು ಎಲ್ಲ ಜನರ ಮೇಲೆ ಹೇಗೆ ಪ್ರಭಾವ ಬೀರಿದೆ ಮತ್ತು ಒಂದು ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಕಾರಣವಾಗಲಿಲ್ಲವೇ? ಮತ್ತು ಇಂದಿಗೂ ಬೀರುತ್ತಾ ಇದೆ ಅಲ್ಲವೆ? ವಿಡಂಬನೆ, ಏನೆಂದರೆ ನಾವು ಎಷ್ಟೊಂದು ವಸ್ತುಗಳನ್ನು ನಮ್ಮ ಸೌಕರ್ಯಕ್ಕಾಗಿ ಉಪಯೋಗಿಸುತ್ತೇವೆ. ಆದರೆ ಎಂದಿಗೂ ಅದರ ಹಿಂದೆ ಇರುವ ಹಲವರ ಅರಿವಿನ ಮತ್ತು ಶ್ರಮದ ಬಗ್ಗೆ ಯೋಚಿಸುವುದೇ ಇಲ್ಲ ಮತ್ತು ಅದನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಸಹ ಮಾಡುವುದಿಲ್ಲ. ಇದುವೇ ಪ್ರಪಂಚ!!!! ಹಾಗೆಂದು ಅದರ ಬಗ್ಗೆಯೇ ಯೋಚಿಸುತ್ತಾ ಇರಬೇಕೆಂದೂ ಅರ್ಥವಲ್ಲ. ವಾಚಕರೆ, ನಮ್ಮ ಕರ್ತವ್ಯವೇನೆಂದು ಯೋಚಿಸಿದರೆ, ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ಕ್ರಿಯೆಗೆ ನಾವು ಬಾಧಕರಾಗದೆ, ಕೇವಲ ಸ್ವಾರ್ಥ ರಹಿತವಾಗಿ ಪರೋಪಕಾರಕ್ಕಾಗಿ ದುಡಿಯುವ, ಈ ಸೃಷ್ಟಿಯಲ್ಲಿರುವ ಎಲ್ಲವನ್ನೂ ಗೌರವಿಸೋಣ, ಸಾಧ್ಯವಾದರೆ ಅವುಗಳಿಗೆ ನಮ್ಮ ಅಲ್ಪ ಶಕ್ತಿಯಿಂದ ಇಂಬು ಕೊಡೋಣ. ನಮ್ಮ ಕೃತಜ್ಞತೆಯನ್ನು ತೋರೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-70 )

ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ | ಆವಿಯಾಗೇಳ್ದು ಮುಗಿಲಾಗಿ ಮಳೆಗೆರೆದು || ಬಾವಿಗೂಟೆಯನಿತ್ತು ನರರೊಡಲ ಸೇರುವುದು | ದೈವ ರಸತಂತ್ರವಿದು-ಮಂಕುತಿಮ್ಮ ||

ಪದಗಳ ವಿಸ್ತರಣೆ

ಆವಿಯಾಗೇಳ್ದು=ಆವಿಯಾಗಿ+ಏಳ್ದು, ಬಾವಿಗೂಟೆಯನಿತ್ತು=ಬಾವಿಗೆ+ಊಟೆಯನು+ಇತ್ತು, ನರರೊಡಲ=ನರರ+ಒಡಲ

ಪದಗಳ ತಾತ್ಪರ್ಯ

ಭೂವಿಷಯದಲಿ=ಈ ಭುವಿಗೆ ಸಂಬಂಧಿಸಿದ ವಿಷಯದಲ್ಲಿ, ಪುದಿದ=ಅಡಗಿದ, ರಸವಾಸನೆಗಳೆಲ್ಲ=ಗುಣ ಮತ್ತು ಸ್ವಭಾವಗಳೆಲ್ಲ, ಆವಿಯಾಗೇಳ್ದು=ಆವಿಯಾಗಿ ಎದ್ದು, ಮುಗಿಲಾಗಿ=ಮೋಡವಾಗಿ, ಬಾವಿಗೂಟೆಯನಿತ್ತು=ಬಾವಿಗಳಿಗೆ ಒರತೆಯಾಗಿ, ನರರೊಡಲ=ಮನುಷ್ಯರ ದೇಹವನ್ನು.

ಪದ್ಯದ ಪೂರ್ತಿ ವಿವರಣೆ

ಈ ಭೂಮಿಗೆ ಸಂಬಂಧಿಸಿದ ಮತ್ತು ಈ ಭೂಮಿಯಲ್ಲಿ ಅಡಗಿದ ರಸಗಳು ಸೂರ್ಯನ ಶಾಖದಿಂದ ಆವಿಯಾಗಿ, ಅದು ಮೋಡವಾಗಿ ಮತ್ತೆ ಮಳೆಯಾಗಿ ಧರೆ ಗಿಳಿದು ಆ ಮಳೆಯ ನೀರು ಭೂಮಿಯಲ್ಲಿ ಇಂಗಿ ಬಾವಿಗಳಿಗೆ ಒರತೆಯಾಗಿ ಆ ನೀರನ್ನು ಕುಡಿದ ನರರ ದೇಹವನ್ನು ಸೇರುವುವು. ಇದೆ ದೈವ ನಿರ್ಮಿಸಿದ ರಸ ತಂತ್ರ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ಈ ಭೂಮಿಯ ಒಳಗೆ ಮತ್ತು ಮೇಲೆ ಹಲವಾರು ರಾಸಾಯನಿಕ ವಸ್ತುಗಳು ಇವೆ. ಇಂಗಾಲ, ಜಲಜನಕ ಅಲ್ಯೂಮಿನಿಯಂ, ಉಕ್ಕು, ಹಿತ್ತಾಳೆ, ಚಿನ್ನ, ಸತು, ಪಾದರಸದಂತಹ ಮೂಲ ಧಾತುಗಳು ಒಟ್ಟು 118 ಇವೆ. ಲೆಡ್ ಆನನ್ ಸೆಪ್ತಿಯಂ ಎನ್ನುವುದು ಈ ಧಾತುಗಳಲ್ಲೇ ಇತ್ತೀಚೆಗೆ ಕಂಡು ಹಿಡಿದ ಧಾತುವೆಂದು ಹೇಳಲ್ಪಡುತ್ತದೆ. ಜಲಜನಕ ಮತ್ತು ಹೀಲಿಯಂ ಈ ಜಗತ್ತಿನಲ್ಲಿ ಹೇರಳವಾಗಿದೆ. ಇವೆಲ್ಲವು ಮತ್ತೂ ಇನ್ನೂ ಏನೇನೋ ಸೇರಿ ಆ ಜಗತ್ತಾಗಿದೆ. ಪ್ರೋಟಾನ್ಸ್ ನ್ಯುಟ್ರಾನ್ಸ್ ಅಥವಾ ಎಲೆಕ್ಟ್ರಾನ್ಸ್ ಇಲ್ಲದ ಕಪ್ಪು ವಸ್ತುಗಳೂ ಇವೆ. ಇದರ ಸಂಪೂರ್ಣ ಜ್ಞಾನವನ್ನು ಯಾರಾದರೂ ರಸಾಯನ ಶಾಸ್ತ್ರಜ್ಞರನ್ನು ಕೇಳಿದರೆ ಹೇಳುತ್ತಾರೆ. ಅಂದರೆ ಈ ಜಗತ್ತಿನ ಸೃಷ್ಟಿಯ ಸಮಯದಲ್ಲಿ ಉಂಟಾದ ಮಹಾಸ್ಫೋಟವಾದ ಮೊದಲ ಇಪ್ಪತ್ತು ನಿಮಿಷಗಳಲ್ಲಿ ಇವೆಲ್ಲವು ಆದವು ಎಂದು ಹೇಳುತ್ತಾರೆ, ತಿಳಿದವರು ಇದನ್ನು ಇನ್ನೂ ಹೆಚ್ಚಾಗಿ ವಿವರಿಸಬಲ್ಲರು. ಆ ಸೂರ್ಯನ ಶಾಖದಿಂದ ಉಂಟಾಗುವ ಆವಿಯಲ್ಲಿ ಈ ಎಲ್ಲ ವಸ್ತುಗಳ ಗುಣಗಳೂ ಬೇರೆ ಬೇರೆ ಪ್ರಮಾಣದಲ್ಲಿ ಸೇರಿ ಅವೆಲ್ಲವು ನಭೋಮಂಡಲದಲ್ಲಿ ಸೇರಿ, ಮೋಡವಾಗುತ್ತದೆ. ಆ ಮೋಡದಲ್ಲಿ ಈ ಎಲ್ಲ ಗುಣಗಳೂ ಅಡಕವಾಗಿರುತ್ತದೆ. ಆ ಮೋಡ ತನ್ನ ತೂಕ ಹೆಚ್ಚಿಸಿಕೊಂಡಂತೆ ಭಾರ ತಾಳಲಾರದೆ ಮಳೆಯ ರೂಪದಲ್ಲಿ ಧರೆಗಿಳಿಯುತ್ತದೆ. ಮಳೆಯಾಗಿ ಹರಿವ ನೀರಿನಲ್ಲಿ ಈ ಎಲ್ಲ ಗುಣಗಳೂ ಸೇರಿ ಅದನ್ನು ಸೇವಿಸುವ ಎಲ್ಲ ಮಾನವರ ಒಡಲು ಸೇರುತ್ತದೆ. ಅದು ಅವರವರ ದೇಹದಲ್ಲಿರುವ ರಾಸಾಯನಿಕಗಳ ಜೊತೆಗೆ ಮಿಶ್ರಣಗೊಂಡು ಮನೋ ವ್ಯಾಪಾರದ ಮೇಲೂ ಸಹ ತನ್ನ ಪ್ರಭಾವ ಬೀರುತ್ತದೆ. ಇದು ಪರಮಾತ್ಮ ಸೃಷ್ಟಿಸಿದ ಒಂದು ರಸ ತಂತ್ರ. ಇದು ಏರುಪೇರಾಗುತ್ತಿರುತ್ತದೆ. ನನ್ನ ಸ್ನೇಹಿತನಿಗೊಬ್ಬನಿಗೆ, ಅವನ ದೇಹದಲ್ಲಿ ಸೋಡಿಯಂ ಕಡಿಮೆಯಾಯಿತು ಎಂದು 3 ದಿನದಲ್ಲಿ ತಲೆ ಕೂದಲೆಲ್ಲಾ ಬೆಳ್ಳಗೆ ಆಗಿ ಹೋಯಿತು. ಮತ್ತೆ ಅವನ ದೇಹದ ರಾಸಾಯನಿಕ ಸಮತೋಲನವನ್ನು ಸರಿಪಡಿಸಿದಾಗ ಅವ ಮೊದಲಿನಂತಾದ. ಪಿತ್ತ ಅಂದರೆ ಅಸಿಡಿಟಿ ಹೆಚ್ಚಾದರೆ ಮನುಷ್ಯ ಹುಚ್ಚು ಹುಚ್ಚಾಗಿ ಆಡುತ್ತಾನೆ. ಹಾಗಾಗಿ ಈ ದೇಹದ ರಾಸಾಯನಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ತೀರ ಅಗತ್ಯ. ಪಂಡಿತರು, ಜ್ಞಾನಿಗಳು ಮತ್ತು ವೈದ್ಯರು ಇದನ್ನು ನಮಗೆ ತಿಳಿಸಬಹುದು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-71 )

ತರಣಿ ಕಿರಣದ ನಂಟು ಗಗನ ಸಲಿಲದ ನಂಟು | ಧರಣಿ ಚಲನೆಯ ನಂಟು ಮರುತನೊಳï ನಂಟು || ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ | ಕಿರಿದು ಪಿರಿದೊಂದಂಟು ಮಂಕುತಿಮ್ಮ ||

ಪದಗಳ ವಿಸ್ತರಣೆ

ನಂಟುಗಳಿನೊಂದು=ನಂಟುಗಳಿನ+ಒಂದು, ಪಿರಿದೊಂದಂಟು=ಪಿರಿದು+ಒಂದು+ಉಂಟು.

ಪದಗಳ ತಾತ್ಪರ್ಯ

ತರಣಿ=ಸೂರ್ಯ, ಸಲಿಲ=ನೀರು, ಕಿರಿದು=ಸಣ್ಣದು, ಪಿರಿದು=ದೊಡ್ಡದು.

ಪದ್ಯದ ಪೂರ್ತಿ ವಿವರಣೆ

ಸೂರ್ಯನ ಮತ್ತು ಕಿರಣದ ಸಂಬಂಧ, ಆಕಾಶದ ಮತ್ತು ಮಳೆ ನೀರಿನ ಸಂಬಂಧ, ಭೂಮಿಯ ಸುತ್ತುವಿಕೆಯ ಸಂಬಂಧ ಮತ್ತು ಅದಕ್ಕನುಗುಣವಾಗಿ ಬೀಸುವ ಗಾಳಿಯ ಸಂಬಂಧ, ಹೀಗೆ ಒಂದಕ್ಕೊಂದು ನಂಟು ಹಾಕಿಕೊಂಡು ಹಲವಾರು ಬಗೆಯ ಸಂಬಂಧಗಳ ಒಂದು ಗಂಟೇ ಈ ಜಗತ್ತು. ಇದರಲ್ಲಿ ಕೆಲವು ಸಣ್ಣ ಸಣ್ಣ ನಂಟುಗಳು ಮತ್ತೆ ಕೆಲವು ದೊಡ್ಡದಾದ ಗಂಟುಗಳು ಎಂದು ಜಗತ್ತಿನ ಎಲ್ಲ ವಸ್ತುಗಳ ಪರಸ್ಪರ ಸಂಬಂಧಗಳನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ತೈತ್ತರೀಯ ಉಪನಿಷತ್ತಿನ ಬ್ರಹ್ಮಾನಂದವಲ್ಲಿಯಲ್ಲಿನ ಮೊದಲನೇ ಅನುವಾಕದಲ್ಲಿ “ತಸ್ಮಾದ್ವಾ ಏತಸ್ಮಾದಾತ್ಮನಅಕಾಶಃ ಸಂಭೂತಃ ಆಕಾಶಾತ್ವಾಯುಃ ವಾಯೋರಗ್ನಿಃ ಅಗ್ನೇರಾಪಃ ಅದ್ಭ್ಯಃ ಪೃಥಿವೀ | ಪ್ರುಥಿವ್ಯಾ ಓಷದಯಃಓಷಧೀಭ್ಯೋನ್ನಂ ಅನ್ನಾತ್ ಪುರುಷಃ ಸವಾ ಏಷ ಪುರುಷೋನ್ನ ರಸಮಯಃ” ಎಂದು ಜಗತ್ತಿನ ವಸ್ತುಗಳಲ್ಲಿರುವ ಪರಸ್ಪರ ಸಂಬಂಧವು ವಿವರಿಸಲ್ಪಟ್ಟಿದೆ. ಆ ಪರಮಾತ್ಮನ ಸೃಷ್ಟಿಯಾದ ಆಕಾಶ, ಆ ಆಕಾಶದಲ್ಲಿರುವ ಕೋಟಿ ಕೋಟಿ ಆಕಾಶಕಾಯಗಳು, ಗಾಳಿ, ಸೂರ್ಯಕಿರಣಗಳಿಂದ ಉಂಟಾಗುವ ಶಾಖ. ಶಾಖದಿಂದ ಆವಿ,ಆವಿಯಿಂದ ಮೋಡ, ಮೋಡದಿಂದ ಗುಡುಗು ಮಿಂಚುಗಳು, ಸುರಿಯುವ ಮಳೆ, ಮಳೆಯಿಂದ ತಣ್ಣಗಾಗುವ ಇಳೆ, ತಣ್ಣಗಿನ ಇಳೆಯಲ್ಲಿ ಬೆಳೆಯುವ ಬೆಳೆ, ಬೆಳೆಯಿಂದ ಅನ್ನ ಅಂದರೆ ಆಹಾರ, ಆಹಾರದಿಂದ ಶಕ್ತಿ. ಶಕ್ತಿಯಿಂದ ನಡೆಯುವ ಜಗದ್ವ್ಯಾಪಾರ. ಒಂದಕ್ಕೊಂದು ಕೊಂಡಿ ತಗುಲಿಸಿಕೊಂಡು, ನಂಟು ಹಾಕಿಕೊಂಡು ಇವೆ. ಹೀಗೆ ಆಕಾಶ, ಗಾಳಿ, ಮಳೆ, ಬೆಳೆ, ಎಲ್ಲವು ಎಲ್ಲ ಜೀವಿಗಳಿಗೂ ಉಪಯೋಗವಾಗುವಂತೆ ಮತ್ತು ಜಗತ್ತಿನ ಎಲ್ಲ ಪ್ರಾಣಿಗಳೂ ಬದುಕುವಂತೆ ಒಂದು ನಂಟು ಹಾಕಿ ಪರಮಾತ್ಮ ಸೃಷ್ಟಿಸಿದ್ದಾನೆ. ಒಂದನ್ನು ಅಗಲಿ ಇನ್ನೊಂದು ಇರಲು ಸಾಧ್ಯವೇ ಇಲ್ಲ. ಭುವಿಯ ಮೇಲೆ ಇರುವ ಸಕಲ ವಸ್ತುಗಳೂ ಒಂದಕ್ಕೊಂದು ನಂಟನ್ನು ಬೆಳೆಸಿ ಗಂಟನ್ನು ಹಾಕಿಕೊಂಡು ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಪೂರಕವಾಗಿದೆ. ಇಲ್ಲಿನ ಯಾವುದಾದರೂ ಒಂದು ನಂಟು ಕಡಿದು ಗಂಟು ಬಿಚ್ಚಿ ಹೋದರೆ, ಎಲ್ಲವು ಏರುಪೇರಾಗುತ್ತದೆ. ನಾವು ಉಸಿರಾಡುತ್ತೇವೆ, ಆದರೆ ಆ ಗಾಳಿಯ ಬಗ್ಗೆ ಎಂದಾದರೂ ಯೋಚಿಸಿದ್ದೇವೆಯೇ? ಅದನ್ನು ಎಷ್ಟು ಬೇಕಾದರೂ ಕಲುಷಿತಗೊಳಿಸಲು ನಾವು ಹೇಸುವುದಿಲ್ಲ. ಹಾಗೆ ನೀರು, ಭೂಮಿ, ಗಿಡ, ಮರ, ಕಾಡು, ಗುಡ್ಡ, ಬೆಟ್ಟ, ಕಲ್ಲು, ಮಣ್ಣು, ಲೋಹ, ಅದಿರು, ಪ್ರಾಣಿ, ಪಕ್ಷಿ ಯಾವುದನ್ನೂ ನಾವು ಬಿಟ್ಟಿಲ್ಲ. ಬೇರೆ ಪ್ರಾಣಿಗಳು ಅವುಗಳನ್ನು ಕೇವಲ ಉಪಯೋಗಿಸಿಕೊಂಡು ಮಾತ್ರ ಜೀವಿಸುತ್ತವೆ. ಆದರೆ ಮನುಷ್ಯ ಮಾತ್ರ ತನ್ನ ಕಣ್ಣಿಗೆ ಬೀಳುವ ಸರ್ವವನ್ನೂ “ತನ್ನ” ಉಪಯೋಗಕ್ಕೆ ಆ ಪರಮಾತ್ಮ ಸೃಷ್ಟಿಸಿದ್ದಾನೆ ಎಂಬ ದುರ್ಭಾವದಿಂದ, ಸ್ವಾರ್ಥದಿಂದ, ಲೋಭದಿಂದ, ದುರಾಸೆಯಿಂದ, ಹೆಚ್ಚು ಹೆಚ್ಚು ಹಣ ಸಂಪಾದಿಸಲು ದುರ್ಮಾರ್ಗಕ್ಕೆ ಇಳಿದು ಎಲ್ಲವನ್ನೂ ನಾಶಮಾಡುತ್ತಿದ್ದಾನೆ. ಒಂದು ಇಂಚನ್ನೂ ಸೃಷ್ಟಿಮಾಡಲು ಯೋಗ್ಯತೆ ಇಲ್ಲದ ಮಾನವ ಕುನ್ನಿ ಎಲ್ಲವನ್ನೂ ನಾಶಮಾಡಲು ಉದ್ಯುಕ್ತನಾಗಿದ್ದಾನೆ. ಆಹಾರಕ್ಕೆ ಬರ, ನೀರಿಗೆ ಬರ, ಶುದ್ಧ ಗಾಳಿಗೆ ಬರ. ಇವೆಲ್ಲ ಮಾನವನ ಲೋಭದಿಂದ ಉಂಟಾದ ಪರಿಸ್ಥಿತಿ ಇದರಿಂದ ಪ್ರೀತಿಗೆ ಬರ, ವಿಶ್ವಾಸಕ್ಕೆ ಬರ, ಸೌಹಾರ್ದಯುತವಾದ ಜೀವನಕ್ಕೆ ಬರ. ಈಗ್ಗೆ 50-60 ವರ್ಷಗಳಿಂದ, ಇಡೀ ಜಗತ್ತಿನ ವಾತಾವರಣವೇ ತೀವ್ರವಾಗಿ ಕಲುಷಿತವಾಗಿದೆ, ಈ ಮನುಷ್ಯನ ಲೋಭದಿಂದ. “ತಾನು ಬದುಕಿದರೆ ಸಾಕು ಮತ್ತೆಲ್ಲರೂ ನಾಶವಾದರೂ ನನಗೆ ಚಿಂತೆಯಿಲ್ಲ” ಎನ್ನುವ ಪರಿ. ಮುಂದಿನ ಪೀಳಿಗೆಗೆ ಎಂತಹ ಸ್ಥಿತಿಯನ್ನು ನಿರ್ಮಾಣ ಮಾಡಿ ಹೋಗುತ್ತಿದ್ದಾನೆ ಎನ್ನುವ ಪರಿಜ್ಞಾನವೇ ಇಲ್ಲದ ಮನುಷ್ಯ. ಆ ಪರಮಾತ್ಮನಿಗಾಗಿ ದೇವಸ್ಥಾನ, ಇಗರ್ಜಿ, ಮಸೀದಿಗಳನ್ನು ಕಟ್ಟಿ ಪೂಜೆಮಾಡುತ್ತೇನೆ ಎನ್ನುವ ಮನುಷ್ಯ, ಆ ಪರಮಾತ್ಮ ಸೃಷ್ಟಿಸಿದ ಎಲ್ಲವನ್ನೂ ನಾಶಮಾಡುತ್ತಿರುವಾಗ, ಎಂತಹ ಪೂಜೆ ಎಂತಹ ಭಕ್ತಿ. ಧಿಕ್ಕಾರವಿರಲಿ ಇಂತಹ ಪ್ರಗತಿಗೆ. ವಾಚಕರೆ, ಕಟುವಾದರೂ ಇದು ಸತ್ಯ. ಇಂದು ನಾವು ಸರಿಯಾಗದೆ ಇದ್ದರೆ, ನಮ್ಮ ಮುಂದಿನ ಪೀಳಿಗೆಯವರು ನಮ್ಮನ್ನು ಕ್ಷಮಿಸುವುದಿಲ್ಲ, ಜೋಕೆ !!!

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-72 )

ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು | ಆವನಾ ಬಂಧುತೆಯ ಜಡೆಯ ಬಿಡಿಸುವನು? || ಜೀವ ಜೀವಕೆ ನಂಟು ಜಡ ಚೇತನಕೆ ನಂಟು | ಆವುದದಕಂಟಿರದು?-ಮಂಕುತಿಮ್ಮ ||

ಪದಗಳ ವಿಸ್ತರಣೆ

ನೋಡಲೆಲ್ಲರೆಲ್ಲರ=ನೋಡಲಿ+ಎಲ್ಲರ+ಎಲ್ಲರ, ಆವುದದಕಂಟಿರದು=ಆವುದು+ಅದಕೆ+ಅಂಟಿರದು,

ಪದಗಳ ತಾತ್ಪರ್ಯ

ವಿಶ್ವದಲಿ=ಜಗತ್ತಿನಲಿ, ನಂಟು=ಬಾಂಧವ್ಯ, ಆವನಾ=ಯಾರು, ಬಂಧುತೆಯ=ಈ ಬಂಧನದ.

ಪದ್ಯದ ಪೂರ್ತಿ ವಿವರಣೆ

ಈ ಜಗತ್ತಿನ ಎಲ್ಲವು, ಒಂದು ರೀತಿಯ ಪರಸ್ಪರ ಕೊಂಡಿಹಾಕಿಕೊಂಡು ಅಂಟಿಕೊಂಡಿವೆ. ಜಡೆಯ ತರಹ ಹೆಣೆದು ಕೊಂಡಿರುವ ಈ ಅಂಟಿನ ನಂಟನ್ನು ಮತ್ತು ಗಂಟನ್ನು ಯಾರು ಬಿಡಿಸುವವರು. ಜೀವ ಜೀವಕೆ ನಂಟು, ಚೇತನ ಮತ್ತು ಜಡಕ್ಕೆ ನಂಟು, “ಯಾವುದದಕಂಟಿರದು” ಅಂದರೆ ಯಾವುದಕ್ಕೆ ಅಂಟಿರದು ಹೇಳಿ ನೋಡುವಾ ಎಂಬಂತೆ ಜಗತ್ತಿನ ಬಾಂಧವ್ಯಗಳನ್ನು ಈ ಮುಕ್ತಕದಲ್ಲೂ, ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ. ವಾಚಕರೆ, ಹೌದಲ್ಲವೇ, ಈ ಜಗತ್ತಿನಲ್ಲಿ ಪರಸ್ಪರ ಸಂಬಂಧವಿಲ್ಲದ ವಸ್ತುಗಳೇ ಇಲ್ಲ ಅಲ್ಲವೇ! ಆ ಪರಮಶಕ್ತಿಗೆ, ಅದೇ ಸೃಷ್ಟಿಸಿದ ಜಗತ್ತಿನೊಂದಿಗೆ ನಂಟು, ಈ ಸೃಷ್ಟಿಯಲ್ಲಿರುವ ಎಲ್ಲವು ಆ ಬೃಹತ್ ಚೇತನದ ಮೂಲಕ ಪರಸ್ಪರ ಸಂಬಂಧವನ್ನು ಹೊಂದಿದೆ. ಯೋಚನೆ ಮಾಡಿದರೆ, ನಮಗೆ ತಿಳಿಯುವುದು ಏನೆಂದರೆ, ಸಂಬಂಧ ಇದೆ ಅಥವಾ ಇರಬೇಕು. ಆದರೆ ಆ ಸಂಬಂಧಗಳ ಸೂಕ್ಷ್ಮ ರೂಪಗಳು ನಮಗೆ ಅರಿವಿಲ್ಲ. ನಕ್ಷತ್ರಗಳು, ಗ್ರಹಗಳು, ಉಪಗ್ರಹಗಳು ಮತ್ತು ಅವುಗಳ ಶೀತೋಷ್ಣಗಳು, ಸುತ್ತುವಿಕೆ ಇವೆಲ್ಲವು ಪ್ರಕೃತಿಯೊಂದಿಗೆ ನಂಟು. ಆ ಪ್ರಕೃತಿಯ ಎಲ್ಲವು ಪರಸ್ಪರ ಸಂಬಂಧವನ್ನು ಹೊಂದಿದೆ. ಒಂದು ಇನ್ನೊಂದಕ್ಕೆ ಪೂರಕ, ಒಂದು ಇನ್ನೊಂದಕ್ಕೆ ಆಹಾರ. ಭೂಮಿಯ ಗುಣಗಳು ಆಕಾಶಕ್ಕೆ ಒಂದು ಸೂತ್ರದಲ್ಲಿ ಹೋಗುತ್ತವೆ. ಮತ್ತೆ ರೂಪ ಪರಿವರ್ತಿತವಾಗಿ ಭುವಿಗೆ ಇಳಿಯುತ್ತವೆ. ಹಾಗೆ ಇಳಿದ ಗುಣಗಳು ಮತ್ತೆ ಗಿಡ ಮರಗಳ, ಹೂ ಹಣ್ಣುಗಳ, ಗೆಡ್ಡೆ ಗೆಣಸುಗಳ ಮೂಲಕ ಪ್ರಕಟವಾಗಿ ಅವನ್ನು ಸೇವಿಸಿದ ಪ್ರಾಣಿಗಳಲ್ಲಿ ಸೇರಿ ಆ ಗುಣಗಳು ಮತ್ತೆ ಆ ಪ್ರಾಣಿಗಳಲ್ಲಿ ರೂಪಾಂತರಗೊಂಡು ಪ್ರಕಟವಾಗುತ್ತದೆ. ಇದು ಜಡ ಮತ್ತು ಜಡಕ್ಕೆ ಇರುವ ಸಂಬಂಧ. ಇನ್ನು ಚೇತನಕ್ಕೆ ಮತ್ತು ಜಡಕ್ಕೆ ಇರುವ ಸಂಬಂಧವನ್ನು ನೋಡಿದರೆ, ಅದು ಬಹಳ ಸೂಕ್ಷ್ಮ. ಜಡದ ಗುಣಗಳು ಜೀವಕ್ಕೆ ಸೂಕ್ಷ್ಮರೂಪದಿ ಹೋಗುವುದು ಮತ್ತು ಜೀವಿಗಳ ಮೇಲೆ ಅವುಗಳ ಪ್ರಭಾವ, ಗುಣಪರಿವರ್ತನೆ, ಗುಣ ಅಭಿವೃದ್ಧಿ ಇವೆಲ್ಲವನ್ನೂ ಆಲೋಚನೆ ಮಾಡಿ ಒಂದು ಗ್ರಂಥವನ್ನು ಬರೆದರೆ ಹತ್ತು ಸಾವಿರ ಪುಟಗಳೂ ಸಾಲದೇನೋ. ಇರಲಿ ಇಂದು ಆ ಬಂಧ ಸಂಬಂಧಗಳು ಇವೆ ಆದರೂ ರೂಪ ಬದಲಾವಣೆಯಾಗುತ್ತಿದೆ. ಕಲುಷಿತಗೊಳ್ಳುತ್ತಿದೆ. ಭೌತಿಕ ಮತ್ತು ರಾಸಾಯನಿಕ ಸಂಕರವಾಗುತ್ತಿದೆ. ಆ ಸಂಕರದಿಂದ ಪ್ರಕೃತಿಯ ಗುಣಗಳೂ ಬದಲಾಗುತ್ತಿವೆ. ಬದಲಾವಣೆಯು ಪ್ರಕೃತಿ ನಿಯಮದಂತೆ ನಡೆಯುತ್ತದಾದರೂ ಇಂದು ಪ್ರಕೃತಿಯಲ್ಲಿ ಆ ಭಗವದ್ ಸೃಷ್ಟಿಯಲ್ಲಿ ಮಾನವನ ಅತಿಯಾದ ಹಸ್ತಕ್ಷೇಪದಿಂದ ಎಲ್ಲವು ಕಲುಷಿತವಾಗುತ್ತಿದೆ. ನಾವು ಏನು ಮಾಡಬಹುದು ಎಂದರೆ ಸಾಧ್ಯವಾದಷ್ಟು ಹೀಗೆ ಕಲುಷಿತವಾಗುವುದನ್ನು ತಡೆಯಲು ಪ್ರಯತ್ನಿಸಬೇಕು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-73 )

ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ | ಅಂಟಿಲ್ಲವೆನಗಿದರೊಳೆನ್ನದಿರದೆಂದುಂ || ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ | ಒಂಟಿಸಿಕೊ ಜೀವನವ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಅಂಟಿಲ್ಲವೆನಗಿದರೊಳೆನ್ನದಿರದೆಂದುಂ=ಅಂಟಿಲ್ಲ+ಎನಗೆ+ಇದರೊಳು+ಎನ್ನದಿರು+ಎಂದೆಂದೂ, ನೀನೊಳಜಗಕೆ=ನೀನು+ಒಳ+ಜಗಕೆ

ಪದಗಳ ತಾತ್ಪರ್ಯ

ಅಂಟು=ಸಂಬಂಧ, ಭಂಟ=ಸೇವಕ, ಒಂಟಿಸಿಕೊ=ಅಂಟಿಸಿಕೊ.

ಪದ್ಯದ ಪೂರ್ತಿ ವಿವರಣೆ

ಈ ಜಗತ್ತಿನಲ್ಲಿ ಆ ಪರಮಾತ್ಮನ ಸೃಷ್ಟಿಯಲ್ಲಿ, ನಂಟುಗಳು ಮತ್ತು ಅಂಟುಗಳು ಮತ್ತು ಗಂಟುಗಳು ಬಹಳಷ್ಟಿವೆ. “ಇದಕ್ಕೆಲ್ಲ ನನಗೆ ಸಂಬಂಧವಿಲ್ಲ” ಎಂದು ಹೇಳಬೇಡ ಎಂದೆಂದೂ. ಆಂತರ್ಯದಲ್ಲಿ ನೀನು ಒಬ್ಬಂಟಿಯಾಗಿರು, ಆದರೆ ಹೊರ ಜಗತ್ತಿಗೆ ನಿನ್ನ ನಂಟು ಒಬ್ಬ ಆಳಿನಂತೆ ಇದ್ದು ಈ ಜೀವನಕ್ಕೆ ನೀ ಅಂಟಿಸಿಕೊ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ಈ ಜಗತ್ತಿನ ಸೃಷ್ಟಿಯಲ್ಲಿ ಎಲ್ಲವು ಒಂದಕ್ಕೊಂದು ನಂಟು ಹಾಕಿಕೊಂಡೇ ಇವೆ. ಯಾವುದೂ ಸಹ ಅಂಟಿಲ್ಲದೆ ಸ್ವತಂತ್ರವಾಗಿ ಇಲ್ಲವೇ ಇಲ್ಲ ನಾವು ನಮ್ಮ ಇಚ್ಛೆ ಮತ್ತು ಪ್ರಮೇಯಗಳಿಲ್ಲದೆಯೇ ಎಲ್ಲಕ್ಕೂ ನಂಟು ಹಾಕಿಕಕೊಂಡಿರುತ್ತೇವೆ. ಎಷ್ಟೋ ನಂಟುಗಳು ನಮ್ಮ ಅರಿವಿಗೇ ಬಂದಿರುವುದಿಲ್ಲ. ಕೆಲವರು “ಇದಕ್ಕೆ ನನಗೆ ಸಂಬಂಧವಿಲ್ಲ” ಎನ್ನುವ ಮಾತನ್ನು ಹೇಳುವುದು ನಾವು ಕೇಳಿರಬಹುದು. ಆದರೆ ಇರುವ ಸಂಬಂಧ ಅವರನ್ನು ಮುಟ್ಟುವ ತನಕ ಅದು ಅವರಿಗೆ ಅರಿವಾಗಿರುವುದಿಲ್ಲ, ಅಷ್ಟೇ. ಸಂಬಂಧಗಳಲ್ಲಿ ಕೆಲವು ವೈಯಕ್ತಿಕ, ಕೆಲವು ಸಾಮೂಹಿಕ, ಕೆಲವು ಸಾಮಾಜಿಕ ಮತ್ತು ಕೆಲವು ರಾಷ್ಟ್ರೀಯ. ಆದರೆ ಯಾವುದೂ ಸಂಬಂಧವಿಲ್ಲವೆನ್ನಲಾಗದು. ನಮ್ಮ ಸಂಬಂಧಗಳು ಎಷ್ಟು ಗಟ್ಟಿ ಅಥವಾ ಎಷ್ಟು ಟೊಳ್ಳು ಎನ್ನುವುದು ಆ ವಸ್ತು, ವ್ಯಕ್ತಿ ಅಥವಾ ವಿಷಯದೊಂದಿಗೆ ನಮ್ಮ ಸಂಬಂಧದ ತೀವ್ರತೆ ಮತ್ತು ಆಳದ ಮೇಲೆ ಆಧಾರಪಟ್ಟಿರುತ್ತದೆ. ನಾವು ಬಹಳಷ್ಟು ಜನ ಸಂಸಾರದಲ್ಲಿ ಇದ್ದರೂ ಸನ್ಯಾಸಿಗಳ ತರಹ ಇರುವವರನ್ನು ಕಂಡಿದ್ದೇವೆ ಮತ್ತು ಹಲವರು ಬೇರೆ ಯಾವ ವಿಷಯದ ಬಗ್ಗೆಯೂ ಯೋಚನೆ ಮಾಡದೆ, ಕೇವಲ ಜಗತ್ತಿನಲ್ಲೇ ಮುಳುಗಿರುವವರೂ ಇದ್ದಾರೆ. ಇದು ಬಿಟ್ಟರೆ ಬೇರೆ ಇಲ್ಲವೇ ಇಲ್ಲ ಎಂದು ಭಾವಿಸಿ ಈ ಜಗತ್ತಿಗೆ ಮತ್ತು ಈ ಜಗತ್ತಿನ ಎಲ್ಲಕ್ಕೂ ಅಂಟಿಕೊಂಡಿರುವವರು ಬೇಕಾದಷ್ಟು ಜನ ಸಿಗುತ್ತಾರೆ. ಇಲ್ಲೇ ಇದ್ದು ಎಲ್ಲ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿದೊಂಡರೂ ಯಾವುದಕ್ಕೂ ಅಂಟದವರೂ ಇದ್ದಾರೆ. ಇದ್ದೂ ಇಲ್ಲದಂತಿರುವುದು ಒಂದು ಯೋಗ. ಅದು ಅಭ್ಯಾಸದಿಂದ ಮತ್ತು ಸಂಸ್ಕಾರದಿಂದ ಬರುತ್ತದೆ. ಅದಕ್ಕೆ ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು ಹೇಳುವುದನ್ನು ಮತ್ತೊಮ್ಮೆ ನೋಡಿ. ಹೊರಜಗತ್ತಿಗೆ ಎಲ್ಲವನ್ನೂ ತಲೆಯ ಮೇಲೆ ಹೊತ್ತುಕೊಂಡು, ತನ್ನ ಜವಾಬ್ದಾರಿ ಎಂಬಂತೆ, ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುವ ಒಬ್ಬ ಸೇವಕನಂತೆ(ಭಂಟ) ಎಲ್ಲಕ್ಕೂ ಅಂಟಿಕೊಂಡು ಕೆಲಸಮಾಡು. ಆದರೆ ಅಂತರಂಗದಲ್ಲಿಯಾವುದನ್ನೂ ಒಂದು ಅಭ್ಯಾಸವನ್ನಾಗಿಸಿಕೊಳ್ಳುವದೋ ಅಥವಾ ಸ್ವಭಾವವಾಗಿಸಿಕೊಳ್ಳುವುದೋ ಮಾಡದೆ ಮನಸ್ಸು ಬುದ್ಧಿ ದೇಹಾತ್ಮಗಳಿಗೆ ಇದರ ಯಾವುದರ "ಅಂಟೂ" ಅಂಟದ ರೀತಿ ಇದ್ದರೆ ಒಳ್ಳೆಯದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಭಗವಂತನನ್ನೇ ನಂಬಿ, “ಪದ್ಮಪತ್ರಮಿವಾಂಭಸಿ-ನೀರಿನಲ್ಲಿರುವ ಕಮಲದೆಲೆಯಂತೆ ಅಂಟಿಯೂ ಅಂಟದಂತಿರುವ ನಿರ್ಲಿಪ್ತ” ಜೀವನವನ್ನು ನಡೆಸಿದರೆ, ಸುಖ-ದುಃಖಗಳ ವರ್ತುಲದಿಂದ ಹೊರಗೆ ನಿಂತು ಕೇವಲ ಸಾಕ್ಷೀಭಾವದಿಂದ ನೋಡುತ್ತಾ ಆನಂದವಾಗಿರಬಹುದು. ನಮ್ಮ ಸುಖ, ದುಃಖ, ನೋವು, ನಲಿವು, ಆನಂದ, ಪ್ರೀತಿ ಪ್ರೇಮ ಮುಂತಾದ ಎಲ್ಲ ಭಾವಗಳಿಗೂ ಈ ಜಗತ್ತಿನೊಂದಿಗೆ ನಮಗೆ ಇರುವ ಅಂಟಿನ ತೀವ್ರತೆಯ ಮೇಲೆ ಆಧಾರಪಟ್ಟಿದೆ. ನಮಗೇನು ಬೇಕು ಎಂದು ನಿರ್ಧರಿಸಲು ನಮಗೆ ಸಂಪೂರ್ಣ ಸ್ವಾತಂತ್ರ್ಯವನ್ನಿತ್ತಿದ್ದಾನೆ ಪರಮಾತ್ಮ. ಆಯ್ಕೆ ನಮ್ಮದು ಅದರಿಂದ ಬರುವ ಎಲ್ಲ ಫಲಗಳೂ ನಮ್ಮದು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-74 )

ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು | ಹೊಮ್ಮುವೆನು ಕೋಟಿರೂಪದಲಿ ನಾನೆಂದು || ಬೊಮ್ಮನೆಳಸಿದನಂತೆ. ಆಯೆಳಸಿಕೆಯೆ ಮಾಯೆ | ನಮ್ಮಿರವು ಮಾಯೆಯಲಿ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಸುಮ್ಮನೊಬ್ಬಂಟಿಯೆಂತಿಹುದು=ಸುಮ್ಮನೆ+ಒಬ್ಬಂಟಿ+ಎಂತೆ+ಇಹುದು,ಬೇಸರವಹುದು=ಬೇಸರವು+ಅಹುದು, ಬೊಮ್ಮನೆಳಸಿದನಂತೆ=ಬೊಮ್ಮನು+ಎಳಸಿದನಂತ,ಆಯೆಳಸಿಕೆಯೆ=ಆ+ಎಳಸಿಕೆಯೆ,ನಮ್ಮಿರವು=ನಮ್ಮ+ಇರವು

ಪದಗಳ ತಾತ್ಪರ್ಯ

ಸುಮ್ಮನೊಬ್ಬಂಟಿಯೆಂತಿಹುದು=ಸುಮ್ಮನೆ+ಒಬ್ಬಂಟಿ+ಎಂತೆ+ಇಹುದು,ಬೇಸರವಹುದು=ಬೇಸರವು+ಅಹುದು, ಬೊಮ್ಮನೆಳಸಿದನಂತೆ=ಬೊಮ್ಮನು+ಎಳಸಿದನಂತ,ಆಯೆಳಸಿಕೆಯೆ=ಆ+ಎಳಸಿಕೆಯೆ,ನಮ್ಮಿರವು=ನಮ್ಮ+ಇರವು

ಪದ್ಯದ ಪೂರ್ತಿ ವಿವರಣೆ

ಆ ಪರಮಾತ್ಮನಿಗೆ ಒಬ್ಬನೇ ಇರುವುದು ಹೇಗೆ ಎಂದು ಅನಿಸಿ ಬೇಸರ ಬಂದು, ನಾನು ಕೋಟಿ ಕೋಟಿ ರೂಪದಲಿ ಹೊರ ಹೊಮ್ಮುವೆನು ಎಂದುಕೊಂಡು ಆ ಮಾಯಾ ರೂಪದ ಜಗತ್ತನ್ನು ತನ್ನೊಳಗಿಂದಲೇ ಸೃಷ್ಟಿ ಮಾಡಿದನಂತೆ. ಆ ಮಾಯೆಯೇ ಈ ಜಗತ್ತು. ನಾವಿರುವುದು ಈ ಮಾಯೆಯೊಳಗೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ಹಾಗಾಗಿ ಪರಬ್ರಹ್ಮ ಹಾಲು. ಉಕ್ಕಿ ಹರಿಯುವ ನೊರೆಯೇ ಸೃಷ್ಟಿ. ಕಣ್ಣಿಗೆ ಕಂಡೂ ನಮಗೆ ಅರ್ಥವಾಗದ್ದು ಮಾಯೆ. ಆದರೆ ಈ ಮಾಯೆಯ ವಿಸ್ತಾರವನ್ನು ನೋಡಿದರೆ ಅಬ್ಬಬ್ಬಾ ಎನ್ನುವಂತಾಗುತ್ತದೆ. ನಭೋ ಮಂಡಲದಲ್ಲಿ ಒಂದು ಮಹಾಸ್ಫೋಟ. ಒಂದೇ ಅಗ್ನಿಗೋಳವಾಗಿದ್ದ ಈ ಜಗತ್ತು ಆಂತರ್ಯದಲ್ಲಿ ಅತ್ಯಧಿಕವಾದ ಶಾಖದಿಂದ ಉಂಟಾದ ಆಂತರಿಕ ಗುರುತ್ವ ಮತ್ತು ಬಾಹ್ಯ ವಿಕಿರಣದಿಂದ ಒಂದೇ ಬಾರಿಗೆ ಸ್ಫೋಟಗೊಂಡು ದೂರ ದೂರಕ್ಕೆಸೆಯಲ್ಪಟ್ಟದ್ದು ಕೇವಲ ಅನಿಲಗಳು. ಆಗ ಅದರ ಶಾಖವೇ 100 ಬಿಲಿಯನ್ ಡಿಗ್ರಿಗಳಿತ್ತಂತೆ. ಹಾಗೆ ಎಸೆಯಲ್ಪಟ್ಟ ಅನಿಲಗಳಲ್ಲಿನ ಅಯಾನಿಕ್ ಕಣಗಳು ಒಂದಕ್ಕೊಂದು ಘರ್ಷಣೆಗೊಂಡು ಅತೀ ಹೆಚ್ಚಾದ ಶಾಖ ಉಂಟಾಗಿ ಆ ಶಾಖದ ಕಾರಣದಿಂದ ಒಂದಕ್ಕೊಂದು ಸೇರಿ ನಕ್ಷತ್ರವಾಗಿ ಆವಿರ್ಭಾವವಾಯಿತಂತೆ. ಅಂತಹ ಸಮಯದಲ್ಲಿ ಕಡಿಮೆ ಶಾಖವಿದ್ದ ಆಕಾಶಕಾಯಗಳು ಗ್ರಹಗಳಾಗಿ ರೂಪಿತಗೊಂಡಿತಂತೆ. ಹಾಗೆ ರೂಪಿತಗೊಂಡ ಗ್ರಹಗಳು ಕೋಟಿ ಕೋಟಿ ವರ್ಷಗಳಲ್ಲಿ ತಣ್ಣಗಾಗಿ ಜೀವಿಯ ಅವಿರ್ಭಾವಕ್ಕೆ ಸೂಕ್ತ ವಾತಾವರಣ ನಿರ್ಮಾಣವಾದಾಗ ಇಲ್ಲಿ ನೀರು, ಸಸ್ಯ, ಆಹಾರ ಹೀಗೆ ಎಲ್ಲವು ಉತ್ಪತ್ತಿಯಾಯಿತಂತೆ. ಇದು ವಿಜ್ಞಾನದ ವಿವರಣೆ. ಆದರೆ ನಮ್ಮಂತಹ ಸಾಮಾನ್ಯರಿಗೆ ಅರ್ಥವಾಗುವುದೇನೆಂದರೆ ಇಡೀ ಸೃಷ್ಟಿಗೆ ಕಾರಣ ಒಂದು ಬೃಹತ್ಚೇತನ. ಆ ಚೇತನ ತನ್ನ ಶಕ್ತಿಯಿಂದಲೇ ತಾನೇ ಈ ಜಗತ್ತಾಗಿ ಪ್ರಕಟಗೊಂಡಿದೆ. ಅದನ್ನೇ ತೆಲುಗಿನ ಭಕ್ತಕವಿ ತಾಳ್ಳಪಾಕ ಅನ್ನಮಾಚಾರ್ಯರು "ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲುಅಟು ತಾನೈ” ಎಂದು, ಅಂದರೆ ‘ಎಲ್ಲರಲ್ಲೂ ಹುಟ್ಟಿ ಎಲ್ಲರಲ್ಲೂ ಸೇರಿ ಎಲ್ಲರ ರೂಪವು ತಾನೇ ಆಗಿ’ ಎಂದು ಹೇಳುತ್ತಾರೆ. ಅದಕ್ಕೆ ನಮಗೆ ಎಲ್ಲವು ಆ ಪರಮಾತ್ಮನೇ. ಆಕಾಶ, ಸೂರ್ಯ, ಭೂಮಿ, ಗಾಳಿ, ಗುಡ್ಡ,ಬೆಟ್ಟ, ನದಿ, ಮರ, ಗಿಡ ಹೀಗೆ ಎಲ್ಲವು ನಮಗೆ ಪರಮಾತ್ಮ ಸ್ವರೂಪವಲ್ಲವೇ? ಆದರೆ ನಮಗೆ ಯಾವುದೂ ಸ್ಪಷ್ಟ ಅಲ್ಲವಲ್ಲ. ಯಾವುದೂ ಸ್ಪಷ್ಟವಾಗಿ ಅರ್ಥವಾಗುವುದಿಲ್ಲ. ನಮ್ಮ ಪರಿಮಿತ ಜ್ಞಾನಕ್ಕೆ ಅದನ್ನು ಭಾವಿಸುವುದೂ ಕಷ್ಟ. ಹಾಗಾಗಿ ಅದು ಮಾಯೆ. ನಮಗೆ ಗೊತ್ತಿರುವುದು ಅಥವಾ ನಾವು ನಂಬಿರುವುದು ಒಂದೇ. ಎಲ್ಲವು ಪರಮಾತ್ಮನಿಂದ ಆಗಿದೆ ಎಲ್ಲವು ಪರಮಾತ್ಮನಿಂದಲೇ ನಡೆಯುತ್ತದೆ. ಪರಮಾತ್ಮ ಎನ್ನುವುದು ಒಂದು ಶಕ್ತಿ. ಆ ಶಕ್ತಿಯಿಂದಲೇ ಸಕಲವು. ಎಲ್ಲದಕ್ಕೂ ಅದೇ ಮೂಲ ಮತ್ತು ಎಲ್ಲದಕ್ಕೂ ಅದೇ ಗಮ್ಯ. ನಾವು ಅದಕ್ಕೆ ಶರಣಾಗಿ ನಿಯಮಿತ ಕಾರ್ಯಗಳನ್ನು ಮಾಡುತ್ತಾ ಅಹಂಕಾರ ತೊರೆದು ಅವನ ಸೃಷ್ಟಿಯಲ್ಲಿಯ ಎಲ್ಲದರಲ್ಲೂ ಆ ಪರಮ ಶಕ್ತಿಯ ರೂಪವನ್ನೇ ನೋಡುತ್ತಾ ಬಾಳಿದರೆ ಸುಖ. ಅದನ್ನು ಬಿಟ್ಟು ಬೇರೆಯಾವುದೇ ಭಾವನೆ ಇದ್ದರೆ ನಿರಂತರ ಸಂಕಟ, ನೋವು ಮತ್ತು ದುಃಖ. ನಂಬುವುದೂ ಬಿಡುವುದೂ ಅವರವರ ನಂಬಿಕೆಗೆ ಬಿಟ್ಟದ್ದು. ವಾಚಕರೆ, ನಾವು ಸ್ವತಂತ್ರರು. ನಂಬುವುದೂ ಬಿಡುವುದೂ ನಮ್ಮ ಆಯ್ಕೆಗೆ ಸೇರಿದ್ದು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-75 )

ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ | ವಿಸ್ತರಿಸುವಂದದಿ ಸೃಷ್ಟಿ ತನ್ನ ಮೂಲವನು || ಮರೆಮಾಚಿ ತಾನೇ ಮೆರೆಯುತ್ತಿಹುದು ಕಣ್ಗಳಿಗೆ | ನೊರೆಸೃಷ್ಟಿ ಪಾಲ್‌ ಬ್ರಹ್ಮ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಬೀಜವನಿಲ್ಲವೆನಿಸಿ=ಬೀಜವನ್ನು+ಇಲ್ಲ+ಎನಿಸಿ, ವಿಸ್ತರಿಸುವಂದದಿ=ವಿಸ್ತರಿಸುವ+ಅಂದದಿ

ಪದಗಳ ತಾತ್ಪರ್ಯ

ಪದ್ಯದ ಪೂರ್ತಿ ವಿವರಣೆ

ಒಂದು ಮರ ತನ್ನ ಮೂಲವಾದ ಬೀಜವನ್ನು ಇಲ್ಲವಾಗಿಸಿ ತಾನು ಬೆಳೆದು ರೆಂಬೆ ಕೊಂಬೆಗಳಿಂದ ವಿಸ್ತಾರವಾಗಿ ಬೆಳೆವಂತೆ ಈ ಜಗತ್ತೂ ಸಹ ತನ್ನ ಮೂಲವಾದ ಆ ಅಗ್ನಿಗೋಳವನ್ನು ಇಲ್ಲವಾಗಿಸಿ ಮೆರೆಯುತ್ತಿದೆ ಮತ್ತು ನಮಗೆ ಕಾಣುತ್ತಿದೆ. ಇದು ಹೇಗಿದೆ ಎಂದರೆ ಆ ಪರಬ್ರಹ್ಮ ಹಾಲಾದರೆ ಅತೀ ಉಷ್ಣತೆಯಿಂದ ಕಾದು ಕಾದು ಉಕ್ಕುವ ಹಾಲಿನ ನೊರೆಯಂತೆ ಈ ಸೃಷ್ಟಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ಒಂದು ಬೀಜದೊಳಗೆ ಒಂದು ಜೀವಕಣ. ಅದಕ್ಕೆ ಒಂದು ಹೊದಿಕೆ. ಹೊದಿಕೆಗೆ ಪೂರಕವಾದ ಮತ್ತು ಸರಿಯಾದ ಪಾತ್ರ ದೊರಕಿದರೆ ಆ ಬೀಜ ಮೊಳೆತು ಸಸಿಯಾಗಿ, ಗಿಡವಾಗಿ, ಮರವಾಗಿ ತನ್ನ ಸ್ಥಾನದಲ್ಲೇ ಹರಡಿಕೊಳ್ಳುತ್ತದೆ. ಆದರೆ ಆ ಮರಕ್ಕೆ ಮೂಲವಾದ ಬೀಜ ತನ್ನನ್ನು ತಾನು ಇಲ್ಲವಾಗಿಸಿಕೊಂಡು, ತನ್ನ ಶಕ್ತಿಯಿಂದಲೇ ಆ ಮರದಲ್ಲಿ ಕೋಟ್ಯಾಂತರ ಬೀಜಗಳಿಗೆ ಕಾರಣವಾಗುತ್ತದೆ. ಈ ಜಗತ್ತಿನ ಸೃಷ್ಟಿಯೂ ಹಾಗೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಒಂದು ಗೋಳ. ಒಳಗೆ ಭಯಂಕರ ಶಾಖ. ಬೀಜ ತನ್ನೊಳಗಿನ ಶಕ್ತಿ ಮತ್ತು ಹೊರಗಿನ ಶಕ್ತಿಯ ಕ್ರಿಯೆಯಿಂದ ಸಿಡಿದು ಸಸಿಯಾದಂತೆ, ಆ ಗೋಳವು ಸಿಡಿದು ಈ ಜಗತ್ತೆಂಬ ಮಹಾವೃಕ್ಷವಾಗಿದೆ ಎನ್ನುವುದು ವಿಜ್ಞಾನ. ಕಾದ ಹಾಲು ಉಕ್ಕುವಂತೆ ಉಕ್ಕಿ ನೊರೆಯಲ್ಲ ಹರಡುವಂತೆ ಈ ಜಗತ್ತು ಊಹಾತೀತವಾದ ವಿಸ್ತಾರಕ್ಕೆ ಹರಡಿದೆ. ಹೇಗೆ ಬೆಳೆದ ಮರವು ಸಹ ತನ್ನ ಅಸ್ತಿತ್ವಕ್ಕೆ ಒಳಗಿನಿಂದ ಮತ್ತು ಹೊರಗಿನಿಂದ ಸಾರ ಹೀರುತ್ತದೆಯೋ ಹಾಗೆಯೇ ಈ ಜಗತ್ತಿನ ಎಲ್ಲವು ತನ್ನ ಮೂಲವಾದ ಆ ಪರಮ ಚೇತನದ ಆಧಾರದ ಮೇಲೆ ನಿಂತಿದೆ. ಒಳಗೂ ಅದೇ ಚೇತನ ಹೊರಗೂ ಅದೇ ಚೇತನ. "ಯತಃ ಸರ್ವಾಣಿ ಭೂತಾನಿ ಭವಂತ್ಯಾದಿ ಯುಗಾಗಮೆ" ಎಂದರೆ ಯಾವುದರಿಂದ ಯುಗದ ಆದಿಯಲ್ಲಿ ಎಲ್ಲವು ಪ್ರಕಟಗೊಂಡವೋ ಅದೇ ಆ ಬೃಹತ್ ಚೇತನ. ಈ ಜಗತ್ತಿನ ಎಲ್ಲವನ್ನೂ ಒಂದು ಸೂತ್ರದಲ್ಲಿ ಹಿಡಿದಿಟ್ಟಿರುವ ಆ ಬೃಹತ್ ಚೇತನವೇ ಆ ಪರಮ ಶಕ್ತಿ. ಅದನ್ನೇ ಪರಬ್ರಹ್ಮ, ದೇವರು ಪರಮಾತ್ಮ ಎನ್ನುವ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತೇವೆ. ಹಾಗಾದರೆ ನಮಗೆಲ್ಲ ಒಂದು ಪ್ರಶ್ನೆ ಇದೆ ಅಲ್ಲವೇ? ಅದು “ನಾವು ಯಾರು”? ಎಂಬುದು. ನಾವೆಲ್ಲಾ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಹೋಗುವ ಆ ಬೃಹತ್ ಚೇತನದ ಒಂದು ಸೂಕ್ಷ್ಮ ಕಣವಷ್ಟೇ!!!!!. ಹಾಲ ಮೇಲಿನ ನೊರೆಯಂತೆ. ಮನಸ್ಸು ಬುದ್ಧಿ ದೇಹಾತ್ಮಗಳ ಒಂದು ಗೂಡು. ಈ ನಾಲ್ಕೂ ಒಂದು ಕಡೆ ಬಂದು ಸೇರಿರುವ ಒಂದು ಮನೆ. ಸೃಷ್ಟಿಯ ಎಲ್ಲಕ್ಕೂ ಇದು ಅನ್ವಯ. ಪ್ರಮಾಣ ಮತ್ತು ಪರಿಮಾಣ ಬೇರೆಬೇರೆ ಅಷ್ಟೇ. ಮೇಲೆ ಕೊಂಚ ಅಹಂಕಾರ. ಅದು ನಮ್ಮನ್ನು ಈ ಜಗತ್ತಿನಲ್ಲಿ ಆಡಿಸುತ್ತದೆ. ನಮ್ಮ ಭಾಗಗಳಾದ ದೇಹ ಮನಸ್ಸು ಬುದ್ಧಿ ಮತ್ತು ಆತ್ಮಗಳ ಮೂಲವನ್ನು ಅರಿಯುವುದೇ ಆಧ್ಯಾತ್ಮ. ಆ ಪರಮಾತ್ಮನ ಲೀಲಾ ವಿನೋದವನ್ನು ಅರ್ಥ ಮಾಡಿಕೊಳ್ಳುವುದೇ ಆಧ್ಯಾತ್ಮದ ಗುರಿ. ವಾಚಕರೆ, ಈ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನವು ಆ ಬೃಹತ್ ಚೇತನದ ಕಾರಣದಿಂದಲೇ ನಡೆಯುತ್ತದೆ. ಅದು ಹಾಲಾದರೆ ಈ ಜಗತ್ತು ನೊರೆ. ಇದು ಚಿಂತನೆ ಮತ್ತು ಮನನಕ್ಕೆ ಒಂದು ಸೂಕ್ತವಿಚಾರ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-76 )

ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ | ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲೆಸಿ || ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ | ವಿಹರಿಪನು ನಿರ್ಲಿಪ್ತ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಬಹುವಾಗಲೆಳಸಿ=ಬಹು+ಆಗಲು+ಎಳಸಿ, ತಾನೊಬ್ಬಂಟಿ=ತಾನು+ಒಬ್ಬಂಟಿ, ವಿಶ್ವವನಲ್ಲಿ=ವಿಶ್ವವನು+ಅಲ್ಲಿ

ಪದಗಳ ತಾತ್ಪರ್ಯ

ತಾನೊಬ್ಬಂಟಿ=ಒಬ್ಬನೇ ಇದ್ದವನು, ಬಹುವಾಗಲೆಳಸಿ=ಬಹಳವಾಗಬೇಕೆಂದೆಣಿಸಿ, ಬೊಮ್ಮ=ಪರಬ್ರಹ್ಮ, ನಿಜಮಹಿಮೆಯಿಂ=ತನ್ನ ನಿಜ ಮಹಿಮೆಯಿಂದ, ಸೃಜಿಸಿ=ಸೃಷ್ಟಿಸಿ, ಜೀವತೆಯ=ಜೀವನವ, ಸರಸವಿರಸದಲಿ=ಸರಸ ಮತ್ತು ವಿರಸದಲ್ಲಿ, ವಿಹರಿಪನು ನಿರ್ಲಿಪ

ಪದ್ಯದ ಪೂರ್ತಿ ವಿವರಣೆ

ಆ ಮಹಾ ಶಕ್ತಿ ಒಂದೇ ಇತ್ತು. ಅದು ತಾನೇ ಹಲವಾಗಿ ಪ್ರಕಟಗೊಳ್ಳಬೇಕೆಂದು, ತನ್ನ ಸಂಕಲ್ಪದಿಂದ, ತನ್ನದೇ ಆದ ಪರಮ ಶಕ್ತಿಯಿಂದ ಈ ವಿಶ್ವವನ್ನು ಸೃಷ್ಟಿಸಿ, ತನ್ನ ಶಕ್ತಿಯನ್ನು ಪ್ರತಿಯೊಂದರಲ್ಲೂ ಇರಿಸಿ ತನ್ನ ಇರವನ್ನು ನಿಗೂಢವಾಗಿರಿಸಿಕೊಂಡು, ತಾನು ಮಾತ್ರ ನಿರ್ಲಿಪ್ತತೆಯಿಂದ ಈ ಜಗವನ್ನು ನಡೆಸಿಕೊಂಡು ಹೋಗುತ್ತಿದ್ದಾನೆ ಎನ್ನುತ್ತಾರೆ ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು. ಒಂದೇ ಇದ್ದ ಆ ಬೃಹತ್ ಚೇತನ ಹಲವಾಗಿ, ಆ ಹಲವು ಬಹಳವಾಗಿ ಪ್ರಕಟಗೊಂಡು, ಬೇರೆ ಬೇರೆ ರೂಪಗಳನ್ನು ಪಡೆದುಕೊಂಡು ಬೇರೆ ಬೇರೆ ಕಾರ್ಯಗಳನ್ನು ವಹಿಸಿಕೊಂಡು ಜಗತ್ತಿನ ಎಲ್ಲ ಚಿತ್ರ ವಿಚಿತ್ರಗಳಲ್ಲೂ ತಾನೇ ಇದ್ದುಕೊಂಡು ಒಂದು ರೂಪವಿಲ್ಲದೆ ಹಲವಾರು ರೂಪಗಳಿಂದ ಈ ಜಗತ್ತಿನಲ್ಲಿ ಪ್ರಕಟವಾಗಿದೆ ಎಂಬುವುದು ವಿಜ್ಞಾನವು ಹೌದು, ವೇದಾಂತವು ಹೌದು. ವೇದಾಂತ ಮತ್ತು ವಿಜ್ಞಾನ ಬೇರೆ ಅಲ್ಲ. ಆಧುನಿಕ ವಿಜ್ಞಾನ ಮಾತ್ರ ವೇದಾಂತದ ಜ್ಞಾನಕ್ಕಿಂತ ಬಹಳ ಹಿಂದಿದೆ, ಅಷ್ಟೇ. ಈ ಪರಮಾತ್ಮನ ಸೃಷ್ಟಿ ಎಷ್ಟು ಅಗಾಧವೆಂದರೆ, ಎಲ್ಲ ಆಯಾಮಗಳನ್ನೂ ನೋಡಲಾಗದೆ, ನಾವು ನೋಡಿದ್ದೇ ಸತ್ಯವೆಂಬ ಭ್ರಮೆಯಲ್ಲಿರುತ್ತೇವೆ, ಅದೇ ಮಾಯೆ. ನಮ್ಮ ದೈನಂದಿನ ಕೆಲಸಗಳಲ್ಲಿ ನಾವು ತೋರುವ ಪ್ರೀತಿ, ಪ್ರೇಮ, ಸ್ನೇಹ, ವೈರ, ದಯೆ, ಕರುಣೆ, ಕೋಪ, ತಾಪ, ಜಾಣ್ಮೆ ಮುಂತಾದ ಎಲ್ಲ ಭಾವಗಳೂ ಭ್ರಮೆಯಷ್ಟೇ!! ಇಂಥ ಭ್ರಮೆಗೆ ಕಾರಣ ಸತ್ಯದ ಅರಿವಿನ ಅಭಾವ. ಮನುಷ್ಯರಷ್ಟೇ ಅಲ್ಲ ಸಕಲ ಜಗತ್ತು ಈ ಮಾಯೆಯಲ್ಲಿ ನಿಂತಿದೆ. ಅದಕ್ಕೆ ದಾಸರೆಂದರು “ನೀ ಮಾಯೆಯೋ? ನಿನ್ನೊಳು ಮಾಯೆಯೋ?” ಎಂದು. ಆ ಪರಮ ಪುರುಷನನ್ನು ಅರಿಯಲು ಮಾಯೆಯ ಪರದೆ ಅಡ್ಡ. ಈ ಮಾಯೆಯನ್ನು ಅರಿಯಲು ಅಹಂಕಾರದ ಪರದೆ ಅಡ್ಡ. ಪರದೆ ಸುಲಭವಾಗಿ ಸರಿಸಲು ಆಗುವುದಿಲ್ಲ. ಅದಕ್ಕೆ ಸಾಧನೆ ಬೇಕು, ಕಷ್ಟಪಟ್ಟು ಸರಿಸಬೇಕು. ಮತ್ತೆ ಮತ್ತೆ ಹಿಂದಕ್ಕೆ ಬರುವ ಈ ಪರದೆ ಬಹಳ ಗಟ್ಟಿ. ನಾವು ಅದಕ್ಕಿಂತ ಗಟ್ಟಿಯಾದರೆ, ಪರದೆ ಸರಿಯುತ್ತದೆ. ಪರದೆ ಸರಿದರೆ ಸತ್ಯದರ್ಶನ. ಹಾಗಾದರೆ, “ಈ ಪರಮಾತ್ಮ ಇದನ್ನೆಲ್ಲ ಏಕೆ ಸೃಷ್ಟಿ ಮಾಡಿದ? ಅವನಿಗೇನು ಮಾಡೋಕೆ ಬೇರೆ ಕೆಲಸ ಇರಲಿಲ್ಲವೇ? ಸೃಷ್ಟಿ ಮಾಡಿ ನಮಗೆಲ್ಲ ಈ ಕೆಲಸಕ್ಕೆ ಬಾರದ ಭಾವನೆಗಳನ್ನು ಕೊಟ್ಟು, ಮಾಯೆ ಎಂಬ ಪರದೆಯನ್ನೂ ಇಟ್ಟು, “ಸಾಧ್ಯವಾದರೆ ಸರಿಸಿಕೊಂಡು ಬನ್ನಿ” ಅಂತ ನಮ್ಮನ್ನೆಲ್ಲ ನಮ್ಮ ಪಾಡಿಗೆ ಬಿಟ್ಟು ನಿರ್ಲಿಪ್ತನಾಗಿ ಏಕೆ ಕುಳಿತಿದ್ದಾನೆ?” ಎಂದರೆ, ಇದು ಅವನ “ಲೀಲಾ ವಿನೋದ” ಹಾಗೆ ನಮ್ಮ ಮನಸ್ಸಿಗೆ ಬರುವುದಕ್ಕೆ ಕಾರಣ ಇಲ್ಲಿ “ನಾವು” ಇದ್ದೇವೆ ಎಂದುಕೊಂಡರೆ ಮಾತ್ರ. ಎಲ್ಲವು ಅವನೇ ಎಂದಾಗ ಆ ಪ್ರಶ್ನೆ ಉದ್ಭವವಾಗುವುದಿಲ್ಲ. "ಈಶಾವಾಸ್ಯಮಿದಂ ಸರ್ವಂ ಯತ್ಕಿಂಚಿತ್ ಜಗತ್ಯಾಂ ಜಗತ್” ಎಂದು ಈಶಾವಾಸ್ಯ ಉಪನಿಷತ್ತು ಹೇಳುವವಂತೆ ಎಲ್ಲವು ಆ ಪರಮಾತ್ಮನೇ. ಚಿಕ್ಕದು, ದೊಡ್ಡದು, ಕಾಣುವುದು, ಕಾಣದ್ದು, ಗಿಡ, ಮರ, ಬೆಟ್ಟ ಗುಡ್ಡ, ಆಕಾಶ, ನದಿ, ಗ್ರಹಗಳು, ನಕ್ಷತ್ರಗಳು, ಪ್ರಾಣಿಗಳು, ಪಕ್ಷಿಗಳು ಹೀಗೆ ನಾವೇನೇನು ಕಾಣುತ್ತೇವೆಯೋ, ಊಹಿಸಿಕೊಳ್ಳುತ್ತೇವೆಯೋ, ನಾವು ಏನು ಕಾಣಲಾರೆವೋ, ಯಾವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲವೋ, ಅದೆಲ್ಲವು ಆ ಬೃಹತ್ ಚೇತನವೇ ಆಗಿದೆ. ಹಾಗಾಗಿ ವಾಚಕರೆ, ನೋಡಿ, ಯೋಚಿಸಿ, ಊಹಿಸಿ, ಅನುಭವಿಸಿ ಈ ಜಗತ್ತು ಸತ್ಯವೋ, ನಮ್ಮ ಇರವು ಸತ್ಯವೋ ಎಂದು ಅರಿತು, ಸತ್ಯವಾವುದು ಎಂದು ಅರಿಯಲು ನಾವು ಪ್ರಯತ್ನ ಪಡೋಣ. ನಿರಂತರ ಪ್ರಯತ್ನದಿಂದ ನಮಗೆ ಅದರ ಅರಿವು ಮೂಡಬಹುದು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-77 )

ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ | ರನ್ನವೋ ಬ್ರಹ್ಮ; ನೋಡವನು-ನಿಜಪಿಂಛ || ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲಿನೊಲು | ತನ್ಮಯನೋ ಸೃಷ್ಟಿಯಲಿ-ಮಂಕುತಿಮ್ಮ ||

ಪದಗಳ ವಿಸ್ತರಣೆ

ವರ್ಣದೆಣಿಕೆಯಲಿ=ವರ್ಣದ+ಎಣಿಕೆಯಲಿ, ನವಿಲಿನೊಲು=ನವಿಲಿನ+ಒಲು.

ಪದಗಳ ತಾತ್ಪರ್ಯ

ನಿಜಪಿಂಛ=ನೈಜ ಬಣ್ಣಗಳ ನವಿಲುಗರಿ, ವರ್ಣದೆಣಿಕೆಯಲಿ=ಬಣ್ಣಗಳ ಎಣಿಕೆಯಲಿ, ನವಿಲಿನೊಲು=ನವಿಲಿನಂತೆ.

ಪದ್ಯದ ಪೂರ್ತಿ ವಿವರಣೆ

ತನ್ನ ಹೊಳಹೊಳಪುಗಳ ತಾನೇ ನೆನೆನೆನೆದು ಮೈ ಮರೆತಂತ ರತ್ನವೋ ಆ ಬ್ರಹ್ಮ. ಅಲ್ಲಿ ನೋಡು ಅವನು ಒಂದು ನವಿಲು. ತನ್ನ ಗರಿಗಳನ್ನೆಲ್ಲ ಕೆದರಿ ನೃತ್ಯ ಮಾಡುವಾಗ ತನ್ನ ಗರಿಗಳ ಬಣ್ಣಗಳನ್ನು ಕಂಡು ತಾನೇ ತನ್ಮಯವಾಗುವಂತೆ, ಪರಮಾತ್ಮ ಇಡೀ ಜಗತ್ತನ್ನು ಸೃಷ್ಟಿಸಿ ಅದಕ್ಕೆ ಜಡವೆಂಬ ರೂಪ ಕೊಟ್ಟು, ಆ ಜಡದೊಳಗೆ ಚೇತನವಾಗಿ ತಾನೇ ಪ್ರವೇಶಿಸಿ ಆಯಾಯ ಜಡಗಳ ಗುಣಗಳನ್ನು ತಾನೂ ಅನುಭವಿಸುತ್ತಾ ಇರುವ ಆ ಪರಮಾತ್ಮನು ತಾನೇ ಮಗ್ನನೋ? ಎನ್ನುವ ಪ್ರಶ್ನೆ ಕೇಳುತ್ತಾರೆ ಮಾನ್ಯ ಗುಂಡಪ್ಪನವರು. ವಾಚಕರೆ ನೋಡಿ ನಾವು ನಮ್ಮ ದೇಹದ ಭಾಗಗಳನ್ನು ಹೇಗೆ ಹೇಳುತ್ತೇವೆ ಎಂದು. “ನನ್ನ ಕೈ” ನನ್ನ ಕಾಲು“ನನ್ನ ತಲೆ” ನನ್ನ ಮನಸ್ಸು” ನನ್ನ ಬುದ್ಧಿ ಹೀಗೆ ಎಲ್ಲಕ್ಕೂ “ನನ್ನ” ಎಂದು ಸೇರಿಸುತ್ತೇವೆ. ನಮ್ಮಲಿರುವ ಒಂದು ಪುಸ್ತಕಕ್ಕೂ “ನನ್ನ ಪುಸ್ತಕ” ಎನ್ನುತ್ತೇವೆ. ನಾನು ಪುಸ್ತಕವನ್ನು ಹೊಂದಿದ್ದೇನೆ ಆದ್ದರಿಂದ “ನನ್ನಪುಸ್ತಕ” ಹಾಗೆಯೇ “ಕೈ, ಕಾಲು, ಮೈ, ತಲೆ, ಮನಸ್ಸು, ಬುದ್ಧಿ”ಗಳನ್ನು ನಾನು ಹೊಂದಿದ್ದೇನೆ ಆದ್ದರಿಂದ “ನನ್ನ” ಎನ್ನುತ್ತೇವೆ. ಹಾಗಾದರೆ ಇವನ್ನೆಲ್ಲ ಹೊಂದಿರುವ ಆ “ನಾನು” ಯಾರು ಎಂದರೆ, ಅದೇ ಆ ಬೃಹತ್ ಚೇತನದ ಒಂದು ಅಂಶ. ಅಂದರೆ ಆ ಬೃಹತ್ ಚೇತನವೇ ಇವನ್ನೆಲ್ಲ ಹೊಂದಿ “ನನ್ನದು ನನ್ನದು” ಎಂದು ಹೇಳುತ್ತಾ ಅದರಿಂದ ಉಂಟಾಗಬಹುದಾದ ನೋವು ನಲಿವು ಆನಂದ ದುಃಖಗಳಂಥಾ ಅನುಭವಗಳನ್ನು ಅನುಭವಿಸುತ್ತಾ ಈ ಸೃಷ್ಟಿಯಲ್ಲೇ ಮಗ್ನವಾಗಿದೆ. ಆ ಬೃಹತ್ ಚೇತನವನ್ನು ನಮ್ಮ ಶಿವನಸಮುದ್ರದಲ್ಲಿ ಉಂಟಾಗುವ ವಿದ್ಯುತ್ತಿಗೆ ಹೋಲಿಸಿದರೆ, ನಮ್ಮನ್ನು ನಾವು ನಮ್ಮ ಮನೆಗಳಲ್ಲಿ ಬೆಳಗುವ ಒಂದು ಸಣ್ಣ ಬಲ್ಬ್ಗೆ ಹೋಲಿಸಿಕೊಳ್ಳಬಹುದು. ಇಲ್ಲಿ ಬೆಳಗುವುದು ಯಾವುದೆಂದರೆ ಅಲ್ಲಿನ ವಿದ್ಯುತ್. ಆದರೆ ಅದು ಬೆಳಗಲು ಸಾಧನ ಈ ಸಣ್ಣ ಬಲ್ಬ್. ಇಡೀ ದೇಶದಲ್ಲಿ ಬೆಳಗುವ ಮತ್ತು ಕೆಲಸ ಮಾಡುವ ಎಲ್ಲ ವಿದ್ಯುತ್ ಉಪಕರಣಗಳಿಗೂ ಆ ವಿದ್ಯುತ್ತಿನ ಮೂಲ ಒಂದೇ. ಹಾಗೆಯೇ ಈ ಸೃಷ್ಟಿಯಲ್ಲಿ ನಾವೆಲ್ಲಾ ಒಂದೊಂದು ಬಲ್ಬುಗಳು. ನಮ್ಮಲ್ಲಿ ಬೆಳಗುವ ಚೇತನವು ಸಹ ಆ ಪರಮ ಚೇತನದ ಒಂದಂಶ. ಇಲ್ಲಿ "ನಾನು" ಎನ್ನುವ ಭಾವ ಇದೆ. ಹಾಗಾಗಿ ನಾನು ನೋಡುತ್ತೇನೆ, ಮಾಡುತ್ತೇನೆ, ಓದುತ್ತೇನೆ, ಓಡುತ್ತೇನೆ. ಇತ್ಯಾದಿಗಳ ಪ್ರಯೋಗ ಮಾಡುತ್ತೇವೆ. ಎಂದು “ನಾನು” ಎನ್ನುವ ಭಾವವಿಲ್ಲವೋ ಅಂದು ನಾವು ಸಹ ಆ ಬೃಹತ್ ಚೇತನದ ರೀತಿಯೇ ಇಲ್ಲಿ ಆನಂದದಿಂದ ಮಗ್ನರಾಗಿರಬಹುದು. ಎರಡೆಂದುಕೊಂಡರೆ ಭೇದ ಮತ್ತು ಅದಕ್ಕೆ ಅನ್ವಯಿಸುವ ಭಾವ. ಒಂದೇ ಆದರೆ ಭೇದವಿಲ್ಲ. ನವಿಲು ತನ್ನ ಮೈಮೇಲಿನ ಗರಿಗಳ ವಿವಿಧ ಬಣ್ಣಗಳನ್ನು ಕಂಡು ಆನಂದದಿಂದ ಮಗ್ನವಾಗಿ ಹೇಗೆ ನಾಟ್ಯ ಮಾಡುತ್ತದೋ ಹಾಗೆಯೇ ಆ ಪರಮಾತ್ಮ ತನ್ನಿಂದ ಆದ, ತಾನೇ ಇರುವ ಈ ಜಗತ್ತಿನ ಎಲ್ಲದರೊಳಗೂ ಇದ್ದು ಆ ಎಲ್ಲ ವಸ್ತುಗಳಲ್ಲಿ ಉಂಟಾಗುವ ಎಲ್ಲ ಭಾವಗಳನ್ನೂ ತಾನೇ ಅನುಭವಿಸುತ್ತಾ ಮತ್ತನಾಗಿ, ತನ್ಮಯನಾಗಿ ಆನಂದದಿಂದ ಇದ್ದಾನೆ ಎನ್ನುವುದೇ ಈ ಮುಕ್ತಕದ ಹೂರಣ. ನಾನು, ನಾನು ಅನುಭವಿಸುತ್ತಿದ್ದೇನೆ ಎಂದು ಭಾವಿಸದೆ, ಎಲ್ಲವು ಆ ಪರಮಾತ್ಮನಿಗೆ ಸೇರಿದ್ದು ಎನ್ನುವಭಾವ ತಳೆದಾಗ, ನಮ್ಮಲ್ಲಿರುವ ಅಹಂಕಾರವು ಕಡಿಮೆಯಾಗಬಹುದು ಅಲ್ಲವೇ ವಾಚಕರೆ?

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-78 )

ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ | ಪರಿಕಿಸುತೆ ಮುಕುರದಲಿ ಸೊಗಸುಗಳ ಪರಿಯ || ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ | ಮೆರೆಯುವನು ಪರಬೊಮ್ಮ-ಮಂಕುತಿಮ್ಮ ||

ಪದಗಳ ವಿಸ್ತರಣೆ

ತನ್ನೊಡವೆಗಳ=ತನ್ನ+ಒಡವೆಗಳ, ಮರೆತೆಲ್ಲವನು=ಮರೆತು+ಎಲ್ಲವನು, ವಿಲಸಿಪಂತೆ=ವಿಲಸಿಪ+ಅಂತೆ.

ಪದಗಳ ತಾತ್ಪರ್ಯ

ತಳೆಯುತ್ತ=ಧರಿಸುತ್ತ, ಪರಿಕಿಸುತೆ=ಪರೀಕ್ಷಿಸುತ್ತಾ, ಮುಕುರದಲಿ=ಕನ್ನಡಿಯಲಿ, ಸೊಗಸುಗಳ=ಅಂದಚೆಂದಗಳ, ಪರಿಯ=ವಿಧಗಳನ್ನು, ವಿಲಸಿಪಂತೆ=ವಿಲಾಸದಿಂದ

ಪದ್ಯದ ಪೂರ್ತಿ ವಿವರಣೆ

ಒಂದು ಹೆಣ್ಣು ಹೇಗೆ ತೊಟ್ಟ ಒಡವೆಗಳನ್ನು ತೆಗೆದು ಮತ್ತೆ ತೊಟ್ಟು ಕನ್ನಡಿಯಲಿ ತನ್ನ ಅಂದ ಚೆಂದವನ್ನು ನೋಡಿಕೊಳ್ಳುತ್ತಾ ಮೈ ಮರೆಯುತ್ತಾಳೋ, ಹಾಗೆ ತಾನೆ ಸೃಜಿಸಿದ ಈ ಜಗತ್ತಿನಲ್ಲಿ ಬೇರೆ ಬೇರೆ ದೇಹಗಳನ್ನು ಧರಿಸಿ ಅದರಲ್ಲಿ ಸಿಗುವ ಹತ್ತು ಹಲವಾರು ಭಾವನೆಗಳನ್ನು ಆನಂದದಿಂದ ಅನುಭವಿಸುತ್ತಾ ಮೈ ಮರೆತಿದ್ದಾನೋ ಏನೋ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ಸಾಮಾನ್ಯ ತಿಳುವಳಿಕೆ ಏನೆಂದರೆ ಎಲ್ಲ ಪ್ರಾಣಿಗಳೂ ಹುಟ್ಟುತ್ತವೆ, ಕೆಲಕಾಲ ಬದುಕಿ ಸಾಯುತ್ತವೆ ಎಂದು. ಆದರೆ ವಾಸ್ತವಿಕತೆಯೇ ಬೇರೆ ಅಲ್ಲವೇ? ಹುಟ್ಟು ಸಾವುಗಳೆಂಬುದು ಕೇವಲ ನಮ್ಮ ಪರಿಭಾಷೆಗಳಷ್ಟೇ ಎಂದು ಅನಿಸುತ್ತದೆ. ಇದನ್ನು ರೂಪಾಂತರವೆಂದರೆ ಹೆಚ್ಚು ಸೂಕ್ತವೆಂದು ಅನಿಸುತ್ತದೆ. ಬೇರೆ ಬೇರೆ ಮೂಲಗಳಿಂದ ಬಂದ ದೇಹ ಮನಸ್ಸು ಬುದ್ಧಿ ಆತ್ಮಗಳು ಒಂದಾದಾಗ ಒಂದು ಪ್ರಾಣಿಯ ಆವಿರ್ಭಾವ. ಗಿಡ ಮರಗಳಿಗೂ ಇದು ಅನ್ವಯಿಸುತ್ತದೆ. ಆ ಎಲ್ಲ ರೂಪಗಳಿಗೂ ಮೂಲ ಒಂದೇ. ಹಾಗಾಗಿ ಒಂದೇ ಬೃಹತ್ ಚೇತನ ತನ್ನ ಮೂಲದಲ್ಲಿ ಇದ್ದುಕೊಂಡು ತಾನು ಬೇರೆ ಬೇರೆ ರೂಪಗಳಿಗೆ ಹೊಂದುವಂತೆ ತನ್ನನ್ನು ತಾನು ತನ್ನ ಮೂಲ ಗುಣವನ್ನು ಬಿಡದೆ, ಬದಲಾಯಿಸಿಕೊಳ್ಳುತ್ತಾ, ರೂಪಾಂತರಗೊಳ್ಳುತ್ತಾ, ಎಲ್ಲ ರೂಪಗಳಲ್ಲೂ ತಾನಿದ್ದುಕೊಂಡು ಎಲ್ಲ ರೂಪಗಳಲ್ಲಿ ಆಗಬಹುದಾದ ಅನುಭವ, ಆನಂದ, ಮುಂತಾದ ಎಲ್ಲ ಭಾವಗಳನ್ನೂ ಅನುಭವಿಸುತ್ತಾ ಆನಂದದಿಂದ ತನ್ಮಯವಾಗಿದೆ. ಇದನ್ನು ಅರಿಯದೆ ನಾವು “ನಾನು ಸುಖವಾಗಿದ್ದೇನೆ” “ನನಗೆ ದುಃಖವಾಗಿದೆ” “ನನಗೆ ನೋವಾಗುತ್ತದೆ” ಎಂದು ಹೇಳುತ್ತಾ ಅಪ್ರಬುದ್ಧ ಭಾವದಿಂದ ಮಾತನಾಡುತ್ತೇವೆ. “ಸ ಏಕಾಕೀ ನ ರಮತ” ಅವನು ಒಬ್ಬನೇ ಇದ್ದ. ಬೇಜಾರಾಯಿತೋ ಏನೋ ಈ ಜಗತ್ತನ್ನು ಸೃಷ್ಟಿಸಿದ. ತನ್ನ ಶಕ್ತಿಯಿಂದಲೇ ಇದನ್ನು ಸೃಷ್ಟಿಸಿದ. ಈ ಜಗತ್ತಿನಲ್ಲಿರುವ ಎಲ್ಲದರಲ್ಲೂ ಚೇತನಾ ಸ್ವರೂಪದಲ್ಲಿ ಸೇರಿ ಆಯಾಯ ವಸ್ತುಗಳನ್ನು ಅನುಭವಿಸುತ್ತಾ ಆನಂದದಿಂದ ಇದ್ದಾನೆ. ಎಲ್ಲವು ಅವನಿಂದಲೇ. ಎಲ್ಲವು ಅವನೇ. ಎಲ್ಲವು ಅವನಿಗಾಗಿಯೇ ಎಂದು ನಾವು ಯೋಚಿಸಿದಾಗ, ನಾವು ಸಹ ಆ ಬೃಹತ್ ರೂಪದ ಒಂದು ಅಂಶವೆಂದುಕೊಂಡಾಗ, ವಸ್ತು, ವ್ಯಕ್ತಿ ವಿಷಯ ಸಂಬಂಧವಾದ ಭಾವನೆಗಳು ನಶಿಸಿ ಅವುಗಳ ಬಗ್ಗೆ ಒಂದು ನಿರ್ಲಿಪ್ತತೆ ಬೆಳೆದಾಗ, ಮನಸ್ಸು ನಿರ್ಮಲವಾಗಿ, ಆನಂದವಾಗಿರಬಹುದು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-79 )

ಬರೆವ ಹಲಗೆಯನೊಡೆದು ಬಾಲಕನು ತಾನದನು | ಮರಳಿ ಜೋಡಿಪೆವೆನ್ನುತಾಯಾಸಗೊಳುತ || ಸರಿ ಚೌಕಗೈವಾಟದಲಿ ಜಗವ ಮರೆವಂತೆ || ಪರಬೊಮ್ಮ ಸೃಷ್ಟಿಯಲಿ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಹಲಗೆಯನೊಡೆದು=ಹಲಗೆಯನು+ಒಡೆದು, ಚೌಕಗೈವಾಟದಲಿ=ಚೌಕ+ಗೈವ+ಆಟದಲಿ

ಪದಗಳ ತಾತ್ಪರ್ಯ

ಜೋಡಿಪೆವೆನ್ನುತಾಯಾಸಗೊಳುತ=ಜೋಡಿಸುವೆ+ಎನ್ನುತ+ಆಯಾಸಗೊಳುತ, ಬರೆವ ಹಲಗೆ=ಹಿಂದಿನ ಕಾಲದಲ್ಲಿ ಬರೆಯಲು ಉಪಯೋಗಿಸುತ್ತಿದ್ದ ಸ್ಲೇಟು.

ಪದ್ಯದ ಪೂರ್ತಿ ವಿವರಣೆ

ಹಿಂದಿನ ಕಾಲದಲ್ಲಿ ಮಕ್ಕಳು ಬಳಪದಿಂದ ಬರೆಯಲು ಉಪಯೋಗಿಸುತ್ತಿದ್ದ ಸ್ಲೇಟು ಒಂದು ರೀತಿಯ ಮೃದು ಕಲ್ಲಿನ ಹಲಗೆಯಾಗಿರುತ್ತಿತ್ತು. ಅದಕ್ಕೆ ಮೃದು ಮರದ ಚೌಕಟ್ಟಿರುತ್ತಿತ್ತು. ಅಕಸ್ಮಾತ್ ಅದು ಕೆಳಗೆ ಬಿದ್ದು ಒಡೆದು ಹೋದರೆ ಮತ್ತೆ ಅಂಟಿಸಲಾಗುತ್ತಿರಲಿಲ್ಲ. ಹಾಗೆ ಒಡೆದ ಹಲಗೆಯನ್ನು ಅಂಟಿಸಲು ಪ್ರಯತ್ನಪಟ್ಟು ಆಯಾಸಪಡುವ ಮಗುವಿನಂತೆ, ಆ ಪರಮಾತ್ಮನೂ ಸಹ ಒಂದೇ ಆಗಿದ್ದ ತಾನು ಹಲವಾಗಿ, ಅದನ್ನೆಲ್ಲ ಮತ್ತೆ ಒಟ್ಟಿಗೆ ಅಂಟಿಸಲು ಮಾಡುವ ಪ್ರಯತ್ನದಲ್ಲಿ ತಲ್ಲೀನನಾಗಿದ್ದಾನೋ ಎಂದು ಒಂದು ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು. ಒಂದೇ ಆಗಿದ್ದ ಆ ಪರಮ ವಸ್ತುವು ತನ್ನ ಸಂಕಲ್ಪದಿಂದಲೇ ಸಿಡಿದು ಬಹಳವಾಗಿ, ಆಕಾಶ ಗಂಗೆಗಳು, ನಕ್ಷತ್ರಪುಂಜಗಳು, ಸೌರವ್ಯೂಹಗಳು ಗಾಳಿ, ನೀರು, ಭೂಮಿ, ಇತರೆ ಗ್ರಹಗಳು, ಈ ಗ್ರಹಗಳ ಮೇಲಿನ ಕೋಟ್ಯಾಂತರ ವೈವಿಧ್ಯತೆಗಳು, ಹೀಗೆ ನಮಗೆ ಕಾಣುವ, ನಾವು ಅನುಭವಿಸಬಹುದಾದ, ಊಹಿಸಬಹುದಾದ ಮತ್ತು ಊಹಿಸಲೂ ಅಸಾಧ್ಯವಾದ ಇಡೀ ಜಗತ್ತಾಗಿ ಮಾಡಿ, ತಾನೇ ಅದರೊಳಗೆ ಚೈತನ್ಯ ರೂಪದಲ್ಲಿ ಪ್ರಕಟಗೊಂಡು ಕ್ಷಣಕ್ಷಣಕ್ಕೂ ಸೃಷ್ಟಿ ಸ್ಥಿತಿ ಲಯಗಳೆಂಬ ಪ್ರಕ್ರಿಯೆಯನ್ನಿಟ್ಟು ಎಲ್ಲಕ್ಕೂ ಒಂದು ನಿಗದಿತ ಸಮಯವನ್ನಿಟ್ಟು, ಇಡೀಜಗತ್ತೇ ನಮಗೆ ಬೇರೆ ಬೇರೆಯಾಗಿ ಕಾಣುವಂತೆ ಮಾಡಿದ್ದಾನೆ. ಬಾಲಕನು ಒಡೆದ ಬರೆಯುವ ಹಲಗೆಯನ್ನು ಜೋಡಿಸಲು ಪ್ರಯತ್ನಪಡುವುದರಲ್ಲಿ ತಲ್ಲೀನನಾದಂತೆ, ಬೇರೆ ಬೇರೆಯಾಗಿರುವ ಅಥವಾ ಬೇರೆ ಬೇರೆಯಾಗಿ ಕಾಣುವ, ಒಡೆದ ಹಲಗೆಯಂತೆ ಇರುವ ಈ ಜಗತ್ತಿನ ಹಲಗೆಯನ್ನು, ತಾನೂ ಜೋಡಿಸಲು ಪ್ರಯತ್ನಪಡುತ್ತಾ ತನ್ಮಯನಾಗಿದ್ದಾನೋ ಈ ಪರಮಾತ್ಮ ಎಂದು ಒಂದು ಸಂದೇಹವನ್ನು ವ್ಯಕ್ತಪಡಿಸುತ್ತಾರೆ ಶ್ರೀ ಡಿ.ವಿ.ಜಿ.ಯವರು. ಅವನ ಸೃಷ್ಟಿಯಲ್ಲಿ ಒಡಕಿಲ್ಲ. ಎಲ್ಲವು ಸಮರ್ಪಕವಾಗಿಯೇ ಇದೆ. “ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ, ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೆ” ಎನ್ನುತ್ತದೆ ಈಶಾವಾಸ್ಯೋಪನಿಷತ್ತಿನ ಶಾಂತಿ ಮಂತ್ರ. ಪರಮಾತ್ಮ ಸೃಷ್ಟಿಯ ಪರಿಪೂರ್ಣತ್ವವನ್ನು ಸಾರಿ ಸಾರಿ ಹೇಳುತ್ತದೆ. ಆದರೆ ಒಡೆದಿರುವುದು ಏನು! ನಾವುಗಳು ಅದನ್ನು ನೋಡುವ ಪರಿ ಅಥವಾ ಬಗೆ. ಮಾನವನ ಅಲ್ಪಬುದ್ಧಿಯಿಂದ ಅತೀ ಸುಂದರವಾದ ಈ ಪ್ರಪಂಚವನ್ನು ಪ್ರಗತಿಯ ಹೆಸರಿನಲ್ಲಿ ಜಾತಿ, ಮತ, ಭಾಷೆ, ಧರ್ಮಗಳ ಹೆಸರಿನಲ್ಲಿ ಒಡೆದೊಡೆದು ಚೂರು ಚೂರು ಮಾಡಿದ್ದಾನೆ. ಎಲ್ಲಿ ನೋಡಿದರೂ ಜಗಳ, ಕಿತ್ತಾಟ, ದುರ್ಮಾರ್ಗ ಇವೆಲ್ಲವುಗಳಿಂದ ಚೂರಾಗಿದೆ ಈ ಜಗತ್ತು. ಇನ್ನು ಮನುಷ್ಯನ ಆಂತರ್ಯವನ್ನು ನೋಡಿದರೆ, ಅದೂ ಸಹ, ಸಂಶಯಗಳಿಂದ, ಪಕ್ಷಪಾತದಿಂದ, ದ್ವೇಷದಿಂದ, ಅಹಂಕಾರದಿಂದ, ದುರಾಸೆಯಿಂದ ಇಂದು ಚೂರು ಚೂರಾಗಿದೆ. ಮನುಷ್ಯನ ಮನಸ್ಸಿನಲ್ಲಿ ಒಂದು ಸುಮುಖವಾದ, ಸರ್ವಹಿತ ಹೇತುವಾದ ಆಲೋಚನೆ ಇಲ್ಲವೇ ಇಲ್ಲ. “ಕ್ಷಣಂ ಚಿತ್ತಂ, ಕ್ಷಣಂ ಪಿತ್ತಂ” ಎನ್ನುವಂತೆ ಸ್ಥಿಮಿತವೆ ಇಲ್ಲದೆ, ಅವನ ಶಾಂತಿಯೂ ಭಗ್ನವಾಗಿದೆ. ಇಂತಹ ಅಶಾಂತ ಮನಸ್ಸು ಪರರ ಶಾಂತಿಯನ್ನೂ ನಿರಂತರ ಕದಡುತ್ತಲೇ ಇರುತ್ತದೆ. ಆ ಪರಮ ಚೇತನ ಹಲವಾರು ಬಾರಿ ತನ್ನ ಇರವನ್ನು ಸೂಕ್ಷ್ಮ ರೂಪದಲ್ಲಿ ತೋರಿ, ಅರಿತುಕೊಳ್ಳುವ ಸಂದರ್ಭಗಳನ್ನು ತಂದೊಡ್ಡಿ, ಮಾನವನಿಗೆ ಅರಿತುಕೊಳ್ಳಲು ಯೋಗ್ಯ ಅವಕಾಶವನ್ನು ನೀಡಿದೆ, ನೀಡುತ್ತಿದೆ ಮತ್ತು ನೀಡುತ್ತಲೇ ಇರುತ್ತದೆ. ಕೇವಲ ಮೂರ್ಖತನದಿಂದ ಮಾನವ ಕಲಿಯುವುದಿಲ್ಲ. ಒಡೆದ ಈ ಜಗತ್ತಿನ ಜಾತಿ ಮತ ಧರ್ಮ ಭಾಷೆಗಳೆಂಬ ಚೂರುಗಳನ್ನೆಲ್ಲ ಒಂದಾಗಿಸಿ ಈ ಜಗತ್ತು ನಮಗೆ ಪರಮಾತ್ಮ ಕೊಟ್ಟ ಒಂದು ಪರಿಪೂರ್ಣ ತಾಣ, ಇದನ್ನು ಭಗ್ನಮಾಡಿದರೆ ನಮಗೆ ಉಳಿಗಾಲವಿಲ್ಲ ಎಂದು ಅರಿತು ಬಾಳಿದರೆ ಸುಖ ಇಲ್ಲದಿದ್ದರೆ ನಾಶ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-80 )

ಚೀಟಿಯಾಟದ ಬಿನದಿ ತಾನೋರ್ವನಿರ್ವರವೊಲ್‌ | ಆಟವಾಡುತಲಿ ತನ್ನೊರ್ತನವ ಮರೆವಾ || ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ | ಪಾಟಿಯಲಿ ಮರೆತಿಹನು-ಮಂಕುತಿಮ್ಮ ||

ಪದಗಳ ವಿಸ್ತರಣೆ

ತಾನೋರ್ವನಿರ್ವರವೊಲ್‌=ತಾನು+ಓರ್ವನು+ಇರ್ವರ+ಒಲ್‌, ತನ್ನೊರ್ತನವ=ತನ್ನೊರ್+ತನವ, ತನ್ನೇಕತೆಯ=ತನ್ನ+ಏಕತೆಯ.

ಪದಗಳ ತಾತ್ಪರ್ಯ

ಚೀಟಿಯಾಟ=ಇಸ್ಪೀಟಾಟ, ಬಿನದಿ=ತರಹೆ, ತಾನೋರ್ವ=ತಾನು ಒಬ್ಬನೇ, ಇರ್ವರೋಲ್‌=ಇಬ್ಬರಂತೆ, ತನ್ನೊರ್ತನವ=ತನ್ನ ಒಂಟಿತನವ, ಮರೆವಾ ಮಾಟದಲಿ=ಮರೆವ ರೀತಿಯಲಿ, ಬೊಮ್ಮನುಂ=ಬ್ರಹ್ಮನು, ತನ್ನೇಕತೆಯ=ಒಂಟಿಯಾಗಿ, ಜೀವ ಪಾಟಿಯಲಿ=ಜೀವರಾಶಿಗಳ ಮಧ್ಯೆ.

ಪದ್ಯದ ಪೂರ್ತಿ ವಿವರಣೆ

ನಮ್ಮ ಅಪ್ಪನ ಕಾಲಕ್ಕೆ ಹಲ ದೊಡ್ಡವರು ಇಸ್ಪೀಟಿನ ಒಂದು ಬಗೆಯ ಆಟವಾಡುತ್ತಿದ್ದರು. ಅದಕ್ಕೆ ಪೇಶೆನ್ಸ್ ಅಥವಾ ಸಾಲಿಟೇರ್ ಎಂದು ಕರೆಯುತ್ತಿದ್ದರು. ಒಬ್ಬರೇ ಕುಳಿತು ಆಡುವಾಟ. ಇನ್ನೊಂದು ರಮ್ಮಿ. ಅದರಲ್ಲಿ ಒಬ್ಬರಿಗಿಂತ ಹೆಚ್ಚು ಜನ ಆಡುವುದು. ಆದರೆ ಕೆಲವರು ವಯಸ್ಸಾದವರು, ಕಾಲಯಾಪನೆಗೆ ಎರಡೂ ಕಡೆಯ ಆಟವನ್ನು ಒಬ್ಬರೇ ಆಡುತ್ತಿದ್ದರು. ಹಾಗೆ ಆಡುವಾಗ ಒಬ್ಬರೇ ಮೈ ಮರೆಯುತ್ತಿದ್ದರು. ಆ ರೀತಿ "ತಾನೇ ಸೃಷ್ಟಿಸಿದ ಈ ಜಗತ್ತಿನಲ್ಲಿ ತಾನು ಮತ್ತೆಲ್ಲದರೊಳಗೆ ಸೇರಿ ತಾನೂ ಈ ಜಗತ್ತನ್ನು ಅನುಭವಿಸುತ್ತ ಮೈಮರೆತಿದ್ದಾನೋ ಆ ಪರಮಾತ್ಮ" ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು. ಹಾಗೆ, ತಾನೇ ಜಗವೆಲ್ಲ ಸೃಷ್ಟಿಸಿ, ಕೋಟ್ಯಾಂತರ ತುಣಕುಗಳನ್ನು ಇಸ್ಪೀಟಿನ ಎಲೆಗಳಂತೆ ಇಡೀ ನಭೋಮಂಡಲಕ್ಕೆ ಹರಡಿ ತಾನೂ ಇದರೊಳಗೆ ಚೈತನ್ಯವಾಗಿ ಸೇರಿ ಒಂದು ಲೀಲಾ ವಿನೋದವನ್ನು ಆಡುತ್ತಾ ತನ್ಮಯನಾಗಿ ಮರೆತು ಮೆರೆಯುತ್ತಿದ್ದಾನೆ ಎಂದು ಅಣಕವಾಡುತ್ತಾರೆ ಮಾನ್ಯ ಗುಂಡಪ್ಪನವರು. ಒಳಗೂ ಹೊರಗೂ ಅವನೇ, ಆ ಚೈತನ್ಯವೇ ಇದೇ. “ಭಾವಮುಲೋನ ಬಾಹ್ಯಮುನಂದುನು” ಬಾಹ್ಯದಲ್ಲೂ ಭಾವದಲ್ಲೂ ಆ ಪರಮಶಕ್ತಿ ಸ್ವರೂಪನಾದ ಪರಮಾತ್ಮನೇ ಎನ್ನುತ್ತಾರೆ ತಿರುಮಲೆಯ ಭಕ್ತ-ಕವಿ, ಮಾನ್ಯ ತಾಳ್ಳಪಾಕ ಅನ್ನಮಾಚಾರ್ಯರು. ನಾರಾಯಣೋಪನಿಷತ್ತಿನಲ್ಲಿ, “ಅಂತರ್ಬಹಿಶ್ಚ ತತ್ ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ” ಎಂದು ಒಳಗೂ ಹೊರಗೂ ಇರುವ ಆ ಪರಮಾತ್ಮನ ಸ್ವರೂಪದ ಉಲ್ಲೇಖ ಇದೆ. ಆ ಪರಮಾತ್ಮನಿಗೆ ಒಂದು ದೇಹವಿಲ್ಲ. ಎಲ್ಲ ದೇಹಗಳೂ ಅವನೇ ಮತ್ತು ಅವನದೇ. ಅವನಿಲ್ಲದೆ ಈ ದೇಹಗಳೆಲ್ಲ ಇಲ್ಲವೇ ಇಲ್ಲ. ಏಕೆಂದರೆ ಅವನೇ ದೇಹ, ಅವನೇ ಮನಸ್ಸು, ಅವನೇ ಬುದ್ಧಿ ಮತ್ತು ಅವನೇ ಆತ್ಮ. ನಮಗಾಗುವ ನೋವು, ನಲಿವು, ದುಃಖ, ಸಂತೋಷ, ಪ್ರೀತಿ, ಪ್ರೇಮ ಎಲ್ಲವನ್ನೂ ಅನುಭವಿಸುವುದು ನಮ್ಮೊಳಗಿನ ಆ ಪರಮ ಚೇತನವೇ ಅಲ್ಲವೇ. "ಅಯ್ಯೋ ಎಲ್ಲವು ಅವನೇ ಆದರೆ ನಾವು ಯಾರು?” ಎಂದರೆ “ನಾವು ಕೇವಲ” “ನಾವು ಅಥವಾ ನಾನು”ಎನ್ನುವ ಭಾವ ಮಾತ್ರ ನಾವಷ್ಟೇ. ಇದನ್ನು “ಅಹಂ”ಕಾರವೆನ್ನುತ್ತಾರೆ. ಅದು ಇರುವ ತನಕ ನಮಗೂ ಎಲ್ಲವು ಬೇರೆ ಬೇರೆಯಾಗಿ ಕಾಣುತ್ತದೆ. ಎಲ್ಲವು ಬೇರೆ ಬೇರೆ ರೂಪಗಳು ಕಾಣುತ್ತವೆ. ಅದು ನಶಿಸಿದರೆ ಎಲ್ಲವು, ಎಲ್ಲರಲ್ಲೂ, ಎಲ್ಲದರಲ್ಲೂ ಆ ಪರಮಾತ್ಮನೇ ಕಾಣುತ್ತಾನೆ. “ಹಾಗಾದರೆ ನಾವು ಮಾಡುವುದನ್ನು“ಸರಿ-ತಪ್ಪು” “ಧರ್ಮ-ಅಧರ್ಮ” ಎಂದು ಏಕೆ ಹೇಳಬೇಕು? ಎಲ್ಲವು ಆ ಪರಮಾತ್ಮನೇ ಆಗಿ ಮತ್ತು ಎಲ್ಲವನ್ನೂ ಅವನೇ ಮಾಡುತ್ತಾ, ಅನುಭವಿಸುತ್ತಾ ತನ್ಮಯನಾಗಿದ್ದರೆ ನಾವು ಮಾಡುವುದು ಏನು ಇಲ್ಲವಲ್ಲ” ಎಂದರೆ ನಾವು ಲËಕಿಕವಾಗಿ ಕಟ್ಟಿಕೊಂಡ ಸಮಾಜದ ಒಳಿತಿಗೆ ಒಂದು ಸುವ್ಯವಸ್ಥಿತ ಬದುಕಿಗೆ ಈ ಕಟ್ಟುಪಾಡುಗಳು ಅವಶ್ಯಕ. ಲËಕಿಕವನ್ನು ಬಿಟ್ಟು ಅಹಂಕಾರವನ್ನು ಬಿಟ್ಟರೆ, ಯಾವ ಕಟ್ಟುಪಾಡಿಗೂ ಒಳಪಡದೆ ಮುಕ್ತರಾಗಿಬಿಡಬಹುದು. ಆಧ್ಯಾತ್ಮಿಕ ಬೆಳವಣಿಗೆಯ ಅಂತಿಮ ಹಂತದಲ್ಲಿ ಬರುವ ಭಾವವೇ ಇದು. ಇಂತಹ ಭಾವನೆ ಬಂದರೆ ಅವರನ್ನು ದೇವಮಾನವರೆನ್ನುತ್ತಾರೆ. ವಾಚಕರೆ ಬನ್ನಿ ನಾವು ಅಹಂಕಾರವನ್ನು ಬಿಟ್ಟು ಎಲ್ಲೆಡೆಯಲ್ಲೂ ಆ ಪರಮಾತ್ಮನ ಲೀಲೆಯನ್ನು ನೋಡಿ ಆನಂದಿಸುವ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-81 )

ಮರೆತಿಹನೆ ಬೊಮ್ಮ? ಮರೆತಿಲ್ಲ; ಮರೆತವೊಲಿಹನು | ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ || ಅರಸಿಕೊಳುವೋಲಿಹುದು; ದೊರೆತವೋಲ್‌ ತೋರೆ ಸುಖ | ದೊರೆವರೆಗಾಯಸವೊ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಮರೆತವೊಲಿಹನು=ಮರೆತ+ಒಲು+ಇಹನು, ಅರಸಿಕೊಳುವವೊಲಿಹುದು=ಅರಸಿಕೊಳು+ಒಲು+ಇಹುದು, ದೊರೆವರೆಗಾಯಸವೊ=ದೊರೆ+ವರೆಗೆ+ಆಯಸವೋ

ಪದಗಳ ತಾತ್ಪರ್ಯ

ಮರೆತಿಹನೆ=ಮರೆತಿದ್ದಾನೇನು? ಮರೆತವೊಲಿಹನು=ಮರೆತಂತಿದ್ದಾನೆ. ಜೀವಾಕೃತಿಯ=ಎಲ್ಲ ಜೀವಿಗಳ ರೂಪವನು, ಅರಸಿಕೊಳುವೊಲಿಹುದು=ಹುಡುಕುವಂತೆ ಇದೆ. ದೊರೆತವೋಲ್ತೋರೆ=ದೊರೆತಂತೆ ಆದರೆ, ದೊರೆವರೆಗಾಯಸವೊ=ದೊರೆಯುವರೆಗೆ ಆಯಾಸ.

ಪದ್ಯದ ಪೂರ್ತಿ ವಿವರಣೆ

ಈ ಜಗತ್ತಿನ ಎಲ್ಲದರೊಳಗೆ ಆ ಪರಬ್ರಹ್ಮ ತನ್ನನ್ನು ತಾನೇ ಮರೆತಿದ್ದಾನೇನು? ಎಂದು ಪ್ರಶ್ನಿಸಿ, ಇಲ್ಲ ಅವ ಮರೆತಂತೆ ಇದ್ದಾನೆ ಎಂದು ಉತ್ತರಿಸುತ್ತಾರೆ ಮಾನ್ಯ ಗುಂಡಪ್ಪನವರು. ಎಲ್ಲ ಜೀವಾತ್ಮಗಳ ಸೃಷ್ಟಿಯ ಎಲ್ಲದರ ರೂಪವನ್ನೂ ಧರಿಸಿ ತನ್ನನ್ನು ತಾನೇ ಹುಡುಕುತ್ತಿದ್ದಾನೆ. ಅವನಿಗೆ ದೊರೆತರೆ ಸುಖ ದೊರೆಯದಿದ್ದರೆ ಆಯಾಸ. ಎಂಥಹ ಅದ್ಭುತ ವಿಚಾರ. ವಾಚಕರೆ, ನೋಡಿ ನಾವು ಹಿಂದಿನ ಮುಕ್ತಕಗಳಲ್ಲಿ “ಎಲ್ಲವು ಅವನೇ. ಎಲ್ಲವು ಅವನಿಂದಲೇ ಮತ್ತು ಎಲ್ಲವು ಅವನಿಗಾಗಿಯೇ” ಎಂದು ಹೇಳುತ್ತಾ ಬಂದಿದ್ದೇವೆ. ನಮ್ಮ ಮನಸ್ಸು ಬುದ್ಧಿ, ದೇಹ, ಆತ್ಮಗಳೂ ಅವನೇ ಎಂದ ಮೇಲೆ ಅವನನ್ನು ಹುಡುಕುವುದು ಎಂದರೆ ಏನು? ಯಾರು ಯಾರನ್ನು ಹುಡುಕುವುದು? ಅವನೇ ಇದ್ದ ಮೇಲೆ, ಅವನೇ ಎಲ್ಲವು ಆಗಿದ್ದ ಮೇಲೆ ಇಲ್ಲಿ ಹುಡುಕುವುದು ಎಂದರೇನು? ಯಾವುದಾದರೂ ವಸ್ತು ಕಳೆದು ಹೋದರೆ ಹುಡುಕ ಬೇಕು. ಎಲ್ಲ ಕಡೆಯಲ್ಲೂ ಅವನೇ ಆವರಿಸಿ ತನ್ಮಯನಾಗಿ ಇರಬೇಕಾದರೆ ಹುಡುಕುವುದು ಅಂದರೆ ಎಂತಹ ವಿಪರ್ಯಾಸ ಅಲ್ಲವೇ? ಈ ಜಗತ್ತನ್ನು ಸೃಜಿಸಿ, ತಾನೂ ಎಲ್ಲರೊಳಗೆ ಇದ್ದು, ಆ ಇರುವಿಕೆಯ ಜ್ಞಾನವನ್ನು ನಮ್ಮಿಂದ ಮರೆಮಾಚಲು ಒಂದು ಮಾಯೆಯಂಬ ಪರದೆಯನ್ನು ನಮ್ಮ ಜ್ಞಾನದ ಮೇಲೆ ಕವಿಸಿ, ನಮ್ಮ ಮನಸ್ಸು ಬುದ್ಧಿಗಳು ಆ ಪರಮ ವಸ್ತುವಿನಿಂದ ಅನ್ಯ ವಸ್ತುಗಳ ಮೇಲೆ ಮೋಹಗೊಳ್ಳುವಂತೆ ಆ ವಸ್ತುಗಳನ್ನೂ ಮಾಡಿ ಒಂದು ವಿಚಿತ್ರ ಪರಿಸ್ಥಿತಿ ನಿರ್ಮಿಸಿದ್ದಾನೆ ಆ ಪರಮಾತ್ಮ. ಆ ಪರದೆಯು ತೆಳುವಾಗಿದ್ದರೂ ಕಬ್ಬಿಣದಷ್ಟು ಗಟ್ಟಿ. ಆ ಕಡೆ ಆ ಪರಮಾತ್ಮನ ಇರವು ಕಾಣುತ್ತಿದ್ದರೂ ಆ ಪರದೆಯನ್ನು ಸೀಳಿ ಆ ಬದಿಗೆ ಹೋಗಲಾರದಂತೆ ಈ ಜಗತ್ತಿನ ಮೋಹದ ಮಾಯೆಯ ಸೆಳೆತದಲ್ಲಿ ಸಿಕ್ಕಿಬಿಟ್ಟಿದ್ದಾನೆ ಈ ಮನುಷ್ಯ ಪ್ರಾಣಿ. ಜ್ಞಾನವಿರುವ ಇವನ ಗತಿಯೇ ಹೀಗಿದ್ದರೆ, ಜ್ಞಾನವಿಲ್ಲದ ಪ್ರಾಣಿಗಳು, ಪಶು ಪಕ್ಷಿ ಮತ್ತು ಕೀಟ ಇತ್ಯಾದಿಗಳ ಗತಿಯೇನು? ಆದರೆ ಮಾನವನು, ಈ ಮಾಯೆಯ ಪರದೆಯನ್ನು ದಾಟಿ ಆ ಪರಮಾತ್ಮನೊಂದಿಗೆ ಸಾಮೀಪ್ಯ, ಸಾಯುಜ್ಯ ಮತ್ತು ಸಾರೂಪ್ಯವನ್ನು ಪಡೆಯಲು ಹತ್ತು ಹಲವಾರು ವಿಧಾನಗಳ ಮೊರೆ ಹೋಗಿದ್ದಾನೆ. ಪೂಜೆ, ಮಂತ್ರ, ತಂತ್ರ, ಧ್ಯಾನ, ತಪಸ್ಸು, ಹೋಮ, ಹವನ, ಭಜನೆ, ಯೋಗ, ಸತ್ಸಂಗ ಮುಂತಾದ ವಿಧಾನಗಳನ್ನು ಕಂಡುಕೊಂಡಿದ್ದಾನೆ. ಸರಿಯಾದ ಗುರುವಿನ ಮಾರ್ಗದರ್ಶನದಲ್ಲಿ ಅವುಗಳಲ್ಲಿ ಯಾವುದಾದರೂ ಒಂದನ್ನು ಪಾಲಿಸಿದ್ದಲ್ಲಿ, ಆ ಪರಮ ಶಕ್ತಿಯ ಸರ್ವ ವ್ಯಾಪಕತೆಯ, ಸರ್ವಶಕ್ತಿಯ ಪ್ರಭಾವದ ಅನುಭವವಾಗಬಹುದು. ಅಂತಹ ಅನುಭವವಾಗುವ ತನಕ ಸುಖ ದೂರ. ಸಿಕ್ಕರೆ ಆ ಸುಖದ ಅನುಭವವೇ ಒಂದು ಶಾಶ್ವತ ಸುಖ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-82 )

ಬನ್ನಿರಾಡುವ ಕಣ್ಣಮುಚ್ಚಾಲೆಯಾಟವನು | ಎನ್ನನರಸಿ ಬನ್ನಿ ಮಕ್ಕಳಿರ ಬೇಗ || ಬನ್ನಿರಾಟವ ಬೇಡವೆಂಬುವರ ನಾಂ ಬಿಡೆನು | ಎನ್ನುವಜ್ಜಿಯೋ ಬೊಮ್ಮ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಎನ್ನನರಸಿ=ಎನನ್ನು+ಅರಸಿ, ಬೇಡವೆಂಬುವರ=ಬೇಡ+ಎಂಬುವರ, ಎನ್ನುವಜ್ಜಿಯೋ=ಎನ್ನುವ+ಅಜ್ಜಿಯೋ?

ಪದಗಳ ತಾತ್ಪರ್ಯ

ಪದ್ಯದ ಪೂರ್ತಿ ವಿವರಣೆ

ಹಿಂದಿನ ಕಾಲದ ಅವಿಭಕ್ತ ಕುಟುಂಬಗಳಲ್ಲಿ ಯುವಕ, ಯುವತಿಯರು ಮತ್ತು ವಯಸ್ಕರು ಕೆಲಸಗಳಲ್ಲಿ ಮಗ್ನರಾಗಿದ್ದರೆ ವಯಸ್ಸಾದ ಅಜ್ಜಿಯರು ಮಕ್ಕಳನ್ನು ಆಡಿಸಿಕೊಳ್ಳಲು, ಕಣ್ಣಾ ಮುಚ್ಚಾಲೆ ಆಟವಾಡಿಸುತ್ತಿದ್ದರು. ಅದು ಅವರಿಗೂ ಕಾಲಯಾಪನೆಗೆ ಒಂದು ದಾರಿಯಾಗುತ್ತಿತ್ತು. ಅಜ್ಜಿಯರು ಎಲ್ಲರನ್ನೂ ಸೇರಿಸಿಕೊಂಡು ಆಡುತ್ತಿದ್ದರು. ಯಾರನ್ನೂ ಬಿಡುತ್ತಿರಲಿಲ್ಲ. ಅದರಂತೆ "ಕಂಡೂ ಕಾಣದಂತೆ ಎದುರಿಗಿದ್ದರೂ ಬಚ್ಚಿಟ್ಟುಕೊಂಡಂತೆ ಇರುವ ಆ ಪರಮಾತ್ಮನನ್ನು ಹುಡುಕುವಂತೆ ನಮ್ಮನ್ನು ಕರೆಯುತ್ತಿದ್ದಾನೇನು ಆ ಪರಬ್ರಹ್ಮ?" ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು. ವಾಚಕರೆ, ಹೌದು ನೋಡಿ ಇದೊಂದು ಕಣ್ಣಾ ಮುಚ್ಚಾಲೆಯೇ. ಆಟದಲ್ಲಿ ನಮ್ಮ ಕಣ್ಣನ್ನು ಮುಚ್ಚಲಾಗುತ್ತದೆ. ಹಾಗೆಯೇ ಈ ಜೀವನದಾಟದಲ್ಲೂ ನಮ್ಮ ಕಣ್ಣು ಮುಚ್ಚಲಾಗಿದೆ, ಅಜ್ಞಾನದಿಂದ, ಮಾಯೆಯೆಂಬ ಪರದೆಯಿಂದ. ಅಹಂಕಾರವೆಂಬ ಮುಚ್ಚಳದಿಂದ. ಎಲ್ಲ ವೇದಗಳೂ, ಶಾಸ್ತ್ರಗಳೂ, ಪುರಾಣಗಳೂ, ಗ್ರಂಥಗಳೂ ಎಲ್ಲವು ಆ ಪರಮಾತ್ಮನ ಸರ್ವವ್ಯಾಪಕತ್ವವನ್ನು ಸಾರಿ ಸಾರಿ ಹೇಳುತ್ತಿದ್ದರೂ, ನಾವು ಸಾವಿರಾರು ವರ್ಷಗಳಿಂದ ಹುಡುಕುತ್ತಿದ್ದೇವೆ. ನಮಗೆ ಅವನ ಇರವಿನ ಭಾಸವಾಗುತ್ತಿದ್ದರೂ, ಭಾವಕ್ಕೆ ಬರುತ್ತಿಲ್ಲ. ಇಲ್ಲಿ ನನಗೆ ಕನಕದಾಸರ ಆ ಬಾಳೆಹಣ್ಣಿನ ಪ್ರಸಂಗ ಮನಸ್ಸಿಗೆ ಬರುತ್ತದೆ. ಗುರುಗಳೇನೋ ಹೇಳಿಬಿಟ್ಟರು “ಯಾರೂ ನೋಡದ, ಕಾಣದ, ಇಲ್ಲದ ಸ್ಥಳದಲ್ಲಿ ತಿಂದು ಬನ್ನಿ” ಎಂದು. ಪಾಪ ಕನಕದಾಸರಿಗೆ ಆ ದೇವರಿಲ್ಲದ ಸ್ಥಳವೇ ಕಾಣಲಿಲ್ಲವಂತೆ. ಹಣ್ಣು ತಿನ್ನಲಾಗಲೇ ಇಲ್ಲವಂತೆ. ಅದು ಮಹಾನುಭಾವರ ಅನುಭೂತಿ. ಸ್ವಾಮೀ ರಾಮತೀರ್ಥರು ಹೇಳಿದರಂತೆ ಒಬ್ಬನಿಗೆ “ನೀ ಯಾರೆಂದು ಅರಿತುಕೋ. ಅದರ ಆರಿವು ನಿನಗಾದರೆ ಆ ಪರಮಾತ್ಮ ನಿನಗೇ ಗೋಚರವಾಗುವನು. ನಾ ತೋರಿಸಬೇಕೆಂದಿಲ್ಲ” ಎಂದು. ಹಾಗೆ ಎಲ್ಲ ಕಡೆಯೂ ಇರುವ ಆ ಪರಮ ಚೇತನವು ನಮ್ಮ ಅರಿವಿಗೆ ನಿಚ್ಚಳವಾಗಿ ಬರದೆ, ನಾವು ಕಣ್ಣಾಮುಚ್ಚಾಲೆಯಂತಾ ಆಟವಾಡುತ್ತಿದ್ದೇವೆ ಎಂಬುದು ಈ ಮುಕ್ತಕದ ಹೂರಣ. ಆ ಪರಮಾತ್ಮ ವಸ್ತು ಸದ್ವಸ್ತು. ಅಂದರೆ ನಿತ್ಯವಾಗಿ ನಿರಂತರವಾಗಿ ಎಲ್ಲೆಡೆಯಲ್ಲೂ ಎಲ್ಲ ಕಾಲಕ್ಕೂ ಇರುವ ವಸ್ತುವೇ ಸದ್ವಸ್ತು. “ಸತ್ಸಂಗತ್ವೆ ನಿಸ್ಸಂಗತ್ವಂ, ನಿಸ್ಸಂಗಸ್ತ್ವೆ ನಿರ್ಮೋಹತ್ವಂ, ನಿರ್ಮೋಹತ್ವೆ ನಿಶ್ಚಲ ತತ್ವಂ ನಿಶ್ಚಲತತ್ವೆ ಜೀವನ್ಮುಕ್ತಿ” ಎಂದರು ಶಂಕರಭಗವತ್ಪಾದರು. ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಎರಡು ವಸ್ತುಗಳು ಇರಲಾಗದು ಎನ್ನುವುದು ಭೌತಶಾಸ್ತ್ರದ ಸಿದ್ಧಾಂತ. ಹಾಗೆ ನಾವು `ಸತ್'ನ ಸಂಗ ಮಾಡಿದಾಗ `ಅಸತ್'ನ ಸಂಗ ಬಿಟ್ಟು ಹೋಗುತ್ತದೆ. `ಅಸತ್'ನ ಸಂಗಬಿಟ್ಟಾಗ, ವಸ್ತು, ವಿಷಯ, ವ್ಯಕ್ತಿಗಳ ಮೇಲಿನ ಮೋಹ ಅಥವಾ ಮಮಕಾರ ಹೋಗಿಬಿಡುತ್ತದೆ, ಮೋಹ ಹೋದರೆ ಆ ಪರಮಾತ್ವ ತತ್ವ ನಿಶ್ಚಲವಾಗಿ, ಅಂದರೆ ಸ್ಥಿರವಾಗುತ್ತದೆ. ಆ ಸ್ಥಿತಿಯಲ್ಲಿ ಜೀವನು ಬಂಧನಗಳಿಂದ ಮುಕ್ತನಾಗಿ ಪರಮಾತ್ಮನಲ್ಲಿ ಸಾಯುಜ್ಯವನ್ನು ಪಡೆಯುತ್ತಾನೆ. ಇದು ಸತ್ಯ ಸತ್ಯ ಸತ್ಯ. ಅಂತಹ ಸ್ಥಿತಿಗೆ ನಾವು ಹೋದಾಗ, ನಮ್ಮ ಒಳಗಣ್ಣುಗಳು ತೆರೆದುಕೊಂಡು ಆ ಪರಮ ಶಕ್ತಿಯ, ಆ ಪರಮ ಚೇತನದ ಸರ್ವ ವ್ಯಾಪಕತ್ವದ ದರ್ಶನವಾಗಿ ನಮಗೆ ಎಲ್ಲೆಲ್ಲೂ ಆ ಪರಮಾತ್ಮನೇ ಕಾಣುತ್ತಾನೆ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-83 )

ಮಾನಸವ ಚಿಂತೆವಿಡಿದಂದೊರ್ವನೆರಡಾಗಿ | ತಾನದಾರೊಳೋ ವಾದಿಸುವನಂತೆ ಬಾಯಿಂ || ದೇನನೋ ನುಡಿಯುತ್ತ ಕೈಸನ್ನೆಗೈಯುವನು | ಭಾನವೊಂದರೊಳೆರಡು-ಮಂಕುತಿಮ್ಮ ||

ಪದಗಳ ವಿಸ್ತರಣೆ

ಚಿಂತೆವಿಡಿದಂದೊರ್ವನೆರಡಾಗಿ=ಚಿಂತೆ+ವಿಡಿದಂದು+ಓರ್ವನು+ಎರಡಾಗಿ, ತಾನದಾರೊಳೋ=ತಾನು+ಅದರಾರೊಳೋ, ವಾದಿಸುವನಂತೆ=ವಾದಿಸುವನ+ಅಂತೆ, ಬಾಯಿಂದೇನನೋ=ಬಾಯಿಂದ+ಅದೇನೋ, ಭಾನವೊಂದರೊಳೆರಡು=ಭಾನ+ಒಂದರೊಳು+ಎರಡು

ಪದಗಳ ತಾತ್ಪರ್ಯ

ಮಾನಸವ=ಮನಸ್ಸನ್ನು, ಒರ್ವನೆ=ಒಬ್ಬನೇ, ಬಾನು=ಆಕಾಶ

ಪದ್ಯದ ಪೂರ್ತಿ ವಿವರಣೆ

ಮನಸ್ಸಿಗೆ ಚಿಂತೆ ಹಿಡಿದಾಗ ಕೆಲವರು ತಾವು ಅದ್ಯಾರಲ್ಲೋ ಮಾತನಾಡುವಂತೆ ಏನೇನೋ ಮಾತನಾಡುತ್ತಾ, ಕೈಸನ್ನೆ ಮಾಡುತ್ತಾ ಹೋಗುತ್ತಿರುತ್ತಾರೆ. ವ್ಯಕ್ತಿ ಒಬ್ಬರೇ ಆದರೂ ಇಬ್ಬರಂತೆ ಮಾತನಾಡುತ್ತಿರುತ್ತಾರೆ. ಹಾಗೆಯೇ ಒಬ್ಬನೇ ಇರುವ ಬ್ರಹ್ಮನನ್ನು, ಚಿಂತೆಗೀಡಾದ ಮನುಷ್ಯನಂತೆ ಎರಡೆಂದು ಭಾವಿಸುತ್ತಾರೆಂದು ಈ ಮುಕ್ತಕದಲ್ಲಿ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು. ವಾಚಕರೆ, ನಾವು ಹಲವಾರು ಬಾರಿ ನೋಡಿರುತ್ತೇವೆ, ಬಹಳ ಚಿಂತಾಕ್ರಾಂತರಾದ ವ್ಯಕ್ತಿಗಳು ತಮ್ಮತಮಲ್ಲೇ ಮಾತನಾಡಿಕೊಳ್ಳುತ್ತಾರೆ. ಕೈಸನ್ನೆಗಳನ್ನೂ ಮಾಡುತ್ತಿರುತ್ತಾರೆ. ತಾವೊಬ್ಬರೇ ಆದರೂ ಬೇರೆ ಯಾರೊಡನೆಯೋ ಮಾತನಾಡುತ್ತಿದ್ದಂತೆ ಭಾಸವಾಗುತ್ತದೆ. ಪಾಪ ಅವರವರ ಒತ್ತಡಗಳೇನೋ ಯಾರಿಗೆ ಗೊತ್ತು. ಹಾಗೆಯೇ ಈ ಇಡೀ ಜಗತ್ತು ಆ ಪರಮ ಚೇತನದ ಒಂದೇ ರೂಪವಾದರೂ ನಾವು ಅದು ಬೇರೆ ನಾವು ಬೇರೆ ಎನ್ನುವ ಭಾವದಲ್ಲಿ ಅರ್ಥೈಸುವುದು. ಆ ಪರಮ ವಸ್ತುವನ್ನೇ ಭಾಗಗಳಾಗಿಸಿ ಒಂದರಿಂದ ಇನ್ನೊಂದು ಭಿನ್ನವೆಂದು ಅರ್ಥೈಸುತ್ತಾ ಚಿತ್ರ ವಿಚಿತ್ರ ವ್ಯಾಖ್ಯಾನಗಳನ್ನು ಮಾಡುತ್ತಾ ನಾನು ಮಾಡುವ ವ್ಯಾಖ್ಯಾನವೇ ಸರಿ ಎಂದು ಪ್ರತಿಪಾದಿಸುತ್ತಾ ಮತಿಭ್ರಾಂತರಂತೆ ಇದ್ದಾರೆ, ಈ ಲೋಕದಲ್ಲಿ ಜನ ಎಂದು ಪ್ರಸ್ತಾಪಿಸುತ್ತಾರೆ, ಮಾನ್ಯ ಗುಂಡಪ್ಪನವರು. ನಾವು ಸಹ ಹಾಗೆ, ಸ್ವಲ್ಪ ಮತಿ ಭ್ರಮಣೆಯಾದವರಂತೆ ಎಲ್ಲವು ಆ ಪರಮ ಶಕ್ತಿಯೇ ಆಗಿರುವಾಗ, ಅದು ಬೇರೆ ಇದು ಬೇರೆ ಎನ್ನುವ ಭಾವನೆಯಿಂದ, ಇದೆಯೋ-ಇಲ್ಲವೋ, ಇ‌ದೋ-ಅದೋ, ಒಂದೋ-ಎರಡೋ, ಹೆಣ್ಣೋ-ಗಂಡೋ ಎಂಬ ದ್ವಂದ್ವಗಳಲ್ಲಿ ಸಿಕ್ಕು ತೊಳಲಾಡುತ್ತಿದ್ದೇವಲ್ಲವೇ?. ಆ ಪರಮಾತ್ಮನ ಕಲ್ಪನೆಯಲ್ಲಿ ಇದರಿಂದಲೇ ಹುಟ್ಟಿಕೊಂಡ ಸಾವಿರಾರು ಭೇದಗಳು, ಮತಗಳು ಸಿದ್ಧಾಂತಗಳು. ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಮತಭೇದಗಳು. “ಶಿವಶ್ಚ ನಾರಾಯಣಃ” ಎಂದು ವೇದ ಹೇಳಿದರೂ, ಶಿವ ಮತ್ತು ವಿಷ್ಣುವಿನಲ್ಲಿ ನಮಗೆ ಭೇದ. “ನ ದ್ವಿತೀಯೋಸ್ಥಿ ಕಶ್ಚಿತ್” ಎಂದು ಪ್ರತಿಪಾದಿಸಿದರೂ “ಏಕ”ದ ಕಲ್ಪನೆ ನಮ್ಮಲ್ಲಿ ಇನ್ನೂ ಸ್ಥಿರವಾಗಿ ಬೇರೂರದೆ ದ್ವಂದ್ವಗಳಲ್ಲಿ ನಾವು ಇನ್ನೂ ಪರದಾಡುತ್ತಿದ್ದೇವೆ. “ಹಲ”ವಾಗಿ ಕಾಣುವುದನ್ನು “ಒಂದು” ಎಂದು ಅರಿತರೂ ಕಾಣಲು ನಮಗೆ ಜ್ಞಾನದ ಪಕ್ವತೆ ಇಲ್ಲ. ಇಂತಹ ಪಕ್ವತೆಯನ್ನು ಬೆಳೆಸಿಕೊಳ್ಳಲು ಸತ್ಯದ ಅರಿವಾಗಬೇಕು, ಅರಿವಾದ ಸತ್ಯವನ್ನು ಒಪ್ಪಿಕೊಳ್ಳಬೇಕು, ಒಪ್ಪಿಕೊಂಡ ಸತ್ಯವನ್ನು ಮನಸ್ಸು ಬುದ್ಧಿಗಳಲ್ಲಿ ಸ್ಥಿರವಾಗಿಸಿಕೊಳ್ಳಬೇಕು. ಹಾಗಾದಾಗ ನಮಗೆ ನಿಸ್ಸಂಶಯವಾಗಿ ಆ ಪರಮಾತ್ಮನ ಸಮಗ್ರ ಚಿತ್ರ ಕಾಣುತ್ತದೆ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-84 )

ಅಣು ಭೂತ ಭೂಗೋಳ ತಾರಾಂಬರಾದಿಗಳ | ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ || ಕುಣಿಸುತಿರುವನು ತನ್ನ ಕೃತಿಕಂತುಕವನದರೊ| ಳಣಗಿರ್ದು ಪರಬೊಮ್ಮ-ಮಂಕುತಿಮ್ಮ ||

ಪದಗಳ ವಿಸ್ತರಣೆ

ತಾರಾಂಬರಾದಿಗಳನಣಿಮಾಡಿ=ತಾರಾ+ಅಂಬರ+ಆದಿಗಳನು+ಅಣಿಮಾಡಿ, ಸಡಿಲವನುಮಿರಿಸಿ=ಸಡಿಲವನುಂ+ಇರಿಸಿ, ಕೃತಿಕಂತುಕವನದರೊಳಣಗಿರ್ದು=ಕೃತಿ+ಕಂತುಕವನು+ಅದರೊಳ್+ಅಣಗಿರ್ದು.

ಪದಗಳ ತಾತ್ಪರ್ಯ

ಅಣು=ಅತ್ಯಂತ ಸಣ್ಣದಾದದ್ದು, ಭೂತ=(ಇಲ್ಲಿ) ಬೃಹತ್ತಾದದ್ದು, ತಾರಾಂಬರಾದಿಗಳ=ನಕ್ಷತ್ರ ಗಗನಗಳು, ಅಣಿಮಾಡಿ=ಸಿದ್ಧಪಡಿಸಿ, ಬಿಗಿದು=ಒಂದು ಸೂತ್ರದಲ್ಲಿ ಬಂಧಿಸಿ, ನಸು=ಸ್ವಲ್ಪ,

ಪದ್ಯದ ಪೂರ್ತಿ ವಿವರಣೆ

ಆ ಪರಬ್ರಹ್ಮ ಈ ಜಗತ್ತನ್ನು ಒಂದು ಸೂತ್ರದಲ್ಲಿ ಬಂಧಿಸಿ ಸ್ವಲ್ಪ ಸಡಿಲ ಬಿಟ್ಟು, ತನ್ನ ಕೃತಿಯಾದ ಈ ಜಗತ್ತನ್ನು ಒಂದು ಚೆಂಡು ಎಂದು ಭಾವಿಸಿ, ತಾನೂ ಅದರೊಳಗೆ ಸೇರಿ ಒಂದು ಸೂತ್ರದಾಟವ ಆಡುತ್ತಿದ್ದಾನೆ ಎಂಬುದು ಈ ಮುಕ್ತಕದ ತಾತ್ಪರ್ಯ. ಒಂದು ಬೃಹತ್ ಜಗತ್ತನ್ನು ತನ್ನ ಸಂಕಲ್ಪದಿಂದಲೇ ಸೃಷ್ಟಿಮಾಡಿ, ಎಲ್ಲದರೊಳಗೂ, ಚೇತನಾ ಸ್ವರೂಪವಾಗಿ ತಾನೇ ಸೇರಿಕೊಂಡು ಎಲ್ಲವನ್ನೂ ಒಂದು ಸೂತ್ರದಲ್ಲಿ ಬಂಧಿಸಿದ್ದಾನೆ, ಆ ಪರಮಾತ್ಮ ಎನ್ನುವುದೇ ಈ ಮುಕ್ತಕದ ಒಟ್ಟಾರೆ ಅರ್ಥ. ನೋಡಿ ನಮ್ಮಲ್ಲಿ ಒಂದು ಆಟಿಗೆ ಸಿಗುತ್ತದೆ. ಒಂದು ರಬ್ಬರ್ ಚೆಂಡು, ಆ ಚೆಂಡಿನ ತುದಿಗೆ ಒಂದು ರಬ್ಬರ್ ದಾರ. ಆ ದಾರವನ್ನು ಕೈಗೆ ಸಿಕ್ಕಿಸಿಕೊಂಡು ಆ ಚೆಂಡನ್ನು ದೂರ ಎಸೆದರೆ, ಅದು ಆ ದಾರ ಎಷ್ಟು ದೂರ ಸಾಗಿ ಹೋಗಬಹುದೋ ಅಷ್ಟು ದೂರ ಹೋಗಿ ಮತ್ತೆ ತನ್ನ ಸ್ವಸ್ಥಾನವನ್ನುಸೇರುತ್ತದೆ. ಆ ಮಕ್ಕಳ ಆಟ ಹಾಗೆ ಸಾಗಿರುತ್ತದೆ. ಹಾಗೆಯೇ ಈ ಜಗತ್ತನ್ನು ಒಂದು ಕಂದುಕ ಅಂದರೆ ಚೆಂಡಿನಂತೆ ಸೃಷ್ಟಿಮಾಡಿ ಅದಕ್ಕೆ ಚೇತನವೆಂಬ ಸೂತ್ರದಿಂದ ಎಲ್ಲವನ್ನೂ ಬಂಧಿಸಿ ತನ್ನ ಲೀಲಾವಿನೋದದಲ್ಲಿ, ಮಕ್ಕಳು ಚೆಂಡಾಡುವಂತೆ ಆಡುತ್ತಿದ್ದಾನೆ ಆ ಪರಮಾತ್ಮ. ನಿಜವಿರಬಹುದು. ಏಕೆಂದರೆ ನಮಗೆ ನಮ್ಮ ಬದುಕಿನಲ್ಲಿ ನಡೆಯುವ ಮತ್ತು ಆಗುವ ವಿದ್ಯಮಾನಗಳಿಗೆ ತಾರ್ಕಿಕ ವಿವರಣೆಯನ್ನು ನೀಡಲು "ನಾವು ಎಷ್ಟು ಸಮರ್ಥರು" ಎಂದು ಯೋಚಿಸಿದಾಗ ಯಾವುದೋ ಒಂದು ಶಕ್ತಿ ನಮ್ಮ ಎಲ್ಲ ಗತಿ ವಿಧಿಯನ್ನು ನಿಯಂತ್ರಿಸುತ್ತಿದೆ ಎಂದು ಸಾಮಾನ್ಯವಾಗಿ ಅನ್ನಿಸುತ್ತದೆ. ಆದರೆ "ಸ್ವಲ್ಪ ಸಡಿಲ" ವನ್ನೂ ಬಿಟ್ಟಿದ್ದಾನೆ, ಎಂದರೆ ಎಲ್ಲ ಪ್ರಾಣಿಗಳಿಗೂ ಸ್ವಲ್ಪ ಸ್ವಾತಂತ್ರ್ಯವನ್ನೂ ನೀಡಿದ್ದಾನೆ ಎಂದು ಅರ್ಥೈಸಬಹುದು. ಆ ಸ್ವಲ್ಪ ಸ್ವಾತಂತ್ರ್ಯವನ್ನು ತನ್ನ ಬುದ್ಧಿಶಕ್ತಿಯಿಂದ ನಾವು ನಮ್ಮನ್ನು ಸನ್ಮಾರ್ಗದಲ್ಲಿ, ಸತ್ಸಂಗದಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಪಟ್ಟರೆ, ಅವನ ಸದ್ ನಿಯಂತ್ರಣ ಮತ್ತು ನಮ್ಮ ಸತ್ ಪ್ರಯತ್ನ ಎರಡರಿಂದ ನಮ್ಮ ಬಾಳೂ ಸ್ವಲ್ಪ ಹಸನಾಗಬಹುದು. ನಮ್ಮನ್ನು ನಾವು ಆ ಪರಮಾತ್ಮನ ಸೂತ್ರದ ಅಂಕೆಯೊಳಕ್ಕೆ ತೊಡಗಿಸಿಕೊಂಡು ಬಿಟ್ಟರೆ ನಮಗೆ ನಿಶ್ಚಿಂತೆ. ಅದು ಬಿಟ್ಟು ನಾವು ಸ್ವತಂತ್ರರು, ಅವನು ನಮ್ಮನ್ನು ಸೃಷ್ಟಿಮಾಡಿದ ಮೇಲೆ, ನಮ್ಮ ಬದುಕನ್ನು ನಾವು ಬದುಕುತ್ತೇವೆ, ಅದರಲ್ಲಿ ಅವನ ಪ್ರಮೇಯವೇನೂ ಇಲ್ಲವೆನ್ನುವವರೂ ಇದ್ದಾರೆ. ಇರಲಿ ಅವರಿಗದು ಪ್ರಿಯ. ನಮಗೇನು ಬೇಕೋ ಅದನ್ನು ಆಯ್ವ ಸ್ವಾತಂತ್ರ್ಯ ನಮಗಿದೆ. ನಮಗಾಗುವ ಪರಿಣಾಮ ನಮ್ಮ ಆಯ್ಕೆಯ ಮೇಲೆ ಆಧಾರಪಟ್ಟಿರುತ್ತದೆ. ವಾಚಕರೆ, ನಮಗೇನು ಬೇಕೋ ಅದನ್ನು ಆಯ್ದು ಅದರಿಂದ ಬರುವ ಸಾಧಕಬಾಧಕಗಳನ್ನು ನಾವು ಅನುಭವಿಸುತ್ತಾ ಅಥವಾ ಆನಂದಿಸುತ್ತಾ ಇರಬಹುದು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-85 )

ನಭದ ಬಯಲೊಳನಂತ, ಮನದ ಗುಹೆಯೊಳನಂತ | ಉಭಯದಾ ನಡುವೆ ಸಾದ್ಯಂತ ಜೀವ ಕಥೆ || ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು || ಹಬೆಗುಳ್ಳೆಯೋ ಸೃಷ್ಟಿ-ಮಂಕುತಿಮ್ಮ ||

ಪದಗಳ ವಿಸ್ತರಣೆ

ಬಯಲೊಳನಂತ=ಬಯಲೊಳು+ಅನಂತ, ಗುಹೆಯೊಳನಂತ=ಗುಹೆಯೊಳು+ಅನಂತ, ಸಾದ್ಯಂತ=ಸ+ಆದಿ+ಅಂತ, ವಿಭುವೊಬ್ಬನೀ=ವಿಭುವು+ಒಬ್ಬನು+ಈ, ಗಾಳಿಬುಡ್ಡೆಗಳನೂದುವನು=ಗಾಳಿ+ಬುಡ್ಡೆಗಳನು+ಊದುವನು, ಬಯಲೊಳನಂತ=ಬಯಲೊಳು+ಅನಂತ

ಪದಗಳ ತಾತ್ಪರ್ಯ

ನಭದ=ಆಕಾಶದ, ಮನದ=ಮನಸ್ಸಿನ, ಗುಹೆಯೊಳನಂತ=ಅಂತರಂಗದಲ್ಲೂ ಅಂತ್ಯವಿಲ್ಲದ ವಿಸ್ತಾರ, ಉಭಯದಾ=ಎರಡರ, ಸಾದ್ಯಂತ=ಆದಿಯಿಂದ ಅಂತ್ಯದವರೆಗೆ, ಜೀವ ಕಥೆ=ಜೀವನದ ಕಥೆ.ವಿಭುವೊಬ್ಬನೀ=ಆ ಪರಮಾತ್ಮನೊಬ್ಬನು, ಹಬೆಗುಳ್ಳೆಯೋ=ಆವಿಯ ಬುಡ್ಡೆ.

ಪದ್ಯದ ಪೂರ್ತಿ ವಿವರಣೆ

ಆಕಾಶದ ವಿಸ್ತಾರ ಅನೂಹ್ಯ ಮತ್ತು ಅನಂತ. ಹಾಗೆಯೇ ಜೀವಿಗಳ ಮನಸ್ಸಿನ ಆಳ ಮತ್ತು ವಿಸ್ತಾರಗಳೂ ಸಹ. ಈ ಸೃಷ್ಟಿಯಲ್ಲಿ ಆ ಪರಮಾತ್ಮನಿಂದ ಸೃಷ್ಟಿಸಲ್ಪಟ್ಟ ನಾವುಗಳು ಕೇವಲ ಗಾಳಿಯ ಗುಳ್ಳೆಗಳಂತೆ. ಒಂದು ಆದಿ ಮತ್ತು ಒಂದು ಅಂತ್ಯ ಇವುಗಳ ನಡುವೆ ನಮ್ಮ ಜೀವನದ ಕಥೆ. ಇಡೀ ಸೃಷ್ಟಿಯೇ ಒಂದು ದೊಡ್ಡಗಾಳಿಯ ಗುಳ್ಳೆಯಂತೆ ಎಂದು ಒಂದು ಗಹನವಾದ ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು. ವಾಚಕರೆ, ಈ ಹಿಂದೆಯೂ ಜಗತ್ ಸೃಷ್ಟಿಯ ವಿಸ್ತಾರದ ಬಗ್ಗೆ ಸೂಕ್ಷ್ಮವಾಗಿ ಹೇಳಲ್ಪಟ್ಟಿದೆ. ಇಡೀ ಸೃಷ್ಟಿಯೇ ಎಷ್ಟು ಅಗಾಧವೆಂದರೆ, ನಮಗೆ ಅದನ್ನು ನೋಡುವುದಿರಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಅಲ್ಲವೇ, ಹಾಗೆಯೇ ಜೀವಿಗಳ ಮನಸ್ಸೂ ಸಹ, ಎಂದು ವಿಚಾರ ಪ್ರಸ್ತುತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು. ಇಲ್ಲಿ ಮಾನವನ ಮನಸ್ಸು ಚಿತ್ರ ವಿಚಿತ್ರವಾದ ಆಲೋಚನೆಗಳನ್ನು ಮಾಡುತ್ತದೆ. ಹಿಂದೆ ನಡೆದ ಎಲ್ಲ ಘಟನೆಗಳನ್ನೂ ಮೆಲುಕು ಹಾಕುತ್ತದೆ. ಮರೆತದ್ದನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಒಂದು ಕ್ಷಣದಲ್ಲಿ ಎಲ್ಲಿಂದ ಎಲ್ಲಿಗೋ ಹೋಗುತ್ತದೆ. “ಹರಿದಾಡುವಂಥಾ ಮನವ ನಿಲಿಸುವುದು ಬಲು ಕಷ್ಟ” ಎಂದು ದಾಸರು ಹೇಳಿದ್ದಾರೆ. ಈ ಮನಸ್ಸಿನಲ್ಲಿ, ಆಕಾಶದಂತೆಯೇ ಅಂತ್ಯವಿಲ್ಲದ ವಿಸ್ತಾರ ಮತ್ತು ವಿಚಾರ ಮಂಥನ ನಡೆದೇ ಇರುತ್ತದೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬ್ರಹ್ಮವಾದಿನಿ “ಗಾರ್ಗಿ” ಯಾಜ್ಞವಲ್ಕ್ಯನಿಗೆ ಒಂದು ಪ್ರಶ್ನೆ ಕೇಳುತ್ತಾಳೆ. ಅವ್ಯಕ್ತವಾದ “ಆಕಾಶ” ಯಾವುದರಿಂದ ವ್ಯಾಪ್ತವಾಗಿದೆ? ಎಂದು. ಆ ಪ್ರಶ್ನೆಗೆ ಉತ್ತರವಾಗಿ ಯಾಜ್ಞವಲ್ಕ್ಯನು ನೀಡುವ ಉತ್ತರದ ಒಂದೊಂದು ಪದವನ್ನೂ ನಾವು ಗ್ರಹಿಸಿ, ಯೋಚಿಸಿ, ಚಿಂತಿಸಿ, ಮನನ ಮಾಡಿಕೊಳ್ಳಬೇಕಾದರೆ ಒಂದು ದೀರ್ಘ ತಪಸ್ಸೇ ಬೇಕಾಗುತ್ತದೆ. ಅಂದರೆ ಆ ನಭೋಮಂಡಲದ ವಿಸ್ತಾರ ಮತ್ತು ಗೂಢತೆಗಳು ಅಗಾಧ. ಅಷ್ಟೇ ಅಗಾಧ ನಮ್ಮ ಮನಸ್ಸುಗಳೂ ಸಹ ಎನ್ನುತ್ತಾರೆ, ಮಾನ್ಯ ಗುಂಡಪ್ಪನವರು. ಆದರೆ ಎಷ್ಟೇಅಗಾಧವಾದರೂ ಒಂದು ಆದಿ ಮತ್ತು ಒಂದು ಅಂತ್ಯವಿರಬೇಕು. ಹಾಗೆ ಒಂದು ಆದಿ ಮತ್ತು ಒಂದು ಅಂತ್ಯದ ನಡುವೆ ನಡೆಯುವುದೇ ನಮ್ಮ ಜೀವನ. ಆದರೆ ಈ ಜೀವನದ ಎಲ್ಲವು ಅನಿಶ್ಚಿತ. ಎಂದು ಮತ್ತು ಹೇಗೆ ಏನಾಗುವುದೋ, ಏನು ನಡೆಯುವುದೋ, ಹೇಗೆ ಅಂತ್ಯಗೊಳ್ಳುವುದೋ ಎಂದು ನಾವು ಊಹಿಸಲೂ ಸಾಧ್ಯವಿಲ್ಲ. ಇದನ್ನೇ ಗಾಳಿಯ ಗುಳ್ಳೆ ಎನ್ನುತ್ತಾರೆ. ಇದನ್ನೇ “ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ, ಯಾರಿಗೆ ಯಾರುಂಟು ಎರವಿನ ಸಂಸಾರ” ಎಂದು ಪುರಂದರದಾಸರೂ ಸಹ ಹಾಡಿದ್ದಾರಲ್ಲವೇ. ಹಾಗೆ ನೀರಗುಳ್ಳೆಯಾದ ನಮ್ಮ ನಮ್ಮ ಬದುಕುಗಳನ್ನು ನಾವೇ ಕೈಲಾದಷ್ಟೂ ಸಂತಸದಿಂದ, ಸುಂದರವನ್ನಾಗಿಸಿಕೊಳ್ಳಬೇಕು. ಬೇರೆ ದಾರಿಯಿಲ್ಲ. ಈ ಅಂತ್ಯವಿಲ್ಲದ ಆಗಸ ಮತ್ತು ಅದನ್ನೇ ಹೋಲುವ ಅಂತ್ಯವಿಲ್ಲದ ಮನಸ್ಸಿನ ಭಾವದ ಬಗ್ಗೆ ಯೋಚಿಸೋಣ.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-86 )

ಗಗನ ತಲೆನವಿರಾಗೆಪೆರೆ ತಾರೆಹೂವಾಗೆ | ಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆ || ನಗುನಗುವ ಬೊಬ್ಬಿಡುವ ಜೀವತಾಂಡವರಸಿಕ | ಭಗವಂತ ಶಿವರುದ್ರ-ಮಂಕುತಿಮ್ಮ ||

ಪದಗಳ ವಿಸ್ತರಣೆ

ತಲೆನವಿರಾಗೆಪೆರೆ=ತಲೆ+ನವಿರ್+ಆಗೆ.

ಪದಗಳ ತಾತ್ಪರ್ಯ

ಗಗನ=ಆಕಾಶ, ತಲೆನವಿರಾಗೆ=ತಲೆ ಕೂದಲಾಗಲು, ಪೆರೆ=ಚಂದ್ರ, ತಾರೆ=ನಕ್ಷತ್ರಗಳು, ಹೂವಾಗೆ=(ಆ ತಲೆಗೂದಲಿಗೆಮೂಡಿವ) ಹೂವುಗಳಾಗಿ, ಜಗವೆಲ್ಲ ವಪುವಾಗೆ=ಈ ಜಗತ್ತೇ ಆ ಪರಮಾತ್ಮನ ದೇಹವಾಗಿ, ಮಾಯೆ ಸತಿಯಾಗಿ=ಮಾಯೆಯೇ ಅವನ ಪತ್ನಿಯಾಗಿ, ನಗುನಗುವ=ಸಂತಸದಿಂದ

ಪದ್ಯದ ಪೂರ್ತಿ ವಿವರಣೆ

ಈ ಜಗತ್ತನ್ನೇ ದೇಹವನ್ನಾಗಿಸಿಕೊಂಡಿರುವ ಆ ಪರಮಾತ್ಮನು ಆಕಾಶವನ್ನು ತನ್ನ ತಲೆ ಕೂದಲಾಗಿಸಿಕೊಂಡು ಚಂದ್ರ ಮತ್ತು ನಕ್ಷತ್ರಗಳನ್ನು ಹೂವಂತೆ ಆ ಕೂದಲಲ್ಲಿ ಮುಡಿದು, ಮಾಯೆಯನ್ನು ತನ್ನ ಸತಿಯಾಗಿಸಿಕೊಂಡು ಈ ಜಗತ್ತಿನಲ್ಲಿ ಸಂತೋಷ ಮತ್ತು ದುಃಖವನ್ನು ಸಮವಾಗಿ ಅನುಭವಿಸಿ ಆನಂದಿಸುತ್ತಿದ್ದಾನೆ. ಹಾಗೆ ಅವನು ಶಾಂತ ಶಿವ ಸ್ವರೂಪನೂ ಹೌದು ಮತ್ತು ಭಯಂಕರವಾದ ರುದ್ರ ಸ್ವರೂಪನೂ ಹೌದು ಎನ್ನುತ್ತಾರೆ ಮಾನ್ಯಗುಂಡಪ್ಪನವರು ಈ ಮುಕ್ತಕದಲ್ಲಿ. ಈ ಜಗತ್ತೇ ಅವನು. ಇಲ್ಲಿರುವುದೆಲ್ಲವು ಅವನ ಆಭರಣಗಳು. ಆ ಪರಮಾತ್ಮ ನಕ್ಷತ್ರ, ಚಂದ್ರ, ಸೂರ್ಯ ಇತ್ಯಾದಿ ಎಲ್ಲವನ್ನೂ ಸೃಷ್ಟಿಮಾಡಿ ಎಲ್ಲವನ್ನೂ ತನ್ನ ಆಭರಣಗಳಂತೆ ತೊಟ್ಟಿದ್ದಾನೆ. ಸಕಲ ಜೀವರಾಶಿಗಳನ್ನು, ಗಿಡ ಮರಗಳನ್ನು, ಗಿರಿ ಬೆಟ್ಟಗಳನ್ನು, ನದಿ ಸಮುದ್ರಗಳನ್ನು, ಎಲ್ಲವನ್ನೂ ಸೃಷ್ಟಿ ಮಾಡಿ ಅದರೊಳಗೆ ತಾನೇ ಇದ್ದು, ಅವುಗಳನ್ನೆಲ್ಲ ಧರಿಸಿ ತಾನು ಸಿಂಗರಿಸಿಕೊಂಡು ನಲಿಯುತ್ತಾ, ಆನಂದವಾಗಿ, ಸಂತೋಷವಾಗಿ “ಶಿವ” ರೂಪದಲ್ಲಿಯೂ, ಬರ, ಭೂಕಂಪ, ಅತೀವೃಷ್ಟಿ, ಅನಾವೃಷ್ಟಿಗಳಂತ ಉತ್ಪಾತಗಳನ್ನು ಸೃಷ್ಟಿಸಿ ತನ್ನ ರುದ್ರ ರೂಪದಲ್ಲಿಯೂ ಇದ್ದು ಎಲ್ಲವನ್ನೂ ಮಹಾ ರಸಿಕನಂತೆ ಆನಂದಿಸುತಿದ್ದಾನೆ ಎನ್ನುವುದೇ ಈ ಮುಕ್ತಕದ ಹೂರಣ. ಒಟ್ಟಾರೆ ನಮಗೊಂದು ಸಂದೇಶ. ಈ ಜಗತ್ತಿನ ಎಲ್ಲದರಲ್ಲಿಯೂ ಆ ಪರಮಾತ್ಮನನ್ನು ಕಾಣಬೇಕು ಮತ್ತು ಈ ಜಗತ್ತಿನಲ್ಲಿ ನಡೆಯುವ ಎಲ್ಲ ವಿದ್ಯಮಾನಗಳೂ ಆ ಪರಮಾತ್ಮನ ಲೀಲಾವಿನೋದವೆಂದೇ ತಿಳಿಯಬೇಕು.

ಧ್ವನಿ ಮುದ್ರಣ ಕೇಳಿರಿ

ಕಗ್ಗ ( ಮುಕ್ತಕ-87 )

ಬೆಳೆ ಹೊಳಪು ವಿಕಸನ ವಿಕಾರ ಸಂಭ್ರಮಗಳಲಿ | ಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ || ಚಲನೆಯಲಿ ವಿಶ್ವಸಂಮೋಹನಗಳೆಲ್ಲವಾ | ವಿಲಸಿತವು ಬೊಮ್ಮನದು-ಮಂಕುತಿಮ್ಮ ||

ಪದಗಳ ವಿಸ್ತರಣೆ

ವೇಗಗಳೆನಿಪ=ವೇಗಗಳು+ಎನಿಪ, ವಿಶ್ವಸಂಮೋಹನಗಳೆಲ್ಲವಾ=ವಿಶ್ವ+ಸಂಮೋಹನಗಳು+ಎಲ್ಲವಾ.

ಪದಗಳ ತಾತ್ಪರ್ಯ

ವಿಲಸಿತವು=ಪರಮಾತ್ಮನ ಲೀಲೆ. ವಿಶ್ವಸಂಮೋಹನಗಳೆಲ್ಲವಾ=ವಿಶ್ವದಾಕರ್ಷಣೆಗಳು.

ಪದ್ಯದ ಪೂರ್ತಿ ವಿವರಣೆ

ವಿಶ್ವದ ಎಲ್ಲಕ್ಕೂ ಒಂದು ನಿಗದಿತ ಚಲನೆ ಉಂಟು. ಆ ಚಲನೆಗೆ ಕಾರಣ ಚೇತನ. ಆ ಬೃಹತ್ ಚೇತನದ ಒಂದು ಅಂಶವೇ ಎಲ್ಲಕ್ಕೂ ಚೇತನದ ಮೂಲ. ಒಂದು ಸಣ್ಣ ಬತ್ತದ ಕಾಳು ಭೂಮಿಗೆ ಬಿದ್ದಾಗ, ನೆಲ, ನೀರು, ಬೆಳಕು, ಸೂರ್ಯನ ಶಾಖಗಳ ಸಂಪರ್ಕಕ್ಕೆ ಬಂದಾಗ ಮೊಳಕೆಯೊಡೆದು ಸಸಿಯಾಗಿ ತೆನೆಯೊಡೆದು ಒಂದು ಇದ್ದದ್ದು ಹಲವಾಗಿ, ಮತ್ತೆ ಮತ್ತೊಂದು ಸೃಷ್ಟಿ ಚಕ್ರಕ್ಕೆ ನಾಂದಿ ಹಾಡುತ್ತದೆ. ಅದಾವ ಶಕ್ತಿ ಆ ಒಂದು ಕಾಳನ್ನು ಮೊಳೆಸಿ ಭೂಮಿಯಿಂದ ಸತ್ವವನ್ನು ಹೀರಿ, ಆ ಸಣ್ಣ ಸಸಿಯ ನರ ನಾಡಿಗಳಿಂದ ಶಿಖರಕ್ಕೆ ತಂದು ಕಿರೀಟದಂತೆ ಆ ತೆನೆಯನ್ನು ತೊಯ್ದಾಡಿಸುತ್ತದೆ. ಎಂತಹ ಅದ್ಭುತ. ಜಗತ್ತಿನ ಸೃಷ್ಟಿಯೆಲ್ಲವು ಅಂತಹ ಅದ್ಭುತಗಳಿಂದಲೇ ತುಂಬಿದೆ. ಭೂಮಿಯ ಚಲನೆ, ಅದರಿಂದಾಗುವ ಹಗಲು ರಾತ್ರಿಗಳು, ಕಾಲದ ಗಣನೆ, ಸೂರ್ಯ, ಸೂರ್ಯನ ಬೆಳಕು ಮತ್ತು ಶಾಖ, ಪ್ರಾಣಿಗಳ ಮತ್ತು ಗಿಡಮರಗಳ ಮೇಲೆ ಅದರಿಂದಾಗುವ ಪರಿಣಾಮ, ಆ ಪರಿಣಾಮದಿಂದಾಗುವ ಬದಲಾವಣೆಗಳು. ಹೀಗೆ ಒಂದುಬಾರಿ ಎಲ್ಲವನ್ನು ಸಮಗ್ರವಾಗಿ ಪರಿಕಿಸಿ ಮತ್ತು ಪರೀಕ್ಷಿಸಿ ನೋಡಿದರೆ, ಎಲ್ಲೆಲ್ಲೂ ನಮಗೆ ಆ ಪರಮಾತ್ಮನ ಲೀಲಾವಿನೋದದ ಪರಿಚಯವಾಗುತ್ತದೆ. ಆದರೆ ಅದನ್ನು ನೋಡುವ ಸಂಸ್ಕಾರ ಮತ್ತು ಮನಸ್ಸಿರಬೇಕಷ್ಟೆ. ಇಷ್ಟೊಂದು ವೈವಿಧ್ಯವಾದ ಈ ಸೃಷ್ಟಿಯಲ್ಲಿ ಇಲ್ಲದೆ ಇರುವುದೇ ಇಲ್ಲ. ಎಲ್ಲವು ಸಮಗ್ರವಾಗಿ ಒಂದಕ್ಕೊಂದು ಹೊಂದಿಕೊಂಡು, ಯಾವುದೂ ನಿರರ್ಥಕವೆನಿಸದೇ ಸಮರ್ಪಕವಾಗಿದೆ. ಇದರ ಗಾಢತೆ ಮತ್ತು ಗೂಢತೆಯನ್ನು ನೋಡಿದರೆ, ಇಂತಹ ಸಂಕೀರ್ಣ ಸೃಷ್ಟಿಯಿಂದ ನಾವು ಸಂಮೋಹಿತರಾಗದೆ ಇರಲು ಸಾಧ್ಯವೇ ಇಲ್ಲ. ತನ್ನಿಂದಲೇ ಎಲ್ಲವನ್ನೂ ಸೃಜಿಸಿ, ತಾನೂ ಇದರಲ್ಲಿ ಇದ್ದು ಎಲ್ಲವು ಬೇರೆ ಬೇರೆಯಾಗಿ ಕಂಡರೂ, ಒಂದೇ ಆಗಿರುವ ಪರಮಾತ್ಮನ ಈ ಜಗತ್ಸೃಷ್ಟಿಕಾರ್ಯದ ಕುಶಲತೆಯನ್ನು ಕಂಡು ಆನಂದಿಸದೇ ಇರಲು ಸಾಧ್ಯವೇ ಇಲ್ಲ. ಆ ಕುಶಲತೆಯನ್ನು ಎಷ್ಟು ಹೊಗಳಿದರೂ ಅತಿಶಯೋಕ್ತಿಯಾಗಲಾರದು. ವಾಚಕರೆ ನಾವು ಸಹ ಈ ಸೃಷ್ಟಿಯ ಎಲ್ಲವನ್ನೂ ನೋಡುವ, ಅನುಭವಿಸುವ ಆನಂದಿಸುವ ಮತ್ತು ಆ ಪರಮಾತ್ಮನಿಗೆ ಕೃತಜ್ಞತೆಯನ್ನು ಸಲ್ಲಿಸುವ.

ಧ್ವನಿ ಮುದ್ರಣ ಕೇಳಿರಿ